ಭಾಗ ೨ | ಪ್ರಬಲ ಚೀನಾದೆದುರು ಭಾರತ ಪ್ರಾಬಲ್ಯ ಸಾಧಿಸಬೇಕಾದ್ದು ಅನಿವಾರ್ಯ

ಭಾರತವು ಆರ್ಥಿಕವಾಗಿ ಚೀನಾದಷ್ಟು ಪ್ರಬಲವಾಗಿಲ್ಲ. ಭಾರತದಲ್ಲಿ ಸೇವಾ ವಲಯ ಪ್ರಬಲವಾಗಿದೆ. ಆದರೆ ಉತ್ಪಾದನಾ ವಲಯ ದುರ್ಬಲವಾಗಿದೆ. ಉತ್ಪಾದನಾ ವಲಯ ದುರ್ಬಲವಾಗಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುವುದು ಕಷ್ಟ. ಜಾಗತಿಕ ರಾಜಕೀಯ ಬದಲಾಗುತ್ತಿದ್ದು ಭಾರತ ಬದಲಾಗುವುದು ಅನಿವಾರ್ಯ

ಚೀನಾ ಅತಿ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶ. ಸಹಜವಾಗಿಯೇ ಚೀನಾಕ್ಕೆ ಹೆಚ್ಚು ತೈಲದ ಅಗತ್ಯವಿದೆ. ಹೀಗಾಗಿ ವಿಶ್ವದಲ್ಲಿಯೇ ಅತಿ ಹೆಚ್ಚು ತೈಲವನ್ನು ಬಳಸುತ್ತಿರುವ ದೇಶಗಳ ಪೈಕಿ ಚೀನಾ ಕೂಡ ಒಂದು. ಇರಾನ್, ಕೊಲ್ಲಿ ಮತ್ತು ಆಫ್ರಿಕಾದ ವಿವಿಧ ತೈಲ ದೇಶಗಳಿಂದ ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಚೀನಾ ಎರಡನೆಯ ಸ್ಥಾನದಲ್ಲಿದೆ. ಹೀಗಾಗಿ ಇಂಧನ ಭದ್ರತೆಗೆ ಚೀನಾ ಆದ್ಯತೆ ನೀಡಿ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಿಕೊಳ್ಳುತ್ತಿದೆ. ತೈಲ ಸಾಗಣೆಗೆ ಅಗತ್ಯವಾದ ಜಲಮಾರ್ಗ ಮತ್ತು ಭೂ ಮಾರ್ಗಗಳನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಚೀನಾ ಪ್ರಯತ್ನಿಸುತ್ತಿದೆ. ದಕ್ಷಿಣ ಚೀನಾ ಸಾಗರದ ಮಾರ್ಗ ಚೀನಾಗೆ ಬಹಳ ಮುಖ್ಯವಾದುದು ಮಧ್ಯಪ್ರಾಚ್ಯವೂ ಸೇರಿದಂತೆ ವಿವಿಧ ಕಡೆಗಳಿಂದ ಬರುವ ಹಡಗುಗಳಿಗೆ ಯಾವುದೇ ತೊಂದರೆಯಾಗದಂತೆ ‘ಸೌತ್ ಚೀನಾ ಸೀ’ಯನ್ನು ರಕ್ಷಿಸಲು ಚೀನಾ ಮುಂದಾಗಿದೆ.

ಸೌತ್ ಚೀನಾ ಸೀ ಮೇಲೆ ಚೀನಾ ನಿಯಂತ್ರಣ ಸಾಧಿಸುತ್ತಿರುವುದು ಆ ವಲಯದ ದೇಶಗಳಾದ ಫಿಲಿಪ್ಪೀನ್ಸ್, ವಿಯೆಟ್ನಾಂ ಮುಂತಾದ ದೇಶಗಳ ವಿರೋಧಕ್ಕೆ ಕಾರಣವಾಗಿದೆ. ಆದರೆ ಚೀನಾ ಈ ವಿರೋಧಕ್ಕೆ ಕಿವಿಗೊಡದೆ ತನ್ನ ನಿಯಂತ್ರಣದಲ್ಲಿರುವ ಪ್ರಾಂತ್ಯ ಹೈನನ್ ದ್ವೀಪದ ಬಳಿ ಸಮುದ್ರದ ಆಳದಲ್ಲಿ ಸಬ್‍ಮೆರಿನ್ ನೆಲೆಯನ್ನು ಸ್ಥಾಪಿಸುತ್ತಿದೆ. ಈಗಾಗಲೇ ಬಂದರನ್ನು ಆಧುನೀಕರಿಸಲಾಗಿದೆ. ವುಡೀ ಮತ್ತು ಪಾರ್ಸೆಲ್ ಐಲ್ಯಾಂಡ್‍ಗಳಲ್ಲಿ ವಾಯುನೆಲೆಗಳನ್ನು ಸ್ಥಾಪಿಸಿದೆ. ಸೌತಾ ಚೀನಾ ಸೀ ಪ್ರದೇಶದ ಮೇಲೆ ಹಿಡಿತ ಹೆಚ್ಚಿಸಿಕೊಳ್ಳಲು ಚೀನಾ ನಡೆಸುತ್ತಿರುವ ಪ್ರಯತ್ನ ಸಹಜವಾಗಿಯೇ ಅಮೆರಿಕ, ಜಪಾನ್ ಮುಂತಾದ ದೇಶಗಳ ಪ್ರತಿರೋಧಕ್ಕೆ ಕಾರಣವಾಗಿದೆ. ವಿರೋಧವನ್ನು ಚೀನಾ ಲೆಕ್ಕಿಸುತ್ತಿಲ್ಲ.

ಇದೇ ರೀತಿ ಚೀನಾ ದೇಶ ಹಿಂದೂ ಮಹಾಸಾಗರ ಪ್ರದೇಶದಲ್ಲಿಯೂ ತನ್ನ ಬಾಹುಗಳನ್ನು ಚಾಚಿದೆ. ಮುತ್ತಿನ ಹಾರದ ಪರಿಕಲ್ಪನೆ ಇದೇ ಯೋಜನೆಯ ಭಾಗವಾಗಿದೆ. ಮೊದಲನೆಯದಾಗಿ ಮಧ್ಯಪ್ರಾಚ್ಯ ದೇಶಗಳಿಗೆ ಸಂಪರ್ಕ ಕಲ್ಪಿಸುವ ದೃಷ್ಟಿಯಿಂದ ಪಾಕಿಸ್ತಾನದ ಪ್ರಾಂತ್ಯವಾಗಿರುವ ವಿವಾದಿತ ಬಲೂಚಿಸ್ಥಾನದ ಗ್ವಾದಾರ್ ಬಂದರು ಪಟ್ಟಣವನ್ನು ಚೀನಾ ಅಭಿವೃದ್ಧಿಗೆ ಆಯ್ಕೆ ಮಾಡಿಕೊಂಡಿದೆ. ಅಲ್ಲಿ ಚೀನಾ ಆರ್ಥಿಕ ವಲಯವೊಂದನ್ನು ನಿರ್ಮಿಸುತ್ತಿದೆ. ಒನ್ ಬೆಲ್ಟ್ ಒನ್ ರೋಡ್ ಈ ಯೋಜನೆಯ ಭಾಗವಾಗಿದೆ. ವಿಶೇಷ ಆರ್ಥಿಕ ವಲಯ ನಿರ್ಮಾಣ ಯೋಜನೆಗೆ 60 ಬಿಲಿಯನ್ ಡಾಲರ್ ಹಣ ವೆಚ್ಚ ಮಾಡುತ್ತಿದ್ದು ಈ ನೆಲೆ ಮಧ್ಯಪ್ರಾಚ್ಯದ ಪ್ರಮುಖ ಪರ್ಷಿಯನ್ ಜಲಮಾರ್ಗ ಹರ್ಮಜ್‍ಗೆ ಸಂಪರ್ಕ ಕಲ್ಪಿಸುತ್ತದೆ. ಸದ್ಯ ಪಾಕಿಸ್ತಾನ ಸಮುದ್ರದ ಮೂಲಕ ನಡೆಸುವ ತನ್ನ ಎಲ್ಲ ವಹಿವಾಟನ್ನು ಕರಾಚಿ ಬಂದರಿನ ಮೂಲಕ ಮಾಡುತ್ತಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ಏರ್ಪಟ್ಟ ಸಂದರ್ಭದಲ್ಲಿ ಹಿಂದೊಮ್ಮೆ ಭಾರತ ಕರಾಚಿ ಬಂದರು ಮಾರ್ಗಕ್ಕೆ ತಡೆ ಉಂಟುಮಾಡುವ ಬೆದರಿಕೆ ಹಾಕಿತ್ತು. ಇದರಿಂದ ಬೆದರಿದ ಪಾಕಿಸ್ತಾನ ಯುದ್ಧದಿಂದ ಹಿಂದೆ ಸರಿಯುವಂತಾಗಿತ್ತು.

ಚೀನಾ ಕೂಡಾ ತನ್ನ ವಾಣಿಜ್ಯ ಚಟುವಟಿಕೆಯನ್ನು ಇದೇ ಕರಾಚಿ ಬಂದರಿನಿಂದ ನಡೆಸುತ್ತಿದ್ದು ಅದರ ಮಿತಿ ಚೀನಾಕ್ಕೆ ತಿಳಿದಿದೆ. ಹೀಗಾಗಿ ಗ್ವಾದಾರ್ ಬಂದರಿನ ಅಭಿವೃದ್ಧಿಗೆ ಮುಂದಾಗಿದೆ. ಗ್ವಾದಾರ್ ನಲ್ಲಿ ವಿಶೇಷ ಆರ್ಥಿಕ ವಲಯ ನಿರ್ಮಾಣ ಭಾರತಕ್ಕೆ ದೊಡ್ಡ ಬೆದರಿಕೆ ಎನ್ನುವುದರಲ್ಲಿ ಅನುಮಾನವಿಲ್ಲ. ಉದ್ದೇಶಿತ ಆರ್ಥಿಕವಲಯ ವಿವಾದದ ಪ್ರದೇಶದಲ್ಲಿದೆ ಎಂದು ಸ್ಪಷ್ಟಪಡಿಸಿದ ಮೇಲೂ ಚೀನಾ ಯೋಜನೆ ಮುಂದುವರಿಸಿರುವುದನ್ನು ಭಾರತ ವಿರೋಧಿಸಿದೆ. ಈ ಆರ್ಥಿಕ ವಲಯ ಕಾರಕೋರಂ ಹೈವೇ ಮೂಲಕ ಚೀನಾದ ಪಶ್ಚಿಮ ಭಾಗಕ್ಕೆ ಸಂಪರ್ಕ ಕಲ್ಪಿಸುತ್ತದೆ. ಭದ್ರತೆಯ ದೃಷ್ಟಿಯಿಂದ ಈ ಬೆಳವಣಿಗೆ ದೊಡ್ಡ ಸಮಸ್ಯೆ ಎಂದೇ ಭಾರತ ಭಾವಿಸಿದೆ. ಭಾರತವನ್ನು ಆರ್ಥಿಕವಾಗಿ ಮಣಿಸುವ ಮತ್ತು ಭದ್ರತೆಗೆ ಸಮಸ್ಯೆ ಉಂಟುಮಾಡುವ ದುರುದ್ದೇಶದಿಂದಲೇ ಪಾಕಿಸ್ತಾನದ ಆಡಳಿತಗಾರರು ಚೀನಾಕ್ಕೆ ನೆರವಾಗುತ್ತಿದ್ದಾರೆ ಎನ್ನುವುದರಲ್ಲಿ ಅನುಮಾನವಿಲ್ಲ.

ಭಾರತವೂ ಸೇರಿದಂತೆ ಭಾರತದ ಸುತ್ತ ಮುತ್ತಲ ದೇಶಗಳಿಗೆ ಮಧ್ಯಪ್ರಾಚ್ಯ ದೇಶಗಳಿಂದ ತೈಲ ಸಾಗಣೆ ನಡೆಯುವುದು ಹಿಂದೂ ಮಹಾಸಾಗರದ ಮೂಲಕ. ಅದರಲ್ಲಿಯು ಚೀನಾದ ಶೇ 80ರಷ್ಟು ತೈಲ ಸಾಗಣೆ ನಡೆಯುವುದು ಈ ಸಮುದ್ರದ ಮೂಲಕವೇ. ತೈಲ ಹೊತ್ತ ಹಡಗುಗಳೆಲ್ಲಾವೂ ಚೀನಾ ತಲುಪುವುದು ಮಲೇಷ್ಯಾಕ್ಕೆ ಸೇರಿದ ಸುಮಾತ್ರ ದ್ವೀಪದ ಬಳಿಯಿರುವ ಮಲಕ್ಕಾ ಜಲಮಾರ್ಗದ ಮೂಲಕ. ಈ ಜಲಮಾರ್ಗದ ಭದ್ರತೆಗಾಗಿ ಅಂಡಮಾನ್- ನಿಕೋಬರ್ ದ್ವೀಪದ ಬಳಿಯ ಕುಕ್ಕೂ ದ್ವೀಪದಲ್ಲಿ ಚೀನಾ ನೌಕಾ ನೆಲೆ ಸ್ಥಾಪಿಸಿದೆ ಎನ್ನುವ ವರದಿಗಳಿವೆ.

ಬಾಂಗ್ಲಾ ದೇಶದ ಚಿತ್ತಗಾಂಗ್ ಬಂದರನ್ನು ಚೀನಾ ಅಭಿವೃದ್ಧಿ ಮಾಡಿದೆ. ಜೊತೆಗೆ ನೌಕಾ ನೆಲೆಯೊಂದನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ. ನೌಕಾ ನೆಲೆ ಬಾಂಗ್ಲಾ ಅಥವಾ ಮೈನ್ಮಾರ್‌ನಲ್ಲಿ ನಿರ್ಮಿಸಿದರೆ ಬಂಗಾಳಕೊಲ್ಲಿಯ ಮೇಲೆ ಚೀನಾ ಹಿಡಿತ ಸಾಧಿಸಿದಂತಾಗುತ್ತದೆ. ಭಾರತ ಮತ್ತು ಶ್ರೀಲಂಕಾ ನಡುವೆ ಮೊದಲಿನಿಂದಲೂ ಉತ್ತಮ ಬಾಂಧವ್ಯವಿದೆ. ಅಲ್ಲಿನ ಭಾರತ ಮೂಲದ ತಮಿಳರು ಸ್ವತಂತ್ರ ದೇಶಕ್ಕಾಗಿ ಹೋರಾಟ ಮಾಡುತ್ತ ಬಂದಿದ್ದಾರೆ. ಭಾರತ ಈ ವಿಚಾರವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕೆಂಬ ನಿಲುವನ್ನು ತಳೆಯುತ್ತ ಬಂದಿದೆ. ಆದರೆ ತಮಿಳರ ಉಗ್ರಗಾಮಿ ಸಂಘಟನೆ ಎಲ್‍ಟಿಟಿಇ ಸಶಸ್ತ್ರ ಬಂಡಾಯ ಎದ್ದು ಯುದ್ಧಕ್ಕೆ ಇಳಿದು ಸೋಲು ಕಂಡಿದೆ. ಎಲ್‍ಟಿಟಿಇ ವಿರುದ್ಧ ಯುದ್ಧ ಘೋಷಿಸಿ ಗೆದ್ದ ಮಹಿಂದ್ರಾ ರಾಜಪಕ್ಷೆ ಸರ್ಕಾರ ಚೀನಾದಿಂದ ಸಾಕಷ್ಟು ಮಿಲಿಟರಿ ನೆರವು ಪಡೆದಿತ್ತು. ಪಾಕಿಸ್ತಾನ ಸರ್ಕಾರ ಕೂಡ ಚೀನಾ ಸಹಯೋಗದಿಂದ ಮಿಲಿಟರಿ ನೆರವು ನೀಡಿತ್ತು. ಗೆಲುವಿನಿಂದ ಬೀಗುತ್ತಿದ್ದ ರಾಜಪಕ್ಷೆ ಸರ್ಕಾರದ ಜೊತೆ ಹೆಚ್ಚಿನ ನೆರವಿಗೆ ಚೀನಾ ಮುಂದಾಯಿತು. ಇದರ ಪರಿಣಾಮವಾಗಿ ಹಂಬಂತೋಟಾ ಬಂದರನ್ನು ಅಭಿವೃದ್ಧಿ ಮಾಡುವ ಮತ್ತು ನಿರ್ವಹಿಸುವ ಜವಾಬ್ದಾರಿಯನ್ನು ಚೀನಾಕ್ಕೆ ನೀಡಲಾಯಿತು.

ಅಲ್ಲಿ ನೌಕಾ ನೆಲೆ ಸ್ಥಾಪಿಸುವ ಉದ್ದೇಶ ಚೀನಾಕ್ಕೆ ಇತ್ತು. ಆದರೆ 2015ರ ಚುನಾವಣೆಯಲ್ಲಿ ರಾಜಪಕ್ಷೆ ಸರ್ಕಾರ ಸೋಲು ಕಂಡಿತು., ನಂತರ ಅಧಿಕಾರಕ್ಕೆ ಬಂದ ಸಿರಿಸೇನಾ ನೇತೃತ್ವದ ಸರ್ಕಾರ ಭಾರತದ ಪರವಾದ ನಿಲುವು ತಳೆದು ನೌಕಾಪಡೆ ಅಭಿವೃದ್ಧಿಗೆ ಅವಕಾಶ ನೀಡಿಲ್ಲ. ಈಗ ಚೀನಾ ತಾನು ವೆಚ್ಚಮಾಡಿರುವ ಹಣವನ್ನು ವಾಪಸ್ ಪಡೆಯುವುದಕ್ಕಾಗಿ ಬಂದರನ್ನು 99 ವರ್ಷಗಳ ಲೀಸ್‍ಗೆ ಪಡೆದಿದೆ. ಭಾರತದ ನೆರಯ ಮತ್ತೊಂದು ದೇಶದ ಮಾಲ್ಡೀವ್ಸ್ ಜೊತೆ ಚೀನಾ ಉತ್ತಮ ಬಾಂಧವ್ಯ ಹೊಂದಿದ್ದು ಅಲ್ಲಿನ ಬೃಹತ್ ಯೋಜನೆಗಳಲ್ಲಿ ಬಂಡವಾಳ ಹೂಡಿದೆ. ಮಾಲ್ಡೀವ್ಸ್ ಮತ್ತು ಭಾರತದ ಜೊತೆ ಉತ್ತಮ ಬಾಂಧವ್ಯ ಪಡೆದಿದ್ದರೂ ಚೀನಾ ಅಲ್ಲಿ ಪ್ರಭಾವಶೀಲವಾಗಿದೆ. ಇತ್ತೀಚೆಗೆ ಅಧಿಕಾರಕ್ಕಾಗಿ ಹೋರಾಟ ನಡೆದಾಗ ಭಾರತ ಮತ್ತು ಚೀನಾ ದೇಶಗಳ ನಡುವೆಯೇ ಬಿಕ್ಕಟ್ಟು ಉಂಟಾಗಿತ್ತು. ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸಬೇಕೆಂದು ಹಿಂದಿನ ಅಧ್ಯಕ್ಷ ಮಹಮ್ಮದ್ ನಜೀಬ್ ಭಾರತಕ್ಕೆ ಒತ್ತಾಯಿಸಿದ್ದರು. ಭಾರತಕ್ಕೆ ಮೊದಲೇ ಚೀನಾ ಮಧ್ಯಪ್ರವೇಶಿಸಬಹುದೆಂಬ ವದಂತಿಗಳು ಹಬ್ಬಿದ್ದವು. ಎರಡೂ ದೇಶಗಳು ಮಧ್ಯಪ್ರವೇಶಿಸದೆ ಇರಲು ನಿರ್ಧರಿಸಿದ್ದರಿಂದ ಸಮಸ್ಯೆ ಉದ್ಭವವಾಗಲಿಲ್ಲ ನಿಜ. ಆದರೆ ಚೀನಾ ಮಾಲ್ಡೀವ್ಸ್ ವಿಚಾರದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸದೆ ಬಿಡಲಿಲ್ಲ. ಅಂದರೆ ಅಧಿಕಾರವನ್ನು ಚಲಾಯಿಸದೆ ಬಿಡಲಿಲ್ಲ.

ನೇಪಾಳ ಮತ್ತು ಭಾರತದ ಸಂಬಂಧ ಹಳೆಯದು. ಅಲ್ಲಿನ ರಾಜವಂಶಸ್ಥರು ಭಾರತದ ಜತೆ ಉತ್ತಮ ಬಾಂಧವ್ಯ ಪಡೆದಿದ್ದರು. ಹಿಂದಿನ ರಾಜಕೀಯ ನಾಯಕರೆಲ್ಲರೂ ಭಾರತ ಸಂಜಾತರು. ಅಥವಾ ಭಾರತದ ಬೆಂಬಲ ಪಡೆದವರು. ಆದರೆ ಅಲ್ಲಿನ ಆಡಳಿತಗಾರರ ವಿರುದ್ಧ ಹೋರಾಟ ಮಾಡಿದವರೆಲ್ಲ ಚೀನಾ ಬೆಂಬಲಿಗರು. ಕಮ್ಯುನಿಸ್ಟ್ ಪ್ರಭಾವ ದೇಶದಲ್ಲಿ ಪ್ರಬಲವಾಗಿಯೇ ಇದೆ. ಹಲವು ದಶಕಗಳ ಕಾಲ ದೊರೆ ಆಡಳಿತದ ವಿರುದ್ಧ ನಡೆದ ಹೋರಾಟಕ್ಕೆ ಚೀನಾ ಬೆಂಬಲ ನೀಡಿದೆ. ಭಾರತ ವಿರೋಧಿ ಭಾವನೆ ಪ್ರಬಲವಾಗಿದ್ದು ಈಗ ಕಮ್ಯುನಿಸ್ಟರೇ ಅಧಿಕಾರದಲ್ಲಿದ್ದಾರೆ. ನೇಪಾಳ ಅಗತ್ಯವಸ್ತುಗಳಿಗೆ ಭಾರತವನ್ನೇ ಅವಲಂಬಿಸಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಚೀನಾ ಆಡಳಿತಗಾರರು ನೇಪಾಳದ ಆಡಳಿತಗಾರರ ಜೊತೆ ಹೆಚ್ಚಿನ ಸಂಪರ್ಕ ಪಡೆದಿದ್ದು ಆರ್ಥಿಕವಾಗಿ ದೇಶವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾರೆ.

ಚೀನಾ ಈಗ ಆರ್ಥಿಕವಾಗಿ ಬಲಾಢ್ಯವಾಗಿದೆ. ಭಾರತವೂ ಸೇರಿದಂತೆ ಬಹುಪಾಲು ದೇಶಗಳ ಮಾರುಕಟ್ಟೆಯನ್ನು ಚೀನಾ ಆಕ್ರಮಿಸಿಕೊಳ್ಳುತ್ತಿದೆ. ಮಿಲಿಟರಿಯಲ್ಲಿಯೂ ಬಲವಾಗಿದೆ. ಇತ್ತೀಚೆಗೆ ಅಧ್ಯಕ್ಷ ಕ್ಷಿ ಜಿನ್‍ಪಿಂಗ್ ಅವರು ಶಾಶ್ವತ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಇದುವರೆಗೆ ಅಧ್ಯಕ್ಷರಿಗಿದ್ದ ಆಡಳಿತದ ನಿರ್ದಿಷ್ಟ ಕಾಲದ ಅವಧಿಯನ್ನು ರದ್ದು ಮಾಡಲಾಗಿದೆ. ಕ್ಷಿ ಜಿನ್ ಪಿಂಗ್ ಅವರೇ ಎಲ್ಲ. ಪ್ರಪಂಚದಲ್ಲಿ ಚೀನಾವನ್ನು ನಂಬರ್ ಒನ್ ದೇಶವನ್ನಾಗಿ ಮಾಡುವುದಾಗಿ ಮತ್ತು ಚೀನಾ ಮಾದರಿ ಅಭಿವೃದ್ಧಿಯನ್ನು ಮುಂಚೂಣಿಗೆ ತರುವುದಾಗಿ ಕ್ಷಿ ಘೋಷಿಸಿದ್ದಾರೆ. ಚೀನಾ ತನ್ನ ಒಂದಿಂಚೂ ಜಾಗವನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ತೈವಾನ್ ಮತ್ತು ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಚೀನಾದ ಹೊಸ ರೀತಿಯ ವಿಸ್ತರಣ ನೀತಿ ಭಾರತಕ್ಕೆ ತಿಳಿಯದಿರುವುದೇನಲ್ಲ. ಹೀಗಾಗಿಯೇ ಪೂರ್ವದತ್ತ ಗಮನ ಎಂಬ ನೀತಿಯನ್ನು ಭಾರತ ಅನುಸರಿಸಲು ಆರಂಭಿಸಿದೆ. ಚೀನಾದ ಸುತ್ತಲ ದೇಶಗಳಾದ ತೈವಾನ್, ಜಪಾನ್, ಸೌತ್ ಕೊರಿಯಾ, ಫಿಲಿಪ್ಪೀನ್ಸ್, ವಿಯಟ್ನಾಂ, ಉಜ್ಬೆಕಿಸ್ತಾನ್, ತುಕ್‍ಮೆನಿಸ್ತಾನ್, ಮಂಗೋಲಿಯಾ, ಕಿರ್ಜಿಸ್ತಾನ್, ಕಜಕಿಸ್ತಾನ್ ಜೊತೆ ಆರ್ಥಿಕ ಸಂಬಂಧಗಳನ್ನು ಕುದುರಿಸಲು ಭಾರತ ಪ್ರಯತ್ನಿಸುತ್ತಿದೆ. ನೆರೆಯ ಬಾಂಗ್ಲಾ, ನೇಪಾಳ, ಮೈನಮಾರ್ ಜೊತೆ ಆರ್ಥಿಕ ಸಂಬಂಧ ಬೆಳಸಲು ಪ್ರಯತ್ನಿಸುತ್ತಿದೆ. ಚೀನಾದ ಗ್ವಾದಾರ್ ಬಂದರು ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಇರಾನ್ ಬಳಿಯ ಚಬಹಾರ್ ಬಂದರನ್ನು ಅಭಿವೃದ್ಧಿಪಡಿಸಲು ಅಗತ್ಯವಾದ ಸಿದ್ಧತೆ ಮಾಡಿಕೊಂಡಿದೆ. ಹಾಗೆ ನೋಡಿದರೆ ಈ ಯೋಜನೆ ಹಳೆಯದು. ಇರಾನ್ ಜೊತೆಗಿನ ಅಂತಾರಾಷ್ಟ್ರೀಯ ಸಂಬಂಧಗಳು ಕೆಟ್ಟ ಹಿನ್ನೆಲೆಯಲ್ಲಿ ಈ ಯೋಜನೆಯೂ ನಿಧಾನಗತಿಗೆ ಒಳಗಾಗಿತ್ತು. ಅಂತಾರಾಷ್ಟ್ರೀಯ ಪರಿಸ್ಥಿತಿಯೇನೂ ಸುಧಾರಿಸಿಲ್ಲ. ಆದರೆ ಭಾರತ ಚಬಹಾರ್ ಬಂದರನ್ನು ಅಭಿವೃದ್ಧಿ ಮಾಡಲೇಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ.

ಇದನ್ನೂ ಓದಿ : ಭಾಗ 1 | ಭಾರತದ ಸುತ್ತಲೂ ವ್ಯೂಹಾತ್ಮಕ ತಂತ್ರ ಹೆಣೆಯುತ್ತಿದೆ ಚೀನಾ

ಭಾರತವು ಆರ್ಥಿಕವಾಗಿ ಚೀನಾದಷ್ಟು ಪ್ರಬಲವಾಗಿಲ್ಲ. ಭಾರತದಲ್ಲಿ ಸೇವಾ ವಲಯ ಪ್ರಬಲವಾಗಿದೆ. ಆದರೆ ಉತ್ಪಾದನಾ ವಲಯ ದುರ್ಬಲವಾಗಿದೆ. ಉತ್ಪಾದನಾ ವಲಯ ದುರ್ಬಲವಾಗಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುವುದು ಕಷ್ಟ. ಈ ಹಿನ್ನೆಲೆಯಿಂದ ನೋಡುವುದಾದರೆ ಭಾರತ ಅಭಿವೃದ್ಧಿಯಲ್ಲಿ ಹಿಂದೆಬಿದ್ದಿದೆಯೆಂದೇ ಅರ್ಥ. ಹೀಗಾಗಿ ಮುಂದುವರಿದ ಚೀನಾವನ್ನು ಎದುರಿಸುವ ಮಾರ್ಗಗಳನ್ನು ಈಗಲೇ ಗುರುತಿಸಿ ಮುಂದುವರಿಯಬೇಕಾಗಿದೆ. ನೆರೆಯ ದೇಶಗಳಿಗೆ ಸಂಬಂಧಿಸಿದ ಭಾರತದ ನೀತಿ ದುರ್ಬಲವಾಗಿದೆ. ನೆರೆಯ ದೇಶಗಳ ಜತೆ ಬಾಂಧವ್ಯ ಅಭಿವೃದ್ಧಿಗೆ ಆದ್ಯತೆ ಸಿಗುತ್ತಿಲ್ಲ. ಅಷ್ಟೇ ಅಲ್ಲ ಭಾರತದ ನಡೆ ಆದರ್ಶಪ್ರಾಯವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿಯೇ ನೆರೆಯ ದೇಶಗಳ ಜೊತೆ ಭಾರತದ ಸಂಬಂಧ ಉತ್ತಮವಾಗಿಲ್ಲ. ಬಾಂಧವ್ಯ ಅಭಿವೃದ್ಧಿಯಾಗದೆ ಭಾರತದ ಹಿತಾಸಕ್ತಿ ರಕ್ಷಣೆ ಸಾಧ್ಯವಿಲ್ಲ. ಮೊದಲು ಭಾರತ ಅಭಿವೃದ್ಧಿಯಾಗಬೇಕು. ವಿಶ್ವದ ಮುಖ್ಯ ದೇಶಗಳ ಜೊತೆ ಉತ್ತಮ ಬಾಂಧವ್ಯ ಇದ್ದರೂ ನೆರೆಯ ದೇಶಗಳ ಜೊತೆ ಉತ್ತಮ ಬಾಂಧವ್ಯ ಸಾಧಿಸಲು ಸಾಧ್ಯವಾಗದೆ ಹೋದರೆ ನೆಮ್ಮದಿ ಹಾಳಾಗುತ್ತದೆ. ಜಾಗತಿಕ ರಾಜಕೀಯ ಬದಲಾಗುತ್ತಿದ್ದು ಭಾರತ ಬದಲಾಗುವುದು ಅನಿವಾರ್ಯ. ಬದಲಾದ ವಾತಾವರಣದಲ್ಲಿ ಭಾರತ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಿದೆ.

ಪರ್ತಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
ನಿಕ್ಕಿ ಹ್ಯಾಲಿ ರಾಜೀನಾಮೆ ಹಿಂದೆ ಇರುವ ಕಾರಣವೇನಿರಬಹುದು?
Editor’s Pick More