ಸರ್ವಾಧಿಕಾರ ಮಿಶ್ರಿತ ಪ್ರಜಾಪ್ರಭುತ್ವದ ಕಡೆಗೆ ಹೊರಳಿದ ಜಗತ್ತು

ಸಿದ್ಧಾಂತ ಮತ್ತು ಜನಾಂದೋಲನಗಳು ಹಿಂದೆ ಜಗತ್ತನ್ನು ಹೊಸ ದಾರಿಯಲ್ಲಿ ನಡೆಸಿವೆ. ಸಮಾನತೆಯನ್ನು ಸ್ಥಾಪಿಸಲು, ಬಡತನ ನಿವಾರಣೆ, ವರ್ಣಭೇದ ನಾಶಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಜನರು ಪ್ರಾಣತೆತ್ತಿದ್ದಾರೆ. ಈಗಲೂ ಅದೇ ಕಾರಣಗಳಿಗಾಗಿ ಹೋರಾಟಗಳು ನಡೆಯುತ್ತಲೇ ಇವೆ. ಆದರೆ...

ಆರ್ಥಿಕವಾಗಿ ಪಾಶ್ಚಾತ್ಯ ಮಾದರಿ ಪ್ರಜಾತಂತ್ರವೂ ಕೇಂದ್ರೀಕೃತ ಸ್ವಹಿತಾಶಕ್ತಿಯ ಸರ್ವಾಧಿಕಾರಿ ನೀತಿಗಳನ್ನು ಅನುಸರಿಸುತ್ತಿರುವಂಥ ವಿಚಿತ್ರ ಬೆಳವಣಿಗೆಯನ್ನು ಈಗ ಕಾಣಬಹುದಾಗಿದೆ. ಕಮ್ಯುನಿಸ್ಟ್ ದೇಶಗಳೂ ಕಮ್ಯುನಿಸಂ ಸಿದ್ದಾಂತಗಳನ್ನು ಹೆಚ್ಚು ಹೇಳಲು ಹೋಗುವುದಿಲ್ಲ, ಹಾಗೆಯೇ ಪ್ರಜಾತಂತ್ರವಾದಿಗಳೂ ಪ್ರಜಾತಂತ್ರ ಮೌಲ್ಯಗಳನ್ನು ಪ್ರಚುರಪಡಿಸುವುದಿಲ್ಲ. ಈಗ ಎಲ್ಲ ದೇಶಗಳಿಗೂ ಆರ್ಥಿಕವಾಗಿ ಬಲಾಢ್ಯವಾಗುವುದೇ ಗುರಿ, ರಾಷ್ಟ್ರೀಯವಾದವೇ ರಾಜಕೀಯದ ಸೂತ್ರ. ಕಟ್ಟಾ ಬಲಪಂಥವೇ ಸಿದ್ಧಾಂತ. ಕಮ್ಯುನಿಸಂ ನಂತೆ ಪ್ರಜಾತಂತ್ರ ವ್ಯವಸ್ಥೆಯೂ ಬಡತನ, ನಿರುದ್ಯೋಗ, ಸಾಮಾಜಿಕ ಸಮಾನತೆ ಕಲ್ಪಿಸುವಲ್ಲಿ ವಿಫಲವಾಗಿದೆ. ಭ್ರಷ್ಟಾಚಾರ, ಸ್ವಹಿತಾಸಕ್ತಿ, ಅಧಿಕಾರದ ಕೇಂದ್ರೀಕರಣ, ಶ್ರೀಮಂತಿಕೆಯ ಹುಚ್ಚು ಮತ್ತು ಭೋಗ ಲಾಲಸೆಯೇ ಎರಡೂ ವ್ಯವಸ್ಥೆಗಳು ಕುಸಿಯಲು ಕಾರಣ. ಹೀಗಾಗಿಯೇ ಎರಡೂ ವ್ಯವಸ್ಥೆಯ ಮಿಶ್ರಣ ಮಾದರಿ ವ್ಯವಸ್ಥೆಯಾಗಿ ಪ್ರಯೋಗಗೊಳ್ಳುತ್ತಿದೆ. ಆದರೆ, ಈ ಮಿಶ್ರ ವ್ಯವಸ್ಥೆಯಿಂದ ಜನಕಲ್ಯಾಣ ಸಾಧಿಸಲು ಸಾಧ್ಯ ಎಂಬ ಬಗ್ಗೆ ಯಾರಲ್ಲೂ ನಂಬಿಕೆ ಇಲ್ಲ.

ಅಮೆರಿಕ ಅಷ್ಟೇ ಅಲ್ಲ ವಿಶ್ವದ ಮುಖ್ಯ ದೇಶಗಳು ಇದೇ ದಾರಿ ತುಳಿಯುತ್ತಿವೆ. ರಷ್ಯಾ, ಚೀನಾ, ಭಾರತ, ಜಪಾನ್, ಸೌದಿ ಅರೇಬಿಯಾ, ಇರಾನ್, ಟರ್ಕಿ, ಉತ್ತರ ಕೊರಿಯಾ, ಇಸ್ರೇಲ್, ಮಧ್ಯ ಏಷ್ಯಾದ ದೇಶಗಳು ಸ್ಪರ್ಧೆಗಿಳಿದಂತೆ ಸ್ವಹಿತಾಸಕ್ತಿಯ ನೀತಿಗಳನ್ನು ಅನುಸರಿಸುತ್ತಿವೆ. ಪ್ರಜಾತಂತ್ರ ಮೌಲ್ಯಗಳು ಈ ನೀತಿಗಳಿಗೆ ಅನುಸಾರವಾಗಿ ಬದಲಾಗುತ್ತಿವೆ. ಸರ್ವಾಧಿಕಾರ ಬೆರೆತ ಪ್ರಜಾತಂತ್ರ ಕೆಲವು ದೇಶಗಳಿಗೆ ಮಾದರಿಯಾಗಿ ಪರಿಣಮಿಸಿದೆ. ಇದೀಗ ಪ್ರವರ್ಧಮಾನಕ್ಕೆ ಬರುತ್ತಿರುವ ಬ್ರೆಜಿಲ್. ಅರ್ಜಂಟೀನಾ, ಟರ್ಕಿ ಮುಂತಾದ ದೇಶಗಳು ಒಂದು ಸ್ಥಿರ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯನ್ನು ರೂಪಿಸಿಕೊಳ್ಳುವಲ್ಲಿ ವಿಫಲವಾಗಿವೆ. ಇದರಿಂದಾಗಿ ಈ ಎಲ್ಲ ದೇಶಗಳಲ್ಲಿ ಜನಾಂದೋಲನಗಳು ಕಾಣಿಸಿಕೊಂಡಿವೆ.

ಭ್ರಷ್ಟಾಚಾರ, ಹಣದುಬ್ಬರ, ಅಸ್ಥಿರ ಸ್ಥಿತಿಗೆ ಕಾರಣವಾಗಿವೆ. ಹಿಂದಿನ ಸೋವಿಯತ್ ಒಕ್ಕೂಟ ಒಡೆದು ಕಮ್ಯುನಿಸ್ಟ್ ವ್ವವಸ್ಥೆ ಕುಸಿದ್ದರಿಂದ ಯುರೋಪಿನ ಅನೇಕ ಕಮ್ಯುನಿಸ್ಟ್ ದೇಶಗಳು ಆರ್ಥಿಕವಾಗಿ ಕುಸಿದೇ ಹೋಗಿವೆ. ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ಬದಲಾದ ಈ ದೇಶಗಳು ಇನ್ನೂ ಹೆಣಗಾಡುತ್ತಿವೆ. ಜಾಗತೀಕರಣ ಶ್ರೀಮಂತ ಮತ್ತು ಮುಂದುವರಿದ ದೇಶಗಳಿಗೆ ಅನುಕೂಲಕರವಾಗಿದೆಯೇ ವಿನಃ ಬಡ ದೇಶಗಳಿಗೆ ಅಲ್ಲ. ಯುಗಾಸ್ಲಾವಿಯಾದ ಭಾಗವಾಗಿದ್ದ ಪ್ರದೇಶಗಳಲ್ಲಿ ರಾಷ್ಟ್ರೀಯತೆ ಮತ್ತು ಜನಾಂಗವಾದ ದೊಡ್ಡ ಸಂಘರ್ಷಕ್ಕೆ ಕಾರಣವಾಗಿದೆ. ಮುಖ್ಯವಾಗಿ ಬೋಸ್ನಿಯಾ ಮತು ಸೆರ್ಬಿಯಾವನ್ನು ನೋಡಬಹುದು. ತಮ್ಮ ರಕ್ತವೇ ಶ್ರೇಷ್ಟ ಎಂದು ತಿಳಿದಿರುವ ಸೆರ್ಬ್ ಜನಾಂಗದ ಯುದ್ಧಕೋರ ಬುದ್ಧಿಯನ್ನು ತಹಬಂದಿಗೆ ತರಲು ವಿಶ್ವಸಂಸ್ಥೆಗೆ ಇನ್ನೂ ಸಾಧ್ಯವಾಗಿಲ್ಲ. ಇದೊಂದು ರೀತಿಯಲ್ಲಿ ಹಿಟ್ಲರ್‍ಶಾಹಿಯನ್ನು ನೆನಪಿಗೆ ತರುತ್ತದೆ.

ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ನನ್ನು ಮುಗಿಸಲು ಇಡೀ ವಿಶ್ವವೇ ಒಂದಾಗಿ ಎರಡನೆಯ ಮಹಾಯುದ್ಧದಲ್ಲಿ ಹೋರಾಡುತ್ತದೆ. ಆದರೆ, ಇಂದು ಅಂಥ ಮೈತ್ರಿ ಸಾಧ್ಯವಿಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದಾದರೂ ದೇಶ ಮತ್ತೊಂದು ಬಡ ದೇಶವನ್ನು ಅತಿಕ್ರಮಣ ಮಾಡಲು ಹೊರಟರೆ ಯಾವ ಅಭಿವೃದ್ಧಿ ದೇಶವೂ ತಲೆಕೆಡಿಸಿಕೊಳ್ಳುವುದೇ ಇಲ್ಲ. ಮಾರಕಾಸ್ತ್ರಗಳನ್ನು ಪಡೆದಿದೆ ಎಂಬ ಕಾರಣವೊಡ್ಡಿ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ಇರಾಕ್‍ನ ಸರ್ವಾಧಿಕಾರಿ ಸದ್ದಾಂ ಹುಸೇನ್‌ನನ್ನು ಪದಚ್ಯುತಗೊಳಿಸಲು ಹಿಂದೆ ಮಿಲಿಟರಿ ದಾಳಿ ನಡೆಸಿದವು. ಈ ದಾಳಿ ಆ ವಲಯದಲ್ಲಿ ಆಂತರಿಕ ಕದನಕ್ಕೆ ಕಾರಣವಾಗಿದ್ದನ್ನು ಯಾರೂ ಮರೆಯುವಂತಿಲ್ಲ. ಇಸ್ಲಾಮಿಕ್ ಉಗ್ರ ಸಂಘಟನೆ ಐಎಸ್ ಜನನಕ್ಕೂ ಇದು ದಾರಿಮಾಡಿಕೊಟ್ಟಿತು.

ಈಜಿಪ್ಟ್‌ನಲ್ಲಿ ಆರಂಭವಾಗಿದ್ದ ಸ್ವಾತಂತ್ರ್ಯದ ಅಲೆ ಸಿರಿಯಾಕ್ಕೂ ಹಬ್ಬಿತು. ಸಿರಿಯಾ ಅಧ್ಯಕ್ಷ ಬಷರ್ ಅಲ್ ಅಸ್ಸಾದ್ ಪದಚ್ಯುತಿಗಾಗಿ ನಡೆದ ಆಂತರಿಕ ಯುದ್ಧ ಸ್ವತಂತ್ರ ಇಸ್ಲಾಮಿಕ್ ದೇಶ ರಚನೆ ಕನಸು ಕಂಡಿದ್ದ ಐಎಸ್ ಮುಸ್ಲಿಮ್ ಉಗ್ರರಿಂದಾಗಿ ಭಿನ್ನ ಸ್ವರೂಪ ಪಡೆಯಿತು. ಸಂಕೀರ್ಣವಾದ ಈ ಸಮಸ್ಯೆಗೆ ಪರಿಹಾರ ಹುಡುಕುವ ಪ್ರಯತ್ನ ವಿಶ್ವ ಸಮುದಾಯದಿಂದ ನಡೆಯಲೇ ಇಲ್ಲ. ರಷ್ಯಾ ಮಾತ್ರ ನೇರವಾಗಿ ಅಸ್ಸಾದ್‍ಗೆ ಬೆಂಬಲವಾಗಿ ನಿಂತಿತು. ಆ ವಲಯದಲ್ಲಿ ತನ್ನ ಬಲವನ್ನು ಪ್ರದರ್ಶನ ಮಾಡಲು ರಷ್ಯಾ ಸನ್ನಿವೇಶವನ್ನು ಬಳಸಿಕೊಂಡಿತು. ಅಮೆರಿಕ ಯುದ್ಧಕ್ಕೆ ಇಳಿಯದೆ ನುಣಿಚಿಕೊಂಡಿತು. ಅಸ್ಸಾದ್ ವಿರೋಧಿಗಳಿಗೆ ನೆರವು ನೀಡುವಂಥ ನಿಲುವು ತೆಗೆದುಕೊಂಡಿತು. ವಿಶ್ವಸಂಸ್ಥೆ ಹೇಗೆ ಇರಾಕ್ ವಿಚಾರದಲ್ಲಿ ತಟಸ್ಥ ಧೋರಣೆ ತಳೆಯಿತೋ ಅದೇ ರೀತಿ ಅಸಹಾಯಕವಾಯಿತು.

ಸಿರಿಯಾ ಯುದ್ಧದಲ್ಲಿ ಸತ್ತವರು ಐದು ಲಕ್ಷಕ್ಕೂ ಹೆಚ್ಚು ಮಂದಿ, ಇವರಲ್ಲಿ ಸತ್ತ ಮಕ್ಕಳೂ ಹತ್ತು ಸಾವಿರಕ್ಕೂ ಹೆಚ್ಚು. ಗಾಯಗೊಂಡವರು ಹತ್ತು ಲಕ್ಷಕ್ಕೂ ಹೆಚ್ಚು. ವಲಸೆಹೋದವರು ಆರು ಲಕ್ಷ ಮಂದಿ. ಬಹುಶಃ ಆಧುನಿಕ ಜಗತ್ತಿನಲ್ಲಿ ಸಿರಿಯಾದಲ್ಲಿ ನಡೆದಂಥ ಹತ್ಯಾಕಾಂಡ ಮತ್ತೊಂದಿರಲಾರದು. ಆದರೂ ಯಾರೂ ತಲೆಕೆಡಿಸಿಕೊಳ್ಳಲಿಲ್ಲ. ಯೆಮನ್‍ನಲ್ಲಿ ಆಗುತ್ತಿರುವುದು ಇಂಥದ್ದೇ ಬೆಳವಣಿಗೆ. ಸಹಸ್ರಾರು ಮಕ್ಕಳು ಹಸಿವೆಯಿಂದ ಸಾಂಕ್ರಾಮಿಕ ರೋಗಗಳಿಂದ ಸಾಯುತ್ತಿದ್ದಾರೆ. ಯುದ್ಧ ನಿಲುಗಡೆಗೆ ಪ್ರಯತ್ನಗಳು ನಡೆಯುತ್ತಲೇ ಇಲ್ಲ. ಯುಗೋಸ್ಲಾವಿಯಾ ವಿಭಜನೆಯಾದಾಗ ಬೋಸ್ನಿಯಾ ಮುಸ್ಲಿಮರ ವಿಚಾರದಲ್ಲಿ ಹೀಗೇ ಆಯಿತು. ಲಿಬಿಯಾದ ಜನರ ಸಾವು ನೋವಿಗೆ ಯಾರು ಕಾರಣರು? ಅಂಥ ರಕ್ತಪಾತ ಆಗದಂತೆ ಮತ್ತು ಆದಾಗ ಅದನ್ನು ತಡೆಯಬೇಕಾದವರು ಯಾರು? ಜಗತ್ತಿನಲ್ಲಿ ಶಾಂತಿ ಸ್ಥಾಪನೆ ಉದ್ದೇಶದಿಂದ ಸ್ಥಾಪಿತವಾದ ವಿಶ್ವಸಂಸ್ಥೆ ಈಗ ಅಸಹಾಯಕ ಸಂಸ್ಥೆಯಾಗಿದೆ.

ಪ್ಯಾಲೆಸ್ಟೇನ್ ವಿಚಾರದಲ್ಲಿಯೂ ಇದೇ ಆಗಿದೆ. ವಿಶ್ವಸಂಸ್ಥೆ ಮತ್ತು ಭದ್ರತಾ ಮಂಡಳಿಯ ಯಾವುದೇ ನಿರ್ಣಯವನ್ನು ಇಸ್ರೇಲ್ ಪಾಲಿಸುವುದಿಲ್ಲ. ಪ್ಯಾಲೆಸ್ಟೇನ್‍ನ ಆಕ್ರಮಿತ ಪ್ರದೇಶಗಳಲ್ಲಿ ಯಹೂದಿಗಳಿಗೆ ವಸತಿ ಕಲ್ಪಿಸುವ ಕೆಲಸ ನಡೆಯುತ್ತಲೇ ಇದೆ. ಮಾನವ ಹಕ್ಕುಗಳ ದಮನ ಗರಿಷ್ಠ ಪ್ರಮಾಣದಲ್ಲಿ ಇಸ್ರೇಲ್ ಮಾಡುತ್ತಿದ್ದರೂ ವಿಶ್ವಸಂಶ್ಥೆ ಏನು ಮಾಡಲೂ ಸಾಧ್ಯವಾಗುತ್ತಿಲ್ಲ. ಇಂಥ ದೇಶಕ್ಕೆ ಬೆಂಬಲವಾಗಿ ನಿಂತಿರುವುದು ಅಮೆರಿಕ ಎನ್ನುವುದೇ ವಿಚಿತ್ರ. ಸೌದಿ ಅರೇಬಿಯಾಯಲ್ಲಿ ಇರುವುದು ದೊರೆ ಆಡಳಿತ. ಅದರ ಜೊತೆ ಅಮೆರಿಕ ಸೇರಿದಂತೆ ಎಲ್ಲ ಪ್ರಜಾತಂತ್ರ ದೇಶಗಳು ಮೈತ್ರಿಯಿಂದಿವೆ. ಸೌದಿ ಅರೇಬಿಯಾ ಮತ್ತು ಇತರ ಅರಬ್ ದೇಶಗಳ ಬಲ ಇರುವುದು ಅವುಗಳ ತೈಲ ಸಂಪನ್ಮೂಲ. ಅರಬ್ ದೇಶಗಳ ಜೊತೆ ಯಾವ ದೇಶವೂ ಹಗೆ ಕಟ್ಟಿಕೊಳ್ಳಲು ತಯಾರಿಲ್ಲ.

ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ವಿಮಾನ ದಾಳಿ ನಡೆಸಿದ ಪೈಲಟ್‍ಗಳು ತರಬೇತಿ ಪಡೆದಿದ್ದೇ ಸೌದಿಅರೇಬಿಯಾದಲ್ಲಿ. ಅಲ್ ಖೈದಾ ಭಯೋತ್ಪಾದಕ ಸಂಘಟನೆಯ ಮುಖ್ಯ ನಾಯಕ ಒಸಾಮಾ ಬಿನ್ ಲಾಡೆನ್ ಸೌದಿ ಅರೇಬಿಯಾಕ್ಕೆ ಸೇರಿದವನು. ಇಸ್ಲಾಮಿಕ್ ಭಯೋತ್ಪಾದಕರ ಮುಖ್ಯ ಪ್ರೇರಣೆ ಮತ್ತು ಹಣದ ನೆರವು ಸಿಗುತ್ತಿರುವುದೇ ಈ ದೇಶಗಳಿಂದ. ಈ ಸತ್ಯ ಬಯಲಾದ ನಂತರ ಬದಲಾವಣೆಗಳು ಆಗುತ್ತಿವೆ. ಆದರೆ ಸದ್ಯ ಅಭಿವೃದ್ಧಿಗೆ ತೈಲ ಅನಿವಾರ್ಯ. ಹೀಗಾಗಿ ತೈಲ ಸಂಪನ್ಮೂಲ ದೇಶಗಳ ಪ್ರಾಬಲ್ಯವನ್ನು ತಗ್ಗಿಸುವ ಪ್ರಯತ್ನಗಳು ಯಶಸ್ವಿಯಾಗಿಲ್ಲ.

ಎರಡನೆಯ ಮಹಾಯುದ್ಧ ತಂದ ಸಾವು, ನೋವು ಊಹೆಗೂ ನಿಲುಕದ್ದು. ಯುದ್ಧದಲ್ಲಿ ಸತ್ತವರು ಆರು ಕೋಟಿ. ಯುದ್ಧ ನಡೆದ ಬಹುಪಾಲು ಪ್ರದೇಶಗಳು ನಾಶವಾದವು. ಯೂರೋಪಿನಲ್ಲಿ ಸತ್ತ ಯಹೂದಿಗಳ ಸಂಖ್ಯೆ ಆರು ಲಕ್ಷಕ್ಕೂ ಹೆಚ್ಚು. ಯುದ್ಧದಿಂದಾಗಿ ವಲಸೆ ಹೋದವರು ಲಕ್ಷಾಂತರ ಮಂದಿ. ಯೂರೋಪಿನ ಯಾವ ಭಾಗದಲ್ಲಿ ನೋಡಿದರೂ ಅನಾಥ ಮಕ್ಕಳು ಕಾಣುವಂತಾಗಿತ್ತು. 1939ರಲ್ಲಿ ಅಡಾಲ್ಫ್ ಹಿಟ್ಲರ್ ನೇತೃತ್ವದಲ್ಲಿ ಆರಂಭವಾದ ಎರಡನೆಯ ಮಹಾಯುದ್ಧ ಜರ್ಮನಿಯ ಶರಣಾಗತಿಯೊಂದಿಗೆ 1945ರಲ್ಲಿ ಮುಕ್ತಾಯವಾಗುತ್ತದೆ. ಹಿಟ್ಲರ್ ವಿರುದ್ಧದ ಈ ಯುದ್ಧದ ನೇತೃತ್ವ ವಹಿಸಿದ್ದ ಸೋವಿಯತ್ ಒಕ್ಕೂಟ, ಅಮೆರಿಕ, ಬ್ರಿಟನ್, ಭಾರತ ಮುಂತಾದ ಮೈತ್ರಿ ದೇಶಗಳ ಕೂಟ ನಡೆಸಿದ ಯುದ್ಧ ಮಾನವ ಇತಿಹಾಸದಲ್ಲಿಯೇ ಅತ್ಯಂತ ಘೊರವಾದುದು. ಜರ್ಮನಿ ಶರಣಾಗತಿಯಾದ ಒಂದೇ ವಾರದಲ್ಲಿ ಹಿಟ್ಲರ್ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಯುದ್ಧ ಮುಂದುವರಿಸಿದ್ದ ಜಪಾನ್ ಮೇಲೆ ಅಮೆರಿಕ ಅಣುಬಾಂಬ್ ಹಾಕಿ ಸರ್ವನಾಶಕ್ಕೆ ಕಾರಣವಾಗುತ್ತದೆ. ನಂತರ ಜಪಾನ್ ಕೂಡಾ ಶರಣಾಗುತ್ತದೆ.

ಎರಡನೆಯ ಮಹಾಯುದ್ಧದ ಮುಕ್ತಾಯ ಹೊಸ ಯುಗವೊಂದರ ಆರಂಭಕ್ಕೂ ನಾಂದಿಯಾಗುತ್ತದೆ. ಯೂರೋಪ್ ಕೇಂದ್ರಿತ ವಸಾಹುತಶಾಹಿ ದೇಶಗಳ ನಿರ್ದೇಶಿತ ಆಡಳಿತ ಅಂತ್ಯವಾಗುತ್ತದೆ. ಆದರೆ ಅಮೆರಿಕ ಮತ್ತು ರಷ್ಯಾ ಶಕ್ತಿ ದೇಶಗಳಾಗಿ ಒಡಮೂಡುತ್ತವೆ. ಕೆಲವು ದೇಶಗಳು ಅಮೆರಿಕದ ತೆಕ್ಕೆಗೆ ಮತ್ತು ಮತ್ತೆ ಕೆಲವು ದೇಶಗಳು ಸೋವಿಯತ್ ಒಕ್ಕೂಟದ ವ್ಯಾಪ್ತಿಗೆ ಹೋಗುತ್ತವೆ. ಎರಡೂ ಶಕ್ತಿ ದೇಶಗಳ ನಡುವಣ ವೈಮನಸ್ಯ ಶೀತಲ ಸಮರಕ್ಕೆ ಕಾರಣವಾಗುತ್ತದೆ. ಪರೋಕ್ಷ ಯುದ್ಧದಲ್ಲಿ ಸತ್ತವರೂ ಲಕ್ಷಾಂತರ ಮಂದಿ. ಶೀತಲ ಸಮರ ಕಾಲದ ದೊಡ್ಡ ಯುದ್ಧ ಕೊರಿಯಾಗಳ ನಡುವೆ ಆದದ್ದು. ಎರಡನೆಯ ಮಹಾಯುದ್ಧದ ಅಂತ್ಯ ಪ್ರಜಾತಂತ್ರ ಹೊಸಸ್ವರೂಪ ಪಡೆಯಲು ಕಾರಣವಾಯಿತು. ವಿಶ್ವಸಂಸ್ಥೆ ಸ್ಥಾಪಿತವಾಯಿತು. ಜಗತ್ತಿನಲ್ಲಿ ಶಾಂತಿಸ್ಥಾಪನೆ ಅದರ ಉದ್ದೇಶವಾಯಿತು. ದೇಶ ದೇಶಗಳ ನಡುವೆ ಪರಸ್ಪರ ಸಹಕಾರದ ಹೊಸ ಅಧ್ಯಾಯವೇ ಆರಂಭವಾಯಿತು. ಭದ್ರತೆಗಾಗಿ ಅಮೆರಿಕ ನೇತೃತ್ವದಲ್ಲಿ ನ್ಯಾಟೋ ಸ್ಥಾಪಿತವಾದರೆ, ಸೋವಿಯತ್ ಒಕ್ಕೂಟದ ನೇತೃತ್ವದಲ್ಲಿ ವಾರ್ಸಾ ಒಪ್ಪಂದವಾಗುತ್ತದೆ. 1991ರಲ್ಲಿ ಸೋವಿಯತ್ ಒಕ್ಕೂಟ ಛಿದ್ರವಾಯಿತು. ಅದರ ನೇತೃತ್ವ ವಹಿಸಿದ್ದವರು ಒಕ್ಕೂಟದ ಅಧ್ಯಕ್ಷ ಮಿಖಾಯಿಲ್ ಗೋರ್ಬಚೆವ್. ಈ ಮುಕ್ತತತೆಯ ಅಲೆಯಲ್ಲಿ ಯೂರೋಪಿನಲ್ಲಿಯೂ ಕಮ್ಯುನಿಸಂ ಅವಸಾನಗೊಂಡಿತು. ಎರಡು ವರ್ಷಗಳ ಮೊದಲೇ ಪೂರ್ವ ಮತ್ತು ಪಶ್ಚಿಮ ಜರ್ಮನಿಯ ನಡುವೆ ನಿರ್ಮಾಣವಾಗಿದ್ದ ಬರ್ಲಿನ್ ಗೋಡೆಯನ್ನು ಜನರು 1989ರಲ್ಲಿ ಕೆಡವಿದರು. ಎರಡೂ ಜರ್ಮನಿಗಳು ಒಂದಾದವು.

ಯೂರೋಪಿನಲ್ಲಿ ಈ ಬೆಳವಣಿಗೆ ಚಿಮ್ಮು ಹಲಗೆಯಾಗಿ ಪ್ರಜಾತಂತ್ರ ಬೆಳೆಯಿತು. ಆದರೆ, ಜನರ ಸಮಸ್ಯೆಗಳು ಪರಿಹಾರವಾಗಲಿಲ್ಲ. ಕ್ರಮೇಣ ಜನರು ಅಸಮಾಧಾನ ವ್ಯಕ್ತ ಮಾಡತೊಡಗಿದರು. ಬ್ರಿಟನ್ ಜನರು ಯೂರೋಪ್ ಒಕ್ಕೂಟದಿಂದ ಹೊರಬರುವ (ಬ್ರೆಕ್ಸಿಟ್) ನಿರ್ಧಾರಕ್ಕೆ ಬಂದರು. ಯೂರೋಪಿನ ಹಲವು ಕಡೆದ ಬಲಪಂಥೀಯ ಪಕ್ಷಗಳು ಪ್ರವರ್ಧಮಾನಕ್ಕೆ ಬರಲು ಆರಂಭಿಸಿದವು. ಕೆಲವು ದೇಶಗಳಲ್ಲಿ ಬಲಪಂಥೀಯ ಸರ್ಕಾರಗಳೂ ಅಸ್ತಿತ್ವಕ್ಕೆ ಬಂದವು. ಬಲವಾದ ರಾಷ್ಟ್ರೀಯವಾದ ಮತ್ತು ಬಲಪಂಥೀಯ ಅಲೆಯ ನಡುವೆ ಫ್ರಾನ್ಸ್‍ನಲ್ಲಿ ಮಧ್ಯಮಪಂಥೀಯ ಇಮಾನ್ಯುಯಲ್ ಮೆಕ್ರಾನ್ ಮತ್ತು ಜರ್ಮನಿಯಲ್ಲಿ ಏಂಜೆಲಾ ಮೆರ್ಕೆಲ್ ಅಧಿಕಾರಕ್ಕೆ ಬರುವಂತಾದದ್ದು ಗಮನಹರಿಸಬೇಕಾದ ಬೆಳವಣಿಗೆ.

ಆದರೆ, ಅಮೆರಿಕ ಬಲಪಂಥೀಯ ಡೊನಾಲ್ಡ್ ಟ್ರಂಪ್ ಅವರನ್ನು ಅಧಿಕಾರಕ್ಕೆ ತರುವ ಮೂಲಕ ಬದಲಾಗುತ್ತಿರುವ ರಾಜಕೀಯ ವ್ಯವಸ್ಥೆಯ ಸೂಚನೆಯನ್ನು ಜನರು ನೀಡಿದ್ದಾರೆ. ಜಗತ್ತು ಚಲಿಸುತ್ತಿರುವ ದಿಕ್ಕನ್ನು ಬದಲಿಸಬಹುದಾದ ಶಕ್ತಿ ಇರುವುದು ಜನಕ್ಕೆ ಮಾತ್ರ. ಅಮೆರಿಕ ಮತ್ತು ಯೂರೋಪ್ ದುರ್ಬಲವಾಗಿರುವುದರಿಂದ ಮುಂಬರುವ ದಿನಗಳಲ್ಲಿ ಚೀನಾ ಮತ್ತು ರಷ್ಯಾ ಜಾಗತಿಕ ವಿದ್ಯಮಾನಗಳಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ. ಜನರ ಜೀವನಮಟ್ಟ ಸುಧಾರಿಸುವಲ್ಲಿ ಈ ದೇಶಗಳ ರಾಜಕೀಯ ವ್ಯವಸ್ಥೆ ಹೆಚ್ಚು ಯಶಸ್ವಿಯಾಗಿರುವುದು ಪ್ರಜಾತಂತ್ರದ ರಕ್ಷಕರೆಂದು ಹೇಳಿಕೊಳ್ಳುವ ದೇಶಗಳ ನಾಯಕರಿಗೆ ಒಂದು ಎಚ್ಚರಿಕೆ.

ಇದನ್ನೂ ಓದಿ : ದುರ್ಬಲವಾದ ಪ್ರಜಾತಂತ್ರ; ಹೊಸ ರೂಪದಲ್ಲಿ ತಲೆ ಎತ್ತಿದ ರಾಷ್ಟ್ರೀಯವಾದ, ಸರ್ವಾಧಿಕಾರ

ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಮಾಧ್ಯಮಗಳು ಜನರ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದವು. ಆದರೆ ಇತ್ತೀಚಿಗೆ ಬೆಳಕಿಗೆ ಬಂದ ಹಗರಣಗಳನ್ನು ನೋಡಿದರೆ, ಸಾಮಾಜಿಕ ಮಾಧ್ಯಮಗಳು ಮತ್ತು ಅವು ಸಂಗ್ರಹಿಸುವ ಮಾಹಿತಿ ಜನರ ಬದುಕಿನ ಮೇಲೆ ಅಷ್ಟೇ ಅಲ್ಲ, ರಾಷ್ಟ್ರದ ಭವಿಷ್ಯದ ಮೇಲೆ ಪರಿಣಾಮ ಉಂಟುಮಾಡಲೂ ಬಳಸಬಹುದಾದ ಸಾಧ್ಯತೆಗಳು ಬಯಲಾಗಿವೆ.

ಸಿದ್ಧಾಂತ ಮತ್ತು ಜನಾಂದೋಲನಗಳು ಹಿಂದೆ ಜಗತ್ತನ್ನು ಹೊಸ ದಾರಿಯಲ್ಲಿ ನಡೆಸಿವೆ. ಸಮಾನತೆಯನ್ನು ಸ್ಥಾಪಿಸಲು, ಬಡತನ ನಿವಾರಣೆ, ವರ್ಣಭೇದ ನಾಶಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಜನರು ಪ್ರಾಣತೆತ್ತಿದ್ದಾರೆ. ಈಗಲೂ ಅದೇ ಕಾರಣಗಳಿಗಾಗಿ ಹೋರಾಟಗಳು ನಡೆಯುತ್ತಲೇ ಇವೆ. ಜಗತ್ತು ಬದಲಾಗುತ್ತಲೂ ಇದೆ. ಆದರೆ ಬದಲಾವಣೆ ಜನರ ಜೀವನ ಮಟ್ಟವನ್ನು ಸುಧಾರಿಸುವ ದಿಕ್ಕಿನಲ್ಲಿ ಆಗುತ್ತಿದೆಯೇ ಅಥವಾ ಮತ್ತೊಂದು ರೀತಿಯ ಶಕ್ತಿರಾಜಕಾರಣಕ್ಕೆ ರಂಗ ಸಜ್ಜಾಗುತ್ತಿದೆಯೇ ಎಂಬುದನ್ನು ಈಗಲೇ ಊಹಿಸುವುದು ಕಷ್ಟ.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More