ಮಾಲ್ಡೀವ್ಸ್‌ನಲ್ಲಿ ರಾಜಕೀಯ ಅಸ್ಥಿರತೆ, ಚೀನಾಕ್ಕೆ ಭಾರತದತ್ತಲೇ ಕಣ್ಣು!

ಮಾಲ್ಡೀವ್ಸ್‌ಗೆ ಭಾರತವು ಸೇನೆ ಕಳುಹಿಸಬಹುದೆಂಬ ಅನುಮಾನ ಚೀನಾವನ್ನು ಕಾಡುತ್ತಿರುವಂತಿದೆ. ವಿಶ್ವಸಂಸ್ಥೆಯೂ ಸೇರಿದಂತೆ ಯಾವುದೇ ಬೇರೊಂದು ದೇಶ, ಸಂಸ್ಥೆ ಈ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಬಾರದೆಂಬುದು ಚೀನಾ ವಾದ. ಹೀಗಾಗಿ ಬಿಕ್ಕಟ್ಟು ಅಂತಾರಾಷ್ಟ್ರೀಯ ಸ್ವರೂಪ ಪಡೆದಿದೆ

ಮಾಲ್ಡೀವ್ಸ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಸಂಸತ್ ಭವನಕ್ಕೆ ಬೀಗ ಹಾಕಿಸಲಾಗಿದೆ. ಸುಪ್ರೀಂ ಕೋರ್ಟ್‍ನ ನ್ಯಾಯಮೂರ್ತಿಗಳನ್ನು ಬಂಧಿಸಲಾಗಿದೆ. ಈ ಎಲ್ಲ ಬೆಳವಣಿಗೆ ಭಾರತ ಮತ್ತು ಚೀನಾ ನಡುವೆ ಬಿಕ್ಕಟ್ಟಿಗೆ ಕಾರಣವಾಗಿದೆ. ಇನ್ನೊಂದೆಡೆ, ಭಾರತ ಏನು ಮಾಡುತ್ತದೆ ಎಂದು ಚೀನಾ ತುದಿಗಾಲಲ್ಲಿ ನಿಂತು ಗಮನಿಸುತ್ತಿವೆ.

ತುರ್ತಾಗಿ ಮಧ್ಯಪ್ರವೇಶ ಮಾಡಬೇಕೇಂದು ಮಾಲ್ಡೀವ್ಸ್‌ನ ಮಾಜಿ ಅಧ್ಯಕ್ಷ ಮಹಮದ್ ನಸೀಬ್ ಅವರು ಭಾರತವನ್ನು ಒತ್ತಾಯಿಸಿದ ಬೆನ್ನಲ್ಲೇ, “ಒಂದು ದೇಶದ ಆಂತರಿಕ ವ್ಯವಹಾರಗಳಲ್ಲಿ ಬೇರೆ ದೇಶ ತಲೆಹಾಕಬಾರದು,” ಎಂದು ಚೀನಾ ಸಲಹೆ ನೀಡಿದೆ. “ವಿವಾದಕ್ಕೆ ಸಂಬಂಧಿಸಿದ ಎಲ್ಲರನ್ನೂ ಕರೆದು ಮಾತುಕತೆ ನಡೆಸಬೇಕೆಂದು ಮಾಲ್ಡೀವ್ಸ್ ಆಡಳಿತಾರೂಢರು ಬಯಸಿದರೆ, ಅದನ್ನು ತಾನು ಮಾಡಲು ಸಿದ್ಧ,” ಎಂದು ವಿಶ್ವಸಂಸ್ಥೆ ಸಂದೇಶ ಕಳುಹಿಸುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಚೀನಾ, “ವಿಶ್ವಸಂಸ್ಥೆಯ ಮಧ್ಯಸ್ಥಿಕೆ ಅಗತ್ಯವಿಲ್ಲ,” ಎಂದಿದೆ!

1988ರಲ್ಲಿ ಶ್ರೀಲಂಕಾದ ಉಗ್ರರ ಗುಂಪೊಂದು ಮಾಲ್ಡೀವ್ಸ್ ಕ್ಷಿಪ್ರಕ್ರಾಂತಿಗೆ ಯತ್ನಿಸಿದ ಸಂದರ್ಭದಲ್ಲಿ ಭಾರತ ಅಲ್ಲಿಗೆ ಸೇನೆ ಕಳುಹಿಸಿತ್ತು. ಲಂಕಾ ಉಗ್ರರ ಪ್ರಯತ್ನವನ್ನು ವಿಫಲಗೊಳಿಸಿದ ನಂತರ ಭಾರತದ ಸೇನೆ ಹಿಂತಿರುಗಿತ್ತು. ಇಂಥದ್ದೇ ಒಂದು ಬೆಳವಣಿಗೆ ಆಗಬಹುದಾದ ಸಾಧ್ಯತೆಗಳನ್ನು ಚೀನಾ ಊಹಿಸಿಕೊಂಡು ಆತಂಕಗೊಂಡಂತಿದೆ. ಮಧ್ಯಪ್ರಾಚ್ಯ ಮತ್ತು ಯೋರೋಪನ್ನು ಸಂಪರ್ಕಿಸುವ ಬೃಹತ್ ರಸ್ತೆಜಾಲ ಯೋಜನೆ ವ್ಯಾಪ್ತಿಗೆ ಮಾಲ್ಡೀವ್ಸ್ ದೇಶವನ್ನೂ ಚೀನಾ ಸೇರಿಸಿಕೊಂಡಿದೆ. ಶ್ರೀಲಂಕಾದ ಸಮುದ್ರದಂಡೆಯಲ್ಲಿ ಬಂದರು ನಿರ್ಮಾಣ ಮಾಡಿದಂತೆ ಮಾಲ್ಡೀವ್ಸ್ ಸಮುದ್ರದಂಡೆಯಲ್ಲೂ ಬಂದರು ಸ್ಥಾಪಿಸುತ್ತಿದೆ. ಇದಲ್ಲದೆ, ಅಪಾರ ಪ್ರಮಾಣದಲ್ಲಿ (ಭಾರತಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ) ಮಾಲ್ಡೀವ್ಸ್‌ನ ವಿವಿಧ ಯೋಜನೆಗಳಲ್ಲಿ ಚೀನಾ ಅಪಾರ ಪ್ರಮಾಣದಲ್ಲಿ ಬಂಡವಾಳ ಹೂಡಿದೆ. ಮಾಲ್ಡೀವ್ಸ್ ಸುಂದರ ದ್ವೀಪಗಳಿಂದ ತುಂಬಿದ ದೇಶವಾಗಿದ್ದು, ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಈ ದ್ವೀಪರಾಷ್ಟ್ರಕ್ಕೆ ಭೇಟಿ ಕೊಡುತ್ತಾರೆ. ಉತ್ತಮ ಬಾಂಧವ್ಯ ಇರುವುದರಿಂದ ಚೀನಾದಿಂದಲೂ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಹೀಗಾಗಿ ಚೀನಾಕ್ಕೆ ಮಾಲ್ಡೀವ್ಸ್ ಬಗ್ಗೆ ವಿಶೇಷ ಆಸಕ್ತಿ ಇದೆ.

ಮಾಲ್ಡೀವ್ಸ್ ವಿಚಾರದಲ್ಲಿ ಮಿಲಿಟರಿ ಹಸ್ತಕ್ಷೇಪಕ್ಕೆ ಭಾರತ ಒಲವು ತೋರಿಲ್ಲ. ಆದರೆ, ಭಾರತೀಯರ ಮೇಲೆ ದಾಳಿ ನಡೆದ ಪಕ್ಷದಲ್ಲಿ ಮಾತ್ರ ಸೇನೆ ತಲೆಹಾಕುವ ಸಂಭವವನ್ನು ತಳ್ಳಿಹಾಕುವಂತಿಲ್ಲ. ಈಗ ಲಭ್ಯವಿರುವ ಮಾಹಿತಿಯ ಪ್ರಕಾರ, ಅಲ್ಲಿರುವ ಭಾರತೀಯರನ್ನು ಭಾರತಕ್ಕೆ ಕರೆತರಲು ವಾಯುಪಡೆ ಸಿದ್ಧವಾಗಿದೆ. ಭಾರತ ಮತ್ತು ಮಾಲ್ಡೀವ್ಸ್ ಬಾಂಧವ್ಯ ಉತ್ತಮವಾಗಿಲ್ಲ. ದೇಶದ ಮೊದಲ ಚುನಾವಣೆಗಳಲ್ಲಿ ಅಧ್ಯಕ್ಷರಾಗಿ ಜನರಿಂದ ಆಯ್ಕೆಯಾಗಿದ್ದ ಮಹಮದ್ ನಸೀಬ್ ಅವರನ್ನು ರಾಜಿನಾಮೆ ಕೊಡುವಂತೆ ಅಲ್ಲಿನ ಸೇನೆಯ ಒಂದು ಗುಂಪು ಮತ್ತು ಈಗ ಅಧ್ಯಕ್ಷರಾಗಿರುವ ಅಬ್ದುಲ್ಲಾ ಯಮೀನ್ ಮಾಡಿದ್ದರು. ಜೊತೆಗೆ, ನಸೀಬ್ ಅವರನ್ನೇ ಬಂಧಿಸಿ ಜೈಲಿಗೆ ಅಟ್ಟಲಾಗಿತ್ತು. ಆ ಸಂದರ್ಭದಲ್ಲಿ ಭಾರತ ನಸೀಬ್ ಅವರ ಪರ, ಅಂದರೆ, ಜನತಂತ್ರದ ಪರ ನಿಂತಿತ್ತು. ಇದೇ ಕಾರಣಕ್ಕೆ ಯಮೀನ್ ಅವರು ಭಾರತದ ಜೊತೆಗಿನ ಮೈತ್ರಿ ಕಡೆಗಣಿಸಿ ಚೀನಾದ ಜೊತೆ ಹೆಚ್ಚು ಬಾಂಧವ್ಯ ಬೆಳೆಸಿದರು. ಈಗಲೂ ಅವರು ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಭಾರತದ ಜೊತೆ ಮೊದಲು ಚರ್ಚಿಸದೆ ಚೀನಾ, ಸೌದಿ ಅರೇಬಿಯಾ, ಪಾಕಿಸ್ತಾನ ಮತ್ತಿತರ ದೇಶಗಳಿಗೆ ತಮ್ಮ ವಿಶೇಷ ಪ್ರತಿನಿಧಿಯನ್ನು ಕಳುಹಿಸಿ ಪರಿಸ್ಥಿತಿಯನ್ನು ವಿವರಿಸಿದ್ಧಾರೆ. ಭಾರತದ ಜೊತೆ ಸಮಾಲೋಚಿಸಲು ಸಮಯಾವಕಾಶ ಕೋರಲಾಗಿತ್ತಾದರೂ ಭಾರತ ಸಕಾರಾತ್ಮಕ ಪ್ರತಿಕ್ರಿಯೆ ತೋರಿಸಲಿಲ್ಲ ಎಂದು ದೆಹಲಿಯಲ್ಲಿನ ಮಾಲ್ಡೀವ್ಸ್ ರಾಯಭಾರಿ ಹೇಳಿದ್ದಾರೆ. ಸದ್ಯಕ್ಕೆ ಮಾತನಾಡಲು ಸಮಯವಿಲ್ಲ ಎಂದು ಭೇಟಿಯನ್ನು ಮುಂದಕ್ಕೆ ಹಾಕಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಮಾಲ್ಡೀವ್ಸ್ ನೆರೆಯ ದೇಶ. ಚೀನಾಗಿಂತ ಭಾರತಕ್ಕೆ ಅಲ್ಲಿನ ವಿದ್ಯಮಾನಗಳ ಬಗ್ಗೆ ಹೆಚ್ಚಿನ ಕಳಕಳಿ ಇದೆ. ಆದರೆ, ಹಿಂದಿನಂತೆ ಈಗ ಸೇನಾ ಹಸ್ತಕ್ಷೇಪ ಕಾರ್ಯಸಾಧುವಲ್ಲ. ಅಲ್ಲಿನ ಜನರೇ ಬದಲಾವಣೆ ತರಬೇಕು. ವಿಶ್ವಾದ್ಯಂತ ಈಗ ಅನುಸರಿಸುವ ವಿಧಾನ ಇದು. ವಿವಿಧ ದೇಶಗಳ ಮೇಲೆ ನಡೆದ ಹಿಂದಿನ ಹಸ್ತಕ್ಷೇಪಗಳಿಂದ ಕಲಿತ ಪಾಠ ಇದು. ಒಂದು ದೇಶವನ್ನು ಸರಿದಾರಿಗೆ ತರಲು ಅನೇಕ ಪರ್ಯಾಯ ಮಾರ್ಗಗಳಿವೆ. ಅದರಲ್ಲಿ ಆರ್ಥಿಕ ನಿರ್ಬಂಧ ಪ್ರಮುಖವಾದುದು. ಇದನ್ನು ಯಾವುದೇ ಒಂದು ದೇಶ ಮಾತ್ರ ಬಿಡಲು ಸಾಧ್ಯವಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ಆಗಬೇಕು. ಬಹುಶಃ ಭಾರತ ಮುಂದೆ ಈ ಮಾರ್ಗ ತುಳಿಯಬಹುದು.

ಇದನ್ನೂ ಓದಿ : ಮಾಲ್ಡೀವ್ಸ್‌ನಲ್ಲಿ ತುರ್ತು ಪರಿಸ್ಥಿತಿ; ಸುಪ್ರೀಂ ಕೋರ್ಟ್‌ ಸಿಜೆ ಬಂಧನ

ಮಾಲ್ಡೀವ್ಸ್ ಬೆಳವಣಿಗಗಳನ್ನು ಅಂತಾರಾಷ್ಟ್ರೀಯಗೊಳಿಸುವ ಆಲೋಚನೆ ಭಾರತಕ್ಕೆ ಇದ್ದಂತಿದೆ. ಇದಕ್ಕೆ ಕಾರಣಗಳೂ ಇವೆ. ಏಷ್ಯಾ ವಲಯದಲ್ಲಿ ಚೀನಾ ಪ್ರಬಲ ದೇಶವಾಗಿ ಬೆಳೆಯುತ್ತಿದೆ. ಭಾರತದ ಸುತ್ತಲ ದೇಶಗಳಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಂಡಿದೆ. ಉಗ್ರವಾದಕ್ಕೆ ಬೆಂಬಲ ಕೊಡುತ್ತಿರುವ ಪಾಕಿಸ್ತಾನದಂಥ ದೇಶದ ಜೊತೆ ಚೀನಾ ಮೈತ್ರಿ ಸಾಧಿಸಿ, ಅದರ ಬೆಂಬಲಕ್ಕೆ ನಿಂತಿದೆ. ಆಫ್ಘಾನಿಸ್ತಾನದ ವಿಚಾರದಲ್ಲಿ ಪಾಕಿಸ್ತಾನದ ರಹಸ್ಯ ಕಾರ್ಯಸೂಚಿ ಇದೀಗ ಬಯಲಾಗಿದ್ದು ಅಮೆರಿಕ ಕುಪಿತಗೊಂಡಿದೆ. ಅದಕ್ಕೆ ನೀಡುತ್ತಿದ್ದ ಈ ವರ್ಷದ ಮಿಲಿಟರಿ ನೆರವನ್ನು ನಿಲ್ಲಿಸಲಾಗಿದೆ. ಪಾಕಿಸ್ತಾನಕ್ಕೆ ಬೆಂಬಲವಾಗಿ ನಿಂತಿರುವ ಚೀನಾದ ಧೋರಣೆಯಿಂದಾಗಿ ಮಾಲ್ಡೀವ್ಸ್‌ನಲ್ಲಿ ಆಗುತ್ತಿರುವ ಬೆಳವಣಿಗೆಗೆ ವಿಶೇಷ ಮಹತ್ವ ಬಂದಿದೆ.

ಹೀಗಾಗಿಯೇ ಭಾರತದ ಪ್ರಧಾನಿ ಮೋದಿಯವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಮಾಲ್ಡೀವ್ಸ್ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಮಾಲ್ಡೀವ್ಸ್ ಮುಸ್ಲಿಂ ಪ್ರಾಬಲ್ಯದ ದೇಶವಾಗಿದ್ದು, ಹಿಂದೊಮ್ಮೆ ಐಎಸ್‍ಐಎಸ್ ಅಲ್ಲಿ ನೆಲೆ ಸ್ಥಾಪಿಸಲು ಯತ್ನಿಸಿದ್ದನ್ನು ಮರೆಯುವಂತಿಲ್ಲ. ಹೀಗಾಗಿ ಮಾಲ್ಡೀವ್ಸ್‌ನ ಬೆಳವಣಿಗೆಗಳನ್ನು ನಿರ್ಲಕ್ಷಿಸುವಂತಿಲ್ಲ. ಹಾಗೆ ಮಾಡಿದರೆ, ಅಪಾಯ ಸಂಭವಿಸಬಹುದು ಎನ್ನುವ ಭಾರತದ ಲೆಕ್ಕಾಚಾರ ಸರಿಯಾಗಿಯೇ ಇದೆ. ಮಾಲ್ಡೀವ್ಸ್‌ನ ಈಗಿನ ಅಧ್ಯಕ್ಷರು ಮತ್ತು ಮಿಲಿಟರಿಯ ಮೇಲೆ ಅಂತಾರಾಷ್ಟ್ರೀಯ ಒತ್ತಡ ತರುವುದು ಈಗ ಅನಿವಾರ್ಯ. ವಿವಿಧ ರೀತಿಯ ಒತ್ತಡದ ಮೂಲಕ ಅಲ್ಲಿ ಮತ್ತೆ ಪ್ರಜಾತಂತ್ರ ಮರುಸ್ಥಾಪಿಸಬೇಕಿದೆ. ಈ ದಿಸೆಯಲ್ಲಿ ಭಾರತದ ಪಾತ್ರ ಬಹಳ ಮುಖ್ಯವಾದುದು. ಪ್ರಧಾನಿ ಮೋದಿ ಅವರಿಗೆ ಇದೊಂದು ಸವಾಲು. ಅದನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದು ಕುತೂಹಲಕಾರಿಯಾದುದು.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More