ಐಎಸ್ ವಿರುದ್ಧ ಕದನದ ನಂತರ ಆಂತರಿಕ ಯುದ್ಧಕ್ಕೆ ಸಿಲುಕಿ ನಲುಗುತ್ತಿದೆ ಸಿರಿಯಾ

ಸಿರಿಯಾದಲ್ಲಿ ಕಳೆದ ಎಂಟು ವರ್ಷಗಳಿಂದ ನಡೆಯುತ್ತಿರುವ ಆಂತರಿಕ ಯುದ್ಧ ಕೊನೆಗಾಣುತ್ತಲೇ ಇಲ್ಲ. ಅಸ್ಸಾದ್ ಅಧಿಕಾರ ಬಿಡುವ ಸೂಚನೆಗಳೂ ಕಾಣುತ್ತಿಲ್ಲ. ಅವರು ಅಧಿಕಾರ ತ್ಯಜಿಸಿದರೂ ದೇಶದಲ್ಲಿ ಸ್ಥಿರತೆ ಸ್ಥಾಪನೆಯಾಗುವ ಲಕ್ಷಣಗಳಿಲ್ಲ. ಈ ಬಿಕ್ಕಟ್ಟನ್ನು ವಿಶ್ವಸಂಸ್ಥೆಯೇ ಪರಿಹರಿಸಬೇಕಿದೆ

ಇರಾಕ್ ಮತ್ತು ಸಿರಿಯಾ ನಡುವೆ ಪ್ರತ್ಯೇಕ ಇಸ್ಲಾಮಿಕ್ ದೇಶ ಕಟ್ಟುವ ಐಎಸ್ ಉಗ್ರವಾದಿ ಸಂಘಟನೆಯ ಕನಸು ಈಗ ಚೂರಾಗಿದೆ. ಐಎಸ್ ಉಗ್ರವಾದಿಗಳ ಶಕ್ತಿ ಅಡಗಿಸುವಲ್ಲಿ ಸಿರಿಯಾ ಮತ್ತು ರಷ್ಯಾ ಸಫಲವಾಗಿದೆ. ಅಂದಮಾತ್ರಕ್ಕೆ ಐಎಸ್ ಸಂಪೂರ್ಣ ನಾಶವಾಗಿದೆ ಎಂದಲ್ಲ. ಐಎಸ್ ಉಗ್ರವಾದಿಗಳಲ್ಲಿ ಹಲವರು ಸತ್ತಿದ್ದಾರೆ ಮತ್ತೆ ಕೆಲವರು ಚದುರಿ ಬೇರೆ ಕಡೆ ಹೋಗಿದ್ದಾರೆ. ಅವರು ಮುಂದೆ ಎಂದಾದರೂ ಮತ್ತೆ ಒಂದಾಗಿ ಅಥವಾ ಬೇರೆ ಸ್ವರೂಪದಲ್ಲಿ ಧುತ್ತನೆ ಏಳಬಹುದು.

ಆದರೆ, ಐಎಸ್ ಕತೆ ಮುಗಿದರೂ ಸಿರಿಯಾದ ಪರಿಸ್ಥಿತಿ ಸುಧಾರಿಸುವ ಹಾಗೆ ಕಾಣುತ್ತಿಲ್ಲ. ಸಿರಿಯಾದಲ್ಲಿ ಈಗ ಬಂಡಾಯಗಾರರು ಅಂದರೆ, ಅಧ್ಯಕ್ಷ ಅಸ್ಸಾದ್ ವಿರೋಧಿಗಳು ಮತ್ತು ಸರ್ಕಾರಿ ಪಡೆಗಳ ನಡುವೆ ಯುದ್ಧ ಮುಂದುವರಿದಿದೆ. ಐಎಸ್ ರಣರಂಗ ಪ್ರವೇಶಿಸಿದ ನಂತರ ಹಿಂದೆ ಸರಿದಿದ್ದ ಅಸ್ಸಾದ್ ವಿರೋಧಿ ಬಂಡಾಯಗಾರರು ಇದೀಗ ಮತ್ತೆ ಮುಂಚೂಣಿಗೆ ಬಂದಿದ್ದಾರೆ.

ಈ ಬಂಡಾಯಗಾರರಲ್ಲಿ ಸುನ್ನಿ ಮುಸ್ಲಿಮರು, ಕ್ರಿಶ್ಚಿಯನ್ನರೂ ಸೇರಿದ್ದಾರೆ. ಈಜಿಪ್ಟ್‌ನಲ್ಲಿ ಎದ್ದ ಪ್ರಜಾತಂತ್ರದ ಅಲೆಯಿಂದ ಉತ್ತೇಜನಗೊಂಡು ಸಿರಿಯಾ ಅಧ್ಯಕ್ಷ ಅಸ್ಸಾದ್ ಸರ್ವಾಧಿಕಾರದ ವಿರುದ್ಧ ಆರಂಭವಾದ ಚಳವಳಿ ಕ್ರಮೇಣ ಸಶಸ್ತ್ರ ಹೋರಾಟಕ್ಕೆ ಕಾರಣವಾಗಿತ್ತು. ಈ ಚಳವಳಿಯನ್ನು ದಮನ ಮಾಡಲು ಸೇನೆ ಬಳಸಿದ್ದು ಸಶಸ್ತ್ರ ಹೋರಾಟಕ್ಕೆ ಕಾರಣವಾಗಿತ್ತು. ಅಸ್ಸಾದ್ ವಿರುದ್ಧದ ಈ ಚಳವಳಿಗೆ ಅಮೆರಿಕವೂ ಪರೋಕ್ಷವಾಗಿ ಬೆಂಬಲ ನೀಡಿದ್ದರೆ, ರಷ್ಯಾ ನೇರವಾಗಿ ಅಸ್ಸಾದ್ ಬೆಂಬಲಕ್ಕೆ ನಿಂತಿತ್ತು. ಮಧ್ಯದಲ್ಲಿ ಐಎಸ್ ಧುತ್ತನೆ ರಣರಂಗ ಪ್ರವೇಶ ಮಾಡಿದ್ದರಿಂದ ಈ ಹೋರಾಟ ತಣ್ಣಗಾಗಿತ್ತು. ಐಎಸ್ ವಿರುದ್ಧದ ಹೋರಾಟ ಅಮೆರಿಕ ಮತ್ತು ರಷ್ಯಾವನ್ನು ಎದುರುಬದುರು ನಿಲ್ಲಿಸಿದ ಪರಿಸ್ಥಿತಿಯನ್ನೂ ಸೃಷ್ಟಿಸಿತ್ತು. ಆದರೆ, ಐಎಸ್ ನಾಶವೇ ಮುಖ್ಯ ಎಂಬ ಕಾರಣ ನೀಡಿ ಅಮೆರಿಕ ಈ ಯುದ್ಧದಲ್ಲಿ ಸಕ್ರಿಯವಾಗಿ ಭಾಗವಹಿಸದಿರಲು ನಿರ್ಧರಿಸಿದ್ದರಿಂದ ಅನಾಹುತವೇನೂ ಸಂಭವಿಸಲಿಲ್ಲ. ಈಗ ಅಮೆರಿಕ ಮತ್ತು ರಷ್ಯಾ ಮುಖಾಮುಖಿಯಾಗುವ ಸನ್ನಿವೇಶ ಮತ್ತೆ ಎದುರಾಗಿದೆ.

ಸಿರಿಯಾದ ರಾಜಧಾನಿ ಡಮಾಸ್ಕಸ್‌ಗೆ ಕೇವಲ ಹತ್ತು ಕಿಮೀ ದೂರದಲ್ಲಿ ಘೊಟಾ ಎಂಬ ಪ್ರದೇಶವಿದೆ. ಈ ಪ್ರದೇಶದ ಪೂರ್ವಭಾಗ ಮೊದಲಿನಿಂದಲೂ ಅಸ್ಸಾದ್ ವಿರೋಧಿ ಬಂಡಾಯಗಾರ ನಿಯಂತ್ರಣದಲ್ಲಿದೆ. ಇಷ್ಟು ಹತ್ತಿರವಿದ್ದರೂ ಆ ಪ್ರದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ. ಐಎಸ್ ವಿರುದ್ಧದ ಹೋರಾಟದಲ್ಲಿ ತಮ್ಮ ವಿರುದ್ಧದ ಬಂಡಾಯಗಾರರೂ ನಾಶವಾಗಿರಬೇಕೆಂದು ಅಸ್ಸಾದ್ ತಿಳಿದಿದ್ದರು. ಆದರೆ, ಹಾಗಾಗದಿದ್ದಿದು ಇದೀಗ ಗೊತ್ತಾಗಿದೆ. ಆದರೆ, ಈ ಪ್ರದೇಶದಲ್ಲಿ ಬಂಡಾಯಗಾರರಷ್ಟೇ ಇಲ್ಲ. ಐಎಸ್ ಜನ್ಮತಾಳುವ ಮೊದಲು ಇದ್ದ ಅಲ್ ಖೈದಾದ ಒಂದು ಗುಂಪು ಕೂಡ ಇಲ್ಲಿ ನೆಲೆ ಸ್ಥಾಪಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಫೆಲಾಕ್ ಅಲ್ ರಹಮನ್ ಹೆಸರಿನ ಈ ಗುಂಪಿನ ನಾಯಕ ಅಬ್ ಅಲ್ ನಾಸರ್ ಶಮೀರ್. ಈ ಗುಂಪು ಪೂರ್ವದಲ್ಲಿ ಮಾತ್ರವಲ್ಲದೆ ಅಲ್ಲದೆ ಪಶ್ಚಿಮದಲ್ಲಿಯೂ ಪ್ರಬಲವಾಗಿದೆ. ಇದಕ್ಕೆ ವಿರುದ್ಧವಾಗಿರುವ ಗುಂಪು ಜೈಸ್ ಅಲ್ ಇಸ್ಲಾಮ್. ನಾಯಕ ಅಲ್ ಹಮ್ಮಮ್ ಬವದಾನಿ. ಡೌಮಾ ನಗರ ಸೇರಿದಂತೆ ಘೋಟಾದ ಪಶ್ಚಿಮ ಭಾಗ ಈ ಗುಂಪಿನ ನಿಯಂತ್ರಣದಲ್ಲಿದೆ.

ಮುಂದೆ ತಮಗೆ ಪ್ರಬಲ ವಿರೋಧ ಒಡ್ಡಬಹುದಾದ ಸಾಮರ್ಥ್ಯ ಇರಬಹುದಾದ ಈ ಗುಂಪುಗಳನ್ನು ಮುಗಿಸಲು ಅಸ್ಸಾದ್ ನಿರ್ಧರಿಸಿ ಮಿಲಿಟರಿ ದಾಳಿಗೆ ಮುಂದಾದರು. ಆದರೆ, ಈ ಗುಂಪುಗಳನ್ನು ಪ್ರತ್ಯೇಕಗೊಳಿಸುವಲ್ಲಿ ಮಿಲಿಟರಿ ವಿಫಲವಾಯಿತು. ಈ ಎರಡೂ ಗುಂಪುಗಳು ಸಾಕಷ್ಟು ಪ್ರತಿರೋಧ ಒಡ್ಡಿದವು. ಪರಿಣಾಮವಾಗಿ, ಸಿರಿಯಾ ಸೇನೆ ದೊಡ್ಡ ಪ್ರಮಾಣದಲ್ಲಿಯೇ ಬಾಂಬ್ ದಾಳಿ ನಡೆಸಿದ್ದು ವರದಿಯಾಗಿದೆ. ಮೂರು ದಿನಗಳ ಕಾರ್ಯಾಚರಣೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರು ಸತ್ತಿದ್ದಾರೆಂದು ಹೇಳಲಾಗಿದೆ. ಈ ಪೈಕಿ, ೨೦೧೮ ಮಕ್ಕಳು ಮತ್ತು ೧೩೬ ಮಂದಿ ಮಹಿಳೆಯರು ಎಂದು ಸಿರಿಯಾದ ಮಾನವ ಹಕ್ಕು ಸಂಘಟನೆ ವರದಿ ಮಾಡಿದೆ. ಕೆಲವು ಕಡೆ ರಂಜಕದ ಬಾಂಬ್‌ಗಳನ್ನು ಮತ್ತು ರಾಸಾಯನಿಕ ಬಾಂಬ್‌ಗಳನ್ನು ಬಳಸಿದ ಬಗ್ಗೆ ದೂರುಗಳು ಬಂದಿವೆ. ರಾಸಾಯನಿಕ ಅಸ್ತ್ರಗಳ ಬಳಕೆಗೆ ನಿಷೇಧ ಇದ್ದಾಗಲೂ ಅವುಗಳ ಬಳಕೆ ಆದದ್ದು ಹೇಗೆ ಎಂಬ ಬಗ್ಗೆ ಭದ್ರತಾ ಮಂಡಳಿ ತನಿಖೆ ನಡೆಸಬೇಕಿದೆ. ಬಂಡಾಯಗಾರರನ್ನು ಬೇರ್ಪಡಿಸದೆ ಅಮಾಯಕ ಜನರ ಮೇಲೆ ಬಾಂಬ್ ದಾಳಿ ನಡೆಸಿದ್ದನ್ನು ಈಗಾಗಲೇ ವಿಶ್ವಸಂಸ್ಥೆ ಖಂಡಿಸಿದೆ. ಆ ಪ್ರದೇಶದಲ್ಲಿ ಗೊಂದಲದ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಜನರು ಅಲ್ಲಿಂದ ಹೋಗಲು ಒಂದು ವಾರ ಅವಕಾಶ ನೀಡಬೇಕೆಂದು ಭದ್ರತಾ ಮಂಡಳಿ ಸಿರಿಯಾಕ್ಕೆ ಸೂಚಿಸಿದೆ. ಈ ಅವಕಾಶ ಬಳಸಿಕೊಂಡು ಕೆಲವು ಜನ ಹೊರಹೋಗಿದ್ದಾರೆ. ಆದರೆ, ಬಹಳ ಮಂದಿ ಅಲ್ಲಿಯೇ ಇದ್ದಾರೆ. ಹೀಗಾಗಿ ವಿರೋಧಿಗಳನ್ನು ಹಿಡಿಯುವುದು ಅಸ್ಸಾದ್ ಬೆಂಬಲದ ಮಿಲಿಟರಿಗೆ ಕಷ್ಟವಾಗುತ್ತಿದೆ. ಮತ್ತೆ ಮಿಲಿಟರಿ ದಾಳಿ ನಡೆಸಿದರೆ ಅಮಾಯಕರು ಸಾಯುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಕ್ರಮ ನಿರ್ಧರಿಸಲು ಭದ್ರತಾ ಮಂಡಳಿ ಸದಸ್ಯರ ಸಭೆ ಕರೆದಿದೆ.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ರವಿಶಂಕರ್ ಹೇಳಿಕೆಗೆ ನೊಬೆಲ್ ಸಿಗುವುದಿಲ್ಲ ಎಂದು ಅಣಕಿಸಿದ ಟ್ವೀಟಿಗರು

ಈ ಸಮಸ್ಯೆಯ ಜೊತೆಗೇ ಸಿರಿಯಾದ ಮತ್ತೊಂದು ಭಾಗದಲ್ಲಿ ಇಂಥದ್ದೇ ಗೊಂದಲ ಕಂಡುಬಂದಿದೆ. ಐಎಸ್ ಉಗ್ರವಾದಿಗಳ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಿದವರು ಖರ್ದ್ ಜನಾಂಗದವರು. ಈ ಜನಾಂಗ ಟರ್ಕಿ, ಇರಾಕ್ ಮತ್ತಿತರ ಸುತ್ತಲ ಪ್ರದೇಶದಲ್ಲಿದೆ. ಈ ಜನಾಂಗವೂ ಪ್ರತ್ಯೇಕ ದೇಶಕ್ಕಾಗಿ ಹೋರಾಡುತ್ತಿದೆ. ಸಿರಿಯಾದ ಈಶಾನ್ಯ ಭಾಗದಲ್ಲಿರುವ ಮತ್ತು ಟರ್ಕಿ ಗಡಿಯಲ್ಲಿರುವ ಆಫ್ರಿನ್ ಪ್ರದೇಶ ಐಎಸ್ ಉಗ್ರರ ನೆಲೆಯಾಗಿತ್ತು. ಅವರನ್ನು ಅಲ್ಲಿಂದ ಓಡಿಸಿ ಖರ್ದರು ಪ್ರದೇಶವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಇದು ಟರ್ಕಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಟರ್ಕಿಯಲ್ಲಿರುವ ಖರ್ದರು ಸ್ವತಂತ್ರ ದೇಶಕ್ಕಾಗಿ ಹೋರಾಡುತ್ತಿದ್ದಾರೆ. ಹೀಗಾಗಿ, ಟರ್ಕಿ ದೇಶ ಖರ್ದರನ್ನು ಉಗ್ರವಾದಿಗಳೆಂದು ಕರೆದು ಅವರನ್ನು ದಮನ ಮಾಡಲು ಹೆಣಗುತ್ತಿದೆ. ಇದೀಗ ತನ್ನ ನೆರೆಯ ಒಂದು ಪ್ರದೇಶ ಆಫ್ರಿನ್ ಖರ್ದರ ವಶಕ್ಕೆ ಹೋಗಿದ್ದು ಟರ್ಕಿಗೆ ಇಷ್ಟವಾಗಿಲ್ಲ. ಅಲ್ಲಿಂದ ಅವರನ್ನು ತೆರವು ಮಾಡಿಸಲು ಸೇನೆ ಕಳುಹಿಸುವುದಾಗಿ ಟರ್ಕಿ ಘೋಷಿಸಿದೆ. ವಿಚಿತ್ರ ಎಂದರೆ, ಐಎಸ್ ವಿರುದ್ಧದ ಹೋರಾಟಕ್ಕೆ ಖರ್ದರಿಗೆ ಅಮೆರಿಕ ಮೊದಲಿನಿಂದಲೂ ನೆರವಾಗುತ್ತ ಬಂದಿತ್ತು. ಖರ್ದರ ವಿರುದ್ದ ಟರ್ಕಿ ದಾಳಿ ಮಾಡಿದರೆ ಅವರ ನೆರವಿಗೆ ಅಮೆರಿಕ ನಿಲ್ಲಬಹುದು. ಟರ್ಕಿ ದೇಶ ಅಮೆರಿಕದ ವಿರುದ್ಧ ಯುದ್ಧ ಮಾಡಬೇಕಾದಂಥ ಸನ್ನಿವೇಶ ಬರಬಹುದು. ಹೀಗಾಗಿ, ಇದೊಂದು ಸಮಸ್ಯೆಯಾಗಿ ಪರಿಣಮಿಸಿದೆ. ಐಎಸ್ ನಿರ್ಗಮನ ಸೃಷ್ಟಿಸಿರುವ ಸಮಸ್ಯೆಗಳಲ್ಲಿ ಅತ್ಯಂತ ಜಟಿಲವಾದುದು ಇದು.

ಕಳೆದ ಎಂಟು ವರ್ಷಗಳ ಆಂತರಿಕ ಯುದ್ಧ ಕೊನೆಗಾಣುವ ಸಾಧ್ಯತೆಯೇ ಕಾಣುತ್ತಿಲ್ಲ. ಅಸ್ಸಾದ್ ಅಧಿಕಾರ ಬಿಡುವ ಸೂಚನೆಗಳೂ ಕಾಣುತ್ತಿಲ್ಲ. ಅವರು ಅಧಿಕಾರ ತ್ಯಜಿಸಿದರೂ ದೇಶದಲ್ಲಿ ಸ್ಥಿರತೆ ಸ್ಥಾಪಿತವಾಗುವ ಯಾವುದೇ ಸೂಚನೆಗಳೂ ಕಾಣುತ್ತಿಲ್ಲ. ಈ ಬಿಕ್ಕಟ್ಟನ್ನು ಅಂತಾರಾಷ್ಟ್ರೀಯ ಸಮುದಾಯ ಪರಸ್ಪರ ಚರ್ಚೆಯ ಮೂಲಕ ಬಗೆಹರಿಸುವುದು ಅನಿವಾರ್ಯ. ಅಮಾಯಕರ ಸಾವನ್ನು ನಿಲ್ಲಿಸಲು ವಿಶ್ವಸಂಸ್ಥೆ ಏನಾದರೂ ಮಾಡಬೇಕು.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More