ಪಾಕ್ ಕುತ್ತಿಗೆ ಹಿಸುಕಿದ ಟ್ರಂಪ್‌, ಆರ್ಥಿಕ ನೆರವಿಗೆ ಕೊನೆಗೂ ಕತ್ತರಿ

ಪಾಕಿಸ್ತಾನದ ವಿರುದ್ಧ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಗುಂಡು ಹಾರಿಸಿದ್ದಾರೆ. ಪ್ರತಿವರ್ಷ ಪಾಕಿಸ್ತಾನಕ್ಕೆ ತಾನು ನೀಡುತ್ತಿದ್ದ ನೆರವಿಗೆ ಕತ್ತರಿ ಹಾಕಿದ್ದಾರೆ. ಇದರಿಂದ ಪಾಕಿಸ್ತಾನ ಅಂತಾರಾಷ್ಟ್ರೀಯ ಮುಜಗರಕ್ಕೆ ಒಳಗಾಗಿದೆ. ಅದಕ್ಕಿಂತ ಮುಖ್ಯವಾಗಿ, ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಲಿದೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊಸ ವರ್ಷದ ಮೊದಲ ದಿನದಂದು ಪಾಕಿಸ್ತಾನಕ್ಕೆ ಹಾಕಿದ್ದ ಬೆದರಿಕೆ ಇದೀಗ ನಿಜವಾಗಿದೆ. ಪಾಕಿಸ್ತಾನಕ್ಕೆ ಕೊಡಬೇಕಿದ್ದ 1.1 ಬಿಲಿಯನ್ ಡಾಲರ್ ನೆರವಿಗೆ ಅಮೆರಿಕದ ರಕ್ಷಣಾ ವಿಭಾಗ ಗುರುವಾರ ತಡೆ ನೀಡಿ ಆದೇಶ ಹೊರಡಿಸಿದೆ. ಇದು ಸಣ್ಣಪುಟ್ಟ ಪ್ರಮಾಣದ ಹಣವಲ್ಲವಾದ್ದರಿಂದ ಸಹಜವಾಗಿಯೇ ಪಾಕಿಸ್ತಾನದ ಆಡಳಿಗಾರರು ನಡುಗಿಹೋಗಿದ್ದಾರೆ. ಜೊತೆಗೆ, ಹತಾಶರಾಗಿ ಮಾತನಾಡತೊಡಿದ್ದಾರೆ.

ಈಗ ಬಂದಿರುವ ಮಾಹಿತಿಯ ಪ್ರಕಾರ, ವಿದೇಶಿ ಮಿಲಿಟರಿ ವೆಚ್ಚದ ಭಾಗವಾಗಿ ನೀಡಲಾಗುತ್ತಿದ್ದ, 2016ನೇ ಸಾಲಿಗೆ ಸೇರಿದಂಥ 255 ಮಿಲಿಯನ್ ಡಾಲರ್ ಮತ್ತು ಭಯೋತ್ಪಾದನೆ ವಿರುದ್ಧದ ಹೋರಾಟದ ಸಹಕಾರ ನಿಧಿಯಡಿ 2017ನೇ ಸಾಲಿನಲ್ಲಿ ನೀಡಬೇಕಿದ್ದ 900 ಮಿಲಿಯನ್ ಡಾಲರ್ ಹಣಕ್ಕೆ ಈಗ ಕತ್ತರಿ ಬಿದ್ದಿದೆ. ಭದ್ರತಾ ನೆರವಾಗಿ 2017ನೇ ಸಾಲಿನಲ್ಲಿ ನೀಡಬೇಕಿದ್ದ 255 ಮಿಲಿಯನ್ ಡಾಲರ್‍ಗೂ ಇದೇ ಗತಿ ಒದಗಲಿದೆ ಎಂದು ಹೇಳಲಾಗಿದೆ. ನೆರವಿನ ಹಣ ಸ್ಥಗಿತಗೊಳಿಸಲು ತೆಗೆದುಕೊಂಡ ನಿರ್ಧಾರವನ್ನು ವಿದೇಶಾಂಗ ಖಾತೆ ವಕ್ತಾರೆ ಹೀದರ್ ನಾವೊರ್ಟ್ ಗುರುವಾರ ಪ್ರಕಟಿಸಿದ್ದಾರೆ.

ಭಯೋತ್ಪಾದನೆ ವಿರುದ್ಧದ ಯುದ್ಧದಲ್ಲಿ ಪಾಕಿಸ್ತಾನವನ್ನು ಸಹಭಾಗಿ ದೇಶವಾಗಿ ಅಮೆರಿಕ ಭಾವಿಸಿತ್ತು. ಹೀಗಾಗಿ ಅಪಾರ ಪ್ರಮಾಣದಲ್ಲಿ ಅದಕ್ಕೆ ನೆರವು ನೀಡಲಾಗುತ್ತಿತ್ತು. “ಕಳೆದ 15 ವರ್ಷಗಳಲ್ಲಿ 33 ಬಿಲಿಯನ್ ಡಾಲರ್ ನೆರವು ಕೊಡಲಾಗಿದೆ. ಆದರೆ, ಪಾಕಿಸ್ತಾನ ಕಪಟ ನಾಟಕ ಆಡುತ್ತ ಬಂದಿದೆ, ಸುಳ್ಳು ಹೇಳುತ್ತ ಮೋಸ ಮಾಡಿದೆ. ಅಮೆರಿಕದ ನಾಯಕರನ್ನು ಮೂರ್ಖರನ್ನಾಗಿ ಮಾಡಿದೆ. ಭಯೋತ್ಪಾದನೆ ವಿರುದ್ಧದ ಯುದ್ಧಕ್ಕೆಂದು ಹಣ ಪಡೆದು ಅದನ್ನು ಆಫ್ಘಾನಿಸ್ತಾನದಲ್ಲಿರುವ ನಮ್ಮ ಸೈನಿಕರ ವಿರುದ್ಧ ದಾಳಿ ಮಾಡಲು ಉಗ್ರಗಾಮಿಗಳಿಗೆ ನೆರವಾಗುತ್ತಿದೆ. ಆಫ್ಘಾನಿಸ್ತಾನದ ತಾಲಿಬಾನ್ ಮತ್ತು ಗಡಿಯಲ್ಲಿರುವ ಹಕ್ಕಾನಿ ಉಗ್ರಜಾಲ ಬಗ್ಗುಬಡಿಯಲು ನೀಡಿದ್ದ ಸೂಚನೆ ವಿರುದ್ಧವೇ ಅದು ಕೆಲಸ ಮಾಡುತ್ತಿದೆ. ಪಾಕಿಸ್ತಾನ ಮಾಡುತ್ತಿರುವುದು ಮೋಸ,” ಎನ್ನುವುದು ಡೊನಾಲ್ಡ್ ಟ್ರಂಪ್ ಅವರ ಅಭಿಪ್ರಾಯ.

“ಆಫ್ಘಾನಿಸ್ತಾನದ ತಾಲಿಬಾನ್ ಮತ್ತು ಎರಡೂ ದೇಶಗಳ ಗಡಿಯಲ್ಲಿರುವ ಹಕ್ಕಾನಿ ಉಗ್ರಸಂಘಟನೆ ವಿರುದ್ಧ ಪಾಕ್ ಕ್ರಮ ತೆಗೆದುಕೊಂಡು ಭಯೋತ್ಪಾದನೆಯನ್ನು ತಗ್ಗಿಸುವ ಕೆಲಸ ಮಾಡಿದರೆ ಆಗ ನೆರವು ಸ್ಥಗಿತದ ನಿರ್ಧಾರ ಪುನರ್‍ಪರಿಶೀಲಿಸಲಾಗುವುದು,” ಎಂದು ನಾವೊರ್ಟ್ ಹೇಳಿದ್ದಾರೆ. “ಪಾಕಿಸ್ತಾನ ಇತ್ತೀಚಿನ ವರ್ಷಗಳಲ್ಲಿ ಚೀನಾದ ಕಡೆಗೆ ಹೊರಳುತ್ತಿದೆ. ಚೀನಾ ಕೂಡ ಅಪಾರ ಪ್ರಮಾಣದಲ್ಲಿ ಪಾಕಿಸ್ತಾನದಲ್ಲಿ ಬಂಡವಾಳ ಹೂಡುತ್ತಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಅಮೆರಿಕ ತನ್ನ ನಿಲುವನ್ನು ಬದಲಾಯಿಸಿಕೊಂಡಿತೇ ಎಂಬ ಪ್ರಶ್ನೆಗೆ ಅವರು ನಕಾರಾತ್ಮಕ ಉತ್ತರ ನೀಡಿದ್ದಾರೆ. ಚೀನಾ ಜೊತೆ ಬಾಂಧವ್ಯ ಹೆಚ್ಚಿಸಿಕೊಂಡರೆ ಅಮೆರಿಕದ್ದೇನೂ ಅಭ್ಯಂತರವಿಲ್ಲ. ಆದರೆ ಅದು ಮಾಡುತ್ತಿರುವ ಮೋಸವನ್ನು ಸಹಿಸಲು ಸಾಧ್ಯವಿಲ್ಲ,” ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನ ಮೂಲಭೂತವಾಗಿ ಬಡ ದೇಶ. ಆದರೆ ಅಪಾರ ಪ್ರಮಾಣದಲ್ಲಿ ಹಣವನ್ನು ಮಿಲಿಟರಿಗೆ ಸುರಿಯಲಾಗುತ್ತಿದೆ. ಈ ಹಣದ ಬಹುಪಾಲನ್ನು ಅಮೆರಿಕ ನೀಡುತ್ತಿದೆ. ಅಮೆರಿಕವು ಪಾಕಿಸ್ತಾನಕ್ಕೆ ಹೆಚ್ಚು ಹಣ, ಮಿಲಿಟರಿ ಅಸ್ತ್ರಗಳನ್ನು ಕೊಡಲು ಮುಖ್ಯ ಕಾರಣ ಆಫ್ಘಾನಿಸ್ತಾನದಲ್ಲಿನ ಪರಿಸ್ಥಿತಿ. ಆಫ್ಘಾನಿಸ್ತಾನದಲ್ಲಿ ಉಗ್ರವಾದವನ್ನು ನೆಲಸಮ ಮಾಡುವ ಉದ್ದೇಶದಿಂದ ಅಮೆರಿಕ ನೇತೃತ್ವದ ಬಹುರಾಷ್ಟ್ರೀಯ ಸೇನೆ ಕಳೆದ ಒಂದೂವರೆ ದಶಕದಿಂದ ಯುದ್ಧ ಮಾಡುತ್ತಿದೆ. ಈ ಯುದ್ಧಕ್ಕೆ ಅಮೆರಿಕವು ಆಫ್ಘಾನಿಸ್ತಾನದ ನೆರೆಯ ದೇಶವಾದ ಪಾಕಿಸ್ತಾನದ ಬೆಂಬಲ ಪಡೆದಿತ್ತು. ಈ ಸನ್ನಿವೇಶವನ್ನು ಬಳಸಿಕೊಂಡು ಪಾಕಿಸ್ತಾನದ ಆಡಳಿತಗಾರರು ಆಫ್ಘಾನಿಸ್ತಾದ ಬಗೆಗಿನ ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಗುಟ್ಟಾಗಿ ಉಗ್ರಗಾಮಿ ಸಂಘಟನೆಗಳಿಗೇ ನೆರವಾಗುತ್ತಿದ್ದಾರೆ. ಭಾರತದ ಕಾಶ್ಮೀರದಲ್ಲಿನ ಉಗ್ರವಾದಿಗಳಿಗೆ ನೆರವಾಗಲೂ ಆ ಹಣ ಬಳಸಿಕೊಳ್ಳುತ್ತಿರುವ ಆರೋಪ ಪ್ರಬಲವಾಗಿ ಕೇಳಿಬಂದಿತ್ತು. ಇದೇ ಕಾರಣದಿಂದಲೇ ಪಾಕಿಸ್ತಾನಕ್ಕೆ ನೆರವು ನೀಡಬಾರದೆಂದು ಭಾರತ ಸತತವಾಗಿ ಅಮೆರಿಕವನ್ನು ಒತ್ತಾಯಿಸುತ್ತ ಬಂದಿದೆ. ಹಾಗೆಂದು ಭಾರತದ ಒತ್ತಾಯದಿಂದ ಟ್ರಂಪ್ ಈ ಕ್ರಮ ಅನುಸರಿಸಿದ್ದಾರೆ ಎಂದು ಹೇಳಲಾಗದು. ಅಮೆರಿಕಕ್ಕೆ ತನ್ನದೇ ಕಾರಣಗಳಿವೆ. ತಾನು ಹೇಳಿದಂತೆ ಕೇಳದಿರುವವರಿಗೆ ನೆರವು ಏಕೆ ಕೊಡಬೇಕು ಎನ್ನುವುದು ಟ್ರಂಪ್ ನಿಲುವು. ತನ್ನ ನಿಲುವನ್ನು ಸಮರ್ಥಿಸದ ವಿಶ್ವಸಂಸ್ಥೆ, ಯುನೆಸ್ಕೊ ಮುಂತಾದ ಸಂಸ್ಥೆಗಳಿಗೆ ನೆರವು ಕಡಿಮೆ ಮಾಡುವುದಾಗಿ ಅವರು ಈಗಾಗಲೇ ಘೋಷಿಸಿದ್ದಾರೆ.

ಇದನ್ನೂ ಓದಿ : ಪಾಕ್ ನೆರವಿಗೆ ಕತ್ತರಿ ಹಾಕುವ ಟ್ರಂಪ್ ಬೆದರಿಕೆ, ಭಾರತಕ್ಕೆ ಹರ್ಷಪಡುವಂಥದ್ದೇನೂ ಅಲ್ಲ

ಆಫ್ಘಾನಿಸ್ತಾನದಲ್ಲಿ ತನ್ನ ಸೈನಿಕರ ಸುರಕ್ಷತೆ ಬಗ್ಗೆ ಟ್ರಂಪ್ ಅವರಿಗೆ ಆತಂಕವಿದೆ. ಒಂದೂವರೆ ದಶಕಕ್ಕೂ ಹೆಚ್ಚು ಕಾಲದಿಂದ ಅಮೆರಿಕದ ಸೈನಿಕರು ಅಲ್ಲಿದ್ದಾರೆ. ಆಫ್ಘಾನಿಸ್ತಾನದಲ್ಲಿ ಬೇಗ ಸ್ಥಿರತೆ ಸ್ಥಾಪಿತವಾಗಿ ಸೈನಿಕರನ್ನು ವಾಪಸು ಕರೆಸಿಕೊಳ್ಳುವಂತಾಗಬೇಕು ಎಂಬುದು ಟ್ರಂಪ್ ಆಶಯ. ಹಿಂದಿನ ಸರ್ಕಾರ ಹೇಗೆ ಅನವಶ್ಯವಾಗಿ ಸಂಪನ್ಮೂಲ ಹಾಳುಮಾಡಿದೆ ಎಂಬುದನ್ನು ಜನರಿಗೆ ತಿಳಿಸುವುದು ಅವರ ಮತ್ತೊಂದು ಉದ್ದೇಶ.

ಪಾಕಿಸ್ತಾನ ಹೇಗೆ ನೆರವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎನ್ನುವ ವಿಚಾರದಲ್ಲಿ ಭಾರತ ನೀಡಿರುವ ರಹಸ್ಯ ಮಾಹಿತಿಗಳು ಈ ನಿರ್ಧಾರ ತೆಗೆದುಕೊಳ್ಳಲು ಟ್ರಂಪ್ ಅವರಿಗೆ ನೆರವಾಗಿರಬಹುದು. ಅಮೆರಿಕದ ನೆರವು ಕಡಿತವಾಗುವುದರಿಂದ ಕಾಶ್ಮೀರ ಗಡಿಯಲ್ಲಿ ಗುಂಡಿನ ಸದ್ದು, ಉಗ್ರಗಾಮಿಗಳು ಗಡಿ ನುಸುಳುವುದು ಕಡಿಮೆ ಆಗಬಹುದು.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More