ಇದೀಗ ಪ್ಯಾಲೆಸ್ಟೇನ್‌ ಸರದಿ: ನೆರವು ನಿಲ್ಲಿಸುವ ಟ್ರಂಪ್ ಬೆದರಿಕೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೆಲವು ದಿನಗಳ ಹಿಂದೆ ನೆರವು ನಿಲ್ಲಿಸುವುದಾಗಿ ಪಾಕಿಸ್ತಾನಕ್ಕೆ ಬೆದರಿಕೆ ಹಾಕಿದ್ದಾರೆ. ಈ ಬೆನ್ನಲ್ಲೇ ಟ್ವಿಟ್ಟರ್‌ ಮೂಲಕ ಪ್ಯಾಲೆಸ್ಟೇನ್‌ಗೆ ನೀಡುತ್ತಿರುವ ನೆರವನ್ನು ನಿಲ್ಲಿಸುವ ಬೆದರಿಕೆ ಹಾಕಿದ್ದಾರೆ. ಇದು ಅರಬ್ ವಲಯದಲ್ಲಿ ಆತಂಕ ಸೃಷ್ಟಿ ಮಾಡಿಸುತ್ತಿದೆ

ಅಮೆರಿಕದ ಆದ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೆಲವು ದಿನಗಳ ಹಿಂದೆ ನೆರವು ನಿಲ್ಲಿಸುವುದಾಗಿ ಪಾಕಿಸ್ತಾನಕ್ಕೆ ಬೆದರಿಕೆ ಹಾಕಿದ್ದರು. ಇದೀಗ ಅವರು ಮಂಗಳವಾರ ಮಾಡಿದ ಟ್ವೀಟ್‌ನಲ್ಲಿ ಪ್ಯಾಲೆಸ್ಟೇನ್‌ಗೆ ನೀಡುತ್ತಿರುವ ನೆರವನ್ನು ನಿಲ್ಲಿಸುವ ಬೆದರಿಕೆ ಹಾಕಿದ್ದಾರೆ. ಈ ಬೆದರಿಕೆ ಈಗಾಗಲೇ ಅರಬ್ ವಲಯದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿದೆ.

"ನಾವು ಲಕ್ಷಾಂತರ ಡಾಲರ್‌ಗಳ ನೆರವನ್ನು ಪ್ಯಾಲಸ್ಟೇನ್‌ಗೆ ನೀಡುತ್ತಿದ್ದೇವೆ. ಆದರೆ ಪ್ಯಾಲಸ್ಟೇನ್ ಆಡಳಿತಗಾರರಿಂದ ನಮಗೆ ಅದಕ್ಕಾಗಿ ಧನ್ಯವಾದಗಳೂ ಬರುತ್ತಿಲ್ಲ, ಗೌರವವೂ ಸಿಗುತ್ತಿಲ್ಲ. ಶಾಂತಿಮಾತುಕತೆಗೂ ಬರುತ್ತಿಲ್ಲ. ಅಂಥವರಿಗೆ ನೆರವನ್ನಾದರೂ ಏಕೆ ನೀಡಬೇಕು," ಎಂದು ಟ್ರಂಪ್ ಪ್ರಶ್ನಿಸಿದ್ದಾರೆ. ಅವರ ಹೇಳಿಕೆಯನ್ನು ಸಮರ್ಥಿಸಿ ವಿಶ್ವಸಂಸ್ಥೆಯಲ್ಲಿ ಅಮೆರಿಕದ ಪ್ರತಿನಿಧಿಯಾಗಿರುವ ನಿಕ್ಕಿ ಹ್ಯಾಲಿ ಅವರೂ ಮಾತನಾಡಿದ್ದಾರೆ. ಪ್ಯಾಲೆಸ್ಟೇನ್ ಬಿಕ್ಕಟ್ಟು ಬಗೆಹರಿಸಲು ಅಮೆರಿಕ ಆರಂಭಿಸಿರುವ ಶಾಂತಿ ಮಾತುಕತೆಯಲ್ಲಿ ಪ್ಯಾಲಸ್ಟೇನ್ ಆಡಳಿತಗಾರರು ಭಾಗವಹಿಸಬೇಕು ಎಂಬುದೇ ಈ ಬೆದರಿಕೆಯ ಉದ್ದೇಶ. ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು ಎಂಬ ಒತ್ತಾಯದೊಂದಿಗೆ ನೆರವು ನಿಲ್ಲಿಸುವ ಬೆದರಿಕೆಯನ್ನು ಈ ಮೊದಲು ಟ್ರಂಪ್ ಅವರು ಪಾಕಿಸ್ತಾನ ಆಡಳಿತಗಾರರಿಗೆ ಹಾಕಿದ್ದರು. ಈ ಬೆದರಿಕೆಯೂ ಪಾಕಿಸ್ತಾನದಲ್ಲಿ ಸಾಕಷ್ಟು ಉದ್ವೇಗಕ್ಕೆ ಕಾರಣವಾಗಿತ್ತು.

ಟ್ರಂಪ್ ಅವರು ಅಧ್ಯಕ್ಷರಾದ ಹೊಸದರಲ್ಲಿಯೇ ಪ್ಯಾಲೆಸ್ಟೇನ್ ಸಮಸ್ಯೆಗೆ ಒಂದು ಪರಿಹಾರ ಕಂಡುಹಿಡಿಯುವ ದಿಸೆಯಲ್ಲಿ ಮಾತುಕತೆ ಆರಂಭಿಸುವಂತೆ ತಮ್ಮ ಅಳಿಯ ಜಾರೇಡ್ ಕುಶ್ನರ್‌ ಅವರಿಗೆ ಜವಾಬ್ದಾರಿ ವಹಿಸಿದ್ದರು. ಅವರು ಆ ಉದ್ದೇಶದಿಂದ ಇಸ್ರೇಲ್ ಮತ್ತು ಕೆಲವು ಅರಬ್ ದೇಶಗಳಿಗೆ ನೀಡಿ ಚರ್ಚೆ ನಡೆಸಿ ಬಂದರು. ಅದರ ಪರಿಣಾಮವಾಗಿ ಇಸ್ರೇಲ್ ಜೊತೆ ಟ್ರಂಪ್ ಸಂಬಂಧ ಸುಧಾರಿಸಿತೇ ಹೊರತು ಪ್ಯಾಲಸ್ಟೇನ್ ನಾಯಕರು ಮಾತುಕತೆಗೆ ಮುಂದಾಗಲಿಲ್ಲ. ಬಿಗಿ ನಿಲುವು ತಳೆದು ಅವರನ್ನು ಬಗ್ಗಿಸಲು ಟ್ರಂಪ್ ನಿರ್ಧರಿಸಿ ಜೆರೂಸಲೆಂ ಅನ್ನು ಇಸ್ರೇಲ್ ರಾಜಧಾನಿಯಾಗಿ ಘೋಷಿಸಿ ಆಶ್ಚರ್ಯ ಹುಟ್ಟಿಸಿದರು. ಈಗ ನೆರವು ನಿಲ್ಲಿಸುವ ಬೆದರಿಕೆ ಹಾಕಿದ್ದಾರೆ. "ಪ್ಯಾಲಸ್ಟೇನ್ ಸಮಸ್ಯೆ ಇತ್ಯರ್ಥಕ್ಕೆ ಅಮೆರಿಕ ಬದ್ಧವಿದೆ. ಜರೂಸಲೆಂ ಪಡೆಯುವುದಕ್ಕೆ ಪ್ರತಿಯಾಗಿ ಇಸ್ರೇಲ್ ಸಾಕಷ್ಟು ತೆರಬೇಕಾಗುತ್ತದೆ," ಎಂದು ಟ್ರಂಪ್ ಹೇಳಿರುವುದನ್ನು ನೋಡಿದರೆ ಈಗಾಗಲೇ ಅವರು ಈ ವಿಚಾರದಲ್ಲಿ ಒಂದು ನಿರ್ಧಾರ ತೆಗೆದುಕೊಂಡಿದ್ದಾರೆ ಎನಿಸುತ್ತದೆ.

ಇದೇನೇ ಇದ್ದರೂ ಟ್ರಂಪ್ ಈಗ ಪ್ಯಾಲಸ್ಟೇನ್‌ಗೆ ಹಾಕಿರುವ ಬೆದರಿಕೆ ಅತ್ಯಂತ ಅಪಾಯಕಾರಿಯಾದುದು ಎಂದು ಹೇಳಲಾಗುತ್ತಿದೆ. ಜರೂಸಲೆಂ ನಗರವನ್ನು ಇಸ್ರೇಲ್‌ನ ರಾಜಧಾನಿಯಾಗಿ ಟ್ರಂಪ್ ಅವರು ಘೋಷಿಸಿರುವುದಕ್ಕಿಂತಲೂ ಹೆಚ್ಚು ಅಪಾಯಕಾರಿ ಎಂದು ಮಧ್ಯಪ್ರಾಚ್ಯ ತಜ್ಞರು ಹೇಳುತ್ತಿದ್ದಾರೆ. ಇಸ್ರೇಲ್ ಮತ್ತು ಪ್ಯಾಲೆಸ್ಟೇನ್ ನಡುವೆ ೧೯೪೭ರಿಂದಲೂ ಸಂಘರ್ಷ ನಡೆಯುತ್ತಿದೆ. ಸ್ವತಂತ್ರ ದೇಶಕ್ಕಾಗಿ ಹೋರಾಟ ಮಾಡುತ್ತಿರುವ ಪ್ಯಾಲಸ್ಟೇನ್ ಜನರು ಇಸ್ರೇಲ್ ಜೊತೆಗಿನ ಸಂಘರ್ಷದಲ್ಲಿ ನುಚ್ಚುನೂರಾಗಿದ್ದಾರೆ. ಲಕ್ಷಾಂತರ ಜನರು ನೆರೆಯ ದೇಶಗಳಿಗೆ ವಲಸೆಹೋಗಿದ್ದಾರೆ. ನೂರಾರು ಜನರು ಸತ್ತಿದ್ದಾರೆ. ಮೂಲಭೂತ ಸೌಕರ್ಯ ನಾಶವಾಗಿದೆ. ದಿನನಿತ್ಯದ ಆಹಾರಕ್ಕೇ ವದ್ದಾಡುವಂಥ ಸ್ಥಿತಿಯಲ್ಲಿ ಅವರಿದ್ದಾರೆ. ಅವರ ಸಂಕಷ್ಟವನ್ನು ಸ್ವಲ್ಪ ಮಟ್ಟಿಗಾದರೂ ನಿವಾರಿಸುವ ದೃಷ್ಟಿಯಿಂದ ಅಂತಾರಾಷ್ಟ್ರೀಯ ಸಮುದಾಯ ಅಪಾರವಾಗಿ ನೆರವು ನೀಡುತ್ತಿದೆ. ಅರಬ್ ಮತ್ತು ಯುರೋಪ್ ಒಕ್ಕೂಟದ ರಾಷ್ಟ್ರಗಳು ಹಾಗೂ ಅಮೆರಿಕ ಮತ್ತಿತರ ಮುಂದುವರಿದ ದೇಶಗಳು ಅತಿ ಹೆಚ್ಚು ನೆರವು ನೀಡುತ್ತಿವೆ. ಈಗ ಅದಕ್ಕೂ ಕುತ್ತು ಬಂದಿದೆ.

ಈಗ ಲಭ್ಯವಿರುವ ಮಾಹಿತಿ ಪ್ರಕಾರ ಅಮೆರಿಕ ಪ್ರತಿವರ್ಷ ೩೦೦ ದಶಲಕ್ಷ ಡಾಲರ್ ನೆರವು ನೀಡುತ್ತಿದೆ. ೨೦೧೭ರಲ್ಲಿ ಅಮೆರಿಕ ನೀಡಿದ ನೆರವು ೩೫೭ ದಶಲಕ್ಷ ಡಾಲರ್‌ಗಳು. ಈ ನೆರವನ್ನು ಪ್ಯಾಲೆಸ್ಟೇನ್ ನಿರಾಶ್ರಿತರಿಗಾಗಿ ಸ್ಥಾಪಿಸಲಾಗಿರುವ ವಿಶ್ವಸಂಸ್ಥೆಯ ಏಜನ್ಸಿಯೊಂದರ (ಯುಎನ್ ಡಬ್ಲ್ಯೂಆರ್‌ಎ) ಮೂಲಕ ಕೊಡಲಾಗುತ್ತಿದೆ. ೨೦೧೬ರಲ್ಲಿ ಅಮೆರಿಕ ನೀಡಿದ ನೆರವು ೭೧೨ ದಶಲಕ್ಷ ಡಾಲರ್ ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ.

ಆದರೆ ಕಳೆದ ವರ್ಷ ಒಂದು ಡಾಲರ್ ಕೂಡಾ ಬಂದಿಲ್ಲ ಎಂದು ಪ್ಯಾಲೆಸ್ಟೇನ್ ಪ್ರಧಾನಿ ರಮಿ ಹಮ್‌ದಲ್ಲಾಹಾ ಹೇಳಿದ್ದಾರೆ. ವಾಸ್ತವವಾಗಿ ನೆರವು ವಿಶ್ವಸಂಸ್ಥೆ ನಿರಾಶ್ರಿತರ ಸಂಸ್ಥೆಯಿಂದ ಸಂಬಂಧಿಸಿದ ಸಂಸ್ಥೆಗೆ ಹೋಗುತ್ತದೆಯೇ ಹೊರತು ಪ್ಯಾಲಸ್ಟೇನ್ ಆಡಳಿತ ವಿಭಾಗಕ್ಕಲ್ಲ. ಹೀಗಾಗಿ ರಮಿ ಅವರ ಅಭಿಪ್ರಾಯ ಸರಿಯಿಲ್ಲದಿರಬಹುದು ಎಂದು ನೆರವು ಸಂಸ್ಥೆ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

"ಟ್ರಂಪ್ ಅವರು ಶಾಂತಿ ಮಾತುಕತೆಯ ಸಾಧ್ಯತೆಗಳನ್ನು ಹಾಳುಮಾಡುತ್ತಿದ್ದಾರೆ. ಜರೂಸಲೆಂ ಮಾರಾಟಕ್ಕಿಲ್ಲ ಎನ್ನುವುದನ್ನು ಅವರು ಅರಿತುಕೊಳ್ಳಬೇಕು," ಎಂದು ಪ್ಯಾಲಸ್ಟೇನ್‌ ನಾಯಕ ಮಹಮ್ಮದ್ ಅಬ್ಬಾಸ್ ಪ್ರತಿಕ್ರಿಯೆ ನೀಡಿದ್ದಾರೆ. ಸಹಜವಾಗಿಯೇ ಇಸ್ರೇಲ್ ಪ್ರಧಾನಿ ನೇತಾನ್ಯಹು ಅವರು ಟ್ರಂಪ್ ಹಾಕಿರುವ ಬೆದರಿಕೆಯನ್ನು ಸ್ವಾಗತಿಸಿದ್ದಾರೆ.

ಇದನ್ನೂ ಓದಿ : ಮೂರು ಧರ್ಮಗಳ ದಟ್ಟ ತಿಕ್ಕಾಟದ ತಾಣವಾದ  ಜೆರೂಸಲೇಂ

ಟ್ರಂಪ್ ಅವರ ಬೆದರಿಕೆ ಜಾರಿಗೆ ಬಂದಲ್ಲಿ ಪ್ಯಾಲಸ್ಟೇನ್ ಜನರು ತೀವ್ರ ಸಂಕಷ್ಟಕ್ಕೆ ಸಿಲುಕುವುದರಲ್ಲಿ ಅನುಮಾನವಿಲ್ಲ. ಅಮೆರಿಕ ತಾನಷ್ಟೇ ನೆರವು ನಿಲ್ಲಿಸುವುದಿಲ್ಲ, ಮಿತ್ರ ದೇಶಗಳಿಂದಲೂ ನೆರವು ಹೋಗದಂತೆ ಮಾಡುತ್ತದೆ. ಇದೇ ಸಮಸ್ಯೆ. ಈಗಾಗಲೇ ಪ್ಯಾಲಸ್ಟೇನ್ ನಿರಾಶ್ರಿತರಿಗೆ ದೊರೆಯುತ್ತಿರುವ ನೆರವು ಕಡಿಮೆಯಾಗುತ್ತ ಬಂದಿದೆ. ಜನರು ಉದ್ಯೋಗ, ಆಹಾರ, ಆರೋಗ್ಯ ಸೌಲಭ್ಯಗಳ ಕೊರತೆಯಿಂದ ಸಂಕಷ್ಟದಲ್ಲಿದ್ದಾರೆ. ಹೊರ ದೇಶಗಳ ನೆರವು ನಿಂತರೆ ಅವರು ಇನ್ನೂ ಹೆಚ್ಚು ಹತಾಶೆಗೆ ಒಳಗಾಗುತ್ತಾರೆ. ಹತಾಶೆಯಿಂದ ಉಗ್ರಗಾಮಿ ಚಟುವಟಿಕೆ, ಹಿಂಸೆ ಹೆಚ್ಚಲಿದೆ.

ಟ್ರಂಪ್ ಅವರು ಸಂಧಾನದ ದಾರಿಗೆ ಬದಲಾಗಿ ಸರ್ವಾಧಿಕಾರಿಯ ದಾರಿ ಅನುಸರಿಸುತ್ತಿದ್ದಾರೆ. ಪ್ಯಾರಿಸ್ ಪರಿಸರ ಒಪ್ಪಂದದಿಂದ ಅವರು ಹೊರಬರುವುದಾಗಿ ಪ್ರಕಟಿಸಿದ್ದಾರೆ. ವಿಶ್ವಸಂಸ್ಥೆ ಮತ್ತು ಯುನೆಸ್ಕೊಗೆ ಕೊಡುತ್ತಿರುವ ನೆರವಿನಲ್ಲಿ ಕಡಿತ ಮಾಡುವುದಾಗಿ ಹೇಳಿದ್ದಾರೆ. ಹಣದ ದುರ್ವ್ಯಯ ತಪ್ಪಿಸಿ ಹಣ ಉಳಿಸುವ ಮತ್ತು ಆ ಮೂಲಕ ಅಮೆರಿಕದ ಆರ್ಥಿಕ ಶಕ್ತಿ ಹೆಚ್ಚಿಸುವ ಉದ್ದೇಶ ಅವರದು. "ಅಮೆರಿಕ ಮೊದಲು," ಎಂಬ ನೀತಿಯ ಕೆಟ್ಟ ಪರಿಣಾಮಗಳನ್ನು ಊಹಿಸುವುದೂ ಕಷ್ಟ.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More