ಸಂಸತ್‌ಗೆ ಬೀಗ ಹಾಕಿಸಿದ ಅಧ್ಯಕ್ಷ; ಸುಪ್ರೀಂ ಕೋರ್ಟ್‌ನಲ್ಲೇ ಉಳಿದ ನ್ಯಾಯಮೂರ್ತಿ

ಮಾಲ್ಡೀವ್ಸ್ ಸುಪ್ರೀಂ ಕೋರ್ಟಿನ ಆದೇಶ ಪಾಲಿಸಲು ಅಲ್ಲಿನ ಅಧ್ಯಕ್ಷ ಯಮೀನ್ ನಿರಾಕರಿಸುತ್ತಿರುವುದು ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೊದಲು ವಜಾ ಆಗುತ್ತಾರೋ, ಅಧ್ಯಕ್ಷರು ವಜಾ ಆಗುತ್ತಾರೋ ಎಂಬ ಕುತೂಹಲ ಸೃಷ್ಟಿಯಾಗಿದೆ

ಭಾರತದ ನೆರೆಯ ದ್ವೀಪರಾಷ್ಟ್ರ ಮಾಲ್ಡೀವ್ಸ್‌ನಲ್ಲಿ ಸರ್ಕಾರ ಮತ್ತು ಸುಪ್ರೀಂ ಕೋರ್ಟಿನ ನಡುವೆ ನಡೆಯುತ್ತಿರುವ ಸಂಘರ್ಷ ಇದೀಗ ಬಿಕ್ಕಟ್ಟಿನ ಸ್ವರೂಪ ಪಡೆದಿದೆ. ತಮ್ಮನ್ನು ಅಧ್ಯಕ್ಷ ಸ್ಥಾನದಿಂದ ಸುಪ್ರೀಂ ಕೋರ್ಟ್ ಕಿತ್ತುಹಾಕಬಹುದೆಂಬ ಭೀತಿಯಿಂದ ಅಧ್ಯಕ್ಷ ಯಮೀನ್ ಅಬ್ದುಲ್ ಗಯೂಮ್ ಸಂಸತ್ ಭವನದ ಬಾಗಿಲುಗಳಿಗೆ ಬೀಗ ಹಾಕಿಸಿದ್ದಾರೆ. ಅಧ್ಯಕ್ಷರ ಸೂಚನೆಯ ಮೇರೆಗೆ ಎಲ್ಲಿ ತಮ್ಮ ಬಂಧನವಾಗುತ್ತದೋ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಭಾನುವಾರದಿಂದ ನ್ಯಾಯಾಲಯದಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ರಾಜಧಾನಿ ಮಾಲೆ ನಗರದಲ್ಲಿ ಈಗಾಗಲೇ ಜನ ಸೇರತೊಡಗಿದ್ದು, ಭಾವೋದ್ರೇಕದ ವಾತಾವರಣ ನಿರ್ಮಾಣವಾಗಿದೆ. ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕೆಂದು ವಿರೋಧಪಕ್ಷಗಳ ನಾಯಕರು ಭಾರತವನ್ನು ಒತ್ತಾಯಿಸಿದ್ದಾರೆ.

ಇದಕ್ಕೆಲ್ಲ ಮುಖ್ಯ ಕಾರಣ, ಕಳೆದ ವಾರ ಸುಪ್ರೀಂ ಕೋರ್ಟ್ ನೀಡಿದ ಒಂದು ತೀರ್ಪು. ಆ ತೀರ್ಪಿನ ಪ್ರಕಾರ, ಈಗ ಬಂಧನದಲ್ಲಿರುವ ಎಲ್ಲ ವಿರೋಧ ಪಕ್ಷಗಳ ನಾಯಕರ ಬಿಡುಗಡೆಯಾಗಬೇಕಿದೆ. ಅಷ್ಟೇ ಅಲ್ಲ, ಹಿಂದಿನ ಅಧ್ಯಕ್ಷ ಮಹಮ್ಮದ್ ನಸೀಬ್ ಅವರ ಬಿಡುಗಡೆಯೂ ಆಗಬೇಕಿದೆ. ಈ ಎಲ್ಲರ ಮೇಲಿನ ಮೊಕದ್ದಮೆ ಮತ್ತು ಬಂಧನ ರಾಜಕೀಯ ಉದ್ದೇಶದಿಂದ ಕೂಡಿದ್ದು ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್, ಅವರ ವಿರುದ್ಧದ ಎಲ್ಲ ಮೊಕದ್ದಮೆಗಳನ್ನು ರದ್ದು ಮಾಡಿದೆ. ಇತ್ತೀಚೆಗೆ ಆಡಳಿತ ಪಕ್ಷದ 12 ಸಂಸತ್ ಸದಸ್ಯರು ಯಮೀನ್ ಅವರನ್ನು ಬಿಟ್ಟು ವಿರೋಧ ಪಕ್ಷಗಳ ಬೆಂಬಲಕ್ಕೆ ಪಕ್ಷಾಂತರಗೊಂಡರು. ಇದೇ ಕಾರಣವಾಗಿ ಅವರೆಲ್ಲರನ್ನೂ ಸಂಸತ್ ಸದಸ್ಯತ್ವದಿಂದ ರದ್ದು ಮಾಡಲಾಗಿತ್ತು. ಈ ಕ್ರಮವನ್ನೂ ಸುಪ್ರೀಂ ಕೋರ್ಟ್ ಅಕ್ರಮ ಎಂದು ಘೋಷಿಸಿದ್ದು, ಅವರು ಸಂಸತ್ ಸದಸ್ಯರಾಗಿಯೇ ಮುಂದುವರಿಯಲಿದ್ದಾರೆ. ಈ 12 ಮಂದಿ ಸಂಸತ್ ಸದಸ್ಯರು ವಿರೋಧಿ ಬಣದ ಜೊತೆ ಈಗ ಗುರುತಿಸಿಕೊಂಡಿರುವುದರಿಂದ ಯಮೀನ್ ಅವರ ಆಡಳಿತ ಪಕ್ಷ ಸಂಸತ್ತಿನಲ್ಲಿ ಬಹುಮತ ಕಳೆದುಕೊಂಡಂತಾಗಿದೆ. ಬಹುಮತ ಸಾಬೀತಿಗೆ ಕೋರ್ಟ್ ಸೂಚನೆ ನೀಡಿದರೆ ಯಮೀನ್ ಅವರು ಅನಿವಾರ್ಯವಾಗಿ ರಾಜಿನಾಮೆ ಕೊಡಬೇಕಾಗುತ್ತದೆ.

ಯಮೀನ್ ಅವರು ಅಧಿಕಾರ ತ್ಯಜಿಸಲು ಸಿದ್ಧವಿಲ್ಲ. ಅದಕ್ಕಾಗಿಯೇ ಅವರು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಒಪ್ಪಲು ಸಿದ್ಧವಿಲ್ಲ. ಬಹಿರಂಗವಾಗಿಯೇ ಸರ್ಕಾರ ಕೋರ್ಟಿನ ತೀರ್ಪಿನ ವಿರುದ್ಧ ಕಟುಟೀಕೆ ಮಾಡಿದೆ. ಸರ್ಕಾರಕ್ಕೆ ಉಳಿದಿರುವುದೊಂದೇ ದಾರಿ; ಸುಪ್ರೀಂ ಕೋರ್ಟನ್ನು ರದ್ದು ಮಾಡಿ, ಅದು ನೀಡಿದ್ದ ತೀರ್ಪನ್ನು ಅಮಾನ್ಯಗೊಳಿಸುವುದು. ಇದಕ್ಕಾಗಿಯೇ ಸರ್ಕಾರ ಅನೇಕ ರೀತಿಯ ಸರ್ಕಸ್ ಮಾಡುತ್ತಿದೆ. ಕೋರ್ಟಿನ ಆದೇಶವನ್ನು ಎಲ್ಲಿ ಪಾಲಿಸಿಬಿಡುತ್ತಾರೋ ಎಂಬ ಹೆದರಿಕೆಯಿಂದ ನಗರ ಪೊಲೀಸ್ ಮುಖ್ಯಸ್ಥರನ್ನೇ ಬದಲಾಯಿಸಿದೆ.

ಸುಪ್ರೀಂ ಕೋರ್ಟಿನ ತೀರ್ಪನ್ನು ಜಾರಿಗೊಳಿಸುವಂತೆ ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಆಂಟೋನಿಯೋ ಗುಟರೆಸ್ ಕರೆ ನೀಡಿದ್ದಾರೆ. ಅಮೆರಿಕ, ಬ್ರಿಟನ್, ಯೂರೋಪ್ ಒಕ್ಕೂಟಗಳೂ ಅದೇ ರೀತಿಯ ಸಲಹೆಗಳನ್ನು ನೀಡಿವೆ. ಆದರೆ, ಅಧಿಕಾರ ತ್ಯಜಿಸಲು ಯಮೀನ್ ಸಿದ್ಧರಿಲ್ಲ. ಮುಂದಿನ ನಂವೆಂಬರ್ ತಿಂಗಳಲ್ಲಿ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಯಬೇಕಿದೆ. ಬೇಕಿದ್ದರೆ ಆ ಚುನಾವಣೆಯನ್ನು ಮೊದಲೇ ನಡೆಸಲು ಸಿದ್ಧ ಎಂಬ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ. ಆದರೆ, ಈಗ ಶ್ರೀಲಂಕಾದಲ್ಲಿ ಆಶ್ರಯ ಪಡೆದಿರುವ ವಿರೋಧ ಪಕ್ಷಗಳ ನಾಯಕ ನಸೀಬ್ ಇದಕ್ಕೆ ಸಿದ್ಧರಿಲ್ಲ. ಮೊದಲು ಯಮೀನ್ ಅಧಿಕಾರ ತ್ಯಜಿಸಬೇಕು, ನಂತರ ಮಿಕ್ಕ ವಿಚಾರ ಎಂದು ಅವರು ಆಗ್ರಹ ಮಾಡುತ್ತಿದ್ದಾರೆ.

ಇದನ್ನೂ ಓದಿ : ಮಹಿಳೆಯರ ವಿಷಯದಲ್ಲಿ ಮತ್ತೆ ಕಠಿಣವಾದ ಇರಾನ್‌; ತಲೆಗವಸು ಕಿತ್ತೆಸೆದವರ ಬಂಧನ

ಮಾಲ್ಡೀವ್ಸ್ ಅತಿ ಸುಂದರವಾದ ದ್ವೀಪ ಸಮುದಾಯ. ವಿಶ್ವದ ನಾನಾ ಭಾಗಗಳಿಂದ ಪ್ರವಾಸಿಗರು ಅಲ್ಲಿಗೆ ಬರುತ್ತಾರೆ. ಆ ದೇಶಕ್ಕೆ ಪ್ರವಾಸೋದ್ಯಮವೇ ಬಹುಮುಖ್ಯ ಸಂಪನ್ಮೂಲ. ರಾಜಕೀಯ ಅಸ್ಥಿರತೆ ಈ ದೇಶವನ್ನು ಮೊದಲಿಂದಲೂ ಕಾಡುತ್ತ ಬಂದಿದೆ. 2008ರಲ್ಲಿ ನಡೆದ ಮೊದಲ ಚುನಾವಣೆಗಳಲ್ಲಿ ನಸೀಬ್ ಅವರು ಸರ್ವಾಧಿಕಾರಿ ಮಮೂನ್ ಗಯೂಮ್ ಅವರನ್ನು ಪದಚ್ಯುತಗೊಳಿಸಿದರು. ಆದರೆ, 2012ರಲ್ಲಿ ಅವರು ರಾಜೀನಾಮೆ ಕೊಡಬೇಕಾಯಿತು. ಮಮೂನ್ ಬೆಂಬಲಿಗ ಸೇನೆ ಮತ್ತು ನಸೀಬ್ ವಿರೋಧಿಗಳ ಬೆದರಿಕೆಯ ನಡುವೆ ಅವರು ರಾಜಿನಾಮೆ ನೀಡಿದ್ದರು. ಅಧಿಕಾರಕ್ಕೆ ಬಂದ ಯಮೀನ್ ಗಯೂಮ್ ಅವರು ನಸೀಬ್ ವಿರುದ್ಧ ಭಯೋತ್ಪಾದನೆ ಆರೋಪ ಹೊರಿಸಿ ಜೈಲಿಗೆ ದೂಡಿದರು. ಅನಾರೋಗ್ಯದ ಕಾರಣ ಅವರು ಕೆಲ ಕಾಲ ಬ್ರಿಟನ್‍ನಲ್ಲಿದ್ದು, ಈಗ ಶ್ರೀಲಂಕಾದಲ್ಲಿ ಆಶ್ರಯ ಪಡೆದಿದ್ದಾರೆ.

ಮುಸ್ಲಿಂ ಪ್ರಾಬಲ್ಯದ ಈ ದೇಶವನ್ನು ಆಕ್ರಮಿಸಿಕೊಳ್ಳುವ ಪ್ರಯತ್ನವನ್ನು ಒಮ್ಮೆ ಶ್ರೀಲಂಕಾದ ಎಲ್‍ಟಿಟಿಇ ಉಗ್ರವಾದಿಗಳು ನಡೆಸಿದ್ದುಂಟು. ಆಗ ಭಾರತೀಯ ಸೇನೆ ಮಾಲ್ಡೀವ್ಸ್ ನೆರವಿಗೆ ಧಾವಿಸಿತ್ತು. ಇತ್ತೀಚಿನ ವರ್ಷಗಳಲ್ಲಿ ಐಎಸ್ ಉಗ್ರವಾದಿಗಳು ನೆಲೆ ಸ್ಥಾಪಿಸುವ ಪ್ರಯತ್ನವನ್ನೂ ಮಾಡಿದ್ದರು. ಆದರೆ, ಅವರ ಪ್ರಯತ್ನ ಯಶಸ್ವಿಯಾಗಲಿಲ್ಲ. ಮೊದಲಿನಿಂದಲೂ ಮಾಲ್ಡೀವ್ಸ್ ಮತ್ತು ಭಾರತದ ನಡುವೆ ಉತ್ತಮ ಸಂಬಂಧವಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಚೀನಾ ಭಾರಿ ಪ್ರಮಾಣದಲ್ಲಿ ಬಂಡವಾಳ ಹೂಡಿ ನೆಲೆ ಸ್ಥಾಪಿಸಿಕೊಳ್ಳಲು ಯತ್ನಿಸುತ್ತಿದೆ. ಇದು ಭಾರತದ ದೃಷ್ಟಿಯಿಂದ ಅಪಾಯಕಾರಿ ಬೆಳವಣಿಗೆ.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More