ಮಾಹಿತಿ ಸೋರಿಕೆ ಹಿನ್ನೆಲೆಯಲ್ಲಿ ಗೂಗಲ್‌ ಪ್ಲಸ್‌ಗೆ ಕೊನೆಯ ಮೊಳೆ ಹೊಡೆದ ಗೂಗಲ್

ಮಾಹಿತಿ ಸೋರಿಕೆ ಟೆಕ್‌ ದೈತ್ಯರನ್ನು ನಡುಗಿಸುತ್ತಿದ್ದು, ಅವುಗಳ ಸೇವೆಯ ವಿಶ್ವಾಸಾರ್ಹತೆ ಪ್ರಶ್ನಿಸುವಂತೆ ಮಾಡುತ್ತಿದೆ. ಕಳೆದ ಐದಾರು ತಿಂಗಳಲ್ಲಿ ಫೇಸ್‌ಬುಕ್‌ ಈ ವಿಷಯದಲ್ಲಿ ಸಾಕಷ್ಟು ಸವಾಲು ಎದುರಿಸಿದ್ದು, ಈಗ ಗೂಗಲ್‌ ಸರದಿ. ಆದರೆ, ಗೂಗಲ್ ಬಹಳ ದೊಡ್ಡ ಹೆಜ್ಜೆಯನ್ನೇ ಇಟ್ಟಿದೆ

ಫೇಸ್‌ಬುಕ್‌ ಸಾಮಾಜಿಕ ಜಾಲತಾಣವಾಗಿ ಜನಪ್ರಿಯತೆ ಗಳಿಸಿದ ರೀತಿ ನೋಡಿ ಗೂಗಲ್‌ ಕೂಡ ಅಂಥದ್ದೇ ಒಂದು ಸಾಮಾಜಿಕ ಜಾಲತಾಣವನ್ನು ಪರಿಚಯಿಸಿತು; ಅದೇ ಗೂಗಲ್‌ ಪ್ಲಸ್‌. ಆದರೆ, ಫೇಸ್‌ಬುಕ್‌ನಷ್ಟು ಸುಲಭವೂ, ಸರಳವೂ ಆಗಿರದ ಕಾರಣ ಗೂಗಲ್‌ ಪ್ಲಸ್‌ ಅಷ್ಟು ಜನಪ್ರಿಯತೆ ಗಳಿಸಲಿಲ್ಲ.

೨೦೧೧ರ ಜೂನ್‌ನಲ್ಲಿ ಆರಂಭವಾದ ಗೂಗಲ್‌ ಪ್ಲಸ್‌, ಕಳೆದ ಏಳು ವರ್ಷಗಳಲ್ಲಿ ೧೦.೧ ಕೋಟಿ ಬಳಕೆದಾರರನ್ನು ಗಳಿಸಿತ್ತು. ನೂರು ಕೋಟಿ ಗಟಿ ದಾಟಿಸಿದ್ದ ಫೇಸ್‌ಬುಕ್‌ ಎದುರು ಇದು ಲೆಕ್ಕಕ್ಕೆ ಇಲ್ಲದಂತಾಯಿತು. ೨೦೧೫ರಲ್ಲಿ ಹೊಸ ವಿನ್ಯಾಸದೊಂದಿಗೆ ಮತ್ತೆ ಪರಿಚಯಿಸಲಾಯಿತಾದರೂ ಬಳಕೆದಾರರನ್ನು ಸೆಳೆಯಲು ಸಾಧ್ಯವಾಗಲಿಲ್ಲ.

ಈಗ ಗೂಗಲ್‌ ಪ್ಲಸ್‌ ಮತ್ತೆ ಸುದ್ದಿಯಲ್ಲಿದೆ. ‘ದಿ ವಾಲ್‌ ಸ್ಟ್ರೀಟ್‌ ಜರ್ನಲ್‌’ ಪ್ರಕಟಿಸಿದ ತನಿಕೆ ವರದಿ ಪ್ರಕಾರ, ೫ ಲಕ್ಷ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ. ಈದಾಗಿ ತಿಂಗಳುಗಳೇ ಆಗಿದ್ದರೂ ಗೂಗಲ್‌ ಈ ಬಗ್ಗೆ ಯಾವುದೇ ಮಾಹಿತಿ ಹೊರಹಾಕಿಲ್ಲ. ಫೇಸ್‌ಬುಕ್‌ ಎದುರಿಸಿದ ಮುಜುಗರ, ವಿಚಾರಣೆಗಳನ್ನು ಗಮನಿಸಿದ್ದ ಗೂಗಲ್‌, ಈ ಕುರಿತು ಯಾವುದೇ ಮಾಹಿತಿ ಹೊರಬೀಳದಂತೆ ನೋಡಿಕೊಂಡಿತ್ತು.

ಈಗ ಸುದ್ದಿ ಹೊರಬಿದ್ದ ಕೂಡಲೇ ಗೂಗಲ್‌ ಕಂಪನಿ, ಗೂಗಲ್‌ ಪ್ಲಸ್‌ ಜಾಲತಾಣದ ಸೇವೆಯನ್ನು ಸಂಪೂರ್ಣ ನಿಲ್ಲಿಸುವುದಾಗಿ ಹೇಳಿಕೆ ಪ್ರಕಟಿಸಿದೆ. ಗೂಗಲ್‌ಗೆ ಸೇರದ ಮೊಬೈಲ್‌ ಅಪ್ಲಿಕೇಷನ್‌ಗಳ ಮೂಲಕ ಈ ಮಾಹಿತಿಯನ್ನು ಸೋರಿಕೆ ಮಾಡಲಾಗಿದೆ.

ಇದನ್ನೂ ಓದಿ : 52 ಕಂಪನಿಗಳೊಂದಿಗೆ ಡಾಟಾ ಹಂಚಿಕೆ ವಿಚಾರ ಬಹಿರಂಗಪಡಿಸಿದ ಫೇಸ್‌ಬುಕ್‌

ಟೆಕ್‌ಲೋಕದಲ್ಲಿ ಏಕಸ್ವಾಮ್ಯವನ್ನು ಸಾಧಿಸಿರುವ ಗೂಗಲ್‌ ಮತ್ತು ಫೇಸ್‌ಬುಕ್‌ನಂತಹ ಕಂಪನಿಗಳು ನಿಜಕ್ಕೂ ಮಾಹಿತಿ ಸುರಕ್ಷತೆ, ಖಾಸಗಿತನದ ವಿಷಯದಲ್ಲಿ ಎಷ್ಟು ವಿಶ್ವಾಸಾರ್ಹ ಎಂಬ ಪ್ರಶ್ನೆಯನ್ನು ಮತ್ತೆ-ಮತ್ತೆ ಕೇಳಿಕೊಳ್ಳುವಂತಹ ಸಂದರ್ಭಗಳು ಎದುರಾಗುತ್ತಲೇ ಇವೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More