ಪ್ಯಾಲೆಸ್ಟೇನ್ ಕುರಿತ ಭಾರತದ ನಿಲುವು ದಿಢೀರನೆ ದುರ್ಬಲವಾಯಿತೇ?

ಪ್ಯಾಲೆಸ್ಟೇನ್ ಕುರಿತಂತೆ ಭಾರತದ ನಿಲುವಿನಲ್ಲಿ ಗೊಂದಲ ಕಾಣಿಸಿಕೊಂಡಿದೆ. ಪ್ರಧಾನಿ ಮೋದಿ ಅವರು ಪ್ಯಾಲೆಸ್ಟೇನ್‍ನ ರಮಲ್ಲಾದಲ್ಲಿ ಮಾಡಿದ ಭಾಷಣ ಈ ಗೊಂದಲವನ್ನು ಬೆಳಕಿಗೆ ತಂದಿದೆ. ಮುಸ್ಲಿಂ ದೇಶಗಳು ಪ್ಯಾಲೆಸ್ಟೇನ್ ಬೆಂಬಲಕ್ಕೆ ನಿಂತಿವೆ. ಈ ಹಿನ್ನೆಲೆಯಲ್ಲಿ ಭಾರತ ಎಚ್ಚರಿಕೆಯ ಹೆಜ್ಜೆ ಇಡುವುದು ಸೂಕ್ತ

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾಲೆಸ್ಟೇನ್ ಪ್ರದೇಶದ ಅನಧಿಕೃತ ರಾಜಧಾನಿ ರಮಲ್ಲಾಗೆ ನೀಡಿದ ಭೇಟಿ ಒಂದು ಕಡೆ ಮೆಚ್ಚುಗೆಗೂ ಮತ್ತೊಂದು ಕಡೆ ಅಸಮಾಧಾನಕ್ಕೂ ಕಾರಣವಾಗಿದೆ. ಮೋದಿ ಅವರು ಪ್ಯಾಲೆಸ್ಟೇನ್‍ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ. ಈ ಕಾರಣಕ್ಕೇ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಅವರು ರಮಲ್ಲಾದಲ್ಲಿ ಆಡಿದ ಮಾತುಗಳನ್ನು ಕೇಳಿದರೆ, ಪ್ಯಾಲೆಸ್ಟೇನ್ ಕುರಿತಂತೆ ಭಾರತದ ನಿಲುವಿನಲ್ಲಿ ಗಮನಾರ್ಹ ಬದಲಾವಣೆಯನ್ನು ಗುರುತಿಸಬಹುದು. ಅಂದರೆ, ಭಾರತದ ನಿಲುವು ದುರ್ಬಲವಾಗಿರುವುದನ್ನು ಗಮನಿಸಬಹುದು. ಇದೇ ಅಸಮಾಧಾನಕ್ಕೆ ಕಾರಣವಾಗಿರುವ ಅಂಶ.

“ಇಸ್ರೇಲ್ ದೇಶದಂತೆಯೇ ಅದೇ ಪ್ರದೇಶದಲ್ಲಿ ಪ್ಯಾಲೆಸ್ಟೇನ್ ಎಂಬ ಸಂಯುಕ್ತ, ಸ್ವತಂತ್ರ ಮತ್ತು ಸಾರ್ವಭೌಮ ದೇಶ ರಚನೆಯಾಗಬೇಕು; ಎಲ್ಲ ಆಕ್ರಮಿತ ಪ್ಯಾಲೆಸ್ಟೇನ್ ಪ್ರದೇಶವನ್ನು ಇಸ್ರೇಲ್ ತೆರವುಗೊಳಿಸಬೇಕು (ಜರೂಸಲೆಂ ಆಕ್ರಮಿತ ಪ್ರದೇಶದಲ್ಲಿ ಇರುವುದರಿಂದ ಸಹಜವಾಗಿಯೇ ಅದು ಪ್ಯಾಲೆಸ್ಟೇನ್ ಪ್ರದೇಶದ ವ್ಯಾಪ್ತಿಗೆ ಬರಲಿದೆ),” ಎಂಬುದು ಭಾರತದ ನೀತಿಯಾಗಿತ್ತು. ಆದರೆ, ರಮಲ್ಲಾದಲ್ಲಿ ಮೋದಿ ಅವರ ಆಡಿರುವ ಮಾತುಗಳಿಗೆ ಈ ನಿಲುವನ್ನು ಹೋಲಿಸಿದರೆ ಸೂಕ್ಷ್ಮವಾದ ವ್ಯತ್ಯಾಸ ಗಮನಿಸಬಹುದು. ರಮಲ್ಲಾದಲ್ಲಿ ಅವರು ಹೇಳಿರುವುದು ಸ್ವತಂತ್ರ ಮತ್ತು ಸಾರ್ವಭೌಮ ಪ್ಯಾಲೆಸ್ಟೇನ್ ದೇಶದ ರಚನೆ ವಿಚಾರ ಮಾತ್ರ. ಆಕ್ರಮಿತ ಪ್ರದೇಶದಿಂದ ಇಸ್ರೇಲ್ ನಿರ್ಗಮಿಸಬೇಕೆಂದಾಗಲೀ, ಜರೂಸಲೆಂ ಪ್ಯಾಲೆಸ್ಟೇನ್ ದೇಶದ ಭಾಗ ಎಂದಾಗಲೀ ಅವರು ಅಪ್ಪಿತಪ್ಪಿಯೂ ಹೇಳಿಲ್ಲ!

ಅಷ್ಟೇ ಅಲ್ಲ, ಅವರು ಹಿಂದಿನ ಪ್ರಧಾನಿ ಜವಹರಲಾಲ್ ನೆಹರೂ ಸಂಸ್ಥಾಪಕ ಸದಸ್ಯರಾಗಿದ್ದ ಅಲಿಪ್ತ ಚಳವಳಿಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ್ದಾರೆ. ಪ್ಯಾಲೆಸ್ಟೇನ್ ಕುರಿತಂತೆ ಅಲಿಪ್ತ ಚಳವಳಿ ಅನುಸರಿಸಿಕೊಂಡ ನೀತಿಯನ್ನು ಭಾರತ ಮುಂದುವರಿಸಲಿದೆ ಎಂದೂ ಅವರು ಹೇಳಿರುವುದು ಆಶ್ಚರ್ಯ ಹುಟ್ಟಿಸುತ್ತದೆ. ಕಾಶ್ಮೀರ ಸೇರಿದಂತೆ ದೇಶ ಇಂದು ಎದುರಿಸುತ್ತಿರುವ ಸಮಸ್ಯೆಗಳಿಗೆ ನೆಹರೂ ಅವರ ಆಡಳಿತವೇ ಕಾರಣ ಎಂದು ಮೋದಿ ಅವರು ತಮ್ಮ ಭಾಷಣಗಳಲ್ಲಿ ಅಷ್ಟೇ ಏಕೆ, ಸಂಸತ್ತಿನಲ್ಲೇ ದೂಷಿಸಿದ್ದಾರೆ. ಇದೀಗ ಪ್ಯಾಲೆಸ್ಟೇನ್ ಸಮಸ್ಯೆಗೆ ಪರಿಹಾರ ಮಾರ್ಗವಾಗಿ ನೆಹರೂ ಅವರು ಪ್ರತಿಪಾದಿಸಿದ ಅಲಿಪ್ತ ನೀತಿಯನ್ನೇ ಪ್ರಧಾನಿ ಮೋದಿ ರೊಮಲ್ಲಾದಲ್ಲಿ ಪುನರುಚ್ಚರಿಸಿದ್ದಾರೆ. ಮೋದಿ ಅವರ ಈ ಹೇಳಿಕೆ ಸಹಜವಾಗಿಯೇ ಅವರ ಗೊಂದಲಕಾರಿ ತಿಳಿವಳಿಕೆಯನ್ನು ಬಯಲು ಮಾಡಿದೆ.

ಪ್ಯಾಲೆಸ್ಟೇನ್ ಕುರಿತ ಭಾರತದ ನೀತಿಯಲ್ಲಿ ಸೂಕ್ಷ್ಮ ಬದಲಾವಣೆಗಳಾಗಿವೆ ಎನ್ನುವುದರಲ್ಲಿ ಅನುಮಾನವಿಲ್ಲ. ಈ ಬದಲಾವಣೆ ಬಹುಶಃ ಸಾಕಷ್ಟು ಯೋಚಿಸಿಯೇ ಮಾಡಲಾಗಿದೆ. ಈ ಬದಲಾವಣೆಗೆ ಒಂದು ಹಿನ್ನೆಲೆಯೂ ಇದೆ. ಇಸ್ರೇಲ್ ಜೊತೆ ಮೋದಿ ಅವರು ಈಗ ಉತ್ತಮ ಬಾಂಧವ್ಯ ಬೆಳೆಸಿದ್ದಾರೆ. ಮೋದಿ ಅವರು ಇಸ್ರೇಲ್‍ಗೆ ಹೋಗಿಬಂದ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ನೇತಾನ್ಯಹು ಅವರು ಭಾರತಕ್ಕೆ ಭೇಟಿ ನೀಡಿದ್ದಾರೆ. ಮೋದಿ ಮತ್ತು ನೇತಾನ್ಯಹು ಅವರು ಪರಸ್ಪರ ವಿಶೇಷ ಮೈತ್ರಿಯನ್ನು ಪ್ರದರ್ಶಿಸಿದ್ದಾರೆ. ಇಸ್ರೇಲ್ ಜೊತೆ ಪ್ರಸ್ತುತ ಸರ್ಕಾರ ಹೆಚ್ಚು ಮೈತ್ರಿ ಬೆಳೆಸಲು ಕಾರಣ ಪಾಕಿಸ್ತಾನವು ಕಾಶ್ಮೀರದಲ್ಲಿ ನಡೆಸುತ್ತಿರುವ ರಕ್ತಪಾತ ಆಗಿರಬಹುದು. ಭಯೋತ್ಪಾದನೆಯನ್ನು ಮೆಟ್ಟಿಸುವಲ್ಲಿ ಇಸ್ರೇಲ್ ಬಹುಪಾಲು ಯಶಸ್ವಿಯಾಗಿದ್ದು ಆ ಕಾರ್ಯತಂತ್ರ ಮತ್ತು ಯುದ್ಧಾಸ್ತ್ರಗಳನ್ನು ಪಡೆದು ಪಾಕಿಸ್ತಾನವನ್ನು ಹಣಿಸಬಹುದು ಎಂಬುದು ಮೋದಿ ಅವರ ಲೆಕ್ಕಾಚಾರವಾಗಿರಬಹುದು. ಇಸ್ರೇಲ್ ಕೂಡ ಭಾರತ ಕೇಳಿದ್ದನ್ನು ಕೊಡಲು ತಯಾರಿದೆ. ಪ್ಯಾಲೆಸ್ಟೇನ್ ವಿಚಾರದಲ್ಲಿ ಇಸ್ರೇಲ್ ಅಪರಾಧಿ ಸ್ಥಾನದಲ್ಲಿದೆ. ಹೀಗಾಗಿ, ಕೆಟ್ಟ ಹೆಸರಿನಿಂದ ಹೊರಬರಲು ಅದಕ್ಕೆ ಭಾರತದಂಥ ದೊಡ್ಡ ಪ್ರಜಾತಂತ್ರ ದೇಶದ ಮೈತ್ರಿ ಬೇಕು. ಅದನ್ನು ನೆತಾನ್ಯಹು ಪಡೆದಿದ್ದಾರೆ.

ಇದನ್ನೂ ಓದಿ : ಪ್ಯಾಲೆಸ್ಟೇನ್ ನಾಯಕ ಅರಾಫತ್‌ರನ್ನು ಟೂತ್‌ಪೇಸ್ಟ್‌ಗೆ ವಿಷ ಬೆರೆಸಿ ಕೊಲ್ಲಲಾಯಿತೇ?

ಭಾರತ ಮತ್ತು ಇಸ್ರೇಲ್ ನಡುವೆ ಹೊಂದಾಣಿಕೆ ಎಷ್ಟು ಚೆನ್ನಾಗಿ ಆಗಿದೆ ಎಂದರೆ, ಮೋದಿ ಅವರು ಪ್ಯಾಲೆಸ್ಟೇನ್‍ಗೆ ಭೇಟಿ ನೀಡುವುದಕ್ಕೆ ನೆತಾನ್ಯಹು ಆಕ್ಷೇಪ ವ್ಯಕ್ತ ಮಾಡಲೇ ಇಲ್ಲ. ನೆತಾನ್ಯಹು ತೋರಿಸಿದ ವಿಶ್ವಾಸಕ್ಕೆ ಪ್ರತಿಯಾಗಿ ಮೋದಿ ಅವರು ರಮಲ್ಲಾ ಭೇಟಿ ಸಮಯದಲ್ಲಿ ಇಸ್ರೇಲ್ ಆಕ್ರಮಿತ ಪ್ರದೇಶಗಳು ಮತ್ತು ಜರೂಸಲೆಂ ಬಗ್ಗೆ ಪ್ರಸ್ತಾಪಿಸುವುದೇ ಇಲ್ಲ. ಅಂದರೆ, ಇಸ್ರೇಲ್‍ಗೆ ಸಂಬಂಧಿಸಿದಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿರುವ ಹೊಸ ನೀತಿಯನ್ನು ಭಾರತ ಅನುಮೋದಿಸಿದಂತಾಗಿದೆ. ಆದರೆ, ವಾಸ್ತವವಾಗಿ ಹಲವಾರು ದಶಕಗಳಿಂದ ಪ್ಯಾಲೆಸ್ಟೇನ್ ಸಮಸ್ಯೆಗೆ ಸಂಬಂಧಿಸಿದಂತೆ ನಿಲುವು ಭಿನ್ನವಾದುದು.

ಇಸ್ರೇಲ್‍ನ ಟೆಲ್ ಅವೀವ್ ನಗರದಿಂದ ತನ್ನ ರಾಯಭಾರ ಕಚೇರಿಯನ್ನು ಜರೂಸಲೆಂಗೆ ಸ್ಥಳಾಂತರಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದನ್ನು ಅರಬ್, ಯೂರೋಪ್ ಒಕ್ಕೂಟದ ದೇಶಗಳು ಒಪ್ಪಿಲ್ಲ. ಈ ಸಂದರ್ಭದಲ್ಲಿ ಅರಬ್ ದೇಶಗಳು ವಿಶ್ವಸಂಸ್ಥೆಯಲ್ಲಿ ನಿರ್ಣಯವೊಂದನ್ನು ಮಂಡಿಸಿ, ಅಮೆರಿಕದ ನಿರ್ಧಾರವನ್ನು ವಿರೋಧಿಸಿದವು. ಭಾರತ ಕೂಡ ನಿರ್ಣಯದ ಪರ ಮತ ಚಲಾಯಿಸಿತು. ಈ ನಿಲುವಿಗೂ, ಈಗ ಮೋದಿ ಅವರು ರೊಮಲ್ಲಾದಲ್ಲಿ ಆಡಿರುವ ಮಾತುಗಳಿಗೂ ಪರಸ್ಪರ ವಿರೋಧಾಭಾಸ ಕಾಣುತ್ತದೆ. ಪ್ಯಾಲೆಸ್ಟೇನ್ ವಿಷಯದಲ್ಲಿ ಭಾರತ ಹಾದಿ ತಪ್ಪುತ್ತಿರುವಂತೆ ಕಾಣುತ್ತಿದೆ. ಈ ಗೊಂದಲ ಒಂದು ಹಂತದಲ್ಲಿ ಅರಬ್ ದೇಶಗಳು ಮತ್ತು ಭಾರತದ ನಡುವಣ ಬಾಂಧವ್ಯಕ್ಕೆ ಆಘಾತ ತರಬಹುದು. ಈ ವಿಚಾರದಲ್ಲಿ ಭಾರತವು ಅಮೆರಿಕ ಮತ್ತು ಇಸ್ರೇಲ್‍ನ ಜೊತೆ ನಿಲ್ಲುವುದು ಅಪಾಯಕಾರಿ. ತೈಲ, ಅನಿಲಕ್ಕಾಗಿ ಭಾರತ ಮುಸ್ಲಿಂ ದೇಶಗಳನ್ನು ಅವಲಂಬಿಸಿದೆ. ಲಕ್ಷಾಂತರ ಭಾರತೀಯರು ಅರಬ್ ಮತ್ತಿತರ ಮುಸ್ಲಿಂ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮುಸ್ಲಿಂ ದೇಶಗಳು ಪ್ಯಾಲೆಸ್ಟೇನ್ ಬೆಂಬಲಕ್ಕೆ ನಿಂತಿವೆ. ಈ ಹಿನ್ನೆಲೆಯಲ್ಲಿ ಭಾರತ ಎಚ್ಚರಿಕೆಯ ಹೆಜ್ಜೆ ಇಡುವುದು ಸೂಕ್ತ.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More