ಪಂಜಾಬ್ ಟು ಇಟಲಿ; ಸರ್ಕಸ್‌ ಕಂಪನಿಯ ಡ್ರೈವರ್‌ ಆಗಿದ್ದ ಓಂಕಾರ್ ಅನುಭವ

ವಲಸೆ ಹೋಗಿ ಬದುಕು ಕಟ್ಟಿಕೊಂಡ ಹೆಚ್ಚಿನವರ ಕತೆ ದಾರುಣವೇ ಆಗಿರುತ್ತದೆ ಎಂಬುದಕ್ಕೆ ಸಿಮ್ರಾನ್ ಚಾವ್ಲಾ ಬರೆದ ‘Searching For Home: Stories Of Indians Living Abroad’ ಪುಸ್ತಕ ಸಾಕ್ಷಿ. ಈ ಕುರಿತು ‘ಸ್ಕ್ರಾಲ್’ ಜಾಲತಾಣ ಪ್ರಕಟಿಸಿದ ಲೇಖನದ ಭಾವಾನುವಾದ ಇಲ್ಲಿದೆ

ಹಿಂದಿ ಭಾಷೆ ಮಾತನಾಡುವ ಉತ್ತರ ಭಾರತದ ಕಾರ್ಮಿಕರನ್ನು ಗುರಿಯಾಗಿಸಿ ಗುಜರಾತ್‌ನಲ್ಲಿ ನಡೆಸಿದ ದಾಳಿಯಿಂದ ಈವರೆಗೂ ಬಿಹಾರ ಮತ್ತು ಉತ್ತರ ಪ್ರದೇಶಗಳಿಗೆ ಸೇರಿದ ಸುಮಾರು 20 ಸಾವಿರ ವಲಸಿಗರು ತಮ್ಮ ರಾಜ್ಯಗಳಿಗೆ ಮರಳಿದ ವಿಚಾರ ಅಮಾನವೀಯ. ಹೀಗೆ, ಸಾಮಾಜಿಕ ತಲ್ಲಣಗಳಿಗೆ ಮರುಗಿದವರು ದಶಕಗಳಿಂದ ಬೇರೆ-ಬೇರೆ ರಾಜ್ಯಗಳಿಗೆ, ದೇಶಗಳಿಗೆ ವಲಸೆ ಹೋಗುತ್ತಲೇ ಇದ್ದಾರೆ. ಆದರೆ, ಹಾಗೆ ಸಾಮೂಹಿಕವಾಗಿ ವಲಸೆ ಹೋದ ಬಹುತೇಕರ ಕತೆ ದಾರುಣವೇ ಆಗಿರುತ್ತದೆ. ಸಿಮ್ರಾನ್ ಚಾವ್ಲಾ ಬರೆದ ‘Searching For Home: Stories Of Indians Living Abroad’ ಪುಸ್ತಕದ ಆಯ್ದ ಈ ಭಾಗ ಇದಕ್ಕೆ ಸಾಕ್ಷಿ.

“ನಲವತ್ತು ವರ್ಷಗಳ ಹಿಂದೆ ರಷ್ಯಾ ಹಾಗೂ ಅದರ ನೆರೆಯ ದೇಶಗಳಿಗೆ ವೀಸಾ ಹೊಂದುವುದು, ಅಲ್ಲಿ ಅಸ್ತಿತ್ವವನ್ನು ಸಾಧಿಸುವುದು ಭಾರತೀಯರಿಗೆ ಸಲೀಸಾಗಿತ್ತು,” ಎಂದು ಮಾತು ಆರಂಭಿಸಿದ ಓಂಕಾರ್ ಮಾಸ್ಕೋದಿಂದ ಎಷ್ಟೋ ದಾಖಲೆಗೊಳ್ಳದ ವಿಷಯಗಳನ್ನು ಹೇಳಿಕೊಳ್ಳುತ್ತಾರೆ.

“ಕಳ್ಳಸಾಗಾಣಿಕೆದಾರರನ್ನು ದುಂಬಾಲು ಬಿದ್ದು ಅವರ ಸಹಾಯದೊಂದಿಗೆ ಇಟಲಿಗೆ ಬಂದರು. ಭಾರತದಿಂದ ಮಾಸ್ಕೋಗೆ ತಲುಪುವ ಅವರು, ಸುಮ್ಮನೇ ಅಲ್ಲೇ ಕೂರುತ್ತಿರಲಿಲ್ಲ. ಯಾವುದು ಸಿಗುತ್ತದೋ ಆ ವಾಹನದಲ್ಲಿ ಅಥವಾ ಅದ್ಯಾವುದೂ ಸಿಗದಿದ್ದಾಗ ಕಾಲ್ನಡಿಗೆಯಲ್ಲೇ ಇಟಲಿಯನ್ನು ತಲುಪುತ್ತಿದ್ದರು. ಕಾಲ್ನಡಿಗೆಯಲ್ಲಿ ಹೋಗುವವರಲ್ಲಿ ಕೆಲವರು ಇಟಲಿಯನ್ನು ತಲುಪದೆ ದಾರಿಯಲ್ಲೇ ಸಾವನ್ನಪ್ಪುತ್ತಿದ್ದರು,” ಎಂದು ಓಂಕಾರ್ ಮಾತನ್ನು ಮುಂದುವರಿಸಿದಾಗ ವಲಸಿಗರ ಪಾಡು ಕಣ್ಣೆದುರು ಬರುತ್ತಿತ್ತು.

ಇದು ಸ್ವತಃ ಭಾರತದಿಂದ ಇಟಲಿಗೆ ವಲಸೆ ಹೋದ ಓಂಕಾರ್ ಅವರು ವಿವರಿಸಿದ ವಲಸಿಗರ ಮನದಾಳ. ಓಂಕಾರ್ ಅವರು ನೇರಮಾರ್ಗಗಳ ಮೂಲಕ ೧೯೮೦ರಲ್ಲೇ ಇಟಲಿಗೆ ಹೋದವರು. ಮನೆಯವರಿಗಾಗಿ ಹೊಟ್ಟೆ ಹೊರೆಯಲು ಇಟಲಿಯಲ್ಲೇ ಜೀವನ ಸಾಗಿಸುತ್ತಿದ್ದಾರೆ. ಆದರೆ, ವೀಸಾ ನಿರ್ಬಂಧಗಳಿಂದ ಕಾನೂನುಬದ್ಧವಾಗಿ ಕೆಲಸವಿಲ್ಲದೆ ಯುರೋಪಿಗೆ ಭಾರತೀಯರು ತೆರಳುವುದು ತುಂಬಾ ಕಷ್ಟ.

ಇದನ್ನೂ ಓದಿ : ಕರ್ನಾಟಕದಿಂದ ವಲಸೆ ಹೋಗಿ ಕೇರಳದಲ್ಲಿ ಕೈಮಗ್ಗದ ಸೀರೆ ನೇಯುವ ದೇವಾಂಗರು

ಮೊದಲು ಇಟಲಿಗೆ ಬಂದಾಗ ತಾನು ಮಾಡಿದ ಕೆಲಸಗಳ ಪಟ್ಟಿಯನ್ನು ಒಂದೊಂದಾಗಿ ಹೇಳಿಕೊಳ್ಳುತ್ತ, ಸರ್ಕಸ್‌ನಲ್ಲಿ ತಾನು ಕಪ್ಪಾ ಟ್ರ್ಯಾಕ್‌ಸೂಟ್ ಹಾಗೂ ಮೆತ್ತನೆಯ ರುಮಾಲು ಸುತ್ತಿಕೊಂಡು ಮಾಡುತ್ತಿದ್ದ ಕೆಲಸ ಬಗ್ಗೆ ಸಮಾಧಾನಗೊಳ್ಳುತ್ತಾರೆ. ಇಟಲಿಯಲ್ಲಿ ನಾನು ಮಾಡಿದ ಮೊದಲ ಕೆಲಸ ಅದೇ ಎನ್ನುತ್ತಾರೆ.

ಪಂಜಾಬಿಂದ ಇಟಲಿಗೆ ಹೋದಾಗ ಮೊದಲು ಓಂಕಾರ್ ಅಲ್ಲಿನ ಜನಪ್ರಿಯ ಸರ್ಕಸ್ ಕಂಪೆನಿ ಸಿರ್ಕೊ ಸಿಸೇರ್ ಟೋಗ್ನಿಯಲ್ಲಿ ಡ್ರೈವರ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಆ ಸರ್ಕಸ್ ತಂಡದಲ್ಲಿ ಇಟಲಿಯೇತರ ಒಬ್ಬನೇ ಒಬ್ಬ ಕೆಲಸಗಾರನೆಂದರೆ ಅದು ಓಂಕಾರ್ ಮಾತ್ರ. ಭಾರತದಿಂದ ಇಟಲಿಗೆ ಬಂದ ಬಹುತೇಕ ಪಂಜಾಬಿ ಭಾರತೀಯರೆಲ್ಲ ಮೊದಲು ಅಮ್ಯೂಸ್ಮೆಂ‌ಟ್ ಪಾರ್ಕ್‌ಗಳಲ್ಲಿ ಬೇಡಿಕೆಯ ಕೆಲಸಗಳಾದ ಪ್ರಾಣಿಗಳನ್ನು ಪಳಗಿಸುವ ಹಾಗೂ ಸರ್ಕಸ್ ರಿಂಗ್‌ಗಳನ್ನು ತಯಾರಿಸುವ ಕೆಲಸಗಳಲ್ಲಿ ಭಾಗಿಯಾದರು.

ಸರ್ಕಸ್ ಕಂಪನಿ ದಕ್ಷಿಣ ಇಟಲಿಯ ಸುತ್ತೆಲ್ಲ ಪ್ರದರ್ಶನಕ್ಕಾಗಿ ಸುತ್ತಾಡುತ್ತಿದ್ದಾಗ ತಾತ್ಕಾಲಿಕವಾಗಿ ಉಳಿದುಕೊಳ್ಳುತ್ತಿದ್ದುದು ಪ್ರವಾಸಿ ತಾಣ ಸಲೆರ್ನೊ ಬಳಿಯ ಅಮಲ್ಫಿ ಕೋಸ್ಟ್‌ನಲ್ಲಿ. ಆಗ ಪಂಜಾಬಿ ಭಾರತೀಯರು ಇಟಲಿಗೆ ಬಂದಾಗ ಅವರಿಗೆ ಕೆಲಸಕ್ಕೆ ಅವಕಾಶ ನೀಡುವ ದೊಡ್ಡ ಪ್ರದರ್ಶನವಾಗಿತ್ತು. ಆಮೇಲೆ ಅವರಿಗೆ ಎಂದಿನಂತೆ ಗುಂಪುಗಳನ್ನಾಗಿ ವಿಂಗಡಿಸಿ ಮುಖ್ಯವಾಗಿ ಕುದುರೆಗಳನ್ನು ನೋಡಿಕೊಳ್ಳಲು, ಇತರ ಪ್ರಾಣಿಗಳನ್ನು ನೋಡಿಕೊಳ್ಳಲು ವಹಿಸಲಾಯಿತು.

ಆರಂಭದಲ್ಲಿ ಎಳೆವಯಸ್ಸಿನ ಓಂಕಾರ್ ಎತ್ತರವಾಗಿ ತೆಳ್ಳಗಿದ್ದರು, ಬೆಲ್‌ ಬಾಟಮ್ ಪ್ಯಾಂಟ್ ಹಾಗೂ ಶರ್ಟ್ ಹಾಕುತ್ತಿದ್ದರು. ಸರ್ಕಸ್ ಕಂಪನಿಗೆ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದದು, ಓಂಕಾರ್ ಜೊತೆ ಇನ್ನೆರಡು ಹುಡುಗರು.

ಮಧ್ಯರಾತ್ರಿಯವರೆಗೂ ಸರ್ಕಸ್ ನಡೆಯುತ್ತಿತ್ತು. ಸರ್ಕಸ್ ಮುಗಿದ ಬಳಿಕ ಟೆಂಟ್‌ಗಳನ್ನು ಕಿತ್ತುಹಾಕುವುದು, ಟ್ರಕ್‌ಗಳಿಗೆ ತುಂಬಿಸುವುದು, ರಾತ್ರಿ ಇಡೀ ಗಾಡಿ ಓಡಿಸಿ ಮತ್ತೊಂದು ಸರ್ಕಸ್ ನಡೆಯುವ ಸ್ಥಳಕ್ಕೆ ಹೋಗುವುದು, ಇದು ಓಂಕಾರ್ ಅವರ ಕೆಲಸವಾಗಿತ್ತು.

ಪಂಜಾಬಿನ ಹೋಶಿಯಾರ್‌ಪುರದಲ್ಲಿ ಮನೆಯವರನ್ನೆಲ್ಲ ಬಿಟ್ಟು ಹೊಟ್ಟೆಪಾಡಿಗಾಗಿ ಇಟಲಿಗೆ ಬಂದು ಬೇಸರ ಮಾಡಿಕೊಳ್ಳದೆ ಕೆಲಸ ಮಾಡಲು ಪ್ರೇರಣೆ ಎನಿಸಿದ್ದು ಟ್ರಕ್ ಓಡಿಸಿಕೊಂಡು ಹೊಸ ಹೊಸ ನಗರಗಳ ಅನ್ವೇಷಣೆಗೆ ಮುಂದಾಗಿದ್ದು. ಸರ್ಕಸ್ ನಡೆಯುವ ಸ್ಥಳಗಳನ್ನು ಹುಡುಕಿಕೊಂಡು ಹೋಗುವುದು ಮೋಜು ಉಂಟು ಮಾಡುತ್ತಿತ್ತು ಎಂದು ಓಂಕಾರ್ ಇಟಲಿ ಆರಂಭದ ದಿನಗಳನ್ನು ಮೆಲಕು ಹಾಕುತ್ತಾರೆ.

ಕೆಲ ತಿಂಗಳು ಸರ್ಕಸ್‌ನಲ್ಲಿ ಕೆಲಸ ಮಾಡಿದ ನಂತರ ಸ್ಥಿರ ಕೆಲಸ ಹುಡುಕಿಕೊಳ್ಳಲು ಓಂಕಾರ್ ಮುಂದಾಗುತ್ತಾರೆ. ಮನೆಯವರನ್ನು ಬಿಟ್ಟು ವಾರ, ತಿಂಗಳು, ವರ್ಷವೇ ಉರುಳಿದವು. ತಮ್ಮ ಪಂಜಾಬಿ ಸಂಪರ್ಕದಿಂದಲೇ ಇಟಲಿಯಲ್ಲಿ ನೆಲೆಗೊಂಡ ಸಂಬಂಧಿಕರು ಸಿಗುತ್ತಾರೆ. ರೆಗ್ಗಿಯೋ ಎಮಿಲಾ ನಗರದಲ್ಲಿ ಚಿಕ್ಕಮ್ಮ, ರೋಮ್‌ನಲ್ಲಿ ಇನ್ನೊಬ್ಬ ಸೋದರ ಸಂಬಂಧಿ ವಾಸಿಸುತ್ತಾರೆ. ಹೀಗೆ, ಈ ಸಂಬಂಧಿಕರು ಹತ್ತಿರವಾದಂತೆ ಹೊಸ-ಹೊಸ ಉದ್ಯೋಗಗಳು ಅರಸಿ ಬರುತ್ತವೆ.

ಇಟಲಿಯಲ್ಲಿ ತುಂಬಾ ಸಮಯದಿಂದ ಇದ್ದ ಓಂಕಾರ್ ಅವರನ್ನು ಇಟಲಿಯನ್ನರು ಸ್ವೀಕರಿಸಿದರು. ಮೂಲತಃ ಪಂಜಾಬಿಯಾದ ಓಂಕಾರ್, ತನ್ನ ಜೀವನಶೈಲಿಯಲ್ಲಿ ಬದಲಾವಣೆ ತಂದುಕೊಳ್ಳಲು ನಿರ್ಧರಿಸಿದರು, ತನ್ನ ರುಮಾಲನ್ನು ಹಾಗೂ ತಲೆಗೂದಲನ್ನು ಕತ್ತರಿಸಲು ಕಠಿಣ ನಿರ್ಧಾರವನ್ನು ಮಾಡಿದರು.

90ರ ದಶಕದಲ್ಲಿ ಓಂಕಾರ್ ಭಾರತಕ್ಕೆ ಮದುವೆಯಾಗಲು ಹಿಂದಿರುಗುತ್ತಾರೆ. ನಂತರ ಓಂಕಾರ್ ಹೆಂಡತಿ ಹಾಗೂ ಎರಡು ವರ್ಷದ ಮಗಳೊಂದಿಗೆ ಇಟಲಿಗೆ ಬಂದಾಗ ಆ ಅನುಭವಗಳನ್ನು ಮಾತಾಡಲು ತಮ್ಮ ಸ್ಥಳೀಯ, ಆಡುಭಾಷೆಯನ್ನೇ ಆರಿಸಿಕೊಳ್ಳುತ್ತಾರೆ. ಓಂಕಾರ್ ಹೆಂಡತಿ ಕೂಡ ಪಕ್ಕದ ಮನೆಯ ಹೆಂಗಸೊಬ್ಬರ ಜೊತೆ ಮಾತಾಡುತ್ತ ಇಟಲಿ ಭಾಷೆ ಮಾತಾಡಲು ಕಲೆತರು. ಎಷ್ಟೋ ವರ್ಷಗಳ ಬಳಿಕ ಓಂಕಾರ್ ತಮ್ಮ ಹೆಂಡತಿ ಮಗಳೊಂದಿಗೆ ಭಾರತಕ್ಕೆ ಮರಳುತ್ತಾರೆ. ಮತ್ತದೇ ರುಮಾಲು ಸುತ್ತಿಕೊಳ್ಳುತ್ತ, ತಮ್ಮ ಹಳೇ ಪಂಜಾಬಿ ಜೀವನಶೈಲಿಗೆ ಮರಳುತ್ತಾರೆ. ಆದರೆ, ಅದು ತಾತ್ಕಾಲಿಕವಾಗಿ ಮಾತ್ರ. ಮತ್ತೆ ಓಂಕಾರ್ ಅಂತಿಮವಾಗಿ ಇಟಲಿಗೆ ಕುಟುಂಬ ಸಮೇತರಾಗಿ ತೆರಳಿದ್ದಾರೆ. ಪ್ರಸ್ತುತ ಅಲ್ಲೇ ಹಾಲಿನ ಡೇರಿಯನ್ನು ಆರಂಭಿಸಿಕೊಂಡು ಆರಾಮದಾಯಿಕ ಜೀವನ ಸಾಗಿಸುತ್ತಿದ್ದಾರೆ.

ಚಿತ್ರ: ಲೇಖಕಿ ಸಿಮ್ರಾನ್ ಚಾವ್ಲಾ

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More