ಖಾಲಿಸ್ತಾನ ಚರ್ಚೆಯನ್ನು ಕೆದಕಿದ ಕೆನಡಾ ಪ್ರಧಾನಿ ಟ್ರೂಡೊ ಭಾರತ ಭೇಟಿ

ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೋ ಅವರು ತಮ್ಮ ಒಂದು ವಾರದ ಭಾರತ ಪ್ರವಾಸದ ಬಳಿಕ ದೇಶಕ್ಕೆ ಹಿಂತಿರುಗಿದ್ದಾರೆ. ಅವರು ತಮ್ಮ ದೇಶಕ್ಕೆ ವಾಪಸಾದ ನಂತರವೂ ಅವರ ಭೇಟಿಯ ಸಂದರ್ಭದಲ್ಲಿ ಎದ್ದ ಖಾಲಿಸ್ತಾನ ವಿವಾದ ಭಾರತದಲ್ಲಿ ಇನ್ನೂ ಚರ್ಚೆಯ ವಿಷಯವಾಗಿಯೇ ಉಳಿದಿದೆ

ಕೆನಡಾ ಮುಂದುವರಿದ ದೇಶ. ಆ ದೇಶದ ಪ್ರಧಾನಿಯೊಬ್ಬರು ಒಂದು ವಾರ ಕಾಲ ಭಾರತದ ಭೇಟಿಯಲ್ಲಿರುವುದು ಅಪರೂಪ. ಇಂಥ ಅಪರೂಪದ ಸಂದರ್ಭದಲ್ಲಿ ಭಾರತ ಮತ್ತು ಕೆನಡಾ ನಡುವೆ ಬಾಂಧವ್ಯ ಹೆಚ್ಚುವಂಥ ಒಪ್ಪಂದಗಳು ಆಗುತ್ತವೆ ಎಂದು ನಿರೀಕ್ಷಿಸುವುದು ಸಹಜ. ಭಾರತ ತೀವ್ರ ವೇಗದಲ್ಲಿ ಬೆಳೆಯುತ್ತಿರುವ ದೇಶವಾದ್ದರಿಂದ ಆರ್ಥಿಕವಾಗಿ ಭಾರತಕ್ಕೆ ಅನುಕೂಲ ಆಗುವಂಥದ್ದೇನೋ ಆಗುತ್ತದೆ ಎಂದು ಜನರು ಕಾಯುವುದು ಸಹಜ. ಆದರೆ, ಟ್ರೂಡೊ ಭೇಟಿ ಸಮಯದಲ್ಲಿ ಅಂಥದ್ದೇನೂ ಆಗಲಿಲ್ಲ. ಒಂದಿಷ್ಟು ಬಾಂಧವ್ಯವೃದ್ಧಿ ಒಪ್ಪಂದಗಳಿಗೆ ಸಹಿ ಬಿದ್ದಿದ್ದೇನೋ ನಿಜವೇ. ಆದರೆ ಆದದ್ದೇ ಬೇರೆ.

ಕೆನಡಾದಲ್ಲಿ ಸುಮಾರು ಐದು ಲಕ್ಷ ಸಿಖ್ಖರು ಇದ್ದಾರೆ. ಆರ್ಥಿಕ ಕ್ಷೇತ್ರದಲ್ಲಿ ಬಲಾಢ್ಯರಾಗಿದ್ದಾರೆ. ಸಿಖ್ಖರು ಮತ್ತು ಇತರರ ನಡುವೆ ಉತ್ತಮ ಸಂಬಂಧ ಇದೆ. ಚುನಾವಣೆಯಲ್ಲಿ ಬಹುಪಾಲು ಸಿಖ್ಖರು ಟ್ರೋಡೊ ನೇತೃತ್ವದ ಲಿಬರಲ್ ಪಾರ್ಟಿಯನ್ನೇ ಬೆಂಬಲಿಸುತ್ತ ಬಂದಿದ್ದಾರೆ. ಕಳೆದ ಚುನಾವಣೆಗಳಲ್ಲಿ 17 ಮಂದಿ ಸಿಖ್ಖರು ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಟ್ರೋಡೊ ಅವರ ಸಂಪುಟದಲ್ಲಿ ನಾಲ್ವರು ಸಚಿವರಿದ್ದು, ಅದರಲ್ಲಿ ಒಬ್ಬರು ರಕ್ಷಣಾ ಖಾತೆ ಸಚಿವರು. ಈ ಹಿನ್ನೆಲೆ ನೋಡಿದರೆ, ಟ್ರೋಡೋ ಮತ್ತು ಅಲ್ಲಿನ ಸಿಖ್ ಸಮುದಾಯ ಹತ್ತಿರವಿದೆ ಎಂದಾಯಿತು.

ಅವರು ಹತ್ತಿರವಿದ್ದರೆ ಯಾರಿಗೂ ತೊಂದರೆ ಇಲ್ಲ. ಆದರೆ, ಭಾರತಕ್ಕೆ ಸಂಬಂಧಿಸಿದಂತೆ ಏನಾದರೂ ಎಡವಟ್ಟುಗಳಾದರೆ ಮಾತ್ರ ಸಮಸ್ಯೆ. ಅಂಥ ಒಂದು ಘಟನೆ ಇತ್ತೀಚೆಗೆ ನಡೆಯಿತು. ಮುಂಬೈನಲ್ಲಿ ಕೆನಡಾ ರಾಯಭಾರ ಕಚೇರಿ ಟ್ರೂಡೊ ಅವರಿಗಾಗಿ ಏರ್ಪಡಿಸಿದ್ದ ಔತಣಕೂಟಕ್ಕೆ ಖಾಲಿಸ್ತಾನಿ ಉಗ್ರಗಾಮಿ ಜಸ್ಪಾಲ್ ಅಟ್ವಾಲ್ ಅವರನ್ನು ಆಹ್ವಾನಿಸಿದ್ದೇ ದೊಡ್ಡ ಎಡವಟ್ಟಾಯಿತು. ಟ್ರೂಡೋ ಅವರ ಪತ್ನಿ ಸೋಫಿ ಗ್ರೆಗೊರಿ ಅವರ ಜೊತೆ ಜಸ್ಪಾಲ್ ಫೋಟೋ ತೆಗೆಸಿಕೊಂಡದ್ದು ಈ ವಿವಾದಕ್ಕೆ ಕಿಡಿ ಹೊತ್ತಿಸಿತು. ಈ ವಿಚಾರ ಬಹಿರಂಗ ಆಗುತ್ತಿದಂತೆಯೇ ಟ್ರೂಡೋ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಟೀಕೆಗಳು ಬಂದವು. ಟ್ರೂಡೊ ಭಾರತಕ್ಕೆ ಬಂದ ದಿನ ಅವರನ್ನು ಬರಮಾಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣಕ್ಕೆ ಹೋಗಲಿಲ್ಲ, ಕಿರಿಯ ಸಚಿರೊಬ್ಬರನ್ನು ಕಳುಹಿಸಿದ್ದರು ಎಂಬ ವಿಚಾರ ಆಗ್ಗಾಗಲೇ ವಿವಾದ ಎಬ್ಬಿಸಿತ್ತು.

ಇಸ್ರೇಲ್ ಪ್ರಧಾನಿ ಬಂದರೆ ವಿಮಾನನಿಲ್ದಾಣಕ್ಕೆ ಹೋಗುವ ಮೋದಿ ಅವರು ಟ್ರೋಡೊ ಅವರನ್ನು ಸ್ವಾಗತಿಸಲು ಹೋಗದಿದ್ದುದು ಸರಿಯಲ್ಲ ಎಂಬ ಟೀಕೆ ವ್ಯಕ್ತವಾಗಿತ್ತು. ಕೆನಡಾದ ಮಾಧ್ಯಮಗಳಲ್ಲಿಯೂ ಈ ಬೆಳವಣಿಗೆ ಸಾಕಷ್ಟು ಚರ್ಚೆಗೆ ಅವಕಾಶ ಒದಗಿಸಿತ್ತು. ಆದರೆ, ಟ್ರೋಡೋ ಅವರ ಔತಣಕೂಟಕ್ಕೆ ಖಾಲಿಸ್ತಾನ ಉಗ್ರಗಾಮಿ ಅಟ್ವಾಲ್‍ಗೆ ಆಹ್ವಾನ ಕೊಟ್ಟ ವಿಚಾರ ಬಹಿರಂಗವಾಗುತ್ತಿದ್ದಂತೆ ಮೋದಿ ಅವರು ಮಾಡಿದ್ದು ಸರಿ ಎನ್ನುವ ಅಭಿಪ್ರಾಯಗಳು ವ್ಯಕ್ತವಾದವು. ನಂತರದ ಕೂಟಗಳಿಗೆ ಅಟ್ವಾಳ್ ಅವರಿಗೆ ನೀಡಲಾಗಿದ್ದ ಆಹ್ವಾನವನ್ನು ರದ್ದು ಮಾಡಲಾಯಿತು.

ಜಸ್ಪಾಲ್ ಅಟ್ವಾಲ್ ಯುವ ಸಿಖ್ಖರ ಸಂಘಟನೆಯ ಸದಸ್ಯರಾಗಿ ಖಾಲಿಸ್ತಾನ ಹೋರಾಟದ ಪ್ರಬಲ ಪ್ರತಿಪಾದಕರಾಗಿದ್ದವರು. 1986ರಲ್ಲಿ ಪಂಜಾಬ್‍ನ ಸಚಿವ ಮಲ್ಕಾಯಿತ್ ಸಿಂಗ್ ಸಿದ್ದು ಅವರು ವಾಂಕೋವರ್ ದ್ವೀಪಕ್ಕೆ ಭೇಟಿ ನೀಡಿದ್ದಾಗ ಅವರನ್ನು ಕೊಲ್ಲಲು ಗುಂಡು ಹಾರಿಸಿದ್ದರು. ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ನ್ಯಾಯಾಲಯದಲ್ಲಿಯೂ ಅವರಿಗೆ ಜೀವಾವಧಿ ಶಿಕ್ಷೆಯಾಗಿತ್ತು. ಆರು ವರ್ಷ ಕಾಲ ಜೈಲಿನಲ್ಲಿದ್ದ ಅವರು, ಪೆರೋಲ್ ಮೇಲೆ ಹೊರಗೆ ಬಂದಿದ್ದರು. ನಂತರ ಸ್ಥಳೀಯ ರಾಜಕಾರಣಿಗಳು ಮತ್ತು ಭಾರತೀಯರ ಜೊತೆ ಸ್ನೇಹ ಬೆಳೆಸಿದ್ದರು. ಈ ಸ್ನೇಹವೇ ಅವರನ್ನು ಭಾರತಕ್ಕೆ ಬರುವಂತೆ ಮಾಡಿತ್ತು. ವಿಚಿತ್ರ ಎಂದರೆ, ಉಗ್ರಗಾಮಿಗಳ ಕಪ್ಪುಪಟ್ಟಿಯಿಂದ ಭಾರತದ ಗೃಹ ಖಾತೆ ಅವರ ಹೆಸರನ್ನು ತೆಗೆದುಹಾಕಿದೆ. ಪರಿಸ್ಥಿತಿ ಹೀಗಿರುವಾಗ, ಟ್ರೂಡೊ ಅವರ ಹೆಸರಿಗೆ ಮಸಿ ಬಳಿಯಲು ಭಾರತದಲ್ಲಿ ಪ್ರಯತ್ನಿಸಲಾಗಿದೆ ಎಂದು ಕೆನಡಾದಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿವೆ.

ಅಟ್ವಾಲ್ ಅವರನ್ನು ಭಾರತದ ಜನರು ಉಗ್ರಗಾಮಿ ಎಂದು ಕರೆಯಬಹುದು. ಆದರೆ, ಕೆನಡಾ ಸರ್ಕಾರದ ಮಟ್ಟದಲ್ಲಿ ಅವರು ಬದಲಾದ ವ್ಯಕ್ತಿ. ಅವರು ಈಗ ಖಾಲಿಸ್ತಾನ ಪ್ರತ್ಯೇಕ ದೇಶ ರಚನೆಯನ್ನೇ ಒಪ್ಪುವುದಿಲ್ಲ. ಹಾಗೆ ನೋಡಿದರೆ, ಕೆನಡಾದ ಬಹುಮಂದಿ ಸಿಖ್ಖರು ಖಾಲಿಸ್ತಾನದ ಬಗ್ಗೆ ತಲೆಕೆಡಸಿಕೊಂಡಿಲ್ಲ. ಮುಖ್ಯವಾಗಿ ಕೆನಡಾದಲ್ಲಿರುವ ಯುವ ಸಿಖ್ ಜನಾಂಗ ಖಾಲಿಸ್ತಾನ ರಚನೆಯನ್ನು ತಮ್ಮ ಆದರ್ಶವನ್ನಾಗಿ ಮಾಡಿಕೊಂಡಿಲ್ಲ.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ಟ್ರೂಡೋ ಸ್ವಾಗತಕ್ಕೆ ಗೈರಾದ ಪ್ರಧಾನಿ ಮೋದಿ, ಬಿಸಿ ಚರ್ಚೆ

ಪಂಜಾಬ್ ರಾಜ್ಯದಲ್ಲಿ ಎಪ್ಪತ್ತು ಮತ್ತು ಎಂಬತ್ತರ ದಶಕದಲ್ಲಿ ಪ್ರತ್ಯೇಕ ಖಾಲಿಸ್ತಾನ ದೇಶ ಸ್ಥಾಪನೆಗೆ ಸಿಖ್ಖರು ಪ್ರಯತ್ನಿಸಿದರು. ಜರ್ನೈಲ್‍ ಸಿಂಗ್ ಬಿಂದರ್‍ವಾಲೇ ನಾಯಕತ್ವದಲ್ಲಿ ಅಮೃತಸರದ ಗೋಲ್ಡನ್ ಟೆಂಪ್‍ಲ್‍ನಲ್ಲಿ ಸೇರಿ ಪ್ರತ್ಯೇಕ ದೇಶ ರಚನೆಯ ಸಂಚನ್ನು ಹೂಡಿದ್ದರು. ಆಗ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ಗೋಲ್ಡನ್ ಟೆಂಪಲ್ ಆವರಣಕ್ಕೆ ಸೇನೆ ನುಗ್ಗಿಸಿ ಉಗ್ರವಾದಿಗಳನ್ನು ಕೊಲ್ಲಿಸಿದರು. ಅಳಿದುಳಿದ ಖಾಲಿಸ್ತಾನದ ಬೆಂಬಲಿಗರು ಹೊರ ದೇಶಗಳಿಗೆ ಹೋಗಿ ಅಲ್ಲಿಂದ ಖಾಲಿಸ್ತಾನ ಚಟುವಟಿಕೆಯನ್ನು ಮುಂದುವರಿಸುತ್ತಿದ್ದಾರೆ. ಖಾಲಿಸ್ತಾನ ಹೋರಾಟದಲ್ಲಿ ನೊಂದ ಕೆಲವರು ತಮ್ಮ ಆದರ್ಶ ದೇಶ ರಚನೆ ಕನಸನ್ನು ಮರೆತಿಲ್ಲ. ಖಾಲಿಸ್ತಾನ ರಚನೆ ಸಾಧ್ಯತೆಯನ್ನು ಇನ್ನೂ ನಂಬಿದ್ದಾರೆ ಮತ್ತು ಅದಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಬೇರೆ-ಬೇರೆ ದೇಶಗಳಲ್ಲಿರುವ ಸಿಖ್ಖರನ್ನು ಒಗ್ಗೂಡಿಸಲು ಯತ್ನಿಸುತ್ತಲೇ ಇದ್ದಾರೆ. ಟೊರೊಂಟೊದಲ್ಲಿ ಜೂನ್‌ನಲ್ಲಿ ವಿಶ್ವ ಸಮಾವೇಶ ಸಂಘಟಿಸಲು ಸಿದ್ಧತೆ ನಡೆಯುತ್ತಿದೆ. ಪಾಕಿಸ್ತಾನ ಇವರಿಗೆ ಪರೋಕ್ಷವಾಗಿ ಬೆಂಬಲ ಸೂಚಿಸುತ್ತಿದೆ ಎನ್ನುವ ವರದಿಗಳೂ ಇವೆ.

ಈ ಮಧ್ಯೆ, ಭಾರತದ ಏಕತೆ ವಿರುದ್ಧದ ಯಾವುದೇ ಚಟುವಟಿಕೆಗೆ ಅವಕಾಶ ಕೊಡುವುದಿಲ್ಲ ಎಂದು ಸ್ವತಃ ಟ್ರೂಡೊ ಅವರೇ ಸ್ಪಷ್ಟಪಡಿಸಿದ್ದಾರೆ. ಟ್ರೂಡೊ ಅವರು ಪ್ರಧಾನಿ ಮೋದಿ ಅವರ ಜೊತೆ ಮಾತುಕತೆ ನಡೆಸಿದ ಸಂದರ್ಭದಲ್ಲಿಯೇ ಈ ಸ್ಪಷ್ಟನೆ ಹೊರಬಿದ್ದಿದೆ. ಭಾರತದ ವಿಭಜನೆಗೆ ಪ್ರಯತ್ನಿಸುವ ಯಾವುದೇ ಶಕ್ತಿಗಳಿಗೆ ಪ್ರೋತ್ಸಾಹ ನೀಡಬಾರದೆಂದೂ ಮೋದಿ ಅವರು ಟ್ರೂಡೊ ಅವರಿಗೆ ಆಗ್ರಹ ಮಾಡಿದ್ದಾರೆ. ಸದ್ಯಕ್ಕೆ ಈ ವಿವಾದ ಇಲ್ಲಿಗೆ ನಿಂತಿದೆ. ಆದರೆ, ಎಲ್ಲರಿಗೂ ತಿಳಿದ ಹಾಗೆ ಖಾಲಿಸ್ತಾನವಾದಿಗಳು ಹೆಚ್ಚಾಗಿ ನೆಲೆಸಿರುವುದು ಕೆನಡಾದಲ್ಲಿಯೇ. ಅವರು ಈಗ ಟ್ರೂಡೊ ಬೆಂಬಲಿಗರು. ಅಷ್ಟೇ ಅಲ್ಲ, ಅವರು ಆಡಳಿತ ಪಕ್ಷದ ಬಲಾಢ್ಯರು. ಟ್ರೂಡೊ ಇದನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದು ಕುತೂಹಲಕಾರಿ. ಕೆನಡಾದಲ್ಲಿ ಕೇವಲ ಸಿಖ್ಖರೇ ಅಲ್ಲ ಭಾರತದಿಂದ ಇತರ ಲಕ್ಷಾಂತರ ಜನರೂ ಹೋಗಿ ನೆಲೆಸಿದ್ದಾರೆ. ತಾಂತ್ರಿಕ ಉದ್ಯೋಗ ಆಕರ್ಷಣೆಯ ಪ್ರಮುಖ ಕೇಂದ್ರ ಕೆನಡಾ ಆಗಿದೆ. ಕೆನಡಾ ಜೊತೆ ಹಗೆ ಕಟ್ಟಿಕೊಂಡು ಭಾರತ ಇತರರ ಹಿತ ಮರೆಯಲು ಸಾಧ್ಯವಿಲ್ಲ.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More