ಚೀನಾ-ಪಾಕಿಸ್ತಾನ ಭಾಯಿ ಭಾಯಿ ಲೆಕ್ಕಾಚಾರದ ಮೈತ್ರಿ ಎಷ್ಟು ಕಾಲ?

ಅಮೆರಿಕವು ಪಾಕಿಸ್ತಾನಕ್ಕೆ ನೆರವು ಸ್ಥಗಿತ ಮಾಡಿರುವುದಕ್ಕೆ ಭಾರತ ಸಂತೋಷಪಡಬೇಕಾದ್ದಿಲ್ಲ. ಇದರಿಂದಾಗಿ ಪಾಕಿಸ್ತಾನ ಮತ್ತು ಚೀನಾ ನಡುವೆ ಬಾಂಧವ್ಯ ಹೆಚ್ಚಿ ಭಾರತಕ್ಕೆ ಮತ್ತಷ್ಟು ಸಮಸ್ಯೆ ಮಾಡಬಹುದು ಎಂಬ ಊಹೆಯಲ್ಲೂ ಕೂಡ ಹುರುಳಿರಲಾರದು

ಅಮೆರಿಕದ ಆಡಳಿತಗಾರರು ಪಾಕಿಸ್ತಾನಕ್ಕೆ ನೀಡುತ್ತಿದ್ದ ನೆರವನ್ನು ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಚೀನಾ ಮತ್ತು ಪಾಕಿಸ್ತಾನದ ನಡುವಣ ಬಾಂಧವ್ಯದ ಒಳ ಹೊರಗುಗಳ ಬಗ್ಗೆ ಭಾರತದಲ್ಲಿ ಚರ್ಚೆ ಆರಂಭವಾಗಿದೆ. ಇದೀಗ ಪಾಕಿಸ್ತಾನದ ಆಡಳಿತಗಾರರು ಚೀನಾದ ಜೊತೆಗಿನ ಬಾಂಧವ್ಯ ವೃದ್ಧಿಗೆ ಯತ್ನಿಸುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ವಾಸ್ತವವಾಗಿ ಅಂಥ ಹೊಸ ಬೆಳವಣಿಗೆಗಳೇನೂ ಕಂಡು ಬಂದಿಲ್ಲವಾದರೂ ಪಾಕಿಸ್ತಾನದ ಪರೋಕ್ಷ ಪ್ರಚಾರ ಜೋರಾಗಿಯೇ ನಡೆಯುತ್ತಿದೆ. ಅಮೆರಿಕ ಸೃಷ್ಟಿಸಿರುವ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲು ಅದು ಚೀನಾ ಜೊತೆಗಿನ ಮೈತ್ರಿಯನ್ನು ಮುಂದೆಮಾಡುತ್ತಿದೆ. ಇದು ಮುಖ್ಯವಾಗಿ ಭಾರತವನ್ನು ಗಮನದಲ್ಲಿಟ್ಟುಕೊಂಡು ಮುಂದೊಡ್ಡಿದ ತಂತ್ರವಾಗಿದೆ.

ಹಾಗೆ ನೋಡಿದರೆ ಚೀನಾ ಮತ್ತು ಪಾಕಿಸ್ತಾನದ ನಡುವೆ ಹಲವಾರು ದಶಕಗಳಿಂದ ವಾಣಿಜ್ಯ ಸಂಬಂಧಗಳು ಇವೆ. ಭಾರತ ಈ ಎರಡೂ ದೇಶಗಳ ಜೊತೆ ಉತ್ತಮ ಬಾಂಧವ್ಯ ಪಡೆದಿಲ್ಲ. ಹೀಗಾಗಿ ಚೀನಾ ಮತ್ತು ಪಾಕಿಸ್ತಾನದ ನಡುವೆ ಸಹಜವಾಗಿಯೇ ಬಾಂಧವ್ಯ ಬೆಳೆದಿದೆ. ಚೀನಾ ಹಿಂದೆ ಪ್ರಬಲ ಆರ್ಥಿಕ ಶಕ್ತಿಯಾಗಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ಶಕ್ತಿಯಾಗಿ ಅಭಿವೃದ್ಧಿ ಹೊಂದಿದ ನಂತರ ಅದು ಪಾಕಿಸ್ತಾನವೂ ಸೇರಿದಂತೆ ಹಲವು ದೇಶಗಳ ಜೊತೆ ವಾಣಿಜ್ಯ ಬಾಂಧವ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. ವಿಚಿತ್ರ ಎಂದರೆ ಚೀನಾ ಮತ್ತು ಅಮೆರಿಕದ ನಡುವೆಯೂ ಬಾಂಧವ್ಯ ಉತ್ತಮವಾಗಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಪಾಕಿಸ್ತಾನವನ್ನು ಅಮೆರಿಕ ದಂಡಿಸ ಹೊರಟಿರುವುದರಿಂದಾಗಿ ಹಲವು ರೀತಿಯ ಊಹೆಗಳು ಮುಂಚೂಣಿಗೆ ಬಂದಿವೆ.

ಅಮೆರಿಕದಿಂದ ತೆರವಾದ ಸ್ಥಾನವನ್ನು ತುಂಬಲು ಚೀನಾ ಕೂಡಾ ಮುಂದಾಗಬಹುದು ಮತ್ತು ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆಯುವ ತಂತ್ರ ಅದರದ್ದಾಗಿರಬಹುದು ಎಂಬ ಲೆಕ್ಕಾಚಾರ ನಡೆಯುತ್ತಿದೆ. ಒಂದು ಕಡೆ ಅಮೆರಿಕ ಮತ್ತೊಂದು ಕಡೆ ಭಾರತಕ್ಕೆ ಮುಜುಗರ ಉಂಟುಮಾಡಲು ಚೀನಾಕ್ಕೆ ಅವಕಾಶ ಸಿಕ್ಕಿದೆ ಎನ್ನುವುದು ನಿಜ. ಪಾಕಿಸ್ತಾನವಂತೂ ಈ ಸಂದರ್ಭವನ್ನು ಬಳಸಿಕೊಳ್ಳಲು ಆರಂಭಿಸಿದೆ. ಆದರೆ ಚೀನಾ ಈ ಆಟದಲ್ಲಿ ಭಾಗವಹಿಸುವುದೇ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ.

ಈ ಹಿಂದೆ ಚೀನಾವು ಪಾಕಿಸ್ತಾನದ ಪರ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕೆಲವು ಸಂದರ್ಭಗಳಲ್ಲಿ ನಿಂತದ್ದಿದೆ. ಅರವತ್ತರ ದಶಕದಲ್ಲಿ ಪಾಕಿಸ್ತಾನ ಕಾಶ್ಮೀರ ಗಡಿಯಲ್ಲಿ ಸುಮಾರು 2500 ಮೈಲಿಗಳಷ್ಟು ಪ್ರದೇಶವನ್ನು ಚೀನಾಕ್ಕೆ ಕೊಟ್ಟದ್ದಿದೆ. ಕುಖ್ಯಾತ ಭಯೋತ್ಪದಕ ಮಸೂದ್ ಅಜರ್‍ನನ್ನು ಭಯೋತ್ಪಾದಕ ಎಂದು ಘೋಷಿಸಬೇಕೆಂಬ ಪ್ರಸ್ತಾವವನ್ನು ಭದ್ರತಾ ಮಂಡಳಿಯಲ್ಲಿ ಅಮೆರಿಕ ಮತ್ತು ಬ್ರಿಟನ್ ತಂದಾಗ ಚೀನಾ ವಿಟೊ ಚಲಾಯಿಸಿ ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸಮಾಡಿತು. ಅಮೆರಿಕ ನೆರವು ನಿಲ್ಲಿಸಿದಾಗಲೂ ಚೀನಾ ಅಸಮಾಧಾನ ವ್ಯಕ್ತಪಡಿಸಿತು. ಅಷ್ಟೇ ಅಲ್ಲ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವ ದೇಶ ಪಾಕಿಸ್ತಾನ ಎಂದು ಹೇಳಿತು. ಇವು ಹಿಂದಿನ ಉದಾಹರಣೆಗಳು. ಆದರೆ ಬಾಂಗ್ಲಾ ವಿಮೋಚನಾ ಹೋರಾಟದ ಸಂದರ್ಭದಲ್ಲಿ ಪಾಕಿಸ್ತಾನದ ಪರ ನಿಲ್ಲಲು ಚೀನಾ ನಿರಾಕರಿಸಿದ ಉದಾಹರಣೆಯೂ ಇದೆ. ಅಷ್ಟೇ ಅಲ್ಲ ಉಭಯ ದೇಶಗಳ ನಡುವಣ ಎಲ್ಲ ಯುದ್ಧಗಳ ಸಂದರ್ಭದಲ್ಲಿಯೂ ಚೀನಾವು ಭಾರತದ ವಿರೋಧಿ ಅಥವಾ ಪಾಕಿಸ್ತಾನದ ಪರವಾಗಿ ಸಕ್ರಿಯವಾದ ಪಾತ್ರವಹಿಸಿಲ್ಲ. ಹೀಗಾಗಿ ಚೀನಾ ಮುಂದೆಯೂ ತನ್ನ ನೀತಿಯನ್ನು ಬದಲಾಯಿಸಿಕೊಳ್ಳುವ ಸಾಧ್ಯತೆ ಇಲ್ಲ ಎಂದೇ ರಾಜಕೀಯ ತಜ್ಞರು ಹೇಳುತ್ತಾರೆ. ಚೀನಾದ ಈಗಿನ ಗುರಿ ವಿಶ್ವದ ಅತಿ ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆಯುವುದಾಗಿದೆ. ಹೀಗೆ ಮಾಡಬೇಕಾದರೆ ವಿಶ್ವದಾದ್ಯಂತ ವಾಣಿಜ್ಯ ಸಂಬಂಧಗಳು ವಿಸ್ತರಣೆಯಾಗಬೇಕು. ಚೀನಾ ಈ ಗುರಿಯಿಟ್ಟುಕೊಂಡು ಮುಂದುವರಿಯುತ್ತಿದೆ.

ಅಂದ ಮಾತ್ರಕ್ಕೆ ಚೀನಾ ಆಡಳಿತಗಾರರು ಪಾಕಿಸ್ತಾನದ ಜೊತೆಗಿನ ಬಾಂಧವ್ಯ ವೃದ್ಧಿಗೆ ಯತ್ನಿಸುವುದಿಲ್ಲ ಎಂದಲ್ಲ. ಈಗಾಗಲೇ ಉಭಯ ದೇಶಗಳ ನಡುವಣ ವಾಣಿಜ್ಯ ಬಾಂಧವ್ಯ ನೂರು ಬಿಲಿಯನ್ ಡಾಲರ್ ದಾಟಿದೆ. ಪಾಕಿಸ್ತಾನದ ಆರ್ಥಿಕ ಅಭಿವೃದ್ಧಿಗೆ ಭಾರಿ ಪ್ರಮಾಣದಲ್ಲಿ ನೆರವಾಗುತ್ತಿದೆ. ದೇಶದ ವಿದ್ಯುತ್ ಸಮಸ್ಯೆ ನೀಗಿಸುವ ದಿಸೆಯಲ್ಲಿ ಬೃಹತ್ ಯೋಜನೆಯೊಂದಕ್ಕೆ ನೆರವಾಗಿದೆ. ಪರಮಾಣು ಸ್ಥಾವರವೊಂದನ್ನು ನಿರ್ಮಿಸಿಕೊಟ್ಟಿದೆ. 2013ರಲ್ಲಿ ಆರ್ಥಿಕ ವಲಯ ರಚನೆಗೆ ಪಾಕಿಸ್ತಾನವು ಚೀನಾ ದೊಂದಿಗೆ ಒಪ್ಪಂದ ಮಾಡಿಕೊಂಡಿದೆ. 51.6 ಬಿಲಿಯನ್ ಡಾಲರ್ ಮೊತ್ತದ ಈ ಯೋಜನೆ ಪಾಕಿಸ್ತಾನವನ್ನು ಆರ್ಥಿಕವಾಗಿ ಮೇಲೆತ್ತಲಿದೆ ಎಂದು ಅಂದಾಜುಮಾಡಲಾಗಿದೆ. ಯೂರೋ ಏಷ್ಯಾದೊಂದಿಗೆ ವಾಣಿಜ್ಯ ಸಂಬಂಧಗಳನ್ನು ವಿಸ್ತರಿಸುವ ಉದ್ದೇಶದ ಭಾಗವಾಗಿ ಈ ಯೋಜನೆ ರೂಪಿತವಾಗಿದೆ.

ಇದನ್ನೂ ಓದಿ : ಪಾಕ್ ನೆರವಿಗೆ ಕತ್ತರಿ ಹಾಕುವ ಟ್ರಂಪ್ ಬೆದರಿಕೆ, ಭಾರತಕ್ಕೆ ಹರ್ಷಪಡುವಂಥದ್ದೇನೂ ಅಲ್ಲ

ಆದರೆ ಚೀನಾದ ಮಹತ್ವಾಕಾಂಕ್ಷೆಯ ಈ ಯೋಜನೆಯ ಭಾಗವಾಗಿ ನಿರ್ಮಾಣವಾಗುವ ರೈಲು ಮತ್ತು ರಸ್ತೆ ಸಂಪರ್ಕ ಆಕ್ರಮಿತ ಕಾಶ್ಮೀರದ ಗಡಿ ಭಾಗ, ಬಲೂಚಿಸ್ತಾನದ ಕೆಲವು ಪ್ರದೇಶಗಳಲ್ಲಿ ಹಾದು ಹೋಗುವುದರಿಂದ ಈಗಾಗಲೇ ಸಮಸ್ಯೆ ಉದ್ಭವವಾಗಿದೆ. ಈ ಪ್ರದೇಶದ ಜನರು ಸ್ವತಂತ್ರ ಬಲೂಚಿಸ್ತಾನಕ್ಕೆ ಹೋರಾಡುತ್ತಿದ್ದಾರೆ. ಅದೇ ರೀತಿ ಕ್ಸಿನ್‍ಜಿಯಾಂಗ್ ಪ್ರದೇಶದಲ್ಲಿ ಉಗರ್ ಮುಸ್ಲಿಮರು ತಮ್ಮ ಹಕ್ಕುಗಳಿಗಾಗಿ ಹೋರಾಟಮಾಡುತ್ತಿದ್ದಾರೆ. ಈ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಸರಿಯಿಲ್ಲದಿರುವುದರಿಂದ ಉದ್ದೇಶಿತ ಯೋಜನೆ ಜಾರಿ ಕಷ್ಟವಾಗಿದೆ. ಈ ಯೋಜನೆ ಜಾರಿಗೆ ಬಂದರೆ ತಮಗೆ ಉಳಿಗಾಲವಿಲ್ಲ, ಚೀನೀ ಜನರೇ ಬಂದು ನೆಲೆಸುತ್ತಾರೆ ಎಂಬ ಅನುಮಾನ ಈ ಪ್ರದೇಶದ ಜನರಲ್ಲಿ ಉಂಟಾಗಿದೆ. ಈ ಯೋಜನೆ ಕಾಮಗಾರಿಯಲ್ಲಿ ಕೆಲಸಮಾಡುತ್ತಿದ್ದ ಚೀನಾದ ಕೆಲವು ಕಾರ್ಮಿಕರು ಗಾಯಗೊಂಡಿದ್ದಾರೆ. ಇದು ಚೀನಾದ ಆಡಳಿತಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಈ ಯೋಜನೆ ಜಾರಿ ಬಗ್ಗೆ ಸಂಶಯ ಬಂದಿದೆ. ಇದೇನೇ ಇದ್ದರೂ ಚೀನಾ ದೇಶ ಪುಕ್ಕಟೆಯಾಗಿಯಂತೂ ಯಾವುದೇ ಯೋಜನೆ ಕೈಗೆತ್ತಿಕೊಂಡಿರಲಾರದು. ಅಂದರೆ ಸಾಲದ ರೂಪದಲ್ಲಿ ಹಣಕೊಟ್ಟು ವಸೂಲಿಗೆ ಇಳಿಯುವುದಂತೂ ನಿಜ. ಚೀನಾಕ್ಕೆ ಅನುಕೂಲಮಾಡಿಕೊಟ್ಟು ಪಾಕಿಸ್ತಾನ ಸಾಲಗಾರ ದೇಶವಾಗುವ ಸಾಧ್ಯತೆಯನ್ನು ಅಲ್ಲಿನ ಆಡಳಿತಗಾರರು ಅಂದಾಜು ಮಾಡಿದಂತೆ ಕಾಣುತ್ತಿಲ್ಲ. ಇದಕ್ಕೆ ಕಾರಣ ಪಾಕಿಸ್ತಾನದಲ್ಲಿ ರಾಜಕೀಯ ಸ್ಥಿರತೆ ಇಲ್ಲದಿರುವುದಾಗಿದೆ.

ಈ ಹಿನ್ನೆಲೆಯಲ್ಲಿ ಚೀನಾ ಮತ್ತು ಪಾಕಿಸ್ತಾನದ ಸಂಬಂಧ ಭಾರತಕ್ಕೆ ಸಮಸ್ಯೆಯಾಗುವ ಸಾಧ್ಯತೆ ಇಲ್ಲ. ಆದರೆ ಸಮಸ್ಯೆ ಇರುವುದೇ ಪಾಕ್ ಮತ್ತು ಅಮೆರಿಕ ನಡುವಣ ಸಂಬಂಧದಿಂದ. ಸದ್ಯಕ್ಕೆ ಬಾಂಧವ್ಯದಲ್ಲಿ ಬಿರುಕು ಕಾಣಿಸಿಕೊಂಡಿರಬಹುದು. ಆದರೆ ಅದು ಮತ್ತೆ ಮಾಮೂಲಿ ಸ್ಥಿತಿಗೆ ಬರುವ ಸಾಧ್ಯತೆ ಇಲ್ಲ ಎಂದು ಹೇಳುವಂತಿಲ್ಲ. ಏಕೆಂದರೆ ಆಫ್ಘಾನಿಸ್ತಾನದ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ. ಪಾಕಿಸ್ತಾನದ ಸಹಕಾರ ಇಲ್ಲದೆ ಆ ಸಮಸ್ಯೆ ಬಗೆಹರಿಯಲಾರದು. ಈಗ ಅಮೆರಿಕವು ಪಾಕ್‍ಗೆ ಬೆದರಿಕೆ ಹಾಕಿರುವುದೂ ಆಫ್ಘಾನಿಸ್ತಾನದಲ್ಲಿ ಭಯೋತ್ಪಾದನೆ ನಿಲ್ಲದಿರುವ ಹಿನ್ನೆಲೆಯಲ್ಲಿಯೇ. ಹೀಗಾಗಿ ಭಾರತ ಈ ಬೆಳವಣಿಗೆಗಳನ್ನು ಎಚ್ಚರಿಕೆಯಿಂದ ಗಮನಿಸಿ ಅಗತ್ಯ ಹೆಜ್ಜೆಗಳನ್ನು ಇಡಬೇಕಿದೆ.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More