ಆಫ್ಘಾನಿಸ್ತಾನದ ರಕ್ತಪಾತಕ್ಕೆ ಯಾರು ಕಾರಣ? ಪಾಕ್ ತಾಲಿಬಾನ್ ಅಥವಾ ಐಎಸ್?

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಹಿಂಸಾಚಾರ ಹೆಚ್ಚುತ್ತಿದೆ. ಇದಕ್ಕೆ ಎರಡು ಕಾರಣ ಇರಬಹುದು; ಸಿರಿಯಾದಲ್ಲಿ ಸೋಲುಕಂಡ ಐಎಸ್ ಉಗ್ರರು ಇಲ್ಲಿ ನೆಲೆ ಕಂಡುಕೊಂಡಿರಬಹುದು, ಅಮೆರಿಕದ ಸ್ನೇಹ ಕಳೆದುಕೊಂಡಿರುವ ಪಾಕ್ ಸೇಡು ತೀರಿಸಿಕೊಳ್ಳಲು ತಾಲಿಬಾನ್ ಉಗ್ರರಿಗೆ ಬೆಂಬಲ ನೀಡುತ್ತಿರಲೂಬಹುದು

ಆಫ್ಘಾನಿಸ್ತಾನದಲ್ಲಿ ಭಯೋತ್ಪಾದಕರ ರಕ್ತದ ಓಕುಳಿ ಮುಂದುವರಿದಿದೆ. ಶನಿವಾರ ಕಾಬೂಲ್‍ನ ಕೇಂದ್ರ ಪ್ರದೇಶದಲ್ಲಿ ನಡೆದ ಬಾಂಬ್ ದಾಳಿಯಲ್ಲಿ 160 ಮಂದಿ ಸೈನಿಕರು ಸತ್ತ ಘಟನೆ ಮರೆಯುವ ಮೊದಲೇ ಮತ್ತೆ ಭಯೋತ್ಪಾದಕರು ಸೇನಾನೆಲೆಯೊಂದರ ಮೇಲೆ ಆತ್ಮಹತ್ಯಾ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಹನ್ನೊಂದು ಮಂದಿ ಸೈನಿಕರು ಸತ್ತಿದ್ದಾರೆ. ಒಂದು ವಾರದ ಅವಧಿಯಲ್ಲಿ ಸೈನಿಕರೂ ಸೇರಿದಂತೆ ಇನ್ನೂರಕ್ಕೂ ಹೆಚ್ಚು ಜನರು ಸತ್ತಿದ್ದು, ಆಫ್ಘಾನಿಸ್ತಾನ ಮತ್ತೆ ತಾಲಿಬಾನ್ ಆಡಳಿತದ ದಿನಗಳಿಗೆ ಮರಳುತ್ತಿದೆಯೇನೋ ಎನ್ನುವ ಅನುಮಾನ ಬರುತ್ತಿದೆ.

ಸೇನಾನೆಲೆಗಳ ಮೇಲೆ ಮತ್ತೆ-ಮತ್ತೆ ತಾಲಿಬಾನ್ ದಾಳಿ ನಡೆಯುತ್ತಿದ್ದು, ಅವುಗಳನ್ನು ತಡೆಯುವಲ್ಲಿ ವಿಫಲವಾದುದರ ಜವಾಬ್ದಾರಿ ಹೊತ್ತು ಸೇನಾ ಮುಖ್ಯಸ್ಥ ಶಾ ಶಮೀಮ್ ಮತ್ತು ರಕ್ಷಣಾ ಸಚಿವ ಅಬ್ದುಲ್ಲಾ ಹಬೀಬಿ ರಾಜೀನಾಮೆ ನೀಡಿದ್ದು, ದೇಶ ರಾಜಕೀಯ ಅಸ್ಥಿರತೆಯತ್ತ ಹೊರಳಿದಂತಿದೆ. ಕಳೆದ ವರ್ಷ ಏಳು ಸಾವಿರ ಮಂದಿ ಸೈನಿಕರು, 900 ನಾಗರಿಕರು ಸತ್ತಿದ್ದಾರೆ. ಈ ವರ್ಷ ನವೆಂಬರ್ ವೇಳೆಗೆ ಸತ್ತಿರುವ ನಾಗರಿಕರ ಸಂಖ್ಯೆ 2,600 ಮತ್ತು ಸೈನಿಕರ ಸಂಖ್ಯೆ ಇದೇ ಅವಧಿಯಲ್ಲಿ 1,500 ಎಂದು ತಿಳಿದುಬಂದಿದೆ. ಈ ಸಾವಿನ ಸಂಖ್ಯೆ ನೋಡಿದರೆ, ತಾಲಿಬಾನ್ ಮತ್ತೆ ದೇಶದ ಮೇಲೆ ಅಧಿಕಾರ ಸ್ಥಾಪಿಸುತ್ತಿದೆಯೇನೋ ಎಂಬ ಅನುಮಾನ ಬರುತ್ತಿದೆ.

ಸಿರಿಯಾದಲ್ಲಿ ಐಎಸ್ ಉಗ್ರವಾದಿಗಳನ್ನು ಬಹುಪಾಲು ನಾಶಮಾಡಲಾಗಿದೆ. ಕೆಲವರು ಪಲಾಯನ ಮಾಡಿದ್ದಾರೆ. ಅವರೆಲ್ಲ ಆಫ್ಘಾನಿಸ್ತಾನದಲ್ಲಿ ನೆಲೆ ಕಂಡುಕೊಂಡರೇ ಎಂಬ ಅನುಮಾನ ಬರಲಾರಂಭಿಸಿದೆ. ಹಾಗೆ ನೋಡಿದರೆ, ಐಎಸ್‍ನ ಹುಟ್ಟು ಆದದ್ದೇ ಆಫ್ಘಾನಿಸ್ತಾನದಲ್ಲಿ. ಅಲ್ ಖೈದಾದ ಭಾಗವಾಗಿ ಐಎಸ್ ಇರಾಕ್‍ನಲ್ಲಿ ಆರಂಭವಾಯಿತು. ಕ್ರಮೇಣ ಕೆಲವು ಉಗ್ರರು ಅಲ್‍ಖೈದಾದಿಂದ ಹೊರಹೋಗಿ ಐಎಸ್ ಸ್ಥಾಪಿಸಿದರು. ಪ್ರತ್ಯೇಕ ದೇಶ ಸ್ಥಾಪಿಸುವಲ್ಲಿ ವಿಫಲರಾದ ಅವರು ಮತ್ತೆ ಆಫ್ಘಾನಿಸ್ತಾನಕ್ಕೆ ಮರಳಿರುವ ಸಾಧ್ಯತೆ ಇದೆ. ಹೇಗಿದ್ದರೂ, ತಾಲಿಬಾನ್ ಆಫ್ಘಾನಿಸ್ತಾನದಲ್ಲಿ ಇನ್ನೂ ಬಲಿಷ್ಠವಾಗಿದೆ. ಅದರ ಜೊತೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಸಾಧ್ಯತೆ ಇದೆ.

ಆದರೆ, ಆಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿ ಸ್ವಲ್ಪ ಗೊಂದಲಕಾರಿಯಾಗಿದೆ. ಆಫ್ಘಾನಿಸ್ತಾನದ ಪರಿಸ್ಥಿತಿ ಬದಲಾವಣೆಯಲ್ಲಿ ಪಾಕಿಸ್ತಾನದ ಪಾತ್ರ ಇರಬಹುದಾದ ಸಾಧ್ಯತೆ ಇದೆ. ಆಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡಿದ್ದ ಸೋವಿಯತ್ ಸೇನೆಯನ್ನು ತೆರವು ಮಾಡಿಸಲು ಅಮೆರಿಕವು ಪಾಕಿಸ್ತಾನದ ನೆರವನ್ನು ಪಡೆದಿತ್ತು. ಆಫ್ಘಾನಿಸ್ತಾನದ ಮುಜಾಹಿದ್ದೀನ್ ಉಗ್ರವಾದಿಗಳಿಗೆ ಜೊತೆಗೆ ಪಾಕಿಸ್ತಾನಕ್ಕೆ ಅಪಾರ ಪ್ರಮಾಣದಲ್ಲಿ ಮಿಲಿಟರಿ ನೆರವು ನೀಡಿತ್ತು. ಸೋವಿಯತ್ ಸೇನೆ ವಾಪಸು ಹೋಗುವಂತೆ ಮಾಡುವಲ್ಲಿ ಮುಜಾಹಿದ್ದೀನ್‍ಗಳು ಸಫಲರಾದರು. ಆದರೆ, ಮುಂದೆ ಅವರೇ ತಾಲಿಬಾನ್‍ಗಳ ಹೆಸರಿನಲ್ಲಿ ಸರ್ಕಾರ ರಚಿಸಿ ಇಸ್ಲಾಮಿಕ್ ಮಾದರಿ ಆಡಳಿತ ನಡೆಸುತ್ತ ಜನವಿರೋಧಿಯಾದರು. ಮತ್ತೆ ಅಮೆರಿಕವು ತಾಲಿಬಾನ್ ಆಡಳಿತವನ್ನು ಕಿತ್ತೊಗೆಯಲು ಪಾಕಿಸ್ತಾನಕ್ಕೆ ಮಿಲಿಟರಿ ನೆರವು ಮುಂದುವರಿಸಿತು.

ಇದನ್ನೂ ಓದಿ : ಪಾಕ್ ನೆರವಿಗೆ ಕತ್ತರಿ ಹಾಕುವ ಟ್ರಂಪ್ ಬೆದರಿಕೆ, ಭಾರತಕ್ಕೆ ಹರ್ಷಪಡುವಂಥದ್ದೇನೂ ಅಲ್ಲ

ತಾಲಿಬಾನ್ ಪದಚ್ಯುತಿಯ ನಂತರ ಪಾಕಿಸ್ತಾನ, ತನ್ನದೇ ಆದ ತಾಲಿಬಾನ್ ಬಳಸಿಕೊಂಡು ಆಫ್ಘಾನಿಸ್ತಾನವನ್ನು ನಿಯಂತ್ರಿಸಲು ಆರಂಭಿಸಿತು. ಅಮೆರಿಕದ ಸೇನೆಗೆ ಸಮಸ್ಯೆ ಬಂದಿದ್ದೇ ಇಲ್ಲಿ. ಅಮೆರಿಕದ ನೆರವನ್ನೇ ಪಡೆದುಕೊಂಡು ಆಫ್ಘಾನಿಸ್ತಾನದಲ್ಲಿ ಹೋರಾಡುತ್ತಿರುವ ವಿವಿಧ ಉಗ್ರವಾದಿ ಬಣಗಳಿಗೆ ಬೆಂಬಲ ನೀಡುತ್ತ ಅಮೆರಿಕದ ಸೇನೆಯನ್ನೇ ಬಲಿತೆಗೆದುಕೊಳ್ಳುತ್ತಿತ್ತು. ಈ ವಿಚಾರ ಅಮೆರಿಕ ಸರ್ಕಾರಕ್ಕೆ ತಿಳಿದಿದ್ದರೂ ಸುಮ್ಮನಿರಬೇಕಾಗಿತ್ತು. ಆದರೆ, ಅಮೆರಿಕದ ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಈ ವಿಚಾರ ತಿಳಿದ ತಕ್ಷಣ ಪಾಕಿಸ್ತಾನಕ್ಕೆ ಈ ವರ್ಷ ನೀಡಬೇಕಾಗಿದ್ದ 255 ಮಿಲಿಯನ್ ಡಾಲರ್ ಮೌಲ್ಯದ ಮಿಲಿಟರಿ ನೆರವನ್ನು ನಿಲ್ಲಿಸಲು ಆದೇಶ ನೀಡಿದ್ದಾರೆ. ಸಹಜವಾಗಿ ಪಾಕಿಸ್ತಾನಕ್ಕೆ ಅಮೆರಿಕದ ಈ ನಡೆ ಕೋಪ ತರಿಸಿದೆ. ಬಹುಶಃ ಅಮೆರಿಕಕ್ಕೆ ಪಾಠ ಕಲಿಸಲೆಂದೇ ಅದು ತಾಲಿಬಾನ್ ಮತ್ತು ಐಎಸ್‍ಗೆ ನೆರವಾಗುತ್ತಿರುವ ಸಾಧ್ಯತೆ ಇದೆ. ಹೀಗಾಗಿಯೇ, ಈಗ ಉಗ್ರರ ದಾಳಿ ಘಟನೆಗಳು ಹೆಚ್ಚಿವೆ ಎಂದು ಊಹಿಸಲಾಗಿದೆ.

ಪಾಕಿಸ್ತಾನವನ್ನು ಓಲೈಸುವಂತೆಯೂ ಇಲ್ಲ, ವಿರೋಧಿಸುವಂತೆಯೂ ಇಲ್ಲ. ಇದೊಂದು ರೀತಿಯಲ್ಲಿ ಅಮೆರಿಕಕ್ಕೆ ಇಕ್ಕಟ್ಟಿನ ಪರಿಸ್ಥಿತಿ. ಅಮೆರಿಕ ಈ ಬೆಳವಣಿಗೆಯನ್ನು ಹೇಗೆ ನಿರ್ವಹಿಸುತ್ತದೆ ಎನ್ನುವುದು ಕುತೂಹಲಕಾರಿ. ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಅವರು ದೇಶದಲ್ಲಿ ಭಯೋತ್ಪಾದನೆಯನ್ನುತಡೆಯುವಲ್ಲಿ ವಿಫಲರಾಗಿರುವುದರಿಂದ ಉಂಟಾದ ಸಮಸ್ಯೆ ಇದು. ಪಾಕಿಸ್ತಾನಕ್ಕೆ ನೆರವು ಕಡಿತ ಮಾಡಿದ್ದಕ್ಕೆ ಭಾರತ ಖುಷಿಪಟ್ಟಿತ್ತು. ಆದರೆ, ಈ ಬೆಳವಣಿಗೆ ನಿಜವಾಗಿಯೂ ಭಾರತಕ್ಕೆ ಆತಂಕಕಾರಿ ವಿಚಾರ ಅನ್ನುವುದರಲ್ಲಿ ಅನುಮಾನವಿಲ್ಲ.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More