ಪಾಕ್ ನೆರವಿಗೆ ಕತ್ತರಿ ಹಾಕುವ ಟ್ರಂಪ್ ಬೆದರಿಕೆ, ಭಾರತಕ್ಕೆ ಹರ್ಷಪಡುವಂಥದ್ದೇನೂ ಅಲ್ಲ

ಪಾಕಿಸ್ತಾನಕ್ಕೆ ನೀಡುತ್ತಿದ್ದ ನೆರವಿಗೆ ಕತ್ತರಿ ಹಾಕುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಭಾರತದ ಆಡಳಿತಗಾರರಲ್ಲಿ ಸಂತೋಷ ತರಿಸಿದೆ. ಭಾರತಕ್ಕೆ ಸಂತೋಷ ಉಂಟುಮಾಡಲು ಟ್ರಂಪ್ ಆ ನಿರ್ಧಾರ ತೆಗೆದುಕೊಂಡಿಲ್ಲ. ತಮ್ಮದೇ ಕಾರಣಗಳಿಗಾಗಿ ಈ ರೀತಿ ಬೆದರಿಕೆ ಒಡ್ಡಿದ್ದಾರೆ

ಹೊಸ ವರ್ಷದ ಮೊದಲ ದಿನವೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನಕ್ಕೆ ಆಘಾತ ಉಂಟುಮಾಡಿದ್ದಾರೆ. ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸದ ಹೊರತು ನೆರವಿನ ಹಣ ಕೊಡುವುದಿಲ್ಲ ಎಂದು ಅವರು ಘೋಷಿಸಿದ್ದಾರೆ. "ಕಳೆದ ಹದಿನೈದು ವರ್ಷಗಳಿಂದ ಅಮೆರಿಕ ಮೂರ್ಖತನದಿಂದ ೩೩೦೦ ಕೋಟಿ ಡಾಲರ್‌ಗಳಷ್ಟು ನೆರವನ್ನು ಪಾಕಿಸ್ತಾನಕ್ಕೆ ಕೊಟ್ಟಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಹೇಳಿದ್ದೆಲ್ಲಾ ಸುಳ್ಳು, ಮಾಡಿದ್ದೆಲ್ಲಾ ಮೋಸ. ವಿಚಿತ್ರ ಎಂದರೆ ನೆರವನ್ನು ಬಳಸಿಕೊಂಡು ಆಫ್ಘಾನಿಸ್ತಾನದಲ್ಲಿ ನಮ್ಮ ಸೇನೆ ಬೆನ್ನುಹತ್ತಿರುವ ಉಗ್ರವಾದಿಗಳಿಗೆ ಅದು ಸುರಕ್ಷಿತ ಪ್ರದೇಶವನ್ನು ಒದಗಿಸುತ್ತಿದೆ.

“ನಮ್ಮ ನಾಯಕರನ್ನು ಪಾಕಿಸ್ತಾನ ಮೂರ್ಖರೆಂದು ತಿಳಿದಂತಿದೆ" ಎಂದು ಟ್ರಂಪ್ ಪಾಕಿಸ್ತಾನದ ನಾಯಕರಿಗೆ ಛೀಮಾರಿ ಹಾಕಿದ್ದಾರೆ. ಇದರಿಂದಾಗಿ ಪಾಕಿಸ್ತಾನಕ್ಕೆ ಇದೀಗ ಕೊಡಬೇಕಿದ್ದ ೨೫೫ ದಶಲಕ್ಷ ಡಾಲರ್ ರಕ್ಷಣಾ ನೆರವಿಗೆ ತಡೆಬಿದ್ದಿದೆ. ಭಯೋತ್ಪಾದನೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಹೇಗೆ ನಡೆದುಕೊಳ್ಳುತ್ತದೆ ಎನ್ನುವುದರ ಆಧಾರದ ಮೇಲೆ ಈ ನೆರವು ಮುಂದೆ ಕೊಡಬೇಕೋ ಇಲ್ಲವೋ ಎಂಬುದನ್ನು ನಿರ್ಧರಿಸಲಾಗುವುದು ಎಂದು ಪ್ರಕಟಿಸಲಾಗಿದೆ.

ಟ್ರಂಪ್ ಅವರ ಈ ನಿರ್ಧಾರದಿಂದ ಪಾಕಿಸ್ತಾನದ ಆಡಳಿತಗಾರರಿಗೆ ಆಘಾತವಾಗಿದೆ. ಪಾಕ್‌ನ ವಿದೇಶಾಂಗ ಸಚಿವರು ಆಕ್ರೋಶ ವ್ಯಕ್ತ ಮಾಡಿದ್ದಾರೆ. ಕಳೆದ ಹಲವು ದಶಗಳಿಂದ ಭಯೋತ್ಪಾದನೆ ವಿರುದ್ಧದ ಯುದ್ಧಕ್ಕೆ ನೆಲೆ, ಗುಪ್ತಚಾರ ನೆರವು ಮತ್ತಿತರ ನೆರವನ್ನು ಪಾಕಿಸ್ತಾನ ಅಮೆರಿಕಕ್ಕೆ ನೀಡಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಮಾಡಿದ್ದೇನು- ಅವಮಾನ ಮತ್ತು ಅಪನಂಬಿಕೆ ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖರ್ರೂಮ್ ದಸ್ತಗೀರ್ ಆಕ್ರೋಶ ವ್ಯಕ್ತ ಮಾಡಿದ್ದಾರೆ. ಕೊಟ್ಟ ಹಣಕ್ಕೆ ಲೆಕ್ಕ ಕೊಡುತ್ತೇವೆ ಎಂದು ಮತ್ತೊಬ್ಬ ಸಚಿವರು ಹೇಳಿದ್ದಾರೆ.

ಪಾಕಿಸ್ತಾನದ ಪರವಾಗಿ ದನಿ ಎತ್ತಿರುವ ಒಂದೇ ದೇಶ ಚೀನಾ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ಸಹಭಾಗಿ ರಾಷ್ಟ್ರವಾಗಿದ್ದು ಅದನ್ನು ಸಂಶಯದಿಂದ ನೋಡುವುದು ಸರಿಯಲ್ಲ ಎಂದು ಚೀನಾ ಸರ್ಕಾರದ ವಕ್ತಾರರು ಹೇಳಿಕೆ ನೀಡಿದ್ದಾರೆ. ಇದು ಸಹಜ ಪ್ರತಿಕ್ರಿಯೆಯಾಗಿದೆ. ಏಕೆಂದರೆ ಪಾಕಿಸ್ತಾನ ಮತ್ತು ಚೀನಾ ಇತ್ತೀಚಿನ ವರ್ಷಗಳಲ್ಲಿ ತೀರಾ ಹತ್ತಿರವಾಗಿವೆ. ಅದೂ ಭಾರತ ಮತ್ತು ಅಮೆರಿಕ ಹತ್ತಿರವಾಗುತ್ತಿದ್ದಂತೆಯೇ ಈ ಬೆಳವಣಿಗೆ ಆಗಿದೆ. ಹೀಗಾಗಿಯೇ ಮುಂಬೈ ಹತ್ಯಾಕಾಂಡದ ಆರೋಪಿ ಸೈಯದ್ ಹಫೀಜ್‌ನನ್ನು ಭಯೋತ್ಪಾದಕ ಎಂದು ಘೋಷಿಸಬೇಕೆಂಬ ನಿರ್ಣಯ ಭದ್ರತಾಮಂಡಳಿಯ ಮುಂದೆ ಬಂದಾಗ ಚೀನಾ ವಿಟೋ ಚಲಾಯಿಸಿ ಆ ನಿರ್ಣಯ ಅಂಗೀಕಾರವಾಗದಂತೆ ಮಾಡಿತು.

ಇದನ್ನೂ ಓದಿ : ಇರಾನ್ ಸರ್ಕಾರದ ವಿರುದ್ಧ ಜನ ಬೀದಿಗಿಳಿಯಲು ಏನು ಕಾರಣ?

ಪಾಕಿಸ್ತಾನ ಮತ್ತು ಚೀನಾ ನಡುವೆ ದೀರ್ಘಕಾಲದ ಆರ್ಥಿಕ ಒಪ್ಪಂದಗಳು ಆಗಿವೆ. ಭಾರತದ ಆಕ್ಷೇಪದ ನಡುವೆಯೂ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ೫೦ ಬಿಲಿಯನ್ ಡಾಲರ್ ವೆಚ್ಚದಲ್ಲಿ ಭಾರಿ ಪ್ರಮಾಣದ ಆರ್ಥಿಕ ವಲಯ ನಿರ್ಮಾಣವಾಗುತ್ತಿದೆ. ಪಾಕಿಸ್ತಾನವನ್ನು ಬಲಗೊಳಿಸುವ ಮೂಲಕ ಭಾರತವನ್ನು ನಿಯಂತ್ರಿಸುವುದು ಚೀನಾದ ಲೆಕ್ಕಾಚಾರ. ಚೀನಾ ಈ ತಂತ್ರವನ್ನು ಬಹಳ ಕಾಲದಿಂದ ಅನುಸರಿಸುತ್ತ ಬಂದಿದೆ. ಭಾರತದ ನೆರೆಯ ಶ್ರೀಲಂಕಾ, ಮೈನ್ಮಾರ್, ನೇಪಾಳ, ಮಾಲ್ಡೀವ್ಸ್ ದೇಶಗಳ ಜೊತೆ ಉತ್ತಮ ಬಾಂಧವ್ಯವನ್ನು ಚೀನಾ ಬೆಳೆಸಿಕೊಂಡು ಬಂದಿದೆ. ಈ ವಲಯದಲ್ಲಿ ಭಾರತವನ್ನು ಏಕಾಂಗಿ ಮಾಡುವುದು ಚೀನಾದ ಉದ್ದೇಶ. ಅಮೆರಿಕವು ಪಾಕ್‌ಗೆ ನೆರವು ನಿಲ್ಲಿಸಿದರೆ ಚೀನಾ ಅದರ ನೆರವಿಗೆ ಹೋಗುವ ಸಾಧ್ಯತೆ ಹೆಚ್ಚು.

ಪಾಕಿಸ್ತಾನಕ್ಕೆ ನೆರವು ನಿಲ್ಲಿಸುವ ಅಮೆರಿಕದ ಆಲೋಚನೆಯ ಹಿಂದೆ ಒಂದು ದೊಡ್ಡ ಲೆಕ್ಕಾಚಾರವೇ ಇದೆ. ಹಿಂದೆ ಸೋವಿಯತ್ ಸೇನೆ ಆಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡಿದ್ದಾಗ ಅಮೆರಿಕ ರಂಗಕ್ಕೆ ಇಳಿಯುತ್ತದೆ. ಅದು ಅಮೆರಿಕ ಮತ್ತು ಸೋವಿಯತ್ ಒಕ್ಕೂಟದ ಮಧ್ಯೆ ನಡೆಯುತ್ತಿದ್ದ ಶೀತಲ ಸಮರದ ಕಾಲ. ಕಮ್ಯೂನಿಸಂ ವಿಸ್ತರಣೆ ವಿರೋಧಿಯಾಗಿ ಅಮೆರಿಕ ಅಲ್ಲಿ ಕೆಲಸಮಾಡುತ್ತದೆ. ಆಫ್ಘಾನಿಸ್ತಾನದಿಂದ ಸೋವಿಯತ್ ಸೇನೆಯನ್ನು ತೆರವು ಮಾಡಿಸಲು ಅಮೆರಿಕ ನೆರವು ಪಡೆದದ್ದು ಪಾಕಿಸ್ತಾನವನ್ನು. ಸೋವಿಯತ್ ಸೇನೆಯ ವಿರುದ್ಧ ಹೋರಾಡಲು ಮುಜಾಹಿದ್ದೀನ್‌ಗಳನ್ನು ತಯಾರು ಮಾಡಿದ್ದು ಮತ್ತು ಅದಕ್ಕೆ ನೆರವು ನೀಡಿದ್ದು ಪಾಕಿಸ್ತಾನ. ಈ ಯುದ್ಧಕ್ಕಾಗಿ ಅಮೆರಿಕವು ಪಾಕಿಸ್ತಾನಕ್ಕೆ ಅಪಾರ ಪ್ರಮಾಣದಲ್ಲಿ ಹಣ, ಯುದ್ಧಾಸ್ತ್ರಗಳನ್ನು ಪೂರೈಸುತ್ತ ಬಂತು. ಆಂತರಿಕ ಯುದ್ಧದಿಂದಾಗಿ ಅಂತಿಮವಾಗಿ ೧೯೮೯ರಲ್ಲಿ ಸೋವಿಯತ್ ಸೇನೆ ಸ್ವದೇಶಕ್ಕೆ ಹಿಂತಿರುಗಿತು. ನಂತರ ಆದದ್ದು ಇತಿಹಾಸ. ಮುಜಾಹಿದ್ದೀನ್‌ಗಳೇ ತಾಲಿಬಾನ್‌ಗಳಾಗಿ, ಅವರು ಒಸಾಮಾ ಬಿನ್ ಲಾಡೆನ್ ಸ್ಥಾಪಿಸಿದ ಅಲ್‌ಖೈದಾ ಹೋರಾಟಗಾರರಾಗಿ ದೇಶದಲ್ಲಿ ಜನವಿರೋಧೀ ಮತ್ತು ಕಟ್ಟಾ ಷರೀಯತ್ ಮಾದರಿಯ ಆಡಳಿತ ರಚನೆಗೆ ದಾರಿ ಮಾಡಿಕೊಟ್ಟಿತು

ಭಯಾನಕ ತಾಲಿಬಾನ್ ಉಗ್ರರನ್ನು ಮುಗಿಸಲು ಮತ್ತೆ ಅಮೆರಿಕ ನೇತೃತ್ವದ ಬಹುರಾಷ್ಟ್ರೀಯ ಸೇನಾಕಾರ್ಯಾಚರಣೆ ೨೦೦೧ರಲ್ಲಿ ಆರಂಭವಾಯಿತು. ಇಂದಿಗೂ ಅದು ಮುಕ್ತಾಯವಾಗಿಲ್ಲ. ಈ ಎರಡೂ ದಶಕಗಳಲ್ಲಿ ಹೆಚ್ಚು ಲಾಭ ಪಡೆದದ್ದು ಪಾಕಿಸ್ತಾನ. ತನ್ನದೆ ಆದ ತಾಲಿಬಾನ್ ಉಗ್ರರನ್ನು ಬೆಳೆಸಿ ಆಫ್ಗಾನಿಸ್ತಾನವನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಪಾಕಿಸ್ತಾನ ಸತತವಾಗಿ ಪ್ರಯತ್ನಿಸುತ್ತ ಬಂದಿದೆ. ಜೊತೆಗೆ ಅಮೆರಿಕದಿಂದ ಸಂಪನ್ಮೂಲ ಮತ್ತು ಯುದ್ಧಾಸ್ತ್ರಗಳನ್ನು ಭಾರತದ ವಿರುದ್ಧ ಬಳಸಲು ಆರಂಭಿಸಿತು. ಅಮೆರಿಕಕ್ಕೆ ಇದು ತಿಳಿಯದ ವಿಚಾರವೇನೂ ಆಗಿರಲಿಲ್ಲ. ಆಫ್ಘಾನಿಸ್ತಾನದಲ್ಲಿ ಸ್ಥಿರತೆ ಮತ್ತು ಶಾಂತಿ ಸ್ಥಾಪಿಸುವ ಉದ್ದೇಶದಿಂದ ಮತ್ತು ಈ ವಲಯದಲ್ಲಿ ತನ್ನ ಪ್ರಭಾವ ಉಳಿಸಿಕೊಳ್ಳಬೇಕೆಂಬ ಲೆಕ್ಕಾಚಾರದಿಂದ ಪಾಕ್‌ಗೆ ನೆರವನ್ನು ಮುಂದುವರಿಸುತ್ತ ಬಂತು. ಆದರೆ ತಾನು ಕೊಡುತ್ತಿರುವ ನೆರವು ಉಗ್ರವಾದಿಗಳಿಗೆ ರಕ್ಷಣೆ ಕೊಡಲು ಮತ್ತು ಭಯೋತ್ಪಾದನೆ ಕೃತ್ಯ ನಡೆಸಲು ಬಳಕೆಯಾಗುತ್ತಿರುವುದು ಬಹಿರಂಗವಾಗಿದೆ. ಚೀನಾ ಮತ್ತು ಪಾಕಿಸ್ತಾನ ಹತ್ತಿರವಾಗುತ್ತಿರುವ ವಿಚಾರ ಅಮೆರಿಕಕ್ಕೆ ಮನವರಿಕೆಯಾಗಿದೆ. ವಿಶ್ವಸಂಸ್ಥೆ, ಯುನಿಸೆಫ್ ಸೇರಿದಂತೆ ವಿವಿಧ ಬಾಶಬುಗಳಿಗೆ ತಾನು ನೀಡುತ್ತಿರುವ ನೆರವನ್ನು ನಿರ್ಬಂಧಿಸಲು ಟ್ರಂಪ್ ನಿರ್ಧರಿಸಿದ ನಂತರ ಅಮೆರಿಕ ಇದೀಗ ಪಾಕ್‌ಗೆ ನೀಡುತ್ತಿದ್ದ ನೆರವಿಗೂ ಕತ್ತರಿ ಹಾಕಲು ಹೊರಟಿದೆ.

ಪಾಕಿಸ್ತಾನ ಬಡ ದೇಶ. ಅತ್ಯಧುನಿಕ ಮಿಲಿಟರಿ ಅಸ್ತ್ರಗಳನ್ನು ಕೊಳ್ಳಲು ಅದಕ್ಕೆ ಶ್ರೀಮಂತ ದೇಶಗಳ ನೆರವು ಬೇಕು, ಭಾರತ ಪ್ರಮುಖವಾಗಿ ಯುದ್ಧಾಸ್ತ್ರಗಳಿಗಾಗಿ ಸೋವಿಯತ್ ಒಕ್ಕೂಟವನ್ನು ಅವಲಂಬಿಸಿತ್ತು. ಪಾಕಿಸ್ತಾನ ಅಮೆರಿಕವನ್ನು ಅವಲಂಬಿಸುತ್ತಿತ್ತು. ಆದರೆ ಈಗ ಪಾಕಿಸ್ತಾನದಿಂದ ಅಮೆರಿಕ ದೂರ ಸರಿದರೆ ಅದು ಬಲ ಕಳೆದುಕೊಳ್ಳುತ್ತದೆ. ಅಭಿವೃದ್ಧಿಗಾಗಿ ಚೀನಾ ನೆರವಾಗಬಹುದು. ಆದರೆ ಮಿಲಿಟರಿಬಲ ಹೆಚ್ಚಿಸಲು ಚೀನಾ ನೆರವಾಗುವ ಸಾಧ್ಯತೆ ಕಡಿಮೆ. ಆಫ್ಘಾನಿಸ್ತಾನದಲ್ಲಿ ತನ್ನ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವ ವಿಚಾರದಲ್ಲಿ ಪಾಕಿಸ್ತಾನ ಭಿನ್ನ ದಾರಿ ತುಳಿಯಬಹುದು. ಆದರೆ ಕಾಶ್ಮೀರ ವಿಚಾರದಲ್ಲಿ ಅದು ತನ್ನ ಮಾರ್ಗವನ್ನು ಬದಲಿಸಿಕೊಳ್ಳುವ ಸಾಧ್ಯತೆ ಇಲ್ಲ.

ಉಗ್ರಗಾಮಿ ದಾಳಿಗಳ ಸಂಖ್ಯೆ ತಗ್ಗಿದರೆ ಆಶ್ಚರ್ಯವಿಲ್ಲ. ಆದರೆ ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಈ ಬೆಳವಣಿಗೆ ಯಾವುದೇ ರೀತಿಯಲ್ಲಿ ನೆರವಾಗುವ ಸಾಧ್ಯತೆ ಇಲ್ಲ. ಟ್ರಂಪ್ ಹಳೆಯ ರೀತಿಯ ಆಡಳಿತಗಾರ ಅಲ್ಲ. ಹಿಂದೆ ಶಕ್ತಿ ಸಮತೋಲನಕ್ಕಾಗಿ ಅಮೆರಿಕ ಬೇರೆ ಬೇರೆ ದೇಶಗಳನ್ನು ತನ್ನ ನಿಯಂತ್ರಣದಲ್ಲಿ ಇಟುಕೊಳ್ಳುತ್ತಿತ್ತು. ಹಿಂದಿನ ಸೋವಿಯತ್ ಒಕ್ಕೂಟವೂ ಹಾಗೇಯೇ ಮಾಡುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಅಮೆರಿಕ ಈ ಹಿಂದೆ ಸೋವಿಯತ್ ಒಕ್ಕೂಟವನ್ನು ನಿರ್ಬಂಧಿಸುವ ಉದ್ದೇಶದಿಂದ ಪಾಕಿಸ್ತಾನದ ಜೊತೆ ಉತ್ತಮ ಬಾಂಧವ್ಯ ಹೊಂದಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಬದಲಾದ ಪರಿಸ್ಥಿತಿಯಲ್ಲಿ ಅಮೆರಿಕ ಭಿನ್ನವಾಗಿ ಯೋಚಿಸಿ ಪಾಕಿಸ್ತಾನದ ಸಂಬಂಧ ಬಿಡಬಹುದು. ಅಥವಾ ಹೇಗಾದರೂ ಆಗಲಿ ಎಂದು ಬೆದರಿಕೆಗಳನ್ನು ಆಗಿಂದಾಗ್ಗೆ ಹಾಕುತ್ತ ಬಾಂಧವ್ಯ ಮುಂದುವರಿಸಬಹುದು. ಈ ಬೆಳವಣಿಗೆಯನ್ನು ನೋಡಿ ಭಾರತ ಹರ್ಷಪಡಬೇಕಾದ್ದೇನೂ ಇಲ್ಲ.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More