ಭಾಗ 1 | ಭಾರತದ ಸುತ್ತಲೂ ವ್ಯೂಹಾತ್ಮಕ ತಂತ್ರ ಹೆಣೆಯುತ್ತಿದೆ ಚೀನಾ

ಭಾರತದ ಸುತ್ತಣ ದೇಶಗಳಲ್ಲಿ ಚೀನಾ ಬಂಡವಾಳ ಹೂಡುತ್ತಿದೆ. ಮೂಲ ಸೌಕರ್ಯ ಯೋಜನೆಗಳಿಗೆ ಆರ್ಥಿಕ ನೆರವು ನೀಡುತ್ತಿದೆ. ಬಂದರು, ನೌಕಾನೆಲೆ ನಿರ್ಮಿಸುತ್ತದೆ. ಇದನ್ನೆಲ್ಲ ವಾಣಿಜ್ಯ ಹಿತಾಸಕ್ತಿಯಿಂದ ಮಾಡಲಾಗುತ್ತಿದೆ ಎಂದು ಸ್ವತಃ ಚೀನಾ ಸ್ಪಷ್ಟಪಡಿಸಿದ್ದರೂ ಯಾರಿಗೂ ನಂಬಿಕೆ ಬರುತ್ತಿಲ್ಲ!

ಚೀನಾ ಈಗ ಹಿಂದಿನಂತಿಲ್ಲ. ಶಕ್ತಿದೇಶವಾಗಿ ಬೆಳೆದಿದೆ. ಅಮೆರಿಕಕ್ಕೇ ಸಡ್ಡು ಹೊಡೆಯುವಷ್ಟು ಆರ್ಥಿಕವಾಗಿ ಮತ್ತು ಮಿಲಿಟರಿ ಸಾಮರ್ಥ್ಯದಲ್ಲಿ ಬಲಿಷ್ಠವಾಗಿದೆ. ಮೂಲಭೂತವಾಗಿ ಚೀನಾ ಕಮ್ಯುನಿಸ್ಟ್ ವ್ಯವಸ್ಥೆ ಇರುವ ದೇಶವಾದರೂ ಜಾಗತೀಕರಣಕ್ಕೆ ತೆರೆದುಕೊಂಡು ಕೆಲವೇ ದಶಕಗಳಲ್ಲಿ ಅದ್ಭುತ ಪ್ರಗತಿ ಸಾಧಿಸಿದೆ. ತನ್ನ ಸುತ್ತಣ ದೇಶಗಳ ಜೊತೆ ಮೈತ್ರಿ ಬೆಳಸುತ್ತಿದೆ. ಮೂಲಸೌಕರ್ಯ ಕಲ್ಪಿಸುವ ಯೋಜನೆಗಳಿಗೆ ಹಣಕಾಸು ನೆರವು ನೀಡುವ ಮೂಲಕ ಜನರ ಮನಗೆಲ್ಲುವ ಪ್ರಯತ್ನ ಮಾಡುತ್ತಿದೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ವಾಯುನೆಲೆ, ವಾಣಿಜ್ಯ ಉದ್ದೇಶಕ್ಕೆ ಬಂದರುಗಳನ್ನು ಅಭಿವೃದ್ಧಿ ಮಾಡುತ್ತಿದೆ. ಅಪಾರ ಪ್ರಮಾಣದಲ್ಲಿ ಬಂಡವಾಳ ಹೂಡುತ್ತಿದೆ. ತನ್ನ ಮಿಲಿಟರಿ ಬಲ ಮತ್ತು ತಂತ್ರಜ್ಞಾನವನ್ನು ಬಲಪಡಿಸಿಕೊಳ್ಳುವ ವಿಚಾರಕ್ಕೆ ಆದ್ಯತೆ ನೀಡುತ್ತಿದೆ. ವಿವಿಧ ದೇಶಗಳ ಬಳಿ ನೌಕಾನೆಲೆಗಳನ್ನು ಸ್ಥಾಪಿಸುವ ಚೀನಾದ ಉದ್ದೇಶದ ಬಗ್ಗೆ ಅನೇಕ ಅನುಮಾನಗಳು ವ್ಯಕ್ತವಾಗಿವೆ. ಅದರಲ್ಲಿಯೂ ಭಾರತ ಮುಖ್ಯವಾಗಿ ತನ್ನ ಸುತ್ತ ಚೀನಾ ನಡೆಸುತ್ತಿರುವ ಚಟುವಟಿಕೆಗಳ ಬಗ್ಗೆ ಆತಂಕ ವ್ಯಕ್ತ ಮಾಡುತ್ತಲೇ ಇದೆ.

ಚೀನಾ, ಭಾರತದ ನೆರೆಯ ದೇಶ. ವೈಮನಸ್ಯ ಹಳೆಯದು. ಅರವತ್ತರ ದಶಕದಲ್ಲಿಯೇ ಸಂಘರ್ಷ ತೆಲೆದೋರಿದೆ. 1962ರಲ್ಲಿ ಹಿಮಾಲಯ ಪರ್ವತ ವಲಯದ ಅಕ್ಸಾಯಿ ಚಿನ್ ಮತ್ತು ಅರುಣಾಚಲ ಪ್ರದೇಶ ಯಾರಿಗೆ ಸೇರಬೇಕೆಂಬ ವಿಚಾರದಲ್ಲಿ ವಿವಾದ ಉಂಟಾಗಿ ಎರಡೂ ದೇಶಗಳ ನಡುವೆ ಯುದ್ಧ ನಡೆದಿದೆ. ಚೀನಾ ಜೊತೆ ಸ್ನೇಹ ಇರುವುದರಿಂದ ಅದು ದಾಳಿ ಮಾಡಲು ಸಾಧ್ಯವಿಲ್ಲ ಎನ್ನುವ ಭಾರತದ ಆಗಿನ ಪ್ರಧಾನಿ ಜವಹರಲಾಲ್ ನೆಹರು ಅವರ ನಂಬಿಕೆ ಸುಳ್ಳಾಯಿತು. ನೆಹರು ಅವರ ಈ ನಂಬಿಕೆಯಿಂದಾಗಿಯೇ ಭಾರತದ ಸೇನೆ ಯುದ್ಧಕ್ಕೆ ಅಗತ್ಯ ಸಿದ್ಧತೆ ನಡೆಸಿರಲಿಲ್ಲ. ಚೀನಾ ಸೇನೆ ಮುನ್ನುಗ್ಗಿ ಅಕ್ಸಾಯಿ ಚಿನ್ ಪ್ರದೇಶವನ್ನು ಆಕ್ರಮಿಸಿದೆ. ಅದೇ ರೀತಿ, ಅರುಣಾಚಲ ಪ್ರದೇಶಕ್ಕೆ ನುಗ್ಗಿ ಅಂತಿಮವಾಗಿ ಸ್ವಇಚ್ಛೆಯಿಂದಲೇ ಅಲ್ಲಿಂದ ವಾಪಸು ಹೋಗಿದೆ. ಈ ಯುದ್ಧದಲ್ಲಿ ಭಾರತದ 3,250 ಸೈನಿಕರು ಸತ್ತಿದ್ದಾರೆ. ಭಾರತಕ್ಕೆ ಪಾಠ ಕಲಿಸುವುದೇ ಈ ಯುದ್ಧದ ಉದ್ದೇಶವಾಗಿತ್ತು ಎಂದು ನಂತರ ಚೀನಾ ನಾಯಕರು ಹೇಳಿದ್ದಾರೆ. ಈ ಯುದ್ಧದಲ್ಲಿ ಭಾರತ 37 ಸಾವಿರ ಚ.ಕಿಮೀ ಪ್ರದೇಶವನ್ನು ಕಳೆದುಕೊಂಡಿದೆ. ಈವರೆಗೆ ಅದನ್ನು ವಾಪಸು ಪಡೆಯಲು ಸಾಧ್ಯವಾಗಿಲ್ಲ. ಜೊತೆಗೆ, ಆಗಿಂದಾಗ್ಗೆ ಅರುಣಾಚಲ ಪ್ರದೇಶ ತನ್ನದೆನ್ನುವ ರೀತಿಯಲ್ಲಿ ಚೀನಾ ಸೇನೆ ಅತಿಕ್ರಮ ಪ್ರವೇಶ ಮಾಡುತ್ತಲೇ ಇದೆ. ಈ ವಿವಾದಗಳಲ್ಲದೆ, ಆಗಿಂದಾಗ್ಗೆ ಎರಡೂ ದೇಶಗಳ ನಡುವೆ ಸಂಘರ್ಷ ತಲೆದೋರಿದ ನಿದರ್ಶನಗಳಿವೆ. ಚೀನಾ ಶಕ್ತಿರಾಷ್ಟ್ರವಾಗಿ ಬೆಳೆದಂತೆಲ್ಲ ಸರ್ವಾಧಿಕಾರಿ ಧೋರಣೆ ಹೆಚ್ಚುತ್ತಿದೆ. ಸ್ವಹಿತ ರಕ್ಷಣೆಗಾಗಿ ಚೀನಾ ರೂಪಿಸಿರುವ ತಂತ್ರಕ್ಕೆ ಮೊದಲು ಗುರಿಯಾದದ್ದು ಭಾರತ.

2017ರಲ್ಲಿ ಭಾರತ, ಭೂತಾನ್ ಮತ್ತು ಚೀನಾ ಗಡಿಯಲ್ಲಿರುವ ದೋಕ್ಲಾಮ್ ಪ್ರದೇಶದಲ್ಲಿ ಚೀನಾ ಮತ್ತು ಭಾರತದ ಸೇನೆ ಎದುರುಬದುರು ನಿಲ್ಲುವಂಥ ಘಟನೆ ಎದುರಾಯಿತು. 2017ರ ಜೂ.17ರಂದು ಚೀನಾದ ಸೈನಿಕರು ರಸ್ತೆ ಮಾಡಲು ದೋಕ್ಲಮ್‌ಗೆ ಬಂದಾಗ ಭೂತಾನ್‌ಗೆ ಅಚ್ಚರಿಯೇ ಆಯಿತು. ಆ ಪ್ರದೇಶ ತನಗೆ ಸೇರಿದ್ದೆಂದು ಭೂತಾನ್ ವಾದ ಮಾಡಿದೆ. ಅಂತೆಯೇ ಚೀನಾ ಕೂಡ ಹೇಳಿದೆ. ಚೀನಾ ಸೈನಿಕರು ಭೂತಾನ್ ಆಡಳಿತಗಾರರ ಮಾತನ್ನು ಲೆಕ್ಕಿಸಲಿಲ್ಲ. ಆಗ ಭೂತಾನ್ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕೆಂಬ ಕೋರಿಕೆಯನ್ನು ಭಾರತಕ್ಕೆ ಸಲ್ಲಿಸಿತು. ಭೂತಾನ್ ಪರವಾಗಿ ಭಾರತದ ಸೈನಿಕರು ಚೀನಾ ಸೈನಿಕರನ್ನು ಹಿಮ್ಮೆಟ್ಟಿಸಲು ಯತ್ನಿಸಿದರು. ಇನ್ನೇನು ಯುದ್ಧವೇ ಸಿಡಿಯಿತು ಎನ್ನುವ ಹಂತಕ್ಕೆ ವಿವಾದ ಹೋಗಿತ್ತು. ಅಂತಿಮವಾಗಿ ಎರಡೂ ಕಡೆಯವರು ತಮ್ಮ ಸೈನಿಕರನ್ನು ವಾಪಸು ಕರೆಸಿಕೊಂಡರು; ದೊಡ್ಡ ಯುದ್ಧವೊಂದು ತಪ್ಪಿತು. ಆದರೆ, ವಿವಾದ ಮಾತ್ರ ಹಾಗೆಯೇ ಉಳಿದಿದೆ. ಚೀನಾ ರಸ್ತೆ ಮಾಡಲು ಹೊರಟ ಪ್ರದೇಶ ಭೂತಾನ್‍ಗೆ ಸೇರಿದ್ದೆಂಬುದು ಭಾರತದ ನಿಲುವಾಗಿತ್ತು. ಆದ್ದರಿಂದ ಭಾರತ ಸುಮ್ಮನಿರಲು ಸಾಧ್ಯವಿರಲಿಲ್ಲ. ಭಾರತ ಮತ್ತು ಭೂತಾನ್ ನಡುವೆ ಭದ್ರತಾ ಒಪ್ಪಂದ ಇರುವುದರಿಂದ ಭಾರತ ನೆರವಿಗೆ ಹೋಗಲೇಬೇಕಾದ ಸನ್ನಿವೇಶ ಇತ್ತು. ಇದರ ಜೊತೆಗೆ, ಚೀನಾ ಅಲ್ಲಿ ರಸ್ತೆ ಮಾಡುವುದು ಭಾರತದ ಭದ್ರತೆಯ ದೃಷ್ಟಿಯಿಂದಲೂ ಉತ್ತಮ ಬೆಳವಣಿಗೆ ಆಗಿರಲಿಲ್ಲ. ಆ ಸೂಕ್ಷ್ಮ ಪ್ರದೇಶದಲ್ಲಿ ಚೀನಾ ಸೇನೆ ನೆಲೆಯೂರುವುದು ಭಾರತಕ್ಕೆ ಅಪಾಯಕಾರಿಯಾದುದೂ ಆಗಿತ್ತು. ಹೀಗಾಗಿ ಭಾರತ ಅಲ್ಲಿ ಪ್ರತಿರೋಧ ಪ್ರದರ್ಶಿಸಿತು. ಈ ಪ್ರತಿರೋಧದಿಂದಾಗಿಯೇ ಚೀನಾ ಅತಿಕ್ರಮಣಕ್ಕೆ ಮುಂದಾಗಲಿಲ್ಲ. ಇದೇನೇ ಇದ್ದರೂ ಇತ್ತೀಚಿನ ಮಾಹಿತಿ ಪ್ರಕಾರ, ದೋಕ್ಲಾಮ್‍ಗೆ ಹತ್ತಿರದಲ್ಲಿಯೇ ದೊಡ್ಡ ಸೇನಾನೆಲೆಯನ್ನು ಚೀನಾ ಸ್ಥಾಪಿಸಿದೆ.

ಇದನ್ನೂ ಓದಿ : ಸರ್ವಾಧಿಕಾರ ಮಿಶ್ರಿತ ಪ್ರಜಾಪ್ರಭುತ್ವದ ಕಡೆಗೆ ಹೊರಳಿದ ಜಗತ್ತು

ಚೀನಾದ ಬದಲಾಗುತ್ತಿರುವ ನೀತಿಯನ್ನು ಈ ಬೆಳವಣಿಗೆ ಪ್ರಚುರಪಡಿಸುತ್ತದೆ. ತನ್ನ ಆರ್ಥಿಕ ಸಾಮ್ರಾಜ್ಯದ ವಿಸ್ತರಣೆಗಾಗಿ ಸಂಪರ್ಕ ಹೆಚ್ಚಿಸುವ ಚೀನಾದ ಪ್ರಯತ್ನಕ್ಕೆ ಇನ್ನೂ ಹಲವು ಮುಖಗಳಿವೆ. ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ವೈಮನಸ್ಯ ಹೆಚ್ಚಿದಂತೆಲ್ಲ ಚೀನಾ ಮತ್ತು ಪಾಕಿಸ್ತಾನದ ನಡುವೆ ಬಾಂಧವ್ಯ ಹೆಚ್ಚುತ್ತಿದೆ. ಅಮೆರಿಕ ಮತ್ತು ಚೀನಾ ನಡುವೆ ಕೂಡ ಸ್ನೇಹ ಕಡಿಮೆಯಾಗುತ್ತಿದೆ. ಇದು ಎರಡೂ ದೇಶಗಳ ನಡುವೆ ವಾಣಿಜ್ಯ ಕದನಕ್ಕೂ ದಾರಿ ಮಾಡಿಕೊಟ್ಟಿದೆ. ಅದೇ ರೀತಿ, ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಮೈತ್ರಿಯಲ್ಲಿ ಬಿರುಕು ಮೂಡಿದೆ. ಆಫ್ಘಾನಿಸ್ತಾನದ ಭಯೋತ್ಪಾದಕರನ್ನು ನಿಗ್ರಹ ಮಾಡಲು ಕೊಟ್ಟ ನೆರವೆಲ್ಲವೂ ಅವರನ್ನು ಪ್ರೋತ್ಸಾಹಿಸಲು ಬಳಸಲಾಗುತ್ತಿದೆ ಎಂಬ ಗುಪ್ತಚರ ವಿಭಾಗದ ವರದಿಯ ಹಿನ್ನೆಲೆಯಲ್ಲಿ ನೆರವಿನಲ್ಲಿ ಖೋತಾ ಮಾಡಲಾಗಿದೆ. ಈ ಬೆಳವಣಿಗೆಗಳಿಂದಾಗಿ ಪಾಕಿಸ್ತಾನವು ಚೀನಾಕ್ಕೆ ಹತ್ತಿರವಾಗುತ್ತಿದೆ. ಎರಡೂ ದೇಶಗಳ ನಡುವೆ ರಕ್ಷಣಾ ಒಪ್ಪಂದಗಳು ಆಗಿವೆ. ಅರಬ್ಬಿ ಸಮುದ್ರದಲ್ಲಿ ಚೀನಾಕ್ಕೆ ಸೇರಿದ ನೌಕಾಪಡೆಯ ಚಟುವಟಿಕೆಗೆ ಪಾಕಿಸ್ತಾನ ಅವಕಾಶ ನೀಡಿದೆ. ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಸುಮಾರು ಐದು ಬಿಲಿಯನ್ ಡಾಲರ್‌ಗಳಷ್ಟು ಸಾಲ ನೀಡಿದೆ. ಪರಮಾಣು ಸ್ಥಾವರಗಳಿಗೆ ಚೀನಾ ರಹಸ್ಯವಾಗಿ ತಾಂತ್ರಿಕ ನೆರವು ನೀಡುತ್ತಿದೆ ಎನ್ನುವ ವರದಿಗಳಿವೆ. ಚೀನಾದ ನಡೆಯನ್ನು ಗಮನಿಸುತ್ತ ಹೋದರೆ, ಭಾರತ ಸ್ವಲ್ಪಮಟ್ಟಿಗೆ ಆತಂಕಗೊಳ್ಳಬಹುದಾದಂಥ ಬೆಳವಣಿಗೆಗಳು ಅಲ್ಲಿ ನಡೆಯುತ್ತಿರುವುದನ್ನು ಗುರುತಿಸಬಹುದು.

ಅಮೆರಿಕದ ರಕ್ಷಣಾ ಇಲಾಖೆ ಸಿದ್ಧಪಡಿಸಿರುವ ಏಷ್ಯಾದ ಇಂಧನ ಭವಿಷ್ಯ ಕುರಿತ ಅಂತಿಮ ವರದಿಯಲ್ಲಿ ಒಂದು ಪರಿಕಲ್ಪನೆಯನ್ನು ಪ್ರಸ್ತಾಪಿಸಲಾಗಿದೆ. ಅದೇ 'ಮುತ್ತಿನ ಹಾರ" (ಸ್ಟ್ರಿಂಗ್ ಆಫ್ ಪೆರಲ್ಸ್) ಎಂಬ ಸಿದ್ಧಾಂತ. ಚೀನಾ ದೇಶ ತನ್ನ ಇಂಧನ ಭದ್ರತೆಗಾಗಿ ಇಂಥ ಒಂದು ಸಿದ್ಧಾಂತವನ್ನು ರೂಪಿಸಿ ಅನುಸರಿಸುತ್ತಿದೆ. ಅಂದರೆ, ತನ್ನ ಹಿತಾಸಕ್ತಿ ಕಾಪಾಡುವ ಮತ್ತು ಹಿತಾಸಕ್ತಿಯನ್ನು ಹೆಚ್ಚಿಸುವ ವಾಣಿಜ್ಯ ಚಟುವಟಿಕೆಯ ಸರಣಿ ಕೇಂದ್ರಗಳು, ಕಾರ್ಯಕ್ರಮಗಳು. ಭಾರತದ ಸುತ್ತಣ ಪ್ರಮುಖ ಪ್ರದೇಶಗಳನ್ನು ಗುರುತಿಸಿ, ಅವುಗಳನ್ನು ಅಭಿವೃದ್ಧಿ ಮಾಡುವ ಮೂಲಕ ಭಾರತದ ಪ್ರಭಾವವನ್ನು ತಗ್ಗಿಸುವುದು ಚೀನಾದ ಈ ಯೋಜನೆಯ ರಹಸ್ಯ ಉದ್ದೇಶ. ಈ ಕಾರ್ಯಕ್ರಮದ ಅನ್ವಯ ಇಂಡೋನೇಷ್ಯಾದ ಸುಮಾತ್ರ ದ್ವೀಪದ ಬಳಿಯ ಮಲಕ್ಕಾ ಜಲಮಾರ್ಗ, ಲಂಕಾ, ಪಾಕಿಸ್ತಾನ, ಮಾಲ್ಡೀವ್ಸ್, ಪರ್ಷಿಯನ್ ಗಲ್ಫ್‌ನಲ್ಲಿರುವ ಇರಾನ್‍ನ ದ್ವೀಪ ಹರ್ಮಜ್ ಜಲಮಾರ್ಗ ಮತ್ತು ಸೊಮಾಲಿಯಾ ಬಂದರಿಗೆ ಸಂಪರ್ಕ ಸಾಧಿಸಲು ಪ್ರಯತ್ನಗಳು ನಡೆದಿವೆ. ಆ ಪ್ರದೇಶಗಳಲ್ಲಿ ಬಂದರುಗಳನ್ನು ಅಭಿವೃದ್ಧಿ ಮಾಡಿ ತೈಲ ಮತ್ತು ಇತರ ಸರಕು ಸಾಗಾಣಿಕೆಗೆ ಅನುವು ಮಾಡಿಕೊಡುವುದಕ್ಕಾಗಿ ಸಿದ್ಧತೆಗಳು ನಡೆದಿವೆ. ಈ ಯೋಜನೆಯ ವ್ಯಾಪ್ತಿಗೆ ಬಾಂಗ್ಲಾದೇಶ, ಮ್ಯಾನ್ಮಾರ್ ಮತ್ತು ಲಿಬಿಯಾ ಕೂಡ ಸೇರಿವೆ. ಭಾರತದ ಸುತ್ತಣ ಎಲ್ಲ ಪ್ರದೇಶಗಳೂ ಈಗ ಈ ಯೋಜನೆಯ ವ್ಯಾಪ್ತಿಯಲ್ಲಿ ಬಂದಂತಾಗಿದೆ.

ಪರ್ತಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
ನಿಕ್ಕಿ ಹ್ಯಾಲಿ ರಾಜೀನಾಮೆ ಹಿಂದೆ ಇರುವ ಕಾರಣವೇನಿರಬಹುದು?
Editor’s Pick More