ಟ್ರಂಪ್ ಅಮೆರಿಕದಲ್ಲೂ ಆತಂಕ ಹುಟ್ಟಿಸಿದ ರೈತರ ಸರಣಿ ಆತ್ಮಹತ್ಯೆ ಪ್ರಕರಣಗಳು

ಅಮೆರಿಕದ ಕೃಷಿ ಬಿಕ್ಕಟ್ಟು ಮತ್ತು ರೈತರ ಸರಣಿ ಆತ್ಮಹತ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರಗಳ ನಿರಾಸಕ್ತಿಯನ್ನು ‘ದ ಗಾರ್ಡಿಯನ್’ ಕ್ಷೇತ್ರ ವರದಿ ಮೂಲಕ ಬಯಲು ಮಾಡಿದೆ. ಜಾಗತಿಕ ಆತಂಕವಾಗಿ ಹಬ್ಬುತ್ತಿರುವ ರೈತರ ಆತ್ಮಹತ್ಯೆ ತಡೆಯದಿದ್ದರೆ ಅಪಾಯ ಕಾದಿದೆ ಎಂದೂ ಪತ್ರಿಕೆ ಎಚ್ಚರಿಸಿದೆ

ಮೊನ್ನೆ ತಾನೆ ಮಂಡನೆಯಾದ ಕೇಂದ್ರ ಬಜೆಟ್ಟಿನಲ್ಲಿ ದೇಶದ ಕೃಷಿ ವಲಯವನ್ನು ಬಿಕ್ಕಟ್ಟಿನಿಂದ ಪಾರು ಮಾಡಲು ಆದ್ಯತೆ ನೀಡಿರುವುದಾಗಿ ಹಣಕಾಸು ಸಚಿವರು ಹಾಗೂ ಸ್ವತಃ ಪ್ರಧಾನ ಮಂತ್ರಿಗಳೂ ಹೇಳಿದರು. ನಿನ್ನೆಯಷ್ಟೇ ಬೆಂಗಳೂರು ರ‍್ಯಾಲಿಗೆ ಬಂದಿದ್ದ ಮೋದಿಯವರು, ರೈತ ಆತ್ಮಹತ್ಯೆಯಲ್ಲಿ ಕರ್ನಾಟಕ ಮುಂದಿದೆ ಎಂದು ಕಾಂಗ್ರೆಸ್ ಸರ್ಕಾರದ ಕಾಲೆಳೆದರು. ಈ ನಡುವೆ, ರಾಜ್ಯದ ಮಟ್ಟಿಗೆ ಸುಗ್ಗಿ ಮುಗಿಯುತ್ತಾ ಬಂದರೂ ಪ್ರಮುಖ ಬೆಳೆಗಳಾದ ಭತ್ತ, ಮೆಕ್ಕೆಜೋಳ ಮುಂತಾದ ಬೆಳೆಗಳಿಗೆ ಸರಿಯಾದ ಬೆಲೆ ಬಂದಿಲ್ಲ. ಸದ್ಯದ ಬೆಲೆಯಲ್ಲಿ ಫಸಲು ಮಾರಿದರೆ, ಬೆಳೆಗೆ ಹಾಕಿದ ಯೂರಿಯಾಕ್ಕೆ ತೆತ್ತ ಹಣದ ಅಸಲು ಕೂಡ ಸಿಗಲಾರದು ಎಂಬುದು ರೈತರ ಆತಂಕ. ಮಧ್ಯಕರ್ನಾಟಕ ಮತ್ತು ಬಯಲುಸೀಮೆ ಭಾಗದ ಪ್ರಮುಖ ಬೆಳೆಯಾದ ಮೆಕ್ಕೆಜೋಳ ಖರೀದಿ ಕೇಂದ್ರಗಳು ಕೂಡ ತೆರೆಯದ ಹಿನ್ನೆಲೆಯಲ್ಲಿ ರೈತ ಸಮುದಾಯ ಕಂಗಾಲಾಗಿದೆ.

ರೈತರು ಹಾಕಿದ ಹಣ ಕೂಡ ವಾಪಸು ಬರದಷ್ಟು ಹೀನಾಯ ಮಟ್ಟಕ್ಕೆ ಕೃಷಿ ಉತ್ಪನ್ನಗಳ ಬೆಲೆ ಕುಸಿದಿದೆ. ಅದರ ಹಿಂದೆ ನೋಟು ರದ್ದತಿ ಮತ್ತು ಜಿಎಸ್‍ಟಿಯಂತಹ ದೂರದೃಷ್ಟಿರಹಿತ ಸುಧಾರಣಾ ಕ್ರಮಗಳ ಕರಿನೆರಳಿದೆ ಎಂದು ರಾಜ್ಯ ಕೃಷಿ ಬೆಲೆ ನಿಗದಿ ಆಯೋಗ ಕೂಡ ಅಭಿಪ್ರಾಯಪಟ್ಟಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ರಾಜ್ಯ ಇನ್ನಷ್ಟು ರೈತರ ಆತ್ಮಹತ್ಯೆಗಳಿಗೆ ಸಾಕ್ಷಿಯಾಗಬೇಕಾಗಬಹುದು ಎಂಬುದು ಅನ್ನದಾತರ ಆತಂಕ.

ರಾಜ್ಯದಲ್ಲಿ 2013ರಿಂದ 2017ರ ಅಂತ್ಯದ ಹೊತ್ತಿಗೆ ನಾಲ್ಕು ವರ್ಷಗಳಲ್ಲಿ ಸುಮಾರು 3,500 ರೈತರು ಆತ್ಮಹತ್ಯೆಗೆ ಶರಣಾಗಿದ್ದು, ಆ ಪೈಕಿ ಸುಮಾರು 2,500 ಮಂದಿ ಬರ ಮತ್ತು ಬೆಳೆ ವೈಫಲ್ಯದ ಕಾರಣದಿಂದಲೇ ಜೀವ ಕಳೆದುಕೊಂಡಿದ್ದಾರೆ ಎಂದು ಸ್ವತಃ ರಾಜ್ಯ ಕೃಷಿ ಇಲಾಖೆಯ ಮಾಹಿತಿ ಹೇಳಿದೆ. ದೇಶದಲ್ಲಿ ಪ್ರತಿ 41 ನಿಮಿಷಕ್ಕೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ವಾರ್ಷಿಕ ಸರಾಸರಿ 12 ಸಾವಿರ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. 1995ರಿಂದ ಈವರೆಗೆ ಭಾರತದ 2,70,000 ರೈತರು ತಮ್ಮ ಜೀವವನ್ನು ತಾವೇ ಅಂತ್ಯಗೊಳಿಸಿಕೊಂಡಿದ್ದಾರೆ.

ಸಹಜವಾಗೇ, ರೈತ ಆತ್ಮಹತ್ಯೆ ಮತ್ತು ಅದರ ಮೂಲ ಕಾರಣವಾದ ಕೃಷಿ ಬಿಕ್ಕಟ್ಟು ಎಂಬುದು ಕಳೆದ ಎರಡು ದಶಕದಿಂದ ದೇಶದ ರಾಜಕೀಯ ಮತ್ತು ಸಾಮಾಜಿಕ ವಲಯದ ಬಹುಚರ್ಚಿತ ವಿಷಯವಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಬಿಹಾರ, ಮಧ್ಯಪ್ರದೇಶ, ಗುಜರಾತ್‍ಗಳಲ್ಲಿ ಪ್ರತಿ ಚುನಾವಣೆಯಲ್ಲೂ ರೈತ ಆತ್ಮಹತ್ಯೆ ಎಂಬುದು ರಾಜಕೀಯ ಪಕ್ಷಗಳ ನಡುವಿನ ಕೆಸರೆರಚಾಟದ ವಸ್ತುವೂ ಆಗಿದೆ.

ಹಾಗೆ ನೋಡಿದರೆ, ರೈತ ಆತ್ಮಹತ್ಯೆ ಮತ್ತು ಕೃಷಿ ಬಿಕ್ಕಟ್ಟು ಎಂಬುದು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಜಗತ್ತಿನ ಅತೀ ಶ್ರೀಮಂತ ದೇಶಗಳ ಪಟ್ಟಿಯಲ್ಲಿರುವ ಅಮೆರಿಕ, ಫ್ರಾನ್ಸ್, ಬ್ರಿಟನ್, ಆಸ್ಟ್ರೇಲಿಯಾ, ನೆದರ್‍ಲೆಂಡ್, ಕೆನಡಾ, ಇಟಲಿ, ಐರ್ಲೆಂಡ್, ನ್ಯೂಜಿಲೆಂಡ್‌ಗಳಲ್ಲೂ ಕೃಷಿ ಬಿಕ್ಕಟ್ಟು ಉಲ್ಬಣಸಿದ್ದು, ಸರಣಿ ರೈತ ಆತ್ಮಹತ್ಯೆಗಳು ಹೆಚ್ಚುತ್ತಿವೆ ಎಂದು ‘ದ ಗಾರ್ಡಿಯನ್’ ಪತ್ರಿಕೆಯ ವರದಿ ಹೇಳಿದೆ. ಇತ್ತೀಚಿನ ವರ್ಷಗಳಲ್ಲಿ ಅಮೆರಿಕದಲ್ಲಿ ಏಕೆ ಸರಣಿ ರೈತ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ ಎಂಬ ಪ್ರಶ್ನೆಯನ್ನಿಟ್ಟುಕೊಂಡು ಬ್ರಿಟನ್ ಮೂಲದ ವಿಶ್ವಾಸಾರ್ಹ ಮಾಧ್ಯಮ ‘ದ ಗಾರ್ಡಿಯನ್’, ತಳಮಟ್ಟದ ಮಾಹಿತಿ, ಅನುಭವ ಕಥನಗಳನ್ನು ಆಧರಿಸಿ ಸರಣಿ ವರದಿಗಳನ್ನು ಪ್ರಕಟಿಸಿದೆ.

ಅಮೆರಿಕದಲ್ಲಿ ಅತೀ ಹೆಚ್ಚು ಆತ್ಮಹತ್ಯೆ ವರದಿಯಾಗುವ ಮಾಜಿ ಸೈನಿಕರ ವಲಯಕ್ಕಿಂತ, ದುಪ್ಪಟ್ಟು ಸಂಖ್ಯೆಯ ರೈತರು ಪ್ರತಿವರ್ಷ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಅಂದರೆ, ಅಮೆರಿಕದ ಯಾವುದೇ ಇತರ ವೃತ್ತಿನಿರತ ಸಮುದಾಯಕ್ಕಿಂತ ಅತೀ ಹೆಚ್ಚು ಆತ್ಮಹತ್ಯೆಗಳು ಕೃಷಿಕ ಸಮುದಾಯದಲ್ಲಿ ನಡೆಯುತ್ತಿವೆ ಎಂಬುದು ಅಲ್ಲಿನ ‘ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್’ (ಸಿಡಿಸಿ) ಕೇಂದ್ರದ ಅಧ್ಯಯನ ಹೇಳಿದೆ. ಅಲ್ಲದೆ, ಈ ಸಿಡಿಸಿ ವರದಿಯ ಬಳಿಕ, ಅಲ್ಲಿನ ಪ್ರಭಾವಿ ನಿಯತಕಾಲಿಕ ‘ನ್ಯೂಸ್‍ವೀಕ್’ ಕೂಡ, “ಅಮೆರಿಕದಲ್ಲಿ ರೈತರ ಆತ್ಮಹತ್ಯೆ, ಮಾಜಿ ಯೋಧರ ಆತ್ಮಹತ್ಯೆಗಿಂತ ದುಪ್ಪಟ್ಟಿದೆ. ಇದು ಆತಂಕಕಾರಿ ಬೆಳವಣಿಗೆ,” ಎಂದು ಹೇಳಿದೆ. ಆದರೆ, ವಾಸ್ತವವಾಗಿ ‘ನ್ಯೂಸ್‍ವೀಕ್’ ಅಂದಾಜು, ತೀರಾ ಕಡಿಮೆ ಇರಬಹುದು. ಏಕೆಂದರೆ, ಅದು ತನ್ನ ಅಧ್ಯಯನ ವೇಳೆ, ಕೆಲವು ಕೃಷಿ ಆಧಾರಿತ ರಾಜ್ಯಗಳನ್ನು ಪರಿಗಣಿಸಿಲ್ಲ. ಜೊತೆಗೆ, ಬಹುತೇಕ ರೈತರ ಆತ್ಮಹತ್ಯೆ ಪ್ರಕರಣಗಳನ್ನು ‘ಆತ್ಮಹತ್ಯೆ’ ಎಂದು ದಾಖಲಿಸದೇ, ಕೃಷಿ ಅಪಘಾತ ಎಂದೇ ದಾಖಲಿಸಲಾಗುತ್ತಿದೆ. ಹಾಗಾಗಿ, ವಾಸ್ತವವಾಗಿ ರೈತ ಆತ್ಮಹತ್ಯೆಗಳು, ಮಾಜಿ ಯೋಧರ ಆತ್ಮಹತ್ಯೆಗಳಿಗಿಂತ ಐದು ಪಟ್ಟು ಹೆಚ್ಚಿರಬಹುದು ಎಂದೂ ‘ದ ಗಾರ್ಡಿಯನ್’ ಹೇಳಿದೆ.

ಇಷ್ಟು ಆತಂಕಕಾರಿ ಪ್ರಮಾಣದಲ್ಲಿ ದುರಂತಗಳು ಹೆಚ್ಚಲು, ಪ್ರಮುಖ ಕಾರಣ ಕೃಷಿ ಉತ್ಪನ್ನಗಳ ಬೆಲೆ ಕುಸಿತ, ಬೆಳೆ ವೈಫಲ್ಯ, ಬರ, ನೈಸರ್ಗಿಕ ಬೆಂಕಿ ಅವಗಢ, ಪ್ರವಾಹ, ಚಂಡಮಾರುತ. ಅದರಲ್ಲೂ ಮುಖ್ಯವಾಗಿ ಕೃಷಿ ಫಸಲು ಮಾರುಕಟ್ಟೆಗೆ ಬರುವ ಹೊತ್ತಿಗೆ ದಿಢೀರ್ ಬೆಲೆ ಕುಸಿತ ಉಂಟಾಗುವುದೇ ಬಹುತೇಕ ರೈತರನ್ನು ಮಾನಸಿಕ ಬಿಕ್ಕಟ್ಟಿಗೆ ತಳ್ಳುತ್ತದೆ. ಹಾಕಿದ ಹಣ ಕೂಡ ವಾಪಸು ಬರದಂತಹ ಇಕ್ಕಟ್ಟಿನ ಸ್ಥಿತಿಯಲ್ಲಿ, ವರ್ಷದ ದುಡಿಮೆಯ ಪ್ರತಿಫಲ ಕೈತಪ್ಪಿದ್ದಲ್ಲದೆ, ಮುಂದಿನ ಫಸಲಿಗೆ ಹೂಡಬೇಕಾದ ಬಂಡವಾಳ ಕೂಡ ಕೈಜಾರುತ್ತದೆ. ಹೀಗೆ ದಿಢೀರ್ ಆರ್ಥಿಕ ಮುಗ್ಗಟ್ಟಿಗೆ ಸಿಲುಕುವ ರೈತ, ಮಾನಸಿಕ ಒತ್ತಡ, ಖಿನ್ನತೆಗೆ ಜಾರುತ್ತಾನೆ. ಅಂತಿಮವಾಗಿ, ಖಿನ್ನತೆಯಲ್ಲೇ ಆತ್ಮಹತ್ಯೆಗೆ ಶರಣಾಗುತ್ತಾನೆ ಎಂದು ಕಳೆದ 40 ವರ್ಷಗಳಿಂದ ರೈತರನ್ನು ಆತ್ಮಹತ್ಯೆಯಿಂದ ಪಾರು ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಅಮೆರಿಕದ ಐಯೋವಾ ಮೂಲದ ರೈತ ಹಾಗೂ ಮನಃಶಾಸ್ತ್ರಜ್ಞ ಡಾ ಮೈಕ್ ರಾಸ್ಮನ್ ವಿವರಿಸುತ್ತಾರೆ.

1980ರ ದಶಕದಲ್ಲಿ ಅಮೆರಿಕದ ಕೃಷಿ ಕುಟುಂಬಗಳ ದುರಂತಗಾಥೆ ಆರಂಭವಾಯಿತು. ಗ್ರಾಮೀಣ ಅಮೆರಿಕದ ಚಿತ್ರಣವೇ ಬದಲಾಯಿತು. 1930ರ ಮಹಾ ಆರ್ಥಿಕ ಬಿಕ್ಕಟ್ಟಿನ ಬಳಿಕ ದೇಶ ಕಂಡ ಅತ್ಯಂತ ಕೆಟ್ಟ ಪರಿಸ್ಥಿತಿ ಎಂದರೆ 80ರ ದಶಕದ ಕೃಷಿ ಬಿಕ್ಕಟ್ಟು. ಅಲ್ಲಿಂದಲೇ ರೈತರ ಆತ್ಮಹತ್ಯೆ ಸರಣಿ ಆರಂಭವಾಯಿತು. 1985ರಲ್ಲಿ ಅಮೆರಿಕ ಕೃಷಿ ಹೋರಾಟ(ಎಎಎಂ) ನಾಯಕ ಡೇವಿಡ್ ಸೆಂತರ್ ನೇತೃತ್ವದಲ್ಲಿ ವಾಷಿಂಗ್ಟನ್ ಡಿಸಿಗೆ ಮುತ್ತಿಗೆ ಹಾಕಲಾಗಿತ್ತು. ಆತ್ಮಹತ್ಯೆಗೆ ಶರಣಾದ ರೈತರ ಹೆಸರು ಹೊತ್ತಿದ್ದ ಶಿಲುಬೆಗಳನ್ನು ಕೊರಳಿಗೆ ನೇತುಬಿಟ್ಟುಕೊಂಡು ಬಂದಿದ್ದ ಬೃಹತ್‌ ರೈತ ಸಮುದಾಯ ಪೆನ್ಸಿಲ್ವೇನಿಯಾ ಅವೆನ್ಯೂದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿತು.

ಆ ಹಿನ್ನೆಲೆಯಲ್ಲಿ ರಾಸ್ಮನ್ 1999ರಲ್ಲಿ ಸೋಯಿಂಗ್ ಸೀಡ್ಸ್ ಆಫ್ ಹೋಪ್ (ಎಸ್ ಎಸ್ ಒಎಚ್) ಎಂಬ ಸಂಸ್ಥೆಯನ್ನು ಆರಂಭಿಸಿ, ಅದರ ಮೂಲಕ ಬಿಕ್ಕಟ್ಟು ಮತ್ತು ಒತ್ತಡದಲ್ಲಿರುವ ರೈತರಿಗೆ ಮಾನಸಿಕ ಸ್ಥೈರ್ಯ ತುಂಬುವ ಕಾರ್ಯ ಆರಂಭಿಸಿದರು. ದೂರವಾಣಿ ಸಹಾಯವಾಣಿ ಆರಂಭಿಸಿದರು. ಸಂಕಷ್ಟದಲ್ಲಿರುವ ರೈತರು ಕರೆ ಮಾಡಿದರೆ, ಪರಿಸ್ಥಿತಿಗನುಗುಣವಾಗಿ ಅವರಿಗೆ ಸಾಂತ್ವನ ಹೇಳುವ, ಸ್ಥೈರ್ಯ ತುಂಬುವ ಜೊತೆಗೆ, ಕೃಷಿ ಬದಲಾವಣೆ, ಪರ್ಯಾಯ ಉದ್ಯೋಗಾವಕಾಶಗಳ ಮಾರ್ಗದರ್ಶನವನ್ನೂ ಮಾಡತೊಡಗಿದರು. ಅದರ ಪರಿಣಾಮವಾಗಿ ಐಯೋವಾದಲ್ಲಿ ರೈತ ಆತ್ಮಹತ್ಯೆಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಯಿತು. ರಾಸ್ಮನ್ ಅವರ ಈ ಪ್ರಯೋಗ ಎಷ್ಟು ಯಶಸ್ವಿಯಾಯಿತು ಎಂದರೆ; ಅಮೆರಿಕದ ರಾಷ್ಟ್ರವ್ಯಾಪಿ ‘ಫಾರ್ಮ್ ಅಂಡ್ ರಾಂಚ್ ಸ್ಟ್ರೆಸ್ ಅಸಿಸ್ಟೆನ್ಸ್ ನೆಟ್‍ವರ್ಕ್’ (ಎಫ್ ಆರ್ ಎಸ್ ಎ ಎನ್)ಗೆ ಅದು ಮಾದರಿಯಾಯಿತು. ಆದರೆ, ಆ ಕಾರ್ಯಕ್ರಮ 2008ರ ಕೃಷಿ ಮಸೂದೆಯ ಅಂಗವಾಗಿ ಅಂಗೀಕಾರವಾದರೂ, ಸರ್ಕಾರ ಈವರೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಿಲ್ಲ.

ಒಂದು ವೇಳೆ ಅಗತ್ಯ ಅನುದಾನ ಸಿಕ್ಕಿದ್ದರೆ, ಪ್ರಾದೇಶಿಕ ಮತ್ತು ರಾಷ್ಟ್ರೀಯಮಟ್ಟದಲ್ಲಿ ರೈತ ಸಹಾಯವಾಣಿ ಮತ್ತು ಆಪ್ತ ಸಮಾಲೋಚನೆ ಕೇಂದ್ರಗಳನ್ನು ಆರಂಭಿಸುವ ಮೂಲಕ ದೊಡ್ಡ ಸಂಖ್ಯೆಯ ಆತ್ಮಹತ್ಯೆಗಳನ್ನು ತಡೆಯುವುದು ಸಾಧ್ಯವಿತ್ತು. ಆದರೆ, ಅಗತ್ಯವಿದ್ದ ಕೇವಲ 18 ಮಿಲಿಯನ್ ಡಾಲರ್ ಅನುದಾನ ನೀಡಲು ಸರ್ಕಾರ ಮುಂದಾಗಲಿಲ್ಲ. ಈ ನಡುವೆ, ಐಯೋವಾದ ವ್ಯಾಪ್ತಿಯಲ್ಲಿ ಸಾವಿರಾರು ರೈತರನ್ನು ಸಾವಿನ ದವಡೆಯಿಂದ ಪಾರುಮಾಡಿದ ರಾಸ್ಮನ್ ಅವರ ಎಸ್‍ಎಸ್‍ಒಎಚ್‍ಗೆ ಕೂಡ 2014ರಲ್ಲಿ ಸರ್ಕಾರದ ಅನುದಾನವನ್ನು ಸ್ಥಗಿತಗೊಳಿಸಲಾಯಿತು. ಹಾಗಾಗಿ, ವೈಯಕ್ತಿಕ ನೆಲೆಯಲ್ಲಿ ರಾಸ್ಮನ್ ನಡೆಸುತ್ತಿದ್ದ ಅನ್ನದಾತರ ಪರವಾದ ನಿಸ್ವಾರ್ಥ ಸೇವೆಗೂ ಈಗ ಕುತ್ತು ಬಂದಿದೆ.

“ಜಾಗತಿಕವಾಗಿ ಮತ್ತು ಮುಖ್ಯವಾಗಿ ಅಮೆರಿಕದಲ್ಲಿ ರೈತರು ಹಿಂದೆಂದಿಗಿಂತಲೂ ಸಂಕಷ್ಟದಲ್ಲಿದ್ದಾರೆ. ಇಡೀ ಕೃಷಿಕ ಸಮುದಾಯವೇ ಅಳಿವಿನಂಚಿನಲ್ಲಿದೆ. ಆ ಹಿನ್ನೆಲೆಯಲ್ಲಿ ರೈತರ ಸಂಕಷ್ಟದ ಹೊತ್ತಲ್ಲಿ, ಮಾನಸಿಕ ಒತ್ತಡದ, ಖಿನ್ನತೆಯ ಹೊತ್ತಲ್ಲಿ ಅವರಿಗೆ ಅಗತ್ಯ ಮಾನಸಿಕ ಆಪ್ತ ಸಮಾಲೋಚನೆ, ಸಲಹೆ-ಸಹಕಾರ ಮತ್ತು ಭರವಸೆಯ ಮಾತುಗಳು ಮುಖ್ಯ. ಆ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ರೈತ ಸಮಾಲೋಚನಾ ಕೇಂದ್ರಗಳು ಹಾಗೂ ಮಾನಸಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲು ಸರ್ಕಾರಗಳ ಮೇಲೆ ಒತ್ತಡ ಹೇರಬೇಕಿದೆ. ತರಬೇಕಾದ ಆಪ್ತ ಸಲಹಾ ಸಿಬ್ಬಂದಿ ಮತ್ತು ಆರೋಗ್ಯ ಸಹಾಯಕರೊಂದಿಗೆ ಅಗತ್ಯ ಸೌಲಭ್ಯ ಮತ್ತು ಸಲಕರಣೆಗಳನ್ನು ಹೊಂದಿರುವ ಸುಸಜ್ಜಿತ ಕೇಂದ್ರಗಳನ್ನು ತೆರೆಯುವ ಮೂಲಕ ರೈತ ಆತ್ಮಹತ್ಯೆಗಳನ್ನು ಗಣನೀಯವಾಗಿ ಕಡಿಮೆ ಮಾಡುವುದು ಸಾಧ್ಯ,” ಎಂಬುದು ರಾಸ್ಮನ್ ಅವರ ಅಭಿಪ್ರಾಯ.

ವಿಪರ್ಯಾಸವೆಂದರೆ; ಅಮೆರಿಕದ ಗ್ರಾಮೀಣ ಕೃಷಿ ಸಮುದಾಯಗಳ ಬೆಂಬಲದೊಂದಿಗೆ ಅಧಿಕಾರ ಹಿಡಿದ ಡೊನಾಲ್ಡ್ ಟ್ರಂಪ್ ಅವರ ಆಡಳಿತ ಕೂಡ ಕೃಷಿಕರ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಏನನ್ನೂ ಮಾಡಿಲ್ಲ ಎಂಬುದು. ಅಧ್ಯಕ್ಷ ಚುನಾವಣೆಯ ವೇಳೆ, ‘ಅಮೆರಿಕ ಮೊದಲು’, ‘ಅಮೆರಿಕದ ಮೂಲ ನಿವಾಸಿಗಳು ಮೊದಲು’ ಎಂಬಂತಹ ಘೋಷಣೆಗಳ ಮೂಲಕವೇ ಇಡೀ ದೇಶವನ್ನು ಜನಾಂಗೀಯ ಮತ್ತು ರಾಷ್ಟ್ರೀಯತೆಯ ಆಧಾರದ ಮೇಲೆ ಧ್ರುವೀಕರಿಸುವ ಮೂಲಕ ಅಧಿಕಾರ ಹಿಡಿದ ಟ್ರಂಪ್, ನಿಜವಾಗಿಯೂ ತನ್ನವರ ಪರ ಕೆಲಸ ಮಾಡಿದ್ದಾರೆಯೇ ಎಂಬುದು ಸರಣಿ ರೈತ ಆತ್ಮಹತ್ಯೆಗಳ ಮೂಲಕ ಈಗ ಬಯಲಾಗಿದೆ.

ಇದನ್ನೂ ಓದಿ : ವಿವಾದಕ್ಕೀಡಾದ ಟ್ರಂಪ್ ಹೊಲಸು ಮಾತು, ಕ್ಷಮೆಗೆ ಪಟ್ಟು ಹಿಡಿದ ಆಫ್ರಿಕಾ ದೇಶಗಳು

“ರೈತರು, ಕೃಷಿಯ ಬಗ್ಗೆ ನಾವೇಕೆ ತಲೆಕೆಡಿಸಿಕೊಳ್ಳಬೇಕು ಎಂಬ ನಗರವಾಸಿಗಳ ಮನೋಭಾವ ಮೂರ್ಖತನದ್ದು. ಏಕೆಂದರೆ, ನಿಮ್ಮ ಮಾಲ್‍ನ ಶೆಲ್ಫಿನ ಮೇಲೆ ಜೋಡಿಸಿಟ್ಟ ಹಣ್ಣು, ತರಕಾರಿ, ಗೆಡ್ಡೆ-ಗೆಣಸುಗಳಷ್ಟೇ ಅಲ್ಲದೆ, ನೀವು ತೊಟ್ಟ ಜೀನ್ಸಿನ ನೂಲು ಕೂಡ ರೈತನ ಹೊಲದಿಂದಲೇ ಬಂದಿದ್ದು ಎಂಬುದನ್ನು ಮರೆಯಬೇಡಿ,” ಎನ್ನುವ ರಾಸ್ಮನ್, “ಕೃಷಿಕರನ್ನು ಉಳಿಸಿಕೊಳ್ಳಲು ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೆ, ನಾಳೆಯ ದಿನಗಳು ಜಗತ್ತಿನ ಪಾಲಿಗೆ ಭಯಾನಕವಾಗಿರಲಿವೆ,” ಎಂಬ ಎಚ್ಚರಿಕೆಯನ್ನೂ ನೀಡುತ್ತಾರೆ!

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More