ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ

ಶಬರಿಮಲೆಯಿಂದ 3 ಗಂಟೆ ಪ್ರಯಾಣದ ದೂರದಲ್ಲಿ ಮೊಲೆಚಿಪರಂಬು ಎಂಬ ಗ್ರಾಮವಿದೆ. ಮೊಲೆಚಿಪರಂಬು ಅಂದರೆ ‘ಮೊಲೆಗಳ ಭೂಮಿ’ ಎಂದರ್ಥ. 19ನೇ ಶತಮಾನದಲ್ಲಿ ಮೊಲೆ ತೆರಿಗೆ ಕಾಯ್ದೆ ಜಾರಿಯಲ್ಲಿತ್ತು. ಬ್ರಾಹ್ಮಣರಲ್ಲದ ಮಹಿಳೆಯರು ಮೊಲೆ ತೋರಿಸಿ ತೆರಿಗೆ ಕಟ್ಟಬೇಕಾಗಿತ್ತು. ಇದನ್ನು ವಿರೋಧಿಸಿ ಈಳವ ಮಹಿಳೆ ನಂಗೆಲಿ ತನ್ನ ಮೊಲೆ ಕತ್ತರಿಸಿ ತೆರಿಗೆಯಾಗಿ ಕೊಟ್ಟಳು. ಮಹಿಳೆಯರ ಸ್ವಾಭಿಮಾನಕ್ಕಾಗಿ ಪ್ರಾಣಾರ್ಪಣೆ ಮಾಡಿದ ಅವಳ ನೆನಪಿಗಾಗಿ ಆ ಊರಿಗೆ ಮೊಲೆಚಿಪರಂಬು ಎಂಬ ಹೆಸರಿಡಲಾಗಿದೆ. ಶಬರಿಮಲೆ ಸುದ್ದಿಯಲ್ಲಿ ಇರುವ ಹಿನ್ನೆಲೆಯಲ್ಲಿ ಸಂಧ್ಯಾ ದೇವಿ ಅವರ ಈ ಹೊಸ ಕವಿತೆ ನಿಮ್ಮ ಓದಿಗಾಗಿ

ಅಲ್ಲಿಂದ ಸ್ವಲ್ಪ ಮುಂದೆ

ಮೊಲೆಗಳ ಭೂಮಿ ಇದೆ.

ಎಲ್ಲೆಲ್ಲೂ ಸೊಕ್ಕಿ ನಿಂತ ಪರ್ವತಗಳು, ಬೆಟ್ಟಗುಡ್ಡಗಳು ಮಲೆಗಳು

ಅವುಗಳೆಡೆಯಿಂದ ಹುಟ್ಟುವ ನದಿಗಳು

ಅಲ್ಲೆಲ್ಲ ಹರಿವ ನೀರು ನೀರಲ್ಲ.

ಬ್ರಾಹ್ಮಣರಲ್ಲದ ಹೆಂಗಸರು ಮೊಲೆ ತೋರಿಸಿ

ಗಾತ್ರಕ್ಕೆ ತಕ್ಕ ತೆರಿಗೆ

ಕಟ್ಟಬೇಕಾಗಿದ್ದ ಕಾಲ.

ಈಳವ ಮಹಿಳೆ ನಂಗೆಲಿ

ಮೊಲೆಗಳ ತೋರಿಸಿದಳು ಅವರಿಗೆ

ತೆರಿಗೆ ಕೊಟ್ಟಳು

ಕತ್ತರಿಸಿ ಮೊಲೆಗಳ

ಮೊಲೆಗಳಿಂದ ಚಿಮ್ಮಿದ್ದು ರಕ್ತವಲ್ಲ.

ನಂಗೆಲಿಯ ಮಕ್ಕಳ ಮಕ್ಕಳ ಮಕ್ಕಳು

ಮೊಮ್ಮಕ್ಕಳು ಮರಿಮಕ್ಕಳಿಗೆ ನಮಗೆ

ನಾಚಿಕೆಯಾಗಬೇಕು.

ಅಲ್ಲಿ ಪವಿತ್ರ ದೇವರ ನಾಡಿನಲ್ಲಿ

ಒಳಗೆ ಹೋಗದಂತೆ ಹೊರಗೆ

ಸಾವಿರಾರು ಮೊಲೆಗಳು

ಅಡ್ಡ ಮಲಗಿದ್ದಾವೆ.

ದೇವರು ಅವುಗಳನ್ನು ನೋಡಬಾರದಂತೆ!

ದೇವರೇ... ಮೊಲೆಗಳನ್ನೇನು ಎಲ್ಲವನ್ನೂ ಎಲ್ಲೆಲ್ಲಿಯೂ ನೋಡುವವನು ನೀನು!

ನಂಗೆಲಿಯ ಸ್ವಾಭಿಮಾನಕ್ಕೆ ತಲೆಬಾಗಿ

ಯಾರು ಯಾರೊಬ್ಬ ಹೆಂಗಸರೂ

ಹೋಗಬಾರದು ನಾವು

ಕಳಿಸಬಾರದು ನಮ್ಮ ಮಕ್ಕಳನು

ಮುಟ್ಟಬಾರದು ಹತ್ತಬಾರದು ಗುಡಿಯ

ಹದಿನೆಂಟು ಮೆಟ್ಟಿಲನು.

ಬೇಕಾಗಿಲ್ಲ ನಮಗೆ ನಿಮ್ಮ ದೇವರು

ನೀವೇ ಇಟ್ಟುಕೊಳ್ಳಿ ಬರಿಯ ಕಲ್ಲು

ನಮ್ಮ ಗರ್ಭದೊಳಗೆ ಜೀವಂತ ಶಿಶು

ಹುಟ್ಟಿದರೆ ಹುಟ್ಟಬೇಕು ದೇವರು

ಮಗುವಾಗಿ ನಮ್ಮ

ಮೊಲೆ ಉಣ್ಣಲು.

ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
#MeToo | ಟಿವಿ ವೃತ್ತಿಪರರ ಮಾತಿನಲ್ಲಿ ಧಾರಾವಾಹಿ ಲೋಕದತ್ತ ಒಂದು ನೋಟ
Editor’s Pick More