ಕರ್ನಾಟಕದಿಂದ ವಲಸೆ ಹೋಗಿ ಕೇರಳದಲ್ಲಿ ಕೈಮಗ್ಗದ ಸೀರೆ ನೇಯುವ ದೇವಾಂಗರು

ಕೇರಳದ ಸಾಂಸ್ಕೃತಿಕ ಅಂಗವಾಗಿರುವ ಕಸವು ಸೀರೆಯನ್ನು ಸಿದ್ಧಪಡಿಸುವುದು ಕನ್ನಡಿಗರು. ಈಗಿನ ಕರ್ನಾಟಕದ ಭಾಗದಿಂದ ೫೦೦ ವರ್ಷಗಳ ಹಿಂದೆ ಕೇರಳದ ಈ ಗ್ರಾಮಕ್ಕೆ ಹೋಗಿ ನೆಲೆಸಿದ ನೇಕಾರರು, ಬಿಳಿ ಸೀರೆಗಳನ್ನು ನೇಯುತ್ತಾರೆ. ಈ ಬಗ್ಗೆ ‘ದಿ ವೈರ್‌’ ಬರೆದ ಲೇಖನದ ಭಾವಾನುವಾದ ಇಲ್ಲಿದೆ

ಕೇರಳದಲ್ಲಿ ಶತಮಾನಗಳಿಂದ ಜನಪ್ರಿಯವಾಗಿರುವ ನೇಯ್ಗೆಯ ಶೈಲಿಯೆಂದರೆ ಕಸವು ಸೀರೆ. ಕುತಂಪುಳ್ಳಿ ಎನ್ನುವ ಕೇರಳದ ಸಣ್ಣ ಗ್ರಾಮದಲ್ಲಿ ಈ ಕಸವು ಸೀರೆಯನ್ನು ಹೆಣೆಯಲಾಗುತ್ತದೆ. ತಿರುವಿಲವಮಲ ಪಂಚಾಯತ್‌ನ ಕುತಂಪುಳಿ ತ್ರಿಶೂರ್‌ನಿಂದ ೫೦ ಕಿಮೀ ದೂರದಲ್ಲಿರುವ ಗ್ರಾಮ. ಇಲ್ಲಿ ಕಸವು ಸೀರೆಗಳನ್ನು ನೇಕಾರರು ಕೈಮಗ್ಗದಲ್ಲಿ ನೇಯುತ್ತಾರೆ. ಇದರ ಗುಣಮಟ್ಟ ಮತ್ತು ಗೌರವವನ್ನು ಪ್ರಮಾಣಿಸಿ ೨೦೧೧ ಸೆಪ್ಟೆಂಬರ್‌ನಲ್ಲಿ ಕುತಂಪುಳಿಯ ಈ ಸೀರೆಗೆ ಭಾರತ ಸರ್ಕಾರ ಭೌಗೋಳಿಕ ವಿಶೇಷ ಎನ್ನುವ ಪಾರಂಪರಿಕ ಸ್ಥಾನವನ್ನು ಕೊಟ್ಟಿದೆ.

ಕಸವು ಸೀರೆ ಎಂದರೆ ಚಿನ್ನದ ಬಣ್ಣದ ಜರಿ ಇರುವ ಪಾರಂಪರಿಕ ಬಿಳಿ ಸೀರೆ. ಮಹಿಳೆಯರಿಗೆ ಕಸವು ಸೀರೆ ಮತ್ತು ಪುರುಷರು ಉಡುವ ಮುಂಡು ಕುತಂಪುಳ್ಳಿಯ ಕೈಮಗ್ಗದಲ್ಲಿ ತಯಾರಾಗುತ್ತದೆ. ೧೯ನೇ ಶತಮಾನದ ರಾಜಾ ರವಿವರ್ಮನ ಚಿತ್ರದಲ್ಲಿ ಸರಸ್ವತಿ ಉಟ್ಟ ಸೀರೆಯಿಂದ ಆರಂಭಿಸಿ ಇತ್ತೀಚೆಗೆ ಮಲಯಾಳಂ ನಟಿ ಮಂಜು ವಾರಿಯರ್‌ವರೆಗೆ ಕೇರಳದ ಬಿಳಿ ಸೀರೆ ಆಧುನಿಕ ಕಾಲದಲ್ಲಿಯೂ ಜನಪ್ರಿಯ.

ಆದರೆ, ಈ ಸೀರೆ ಕೇರಳದ ಸಾಂಸ್ಕೃತಿಕ ಅಂಗವಾಗಿದ್ದರೂ, ಇದನ್ನು ಸಿದ್ಧಪಡಿಸುವುದು ಕನ್ನಡಿಗರು! ಈಗಿನ ಕರ್ನಾಟಕದ ಭಾಗದಿಂದ ೫೦೦ ವರ್ಷಗಳ ಹಿಂದೆ ಕೇರಳದ ಈ ಗ್ರಾಮಕ್ಕೆ ಹೋಗಿ ನೆಲೆಸಿದ ನೇಕಾರರು ಬಿಳಿ ಸೀರೆಗಳನ್ನು ಸಿದ್ಧಪಡಿಸುತ್ತಾರೆ. ಕುತಂಪುಳ್ಳಿಯಲ್ಲಿ ಈಗ ಇಂತಹ ೩೦೦ ನೇಕಾರರ ಕುಟುಂಬಗಳು ನೆಲೆಸಿವೆ. “ಕೇರಳದಲ್ಲಿ ಉತ್ತಮ ಕೈಮಗ್ಗದ ನೇಕಾರರ ಕೊರತೆ ಇದ್ದ ಕಾರಣ ಕೊಚ್ಚಿಯ ಮಹಾರಾಜ ಕರ್ನಾಟಕದಿಂದ ಉತ್ತಮ ನೇಕಾರರನ್ನು ಕರೆಸಿಕೊಂಡಿದ್ದರು. ಕೊಚ್ಚಿಯ ಮಹಾರಾಜ ಮತ್ತು ರಾಜಮನೆತನಕ್ಕಾಗಿ ಈ ನೇಕಾರರು ಪುರಾತನ ಕಾಲದಲ್ಲಿ ಬಟ್ಟೆ ನೇಯುತ್ತಿದ್ದರು. ಸೀರೆಯ ಬಾರ್ಡರ್‌ನಲ್ಲಿರುವ ಚಿನ್ನದ ಜರಿ ಕೆಲಸವನ್ನು ನೋಡಿದರೆ, ಕೇರಳದ ಕುಲೀನ ಮನೆತನದ ಯುವತಿಯರು ಕೇವಲ ಆಭರಣಗಳಲ್ಲಿ ಮಾತ್ರವಲ್ಲ, ಬಟ್ಟೆಗಳಲ್ಲೂ ಚಿನ್ನದ ಕುಸುರಿ ಬಯಸಿದ್ದರು ಎನ್ನುವುದು ತಿಳಿದುಬರುತ್ತದೆ,” ಎನ್ನುತ್ತಾರೆ, ಕಸವು ಸೀರೆ ಮಾರಾಟದಲ್ಲಿ ತೊಡಗಿರುವ ಕೆ ರಜನೀಕಾಂತ್.

ಕುತಂಪುಳಿಯಲ್ಲಿ ವಾರ್ಷಿಕವಾಗಿ ಸುಮಾರು ೬೦,೦೦೦ ಸೀರೆ ನೇಯಲಾಗುತ್ತದೆ. ಒಬ್ಬ ನೇಕಾರ ವಾರ್ಷಿಕವಾಗಿ ಸರಾಸರಿ ೨೦೦ ಸೀರೆ ನೇಯುತ್ತಾರೆ. ಒಂದು ಸೀರೆಯ ಬೆಲೆ ೧,೮೦೦ರಿಂದ ೧೨,೦೦೦ ರು.ವರೆಗೂ ಇರುತ್ತದೆ. ಆದರೆ ಮದುವೆ ಸೀರೆ ೫೦,೦೦೦ ರುಪಾಯಿಗೂ ಮಾರಾಟವಾಗುವುದಿದೆ.

ರಜನೀಕಾಂತ್‌ರ ಪೂರ್ವಜರು ಬೆಂಗಳೂರು ಮತ್ತು ಮೈಸೂರಿನ ದೇವಾಂಗ ಚೆಟ್ಟಿಯಾರ್ ಸಮುದಾಯದವರು. “ನಾವು ಹಿಂದೂ ಸನ್ಯಾಸಿ ದೇವನ ಕುಲದವರು ಎನ್ನಲಾಗಿದೆ. ದೇವಾಂಗ ಸಮುದಾಯ ವೃತ್ತಿಪರ ನೇಕಾರರು ಮತ್ತು ನಾವು ಶುದ್ಧ ಹತ್ತಿಯ ಸೀರೆ ಮತ್ತು ಇತರ ಬಟ್ಟೆಗಳನ್ನು ತಯಾರಿಸುವಲ್ಲಿ ಸಿದ್ಧಹಸ್ತರು,” ಎನ್ನುತ್ತಾರೆ ರಜನೀಕಾಂತ್. ಶತಮಾನಗಳಿಂದ ದೇವಾಂಗ ಸಮುದಾಯ ಕರ್ನಾಟಕದಿಂದ ವಲಸೆ ಹೋಗಿ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮತ್ತು ಒಡಿಶಾಗಳಲ್ಲಿ ನೆಲೆ ನಿಂತಿವೆ. ಒಡಿಶಾದಲ್ಲಿ ಅವರನ್ನು ದೇರಾ ಸಮುದಾಯ ಎನ್ನಲಾಗುತ್ತದೆ.

ಹೊರಗೆ ಉದ್ಯಮದ ಕೆಲಸಕ್ಕಾಗಿ ದೇವಾಂಗ ಸಮುದಾಯ ಮಲಯಾಳಂ ಮಾತನಾಡುತ್ತಾರೆ. ಆದರೆ, ಮನೆಯಲ್ಲಿ ಕನ್ನಡ ಮಿಶ್ರಿತ ತಮಿಳು ಮತ್ತು ಮಲಯಾಳಂ ಮಾತನಾಡುತ್ತಾರೆ. ದೇವಾಂಗ ಸಮುದಾಯದ ಭಾಷೆಗೆ ಯಾವುದೇ ಲಿಪಿಯಿಲ್ಲ. ಈ ಭಾಷೆ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಹರಡಿದೆ. ರಜನೀಕಾಂತ್ ಅವರ ಪತ್ನಿ ಕವಿತಾ ತಮಿಳುನಾಡಿನ ದೇವಾಂಗ ಸಮುದಾಯದವರು. ಅವರು ಕನ್ನಡದ ಶೈಲಿಯಲ್ಲಿಯೇ ಮಾತನಾಡಿದರೂ, ತಮಿಳು ಮತ್ತು ಮಲಯಾಳಂ ಮಿಶ್ರಗೊಂಡಿರುತ್ತದೆ. ದೇವಾಂಗ ಮಂದಿ ತಮ್ಮ ಸಮುದಾಯದಿಂದ ಹೊರಗೆ ಮದುವೆಯಾಗುವುದಿಲ್ಲ. ಹಾಗೆ ಮದುವೆಯಾದರೆ ಅವರನ್ನು ಕುಟುಂಬದಿಂದ ಹೊರಗಿಡಲಾಗುತ್ತದೆ.

೨೦೦೪ರಲ್ಲಿ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಸಣ್ಣ ಗ್ರಾಮ ಬೆಳಗೂರಿನ ದೇವಾಂಗ ನಾಯಕರು ಸಮುದಾಯದಿಂದ ಹೊರಗೆ ಮದುವೆಯಾದ ೧೦ ಕುಟುಂಬಗಳನ್ನು ಬಹಿಷ್ಕರಿಸಿದೆ. ಇದು ಅಕ್ರಮ ಮತ್ತು ಅಸಾಂವಿಧಾನಿಕ ಎನ್ನುವ ಟೀಕೆಯೂ ಕೇಳಿಬಂದಿತ್ತು. ಆದರೆ, ೨೦೧೧ರಲ್ಲಿ ಮತ್ತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಐದು ಕುಟುಂಬಗಳನ್ನು ಹೊರಗಿಡಲಾಗಿದೆ. “ನಾವು ಅವಕಾಶವಾದಿಗಳಲ್ಲ. ದೇವಾಂಗ ಪಂಚಾಯತ್ ಬಹಳ ಪ್ರಭಾವೀ ಸಂಘಟನೆ. ಅಪರಾಧ, ಆಸ್ತಿ ಮತ್ತು ಮದುವೆ ಎಲ್ಲವೂ ಪಂಚಾಯತ್‌ನಲ್ಲಿ ನಿರ್ಧಾರವಾಗುತ್ತದೆ,” ಎನ್ನುತ್ತಾರೆ ಕವಿತಾ ರಜನೀಕಾಂತ್.

“ಕೇರಳದಲ್ಲಿ ನೆಲೆಸಿರುವ ದೇವಾಂಗ ಸಮುದಾಯವೂ ಕರ್ನಾಟಕದ ಪರಂಪರೆಯನ್ನೇ ಅನುಸರಿಸುತ್ತದೆ. ಕುತಂಪುಳಿಯಲ್ಲಿ ಸೌಡೇಶ್ವರಿ ಅಮ್ಮ ದೇವಾಲಯವಿದೆ. ಕರ್ನಾಟಕದಲ್ಲಿ ಇದು ಚೌಡೇಶ್ವರಿ ದೇವಿಯ ದೇಗುಲ. ಸಮುದಾಯವು ಇತರ ರಾಜ್ಯಗಳಲ್ಲೂ ಅಂತಹುದೇ ಪರಂಪರೆ ಹೊಂದಿದೆ. ನಾನು ತಮಿಳುನಾಡು ಗಡಿಯಲ್ಲಿರುವ ಕುಟುಂಬದ ಜೊತೆಗೆ ಸಂಬಂಧ ಮಾಡಿಕೊಂಡಿದ್ದೇನೆ. ನನ್ನ ಪತ್ನಿ ರೇಷ್ಮೆ ನೇಯುವ ಪಟ್ಟು ಕುಟುಂಬದವರು. ಅದರಲ್ಲೇನೂ ತಪ್ಪಾಗದು. ದೇವಾಂಗರು ಎಲ್ಲೇ ಇದ್ದರೂ ನಮ್ಮದೇ ಪರಂಪರೆಯನ್ನು ಅನುಸರಿಸುತ್ತೇವೆ. ಅದರಲ್ಲಿ ಅಮವಾಸ್ಯೆ ಮತ್ತು ಪೌರ್ಣಮಿಯಂದು ನೇಕಾರಿಕೆ ಮಾಡದೆ ಇರುವುದೂ ಸೇರಿದೆ. ನಮ್ಮ ಪೂರ್ವಜರು ಹೇಳುವ ಪ್ರಕಾರ, ವಿಷ್ಣು ದೇವರು ಹತ್ತಿಯ ಬೀಜಗಳನ್ನು ಹೊಕ್ಕುಳದಲ್ಲಿಟ್ಟು ದೇವಾಂಗ ಜನಾಂಗದ ಮೊದಲ ವ್ಯಕ್ತಿ ದೇವಳನಿಗೆ ಅಮವಾಸ್ಯೆಯ ದಿನ ನೀಡಿದ್ದರು,” ಎಂದು ನೇಯ್ಗೆ ಉದ್ಯಮದಲ್ಲಿ ತೊಡಗಿರುವ ಸಂತೋಷ್ ನಟರಾಜು ಹೇಳುತ್ತಾರೆ.

ಭಾರತದಲ್ಲಿ ಸುಮಾರು ೫,೬೬,೦೦೦ ದೇವಾಂಗರು ಇದ್ದಾರೆ. ಅವರಲ್ಲಿ ಬಹುತೇಕರು ಕರ್ನಾಟಕದಲ್ಲಿ ನೆಲೆಸಿದ್ದರೆ, ೭೦೦ ಮಂದಿ ಕೇರಳದಲ್ಲಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ದೇವಾಂಗರು ರೇಷ್ಮೆ ಸೀರೆ ನೇಯುತ್ತಾರೆ. ಒಡಿಶಾದಲ್ಲಿ ಇವರು ಡಾಬಿ ಬೂಟಿ ಸೀರೆ ಮತ್ತು ಬೆಹ್ರಂಪುರ್ ಪಟ್ಟ ಹೊಲಿಯುತ್ತಾರೆ.

ಇದನ್ನೂ ಓದಿ : ರಾಜ್ಯ ಸರ್ಕಾರದ ಭಾಗ್ಯಗಳ ಪಟ್ಟಿಗೆ ‘ಇಂದಿರಾ ವಸ್ತ್ರಭಾಗ್ಯ’ ಸೇರ್ಪಡೆ ಸಾಧ್ಯತೆ

ರಜನೀಕಾಂತ್ ತಮ್ಮ ವಸತಿ ಮತ್ತು ಕಾರ್ಯಾಗಾರ ಎರಡೂ ಆಗಿರುವ ಮನೆಯಲ್ಲಿ ತಮ್ಮ ೬೭ ವರ್ಷ ವಯಸ್ಸಿನ ತಂದೆ ಕೃಷ್ಣರಾಜು ಜೊತೆಗೆ ಕೈಮಗ್ಗದ ಮುಂದೆ ಕುಳಿತಿದ್ದರು. “ದೇವಾಂಗ ಜನರು ಕೈಮಗ್ಗದಲ್ಲಿಯೇ ನೇಯ್ಗೆ ಕೆಲಸ ಮಾಡುತ್ತಾರೆ. ನಮ್ಮ ಮಹಿಳೆಯರು ಬಣ್ಣ ಬಳಿಯುವುದು, ನೂಲು ಸಿದ್ಧ ಮಾಡುವುದು, ನೂಲು ಸುತ್ತುವುದು ಮಾಡುತ್ತಾರೆ,” ಎನ್ನುತ್ತಾರೆ ರಜನೀಕಾಂತ್‌. ನೂಲುಹುರಿ ಕೊಯಮತ್ತೂರಿನಿಂದ ಬಂದರೆ, ಚಿನ್ನದ ಝರಿ ಗುಜರಾತ್‌ನ ಸೂರತ್‌ನಿಂದ ಬರುತ್ತದೆ. “ನಾವು ಬೆಳಗಿನ ಜಾವ ೬ ಗಂಟೆಗೆ ಕೆಲಸ ಆರಂಭಿಸುತ್ತೇವೆ. ಸರಳವಾದ ಕೇರಳದ ಕಸವು ಸೀರೆ ನೇಯಲು ಒಂದು ದಿನವಿಡೀ ಬೇಕು,” ಎನ್ನುತ್ತಾರೆ ರಜನೀಕಾಂತ್.

ಕೃಷ್ಣರಾಜು ಅವರು ನೇಯ್ದ ಒಂದು ಸೀರೆಗೆ ಕನಿಷ್ಠವೆಂದರೆ ರು. ೪೦೦ ಸಿಗುತ್ತದೆ. ಮದುವೆಯಂತಹ ವಿಶೇಷ ಸಂದರ್ಭದಲ್ಲಿ ಉಡುವ ಸ್ವಲ್ಪ ಹೆಚ್ಚೇ ಸುಂದರವೆನಿಸುವ ಸೀರೆಗಳಿಗೆ ರು. ೪೫೦೦ರವರೆಗೂ ಖರ್ಚಾಗಬಹುದು. “ನಾವು ನೇರವಾಗಿ ಗ್ರಾಹಕರಿಗೇ ಸೀರೆಯನ್ನು ಮಾರಾಟ ಮಾಡಬಹುದು. ಅಥವಾ ಹೆಚ್ಚಿನ ಬೆಲೆ ಕೊಡುವ ಸುರೇಶ್‌ ಅವರಂತಹ ಸಗಟು ವ್ಯಾಪಾರಿಗಳಿಗೆ ಮಾರಬಹುದು,” ಎನ್ನುತ್ತಾರೆ ಕೃಷ್ಣರಾಜು.

ಗ್ರಾಮದ ಮತ್ತೊಂದು ಭಾಗದಲ್ಲಿ ಉನ್ನಿಕೃಷ್ಣನ್ ಅವರು ತಮ್ಮ ಮುಂದಿರುವ ಆರ್ಡರ್‌ಗಳನ್ನು ಪೂರೈಸಲು ಸದಾ ಬಿಸಿಯಾಗಿರುತ್ತಾರೆ. ಕೊಚ್ಚಿಯ ಅತೀ ದೊಡ್ಡ ಸೀರೆ ವ್ಯಾಪಾರಿಗಾಗಿ ಅವರ ಕೆಲಸಗಾರರು ೫೦೦೦ ಕಸವು ಸೀರೆಗಳನ್ನು ಪ್ಯಾಕ್ ಮಾಡುತ್ತಿದ್ದರು. “ನಮಗೆ ದೊಡ್ಡ ಪ್ರಮಾಣದಲ್ಲಿ ಆನ್‌ಲೈನ್ ಮಾರಾಟಗಾರರು ಮತ್ತು ಸೀರೆ ಶೋರೂಂಗಳಿಂದ ಆರ್ಡರ್‌ಗಳು ಬರುತ್ತವೆ” ಎನ್ನುತ್ತಾರೆ ಉನ್ನಿಕೃಷ್ಣನ್. ಕೈಮಗ್ಗದ ಸೀರೆಗಳು ಬಹಳ ದುಬಾರಿಯಾಗಿರುವ ಕಾರಣ ಎಲ್ಲರೂ ಖರೀದಿಸಲು ಬಯಸುವುದಿಲ್ಲ. “ತಮಿಳುನಾಡಿನ ಪವರ್‌ಲೂಮ್‌ಗಳಿಂದ ಮಾಡಿದ ಸೀರೆಗಳನ್ನೇ ನಾವು ಹೆಚ್ಚು ಮಾರುತ್ತೇವೆ. ಕೇರಳದಲ್ಲಿ ಮೂಲಸೌಕರ್ಯ ಮತ್ತು ಕಾರ್ಮಿಕರ ಕೊರತೆಯಿಂದ ಹೆಚ್ಚು ಪವರ್‌ಲೂಮ್‌ಗಳು ಇಲ್ಲ," ಎನ್ನುತ್ತಾರೆ ಉನ್ನಿಕೃಷ್ಣನ್‌.

ಕೈಮಗ್ಗದ ಸೀರೆ ಮತ್ತು ಪವರ್‌ಲೂಮ್‌ನಲ್ಲಿ ಸಿದ್ಧವಾದ ಸೀರೆಗಳ ನಡುವೆ ವ್ಯತ್ಯಾಸ ಹೇಗೆ ಗೊತ್ತಾಗುತ್ತದೆ? ರಜನೀಕಾಂತ್ ಅವರ ಪ್ರಕಾರ ವ್ಯತ್ಯಾಸ ಕಂಡುಹಿಡಿಯುವುದು ಬಹಳ ಕಷ್ಟ. “ಸೀರೆಯ ಭಾರವನ್ನು ಗಮನಿಸಬೇಕು. ಕೈಮಗ್ಗದ ಸೀರೆಗಳು ಯಾವಾಗಲೂ ಯಂತ್ರದಲ್ಲಿ ತಯಾರಾದ ಸೀರೆಗಳಿಗಿಂತ ಹಗುರವಾಗಿರುತ್ತವೆ,” ಎನ್ನುತ್ತಾರೆ ರಜನೀಕಾಂತ್‌.

ಕುತಂಪುಳಿಯ ನೇಕಾರರು ಮತ್ತು ಸಗಟು ವ್ಯಾಪಾರಿಗಳು ಕಸವು ಸೀರೆಗಳನ್ನು ಪ್ರಸಕ್ತ ಕಾಲಕ್ಕೆ ಹೊಂದಿಕೆಯಾಗುವಂತೆ ಹೊಸ ಟ್ರೆಂಡ್‌ಗಳ ಬಗ್ಗೆ ಸದಾ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. “ಕೈಯಲ್ಲಿ ಅಥವಾ ಸ್ಕ್ರೀನ್ ಪೈಂಟ್ ಮಾಡಿದ ಶ್ರೀಕೃಷ್ಣನ ಚಿತ್ರಗಳಿರುವ ಸೀರೆಗಳು ಕಳೆದ ಕೆಲವು ವರ್ಷಗಳಲ್ಲಿ ಬಹಳ ಪ್ರಸಿದ್ಧಿ ಪಡೆದಿವೆ,” ಎನ್ನುತ್ತಾರೆ ಉನ್ನಿಕೃಷ್ಣನ್. ಈ ವರ್ಷ ಅವರು ಬ್ಲೌಸ್‌ಗಳ ಮೇಲೆ ಕನ್ನಡಿ ಕುಸುರಿಕಲೆಗಳನ್ನು ಮಾಡುತ್ತಿದ್ದಾರೆ. ಕೈಮಗ್ಗದ ಸೀರೆಗಳ ಜೊತೆಗೆ ಈ ಕುಸುರಿ ಕಲೆಗಳು ಚೆನ್ನಾಗಿ ಒಗ್ಗುತ್ತವೆ ಎನ್ನುವುದು ಅವರ ಅಭಿಪ್ರಾಯ.

ಆನ್‌ಲೈನ್ ಮಾರುಕಟ್ಟೆಗಳು ಈ ನೇಕಾರರಿಗೆ ಸಕಾರಾತ್ಮಕ ಬದಲಾವಣೆಗಳನ್ನು ತಂದಿವೆ. ಉನ್ನಿಕೃಷ್ಣನ್ ಅವರೇ ಹೇಳುವಂತೆ, “ಒಬ್ಬ ವ್ಯಕ್ತಿ ಕಪ್ಪು ಮತ್ತು ಚಿನ್ನದ ಕೈಮಗ್ಗದ ಕಸವು ಸೀರೆಗಳನ್ನು ರು. ೭೫೦ಕ್ಕೆ ನಮ್ಮಿಂದ ಕೊಂಡುಕೊಂಡಿದ್ದಾನೆ. ಒಬ್ಬ ವ್ಯಕ್ತಿ ತಾನು ಮಾರಾಟ ಮಾಡುವ ಅಮೆಜಾನ್.ಇನ್‌ ಲಿಂಕ್ ಅನ್ನು ನನಗೆ ಕಳುಹಿಸಿದ್ದ. ಅಲ್ಲಿ ಅವರು ರು. ೫೧೫೦ ಕ್ಕೆ ಕಸವು ಸೀರೆಯನ್ನು ಮಾರುತ್ತಾರೆ,” ಎನ್ನುತ್ತಾರೆ ಉನ್ನಿಕೃಷ್ಣನ್.

ಕುತಂಪುಳಿಯ ನೇಕಾರರು ಮತ್ತು ಸಗಟು ವ್ಯಾಪಾರಿಗಳು ಆನ್‌ಲೈನ್ ಮಾರುಕಟ್ಟೆಯ ಜೊತೆಗೆ ಸ್ಪರ್ಧಿಸಲು ಬಯಸುತ್ತಿಲ್ಲ. “ನಮ್ಮಲ್ಲಿ ಈಗಿರುವ ಆರ್ಡರ್‌ಗಳಿಂದಲೇ ಮುಗಿಯದಷ್ಟು ಕೆಲಸಗಳಿವೆ. ನಮ್ಮ ಉತ್ಪನ್ನಗಳಿಗೆ ಹೆಚ್ಚು ಬೇಡಿಕೆಗಳು ದೊಡ್ಡ ವ್ಯಾಪಾರಿಗಳಿಂದಲೇ ಬರುತ್ತವೆ,” ಎನ್ನುತ್ತಾರೆ ಉನ್ನಿಕೃಷ್ಣನ್. ಆದರೆ, ಉನ್ನಿಕೃಷ್ಣನ್‌ ಕಾರ್ಡ್‌ಗಳ ಮೂಲಕ ಪಾವತಿಯನ್ನು ಸ್ವೀಕರಿಸುವುದಿಲ್ಲ. ಹಾಗೆ ಮಾಡಿದರೆ ಅವರು ಶೇ.೫ರಷ್ಟು ಟ್ರಾನ್ಸಾಕ್ಷನ್ ಶುಲ್ಕ ತೆರಬೇಕಾಗುತ್ತದೆ. “ಯುವ ತಲೆಮಾರು ಈ ಪರಂಪರೆಯನ್ನು ಮುಂದುವರಿಸಲು ಬಯಸುತ್ತಿಲ್ಲ. ಅವರು ಹೆಚ್ಚು ವಿದ್ಯಾಭ್ಯಾಸದ ಕಡೆಗೆ ಗಮನಹರಿಸಿ ವೃತ್ತಿಪರ ಉದ್ಯೋಗಗಳನ್ನು ಮಾಡಲು ಬಯಸುತ್ತಾರೆ,” ಎನ್ನುವುದು ಉನ್ನಿಕೃಷ್ಣನ್ ನೋವು.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More