ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌

ಉತ್ತರ ಐರ್ಲೆಂಡಿನಿಂದ ಮ್ಯಾನ್‌ಬುಕರ್‌ಗೆ ನಾಮ ನಿರ್ದೇಶನಗೊಂಡ ಮೊದಲ ಲೇಖಕಿ ಆ್ಯನಾ ಬರ್ನ್ಸ್‌ ೫೦ನೇ ಮ್ಯಾನ್‌ ಬುಕರ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬುಕರ್‌ ಸಂಸ್ಥೆಯೂ ಪ್ರಶಸ್ತಿ ಪುರಸ್ಕೃತ ‘ ಮಿಲ್ಕ್‌ ಮ್ಯಾನ್‌’ ವಿಶಿಷ್ಟವಾದ ಕಾದಂಬರಿ ಎಂದು ಹೊಗಳಿದೆ

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಆ್ಯನಾ ಬರ್ನ್ಸ್‌

"ಭಯವನ್ನು ಹುಟ್ಟಿಸುವ, ಹಾಗೆಯೇ ಸ್ಫೂರ್ತಿಯನ್ನು ತುಂಬುವ ಮಿಲ್ಕ್‌ಮ್ಯಾನ್‌ ಶೈಲಿಯಿಂದಾಗಿ ವಿಶಿಷ್ಟವಾಗಿದೆ. ವರ್ಗ, ಜನಾಂಗ, ಲಿಂಗ ಮತ್ತು ಲೈಂಗಿಕ ಶೋಷಣೆಗಳ ಬಗ್ಗೆ, ಅಧಿಕಾರ, ದಬ್ಬಾಳಿಕೆಯ ಬಗ್ಗೆ ಬೆಕೆಟಿಯನ್‌ ಹಾಸ್ಯಪ್ರಜ್ಞೆಯ ಮೂಲಕ ನಿರೂಪಣೆ ಮಾಡುತ್ತಾ ಹೋಗುತ್ತದೆ. ಹರೆಯದ ಹುಡುಗಿಯ ಕಣ್ಣಲ್ಲಿ ಸಂಕಷ್ಟದಲ್ಲಿದ್ದ ಐರ್ಲೆಂಡಿನ ದಿನಗಳನ್ನು ಕಾದಂಬರಿಕಾರ್ತಿ ಕಥೆಯನ್ನು ಹೇಳುತ್ತಾ ಹೋಗುತ್ತಾರೆ. ಇದೊಂದು ಶ್ರೇಷ್ಠ ಪ್ರಯೋಗವಾಗಿದ್ದು, ಸಾರ್ವಜನಿಕ ಬದುಕಿನಿಂದ ವ್ಯಕ್ತಿಯೊಬ್ಬಣ ಮನಸ್ಸಿನಾಳಗೆ ಹೋಗುವ ಇಲ್ಲಿನ ಸಂದರ್ಭಗಳು ಓದುವ ಅನುಭವವನ್ನು ತೀವ್ರವಾಗಿಸುತ್ತವೆ'

ಇವು ಇಂದು ಮ್ಯಾನ್‌ಬುಕರ್‌ ಪ್ರಶಸ್ತಿಗೆ ಪಾತ್ರರಾದ ಆ್ಯನಾ ಬರ್ನ್ಸ್‌ ಅವರ ಕಾದಂಬರಿ 'ಮಿಲ್ಕ್‌ ಮ್ಯಾನ್‌' ಕುರಿತು ಹೇಳಿದ ಮಾತುಗಳು. ಸೇನಾ ಪಡೆ, ಅಧಿಕಾರ ಬೆಂಬಲಿತ ಹಿಂಸಾಚಾರವನ್ನು ಬೆಚ್ಚಿಬೀಳಿಸುವಂತೆ ಕಾದಂಬರಿ ಕಟ್ಟಿಕೊಡುತ್ತದೆ ಎಂದು ಆಯ್ಕೆ ಸಮಿತಿ ಹೇಳಿದೆ.

ಆಯ್ಕೆ ಸಮಿತಿ ಸದಸ್ಯರಲ್ಲಿ ಒಬ್ಬರಾದ ತತ್ವಶಾಸ್ತ್ರಜ್ಞ ಕ್ವಾಮೆ ಆಂಟೋನಿ, 'ಇಂಥದ್ದೊಂದು ಕೃತಿಯನ್ನು ಹಿಂದೆಂದೂ ಓದಿಲ್ಲ' ಎಂದು ಉದ್ಗರಿಸಿದ್ದಾರೆ. 'ಸಾಂಪ್ರದಾಯಿಕವಾದ ಆಲೋಚನಾ ಕ್ರಮ ಮತ್ತು ಅದನ್ನು ಅಭಿವ್ಯಕ್ತಿಸುವ ಪ್ರಕಾರಕ್ಕೆ ಸವಾಲು ಎಸೆಯುತ್ತದೆ. ಇಡೀ ಕಥೆ, ಕ್ರೌರ್ಯ, ಲೈಂಗಿಕ ದೌರ್ಜನ್ಯ ಮತ್ತು ಪ್ರತಿರೋಧವನ್ನು ಹಾಸ್ಯದ ಮೂಲಕ ಬಿಚ್ಚಿಕೊಳ್ಳುತ್ತದೆ'' ಎಂದು ಆಂಟೋನಿ 'ಮಿಲ್ಕ್‌ಮ್ಯಾನ್‌' ಕಾದಂಬರಿಯ ಬಗ್ಗೆ ಮೆಚ್ಚಿ ಮಾತನಾಡಿದ್ದಾರೆ.

ಐವತ್ತಾರು ವರ್ಷದ ಲೇಖಕಿ ಆ್ಯನಾ ಬರ್ನ್ಸ್‌ ಬೆಲ್‌ಫಾಸ್ಟ್‌ನಲ್ಲಿ ಜನಿಸಿದರು. ೧೯೮೭ರಲ್ಲಿ ಲಂಡನ್‌ಗೆ ಸ್ಥಳಾಂತರಗೊಂಡ ಬರವಣಿಗೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡರು. ೨೦೦೧ರಲ್ಲಿ 'ನೋ ಬೋನ್ಸ್‌' ಹೆಸರಿನ ಮೊದಲ ಕಾದಂಬರಿಯನ್ನು ಪ್ರಕಟಿಸಿದರು. ನಂತರದಲ್ಲಿ 'ಲಿಟಲ್‌ ಕನ್‌ಸ್ಟ್ರಕ್ಷನ್ಸ್‌', 'ಮಿಲ್ಕ್‌ಮ್ಯಾನ್‌' ಕಾದಂಬರಿಯನ್ನು ಪ್ರಕಟಿಸಿದ್ದು, 'ಮೋಸ್ಟ್ಲಿ ಹೀರೋ' ಎಂಬ ನೀಳ್ಗತೆಯನ್ನು ಹೊರತಂದಿದ್ದಾರೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
#MeToo | ಟಿವಿ ವೃತ್ತಿಪರರ ಮಾತಿನಲ್ಲಿ ಧಾರಾವಾಹಿ ಲೋಕದತ್ತ ಒಂದು ನೋಟ
Editor’s Pick More