#MeToo | ಟಿವಿ ವೃತ್ತಿಪರರ ಮಾತಿನಲ್ಲಿ ಧಾರಾವಾಹಿ ಲೋಕದತ್ತ ಒಂದು ನೋಟ

ಸದ್ಯ ಟಿವಿ ಎಂಬುದು ಸಾಮಾನ್ಯ ಜನರ ನಿತ್ಯಜೀವನದ ಅಂಗವಾಗಿದೆ. 90ರ ದಶಕದಿಂದಲೂ ಈ ಕಿರುತೆರೆ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ನಂದಾ, ಶ್ರೀಧರ್ ರಾಘವನ್, ಮಿತಾ ವಶಿಷ್ಠ ಮತ್ತು ಸೀಮಾ ಪಹ್ವಾ ಅವರು ತಮ್ಮ ವೃತ್ತಿಪರಿಸರ ವಿವರಿಸಿ ‘ದಿ ಸ್ಕ್ರಾಲ್‌’ಗೆ ನೀಡಿರುವ ಸಂದರ್ಶನದ ಭಾವಾನುವಾದ ಇಲ್ಲಿದೆ

೨೦ನೇ ಶತಮಾನದ ಆರಂಭದಲ್ಲಿ ದೂರಸಂವಹನ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿಯೇ ಆರಂಭವಾಯಿತು. ಟೆಲಿವಿಷನ್ ನಮ್ಮ ದೈನಂದಿನ ಜೀವನದ ಒಂದು ಭಾಗವಾಗಿಯೇ ಹೋಯಿತು. ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲ ವಿದ್ಯಮಾನ, ಮನರಂಜನೆ, ಜ್ಞಾನಾರ್ಜನೆಗೆ ದೂರದರ್ಶನ ಪ್ರಮುಖ ಸಾಧನವಾಯಿತು. ಸರ್ಕಾರಿ ಸಾಮ್ಯದ ಡಿಡಿಗೆ ಸ್ಪರ್ಧೆಯೊಡ್ಡಿದ್ದು 90ರ ದಶಕದ ನಂತರ ಪರಿಚಯವಾದ ಉಪಗ್ರಹ ಚಾನೆಲ್‌ಗಳು. ಉಪಗ್ರಹ ಚಾನೆಲ್‌ಗಳು ಬಂದಿದ್ದೇ ತಡ, ಪ್ರತಿಭಾವಂತ ಹಾಗೂ ಸೃಜನಾತ್ಮಕ ಬರಹಗಾರರಿಗೆ ಎಲ್ಲಿಲ್ಲದ ಬೇಡಿಕೆಯೂ ಸಿಕ್ಕಿತು. ಈ ಸಂದರ್ಭದಲ್ಲಿ ಹಲವು ಮಂದಿ ಮಹಿಳೆಯರು ದೂರದರ್ಶನದಲ್ಲಿ ತಮ್ಮ ವೃತ್ತಿಬದುಕನ್ನು ಕಂಡುಕೊಂಡರು. ಇದರ ನಡುವೆ, 19 ವರ್ಷಗಳ ಹಿಂದೆ ತಮ್ಮ ಮೇಲೆ ನಡೆದ ಅತ್ಯಾಚಾರದ ಕುರಿತಂತೆ ಕಿರುತೆರೆ ಬರಹಗಾರ್ತಿ ವಿಂತಾ ನಂದಾ ನೀಡಿರುವ ಹೇಳಿಕೆಯೊಂದು ಇದೀಗ ಚರ್ಚೆಗೆ ಗ್ರಾಸವಾಗಿದ್ದು, ಮನರಂಜನೆ, ದೂರದರ್ಶನ, ಸಿನಿಮಾ ವಲಯವೂ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬ ಮಾತುಗಳು ಮತ್ತೆ ಚಾಲ್ತಿಗೆ ಬರಲಾರಂಭಿಸಿದೆ.

ವಿಂತಾ ಅವರು ಮಾಡಿರುವ ಆರೋಪದಿಂದಾಗಿ ಇದೀಗ ದಶಕದಿಂದ ಟೆಲಿವಿಷನ್ ಉದ್ಯಮ ಲೈಂಗಿಕ ಕಿರುಕುಳದಿಂದ ಹೊರತಾಗಿಲ್ಲ ಎಂಬುದು ಸಾಬೀತಾಗುತ್ತಿದೆ. ಈ ಹಿನ್ನೆಲೆಯಲ್ಲಿ, 90ರ ದಶಕಗಳಿಂದಲೂ ಕಿರುತೆರೆ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ನಂದಾ, ಶ್ರೀಧರ್ ರಾಘವನ್, ಮಿತಾ ವಶಿಷ್ಠ ಮತ್ತುಸೀಮಾ ಪಹ್ವಾ ಅವರು ‘ದಿ ಸ್ಕ್ರಾಲ್‌’ಗೆ ನೀಡಿರುವ ಸಂದರ್ಶನದ ಅನುವಾದ ಇಲ್ಲಿದೆ.

ವಿಂತಾ ನಂದಾ

ಹಿರಿಯ ಲೇಖಕಿ ಹಾಗೂ ಚಿತ್ರ ನಿರ್ಮಾಪಕಿ, 1990ರ 'ತಾರಾ' ಖ್ಯಾತಿಯ ಅವಂತ್ ಗರ್ಡೋ ಶೋ ಮೂಲಕ ಖ್ಯಾತಿ ಪಡೆದಿದ್ದ ವಿಂತಾ ನಂದಾ, 19 ವರ್ಷಗಳ ಹಿಂದೆ ನಟ ಅಲೋಕ್ ನಾಥ್ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಮಾಡಿದ್ದರು. ಈ ಆರೋಪಕ್ಕೆ ಪರ-ವಿರೋಧ ವ್ಯಕ್ತವಾಗುತ್ತಿದ್ದು, ಕೆಲವರು ಈ ವಿಚಾರವನ್ನು 19 ವರ್ಷದ ಬಳಿಕ ಹೇಳುತ್ತಿರುವುದರ ಹಿಂದೆ ದುರುದ್ದೇಶವಿದೆ ಎಂಬ ಆರೋಪ ಮಾಡುತ್ತಿದ್ದಾರೆ. ಈ ಕುರಿತಂತೆ ಮಾತನಾಡಿರುವ ವಿಂತಾ ನಂದ, “1990ರ ದಶಕದ ಆರಂಭದಲ್ಲಿ ಉಪಗ್ರಹ ವಾಹಿನಿಗಳು ಹೆಚ್ಚು ಪ್ರಭಾವ ಬೀರಲು ಆರಂಭಿಸಿದವು. ವಾಹಿನಿಯಲ್ಲಿ ಸೃಜನಶೀಲ ಬರಹಗಳಿಗೆ ಮತ್ತು ಸಂಭಾಷಣೆಗಳಿಗೆ ಹೆಚ್ಚು ಮಹತ್ವ ನೀಡಲಾಯಿತು. 1990ರಿಂದ 1997ರ ಅವಧಿಯಲ್ಲಿ ಕಾರ್ಪೋರೇಟ್ ಸಂಸ್ಥೆಗಳ ಸಹಯೋಗದಲ್ಲಿ ಮೂಡಿಬಂದ ಉಗಪ್ರಹ ಚಾನೆಲ್ ಗಳ ಹಾವಳಿಯಿಂದ ದೂರದರ್ಶನದ ಚಿತ್ರಣ ಸಂಪೂರ್ಣ ಬದಲಾಯಿತು. ಹೀಗಾಗಿ, ಈ ಹಿಂದಿನ ದಶಕದಲ್ಲಿದ್ದ ಕೆಲಸಕ್ಕಿಂತಲೂ ಹೆಚ್ಚು ಆಕ್ರಮಣಕಾರಿ ಕೆಲಸಗಳತ್ತ ನಾವು ಗಮನ ಹರಿಸಬೇಕಾಯಿತು. ಆದರೆ, 90ರ ದಶಕದ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಕೆಲವೊಂದು ಕಟ್ಟುಪಾಡುಗಳಿದ್ದವು. ಮಹಿಳೆಯರಿಗೆ ಬೆಂಬಲವೂ ಇರಲಿಲ್ಲ, ಕೆಲಸ ಮಾಡುವ ವಾತಾವರಣವೂ ಅಶಕ್ತವಾಗಿತ್ತು. ತಮಗಾಗುತ್ತಿರುವ ಅನ್ಯಾಯ, ಶೋಷಣೆಯ ಬಗ್ಗೆ ಮಾತನಾಡುವ ಧೈರ್ಯ ಯಾರಿಗೂ ಇರಲಿಲ್ಲ,” ಎಂದು ಹೇಳಿದ್ದಾರೆ.

“ಇದೀಗ ಕಾಲ ಬದಲಾಗಿದೆ. ಸ್ಕ್ರೀನ್ ರೈಟರ್ಸ್ ಅಸೋಸಿಯೇಷನ್, ನಿರ್ಮಾಪಕರ ಗಿಲ್ಡ್, ಸಿನಾಟಾಗಳು ಜೊತೆಯಾಗಿ ಕಾರ್ಯನಿರ್ವಹಿಸುತ್ತ, ಮಹಿಳೆಯರಿಗೆ ಬೆಂಬಲ ನೀಡುತ್ತಿದೆ. ಆದರೆ, 90ರ ದಶಕದ ಆರಂಭದಲ್ಲಿ ಇಂತಹ ಪರಿಸ್ಥಿತಿ ಇರಲಿಲ್ಲ. ಮಹಿಳೆ ಧ್ವನಿ ಎತ್ತಿ ಮಾತನಾಡುವಂತಹ ವಾತಾವರಣ ಇರಲಿಲ್ಲ. ಒಂದು ವೇಳೆ ಮಹಿಳೆ ಜೋರಾಗಿ ಮಾತನಾಡಿದರೆ ಅದು ದೊಡ್ಡ ಅಪರಾಧ ಎಂದೇ ಭಾವಿಸಲಾಗಿತ್ತು. ಮಹಿಳೆಗೆ ಸ್ವಾತಂತ್ರ್ಯ ಸೀಮಿತವಾಗಿತ್ತು. ಇಂತಹ ಪರಿಸ್ಥಿತಿಯಲ್ಲೇ ನಾನು ಇದ್ದೆ,” ಎಂದು ವಿವರಿಸಿದ್ದಾರೆ.

“ಆದರೆ, ಈಗಲೂ ಪರಿಸ್ಥಿತಿ ಹೇಳಿಕೊಳ್ಳುವಷ್ಟು ಬದಲಾಗಿಲ್ಲ. ಬಹಿರಂಗವಾಗಿ ವಿಚಾರಗಳನ್ನು ಮಾತನಾಡುವವರ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಲೇ ಇದೆ. ಇದರ ಮಧ್ಯೆ ಹೊಸ ಪೀಳಿಗೆಯ ಮನಸ್ಥಿತಿಗಳು ಬದಲಾಗುತ್ತಿರುವುದು ಉತ್ತಮ ಬೆಳವಣಿಗೆ ಅಷ್ಟೇ ಅಲ್ಲ; ಮಹಿಳೆಯರೂ ತಮ್ಮ ಮೇಲಿನ ಅನ್ಯಾಯವನ್ನು ಪ್ರತಿಭಟಿಸುತ್ತಿದ್ದಾರೆ. ಅವರು ಧ್ವನಿ ಎತ್ತುತ್ತಿರುವುದು ಸ್ವಾಗತಾರ್ಹ” ಎಂದವರು ಹೇಳಿದ್ದಾರೆ.

“ಮಾಧ್ಯಮಗಳು ಕೂಡ ಪ್ರಭಾವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾಮಾಜಿಕ ಮಾಧ್ಯಮಗಳು ಕೂಡ ಹೆಚ್ಚು ಶಕ್ತಿಶಾಲಿಯಾಗಿದೆ. ಇದರಿಂದ ಮಹಿಳೆಯರಿಗೆ ಬೆಂಬಲ ಸಿಗುತ್ತಿರುವುದು ಸಂತಸದ ವಿಚಾರ,” ಎಂದು ವಿಂತಾ ಹೇಳಿದ್ದಾರೆ

ಸುನಿಲ್ ರಾಘವನ್

“90ರ ದಶಕ ಹಾಗೂ ಅದಕ್ಕಿಂತ ಹಿಂದಿನ ವಿಚಾರವನ್ನು ಹೇಳುವುದಾದರೆ, ದೂರದರ್ಶನಗಳು ಹೆಚ್ಚಾಗಿ, ನಿರ್ದೇಶಕರಿಂದ ಮತ್ತು ನಿರ್ಮಾಪಕರಿಂದ ಚಾಲಿತವಾಗಿದ್ದವು. ನಿಮಗೂ ಗೊತ್ತಿರಬಹುದು, 90ರ ದಶಕದಲ್ಲಿ ದೂರದರ್ಶನದಲ್ಲಿ ಮೂಡಿಬಂದ ಹೆಚ್ಚಿನ ಕಾರ್ಯಕ್ರಮಗಳು, ರಮೇಶ್ ಸಿಪ್ಪಿ, ರಮಾನಂದ ಸಾಗರ್,  ಶ್ಯಾಮ್ ಬೆನೆಗಲ್, ಕುಂದನ್ ಷಾ, ಸಯೀದ್ ಮಿರ್ಜಾ, ರವಿ ರೈ, ಬಿಪಿ ಸಿಂಗ್ ಮುಂತಾದ ಹೆಸರುಗಳೊಂದಿಗೆ ಅವಲಂಬಿತವಾಗುತ್ತಿದ್ದವು. ನಿರ್ಮಾಪಕರು ತಮ್ಮದೇ ಹಣ ವ್ಯಯಿಸಿ, ಪ್ರಾಯೋಗಿಕ ಧಾರಾವಾಹಿ ಅಧ್ಯಾಯವೊಂದನ್ನು ನಿರ್ಮಿಸಿ ಟಿವಿ ವಾಹಿನಿಗಳನ್ನು ಸಂಪರ್ಕಿಸುತ್ತಿದ್ದರು. ಈ ಅವಧಿ ಅತ್ಯಂತ ಅಪಾಯಕಾರಿಯಾಗಿತ್ತು. ಉಪಗ್ರಹ ಚಾನೆಲ್‌ಗಳು ನಿಮ್ಮ ಕಾರ್ಯಕ್ರಮವನ್ನು ಖರೀದಿಸಿದರೂ, ಒಂದು ವೇಳೆ ಅವುಗಳು ಮುಂದೆ ಅಸ್ತಿತ್ವ ಉಳಿಸಿಕೊಳ್ಳಲಿದ್ದರೆ ನಿರ್ಮಾಪಕ ತೊಂದರೆಗೀಡಾಗುತ್ತಿದ್ದ. ಇಂತಹ ಹಲವಾರು ಸಂಕಷ್ಟಗಳ ಮಧ್ಯೆ ಕಾರ್ಯಕ್ರಮ ತಯಾರಿಸಬೇಕಿತ್ತು. ಆದರೆ, ಈಗ ಕಾಲ ಬದಲಾಗಿದೆ. ನಾವು ಹೇಳುವ ಯಾವುದಾದರೂ ಸ್ಟೋರಿ ಲೈನ್ ಇಷ್ಟವಾದರೆ, ನಿರ್ಮಾಪಕರು ತಾವೇ ಪೈಲೆಟ್ ಎಪಿಸೋಡ್‌ಗೆ ಬಂಡವಾಳ ಹೂಡಲು ತಯಾರಾಗುತ್ತಾರೆ. ಇಂತಹ ಸ್ವಾತಂತ್ರ್ಯ ಆಗ ಇರಲಿಲ್ಲ,” ಎಂದು ಹಳೆ ದಿನಗಳನ್ನು ನೆನಪಿಸುತ್ತಾರೆ ಸುನಿಲ್ ರಾಘವನ್.

ಇದೇ ವೇಳೆ ತಮ್ಮ ವೃತ್ತಿಬದುಕಿನ ಆರಂಭದ ದಿನಗಳ ಬಗ್ಗೆ ಮಾತನಾಡಿದ ರಾಘವನ್, “ಅಸಾಧಾರಣ ಪ್ರತಿಭೆ ಉಳ್ಳ ಹಾಗೂ ಬಲವಾದ ಮಹಿಳಾ ಬರಹಗಾರರು, ಮಹಿಳಾ ನಿರ್ಮಾಪಕರು, ವಾಹಿನಿ ನಿರ್ದೇಶಕರು ದೂರದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾನು ದೂರದರ್ಶನದಲ್ಲಿ ವೃತ್ತಿ ಆರಂಭಿಸಿದಾಗಿನಿಂದಲೂ, ದೂರದರ್ಶನದ ರಾಣಿಯಾಗಿ ಮೆರೆಯುತ್ತಿರುವವರು ಏಕ್ತಾ ಕಾಪೂರ್. ನಮ್ಮ ಶೋನಲ್ಲಿ, ಸೀನಿಯರ್ ಅಸೋಸಿಯೇಟ್ಸ್, ಸಹನಿರ್ದೇಶಕರು, ಪ್ರೋಡಕ್ಷನ್ ಟೀಮ್ ಹೆಡ್ ಹೀಗೆ ಎಲ್ಲದರಲ್ಲೂ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಿದ್ದರು. ಇಂದಿಗೂ ನಮ್ಮ ತಂಡದಲ್ಲಿರುವ ಹೆಚ್ಚಿನ ಸೃಶನಶೀಲ ಬರಹಗಾರರು, ಸೃಜನಶೀಲ ನಿರ್ದೇಶಕ (ಕ್ರಿಸ್ಟಾಬೆಲ್ ಡಿ ಸೋಜಾ) ಮತ್ತು ಸ್ಕ್ರಿಪ್ಟ್ ಹೆಡ್ (ನಿತಿಕಾ ಕಾನ್ವಾರ್) ಮಹಿಳೆಯರೇ ಆಗಿದ್ದಾರೆ,” ಎಂದವರು ವಿವರಿಸುತ್ತಾರೆ.

ಮಿತಾ ವಶಿಷ್ಠ

ಮಿತಾ ವಶಿಷ್ಠ ಹೇಳುವಂತೆ, “ದೂರದರ್ಶನದ ಕೆಲಸ ಮಾಡುವ ಸ್ಥಳದಲ್ಲಿ ಪಾರದರ್ಶಕತೆ ಮತ್ತು ವೃತ್ತಿಪರತೆ ಕೊರತೆ ಇದೆ. 1990ರ ಅಂತ್ಯದಲ್ಲಿ, ಹಲವು ಮಂದಿ ವಿಫಲ ನಿರ್ಮಾಪಕರು ದೂರದರ್ಶನದಲ್ಲಿ ತಮ್ಮ ಅದೃಷ್ಟ ಪರೀಕ್ಷಿಸುತ್ತಿದ್ದರು. ಅದೃಷ್ಟವಶಾತ್ ನನಗೆ ಶ್ಯಾಮ್ ಬೆನಗಲ್, ಕೇತನ್ ಮೆಹ್ತಾ ಮತ್ತು ಗುಲ್ಜಾರ್ ಅಂತಹ ಅತ್ಯುತ್ತಮರ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಆದರೆ, 90ರ ದಶಕದ ನಂತರ ಚಿತ್ರಣ ಸಂಪೂರ್ಣ ಬದಲಾಯಿತು. ಸಹನಿರ್ದೇಶಕರು ಸೆಟ್‌ನಲ್ಲಿ ಶಾಟ್ ತೆಗೆಯಲು ಆರಂಭಿಸಿದರು. ಅಂದಿನಿಂದ ದೂರದರ್ಶನದಲ್ಲಿದ್ದ ಕೆಲಸದ ವಾತಾವರಣ ಬದಲಾಯಿತು. ಅನಾರೋಗ್ಯಕರ ವಾತಾರಣ ಸೃಷ್ಟಿಯಾಯಿತು. ಅಲ್ಲದೆ, ಪಾರದರ್ಶಕತೆ ಮತ್ತು ವೃತ್ತಿಪರತೆ ಇಲ್ಲದಂತಾಯಿತು.”

'ಕಾಲಾ ಟಿಕಾ' ಧಾರಾವಾಹಿಯ ಶೂಟಿಂಗ್ ಸಂದರ್ಭದಲ್ಲಿ ತಮಗಾದ ಕಹಿ ಅನುಭವನನ್ನು ಹಂಚಿಕೊಂಡಿರುವ ಮಿತಾ ವಶಿಷ್ಠ, “ಜಾಹಿರಾತು ವಿಚಾರವಾಗಿ ನನಗೆ ಸಮಸ್ಯೆಯೊಂದು ತಲೆದೋರಿತ್ತು. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ನನ್ನೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ಒಂದು ಹಂತದಲ್ಲಿ ನನ್ನ ಮೇಲೆ ಲೈಂಗಿಕ ಕಿರುಕುಳದ ಬೆದರಿಕೆಯನ್ನೂ ಆತ ಬಹಿರಂಗವಾಗಿಯೇ ಒಡ್ಡಿದ. ಇದರಿಂದ ಕೆರಳಿದ ನಾನು, ಈ ಬಗ್ಗೆ ಕಾರ್ಯಕ್ರಮದ ನಿರ್ಮಾಪಕರಿಗೆ ದೂರಿದೆ. ಅವರು ಈ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳದೆ, ಆತನಿಗೆ ಕೆಟ್ಟ ದಿನ ಕಾದಿದೆ ಎಂದು ಹಾರಿಕೆ ಉತ್ತರ ನೀಡಿದ್ದರು. ಆದರೆ ನಾನು ಇಷ್ಟಕ್ಕೇ ಸುಮ್ಮನಾಗಲಿಲ್ಲ. ಈ ಘಟನೆಯ ಬಗ್ಗೆ CINTAAಗೆ ದೂರು ಸಲ್ಲಿಸಿದೆ. ಬಳಿಕ ಈ ಬಗ್ಗೆ ವಿಚಾರಣೆ ನಡೆಸಿದ ಅವರು, ಶೂಟಿಂಗ್ ಸಂದರ್ಭದಲ್ಲಿ ಆ ಹುಡುಗ ನನ್ನ ಸುತ್ತ ಇರಬಾರದು ಎಂದು ಸೂಚನೆ ನೀಡಿದರು,” ಎಂದು ವಿವರಿಸಿದ್ದಾರೆ.

“ವಿಂತಾ ಪ್ರಕರಣದಲ್ಲಿ, ಗೆಳೆಯ ಹಾಗೂ ಸಹಪಾಠಿಯಾಗಿದ್ದ ಅಲೋಕ್ ನಾಥ್ ಮಾಡಿದ್ದು ಗಂಭೀರ ಅಪರಾಧ. ಅಂಥವರನ್ನು ಸುಮ್ಮನೆ ಬಿಡಬಾರದು. ವಿಂತಾಗೆ ಇದೀಗ ಜನರು ನೈತಿಕ ಬೆಂಬಲ ನೀಡಿ, ಆತನ ವಿರುದ್ಧ ದೂರು ಸಲ್ಲಿಸಲು ಪ್ರೋತ್ಸಾಹ ನೀಡಬೇಕೇ ಹೊರತು ಆಕೆಯ ಬಾಯಿ ಮುಚ್ಚಿಸಲು ಅಲ್ಲ,” ಎಂದು ಮಿತಾ ವಶಿಷ್ಠ ಹೇಳಿದ್ದಾರೆ. ಮಹಿಳೆಯರು ತಮ್ಮ ವಿರುದ್ಧದ ಲೈಂಗಿಕ ಕಿರುಕುಳದ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯೂ ಹೌದು ಎಂಬುದು ಅವರು ಶ್ಲಾಘಿಸಿದ್ದಾರೆ.

ಸೀಮಾ ಪಾಹ್ವಾ

ಮನರಂಜನಾ ಉದ್ಯಮವು ಉತ್ತಮವಾದ ಕೆಲಸದ ಸ್ಥಳವನ್ನು ಹೊಂದಿಲ್ಲ ಎಂಬುದು ದುರಂತ ಎಂದಿರುವ ಸೀಮಾ ಪಾಹ್ವಾ,  “ನಾನು ಬಾಲಕಲಾವಿದೆಯಾಗಿ ಕಿರುತೆರೆಗೆ ಪದಾರ್ಪಣೆ ಮಾಡಿದಾಗಿನಿಂದಲೂ ಸೂಕ್ಷ್ಮವಾಗಿ ನನ್ನ ಸುತ್ತಲಿನ ವಾತಾರವಣವನ್ನು ಗಮನಿಸುತ್ತಲೇ ಬಂದಿದ್ದೇನೆ. ತಾಯಿಯೊಂದಿಗೆ ರಂಗಮಂದಿರಕ್ಕೆ ಹೋಗುತ್ತಿದ್ದ ನನಗೆ, ಅಲ್ಲಿನ ಹಿರಿಯ ವ್ಯಕ್ತಿಯೊಬ್ಬನ ವರ್ತನೆ ಇಷ್ಟವಾಗುತ್ತಿರಲಿಲ್ಲ. ಆತನನ್ನು ನೋಡುತ್ತಲೇ ಬೆಳೆದ ನಾನು, ಆತ ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸುತ್ತಿದ್ದಾಗ ಜಾಣ್ಮೆಯಿಂದ ತಪ್ಪಿಸಿಕೊಳ್ಳುತ್ತಿದ್ದೆ,” ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

“1980ರ ದಶಕದಲ್ಲಿ ದೂರದರ್ಶನಕ್ಕಾಗಿ ಕೆಲಸ ಮಾಡುವ ಸಂದರ್ಭದಲ್ಲಿ, ಕೆಲಸದ ವಾತಾವರಣ ವಿಭಿನ್ನವಾಗಿತ್ತು. ನಾವು ಜೊತೆಯಾಗಿಯೇ ರಿಹರ್ಸಲ್ ಮಾಡಬೇಕಿತ್ತು. ಜೊತೆಯಾಗಿ ಕುಳಿತುಕೊಳ್ಳುವುದು, ಊಟ ಮಾಡುವುದು ಸಾಮಾನ್ಯವಾಗಿತ್ತು. ಆದರೆ, 90ರ ದಶಕದ ನಂತರ ಇದು ಸಂಪೂರ್ಣ ಬದಲಾಯಿತು. ಅದರಲ್ಲೂ, ಕಾರ್ಯನಿರ್ವಾಹಕ ನಿರ್ಮಾಪಕರ ಹುದ್ದೆಯೊಂದು ಸೃಷ್ಟಿಯಾದ ಬಳಿಕ ಎಲ್ಲವೂ ಬದಲಾಯಿತು. ಅದುವರೆಗೂ ಕೇವಲ ನಿರ್ದೇಶಕರು ಮತ್ತು ಬರಹಗಾರರೇ ಅಂತಿವಾಗಿದ್ದರು,”ಎನ್ನುತ್ತಾರೆ ಅವರು.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More