ಖಂಡಾಂತರ ಕ್ಷಿಪಣಿ ಪರೀಕ್ಷಿಸಿ ಅಮೆರಿಕದತ್ತ ಸವಾಲು ಎಸೆದ ಉ.ಕೊರಿಯಾ

ಖಂಡಾಂತರ ಕ್ಷಿಪಣಿಯನ್ನು ಪ್ರಯೋಗಾರ್ಥ ಪರೀಕ್ಷಿಸಿರುವುದಾಗಿ ಉತ್ತರ ಕೊರಿಯಾ ಘೋಷಿಸಿದ ನಂತರ ಮಿತ್ರದೇಶ ಚೀನಾ ಇಕ್ಕಟಿಗೆ ಸಿಲುಕಿದೆ. ಆದರೆ ಉ.ಕೊರಿಯಾ ಅಧ್ಯಕ್ಷ ಕಿಮ್ ಅವರ ಮುಂದಿನ ನಡೆ ಯಾವುದೆಂಬುದರ ಮೇಲೆ ವಿಶ್ವನಾಯಕರ ಮುಂದಿನ ತೀರ್ಮಾನಗಳು ಹೊರಬೀಳಲಿವೆ

ಅಣ್ವಸ್ತ್ರಗಳನ್ನು ತಯಾರಿಸಿರುವುದಾಗಿ ಈಗಾಗಲೇ ಪ್ರಕಟಿಸಿರುವ ಉತ್ತರ ಕೊರಿಯಾ ಇದೀಗ ಖಂಡಾಂತರ ಕ್ಷಿಪಣಿ ಹ್ವಾಸಾಂಗ್ ೧೫ನ್ನು ಬುಧವಾರ ಪ್ರಯೋಗಾರ್ಥ ಪರೀಕ್ಷಿಸಿರುವುದಾಗಿ ಘೋಷಿಸಿದೆ. “ಈ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದ್ದು, ಅಮೆರಿಕವನ್ನು ನಾಶಮಾಡಬಹುದಾಗಿದೆ,” ಎಂದು ಉತ್ತರ ಕೊರಿಯಾ ಹೇಳಿಕೊಂಡಿರುವುದರಿಂದ ಸಹಜವಾಗಿಯೇ ಎಲ್ಲ ಕಡೆ ಭೀತಿಯ ವಾತಾವರಣ ನಿರ್ಮಾಣವಾಗಿದೆ.

ಅಣ್ವಸ್ತ್ರ ಸಿಡಿತಲೆ ಹೊತ್ತ ಖಂಡಾಂತರ ಕ್ಷಿಪಣಿಗಳು ಅಮೆರಿಕವನ್ನೇ ನಾಶ ಮಾಡಬಹುದಾದಷ್ಟು ಸಾಮರ್ಥ್ಯ ಪಡೆದಿದ್ದರೆ, ಇನ್ನು ಹತ್ತಿರದ ದ.ಕೊರಿಯಾ ಮತ್ತು ಜಪಾನ್ ದೇಶಗಳ ಗತಿಯನ್ನು ಯಾರು ಬೇಕಾದರೂ ಊಹಿಸಿಕೊಳ್ಳಬಹುದು. ಉ.ಕೊರಿಯಾ ಖಂಡಾಂತರ ಕ್ಷಿಪಣಿಗಳನ್ನು ತಯಾರಿಸಿರಬಹುದಾಗಿದ್ದರೂ ಅಣ್ವಸ್ತ್ರಗಳು ಇನ್ನೂ ಬಳಸುವ ಹಂತದಲ್ಲಿ ಇರಲಾರದೆಂಬುದು ತಜ್ಞರ ಊಹೆ. ಆದರೆ ಆ ವಿಚಾರ ಖಚಿತವಾಗಿ ಗೊತ್ತಿಲ್ಲದ ಕಾರಣ, ಅಪಾಯವನ್ನು ಎದುರಿಸಲು ಅಮೆರಿಕ ಸಿದ್ಧವಾಗಿರುವುದು ಉತ್ತಮ ಎಂಬ ಸಲಹೆಯೂ ಬಂದಿದೆ. ಅಮೆರಿಕ ಕೂಡ ಎಂಥದ್ದೇ ದಾಳಿಗೆ ತಾನು ಸಿದ್ಧವಿರುವುದಾಗಿ ಹೇಳಿದೆ.

ಇದನ್ನೂ ಓದಿ : ಕಿಮ್ ಮಾತನಾಡಲು ಆರಂಭಿಸಿದರೆ ನಡುಗುತ್ತಾರೆ ವಿಶ್ವನಾಯಕರು, ಏಕೆ ಗೊತ್ತಾ?

ಇದೇನೇ ಇದ್ದರೂ, ಭದ್ರತಾ ಮಂಡಳಿ ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತುರ್ತು ಸಭೆ ಕರೆದಿದೆ. ಈಗಾಗಲೇ ಹತ್ತಾರು ರೀತಿಯ ನಿರ್ಬಂಧಗಳು ಉ.ಕೊರಿಯಾದ ಮೇಲಿವೆ. ಇನ್ನಷ್ಟು ನಿರ್ಬಂಧ ಹೇರುವುದರಿಂದ ಅಲ್ಲಿನ ಜನರು ಸಂಕಷ್ಟಕ್ಕೆ ಸಿಕ್ಕಿಕೊಳ್ಳಲಿದ್ದಾರೆ ಎನ್ನುವ ಒಂದೇ ಕಾರಣಕ್ಕೆ ಭದ್ರತಾ ಮಂಡಳಿ ಇದುವರೆಗೆ ಸುಮ್ಮನಿತ್ತು. ಆದರೆ ಉ.ಕೊರಿಯಾ ಸತತವಾಗಿ ಭದ್ರತಾ ಮಂಡಳಿಯ ನಿರ್ಧಾರಗಳನ್ನು ಉಲ್ಲಂಘಿಸುತ್ತಿರುವುದರಿಂದ ಈಗ ಅದನ್ನು ಶಿಕ್ಷಿಸದೆ ಬೇರೆ ದಾರಿ ಇಲ್ಲ ಎನ್ನುವಂಥ ಸ್ಥಿತಿ ಬಂದಿದೆ.

ಉ.ಕೊರಿಯಾ ಕಳೆದ ಕೆಲವು ತಿಂಗಳಿಂದಲೂ ವಿವಿಧ ರೀತಿಯ ಕ್ಷಿಪಣಿಗಳನ್ನು ಪ್ರಯೋಗಿಸುತ್ತಿರುವ ಹಿನ್ನೆಲೆಯಲ್ಲಿ ಅಂಥ ದಾಳಿಗಳನ್ನು ನಿಷ್ಫಲಗೊಳಿಸಬಲ್ಲ ಅಗತ್ಯ ತಂತ್ರಜ್ಞಾನ ತಮ್ಮಲ್ಲಿದೆ.
ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಷಕ್ಷ

ಉ.ಕೊರಿಯಾದ ಈ ನಡೆಯಿಂದ ಪ್ರಪಂಚದ ಎಲ್ಲ ಕಡೆ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಉ.ಕೊರಿಯಾ ಮಿತ್ರದೇಶವಾಗಿರುವ ಚೀನಾ ಈ ಸಂದರ್ಭದಲ್ಲಿ ಇಕ್ಕಟ್ಟಿಗೆ ಸಿಲುಕಿದೆ. ಎರಡೂ ಕಡೆಯವರು ತಾಳ್ಮೆ ವಹಿಸಬೇಕೆಂದು ಅದು ಈಗ ಕರೆ ಕೊಟ್ಟಿದೆ. ರಷ್ಯಾದ ಅಭಿಪ್ರಾಯವೂ ಇದೇ ಆಗಿದೆ. ಆದರೆ ಉ.ಕೊರಿಯಾದ ಕಿಮ್ ಜಾಂಗ್ ಉನ್ ಅವರ ಮುಂದಿನ ನಡೆ ಯಾವುದು ಎನ್ನುವುದರ ಮೇಲೆ ವಿಶ್ವನಾಯಕರ ಮುಂದಿನ ತೀರ್ಮಾನಗಳು ಹೊರಬೀಳಲಿವೆ.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More