ಒತ್ತಡ ನಿವಾರಣೆಗೆ ನೆಟ್‌ಫ್ಲಿಕ್ಸ್ ಗೀಳು; ಬೆಂಗಳೂರಿನ ಯುವಕನೊಬ್ಬ ಅಸ್ವಸ್ಥ 

ಇಂಟರ್ನೆಟ್‌ ಮನರಂಜನೆಯ ಸಾಧ್ಯತೆಗಳನ್ನು ಬದಲಾಯಿಸಿ ಬಹಳ ಕಾಲವಾಗಿದೆ. ಯೂಟ್ಯೂಬ್‌ ಬಹಳ ಅಗ್ಗದ, ಸುಲಭದ ಮನರಂಜನಾ ಮಾಧ್ಯಮವಾಗಿತ್ತು. ನೆಟ್‌ಫ್ಲಿಕ್ಸ್‌ ಹುಟ್ಟಿಕೊಂಡು ಈ ಮಾಧ್ಯಮ ಇನ್ನೊಂದು ಆಯಾಮ ಪಡೆದುಕೊಂಡಿತು. ಈಗ ಅದು ಗೀಳಾಗುವಷ್ಟರ ಮಟ್ಟಿಗೆ ವ್ಯಾಪಿಸಿಕೊಂಡಿದೆ

ರಿಮೋಟ್ ಹಿಡಿದು ಟಿವಿ ನೋಡುವ ಕಾಲ ದೂರ ಹೋಗಿ ಮನರಂಜನಾ ಮಾಧ್ಯಮವನ್ನು ತಾಂತ್ರಿಕವಾಗಿ ಇನ್ನೊಂದು ಹಂತಕ್ಕೆ ಕೊಂಡೊಯ್ದ ನೆಟ್‌ಫ್ಲಿಕ್ಸ್ ಕೆಲವರಲ್ಲಿ ಗೀಳಾಗಿ ಪರಿಣಮಿಸಿದೆ. ಬೆಂಗಳೂರಿನ ೨೩ ವರ್ಷದ ಯುವಕನೊಬ್ಬ ಮಿತಿ ಮೀರಿ ನೆಟ್‌ಫ್ಲಿಕ್ಸ್ ನೋಡಿದ್ದರಿಂದ ನಿಮ್ಹಾನ್ಸ್ ಸೇರಿದ್ದಾನೆ. ಈತ ಭಾರತದ ಮೊದಲ ನೆಟ್‌ಫ್ಲಿಕ್ಸ್ ಅಡಿಕ್ಶನ್ ರೋಗಿಯಾಗಿದ್ದಾನೆ.

ಮನೆಯಲ್ಲಿ ತಂದೆ ತಾಯಿ ಕೆಲಸ ಮಾಡುವಂತೆ ಆಗಾಗ ಒತ್ತಾಯಿಸುತ್ತಿದ್ದರು. ಆ ಮಾನಸಿಕ ಒತ್ತಡದಿಂದ ಹೊರಬರಲು ಹಾಗೂ ಸಮಾಧಾನವನ್ನು ತಂದುಕೊಳ್ಳುವಲ್ಲಿ ಕೂತಲ್ಲಿ ನಿಂತಲ್ಲಿ ನೆಟ್‌ಫ್ಲಿಕ್ಸ್ ನೋಡಲು ಶುರು ಮಾಡಿಕೊಂಡೆ ಎಂದು ಆ ರೋಗಿ ಹೇಳಿಕೊಂಡಿದ್ದಾನೆ. ಈ ಹಿಂದೆ ಅದೇ ಸಮಸ್ಯೆಗೆ ಆತ ಮೊರೆ ಹೋಗಿದ್ದು ಆನ್‌ಲೈನ್ ಗೇಮಿಂಗ್‌ಗೆ.

ನಿಮ್ಹಾನ್ಸ್‌ನಲ್ಲಿ ಆತ ಈಗ ಸರ್ವೀಸ್ ಫಾರ್ ಹೆಲ್ತಿ ಯೂಸ್ ಆಫ್ ಟೆಕ್ನಾಲಜಿ (ತಂತ್ರಜ್ಞಾನದ ಸ್ವಸ್ಥ ಬಳಕೆಯ ಸೇವಾ ಕೇಂದ್ರ) ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ವೈದ್ಯರು ಆತನಿಗೆ ಒತ್ತಡ ಕಡಿಮೆ ಮಾಡಿಕೊಳ್ಳುವ ವ್ಯಾಯಾಮಗಳನ್ನು ಹೇಳಿಕೊಡುತ್ತಿದ್ದಾರೆ. ಮುಖ್ಯವಾಗಿ ಪ್ರತಿ ಗಂಟೆಗೊಮ್ಮೆ ದೀರ್ಘ ಉಸಿರಾಟವನ್ನು ಮಾಡುವಂತೆಯೂ, ವೃತ್ತಿ ಜೀವನದ ಆತನ ಆಸೆಗಳನ್ನು ಕೆದುಕುತ್ತಾ ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ನೋಡುತ್ತಿದ್ದಾರೆ. ಮೊಬೈಲ್, ಕಂಪ್ಯೂಟರ್‌ ಇತ್ಯಾದಿ ಸಾಧನಗಳಿಂದ ದೂರ ಇರಿಸಿ ಹೆಚ್ಚೆಚ್ಚು ಮನುಷ್ಯರ ಜತೆ ಸಮಯ ಕಳೆಯುವಂತೆ ಡಿಜಿಟಲ್ ಡಿಟಾಕ್ಸ್ ಜಿಕಿತ್ಸೆಯನ್ನು ಆತನ ಮೇಲೆ ಪ್ರಯೋಗ ಮಾಡುತ್ತಿದ್ದಾರೆ.

ಇದನ್ನೂ ಓದಿ : ನೆಟ್‌ಫ್ಲಿಕ್ಸ್ ಜೊತೆ ಸಿನಿಮಾ ನಿರ್ಮಾಣ ಒಪ್ಪಂದಕ್ಕೆ ಸಹಿ ಹಾಕಿದ ಒಬಾಮಾ ದಂಪತಿ

ವಿಶ್ವಸಂಸ್ಥೆ ಈ ಹಿಂದೆಯೇ ಮೊಬೈಲ್ ಗೇಮ್‌ಗಳಿಗೆ, ಸಾಮಾಜಿಕ ಜಾಲತಾಣಗಳನ್ನು ಚಟವಾಗಿ ರೂಢಿ ಮಾಡಿಕೊಳ್ಳುವುದು ಒಂದು ಅಸ್ವಸ್ಥತೆ ಎಂದು ಹೇಳಿತ್ತು. ತಜ್ಞರು ಹೇಳುವಂತೆ ವಾಸ್ತವವಾಗಿ ನೀವು ದಿನವೊಂದಕ್ಕೆ ಐದರಿಂದ ಆರು ಗಂಟೆಗಳ ಕಾಲ ಲೈವ್‌ಸ್ಟ್ರೀಮಿಂಗ್ ಸೇವೆಗಳಲ್ಲೇ ಕಾಲ ಕಳೆಯುತ್ತೀರಿ ಎಂದರೆ ಅದು ಅಸ್ವಸ್ಥತೆಗೆ ನಿಮ್ಮನ್ನು ನೀವು ತಳ್ಳಿಕೊಳ್ಳುತ್ತಿದ್ದೀರಿ ಎಂದು ಅರ್ಥ. ವೈದ್ಯರು ವಾಸ್ತವ ಬದುಕಿನ ಬಿಕ್ಕಟ್ಟುಗಳಿಂದ ಹೊರಬರಲು ಯುವಕರು ಲೈವ್ ಸ್ಟ್ರೀಮ್ ಹಾಗೂ ವರ್ಚುವಲ್ ಜಗತ್ತಿನಲ್ಲಿ ತಮ್ಮನ್ನು ತಾವು ಹುಡುಕಿಕೊಳ್ಳುವ ಪ್ರಯತ್ನಕ್ಕೆ ಮುಂದಾಗುತ್ತಾರೆ ಎಂದು ಎಚ್ಚರಿಸಿದ್ದಾರೆ.

Service for Healthy Use of Technology (SHUT) ಕ್ಲಿನಿಕ್‌ನ ಡಾ. ಮನೋಜ್ ಕುಮಾರ್ ಶರ್ಮಾ ಅವರು ಹೇಳುವಂತೆ ಸಾಮಾಜಿಕ ಜಾಲತಾಣ, ಗೇಮಿಂಗ್ ಗಳನ್ನು ದುರುಪಯೋಗ ಪಡಿಸಿಕೊಂಡ ಪ್ರಕರಣಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡಿದೆ ಎಂದು ಹೇಳಿದ್ದಾರೆ. ಗೇಮಿಂಗ್ ಅಡಿಕ್ಶನ್ ೧೪ ವರ್ಷ ವಯಸ್ಸಿನವರಲ್ಲಿ ಹೆಚ್ಚಾಗಿದ್ದರೆ ಅದರ ಮೇಲಿನ ವಯಸ್ಸಿನವರು ಇಂತಹ ಲೈವ್ ಸ್ಟ್ರೀಮ್‌ನಂತಹ ಮಾಧ್ಯಮಗಳಿಗೆ ವ್ಯಸನಿಗಳಾಗಿದ್ದಾರೆ. ಇವರು ಹೆಚ್ಚೆಚ್ಚು ಭಾವನಾತ್ಮಕ ಸಂತೃಪ್ತಿಯನ್ನು ಕಾಣಲು ಇಷ್ಟಪಡುತ್ತಾರೆ ಹಾಗಾಗಿ ಅದರಲ್ಲೇ ಕಾಲ ಕಳೆಯುತ್ತಾರೆ ಎಂದಿದ್ದಾರೆ. ತಾಂತ್ರಿಕ ಜಗತ್ತು ಜೀವನವನ್ನು ಹೆಚ್ಚು ಆರಾಮದಾಯಕವೂ, ಸರಳೀಕರಣಗೊಳಿಸುತ್ತಿದ್ದರೂ ಹೊಸ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂಬುದನ್ನು ಅರಿಯಬೇಕಿದೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More