ಅವನ ಜೊತೆಗಿನ ಸಾಮೀಪ್ಯ, ಸಾಂಗತ್ಯವೆಲ್ಲವೂ ಅಸಹ್ಯ ತರಿಸುವಂಥದ್ದು!

10 ವರ್ಷದ ಹಿಂದೆ ನಡೆದ ಆ ಘಟನೆಯನ್ನು ಆಕೆ ಏಕೆ ನೆನಪಿಸಿಕೊಂಡಳೋ ಗೊತ್ತಿಲ್ಲ, ಅದಕ್ಕೆ ಸಾರ್ವಜನಿಕ ಮುಖ ಯಾಕೆ ಕೊಟ್ಟಳೋ ಗೊತ್ತಿಲ್ಲ. ಇದು ಕುಗ್ರಾಮದ ನನ್ನ ಸ್ನೇಹಿತೆ ಕತೆ, ನಮ್ಮೆಲ್ಲರದ್ದೂ ಆಗಿರಬಹುದು. ಆದರೆ ಆಕೆ ನಮಗೀಗ ಬೇಡ, ಆಕೆಯ ಮನಸಿನ ಬಗೆಗೆ ಮಾತ್ರ ಯೋಚಿಸುವ

“ಕತ್ತಲು, ಹಾಲ್‌ನಲ್ಲಿ ಮಾತ್ರ ಲೈಟು. ಅಡುಗೆಮನೆಯಲ್ಲಿ ತಡಬಡಾಯಿಸುವವರೂ ಪಕ್ಕದ ಮನೆಗೆ ಪರಾರಿ. ಒಳಗೆ ಯಾರಿಲ್ಲ. ನಾನು ಸೋಫಾ ಮೇಲೆ ಕೂತು ಓದುತ್ತಿದ್ದಾಗ ಪಕ್ಕದಲ್ಲಿದ್ದ ಅವನು ಒಳಗೆ ಎಳದೊಯ್ದ. ಎಲ್ಲೋ ಆಶ್ಚರ್ಯವೊಂದು ಕಾದಿದೆ ಎಂದು ಸಂತೋಷದಿಂದ ಒಳಹೋದೆ. ಅಲ್ಲಿವರೆಗೆ ಏನೂ ಅನಿಸದ ನನಗೆ ಮಹಾ ಆಶ್ಚರ್ಯ ಕಾದಿತ್ತು. ದಿಢೀರನೆ ನನ್ನನ್ನು ತಿರುಗಿಸಿ ಆತ ನನ್ನ ಸ್ಕರ್ಟ್ ಮೇಲೆತ್ತಿದಾಗ ಕಿವಿಯೆಲ್ಲ ಬಿಸಿ. ದೂಡಲು ಶಕ್ತಿ ಸಾಕಾಗುತ್ತಿಲ್ಲ. ಕೂಗಲು ಅವನ ಕೈ ನನ್ನ ಬಾಯಿ ಮೇಲೆ. ಆದರೆ, ಆತ ಮುಂದುವರಿಯುವಷ್ಟರಲ್ಲಿ ಮನೆಯ ಗೇಟ್ ತೆರೆದುಕೊಂಡಿತು...”

“ಅವನ ಜೊತೆಗಿನ ಸಾಮೀಪ್ಯ, ಸಾಂಗತ್ಯವೆಲ್ಲವೂ ಅಸಹ್ಯ ತರಿಸುವಂಥದ್ದು. ಅದು ನೆನಪಾಗುವಾಗೆಲ್ಲ ಮೈಯ ಕಾವು ಏರಿ ಅಳುವಿನಲ್ಲಿ ತಣ್ಣಗಾಗುತ್ತದೆ. ಈಗ ನಡೆಯುತ್ತಿರುವ #MeToo ಅಭಿಯಾನದಿಂದ ನಾನೂ ಪ್ರೇರಿತಗೊಂಡು #MeToo ಎಂದು ಬರೆದುಕೊಂಡುಬಿಡಲಾ? ಬರೆದರೆ ಆತನಿಗೆ ಅದು ತಲುಪಬಹುದಾ? ತಲುಪಿದರೂ ಪಶ್ಚಾತ್ತಾಪ ಆಗಬಹುದಾ?” ಎಂದು ನನ್ನ ಸ್ನೇಹಿತೆಯೊಬ್ಬಳು ಗೊಣಗೊಣ ಎನ್ನುತ್ತಿದ್ದಾಗ ನನಗೆ ಆಶ್ಚರ್ಯ, ದುಗುಡ ಎಲ್ಲ ಒಟ್ಟೊಟ್ಟಿಗೆ ಬಂದವು.

ಯಾವತ್ತೂ ಆಕೆ ತನ್ನೊಳಗಿನ ಗೌಪ್ಯ ವಿಷಯಗಳನ್ನು ಮುಕ್ತವಾಗಿ ಹೇಳಿಕೊಂಡಿದ್ದಿಲ್ಲ. ಆದರೆ, ಆಕೆ ಪಿಜಿ ಮುಗಿಸುವುದರೊಳಗಾಗಿ ಯಾವುವು ಈ ಸಮಾಜದ ಕಣ್ಣಲ್ಲಿ ಮೈಲಿಗೆಯೋ ಅದನ್ನ ಮುದ್ದಾಮ್ ತನ್ನ ಸ್ನೇಹಿತರ ಬಳಿ ಹೇಳಿಕೊಳ್ಳಲು ಮುಂದಾದಳು. ತಾನು ಐದನೇ ಕ್ಲಾಸಿನಲ್ಲಿದ್ದಾಗ ದೊಡ್ಡಮ್ಮನ ಮಗ ಅಣ್ಣ, ಯಾರೂ ಇಲ್ಲದ ಸಮಯ ನೋಡಿಕೊಂಡು ತನ್ನ ಮೇಲೆ ಅತ್ಯಾಚಾರ ಎಸಗಲು ಬಂದದ್ದನ್ನೂ ತುಂಬಾ ದುಃಖಿಸದೆ ತಣ್ಣಗೆ ಹೇಳಿಕೊಂಡು ಕಣ್ಣು ಒದ್ದೆಯಾಗಿಸಿಕೊಳ್ಳುತ್ತಾಳೆ.

ಹತ್ತು ವರ್ಷಗಳ ಹಿಂದೆ ನಡೆದ ಆ ಘಟನೆಯನ್ನು ಮತ್ಯಾಕೆ ಆಕೆ ನೆನಪಿಸಿಕೊಂಡಳೋ ಗೊತ್ತಿಲ್ಲ; ಅದಕ್ಕೆ ಸಾರ್ವಜನಿಕ ಮುಖ ಯಾಕೆ ಕೊಟ್ಟಳೋ ಗೊತ್ತಿಲ್ಲ. ನಾನು ಹೇಳುತ್ತಿರುವ ಈಕೆ ಕುಗ್ರಾಮವೊಂದರ ಸ್ನೇಹಿತೆ. ಆ ಸ್ನೇಹಿತೆಯ ಕತೆ ನಮ್ಮೆಲ್ಲರದ್ದೂ ಆಗಿರಬಹುದು. ಆದರೆ ಆಕೆ ನಮಗೀಗ ಬೇಡ, ಆಕೆಯ ಮನಸಿನ ಬಗೆಗೆ ಮಾತ್ರ ಯೋಚಿಸುವ.

ಭಾರತಕ್ಕೆ #MeToo ಅಭಿಯಾನದ ನೆರಳು ಬಿದ್ದಾಗ ಸಾಮಾನ್ಯರು ಫೇಸ್‌ಬುಕ್ ಟ್ವಿಟ್ಟರ್, ಇನ್ಸ್ಟಾಗ್ರಾಂಗಳೆಲ್ಲ #MeToo ಎಂದು ಬರೆದುಕೊಂಡರು. ಕಳೆದ ಒಂದೂವರೆ ವರ್ಷದಲ್ಲಿ ಗುರುತಿಸಿಕೊಂಡ ಕೆಲ ಹೆಣ್ಣುಮಕ್ಕಳು ಜಗತ್ತಿನ ಮೂಲೆಮೂಲೆಯಲ್ಲಿ #MeToo ಎಂದು ಹೇಳಿಕೊಂಡು ಇಂಟರ್ನೆಟ್ ವೇದಿಕೆಯನ್ನು ತಮಗೆ ನ್ಯಾಯ ಕಂಡುಕೊಳ್ಳುವ ಮಾರ್ಗವಾಗಿ ಮಾಡಿಕೊಂಡರೋ ಅದರ ಸುತ್ತ ನನ್ನಲ್ಲೂ ಖುಷಿ, ಅಸಹ್ಯ ಹಾಗೂ ಅಸಮಾಧಾನ ಮೇಲುಕ್ಕುತ್ತಿವೆ. ಈ ಘಟನೆಗಳಲ್ಲಿ ಆರೋಪಿಸುವವರೂ ಹಾಗೂ ಅವರ ಮನಸ್ಥಿತಿಯೂ ಮುಖ್ಯವಾಗುತ್ತದೆ ಎಂಬುದನ್ನು ಮರೆಯಬಾರದು.

ಹಾಲಿವುಡ್‌ನಲ್ಲಿ ನಟಿ ಎಲಿಸ್ಸಾ ಮಿಲಾನೋ ಅಡಿಪಾಯ ಹಾಕಿಕೊಟ್ಟ ಲೈಂಗಿಕ ಶೋಷಣೆ ವಿರುದ್ಧದ ಈ ಚಳವಳಿಯು ಜಗತ್ತಿನ ಹೆಣ್ಣುಮಕ್ಕಳ ಲೈಂಗಿಕ ಅಸಹನೆಗೆ ಅಭಿವ್ಯಕ್ತಿಯ ರೂಪ ಕರುಣಿಸಿತು. ಲೈಂಗಿಕ ಶೋಷಣೆಯನ್ನು ಯಾರೇ ಮಾಡಲಿ, ಅದನ್ನು ವಿರೋಧಿಸಿ ಮುಕ್ತವಾಗಿ ಹೇಳಿಕೊಳ್ಳುವಷ್ಟು ಧೈರ್ಯ, ಪ್ರೇರಣೆಯೇನೋ ಸಿಕ್ಕಿತು. ಈ ಪ್ರೇರಣೆ ಕಟ್ಟಕಡೆಯ ಹೆಣ್ಣುಮಗುವಿಗೂ ಆದೀತು ಎನ್ನುವ ನಿರೀಕ್ಷೆ ಮಾತ್ರ ಹಾಘೇ ಉಳಿದುಕೊ‍ಂಡಿದೆ.

ಭಾರತೀಯ ಮೂಲದ ಅಮೆರಿಕ ನಟಿ ಪದ್ಮಾಲಕ್ಷ್ಮೀ, ತಮ್ಮ ಏಳನೇ ವಯಸ್ಸಿನಲ್ಲಿ ಲೈಂಗಿಕ ಶೋಷಣೆಗೊಳಪಟ್ಟಿದ್ದನ್ನು ೪೮ನೇ ವಯಸ್ಸಲ್ಲಿ ಹೇಳಿಕೊಳ್ಳಬೇಕೆಸಿದ್ದನ್ನು ತಪ್ಪೆಂದು ಹೇಳುವ ಹಾಗಿಲ್ಲ. ಆದರೆ, ನಮ್ಮ ಐಡೆಂಟಿಟಿ ಪ್ರಶ್ನೆ ಬಂದಾಗ ಈಗಿರುವ ಸಂವಹನ ಮಾಧ್ಯಮಗಳ ವ್ಯಾಪ್ತಿ ತುಂಬಾ ದೊಡ್ಡದು. ಹಾಗಿದ್ದಾಗ, ಶೋಷಣೆಗೊಳಪಟ್ಟ ಹೆಣ್ಣು ಇನ್ನು ಮುಂದೆ #MeToo ಎಂದು ಬರೆದುಕೊಂಡರೂ, ಅದು ಗಂಭೀರ ವಿಷಯವಾಗದೆ ಹೋಗಬಹುದು ಎನಿಸುತ್ತದೆ. ಅತಿ ವೈಯಕ್ತಿಕ ವಿಷಯಗಳೂ ಸರಕಾಗಿ ಮಾರ್ಪಟ್ಟಾಗ ಹೀಗೆ ಆಗುವ ಸಾಧ್ಯತೆ ಇದೆ.

ಎಲಿಸ್ಸಾ ಮಿಲಾನೋ ಅವರನ್ನು ಹಿಡಿದು ಮೊನ್ನೆಯ ಕಾದಂಬರಿಕಾರ ಚೇತನ್ ಭಗತ್‌ವರೆಗಿನ ಪ್ರಕರಣದವರೆಗೆ #MeToo ಅಭಿಯಾನದ ಇನ್ನೊಂದು ಮುಖವನ್ನು ಕಂಡುಕೊಳ್ಳುವುದಾಗಲೀ, ಊಹಿಸುವುದಾಗಲೀ ಸ್ಥಾಪಿತ ವಾದಗಳೆದುರು ಮಹಾಪರಾಧ ಎನಿಸಬಹುದು.

ಎಂದೋ ಅನುಭವಿಸಿದ ಲೈಂಗಿಕ ಶೋಷಣೆಗಳನ್ನು ಈಗ ಹೇಳಿಕೊಳ್ಳುವುದರ ಹಿಂದೆ ಹಲವು ಪ್ರಶ್ನೆಗಳು ಏಳುತ್ತವೆ. ಆರೋಪಿಸುವವರ ಹಾಗೂ ಆರೋಪಿತರ ನೈತಿಕ ಜೀವನಶೈಲಿ ಮುಖ್ಯವಾಗುತ್ತದೆ. ಪ್ರಚಾರಪ್ರಿಯತೆ, ಐಡೆಂಟಿಟಿ ಸಮಸ್ಯೆ ಹೆಚ್ಚಾದಂತೆ ಒಮ್ಮೊಮ್ಮೆ ಅವಕಾಶವಾದಿ ಗುಣಬಣ್ಣಗಳನ್ನು ಹೊತ್ತು ಬಂದುಬಿಡುತ್ತದೆ. ಸುಖಾಸುಮ್ಮನೆ ಯಾರ ಮೇಲೋ ಆರೋಪಿಸುವಾಗ ನಮ್ಮ ಆತ್ಮಸಾಕ್ಷಿ ನಮ್ಮನ್ನು ಎಚ್ಚರಿಸುತ್ತಲೇ ಇರುತ್ತದೆ. ಆದರೆ, ಅವರಿಗೆ ಎಂದೋ ನಡೆದಿದ್ದನ್ನು ಇಂದು ಹೇಳಲು ಯಾರೋ ಪ್ರೇರಣೆಯಾಗಿರಬಹುದು. ಹೆಣ್ಣನ್ನು ಸಲೀಸಾಗಿ ತೆಗೆದುಕೊಳ್ಳುವ ಫ್ಯೂಡಲ್ ಮನಸ್ಥಿತಿಯ ಪುರುಷರಿಗೆ ಕಾನೂನಿಗಿಂತ ಈ #MeToo ಅಭಿಯಾನ ಪೆಟ್ಟು ಕೊಡುವುದು ನಿಜ.

ಇಲ್ಲಿಯವರೆಗೆ ಮಾಡಿದ ಆರೋಪಗಳೆಲ್ಲ ಬಾಲಿವುಡ್ ನಟ ಇರ್ಫಾನ್ ಖಾನ್‌ರ ಹೇಳಿಕೆಯನ್ನು ಹೊರತುಪಡಿಸಿ ಉಳಿದೆಲ್ಲವೂ ಪುರುಷನ ವಿರುದ್ಧ ಮಾಡಿದ ಆರೋಪಗಳೇ. ಸಾಮಾನ್ಯವಾಗಿ ಹೆಣ್ಣೇ ಲೈಂಗಿಕ ಶೋಷಣೆಗೊಳಲ್ಪಡುತ್ತಾಳೆ ಎಂಬ ವಿಷಯವನ್ನು ಸಾರಾಸಗಟಾಗಿ ಹೇಳಿದರೂ ಪುರುಷರು ಲೈಂಗಿಕ ಶೋಷಣೆಗೊಳಪಟ್ಟಿಲ್ಲ ಎಂದು ಸಾರಾಸಗಟಾಗಿ ತಳ್ಳಿಹಾಕಲಾಗದು.

ಆಕಸ್ಮಿಕವಾಗಿ ಘಟಿಸಿದ ಲೈಂಗಿಕ ಶೋಷಣೆಗೂ ಹಾಗೂ ಇಬ್ಬರೂ ಪರಸ್ಪರ ಪರಿಚಯವಿದ್ದು ಹೆಣ್ಣು ಲೈಂಗಿಕ ಶೋಷಣೆಗೊಳಪಡುವುದಕ್ಕೂ ವ್ಯತ್ಯಾಸವಿದೆ. ಕಾರಣ, ಮೊದಲ ನೋಟಕ್ಕೆ ಯಾರು ಹೇಗೆ ಅವರ ನಡಾವಳಿಗಳು ಹೇಗೆ ಎಂದು ಕಂಡುಕೊಳ್ಳುವಷ್ಟು ತಿಳಿವಳಿಕೆಯಂತೂ ಇದೆ. ಮಹಿಳೆ ಹೇಳಿಕೊಂಡರೆ ಅದು ಸತ್ಯ, ಅದೇ ಪುರುಷ ತಾನು ಮಾಡಿಲ್ಲ ಎಂದು ಹೇಳಿಕೊಂಡರೆ ಅದು ಸುಳ್ಳು ಎಂದು ಸಲೀಸಾಗಿ ನಿರ್ಧಾರಕ್ಕೆ ಬಂದುಬಿಡುತ್ತೇವೆ. ಯಾಕೆ ಹೀಗೆ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಿದೆ.

ಈ #MeToo ಹುಟ್ಟಿದ ಮೂಲ ಕ್ಷೇತ್ರ ಸಿನಿಮಾ. ಶೋಷಿತರೆಲ್ಲ ಬಾಯಿ ಬಿಟ್ಟು ಹೇಳಿಕೊಂಡಿದ್ದರೆ ಅದು ಬೇರೆ ರೂಪವನ್ನೇ ತಲುಪುತ್ತಿತ್ತು ಬಿಡಿ. ತನಗೆ ದೊಡ್ಡ ಸಿನಿಮಾ ಆಫರ್ ತಪ್ಪುತ್ತದೆ ಎಂದುಕೊಂಡು ಮೈ ಮರೆತವರೂ ಹೆಣ್ಣು ಆಗಿರಬಹುದು, ಗಂಡೂ ಆಗಿರಬಹುದು. ಅವರೆಲ್ಲ ಸಂದರ್ಭಕ್ಕೆ ತಕ್ಕನಾಗಿ ಆ ಶೋಷಣೆಯನ್ನು ಬಳಸಿಕೊಂಡರೆ ವೈಯಕ್ತಿಕವಾಗಿ ನನಗನಿಸೋದು ಅದು ಸ್ವಾರ್ಥವೇ. #MeToo ಅಭಿಯಾನದ ಹಿಂದಿನ ನಿಜವಾದ ಪ್ರೇರಣೆ, ಅದರ ಉದ್ದೇಶ ಸಫಲವಾಗದೆ ಹೋದರೆ ಮಾಡಿದ್ದೆಲ್ಲ ನಾಟಕೀಯ ಎನಿಸಬಹುದು.

ಇದನ್ನೂ ಓದಿ : ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಹೆಚ್ಚಳ; ಸುಪ್ರೀಂ ಕೋರ್ಟ್‌ ಆಕ್ರೋಶ

ಕೊನೆಯದಾಗಿ, ನನ್ನ ಸ್ನೇಹಿತೆ ಹೇಳಿಕೊಂಡ ಕತೆಯೊಂದಿಗೆ ಈ ವಿಷಯ ಮುಗಿಸಿಬಿಡುವ. ಆತನ ವೈಚಾರಿಕತೆ, ಓದಿಕೊಂಡ ರೀತಿ, ನಡವಳಿಕೆ, ಬುದ್ಧಿವಂತಿಕೆ ಕಂಡು ಮೋಡಿಗೊಳಗಾಗಿ ಫೇಸ್‌ಬುಕ್ ಮೂಲಕ ಪರಿಚಯವಾಗಿ, ಕೊನೆಗೆ ಆಕೆಯ ಒಪ್ಪಿಗೆಯ ಮೇಲೆ ಬೆಂಗಳೂರಿನ ರೂಮಿಗೂ ಬಂದ. ಆದರೆ, ಅವರ ಪ್ರೀತಿಗೆ ಕಾಮದ ರೂಪ ಇರಿಲಿಲ್ಲವಂತೆ. ಸದಾ ಆಕೆಯ ಏಳಿಗೆಯನ್ನೇ ಬಯಸುತ್ತಿದ್ದ ಆತ, ಆಕೆಯನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ. ಆದರೆ, ಪ್ರೇಮ ವಿವಾಹ ಒಪ್ಪಿಕೊಳ್ಳುವಷ್ಟು ಉದಾರ ಮನಸ್ಥಿತಿ ಅವಳದಾಗಿರಲಿಲ್ಲ. ರೂಮಿಗೆ ಬಂದಾಗಲೆಲ್ಲ ತನಗೆ ಆತ ಕೊಡುತ್ತಿದ್ದ ಮುತ್ತು ಸುಖ ಕೊಡುತ್ತಿದ್ದರೂ, ಕೊಟ್ಟು ಮುಗಿದಾಗ ಅಸಹ್ಯ ಎನಿಸಿ ಆತನನ್ನು ದೂರ ತಳ್ಳುವಂತೆಯೂ, ಮನೆಯಿಂದ ಹೊರಹೋಗು ಎನ್ನುವಂತೆಯೂ ಅನಿಸುತ್ತಿತ್ತಂತೆ. ಈಕೆಯ ಕತೆ ಮುಂದುವರಿಸುವುದು ಬೇಡ. ಆದರೆ ಆಕೆಯ ಮನಸ್ಥಿತಿ #MeToo ಹೇಳಿಕೊಂಡವರದ್ದೂ ಆಗಿರಬಹುದೇನೋ? ಕತೆ ಅವರವರ ವಿಚಾರದಲ್ಲಿ ಭಿನ್ನವಾಗಿದ್ದರೂ ಮನಸ್ಥಿತಿ ಒಂದೇ ಎನಿಸುತ್ತದೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More