ಫಿಡಲ್ ಕ್ಯಾಸ್ಟ್ರೋ ಪುತ್ರನಿಗೆ ಆತ್ಮಹತ್ಯೆ ಮಾಡಿಕೊಳ್ಳುವಂಥದ್ದು ಏನಾಯಿತು?

ಕ್ಯೂಬಾದ ಬಿಡುಗಡೆಗಾಗಿ ಫಿಡಲ್ ಕ್ಯಾಸ್ಟ್ರೋ ನಡೆಸಿದ ಹೋರಾಟ ಜಗತ್ತಿನಾದ್ಯಂತ ಹೆಸರಾಗಿದೆ. ಕ್ಯಾಸ್ಟ್ರೋ ಅವರ ಹಿರಿಯ ಮಗ ಫಿಡಿಲಿಟೋ ಕ್ಯಾಸ್ಟ್ರೋ ಡಿಯಾಜ್ ಬಲಾರ್ಟ್ ಈಗ ಸುದ್ದಿಯಾಗಿದ್ದು, ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕ್ಯೂಬಾದ ಮಾಧ್ಯಮಗಳು ವರದಿ ಮಾಡಿವೆ

ಕ್ಯೂಬಾದ ಅಧ್ಯಕ್ಷರಾಗಿದ್ದ ಕ್ರಾಂತಿಕಾರಿ ನಾಯಕ ಫಿಡಲ್ ಕ್ಯಾಸ್ಟ್ರೋ ಅವರ ಹಿರಿಯ ಪುತ್ರ ಕ್ಯಾಸ್ಟ್ರೋ ಫಿಡಲಿಟೋ ಡಿಯಾಜ್ ಬಲಾರ್ಟ್(68) ಕಳೆದ ಕೆಲವು ವರ್ಷಗಳಿಂದ ಖಿನ್ನತೆಯಿಂದ ನರಳುತ್ತಿದ್ದು, ಹವಾನಾದ ಆಸ್ಪತ್ರೆಯಲ್ಲಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅವರು ಕ್ಯೂಬಾದ ಪರಮಾಣು ವಿದ್ಯುತ್ ಕಾರ್ಯಕ್ರಮದ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು.

ಫಿಡಲಿಟೋ ಅವರು ಕ್ಯಾಸ್ಟ್ರೋ ಅವರನ್ನು ಹೋಲುತ್ತಿದ್ದರು. ಇಷ್ಟು ಬಿಟ್ಟರೆ ಕ್ಯಾಸ್ಟ್ರೋ ಅವರ ಯಾವುದೇ ಗುಣ ಅವರಲ್ಲಿ ಇರಲಿಲ್ಲ. ಕ್ರಾಂತಿಗೂ ಅವರಿಗೂ ಸಂಬಂಧವೇ ಇರಲಿಲ್ಲ. ಅವರೊಬ್ಬ ವಿಜ್ಞಾನಿಯಾಗಿ ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಕ್ಯಾಸ್ಟ್ರೋ ಅವರು ತಮ್ಮ ಮಗನನ್ನು ದೇಶದಲ್ಲಿಯೇ ಉಳಿಸಿಕೊಂಡು ಬೆಳೆಸಿದ ಬಗೆ ಮಾತ್ರ ರೋಚಕವಾಗಿದೆ.

ಕ್ಯಾಸ್ಟ್ರೋ ಅವರು ಕ್ರಾಂತಿಯ ನಂತರ ಕ್ಯೂಬಾದ ಅಧ್ಯಕ್ಷರಾಗುವ ಮೊದಲೇ ಅವರ ಮೊದಲ ಪತ್ನಿ ಮಿರ್ತಾ ಡಿಯಾಜ್ ಬಲಾಟ್ ಅವರನ್ನು ತ್ಯಜಿಸಿದ್ದರು. ವಿಚಿತ್ರ ಎಂದರೆ, ಅವರು ಕ್ರಾಂತಿಯ ವಿರೋಧಿಯಾಗಿದ್ದರು. ಕ್ರಾಂತಿಯ ಕೊನೆಯ ದಿನಗಳಲ್ಲಿ ವಿರೋಧಿಗಳ ಜೊತೆ ಗುರುತಿಸಿಕೊಂಡಿದ್ದ ಅವರ ಪತ್ನಿ ಮಿರ್ತಾ ಮತ್ತು ಅವರ ಇತರ ಸಂಬಂಧಿಕರು ಅಮೆರಿಕದಲ್ಲಿ ಭೂಗತರಾದರು. ರಹಸ್ಯವಾಗಿ ಇತರ ಕ್ಯೂಬನ್ನರ ಜೊತೆ ಅಮೆರಿಕದ ಮಿಯಾಮಿಗೆ ವಲಸೆ ಹೋದರು. ತಮ್ಮ ಪುತ್ರ ಅಮೆರಿಕಕ್ಕೆ ಹೋಗಿದ್ದನ್ನು ಕ್ಯಾಸ್ಟ್ರೋ ಸಹಿಸಲಿಲ್ಲ. ಮಗನನ್ನು ಅಲ್ಲಿಂದ ಕರೆತರುವ ಅವರ ಯತ್ನಗಳು ವಿಫಲವಾದುವು. ಅಂತಿಮವಾಗಿ, ಮೆಕ್ಸಿಕೋದಲ್ಲಿ ತಮ್ಮ ಪತ್ನಿ ಜೊತೆ ಪ್ರವಾಸದಲ್ಲಿದ್ದಾಗ ಪುತ್ರ ಡಿಯಾಜ್ ಬಲಾರ್ಟ್‍ನನ್ನು ಅಪಹರಿಸಿ ಕ್ಯೂಬಾಕ್ಕೆ ಕರೆತರಲಾಯಿತು. ಆ ನಂತರ ಡಿಯಾಜ್ ಬಲಾಟ್ ಕ್ಯೂಬಾದಲ್ಲಿಯೇ ಇದ್ದು, ನಂತರ ಪರಮಾಣು ವಿಜ್ಞಾನದಲ್ಲಿ ಹೆಚ್ಚಿನ ಶಿಕ್ಷಣಕ್ಕಾಗಿ ಮಾಸ್ಕೋಗೆ ತೆರಳಿದರು. ಶಿಕ್ಷಣ ಮುಗಿದ ನಂತರ ಪುತ್ರನನ್ನು ಕ್ಯೂಬಾದ ಪರಮಾಣು ಇಂಧನ ಕಾರ್ಯಕ್ರಮದ ನಿರ್ದೇಶಕರನ್ನಾಗಿ ಮಾಡಲಾಯಿತು.

ಆಗಿನ ಸೋವಿಯತ್ ಒಕ್ಕೂಟದ ನೆರವಿನಿಂದ ಆ ಪರಮಾಣು ಶಕ್ತಿ ಉತ್ಪಾದನಾ ಕಾರ್ಯಕ್ರಮ ನಡೆಯುತ್ತಿತ್ತು. ಸೋವಿಯತ್ ಒಕ್ಕೂಟ ಒಡೆದುಹೋದ ನಂತರ ಕ್ಯೂಬಾದ ಪರಮಾಣು ಕಾರ್ಯಕ್ರಮಕ್ಕೆ ಅಡ್ಡಿಯಾಯಿತು. ಆಗ ಆ ಕಾರ್ಯಕ್ರಮವನ್ನು ಸ್ವತಂತ್ರವಾಗಿ ನಿರ್ವಹಿಸುವ ಜವಾಬ್ದಾರಿಯನ್ನು ಡಿಯಾಜ್ ಬಲಾರ್ಟ್‍ಗೆ ವಹಿಸಲಾಯಿತು. ಕೆಲವು ವರ್ಷಗಳ ನಂತರ ಕ್ಯಾಸ್ಟ್ರೋ ಆ ಕಾರ್ಯಕ್ರಮ ರದ್ದು ಮಾಡಿ, ತಮ್ಮ ಪುತ್ರನನ್ನು ಆ ಕೆಲಸದಿಂದ ವಜಾ ಮಾಡಿದರು. ಆ ಕಾರ್ಯಕ್ರಮ ಮುಂದುವರಿಸಲು ತಮ್ಮ ಪುತ್ರ ಅಸಮರ್ಥ ಎಂದು ಕ್ಯಾಸ್ಟ್ರೋ ಆಗ ಬಹಿರಂಗವಾಗಿ ಘೋಷಿಸಿದ್ದರು. ಆನಂತರ ಅವರ ಪುತ್ರ ಡಿಯಾಜ್ ಬಲಾರ್ಟ್ ವಿಜ್ಞಾನ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ಕ್ಯಾಸ್ಟ್ರೋ ಅಸ್ವಸ್ಥಗೊಂಡು ಅಧಿಕಾರ ತ್ಯಜಿಸಿದ ನಂತರ, ಅವರ ತಮ್ಮ ರಾಲ್ ಕಾಸ್ಟ್ರೋ ದೇಶದ ಅಧ್ಯಕ್ಷರಾದರು. ನಂತರ ರಾಲ್ ಅವರು ಡಿಯಾಜ್ ಬಲಾರ್ಟ್ ಅವರನ್ನು ಮತ್ತೆ ಪರಮಾಣು ವಿದ್ಯುತ್ ವಿಚಾರದಲ್ಲಿ ಸಲಹೆಗಾರನನ್ನಾಗಿ ನೇಮಕ ಮಾಡಿಕೊಂಡರು. ಈ ಮಧ್ಯೆ, 2016ರಲ್ಲಿ ಕ್ಯಾಸ್ಟ್ರೋ ನಿಧನರಾದರು. ಪುತ್ರ ಡಿಯಾಜ್ ಬಲಾಟ್ ಖಿನ್ನತೆಗೆ ಒಳಗಾಗಿ ಆಸ್ಪತ್ರೆ ಸೇರಿದ್ದರು. ಡಿಯಾಜ್ ಬಲಾಟ್ ಸಾವಿಗೆ ಕ್ಯೂಬಾ ಸರ್ಕಾರ ಅಷ್ಟೇನೂ ಮಹತ್ವ ನೀಡಿಲ್ಲ. ಪತ್ರಿಕೆಗಳೂ ನಾಲ್ಕೈದು ಪ್ಯಾರಾದಲ್ಲಿ ಆ ಸುದ್ದಿಯನ್ನು ಪ್ರಕಟಿಸಿವೆ.

ಇದನ್ನೂ ಓದಿ : ಪ್ಯಾಲೆಸ್ಟೇನ್ ನಾಯಕ ಅರಾಫತ್‌ರನ್ನು ಟೂತ್‌ಪೇಸ್ಟ್‌ಗೆ ವಿಷ ಬೆರೆಸಿ ಕೊಲ್ಲಲಾಯಿತೇ?

ವಿಶ್ವದ ಪ್ರಸಿದ್ಧ ಕ್ರಾಂತಿಕಾರಿ ಕ್ಯಾಸ್ಟ್ರೋ ಅವರ ವೈಯಕ್ತಿಕ ಜೀವನದ ಮಾಹಿತಿಗಳು ಅಷ್ಟಾಗಿ ಬಹಿರಂಗವಾಗಿಲ್ಲ. ಅದನ್ನು ಕ್ಯೂಬಾ ಸರ್ಕಾರ ರಹಸ್ಯವಾಗಿಯೇ ಇಟ್ಟಿದೆ. ಅವರ ಕಿರಿಯ ಪತ್ನಿ ಸೋಟೋ ಡೆಲ್ ವಾಲ್ಲೆ ಮತ್ತು ಅವರ ಐದು ಮಕ್ಕಳು ಕ್ಯೂಬಾದಲ್ಲಿಯೇ ಇದ್ದಾರೆಂಬ ಮಾಹಿತಿ ಇದೆ. ಮೊದಲ ಮತ್ತು ಎರಡನೇ ಪತ್ನಿ ಮತ್ತು ಮಕ್ಕಳು ಅಮೆರಿಕದ ಮಿಯಾಮಿಯ ಕ್ಯೂಬಾ ನಿರಾಶ್ರಿತರ ಪ್ರದೇಶದಲ್ಲಿದ್ದಾರೆ. ಅವರಲ್ಲಿ ಕೆಲವರು ಜನಪ್ರತಿನಿಧಿಗಳಾಗಿಯೂ ಆಯ್ಕೆಯಾಗಿದ್ದಾರೆ. ಅವರೆಲ್ಲರೂ ಕ್ಯಾಸ್ಟ್ರೋ ಅವರ ವಿರೋಧಿಗಳು ಮತ್ತು ಅಮೆರಿಕ ಪರವಾದಿಗಳಾಗಿರುವುದು ವಿಶೇಷ. ಕ್ಯಾಸ್ಟ್ರೋಗೆ ಪ್ರೀತಿಪಾತ್ರರಾಗಿದ್ದ ಅವರ ತಂಗಿ ಜುನ್ನಿತ್ ಕೂಡ ಈಗ ಅಮೆರಿಕದ ಫ್ಲೋರಿಡಾದಲ್ಲಿ ನೆಲೆಸಿದ್ದಾರೆ. ಕ್ಯೂಬಾದ ಬಿಡುಗಡೆಗಾಗಿ ಕ್ಯಾಸ್ಟ್ರೋ ನಡೆಸಿದ ಹೋರಾಟ ಜಗತ್ತಿನಾದ್ಯಂತ ಹೆಸರಾಗಿದೆ. ಹೀಗಾಗಿಯೆ ಅವರು ಪ್ರಸಿದ್ಧ ಕ್ರಾಂತಿಕಾರಿ. ಆದರೆ ಕ್ರಾಂತಿಗಾಗಿ ನಡೆಸಿದ ಹೋರಾಟದಿಂದ ಅವರ ವೈಯುಕ್ತಿಯ ಜೀವನ ನೆಮ್ಮದಿಯಿಂದ ಕೂಡಿರಲಿಲ್ಲ. ಅಷ್ಟೇ ಅಲ್ಲ, ಅವರ ಕುಟುಂಬ ಛಿದ್ರವಾಯಿತು ಎನ್ನುವುದು ವಿಪರ್ಯಾಸ.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More