ಕುಲಭೂಷಣ್ ಜಾದವ್ ಗಲ್ಲು ಪ್ರಕರಣ: ಮತ್ತೊಮ್ಮೆ ನಾಟಕ ಆಡಿದ ಪಾಕಿಸ್ತಾನ

ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆ ಎದುರಿಸುತ್ತಿರುವ ಭಾರತದ ನೌಕಾಪಡೆಯ ಅಧಿಕಾರಿ ಕುಲಭೂಷಣ್ ಅವರನ್ನು ಭೇಟಿ ಮಾಡಲು ಅವರ ತಾಯಿ ಮತ್ತು ಪತ್ನಿಗೆ ಅವಕಾಶ ನೀಡಲಾಗಿತ್ತು. ಆದರೆ, ಪಾಕ್ ವಿದೇಶಾಂಗ ವಿಭಾಗ ಕಚೇರಿಯ ಬಿಗಿಭದ್ರತೆಯಲ್ಲಿ ಏರ್ಪಾಡಾಗಿದ್ದ ಈ ಭೇಟಿ ಹೇಗಿತ್ತು ಗೊತ್ತೇ? 

ಪಾಕಿಸ್ತಾನ ಇದೀಗ ಹೊಸದೊಂದು ನಾಟಕವಾಡಿದೆ. ಅಂತಾರಾಷ್ಟ್ರೀಯ ಸಮುದಾಯ ಮತ್ತು ಅಂತಾರಾಷ್ಟ್ರೀಯ ಕೋರ್ಟ್ ಮೆಚ್ಚುಗೆ ಗಳಿಸುವ ಹಠಕ್ಕೆ ಬಿದ್ದ ಪಾಕ್, ಗಲ್ಲುಶಿಕ್ಷೆಗೆ ಒಳಗಾಗಿ ಅಲ್ಲಿನ ಜೈಲಿನಲ್ಲಿರುವ ಭಾರತದ ನೌಕಾಪಡೆಯ ಅಧಿಕಾರಿ ಕುಲಭೂಷಣ್ ಜಾದವ್ ಅವರು ಅವರ ತಾಯಿ ಮತ್ತು ಪತ್ನಿಯನ್ನು ಭೇಟಿ ಮಾಡಲು ಪಾಕಿಸ್ತಾನ ಅವಕಾಶ ಕಲ್ಪಿಸಿಕೊಟ್ಟಿತ್ತು. ಈ ಪ್ರಹಸನ ನಡೆದದ್ದು ಸೋಮವಾರ ಇಸ್ಲಾಮಾಬಾದ್‌ನಲ್ಲಿ.

ಅವರು ಪರಸ್ಪರ ಭೇಟಿ ಮಾಡಲು ವ್ಯವಸ್ಥೆ ಮಾಡಿದ್ದ ಸ್ಥಳ ಪಾಕಿಸ್ತಾನದ ವಿದೇಶಾಂಗ ವಿಭಾಗದ ಕಚೇರಿ. ದುಬೈ ಮೂಲಕ ಇಸ್ಲಾಮಾಬಾದ್ ತಲುಪಿದ ಕುಲಭೂಷಣ್ ತಾಯಿ ಮತ್ತು ಪತ್ನಿಯನ್ನು ಪೊಲೀಸ್ ಭದ್ರತೆಯಲ್ಲಿ ವಿದೇಶಾಂಗ ವಿಭಾಗದ ಕಚೇರಿಗೆ ಕರೆದೊಯ್ಯಲಾಯಿತು. ಅವರ ಜೊತೆ ಅಲ್ಲಿಗೆ ತೆರಳಿದವರು ಪಾಕಿಸ್ತಾನದಲ್ಲಿ ಭಾರತದ ಉಪಹೈಕಮಿಷನರ್. ವಿಚಿತ್ರ ಎಂದರೆ, ಭೇಟಿಗೆ ನಿಗದಿಯಾಗಿದ್ದ ಸ್ಥಳದಲ್ಲಿ ಒಂದು ಗಾಜಿನ ಗೋಡೆ ಅಥವಾ ಪರದೆ ನಿರ್ಮಿಸಲಾಗಿತ್ತು. ಆ ಗೋಡೆಯ ಒಂದು ಕಡೆ ಜಾದವ್ ಮತ್ತೊಂದು ಕಡೆ ಅವರ ತಾಯಿ ಆವಂತಿ ಹಾಗೂ ಪತ್ನಿ ಚೇತಾಂಕುಲ್. ಯಾವುದೇ ರೀತಿಯಲ್ಲಿ ಫೋನಿನಲ್ಲಿ ಮಾತನಾಡಲು ಮತ್ತು ಪರಸ್ಪರ ಅಪ್ಪಿಕೊಂಡು ಅಥವಾ ಕೈಕುಲುಕಿ ಪ್ರೀತಿಯನ್ನು ತೋರಿಸಲೂ ಅವಕಾಶ ಇರಲಿಲ್ಲ. ಅವರ ಮಾತೃಭಾಷೆಯಾದ ಮರಾಠಿಯಲ್ಲಿ ಮಾತನಾಡಲು ಸಾಧ್ಯವಾಗಲಿಲ್ಲ. ಏಕೆಂದರೆ, ಇಂಗ್ಲಿಷ್‌ನಲ್ಲೇ ಸಂಭಾಷಣೆ ನಡೆಸಬೇಕೆಂದು ಮೊದಲೇ ಸೂಚಿಸಲಾಗಿತ್ತು. ಮಾನವೀಯತೆಯ ಅಥವಾ ಭಾವಪರವಾದ ಕಿಂಚಿತ್ತೂ ಸ್ಪರ್ಶ ಇಲ್ಲದಂತೆ ಈ ಭೇಟಿಯನ್ನು ವ್ಯವಸ್ಥೆ ಮಾಡಿದ್ದು ಆಘಾತಕಾರಿಯಾಗಿತ್ತು. ಭದ್ರತೆಯ ದೃಷ್ಟಿಯಿಂದ ಇಂಥ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು ಎಂದು ಪಾಕಿಸ್ತಾನದ ವಿದೇಶಾಂಗ ಖಾತೆಯ ವಕ್ತಾರರು ನೀಡಿದ ವಿವರಣೆ ಹಾಸ್ಯಾಸ್ಪದವಾಗಿತ್ತು. ಮಗನನ್ನು ನೋಡಲು, ಹಾಗೆಯೇ ಪತಿಯನ್ನು ನೋಡಲು ಹೋದವರು ಹೇಗೆ ಭದ್ರತೆಯ ಸಮಸ್ಯೆಗೆ ಕಾರಣವಾದರು ಎನ್ನುವುದು ಅರ್ಥವಾಗದ ಕ್ರಮ.

ಸುಮಾರು ನಲ್ವತ್ತು ನಿಮಿಷಗಳ ಕಾಲ ಮಾತುಕತೆ ನಡೆಯಿತಾದರೂ ಅವರು ಏನು ಮಾತನಾಡಿದರು ಅಥವಾ ಯಾವ ವಿಷಯ ಮಾತನಾಡಲು ಅವಕಾಶ ನೀಡಲಾಗಿತ್ತು ಎಂಬ ಬಗ್ಗೆ ವಿವರಗಳು ಲಭ್ಯವಿಲ್ಲ. ಆದರೆ ಭೇಟಿ ಮುಗಿಯುತ್ತಿದ್ದಂತೆಯೇ ಪಾಕ್ ವಿದೇಶಾಂಗ ಖಾತೆ ವಕ್ತಾರರು ಪತ್ರಿಕಾಗೊಷ್ಠಿ ನಡೆಸಿ, ತಮ್ಮ ದೇಶದ ಈ ಕ್ರಮವನ್ನು ಶ್ಲಾಘಿಸಿದರು. ಪತ್ರಿಕಾಗೋಷ್ಠಿಗೆ ಮೊದಲು ಕುಲಭೂಷಣ್ ಯಾದವ್ ಮಾತನಾಡಿರುವ (ಮೊದಲೇ ಚಿತ್ರಿಸಿಕೊಂಡ) ಒಂದು ಸಣ್ಣ ವಿಡಿಯೋವನ್ನು ಅಲ್ಲಿಯೇ ಇದ್ದ ಪರದೆಯ ಮೇಲೆ ಪ್ರದರ್ಶಿಸಲಾಯಿತು. "ನನ್ನ ತಾಯಿ ಮತ್ತು ಪತ್ನಿಯನ್ನು ಭೇಟಿ ಮಾಡಬೇಕೆಂಬ ನನ್ನ ಮನವಿಯನ್ನ ಪೂರೈಸಿದ ಪಾಕಿಸ್ತಾನದ ವಿದೇಶಾಂಗ ಖಾತೆಗೆ ನಾನು ಕೃತಜ್ಙನಾಗಿದ್ದೇನೆ. ನಾನು ಇರಾನ್‌ನಲ್ಲಿದ್ದು ಭಾರತದ ರಹಸ್ಯ ದಳ 'ರಾ' ಪ್ರತಿನಿಧಿಯಾಗಿ ಪಾಕ್‌ಗೆ ಬಂದು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದೆ," ಮುಂತಾಗಿ ಅವರ ಮಾತು ಆ ವಿಡಿಯೋದಲ್ಲಿ ಮುಂದುವರಿಯುತ್ತದೆ. ಇದೊಂದು ರೀತಿಯಲ್ಲಿ ತಪ್ಪೊಪ್ಪಿಗೆ ಹೇಳಿಕೆಯಾಗಿತ್ತು. ಈ ಮಾತು ಅವರೇ ಸ್ವಇಚ್ಛೆಯಿಂದ ಹೇಳಿದ್ದೆಂದು ಯಾರಿಗೂ ಅನ್ನಿಸುತ್ತಿರಲಿಲ್ಲ. ಪಾಕಿಸ್ತಾನ ಸರಕಾರ ಬರೆದುಕೊಟ್ಟಂತೆ ಹೇಳಿದಂತೆ ಕಾಣುತ್ತಿತ್ತು.

ಪಾಕಿಸ್ತಾನದ ಮಿಲಿಟರಿ ಕುಲಭೂಷಣ್ ಜಾದವ್ ಅವರಿಗೆ ವಿಧಿಸಿದ್ದ ಗಲ್ಲುಶಿಕ್ಷೆಗೆ ಕೆಲವು ತಿಂಗಳ ಹಿಂದೆ ಅಂತಾರಾಷ್ಟ್ರೀಯ ಕೋರ್ಟ್ ನೀಡಿದ್ದ ತಡೆಗೂ ಈ ಭೇಟಿ ವ್ಯವಸ್ಥೆ ಮಾಡಿದ್ದಕ್ಕೂ ಸಂಬಂಧವಿಲ್ಲ ಎಂದು ಪಾಕ್ ವಿದೇಶಾಂಗ ಖಾತೆ ವಕ್ತಾರರು ಹೇಳಿಕೊಂಡರು. ಇದೊಂದು ಸಕಾರಾತ್ಮಕ ಹೆಜ್ಜೆ, ಇಸ್ಲಾಂ ಧರ್ಮದ ಅನ್ವಯ ತೋರಿಸಿದ ದಯೆ ಎಂದು ಅವರು ಹೇಳಿದರು. ಈ ಭೇಟಿ ಕುರಿತ ಸಿದ್ಧತೆಗಳ ಬಗ್ಗೆ ಅಂದರೆ, ಗಾಜಿನ ಗೋಡೆ ಇರುವ ಬಗ್ಗೆ ಮತ್ತು ಭಾರತದ ವಿದೇಶಾಂಗ ಖಾತೆ ಹೈಕಮಿಷನರ್ ಪಾತ್ರದ ಬಗ್ಗೆ ಮೊದಲೇ ಸರಕಾರ ವಿವರಿಸಿತ್ತು. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ. ಭಾರತದ ಡೆಪ್ಯುಟಿ ಕಮಿಷನರ್ ಅವರು ಕುಲದೀಪ್ ಅವರನ್ನು ಭೇಟಿ ಮಾಡಲಾಗಲೀ ಅಥವಾ ಅವರ ಕುಟುಂಬದವರು ಮಾತನಾಡುವ ಸಂದರ್ಭದಲ್ಲಿ ಅಲ್ಲಿ ಅವರು ಹಾಜರಿರಲಾಗಲೀ ಅವಕಾಶ ನೀಡಿರಲಿಲ್ಲ ಎಂದೂ ಅವರು ಸ್ಪಷ್ಟನೆ ನೀಡಿದರು. ಈ ವಿಚಾರದಲ್ಲಿ ಮುಂದೇನು ಎಂಬುದನ್ನು ಮುಂದಿನ ಬೆಳವಣಿಗೆಗಳ ಸಂದರ್ಭದಲ್ಲಿ ಮಾತ್ರ ಹೇಳಲು ಸಾಧ್ಯ ಎಂದ ಪಾಕ್ ವಿದೇಶಾಂಗ ಖಾತೆ ವಕ್ತಾರರು, ಕುಲದೀಪ್ ಸಿಂಗ್ ಅವರ ಮೇಲಿರುವ ಆರೋಪಗಳನ್ನು ಪಟ್ಟಿ ಮಾಡಿದರು. ಕುಲಭೂಷಣ ಜಾದವ್ ಅವರನ್ನು ಭೇಟಿ ಮಾಡಲು ಭಾರತ ಹೈಕಮಿಷನರ್‌ಗೆ ಅವಕಾಶ ನೀಡುವಂತೆ ಭಾರತ 25 ಬಾರಿ ಪಾಕಿಸ್ತಾನಕ್ಕೆ ಮನವಿ ಮಾಡಿಕೊಂಡಿತ್ತು. ಆದರೆ, ಆ ಎಲ್ಲ ಮನವಿಗಳನ್ನು ಪಾಕ್ ತಿರಸ್ಕರಿಸಿತ್ತು. ಇದೀಗ ಕುಲಭೂಷಣ್ ಕುಟುಂಬದವರ ಭೇಟಿಗೆ ಅವಕಾಶ ಕಲ್ಪಿಸಿದ ನಾಟಕವಾಡಿ ಅಂತಾರಾಷ್ಟೀಯ ಕೋರ್ಟನ್ನು ಮೆಚ್ಚಿಸಲು ಪಾಕಿಸ್ತಾನ ಹೊರಟಂದಿದೆ. ಅಂತಾರಾಷ್ಟ್ರೀಯ ಸಮುದಾಯಕ್ಕೆ ಈ ನಾಟಕ ಅರ್ಥವಾಗದೆ ಇರದು.

ಇದನ್ನೂ ಓದಿ : ನೊಬೆಲ್‌ ಶಾಂತಿ ಪುರಸ್ಕೃತೆ ಸೂಕಿಗೆ ಕಳಂಕ ತರುವುದೇ ರೋಹಿಂಗ್ಯಾ ವಿವಾದ?

ಭಾರತದ ನೌಕಾಪಡೆಯ ಅಧಿಕಾರಿ ಕುಲಭೂಷಣ್ ಯಾದವ್ ಅವರನ್ನು ಗೂಢಚರ್ಯೆ ಆರೋಪದ ಮೇಲೆ ಪಾಕಿಸ್ತಾನದ ಮಿಲಿಟರಿ 2016ರ ಮಾರ್ಚ್‌ನಲ್ಲಿ ಬಂಧಿಸಿ ಜೈಲಿಗೆ ಕಳುಹಿಸಿತ್ತು. ಅವರ ಮೇಲೆ ಭಯೋತ್ಪಾದನೆ ಆರೋಪವಲ್ಲದೆ ಹಲವು ಜನರ ಸಾವಿಗೆ ಕಾರಣವಾದ ವಿಧ್ವಂಸಕ ಕೃತ್ಯಗಳನ್ನೂ ಪಟ್ಟಿ ಮಾಡಿತ್ತು. ಪಾಕ್ ಮಿಲಿಟರಿ ಕೋರ್ಟ್ ಈ ವರ್ಷದ ಏಪ್ರಿಲ್‌ನಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು. ಕುಲಭೂಷಣ್ ಅವರು ನಿವೃತ್ತರಾದ ನಂತರ ಇರಾನ್‌ನಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದು ಅವರನ್ನು ಅಲ್ಲಿಂದ ಪಾಕ್ ಗೂಢಚರ್ಯೆ ಸಂಸ್ಥೆ ಐಎಸ್ಐ ಅಪಹರಿಸಿದೆ ಎಂಬುದು ಭಾರತದ ವಾದ. ವಾಸ್ತವಾಂಶ ತಿಳಿಯುವುದಕ್ಕಾಗಿ ಅವರನ್ನು ಭೇಟಿ ಮಾಡಲು ಪಾಕಿಸ್ತಾನದಲ್ಲಿರುವ ಹೈಕಮಿಷನರ್‌ಗೆ ಅವಕಾಶ ನೀಡಬೇಕೆಂಬ ಭಾರತದ ಮನವಿಯನ್ನು ಸತತವಾಗಿ ತಿರಸ್ಕರಿಸುತ್ತ ಬರಲಾಯಿತು. ಹೀಗಾಗಿ ಭಾರತ ಈ ವಿಷಯವಾಗಿ ಅಂತಾರಾಷ್ಟ್ರೀಯ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿತು. ಕುಲಭೂಷಣ್ ಜಾದವ್ ಅವರನ್ನು ಭೇಟಿ ಮಾಡಲು ಭಾರತದ ಹೈಕಮಿಷನರ್ ಅವರಿಗಾಗಲೀ ಅವರ ಕುಟುಂಬದ ಸದಸ್ಯರಿಗಾಗಲೀ ಅವಕಾಶ ಕೊಡದ ಬಗ್ಗೆ ಕೋರ್ಟ್ ಕೂಡ ತೀವ್ರ ಆಕ್ಷೇಪ ವ್ಯಕ್ತ ಮಾಡಿತ್ತು. ಎರಡೂ ದೇಶಗಳ ಪ್ರಾಥಮಿಕ ವಾದವನ್ನು ಕೇಳಿದ ಅಂತಾರಾಷ್ಟ್ರೀಯ ಕೋರ್ಟ್ ನ್ಯಾಯಾಧೀಶರು, ಕುಲಭೂಷಣ್ ಜಾದವ್‌ಗೆ ವಿಧಿಸಿದ್ದ ಗಲ್ಲುಶಿಕ್ಷೆಗೆ ಮೇ ತಿಂಗಳಲ್ಲಿ ತಡೆ ನೀಡಿದ್ದರು. ಇದೀಗ, ತೂಗುವ ಕತ್ತಿಯಿಂದ ತಪ್ಪಿಸಿಕೊಳ್ಳುವ ಯತ್ನವಾಗಿ ಪಾಕಿಸ್ತಾನ ಮತ್ತೊಮ್ಮೆ ಈ ನಾಟಕ ಮಾಡಿದೆ. ಇಂಥ ನಾಟಕದಿಂದ ಅಂತಾರಾಷ್ಟ್ರೀಯ ಸಮುದಾಯವನ್ನು ಮೆಚ್ಚಿಸಬಹುದು ಎಂದು ಪಾಕಿಸ್ತಾನ ತಿಳಿದುಕೊಂಡಿದ್ದರೆ ಅದಕ್ಕಿಂತ ದೊಡ್ಡ ಮೂರ್ಖತನ ಬೇರೊಂದಿಲ್ಲ.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More