ಏಕ ಅಧ್ಯಕ್ಷ ಆಡಳಿತ ಜಾರಿಗೆ ತಂದ ಚೀನಾ ಸರ್ವಾಧಿಕಾರದತ್ತ ಒಲವು ತೋರಿದ್ದು ಏಕೆ?

ಸಂವಿಧಾನಕ್ಕೆ ತಿದ್ದುಪಡಿ ತಂದು ಕ್ಷಿ ಅವರು ತಮ್ಮ ಜೀವತಾವಧಿ ಪೂರಾ ಅಧ್ಯಕ್ಷರಾಗಿರಲು ಅವಕಾಶ ಮಾಡಿಕೊಡಲಾಗಿದೆ. ಕ್ರಾಂತಿಕಾರಿ ಮಾವೋತ್ಸೆ ತುಂಗ್ ಅವರ ನಂತರ ಬದುಕಿರುವವರೆಗೆ ಅಧ್ಯಕ್ಷ ಆಗಿರಬಹುದಾದ ಅಧಿಕಾರ ಪಡೆದವರು ಕ್ಷಿ ಆಗಿದ್ದಾರೆ. ಹಾಗಾಗಿ ಇದು ಮಹತ್ವದ ಬೆಳವಣಿಗೆ

ಚೀನಾದ ಕಮ್ಯುನಿಸ್ಟ್ ಪಕ್ಷ ಪ್ರಸ್ತುತ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಅವರನ್ನು ದೇಶದ ಶಾಶ್ವತ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಇದರಿಂದಾಗಿ ಅಲ್ಲಿ ಸರ್ವಾಧಿಕಾರಿ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಂತಾಗಿದೆ. ಈಗ ಅಲ್ಲಿ ಏಕಪಕ್ಷ ಆಡಳಿತ ಹೋಗಿ ಏಕ ಅಧ್ಯಕ್ಷ ಆಡಳಿತ ಜಾರಿಗೆ ಬಂದಿದೆ. ಯಾವುದೇ ವ್ಯಕ್ತಿ ಎರಡು ಬಾರಿ ಮಾತ್ರ ಅಧ್ಯಕ್ಷರಾಗಲು ಸಂವಿಧಾನದಲ್ಲಿ ಅವಕಾಶವಿತ್ತು. ಸಂವಿಧಾನಕ್ಕೆ ತಿದ್ದುಪಡಿ ತಂದು, ಕ್ಷಿ ಅವರು ತಮ್ಮ ಜೀವತಾವಧಿ ಪೂರ್ತಿ ಅಧ್ಯಕ್ಷರಾಗಿರಲು ಅವಕಾಶ ಮಾಡಿಕೊಡಲಾಗಿದೆ. ಕ್ರಾಂತಿಕಾರಿ ಅಧ್ಯಕ್ಷ ಮಾವೋತ್ಸೆ ತುಂಗ್ ಅವರ ನಂತರ ಬದುಕಿರುವವರೆಗೆ ಅಧ್ಯಕ್ಷರಾಗಿರಬಹುದಾದ ಅಧಿಕಾರ ಪಡೆದವರು ಕ್ಷಿ ಆಗಿದ್ದಾರೆ.

ಪಕ್ಷದ ಕಾಂಗ್ರೆಸ್‍ನಲ್ಲಿ ಈ ವಿಚಾರದಲ್ಲಿ ಭಿನ್ನಾಭಿಪ್ರಾಯ ಇತ್ತು. ಆದರೆ, ಬಹುಮತದಿಂದ ಅವರನ್ನು ಆಯ್ಕೆ ಮಾಡಿರುವುದರಿಂದ ಭಿನ್ನಮತಕ್ಕೆ ಬೆಲೆ ಇಲ್ಲದಂತಾಗಿದೆ. ಕಾಂಗ್ರೆಸ್‍ನಲ್ಲಿ ಸ್ಪರ್ಧೆ ನಡೆದಾಗ ವಿರುದ್ಧವಾಗಿ ಕೇವಲ ಎರಡು ಮತ ಬಿದ್ದಿವೆ. ಮೂವರು ಮತದಾನಮಾಡಿಲ್ಲ. ಹೀಗಾಗಿ ಕ್ಷಿ ಅವರು ಸರ್ವಾಧಿಕಾರಿಯಾಗಿ ಚುನಾಯಿತರಾದಂತೆ ಆಗಿದೆ. ಹಾಗೆ ನೋಡಿದರೆ, ಈಗಾಗಲೇ ಅವರು ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದರು. ಈಗ ಅಧಿಕೃತವಾಗಿ ಅಧಿಕಾರ ಸಿಕ್ಕಿದೆ ಅಷ್ಟೆ.

ಈ ಬೆಳವಣಿಗೆಗಳಿಂದಾಗಿ ಭಾರತ ಮತ್ತು ಚೀನಾ ನಡುವಣ ಸಂಬಂಧಗಳಲ್ಲಿ ಬದಲಾವಣೆ ಆಗುವ ಸಾಧ್ಯತೆ ಕಡಿಮೆ. ಈಗ ಸಿಕ್ಕಿರುವ ಅಧಿಕಾರ ಬಳಸಿಕೊಂಡು ಕ್ಷಿ ಅವರು ವಿವಿಧ ವಿಷಯಗಳಿಗೆ ಸಂಬಂಧಿಸಿದ ತಮ್ಮ ನಿಲುವುಗಳನ್ನು ಮತ್ತಷ್ಟು ಬಲವಾಗಿ ಮಂಡಿಸುವ ಸಾಧ್ಯತೆ ಇದೆ ಅಷ್ಟೆ.

ಚೀನಾದ ಈ ಬೆಳವಣಿಗೆ ವಿಶ್ವ ಎತ್ತ ಸಾಗುತ್ತಿದೆ ಎನ್ನುವುದಕ್ಕೆ ಸೂಚನೆಯಾಗಿದೆಯೇ ಎನ್ನುವ ಪ್ರಶ್ನೆಯನ್ನು ಹುಟ್ಟಿಹಾಕಿದೆ. ವಿಶ್ವದಾದ್ಯಂತ ಸರ್ವಾಧಿಕಾರಿಗಳನ್ನು ಪದಚ್ಯುತಗೊಳಿಸಿ ಪ್ರಜಾತಂತ್ರ ಸ್ಥಾಪನೆಗೆ, ಚುನಾಯಿತ ನಾಯಕತ್ವದ ಅಸ್ತಿತ್ವಕ್ಕೆ ಹೆಚ್ಚು ಹೆಚ್ಚು ಪ್ರಯತ್ನಗಳು ನಡೆಯುತ್ತಿದ್ದರೆ ಚೀನಾದಲ್ಲಿ ಸರ್ವಾಧಿಕಾರ ತಲೆಎತ್ತಿದೆ. ಚೀನಾ ಕೆಲವು ವರ್ಷಗಳ ಹಿಂದೆ ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯನ್ನು ಕಾಲಿಟ್ಟಾಗ ಅದು ಪ್ರಜಾತಂತ್ರ ಆಗಮನದ ಸಂಕೇತವೆಂದು ಕಲ್ಪಿಸಿಕೊಳ್ಳಲಾಗಿತ್ತು. ಆದರೆ, ಇರುವ ವ್ಯವಸ್ಥೆಗೇ ಮಾರುಕಟ್ಟೆ ವ್ಯವಸ್ಥೆಯನ್ನು ಅಳವಡಿಸಿಕೊಂಡು ಅದ್ಭತವಾದ ಪ್ರಗತಿ ಸಾಧಿಸಿತು. ಕೆಲವೇ ವರ್ಷಗಳಲ್ಲಿ ವಿಶ್ವದ ಬಲಿಷ್ಠ ಆರ್ಥಿಕ ಶಕ್ತಿಯಾಗಿ ಚೀನಾ ಬೆಳೆದಿದೆ. ಅದೇ ಮಾರ್ಗವನ್ನು ಮುಂದೆಯೂ ಮುಂದುವರಿಸಿಕೊಂಡು ಹೋಗುವ ಇಂಗಿತವನ್ನು ಹೊಸ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಅವರು ನೀಡಿದ್ದಾರೆ.

ಪ್ರಜಾತಂತ್ರ ವ್ಯವಸ್ಥೆ ಇರುವ ಯಾವುದೇ ದೇಶ ಇಂಥ ಪ್ರಗತಿ ಸಾಧಿಸದಿರುವುದು ಇದೀಗ ಆರ್ಥಿಕ ತಜ್ಞರಲ್ಲಿ ಗಂಭೀರ ಚಿಂತನೆಗೆ ದಾರಿ ಮಾಡಿಕೊಟ್ಟಿದೆ. ಸರ್ವಾಧಿಕಾರಿ ವ್ಯವಸ್ಥೆಯಲ್ಲಿ ಮಾತ್ರ ಅತಿ ವೇಗದಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂಬ ಘೋಷಣೆಗೆ ಚೀನಾ ದಾರಿ ಮಾಡಿಕೊಟ್ಟಿದೆ.

ಪ್ರಜಾತಂತ್ರ ದೇಶಗಳಲ್ಲಿ ಸರ್ವಾಧಿಕಾರಿ ಅಂಶಗಳಿರುವ ನಾಯಕರು ಅಧಿಕಾರಕ್ಕೆ ಬರುತ್ತಿರುವುದು ಮತ್ತು ಯಶಸ್ವಿಯಾಗಿ ಅಧಿಕಾರ ನಡೆಸುತ್ತಿರುವುದನ್ನು ಇತ್ತೀಚಿನ ವರ್ಷಗಳಲ್ಲಿ ಕಾಣಬಹುದು. ಬಲಪಂಥೀಯ ನೀತಿಗಳುಳ್ಳವರನ್ನು ಜನರೂ ಆಯ್ಕೆಮಾಡುತ್ತಿದ್ದಾರೆ. ಸಹಜವಾಗಿಯೇ ಅವರು ಸರ್ವಾಧಿಕಾರಿ ಧೋರಣೆ ಉಳ್ಳವರಾಗಿದ್ದಾರೆ. ಉದಾಹರಣೆಗೆ, ಅಮೆರಿಕ ಜನರು ಬಂಡವಾಳಶಾಹಿ ಮತ್ತು ಬಲಪಂಥೀಯ ದೋರಣೆಗಳುಳ್ಳ ಡೊನಾಲ್ಡ್ ಟ್ರಂಪ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ.

ಪ್ರಜಾತಂತ್ರದ ಯಾವುದೇ ವಿಧಾನವನ್ನು ಅನುಸರಿಸದ ಅವರ ಆಡಳಿತ ವೈಖರಿ ಬಹುಪಾಲು ಸರ್ವಾಧಿಕಾರಿಯನ್ನು ಹೋಲುತ್ತದೆ. ಯಾವುದೇ ಸಮಾಲೋಚನೆ, ಚರ್ಚೆ ಇಲ್ಲದೆ ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ ಜೊತೆ ಮಾತುಕತೆಗೆ ಮುಂದಾದ ನಡೆ ಸರ್ವಾಧಿಕಾರಿಯ ಧೋರಣೆಯನ್ನು ಪ್ರತಿನಿಧಿಸುತ್ತದೆ ಎಂದು ರಾಜತಾಂತ್ರಿಕರು ವಿಶ್ಲೇಷಿಸಿದ್ದಾರೆ. ಸರ್ವಾಧಿಕಾರಿ ದೇಶಗಳಲ್ಲಿದ್ದಂತೆ ಮಾಧ್ಯಮಗಳನ್ನು ಪರೋಕ್ಷವಾಗಿ ನಿಯಂತ್ರಿಸುವ ಪ್ರಯತ್ನ ನಡೆಯುತ್ತಿದೆ. ನಾಗರಿಕ ಹಕ್ಕುಗಳ ದಮನವಾಗುತ್ತಿದೆ. ಅಮೆರಿಕದವರಲ್ಲದವರು ಹೊರಹೋಗಿ ಎನ್ನುವ ಕೂಗು ಏಳುವಂಥ ವಾತಾವರಣ ನಿರ್ಮಾಣವಾಗಿದೆ. ಇವೆಲ್ಲ ಒಂದು ರೀತಿಯಲ್ಲಿ ಸರ್ವಾಧಿಕಾರಿ ವ್ಯವಸ್ಥೆಯ ಅಂಶಗಳಾಗಿವೆ.

ಇನ್ನೇನು ಕೆಲವೇ ದಿನಗಳಲ್ಲಿ ರಷ್ಯಾ ಅಧ್ಯಕ್ಷ ಚುನಾವಣೆಗಳು ನಡೆಯಲಿವೆ. ವ್ಲಾದಿಮಿರ್ ಪುಟಿನ್ ಮತ್ತೆ ಅಧ್ಯಕ್ಷರಾಗುವುದು ಖಚಿತವಾಗಿದೆ. ಅಲ್ಲಿ ಅವರ ಪ್ರಮುಖ ವಿರೋಧಿ ನಾಯಕ ಅಲೆಕ್ಷಿ ನವಲೆನಿ ಅವರನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮಾಡಲಾಗಿದೆ. ಅಷ್ಟೇನೂ ಪ್ರಭಾವ ಇಲ್ಲದವರು ಅವರ ವಿರುದ್ಧ ಸ್ಪರ್ಧಿಸಿದ್ದಾರೆ; ಅದೂ ನಾಮಕಾವಸ್ತೆ. ಚೀನಾದಂತೆ ರಷ್ಯಾದಲ್ಲಿ ಏಕವ್ಯಕ್ತಿ ಆಡಳಿತ ಜಾರಿಗೆ ಬರುವುದಿಲ್ಲ ಎಂದು ಸ್ವತಃ ಪುಟಿನ್ ಅವರೇ ಹೇಳಿದ್ದಾರೆ. ಆದರೆ ಅವರ ಆಡಳಿತ ವಿಧಾನ ಯಾವ ಸರ್ವಾಧಿಕಾರಿಗೂ ಕಡಿಮೆ ಇಲ್ಲ. ಕ್ರೈಮಿಯಾ ಅತಿಕ್ರಮಣ ಇದಕ್ಕೆ ಉತ್ತಮ ನಿದರ್ಶನ. ಸಿರಿಯಾ ಯುದ್ಧ ಮತ್ತೊಂದು ನಿದರ್ಶನ. ದೇಶದಲ್ಲಿ ಮಾಧ್ಯಮ ಸ್ವಾತಂತ್ರ್ಯ ಇಲ್ಲ. ನಾಗರಿಕ ಹಕ್ಕುಗಳನ್ನು ದಮನಮಾಡಲಾಗಿದೆ. ಸ್ವಾತಂತ್ರ್ಯ ಎನ್ನುವುದು ಕನಸಿನ ಮಾತು. ಅವರನ್ನು ಪಕ್ಷದ ಕಾಂಗ್ರೆಸ್ ಆಯ್ಕೆ ಮಾಡಿದರೂ ಅವರ ಅಧಿಕಾರ ವ್ಯಾಪ್ತಿ ಮತ್ತು ಧೋರಣೆ ಸರ್ವಾಧಿಕಾರಿಗಿಂತಾ ಕಡಿಮೆ ಇಲ್ಲ.

ಮೃದು ಸರ್ವಾಧಿಕಾರ ಆಡಳಿತ ಅಥವಾ ಪ್ರಜಾತಂತ್ರ ಸರ್ವಾಧಿಕಾರ ವ್ಯವಸ್ಥೆ ಭಾರತದಲ್ಲಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಅಧಿಕಾರವನ್ನು ಕೇಂದ್ರೀಕರಿಸಿಕೊಂಡಿದ್ದಾರೆ. ಅವರ ನೇತೃತ್ವದ ಬಲಪಂಥೀಯ ಸರ್ಕಾರ ಪ್ರಚುರಪಡಿಸುತ್ತಿರುವ ನೀತಿಗಳಲ್ಲಿ ಸರ್ವಾಧಿಕಾರದ ಧೋರಣೆಗಳು ಸ್ಪಷ್ಟವಾಗಿ ಕಾಣುತ್ತವೆ. ಅವರಿಗೆ ಗೊತ್ತಿಲ್ಲದೆ ಏನೂ ಆಗಲು ಸಾಧ್ಯವಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಅವರು ಒಂದು ರೀತಿಯಲ್ಲಿ ಪರೋಕ್ಷ ಸರ್ವಾಧಿಕಾರಿಯಾಗಿ ರೂಪುಗೊಂಡಿದ್ದಾರೆ. ನೋಟು ರದ್ದು ನಿರ್ಧಾರವೇ ಇದಕ್ಕೆ ಉತ್ತಮ ನಿದರ್ಶನ ಎಂದು ವಿಶ್ಲೇಷಕರು ಹೇಳುತ್ತಾರೆ.

ಇದನ್ನೂ ಓದಿ : ವಿಶ್ವಕ್ಕೆ ಹೊಸ ಅಭಿವೃದ್ಧಿ ಮಾದರಿ ಸೃಷ್ಟಿಸುವತ್ತ ಚೀನಾದ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ದಾಪುಗಾಲು

ಆಫ್ರಿಕಾ, ಲ್ಯಾಟಿನ್ ಅಮೆರಿಕ ಪ್ರದೇಶಗಳಂತೂ ಇಂದಿಗೂ ಸರ್ವಾಧಿಕಾರಿಗಳ ಹಿಡಿತದಲ್ಲಿವೆ. ಕೆಲವು ದೇಶಗಳಲ್ಲಿ ಪ್ರಜಾತಂತ್ರದ ಮೂಲಕ ಅಧಿಕಾರಕ್ಕೆ ಬಂದವರು ಸರ್ವಾಧಿಕಾರಿಗಳಾಗಿದ್ದಾರೆ. ವೆನುಜುವೆಲಾದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದಾಗಿ ದೇಶ ತತ್ತರಿಸಿದೆ. ಜನಾಂದೋಲನವನ್ನು ತಡೆಯಲು ಮತ್ತು ಆರ್ಥಿಕ ಸ್ಥಿತಿ ಸುಧಾರಿಸಲು ಪ್ರಜಾತಂತ್ರ ಮಾರ್ಗ ಹೊಂದುವುದಿಲ್ಲ ಎಂದು ಅಧ್ಯಕ್ಷ ಮಾದುರೋ ಹೇಳುತ್ತಿದ್ದಾರೆ. ಫಿಲಿಪೀನ್ಸ್‍ನಲ್ಲಿ ರೋಡ್ರಿಘೊ ನೇತ್ರತ್ವದ ಸರ್ಕಾರ ಯಾವ ಸರ್ವಾಧಿಕಾರಕ್ಕೂ ಕಡಿಮೆ ಇಲ್ಲ. ಹೀಗೆ ವಿಶ್ವದ ಹಲವು ದೇಶಗಳಲ್ಲಿ ಪ್ರಜಾತಂತ್ರ ಕ್ರಮೇಣ ಭಾಗಶಃ ಸರ್ವಾಧಿಕಾರದತ್ತ ಹೊರಳುತ್ತಿರುವುದನ್ನು ಕಾಣಬಹುದು. ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿದದ್ದ ಇಟಲಿಯಲ್ಲಿ ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಬಲಪಂಥೀಯರು ಹೆಚ್ಚು ಮಂದಿ ಆಯ್ಕೆಯಾಗಿದ್ದಾರೆ. ಅವರಾರಿಗೂ ಪ್ರಜಾತಂತ್ರ ದಾರಿಯಲ್ಲಿ ಆಡಳಿತ ನಡೆಸುವ ಇಚ್ಛೆ ಇಲ್ಲ.

ಪ್ರಜಾತಂತ್ರ ಮಾರ್ಗದಲ್ಲಿ ಅಭಿವೃದ್ಧಿ ಸಾಧಿಸುವುದು ಕಷ್ಟ ಎನ್ನುವುದು ಜನಪ್ರತಿನಿಧಿಗಳ ಅಭಿಪ್ರಾಯ. ಆದರೆ, ಸರ್ವಾದಿಕಾರ ಒಂದು ಹಂತದವರೆಗೆ ಮಾತ್ರ ಉತ್ತಮ ಫಲಿತಾಂಶ ನೀಡಬಲ್ಲದು. ಅಭಿವೃದ್ಧಿಯ ಫಲಗಳು ಎಲ್ಲರಿಗೂ ದೊರೆಯಬಹುದಾದದ್ದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮಾತ್ರ ಎನ್ನುವುದು ರಾಜಕೀಯ ತಜ್ಞರ ಅಭಿಪ್ರಾಯ. ಸರ್ವಾಧಿಕಾರಿ ವ್ಯವಸ್ಥೆ ದಮನಕಾರಿಯಾದುದು ಮತ್ತು ಸ್ವಾತಂತ್ರ್ಯದ ಶತ್ರು ಎನ್ನುವುದನ್ನು ಮರೆಯುವಂತಿಲ್ಲ. ಜವಾಬ್ದಾರಿಯುತ ಪ್ರಜಾತಂತ್ರವೇ ಸದ್ಯಕ್ಕೆ ಇರುವ ಆದರ್ಶ ರಾಜಕೀಯ ವ್ಯವಸ್ಥೆ. ಆದರೆ, ಆ ವ್ಯವಸ್ಥೆಯನ್ನು ಜನಪರವಾಗಿ, ಅಭಿವೃದ್ಧಿಪರವಾಗಿ ಕಟ್ಟದಿರುವುದೇ ದುರಂತ

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More