ಉ.ಕೊರಿಯಾ ಜೊತೆ ಮಾತುಕತೆಗೆ ಸಿದ್ಧ ಎಂದು ಕುತೂಹಲ ಕೆರಳಿಸಿದ ಅಮೆರಿಕ

ದಕ್ಷಿಣ ಕೊರಿಯಾದ ಪಿಯಾಂಗ್ ಚಾಂಗ್‌ನಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್ ಒಂದು ರೀತಿಯಲ್ಲಿ ಎರಡೂ ಕೊರಿಯಾಗಳ ನಡುವೆ ಇರುವ ಹಲವು ದಶಕಗಳ ದ್ವೇಷದ ಅಂತ್ಯಕ್ಕೆ ಕಾರಣವಾಗಬಹುದು ಎಂಬ ಆಶಾಭಾವನೆ ಮೂಡಿಸಿರುವುದು ಕುತೂಹಲಕಾರಿ ಬೆಳವಣಿಗೆ

ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಉತ್ತರ ಕೊರಿಯಾದ ಆಟಗಾರರು ಎಷ್ಟು ಪದಕಗಳನ್ನು ಗೆಲ್ಲುತ್ತಾರೋ ಗೊತ್ತಿಲ್ಲ. ಆದರೆ, ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರಂತೂ ಪದಕಕ್ಕಿಂತಲೂ ದೊಡ್ಡದಾದ ಶ್ಲಾಘನೆಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕಿಮ್ ಅವರನ್ನು ಅಮೆರಿಕ ಸೇರಿದಂತೆ ಪಾಶ್ಚಾತ್ಯ ದೇಶಗಳು ವಿಶ್ವವನ್ನು ನಾಶಮಾಡಬಹುದಾದ ದೊಡ್ಡ ಭೂತದಂತೆ ವರ್ಣಿಸುತ್ತ ಬಂದಿದ್ದು, ಈ ವರ್ಣನೆ ಅಸಮರ್ಪಕ ಎಂಬುದು ಈಗ ಗೊತ್ತಾಗಿದೆ.

ಕಿಮ್ ಅವರು ತಮ್ಮ ದೇಶದ ಕ್ರೀಡಾಳುಗಳು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಸೂಚಿಸಿದರಷ್ಟೇ ಅಲ್ಲ, ಇದೀಗ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೆ ಇನ್ ಅವರನ್ನು ಮಾತುಕತೆಗಾಗಿ ಉತ್ತರ ಕೊರಿಯಾಗೆ ಬರುವಂತೆ ಆಹ್ವಾನ ನೀಡಿದ್ದಾರೆ. ಒಲಿಂಪಿಕ್ಸ್ ನಿಯೋಗದ ನೇತೃತ್ವ ವಹಿಸಿರುವ ಕಿಮ್ ಅವರ ಸೋದರಿ ಕಿಮ್ ಜೊ ಜಾಂಗ್ ಅವರೇ ಖುದ್ದಾಗಿ ತಮ್ಮ ಸೋದರ ಕೊಟ್ಟಿರುವ ಪತ್ರವನ್ನು ಮೂನ್ ಅವರಿಗೆ ನೀಡಿದ್ದಾರೆ. ಈ ಆಹ್ವಾನ ವಿಶ್ವಾದ್ಯಂತ ಸಂಚಲನವನ್ನು ಉಂಟುಮಾಡಿದೆ. ಸಾಧ್ಯವಾದಷ್ಟು ಬೇಗ ಮಾತುಕತೆ ನಡೆಸುವ ಮಾತನ್ನು ಅವರು ಆಡಿದ್ದಾರೆ.

ಹೀಗಾಗಿಯೇ, ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರು ತಮ್ಮ ಪಕ್ಕದಲ್ಲಿಯೇ ಕುಳಿತಿದ್ದ ಕಿಮ್ ಸಹೋದರಿ ಮತ್ತು ದೇಶದ ಇತರ ಹಿರಿಯ ಮುಖಂಡರಿಗೂ ನಮಸ್ಕಾರ ಹೇಳಲಿಲ್ಲ. ಸಂತೋಷ ಕೂಟಕ್ಕೆ ಬಂದ ಹಾಗೆ ಮಾಡಿ ಕೆಲವೇ ನಿಮಿಷಗಳಲ್ಲಿ ಹೊರಹೋಗಿದ್ದಾರೆ. ದ್ವೇಷ ಇರುವುದು ಎರಡೂ ಕೊರಿಯಾಗಳ ನಡುವೆ ಅಲ್ಲ, ಅಮೆರಿಕ ಮತ್ತು ಉತ್ತರ ಕೊರಿಯಾ ನಡುವೆ ಎಂಬ ಅಭಿಪ್ರಾಯ ಮೂಡುವಂತೆ ಬೆಳವಣಿಗೆಗಳು ಇದ್ದವು. ಆದರೆ, ಉದ್ಘಾಟನೆ ಮುಗಿದ ಒಂದೆರಡು ದಿನಗಳಲ್ಲಿ ಕೆಲವು ಅನಿರೀಕ್ಷಿತ ಬದಲಾವಣೆಗಳು ಆಗಿವೆ. ಅಮೆರಿಕದ ಉಪಾಧ್ಯಕ್ಷ ಮೈಕ್‌ ಪೆನ್ಸ್‌ ಅವರು ಅಚ್ಚರಿ ಹುಟ್ಟಿಸುವಂಥ ಹೇಳಿಕೆ ನೀಡಿದ್ದಾರೆ. ಉತ್ತರ ಕೊರಿಯಾ ಜೊತೆ ಅಮೆರಿಕ ಮಾತನಾಡಲು ಸಿದ್ಧವಿದೆ ಎಂಬುದೇ ಆ ಹೇಳಿಕೆ. ನಿರೀಕ್ಷೆಯಂತೆಯೇ ಈ ಹೇಳಿಕೆ ಉತ್ತರ ಕೊರಿಯಾ ವಿಚಾರದಲ್ಲಿ ಕುತೂಹಲ ಹೆಚ್ಚಿಸಿದೆ. ವಿದೇಶಾಂಗ ಸಚಿವ ರೆಕ್ಸ್‌ ಟಿಲ್ಲರ್‌ಸನ್‌ ಅವರೂ ಮಾತುಕತೆಯ ಪರವಾಗಿದ್ದಾರೆ.

ಆವರು ಈ ಬಗ್ಗೆ ಪ್ರಸ್ತಾಪಿಸದಾಗಲೆಲ್ಲ ಟ್ರಂಪ್‌ ಅವರ ಆಡಳಿತ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಮಾಡಿಲ್ಲ. ಪರಮಾಣು ಕಾರ್ಯಕ್ರಮ ರದ್ದು ಮಾಡದ ಹೊರತು ಅಮೆರಿಕ ಮಾತುಕತೆಗೆ ಮುಂದಾಗುವ ಪ್ರಶ್ನೆಯೇ ಇಲ್ಲ ಎನ್ನುವುದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ನಿಲುವು. ಇದೀಗ ಪೆನ್ಸ್‌ ಅವರು ಭಿನ್ನ ನಿಲುವು ವ್ಯಕ್ತ ಮಾಡಿದ್ದು, ಅದಕ್ಕೆ ಟ್ರಂಪ್‌ ಅವರ ಒಪ್ಪಿಗೆ ಇದ್ದಿರಲು ಸಾಧ್ಯ ಎನ್ನುವುದು ರಾಜತಾಂತ್ರಿಕರ ವಾದ. ಇದೇನೇ ಇದ್ದರೂ, ಅಮೆರಿಕ ಮತ್ತು ಉತ್ತರ ಕೊರಿಯಾ ನಡುವೆ ಹಿಂದೆ ಮಾತುಕತೆ ನಡೆದಿರುವ ನಿದರ್ಶನವಿದೆ. ಪ್ಲುಟೋನಿಯಂ ತಂತ್ರಜ್ಞಾನ ಆಧಾರಿತ ಮಾರಕಾಸ್ತ್ರಗಳ ತಯಾರಿಕೆಯನ್ನು ನಿಲ್ಲಿಸುವುದಾಗಿ ಆ ಮಾತುಕತೆಯಕಲ್ಲಿ ಉತ್ತರ ಕೊರಿಯಾ ಹೇಳಿತ್ತು. ಆದರೆ, ಚರ್ಚೆಗಳು ವಿವರಗಳ ಹಂತಕ್ಕೆ ಬಂದಾಗ ಮಾತುಕತೆ ಮುರಿದುಬಿದ್ದಿತ್ತು. ಇದು ಆದದ್ದು ೨೦೦೨ರಲ್ಲಿ . ಈ ಮಧ್ಯೆಯೂ ಹಲವು ಬಾರಿ ಮಾತುಕತೆಯ ಸಾಧ್ಯತೆಗಳು ಸೃಷ್ಟಿಯಾಗಿದೆ. ಆದರೆ, ಅವು ಯಾವುವೂ ಕೈಗೂಡಿಲ್ಲ.

ದಕ್ಷಿಣ ಕೊರಿಯಾ ಆರ್ಥಿಕವಾಗಿ ಬಲವಾಗಿದೆ. ಅಭಿವೃದ್ಧಿ ವಿಷಯದಲ್ಲಿ ವಿಶ್ವದ ಮುಂಚೂಣಿ ದೇಶಗಳಲ್ಲಿ ಒಂದಾಗಿದೆ. ಆದರೆ, ಉತ್ತರ ಕೊರಿಯಾ ಆರ್ಥಿಕವಾಗಿ ದುರ್ಬಲವಾಗಿದೆ. ಇದಕ್ಕೆ ಕಾರಣ ಅದರ ಮೇಲೆ ವಿಧಿಸಲಾಗಿರುವ ಆರ್ಥಿಕ ನಿರ್ಬಂಧಗಳು. ಇದರಿಂದಾಗಿ, ಅದು ಬೇರೆ ದೇಶಗಳಿಂದ ಏನನ್ನೂ ಕೊಳ್ಳುವಂತೆಯೂ ಇಲ್ಲ, ಮಾರುವಂತೆಯೂ ಇಲ್ಲ. ಈ ನಿರ್ಬಂಧಗಳನ್ನು ಉಲ್ಲಂಘಿಸಿ ರಹಸ್ಯವಾಗಿ ವಾಣಿಜ್ಯ ವಹಿವಾಟು ನಡೆಸುತ್ತ ಬರಲಾಗುತ್ತಿದೆ. ಆಂತರಿಕ ಸಂಪನ್ಮೂಲದ ಜೊತೆಗೆ ರಹಸ್ಯವಾಗಿ ಬೇಕಾದ್ದನ್ನು ಪಡೆದು ಆಡಳಿತ ನಡೆಸಲಾಗುತ್ತಿದೆ. ದಕ್ಷಿಣ ಕೊರಿಯಾ ಜೊತೆ ಸ್ನೇಹ ಬೆಳೆದರೆ ಉತ್ತರ ಕೊರಿಯಾದ ಬಹುಪಾಲು ಸಂಕಷ್ಟಗಳು ಇಲ್ಲವಾಗುತ್ತವೆ. ದಕ್ಷಿಣ ಕೊರಿಯಾ ಜನರ ಬದುಕಿಗೆ ಸಂಬಂಧಿಸಿದ ಅಗತ್ಯಗಳ ವಿಚಾರದಲ್ಲಿ ಶ್ರೀಮಂತವಾಗಿದ್ದರೆ, ಉತ್ತರ ಕೊರಿಯಾ ಮಿಲಿಟರಿ ಬಲದಲ್ಲಿ ಶಕ್ತಿಶಾಲಿಯಾಗಿದೆ. ದಕ್ಷಿಣ ಕೊರಿಯಾಕ್ಕೆ ಕೊಡಬಹುದಾದದ್ದು ಈ ಮಿಲಟರಿ ಬಲ.

ಇದೇನೇ ಇದ್ದರೂ, ಕೊರಿಯಾಗಳ ಸಮಸ್ಯೆ ಕೇವಲ ಆ ಎರಡು ದೇಶಗಳಿಗೆ ಸಂಬಂಧಿಸಿದ ಸಮಸ್ಯೆಯಾಗಿಲ್ಲ. ವಿಶ್ವದ ಶಾಂತಿಗೆ ಭಂಗ ತರಬಹುದಾದ ಸಮಸ್ಯೆಯಾಗಿದೆ. ಜನರ ಸಾಮೂಹಿಕ ವಿನಾಶದ ಅಸ್ತ್ರಗಳನ್ನು ಪಡೆದಿದೆ. ಪರಮಾಣು ಬಾಂಬ್‌, ಜಲಜನಕ ಬಾಂಬ್‌ಗಳೂ ಸೇರಿದಂತೆ ಅನೇಕ ವಿನಾಶಕಾರಿ ಮಿಲಿಟರಿ ಅಸ್ತ್ರಗಳನ್ನು ತಯಾರಿಸಿಟ್ಟುಕೊಂಡಿವೆ. ಅಮೆರಿಕ ಸೇರಿದಂತೆ ಎಲ್ಲ ದೇಶಗಳ ಆತಂಕ ಇರುವುದು ಈ ಕಾರಣಕ್ಕೇ. ವಿಶ್ವದಲ್ಲಿ ಒಂಟಿಯಾಗಿರುವ ದೇಶ ಉತ್ತರ ಕೊರಿಯಾ. ಯಾವುದೋ ಸಮಸ್ಯೆಗೆ ಅಲ್ಲಿನ ಅಧ್ಯಕ್ಷರಿಗೆ ತಲೆಕೆಟ್ಟು, ತಮಗಾಗದ ದೇಶದ ಮೇಲೆ ಪರಮಾಣು ಬಾಂಬ್ ಹಾಕಿದರೆ ಏನು ಗತಿ ಎಂಬುದೇ ಎಲ್ಲರ ಆತಂಕ. ಕಳೆದ ಒಂದು ವರ್ಷದಲ್ಲಿ ಅಣುಬಾಂಬ್ ಹೊತ್ತೊಯ್ಯಬಹುದಾದ ದೂರಗಾಮಿ ಕ್ಷಿಪಣಿಗಳನ್ನು ಉತ್ತರ ಕೊರಿಯಾ ಪರೀಕ್ಷಾರ್ಥ ಪ್ರಯೋಗ ನಡೆಸಿಯೂ ಆಗಿದೆ. ಅಮೆರಿಕ, ಜಪಾನ್ ದೇಶಗಳನ್ನು ಕ್ಷಣಾರ್ಧದಲ್ಲಿ ನಾಶಮಾಡುವಂಥ ಮಾರಕ ಅಸ್ತ್ರಗಳನ್ನು ತಯಾರಿಸಿಕೊಂಡು ಕೂತಿದೆ ಉತ್ತರ ಕೊರಿಯಾ.

"ಅಣುಬಾಂಬ್‌ ಕೀಯನ್ನು ನನ್ನ ಬಳಿಯೇ ಇಟ್ಟುಕೊಂಡಿದ್ದೇನೆ,” ಎಂದು ಕಿಮ್ ಒಮ್ಮೆ ಅಮೆರಿಕಕ್ಕೆ ಬೆದರಿಕೆಯ ಮಾತನ್ನು ಆಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, “ನಿಮ್ಮ ಬಳಿ ಇರುವ ಬಾಂಬ್‌ಗಿಂತ ದೊಡ್ಡ ಬಾಂಬ್ ನನ್ನ ಬಳಿ ಇದ್ದು, ಅದರ ಕೀ ನನ್ನ ಹತ್ತಿರವೇ ಇದೆ. ನೀವು ಪ್ರಯೋಗಿಸಬಹುದಾದ ಬಾಂಬ್ ವಿಫಲವಾಗಬಹುದು. ಆದರೆ ನನ್ನ ಬಳಿಯಿರುವ ಬಾಂಬ್ ವಿಫಲವಾಗುವುದೇ ಇಲ್ಲ ಎನ್ನುವುದು ನೆನಪಿರಲಿ,” ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರುಗೇಟು ನೀಡಿದ್ದರು. ಇದು ಒಂದು ಉದಾಹರಣೆಯಷ್ಟೆ. “ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ಗೆ ಆಗಾಗ್ಗೆ ಬೆದರಿಕೆ ಹಾಕುವುದು ಚಾಳಿ ಆಗಿಬಿಟ್ಟಿದೆ. ಏನಾದರೂ ಮಾಡಿ ಉತ್ತರ ಕೊರಿಯಾದಲ್ಲಿರುವ ಪರಮಾಣು ತಂತ್ರಜ್ಞಾನವನ್ನು ನಾಶಮಾಡಬೇಕು ಮತ್ತು ಅಲ್ಲಿ ಪ್ರಜಾತಂತ್ರ ಸ್ಥಾಪಿತವಾಗಬೇಕು,” ಎನ್ನುವುದು ಪರಮಾಣು ಅಸ್ತ್ರ ತಂತ್ರಜ್ಞಾನ ವಿರೋಧಿಗಳೆಲ್ಲರ ಅಭಿಪ್ರಾಯ. ಹೀಗಾಗಿ, ಎರಡೂ ಕೊರಿಯಾಗಳು ಒಂದಾಗುವ ಪ್ರಶ್ನೆಯಷ್ಟೇ ಇಲ್ಲಿ ಇಲ್ಲ. ಪರಮಾಣು ತಂತ್ರಜ್ಞಾನದಂತೆ ಇನ್ನೂ ಹಲವು ರೀತಿಯ ಮಾರಕ ತಂತ್ರಜ್ಞಾನ ನಾಶ ಮಾಡಿ, ನಂತರ ಸ್ನೇಹ ಬೆಳೆಸಬೇಕೆಂದು ಇತರ ದೇಶಗಳು ಒತ್ತಾಯಿಸುತ್ತಿವೆ. ಮುಂದೇನಾಗುತ್ತದೆ ಎನ್ನುವುದನ್ನು ಈಗ ಊಹಿಸುವುದು ಕಷ್ಟ.

ಎರಡನೇ ಮಹಾಯುದ್ಧ ಕೊನೆಗೊಂಡ ಸಮಯದಲ್ಲಿ ಹಿಂದಿನ ಕೊರಿಯಾದ ಕೆಲ ಭಾಗಗಳು (ಉತ್ತರ) ಸೋವಿಯತ್ ಸೇನೆಯ ವಶದಲ್ಲಿದ್ದವು. ಕೆಲವು ಭಾಗ (ದಕ್ಷಿಣ) ಅಮೆರಿಕದ ವಶದಲ್ಲಿದ್ದವು. ಸೋವಿಯತ್ ವಶದಲ್ಲಿದ್ದ ಭಾಗದಲ್ಲಿ ಕಮ್ಯುನಿಸ್ಟ್ ಮಾದರಿ ಆಡಳಿತ ಸ್ಥಾಪಿತವಾಯಿತು. ಅದೇ ರೀತಿ, ಅಮೆರಿಕದ ವಶದಲ್ಲಿದ್ದ ಕೊರಿಯಾ ಪ್ರದೇಶದಲ್ಲಿ ಮಾರುಕಟ್ಟೆ ವ್ಯವಸ್ಥೆ ಸ್ಥಾಪಿತವಾಯಿತು. ಕೊರಿಯಾ ಅಂದರೆ, ಎರಡೂ ಕೊರಿಯಾ ಪ್ರದೇಶಗಳು ತಮ್ಮ ಹಿಡಿತದಲ್ಲಿರಬೇಕೆಂದು ಬಯಸಿದ ಉತ್ತರ ಕೊರಿಯಾದ ಆಗಿನ ನಾಯಕ ಎರಡನೇ ಕಿಮ್ ಸಂಗ್, ದಕ್ಷಿಣ ಕೊರಿಯಾವನ್ನು ಆಕ್ರಸಿಕೊಳ್ಳಲು ಸೇನೆ ನುಗ್ಗಿಸಿದರು. ಆಗಿನ ಸೋವಿಯತ್ ನಾಯಕ ಜೋಸೆಫ್ ಸ್ಟಾಲಿನ್ ಅದಕ್ಕೆ ಸಮ್ಮತಿ ಸೂಚಿಸಿದ್ದರಾದರೂ ಮಿಲಿಟರಿ ನೆರವು ನೀಡಲಿಲ್ಲ. ಚೀನಾದ ಆಗಿನ ನಾಯಕ ಮಾವೋತ್ಸೆ ತುಂಗ್ ಉತ್ತರ ಕೊರಿಯಾಕ್ಕೆ ಎಲ್ಲ ರೀತಿಯ ಮಿಲಿಟರಿ ನೆರವು ನೀಡಿದರು. ಇದು 1950ರಲ್ಲಿ ಭೀಕರ ಯುದ್ಧಕ್ಕೆ ಕಾರಣವಾಯಿತು. ಮೂರು ವರ್ಷಗಳ ಕಾಲ ನಡೆದ ಈ ಯುದ್ಧ ಲಕ್ಷಾಂತರ ಜನರ ಸಾವಿಗೆ ಕಾರಣವಾಯಿತು. ಬಹುಶಃ ಯಾರೂ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಅರಿತ ಎರಡೂ ಕಡೆಯ ನಾಯಕರು ಯುದ್ಧ ನಿಲ್ಲಿಸಿದರು. ಯುದ್ಧ ನಿಂತರೂ ವೈಮನಸ್ಯ ಅಳಿಯಲಿಲ್ಲ. ಹೀಗಾಗಿ, 1953ರಿಂದಲೂ ಆಗಾಗ್ಗೆ ಮಿಲಿಟರಿ ಸಂಘರ್ಷ ನಡೆಯುತ್ತಲೇ ಇವೆ.

ಇದನ್ನೂ ಓದಿ : ಪ್ಯಾಲೆಸ್ಟೇನ್ ಕುರಿತ ಭಾರತದ ನಿಲುವು ದಿಢೀರನೆ ದುರ್ಬಲವಾಯಿತೇ?

ಸೋವಿಯತ್ ಒಕ್ಕೂಟ ವಿಸರ್ಜನೆಯಾದ ನಂತರ ಉತ್ತರ ಕೊರಿಯಾ ಒಂಟಿಯಾಯಿತು. ಕ್ಯೂಬಾದಂತೆ ಒಂಟಿಯಾಗಿಯೇ ಅಭಿವೃದ್ಧಿ ಸಾಧಿಸಲು ಪ್ರಯತ್ನಿಸುತ್ತ ಬಂದಿದೆ. ದಕ್ಷಿಣ ಕೊರಿಯಾ ತನ್ನ ದೇಶದ ಭಾಗವಾಗಬೇಕು ಎನ್ನುವ ಉತ್ತರ ಕೊರಿಯಾದ ನಾಯಕರು ಸತತವಾಗಿ ಸಂಘರ್ಷದ ದಾರಿ ತುಳಿದಿದ್ದಾರೆ. ಉತ್ತರ ಕೊರಿಯಾದ ಸಾಮ್ರಾಜ್ಯಶಾಹಿ ಧೋರಣೆಯ ವಿರುದ್ದ ಅಮೆರಿಕವು ದಕ್ಷಿಣ ಕೊರಿಯಾದ ಬೆಂಬಲಕ್ಕೆ ನಿಂತಿದೆ. ದಕ್ಷಿಣ ಕೊರಿಯಾದ ಗಡಿಯಲ್ಲಿ ತನ್ನ ಅತ್ಯಾಧುನಿಕ ಮಿಲಿಟರಿ ಆಸ್ತ್ರಗಳನ್ನು ಅಮೆರಿಕ ನಿಲ್ಲಿಸಿದೆ. ಅಂತೆಯೇ, ತನ್ನ ಲಕ್ಷಾಂತರ ಸೈನಿಕರನ್ನೂ ಅಲ್ಲಿ ನಿಲ್ಲಿಸಿದೆ. ಬಹುಶ ಮತ್ತಾವುದೇ ಭಾಗದಲ್ಲಿ ಇಷ್ಟು ಪ್ರಮಾಣದ ಸೈನಿಕರ ಜಮಾವಣೆ ಇಲ್ಲ.

ಸಂಘರ್ಷದ ವಾತಾವರಣದ ಮಧ್ಯೆಯೇ ಹಲವು ಬಾರಿ ಎರಡೂ ಕೊರಿಯಾಗಳು ಒಂದಾಗುವ ಬಗ್ಗೆ ಮಾತುಕತೆಯ ಪ್ರಯತ್ನಗಳು ನಡೆದಿವೆ. ಕೊರಿಯಾ ವಿಭಜನೆಗೊಂಡ ಸಂದರ್ಭದಲ್ಲಿ ಬೇರ್ಪಟ್ಟು ಎರಡು ದೇಶಗಳಲ್ಲಿ ನೆಲೆಸಿರುವ ಜನರನ್ನು ಒಂದುಗೂಡಿಸುವ ಹಲವು ಪ್ರಯತ್ನಗಳು ಯಶಸ್ವಿಯಾಗಿ ನಡೆದಿವೆ. ಎರಡೂ ದೇಶಗಳ ಜನರ ನಡುವೆ ದ್ವೇಷ ಇಲ್ಲ. ಆದರೆ, ನಾಯಕರ ನಡುವೆ ದ್ವೇಷ ಇದೆ. ಜೊತೆಗೆ, ಎರಡೂ ದೇಶಗಳ ಬೆಂಬಲಕ್ಕೆ ನಿಂತಿರುವ ದೇಶಗಳ ನಡುವೆ ಹೊಂದಾಣಿಕೆ ಇಲ್ಲ. ಹೀಗಾಗಿ, ಸಮಸ್ಯೆ ಇತ್ಯರ್ಥವಾಗದೆ ಉಳಿದಿದೆ. ಮಾರಕಾಸ್ತ್ರಗಳನ್ನು ತಯಾರಿಸಿ ಜಗತ್ತನ್ನು ಬೆದರಿಸುವ ದಾರಿ ಬಿಟ್ಟು ಪ್ರಜಾತಂತ್ರ ಮಾರ್ಗದಲ್ಲಿ ಕಿಮ್ ಅವರು ಹೆಜ್ಜೆ ಇಟ್ಟರೆ, ಬಹುಶಃ ದೇಶದ ಸಮಸ್ಯೆಗಳಿಗೆ ಉತ್ತರ ಸಿಗಬಹುದು. ಉತ್ತರ ಕೊರಿಯಾ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಜೀವನಾವಶ್ಯಕ ವಸ್ತುಗಳ ಅಭಾವ ಇದೆ. ಆಹಾರ, ಔಷಧಗಳ ಅಭಾವದಿಂದ ಜನರು ಕಂಗಾಲಾಗಿದ್ದಾರೆ ಎಂಬ ವರದಿಗಳಿವೆ. ಜನಹಿತವನ್ನು ಗಮನದಲ್ಲಿಟ್ಟುಕೊಂಡು ಅಧ್ಯಕ್ಷ ಕಿಮ್ ಜಾಂಗ್ ಉನ್ ಬದಲಾಗಬೇಕಿದೆ. ಅಮೆರಿಕ ಮತ್ತಿತರ ದೇಶಗಳು ಕಿಮ್ ಅವರ ಬೆದರಿಕೆಗೆ ಅಷ್ಟು ಗಮನ ಕೊಡದೆ ಮಾತುಕತೆಯ ದಾರಿಯನ್ನು ತುಳಿಯಲು ಅವರ ಮೇಲೆ ಒತ್ತಡ ತರಬೇಕು. ಯಾವುದೇ ಕಾರಣಕ್ಕೆ ಆ ದಾರಿಯನ್ನು ಬಿಡಬಾರದು.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More