ದುರ್ಬಲವಾದ ಪ್ರಜಾತಂತ್ರ; ಹೊಸ ರೂಪದಲ್ಲಿ ತಲೆ ಎತ್ತಿದ ರಾಷ್ಟ್ರೀಯವಾದ, ಸರ್ವಾಧಿಕಾರ

೨ನೇ ಮಹಾಯುದ್ಧದ ನಂತರ ಜಗತ್ತು ನಿರೀಕ್ಷಿಸಿದಂತೆ ಬದಲಾಗುತ್ತಿಲ್ಲ. ಜನರ ಸಮಸ್ಯೆ ಪರಿಹರಿಸುವಲ್ಲಿ ಸರ್ಕಾರಗಳು ವಿಫಲವಾಗುತ್ತ ಬಂದಿವೆ. ಪ್ರಜಾತಂತ್ರ ವ್ಯವಸ್ಥೆ ದುರ್ಬಲಗೊಳ್ಳುತ್ತಿದೆ. ಹೊಸ ರೂಪದಲ್ಲಿ ರಾಷ್ಟ್ರೀಯವಾದ, ಸರ್ವಾಧಿಕಾರ ತಲೆ ಎತ್ತಿದೆ. ಜಾಗತೀಕರಣ, ಮುಕ್ತತೆ ಕ್ರಮೇಣ ಕಳೆಗುಂದುತ್ತಿದೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 'ಅಮೆರಿಕ ಫಸ್ಟ್' ಎಂದು ಘೋಷಿಸಿದ ದಿನದಿಂದಲೇ ಎರಡನೆಯ ಮಹಾಯುದ್ಧದ ನಂತರ ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳು ಅನುಸರಿಸಿಕೊಂಡು ಬಂದಂಥ ಎಲ್ಲರ ಅಭಿವೃದ್ಧಿಗಾಗಿ ವಿಶ್ವ ಮೈತ್ರಿ ಒಪ್ಪಂದ ಮುರಿದು ಬಿದ್ದಂತಾಗಿದೆ. ನ್ಯಾಟೋ ನಿರ್ವಹಣಾ ವೆಚ್ಚ ಹಂಚಿಕೆ. ಹವಾಮಾನ ಕುರಿತ ಪ್ಯಾರಿಸ್ ಒಪ್ಪಂದ, ನಾರ್ತ್ ಅಮೆರಿಕನ್ ಟ್ರೇಡ್ ಅಗ್ರಿಮೆಂಟ್ (ನಾಫ್ತಾ), ಕ್ಯೂಬಾ ಜೊತೆಗಿನ ಮೈತ್ರಿ, ಇರಾನ್ ಜೊತೆಗಿನ ಪರಮಾಣು ಒಡಂಬಡಿಕೆಗಳಿಂದ ಹೊರ ಸರಿಯುವುದಾಗಿ ಅವರು ಪ್ರಕಟಿಸಿ ಅಂತಾರಾಷ್ಟ್ರೀಯ ಒಪ್ಪಂದಗಳಿಗೆ ಬೆಲೆ ಇಲ್ಲದಂತೆ ಮಾಡಿದ್ದಾರೆ. ವ್ಯಾಪಾರ ವಹಿವಾಟಿನಲ್ಲಿ ಕೆಲವು ಬದಲಾವಣೆಗಳನ್ನು ತಂದು ಹೆಚ್ಚು ತೆರಿಗೆ ಹಾಕಲು ಮುಂದಾಗಿದ್ದಾರೆ. ಟ್ರಂಪ್ ಅವರದ್ದು ಪ್ರಾದೇಶಿಕತೆ ಕಡೆಗೆ ಒತ್ತು ನೀಡುವ ನೀತಿ. ಅಮೆರಿಕದ ರಾಜಕೀಯ ಯುದ್ಧವನ್ನು ಗೆಲ್ಲುವುದಕ್ಕಾಗಿಯೇ ರೂಪುಗೊಂಡ ಧೋರಣೆಗಳು ಅವು. ಮುಕ್ತ ಮಾರುಕಟ್ಟೆ ನೀತಿಗಳು ಬದಲಾವಣೆಗೆ ಒಳಪಡುತ್ತಿದ್ದು ಮತ್ತೆ ದೇಶ ದೇಶಗಳ ನಡುವೆ ನಿರ್ಬಂಧಗಳ ವ್ಯವಸ್ಥೆ ಜಾರಿಗೆ ಬರುವಂತೆ ಕಾಣುತ್ತಿದೆ. ಎರಡು ಜರ್ಮನಿಗಳ ನಡುವೆ ಇದ್ದ ಬರ್ಲಿನ್ ಗೋಡೆಯನ್ನು 1989ರಲ್ಲಿ ಜನರು ಉರುಳಿಸಿದ ನಂತರ ಜಗತ್ತಿನ ಯಾವುದೇ ಭಾಗದಲ್ಲಿ ಮತ್ತೊಂದು ಗೋಡೆ ನಿರ್ಮಾಣವಾಗದು ಎಂದು ಭಾವಿಸಲಾಗಿತ್ತು. ಇದೀಗ ಎರಡೂ ಕೊರಿಯಾಗಳ ನಡುವೆ ಇರುವ ಗೋಡೆ ಒಡೆಯುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ಮತ್ತೊಂದು ಕಡೆ ಅಮೆರಿಕವು ತನ್ನ ಮೆಕ್ಸಿಕೋ ಗಡಿಯಲ್ಲಿ ಗೋಡೆ ಕಟ್ಟಲು ಹೊರಟಿದೆ. ಈ ಬೆಳವಣಿಗೆ ಒಂದು ರೀತಿಯಲ್ಲಿ ಜಗತ್ತು ಎತ್ತ ಸಾಗುತ್ತಿದೆ ಎನ್ನುವುದರ ಸೂಚಕವಾಗಿದೆ.

ಅಮೆರಿಕದಲ್ಲಿಯಷ್ಟೇ ಪ್ರಜಾತಂತ್ರ ದುರ್ಬಲಗೊಳ್ಳುತ್ತಿಲ್ಲ. ಒಟ್ಟಾರೆ ವಿಶ್ವದಲ್ಲಿಯೇ ಇಂಥ ಬೆಳವಣಿಗೆಯನ್ನು ಕಾಣಬಹುದು. ಮುಖ್ಯವಾಗಿ ಯುವಕರು ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಇಲ್ಲದಿಲ್ಲ. ಪ್ರಜಾತಂತ್ರ ಮೌಲ್ಯಗಳನ್ನು ಪ್ರತಿನಿಧಿಸುವ ಸಂಸ್ಥೆಗಳು ಜನರ ವಿಶ್ವಾಸವನ್ನು ಉಳಿಸಿಕೊಳ್ಳುವಂತೆ ಕೆಲಸ ಮಾಡುತ್ತಿಲ್ಲ. ಪ್ರಜಾತಂತ್ರದ ರಕ್ಷಕರೇ ಪ್ರಜೆಗಳು. ಪ್ರಜಾತಂತ್ರದಲ್ಲಿ ಅವರು ವಿಶ್ವಾಸ ಕಳೆದುಕೊಂಡರೆ ಆ ವ್ಯವಸ್ಥೆ ಕುಸಿಯುವುದು ಖಚಿತ. ಏಷ್ಯಾ ಸೇರಿದಂತೆ, ಪಶ್ಚಿಮ ದೇಶಗಳಲ್ಲಿ, ಲ್ಯಾಟಿನ್ ಅಮೆರಿಕ, ಆಫ್ರಿಕಾ, ಯೂರೋಪಿನಲ್ಲಿ ಪ್ರಜಾತಂತ್ರ ವ್ಯವಸ್ಥೆ ದುರ್ಬಲವಾಗುತ್ತಿರುವುದನ್ನು ಇತ್ತೀಚಿನ ವರ್ಷಗಳಲ್ಲಿ ಕಾಣಬಹುದು. ವರ್ಣಭೇದ ಆಡಳಿತದ ಅವಸಾನವನ್ನು ಕಂಡು ದಕ್ಷಿಣ ಆಫ್ರಿಕಾದಲ್ಲಿಯೂ ಪ್ರಜಾತಂತ್ರ ಗಟ್ಟಿಯಾಗಿ ನೆಲೆಗೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಬಿಳಿಯರ ಆಡಳಿತದ ವಿರುದ್ಧ ಎರಡು ದಶಕಗಳಿಗೂ ಹೆಚ್ಚು ಕಾಲ ವಿಮೋಚನಾ ಹೋರಾಟ ಮಾಡಿದ ನೆಲ್ಸನ್ ಮಂಡೇಲಾ ಅವರು ಸ್ಥಾಪಿಸಿದ ಪ್ರಜಾತಂತ್ರ ವ್ಯವಸ್ಥೆಗೇ ಈಗ ಬೆದರಿಕೆ ಒದಗಿದೆ.

ಕೆಲವು ದೇಶಗಳಲ್ಲಿ ಪ್ರಜಾತಂತ್ರ ವ್ಯವಸ್ಥೆಯ ಕೆಲ ಅಂಶಗಳನ್ನು ಉಳಿಸಿಕೊಂಡು ಸರ್ವಾಧಿಕಾರ ಸ್ಥಾಪಿಸಿದ ಉದಾಹರಣೆಗಳು ಕಂಡುಬರುತ್ತಿವೆ. ಹಾಗೆ ನೋಡಿದರೆ ಪ್ರಜಾತಂತ್ರ ಹಲವು ಒಳ್ಳೆಯ ಅಂಶಗಳನ್ನು ಒಳಗೊಂಡಿದೆ. ಸ್ವಾತಂತ್ರ್ಯ, ನಾಗರಿಕ ಹಕ್ಕು, ಸಮಾನತೆಯ ಆದರ್ಶಗಳು ಸರ್ವಾಧಿಕಾರಿ ವ್ಯವಸ್ಥೆಯಲ್ಲಿ ಇಲ್ಲ. ಸರ್ವಾಧಿಕಾರಿ ವ್ಯವಸ್ಥೆ ಈ ಎಲ್ಲವನ್ನು ತುಳಿಯುತ್ತದೆ. ಹೀಗಾಗಿಯೇ ಪ್ರಜಾತಂತ್ರ ಉಳಿಯಬೇಕೆಂಬ ಮಹದಾಸೆ ಜಗತ್ತಿನಾದ್ಯಂತ ಕಾಣುತ್ತಿದೆ. ಆದರೆ ಪ್ರಜಾತಂತ್ರ ಉಳಿವಿಗೆ ಬೇಕಾದ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಸೃಷ್ಟಿಸುವಲ್ಲಿ ಅಧಿಕಾರರೂಢರು ವಿಫಲವಾಗಿರುವುದೇ ಸಮಸ್ಯೆ.

ಮೊದಲನೆಯ ಮಹಾಯುದ್ಧದ ನಂತರ ವಿಶ್ವ ವಿದ್ಯಮಾನಗಳು ಯೂರೋಪ್ ಕೇಂದ್ರಿತವಾಗಿದ್ದವು. ಎರಡನೆಯ ಮಹಾಯುದ್ಧದ ನಂತರ ಪಾಶ್ಚಾತ್ಯ ಮಾದರಿಯ ರಾಜಕೀಯ ಸಿದ್ಧಾಂತಗಳು ಯೂರೋಪಿನ ಆದರ್ಶಗಳಾದವು. ಆದರೆ ಈಗ ಅಮೆರಿಕದ ಮೌಲ್ಯಗಳೂ ಬದಲಾಗಿದ್ದು, ಯೂರೋಪಿನಲ್ಲಿ ಸ್ವಹಿತಾಸಕ್ತಿಯ ನೀತಿಗಳೇ ಮೆರೆಯುತ್ತಿವೆ. ಶಕ್ತಿ ರಾಷ್ಟ್ರವಾಗಿ ಈಗ ಕಾಣುತ್ತಿರುವ ಚೀನಾ ಕಮ್ಯುನಿಸ್ಟ್ ದೇಶವಾಗಿದ್ದರೂ ಜಾಗತೀಕರಣಕ್ಕೆ ತೆರೆದುಕೊಂಡು ಮುಕ್ತ ಆರ್ಥಿಕ ನೀತಿಯನ್ನು ಅನುಸರಿಸುತ್ತ ಸರ್ವಾಧಿಕಾರಿ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ. ಈ ವ್ಯವಸ್ಥೆಯ ಮೂಲಕ ಆರ್ಥಿಕವಾಗಿ ಬಲಗೊಳ್ಳಬಹುದು ಮತ್ತು ಜನರ ಜೀವನ ಮಟ್ಟ ಸುಧಾರಿಸಬಹುದು ಎಂದು ಚೀನಾ ತಿಳಿದಿದೆ. ರಷ್ಯಾ ಆಡಳಿತಗಾರರದ್ದೂ ಇದೇ ಚಿಂತನೆ. ಹಿಂದೆ ಶಕ್ತಿ ದೇಶವಾಗಿದ್ದು ಕಮ್ಯುನಿಸ್ಟ್ ವ್ಯವಸ್ಥೆ ಕುಸಿದ ನಂತರ ದುರ್ಬಲಗೊಂಡು ಇದೀಗ ಮತ್ತೆ ಪ್ರಬಲ ದೇಶವಾಗಿ ರೂಪುಗೊಂಡಿರುವ ರಷ್ಯಾ ಪ್ರಜಾತಂತ್ರದ ಕೆಲವು ಅಂಶಗಳನ್ನು ಉಳಿಸಿಕೊಂಡು ಕಮ್ಯುನಿಸ್ಟ್ ಸರ್ವಾಧಿಕಾರ ವ್ಯವಸ್ಥೆಯಲ್ಲಿ ಮುಂದುವರಿದಿದೆ.

ಅಮೆರಿಕ ಸೇರಿದಂತೆ ಇತರ ಪಾಶ್ಚಾತ್ಯ ದೇಶಗಳಲ್ಲಿ ಮತ್ತು ಯೂರೋಪ್ ದೇಶಗಳಲ್ಲಿ ಕಳೆದ ಒಂದೆರಡು ದಶಕದಲ್ಲಿ ಕಂಡು ಬಂದ ಆರ್ಥಿಕ ಕುಸಿತ ಚೀನಾ ಮತ್ತು ರಷ್ಯಾ ಸರ್ವಾಧಿಕಾರಕ್ಕೆ ಅಂಟಿಕೊಳ್ಳಲು ಕಾರಣವಾದಂತಿದೆ. ಜಾಗತೀಕರಣ ಮತ್ತು ಮುಕ್ತ ಮಾರುಕಟ್ಟೆ ವ್ಯವಸ್ಥೆಯಿಂದಾಗಿಯೇ ಕಮ್ಯುನಿಸ್ಟ್ ದೇಶಗಳು ಬಲಗೊಂಡಂತೆ ಕಾಣುತ್ತಿದೆ. ಅದರಲ್ಲಿಯೂ ಚೀನಾ ಮತ್ತು ರಷ್ಯಾ ಬಲಗೊಳ್ಳಲು ಮುಕ್ತ ಮಾರುಕಟ್ಟೆಯೇ ಕಾರಣ. ರಷ್ಯಾ ಮತ್ತು ಅಮೆರಿಕ ಶೀತಲ ಸಮರಕಾಲದ ಶತ್ರುಗಳು. ಹೀಗಾಗಿಯೇ ಶೀತಲ ಸಮರ ಮುಗಿದರೂ ಪರಸ್ಪರ ಉದ್ವೇಗದ ಬೆಳವಣಿಗೆಗಳು ನಿಂತಿಲ್ಲ. ಒಂದಲ್ಲ ಒಂದು ಕಾರಣದಿಂದ ರಷ್ಯಾವನ್ನು ಮೂಲೆಗುಂಪು ಮಾಡಲು ಅಮೆರಿಕ ಕಾಯುತ್ತಿರುತ್ತದೆ.

ಉಕ್ರೇನ್ ಭಾಗವಾಗಿದ್ದ ಕ್ರೈಮಿಯಾ ಪ್ರದೇಶವನ್ನು ಅತಿಕ್ರಮಣ ಮಾಡಿದ ಹಿನ್ನೆಲೆಯಲ್ಲಿ ರಷ್ಯಾದ ವಿರುದ್ಧ ಅಮೆರಿಕ ಅಷ್ಟೇ ಏಕೆ ಯೂರೋಪ್ ಕೂಡ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದೆ. ಇದೀಗ ರಷ್ಯಾ ಮತ್ತು ಬ್ರಿಟನ್ ಡಬಲ್ ಏಜೆಂಟ್ ನಿವೃತ್ತ ಗೂಢಚಾರ ಮತ್ತು ಅವರ ಮಗಳನ್ನು ಬ್ರಿಟನ್‍ನಲ್ಲಿ ಮಾರಕ ನರ್ವ್ ಏಜೆಂಟ್ ಬಳಸಿ ಕೊಲ್ಲುವ ಯತ್ನದಲ್ಲಿ ರಷ್ಯಾವನ್ನು ಆರೋಪಿಯನ್ನಾಗಿ ಮಾಡಲಾಗಿದೆ. ಈ ಘಟನೆಯನ್ನೇ ಮುಂದು ಮಾಡಿಕೊಂಡು ರಷ್ಯಾ ವಿರುದ್ಧ ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದೆ. ಅರವತ್ತಕ್ಕೂ ಹೆಚ್ಚು ದೇಶಗಳು ರಷ್ಯಾ ರಾಜತಾಂತ್ರಿಕರನ್ನು ಸ್ವದೇಶಕ್ಕೆ ಕಳುಹಿಸಿವೆ. ಇದಕ್ಕೆ ಪ್ರತೀಕಾರವಾಗಿ ರಷ್ಯಾ ಕೂಡಾ ಅಷ್ಟೇ ಪ್ರಮಾಣದ ರಾಜತಾಂತ್ರಿಕರನ್ನು ವಾಪಸ್ ಕಳುಹಿಸಿದೆ. ಮತ್ತೆ ರಷ್ಯಾದ ವಿರುದ್ಧ ಜಗತ್ತು ಒಂದಾದಂತೆ ಕಾಣುತ್ತಿದೆ.

ವಿಶ್ವದ ಶ್ರೀಮಂತ ಪ್ರಜಾತಂತ್ರ ದೇಶಗಳಿಗೆ ದೊಡ್ಡ ಸವಾಲು ಇರುವುದು ಚೀನಾದಿಂದ ಎನ್ನುವ ಮಾತು ಈಗ ಹೆಚ್ಚು ಕೇಳಿಬರುತ್ತಿದೆ. ಜಾಗತೀಕರಣವನ್ನು ಸಮರ್ಥವಾಗಿ ಬಳಸಿಕೊಂಡು ಮಾರುಕಟ್ಟೆ ವಿಸ್ತರಿಸಿದೆ. ಚೀನಾದ ಉತ್ಪಾದನಾ ವ್ಯವಸ್ಥೆಯೂ ಉತ್ತಮವಾಗಿದೆ, ಹಾಗೆಯೇ ಮಾರುಕಟ್ಟೆ ಜಾಲವೂ ಸುವ್ಯವಸ್ಥಿತವಾಗಿರುವುದರಿಂದ ವಿಶ್ವ ಮಾರುಕಟ್ಟೆಯ ಮೇಲೆ ಚೀನಾ ಯಜಮಾನ್ಯ ಸ್ಥಾಪಿಸಿದರೆ ಆಶ್ಚರ್ಯವಿಲ್ಲ. ಮುಂಬರುವ ವರ್ಷಗಳಲ್ಲಿ ಜಾಗತಿಕ ವಾಣಿಜ್ಯ ಕದನ ನಡೆಯುವುದು ಚೀನಾದ ವಿರುದ್ಧವೇ.

ಇದನ್ನೂ ಓದಿ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೆನ್ಸಾರ್‌ಶಿಪ್‌ ಏಕೆ ಬೇಕು?: ಎಂ ಎಸ್ ಸತ್ಯು

ಚೀನಾ ಬಲಗೊಳ್ಳುತ್ತಿರುವುದು ಭಾರತಕ್ಕೆ ನುಂಗಲಾರದ ತುತ್ತು. ಮಾರುಕಟ್ಟೆ ಮತ್ತು ಬಂಡವಾಳ ಹೂಡಿಕೆ ಮೂಲಕ ಭಾರತದ ಸುತ್ತಣ ದೇಶಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಒಂದು ರೀತಿಯಲ್ಲಿ ಭಾರತವನ್ನು ಸುತ್ತುವರಿದಿದೆ. ಪಾಕಿಸ್ತಾನದ ಜೊತೆ ಚೀನಾದ ಮೈತ್ರಿ ಭಾರತಕ್ಕೆ ಸಮಸ್ಯೆಯನ್ನೂ ತಂದುಕೊಡಲಿದೆ. ಇದೇ ರೀತಿ, ಶ್ರೀಲಂಕಾ, ಮಾಲ್ಡೀವ್ಸ್, ನೇಪಾಳ ಜೊತೆಯೂ ಚೀನಾ ಉತ್ತಮ ಬಾಂಧವ್ಯ ಪಡೆದಿದೆ. ಈ ಒಡನಾಟ ಚೀನಾ ಮತ್ತು ಭಾರತದ ನಡುವೆ ಬಿಕ್ಕಟ್ಟು ಉಂಟಾಗಲು ಕಾರಣವಾಗಬಹುದು. ತನ್ನ ನೆರೆಯ ದೇಶಗಳ ಜೊತೆ ಮೈತ್ರಿ ಸಾಧಿಸುವಲ್ಲಿ ಭಾರತ ಹಿಂದೆ ಬಿದ್ದಿದೆ.

ಇದು ಅಂತಿಮವಾಗಿ ಎರಡೂ ದೇಶಗಳ ನಡುವೆ ಅನಗತ್ಯ ಉದ್ವೇಗಕ್ಕೆ ಕಾರಣವಾದರೆ ಆಶ್ಚರ್ಯವಿಲ್ಲ. ಈಗಾಗಲೇ ಭಾರತ ವಲಯದ ದೇಶಗಳ ಸಂಬಂಧಗಳೇ ಬದಲಾಗುತ್ತಿವೆ. ಚೀನಾ ಮತ್ತು ರಷ್ಯಾ ನಡುವೆ ಮೈತ್ರಿ ಬೆಳೆದಿದೆ. ಅಮೆರಿಕ ಮತ್ತು ಪಾಕಿಸ್ತಾನದ ನಡುವಣ ಮೈತ್ರಿಯಲ್ಲಿ ಬಿರುಕು ಕಂಡುಬಂದಂತೆ ಪಾಕಿಸ್ತಾನ ಮತ್ತು ಚೀನಾ ನಡುವೆ ಸ್ನೇಹ ಹೆಚ್ಚಿದೆ. ಇದರ ಪರಿಣಾಮ ಭಾರತ ಮತ್ತು ಅಮೆರಿಕ ನಡುವೆ ಮೈತ್ರಿ ಹೆಚ್ಚುವ ಸೂಚನೆಗಳಿವೆ. ಈ ವಿಚಿತ್ರ ಬೆಳವಣಿಗೆ ಸಹಜವಾಗಿಯೇ ಗಂಭೀರ ಪರಿಣಾಮಗಳಿಗೆ ಕಾರಣವಾದರೆ ಆಶ್ಚರ್ಯವಿಲ್ಲ.

ಮುಂದುವರಿಯುವುದು...

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More