ಭ್ರಷ್ಟಾಚಾರ ಪ್ರಕರಣ; ಲ್ಯಾಟಿನ್ ಅಮೆರಿಕದ ಜನಪ್ರಿಯ ನಾಯಕ ಲೂಲಾ ಜೈಲುಪಾಲು

ಸ್ಟೀಲ್ ಕಾರ್ಮಿಕನಾಗಿ ಕಾರ್ಮಿಕ ಹೋರಾಟವನ್ನು ಸಂಘಟಿಸಿ ನಂತರ ದೇಶದ ಅಧ್ಯಕ್ಷರಾಗಿರುವ ಲೂಲಾ ಅವರು ಬ್ರೆಜಿಲ್ ಮಾತ್ರವಲ್ಲದೆ ಇಡೀ ದಕ್ಷಿಣ ಅಮೆರಿಕದಲ್ಲಿಯೇ ಅತಿ ಜನಪ್ರಿಯ ನಾಯಕ. ಅವರೀಗ ಭ್ರಷ್ಟಾಚಾರ ಆರೋಪದಲ್ಲಿ ಜೈಲು ಪಾಲಾಗಿದ್ದು, ರಾಜಕೀಯದ ದೊಡ್ಡ ಅಧ್ಯಾಯ ಮುಕ್ತಾಯ ಕಂಡಿದೆ

ಚುನಾವಣಾ ಹೊಸ್ತಿಲಿನಲ್ಲಿರುವ ಬ್ರೆಜಿಲ್‌ನಲ್ಲಿ ದೊಡ್ಡ ರಾಜಕೀಯ ಬೆಳವಣಿಗೆಯಾಗಿದ್ದು, ಮುಂದಿನ ಅಧ್ಯಕ್ಷ ಎಂದೇ ಬಿಂಬಿತವಾಗಿದ್ದ ಬ್ರೆಜಿಲ್‌ನ ಮಾಜಿ ಅಧ್ಯಕ್ಷರು ಜೈಲುಪಾಲಾಗಿದ್ದಾರೆ. ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಲೂಯಿಸ್ ಇನಾಸಿಯೋ ಲೂಲಾ ಡ ಸಿಲ್ವಾ ಅವರಿಗೆ ಭ್ರಷ್ಟಾಚಾರದ ಆರೋಪವೊಂದರಲ್ಲಿ ಬ್ರೆಜಿಲ್ ನ್ಯಾಯಾಲಯ ೧೨ ವರ್ಷಗಳ ಜೈಲುವಾಸದ ಕಠಿಣ ಸಜೆಯನ್ನು ವಿಧಿಸಿದೆ.

ಎರಡು ದಿನಗಳ ಹಿಂದೆಯೇ ನ್ಯಾಯಾಲಯವು ಲೂಲಾ ಅವರನ್ನು ಬಂಧಿಸುವಂತೆ ಆದೇಶಿಸಿತ್ತು. ಆದರೆ, ತಮ್ಮ ತವರು ನೆಲದಲ್ಲಿ ಸ್ಟೀಲ್ ಕಾರ್ಮಿಕರ ಸಂಘಟನೆಯಲ್ಲಿ ಅಡಗಿದ್ದ ಲೂಲಾ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಇದೀಗ ಸಾವಿರಾರು ಬೆಂಬಲಿಗರ ವಿರೋಧದ ನಡುವೆಯೇ ಪೊಲೀಸರು ಹೆಲಿಕಾಪ್ಟರ್ ಮೂಲಕ ಲೂಲಾ ಅವರನ್ನು ನಿವಾಸದಿಂದ ಕರೆದುಕೊಂಡು ಹೋಗಿದ್ದಾರೆ. ಸಾವೋ ಪೌಲೋದ ತಮ್ಮ ನಿವಾಸದ ಕಚೇರಿಯಲ್ಲಿ ೭೨ ವರ್ಷದ ಲೂಲಾ ಪೊಲೀಸರಿಗೆ ಶರಣಾಗಿದ್ದಾರೆ. ಲೂಲಾ ಇದೇ ವರ್ಷ ಅಕ್ಟೋಬರ್‌ನಲ್ಲಿ ನಡೆಯಲಿರುವ ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರುವ ನಾಯಕ. ಇದೀಗ ಅವರು ಜೈಲುಪಾಲಾಗಿರುವ ಕಾರಣ ಸ್ಪರ್ಧೆ ಯಾವ ಕಡೆಗೂ ತಿರುಗುವ ಸಾಧ್ಯತೆಯಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.

ಲೋಹದ ಕಾರ್ಮಿಕರಾಗಿ, ನಂತರ ಕಾರ್ಮಿಕ ಸಂಘಟನೆಯ ಕಾರ್ಯಕರ್ತರಾಗಿದ್ದ ಲೂಲಾ ಬ್ರೆಜಿಲ್‌ ರಾಜಕೀಯದ ದಂತಕತೆ. ಲ್ಯಾಟಿನ್ ಅಮೆರಿಕದಲ್ಲಿ ಲೂಲಾ ಎಡಪಂಥೀಯರ ಆದರ್ಶ ವ್ಯಕ್ತಿ. ಅರ್ಧ ಶತಮಾನದ ಬಳಿಕ ಬ್ರೆಜಿಲ್ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಎಡಪಕ್ಷದ ನಾಯಕನೆನ್ನುವ ಹೆಗ್ಗಳಿಕೆಯೂ ಅವರಿಗಿದೆ. ಲೂಲಾ ಅವರು ೨೦೦೩ರಿಂದ ೨೦೧೧ರ ನಡುವೆ ಬ್ರೆಜಿಲ್ ಅಧ್ಯಕ್ಷರಾಗಿದ್ದರು. ಈ ಬಾರಿಯ ಚುನಾವಣೆಯಲ್ಲಿ ಅವರು ಮತ್ತೆ ಗೆದ್ದುಬರುವ ಸಾಧ್ಯತೆಗಳನ್ನೇ ಬಹಳಷ್ಟು ಚುನಾವಣಾ ಪೂರ್ವ ಸಮೀಕ್ಷೆಗಳು ತಿಳಿಸಿದ್ದವಲ್ಲದೆ, ಇಂದಿಗೂ ಅವರು ಬ್ರೆಜಿಲ್ ರಾಜಕೀಯದ ನಿರ್ಣಾಯಕ ವ್ಯಕ್ತಿಯಾಗಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ, ಬ್ರೆಜಿಲ್ ಧೀರ್ಘ ಅವಧಿಯ ಆರ್ಥಿಕ ಪ್ರಗತಿಯನ್ನು ಮೂರು ದಶಕಗಳ ಕಾಲ ಕಂಡಿತ್ತು. ಇದೇ ಕಾರಣದಿಂದ ಅವರ ಆಡಳಿತ ಸಾಮಾಜಿಕ ಕಾರ್ಯಕ್ರಮಗಳ ಮೇಲೆ ನೀರಿನಂತೆ ದುಡ್ಡು ಖರ್ಚು ಮಾಡಿದ್ದರು, ಲಕ್ಷಾಂತರ ಮಂದಿಯನ್ನು ಬಡತನದ ರೇಖೆಯಿಂದ ಮೇಲೆತ್ತುವ ಯೋಜನೆಗಳನ್ನು ಅವರ ಸರ್ಕಾರ ರೂಪಿಸಿತ್ತು. ಸತತ ಎರಡು ಅವಧಿಯಲ್ಲಿ ಅಧಿಕಾರದಲ್ಲಿದ್ದು, ದಾಖಲೆಯ ಜನಪ್ರಿಯತೆಯ ಜೊತೆಗೆ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಬ್ರೆಜಿಲ್‌ನಲ್ಲಿ ಸತತ ಎರಡು ಬಾರಿ ಮಾತ್ರ ಅಧಿಕಾರದಲ್ಲಿರುವ ಅವಕಾಶವಿರುವ ಕಾರಣ ಲೂಲಾ ಮುಂದಿನ ಚುನಾವಣೆಗೆ ಸ್ಪರ್ಧಿಸಿರಲಿಲ್ಲ.

ಇದೀಗ ಮತ್ತೊಂದು ಅವಧಿಗೆ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಸಿದ್ಧತೆಯಲ್ಲಿದ್ದ ಲೂಲಾ ಬಂಧನಕ್ಕೆ ಒಳಗಾಗಿರುವುದು ಬ್ರೆಜಿಲ್‌ನ ರಾಜಕೀಯ ಧಾರವಾಹಿಯ ಮತ್ತೊಂದು ಅಧ್ಯಾಯ ಅಂತ್ಯವಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಆದರೆ ಮುಂದಿನ ಅಧ್ಯಾಯದಲ್ಲಿ ಅವರು ಪಾತ್ರವಹಿಸುವುದಿಲ್ಲ ಎನ್ನುವ ಹಾಗಿಲ್ಲ. ಲೂಲಾಗೆ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಗದಿದ್ದರೂ, ಅವರ ಪ್ರಭಾವ ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಖಂಡಿತವಾಗಿಯೂ ಕೆಲಸ ಮಾಡಲಿದೆ ಎನ್ನಲಾಗಿದೆ.

‘ಆಪರೇಶನ್ ಕಾರ್ ವಾಷ್’ ಎನ್ನುವ ಭ್ರಷ್ಟಾಚಾರ ನಿಗ್ರಹ ದಳದ ತನಿಖೆಯು ಲೂಲಾ ಮೇಲೆ ಭ್ರಷ್ಟಾಚಾರ ಆರೋಪವನ್ನು ಹೊರಿಸಿದೆ. ಈ ಹಗರಣವು ಬ್ರೆಜಿಲ್‌ನ ಅನೇಕ ಹಿರಿಯ ರಾಜಕಾರಣಿಗಳ ಹೆಸರಿಗೆ ಕಪ್ಪುಮಸಿ ಬಳಿದಿದೆ. ಒಎಎಸ್‌ನ ಎಂಜಿನಿಯರಿಂಗ್ ಕಂಪನಿಯಿಂದ ಲಂಚವಾಗಿ 790,000 ಡಾಲರ್ ಮೌಲ್ಯದ ನವೀಕೃತ ಬೆಂಚ್ ಫ್ರಂಟ್ ಅಪಾರ್ಟ್‌ಮೆಂಟ್‌ ಲಂಚವಾಗಿ ಪಡೆದಿರುವ ಆರೋಪದಲ್ಲಿ ಲೂಲಾ ಅವರಿಗೆ ಶಿಕ್ಷೆಯಾಗಿದೆ. ಆದರೆ, ಲೂಲಾ ಅವರು ಈ ಆರೋಪವನ್ನು ತಳ್ಳಿಹಾಕಿದ್ದು, ತಮ್ಮನ್ನು ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವಂತೆ ಮಾಡಲು ಹೀಗೆ ಭ್ರಷ್ಟಾಚಾರ ಆರೋಪದಲ್ಲಿ ಸಿಲುಕಿಸಲಾಗುತ್ತಿದೆ ಎಂದು ಹೇಳಿದ್ದಾರೆ. “ವಾಸ್ತವದಲ್ಲಿ ಲೂಲಾ ಅವರು ಸಂಬಂಧಿಸಿದ ಅಪಾರ್ಟ್‌ಮೆಂಟ್ ಮಾಲೀಕರು ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ. ಆದರೆ ಸ್ವತಃ ಆರೋಪಿಗಳಲ್ಲಿ ಒಬ್ಬರಾಗಿರುವ ಒಎಎಸ್ ಸಂಸ್ಥೆಯ ಅಧ್ಯಕ್ಷರು ನೀಡಿದ ಹೇಳಿಕೆಯ ಮೇರೆಗೆ ಲೂಲಾರನ್ನು ಅಪರಾಧಿ ಎಂದು ಘೋಷಿಸಲಾಗಿದೆ” ಎನ್ನುವುದು ಲೂಲಾ ಸಮರ್ಥಕರ ವಾದ.

ಇದನ್ನೂ ಓದಿ : ಸಲ್ಮಾನ್ ವಕೀಲರಿಂದ ಮೇಲ್ಮನವಿಗೆ ಸಿದ್ಧತೆ; ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಅಂತ್ಯವಿಲ್ಲ?

ನ್ಯಾಯಾಲಯ ಲೂಲಾ ಅವರ ಶಿಕ್ಷೆಯನ್ನು ಮರುಪರಿಶೀಲಿಸಲು ನಿರಾಕರಿಸಿದೆ. ಅವರು ಕಾನೂನು ಪ್ರಕ್ರಿಯೆಗಳಿಗೆ ಸಹಕರಿಸಿ ಸೂಕ್ತವಾಗಿ ನಡೆದುಕೊಂಡಲ್ಲಿ ಮಾತ್ರವೇ ಅವರ ಸಾಂವಿಧಾನಿಕ ಹಕ್ಕುಗಳನ್ನು ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ಗುರುವಾರ ಫೆಡರಲ್ ಕೋರ್ಟ್ ನ್ಯಾಯಾಧೀಶ ಸರ್ಗಿಯೋ ಮೋರೋ ಅವರು ಲೂಲಾರನ್ನು ಶುಕ್ರವಾರ ಸಂಜೆ ೫ ಗಂಟೆಯೊಳಗೆ ಫೆಡರಲ್ ಪೊಲೀಸ್ ಕಚೇರಿಯ ಮುಂದೆ ಶರಣಾಗುವಂತೆ ಹೇಳಿದ್ದರು. ಆದರೆ ಲೂಲಾ ತಮ್ಮ ತವರುನೆಲದ ಮನೆಯಲ್ಲಿ ಎರಡು ದಿನ ಕಳೆದ ಮೇಲೆ ಪೊಲೀಸರಿಗೆ ಶರಣಾಗಿದ್ದಾರೆ.

ಬ್ರೆಜಿಲ್‌ನಲ್ಲಿ ೨೦೧೬ರ ಕಾನೂನು ಪ್ರಕಾರ ಮೊದಲ ಮೇಲ್ಮನವಿಯಲ್ಲೇ (ಫಸ್ಟ್ ಅಪೀಲ್) ಅಪರಾಧ ಸಾಬೀತಾದಲ್ಲಿ ಜೈಲು ಶಿಕ್ಷೆ ವಿಧಿಸಬಹುದು. ಲೂಲಾ ಅವರ ಮೇಲೆ ಆರು ಪ್ರತ್ಯೇಕ ಭ್ರಷ್ಟಾಚಾರದ ವಿಚಾರಣೆಗಳು ಬಾಕಿ ಉಳಿದಿವೆ. ಅಪರಾಧಿಯಾದ ಕಾರಣ ಲೂಲಾ ಅವರು ಅಕ್ಟೋಬರ್‌ನಲ್ಲಿ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಆದರೆ ಬ್ರೆಜಿಲ್‌ನ ಕೇಂದ್ರ ಚುನಾವಣಾ ನ್ಯಾಯಾಲಯದ ಲೂಲಾ ಕುರಿತ ಅಂತಿಮ ನಿರ್ಧಾರವನ್ನು ಇನ್ನೂ ತಿಳಿಸಿಲ್ಲ. ಲೂಲಾ ಸ್ಪರ್ಧೆಗೆ ಇಳಿಯಲು ಅರ್ಜಿ ಸಲ್ಲಿಸಿದಾಗ ಆ ಬಗ್ಗೆ ಪರಿಗಣಿಸುವುದಾಗಿ ಹೇಳಿದೆ.

ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
ನಿಕ್ಕಿ ಹ್ಯಾಲಿ ರಾಜೀನಾಮೆ ಹಿಂದೆ ಇರುವ ಕಾರಣವೇನಿರಬಹುದು?
ರಷ್ಯಾದಿಂದ ಎಸ್400 ಕ್ಷಿಪಣಿ ಖರೀದಿ ಒಪ್ಪಂದ; ಟ್ರಂಪ್ ಕೆಂಗಣ್ಣಿಗೆ ಗುರಿಯಾಗಲಿದೆ ಭಾರತ
Editor’s Pick More