ಅಮೆರಿಕದಿಂದ ಸಿರಿಯಾ ಮೇಲೆ ಮಿಲಿಟರಿ ದಾಳಿ; ಶೀತಲ ಸಮರ ಮತ್ತೆ ಆರಂಭ?

ಕಳೆದ ವಾರ ಸಂಭವಿಸಿದ ರಾಸಾಯನಿಕ ಅಸ್ತ್ರ ದಾಳಿಗೆ ಪ್ರತಿಕ್ರಿಯೆಯಾಗಿ ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್ ಜಂಟಿಯಾಗಿ ಸಿರಿಯಾದ ಮೇಲೆ ಕ್ಷಿಪಣಿ ಬಾಂಬ್ ದಾಳಿ ನಡೆಸಿವೆ. ಇದರಿಂದಾಗಿ ರಷ್ಯಾ ಮತ್ತು ಅಮೆರಿಕದ ನಡುವೆ ಮತ್ತೆ ಶೀತಲ ಸಮರ ಆರಂಭವಾದಂತೆಯೇ ಆಗಿದೆ

ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್‌ನ ವಾಯುಪಡೆ ಜಂಟಿಯಾಗಿ ಶುಕ್ರವಾರ ಸಿರಿಯಾ ರಾಜಧಾನಿ ಡಮಾಸ್ಕಸ್ ಹೊರವಲಯದಲ್ಲಿರುವ ರಾಸಾಯನಿಕ ಅಸ್ತ್ರ ಮಳಿಗೆ ಹಾಗೂ ಪ್ರಯೋಗಾಲಯಗಳ ಮೇಲೆ ಕ್ಷಿಪಣಿ ದಾಳಿ ನಡೆಸಿವೆ. ಇದರಿಂದಾಗಿ ಕಳೆದ ಏಳು ವರ್ಷಗಳಿಂದ ಸಿರಿಯಾದಲ್ಲಿ ನಡೆಯುತ್ತಿರುವ ಆಂತರಿಕ ಯುದ್ಧಕ್ಕೆ ಹೊಸ ಆಯಾಮ ಬಂದಂತಾಗಿದೆ. ಸದ್ಯಕ್ಕೆ ಒಂದೇ ಬಾರಿ ದಾಳಿ ನಡೆದಿದೆ. ಸಿರಿಯಾ ಬದಲಾಗದೆ ಇದ್ದರೆ ಮತ್ತೆ ಬಾಂಬ್ ದಾಳಿ ನಡೆಸಲು ಹಿಂಜರಿಯುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಸಿರಿಯಾದಲ್ಲಿ ರಷ್ಯಾದಂತೆಯೇ ಇರಾನ್ ಕೂಡ ಸಕ್ರಿಯವಾಗಿದೆ. ಸಿರಿಯಾ ಅದ್ಯಕ್ಷ ಬಷರ್ ಅಲ್ ಅಸ್ಸಾದ್‌ಗೆ ಬೆಂಬಲವಾಗಿ ಮಿಲಿಟರಿ ನೆರವು ನೀಡುತ್ತಿವೆ. ಯಾವುದೇ ರೀತಿಯಲ್ಲಿ ರಷ್ಯಾ ಮತ್ತು ಇರಾನ್ ಮಿಲಿಟರಿ ಸಿಬ್ಬಂದಿಯ ಮೇಲೆ ಪರಿಣಾಮ ಆಗದಂತೆ ದಾಳಿ ನಡೆಸಲಾಗಿದೆ.

ಕ್ಷಿಪಣಿ ದಾಳಿಗೆ ಸಿರಿಯಾದ ಮಿತ್ರ ದೇಶ ರಷ್ಯಾ ಆಕ್ರೋಶ ವ್ಯಕ್ತ ಮಾಡಿದೆ. ಯಾವುದೇ ದೇಶದ ಸಾರ್ವಭೌಮತೆಗೆ ಮತ್ತೊಂದು ದೇಶ ಧಕ್ಕೆ ಮಾಡುವಂತಿಲ್ಲ ಎಂಬ ವಿಶ್ವಸಂಸ್ಥೆಯ ಧ್ಯೇಯಕ್ಕೆ ಈ ದಾಳಿ ವಿರುದ್ಧವಾದುದು. ಈ ದಾಳಿಯಿಂದ ಆಗಬಹುದಾದ ಕೆಟ್ಟಪರಿಣಾಮಗಳಿಗೆ ಅಮೆರಿಕ, ಬ್ರಿಟನ್, ಫ್ರಾನ್ಸ್‌ನ ನಾಯಕರೇ ಹೊಣೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಮಿರ್ ಪುಟಿನ್ ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಈಗಾಗಲೇ ಅಮೆರಿಕ ಮತ್ತು ರಷ್ಯಾದ ನಡುವಣ ಬಾಂಧವ್ಯ ಕೆಟ್ಟಿದೆ. ಸಿರಿಯಾದ ಬೆಳವಣಿಗೆ ಬಾಂಧವ್ಯ ಮತ್ತಷ್ಟು ಕೆಡಲು ಕಾರಣವಾಗಿದೆ. ಅಮೆರಿಕ ಮತ್ತು ಹಿಂದಿನ ಸೋವಿಯತ್ ಒಕ್ಕೂಟದ ನಡುವೆ ಅಂತ್ಯವಾಗಿದ್ದ ಶೀತಲ ಸಮರ ಮತ್ತೊಮ್ಮೆ ಆರಂಭವಾಗಬಹುದೆ ಎಂಬ ಊಹೆಗಳು ಈಗ ಗರಿಗೆದರಿವೆ. ಬ್ರಿಟನ್ ಸೇರಿದಂತೆ ಇಡೀ ಯೂರೋಪಿನ ಮುಖ್ಯ ದೇಶಗಳ ಜೊತೆಗಿನ ರಷ್ಯಾ ಬಾಂಧವ್ಯ ಈಗಾಗಲೇ ಕೆಟ್ಟಿದೆ. ಈ ವಾತಾವರಣ ಶೀತಲ ಸಮರ ತೀವ್ರಗೊಳ್ಳಲು ಕಾರಣವಾಗಬಹುದಾದ ಸಾಧ್ಯತೆ ಇದೆ. ಇಂಥ ಸ್ಫೋಟಕ ಸ್ಥಿತಿಯನ್ನು ರಷ್ಯಾದ ಅಧ್ಯಕ್ಷ ಪುಟಿನ್ ಹೇಗೆ ನಿಭಾಯಿಸುತ್ತಾರೆ ಎನ್ನುವುದು ಕುತೂಹಲಕಾರಿ.

ಇದೇ ತಿಂಗಳ ೭ರಂದು ಡಮಾಸ್ಕೆಸ್‌ಗೆ ಎಂಟು ಕಿಮೀ ದೂರದಲ್ಲಿರುವ ಡ್ಯೂಮಾ ನಗರದ ಮೇಲೆ ನಡೆದ ರಾಸಾಯನಿಕ ಅಸ್ತ್ರ ದಾಳಿಗೆ ೭೫ಕ್ಕೂ ಹೆಚ್ಚು ಜನರು ಸತ್ತಿದ್ದಾರೆ. ಹತ್ತಾರು ಮಕ್ಕಳು ಈ ದಾಳಿಯಿಂದ ಉಸಿರು ಕಟ್ಟಿ ಸತ್ತಿದ್ದಾರೆ. ನೂರಾರು ಜನರು ಗಾಯಗೊಂಡಿದ್ದಾರೆ. ರಾಸಾಯನಿಕ ಅಸ್ತ್ರಗಳಿಂದ ಮಕ್ಕಳು ಸಾವು ಬದುಕಿನ ಮಧ್ಯೆ ಒದ್ದಾಡುತ್ತಿರುವ ದೃಶ್ಯ ಇಡೀ ಜಗತ್ತಿನ ಮನ ಕಲಕಿದೆ. ಈ ಅಮಾನುಷ ಕೃತ್ಯ ವಿಶ್ವದಾದ್ಯಂತ ಖಂಡನೆಗೆ ಗುರಿಯಾಗಿದೆ. ಈ ಕೃತ್ಯ ತಮ್ಮ ಸೇನೆಯಿಂದ ಆದುದಲ್ಲ ಎಂದು ಸಿರಿಯಾ ಸ್ಪಷ್ಟೀಕರಣ ನೀಡಿದರೆ, ಅದರ ಮಿತ್ರದೇಶ ರಷ್ಯಾ ಕೂಡ ಅದು ಸಿರಿಯಾ ಕೃತ್ಯವಲ್ಲ ಎಂದು ಹೇಳಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಂದೆ ಚರ್ಚೆಗೆ ಬಂದಾಗ ಈ ಘಟನೆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಕಂಡುಹಿಡಿಯಬೇಕೆಂದು ರಷ್ಯಾ ಒತ್ತಾಯಿಸಿದೆ. ಇದು ಸಿರಯಾದಲ್ಲಿರುವ ಬಂಡಾಯಗಾರರ ವಿವಿಧ ಗುಂಪುಗಳ ಕೃತ್ಯವಿರಬಹುದು ಅಥವಾ ಇಸ್ರೇಲ್ ಕೃತ್ಯವಿರಬಹುದು ಎಂದು ರಷ್ಯಾ ಮತ್ತು ಸಿರಿಯಾ ಹೇಳಿಕೆ ನೀಡಿವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ರಾಸಾಯನಿಕ ಅಸ್ತ್ರ ಬಳಕೆ ಆಗಿರುವುದು ಸಿರಿಯಾದಲ್ಲಿ ಮಾತ್ರ. ಜೊತೆಗೆ ರಾಸಾಯನಿಕ ಅಸ್ತ್ರಗಳನ್ನು ತಯಾರಿಸುವ ಮೂಲ ಸೌಲಭ್ಯ ಇರುವುದು ಸಿರಿಯಾದಲ್ಲಿಯೇ.

೨೦೧೩ರಲ್ಲಿ ಬಂಡಾಯಗಾರರ ಮೇಲೆ ಸಿರಿಯಾ ಇಂಥದ್ದೇ ರಾಸಾಯನಿಕ ಅಸ್ತ್ರಗಳನ್ನು ಬಳಸಿದ ನಿದರ್ಶನವಿದೆ. ಆಗ ೧೫೦೦ಕ್ಕೂ ಹೆಚ್ಚು ಜನರು ಸತ್ತಿದ್ದರು. ಈ ಘಟನೆ ಆಧರಿಸಿ ಸಿರಿಯಾ ಮೇಲೆ ವಿಶ್ವಸಂಸ್ಥೆ ನೇತೃತ್ವದಲ್ಲಿ ಮಿಲಿಟರಿ ದಾಳಿ ನಡೆಸುವ ಸಂಬಂಧ ನಿರ್ಣಯವೊಂದನ್ನು ಅಮೆರಿಕ ಮಂಡಿಸಿತ್ತು. ಆಗ ರಷ್ಯಾ ಮಧ್ಯಪ್ರವೇಶಿಸಿ, ಮಿಲಿಟರಿ ದಾಳಿಗೆ ಬದಲಾಗಿ ರಾಸಾಯನಿಕ ಅಸ್ತ್ರಗಳನ್ನು ಪತ್ತೆಮಾಡಿ ನಾಶ ಮಾಡುವ ಕೆಲಸ ಆಗಬೇಕು ಎಂದು ಸಲಹೆ ಮಾಡಿತ್ತು. ಆ ಸಲಹೆಗೆ ವಿಶ್ವಸಂಸ್ಥೆ ಸದಸ್ಯರು ಒಪ್ಪಿ ಮಾರಕಾಸ್ತ್ರಗಳನ್ನು ಪತ್ತೆಹಚ್ಚುವ ಮತ್ತು ಅವುಗಳನ್ನು ನಾಶ ಮಾಡುವ ಉದ್ದೇಶದಿಂದ ಸಿರಿಯಾಕ್ಕೆ ತಜ್ಞರು ಹೋದರು. ತನ್ನಲ್ಲಿರುವ ರಾಸಾಯನಿಕ ಅಸ್ತ್ರ, ದಾಸ್ತಾನು ಮಳಿಗೆಗಳ ಬಗ್ಗೆ ಸಿರಿಯಾ ಮಾಹಿತಿ ಒದಗಿಸಿತು. ಸುಮಾರು ಒಂದು ಸಾವಿರ ಟನ್‌ಗಳಷ್ಟು ರಾಸಾಯನಿಕ ಅಸ್ತ್ರಗಳನ್ನು ತಜ್ಞರು ನಾಶ ಮಾಡಿದರು. ದೇಶದಲ್ಲಿ ಇನ್ನೂ ಅಂಥ ಅಸ್ತ್ರಗಳು, ಪ್ರಯೋಗಾಲಯಗಳು ಇರಬಹುದೆಂದು ತಜ್ಞರು ಸಂಶಯಪಟ್ಟಿದ್ದರು. ಆದರೆ, ಸಿರಿಯಾ ಸರ್ಕಾರ ಬೇರೆ ಅಂಥ ಅಸ್ತ್ರಗಳಾಗಲೀ, ಪ್ರಯೋಗಾಲಯಗಳಾಗಲೀ ಇಲ್ಲ ಎಂದು ಹೇಳಿದ್ದರಿಂದ ಆ ಪ್ರಕರಣ ಮುಕ್ತಾಯವಾಗಿತ್ತು.

ಮತ್ತೆ ಕಳೆದ ವರ್ಷ ಸಿರಿಯಾದಲ್ಲಿ ರಾಸಾಯನಿಕ ದಾಳಿ ನಡೆದ ಘಟನೆಗಳು ವರದಿಯಾಗಿದ್ದವು. ಆಗ ಅಧಿಕಾರದಲ್ಲಿದ್ದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಸಿರಿಯಾದ ಮೇಲೆ ಮಿಲಿಟರಿ ದಾಳಿಗೆ ಮುಂದಾಗಲಿಲ್ಲ. ರಾಜತಾಂತ್ರಿಕ ಮಾರ್ಗದಲ್ಲಿ ಸಮಸ್ಯೆಯನ್ನು ಪರಿಹರಿಸುವ ದಾರಿ ತುಳಿದರು. ಇದೀಗ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿದ್ದಾರೆ. ಕಳೆದ ವಾರವಷ್ಟೇ ಸಿರಿಯಾದಿಂದ ಅಮೆರಿಕದ ಯೋಧರನ್ನು ವಾಪಸ್ ಕರೆಸಿಕೊಳ್ಳುವುದಾಗಿ ಪ್ರಕಟಿಸಿದ್ದರು. ದೇಶದ ಸಮಸ್ಯೆಗಳ ಕಡೆಗೆ ಹೆಚ್ಚು ಗಮನ ಕೊಡುವುದೇ ಟ್ರಂಪ್ ಅವರ ನೀತಿಯಾದ್ದರಿಂದ ಬೇರೆ ದೇಶಗಳಿಗೆ ಅಮೆರಿಕದ ಯೋಧರನ್ನು ಕಳುಹಿಸುವ, ಅಷ್ಟೇ ಅಲ್ಲ ಇತರರ ಕಾರಣಗಳಿಗಾಗಿ ಯುದ್ಧ ಮಾಡುವ ಸಾಧ್ಯತೆ ಇರಲಿಲ್ಲ. ಏ.೭ರಂದು ಡ್ಯೂಮಾ ನಗರದಲ್ಲಿ ಮಾರಕ ರಾಸಾಯನಿಕ ದಾಳಿ ನಡೆದ ನಂತರವೂ ಅವರು ಕ್ಷಪಣಿ ದಾಳಿ ಬಗ್ಗೆ ಯೋಚಿಸಿದಂತೆ ಕಾಣುವುದಿಲ್ಲ. ವಿಶ್ವಸಂಸ್ಥೆಯಲ್ಲಿ ಈ ವಿಷಯ ಚರ್ಚೆಗೆ ಬಂದು ಸಿರಿಯಾ ಮೇಲೆ ಮಿಲಿಟರಿ ದಾಳಿ ಸಲಹೆಯನ್ನು ರಷ್ಯಾ ವಿರೋಧಿಸಿದ ನಂತರ ಬಹುಶಃ ಟ್ರಂಪ್ ಅವರಲ್ಲಿ ಬದಲಾವಣೆ ಆದಂತೆ ಕಾಣುತ್ತದೆ. ಸಿರಿಯಾವನ್ನು ಈ ಕುಕೃತ್ಯಕ್ಕೆ ಶಿಕ್ಷಿಸದೆ ಬಿಡಬಾರದೆಂಬ ನಿಲುವಿಗೆ ಬ್ರಿಟನ್ ಪ್ರಧಾನಿ ಥೆರೇಸಾ ಮೇ ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯಲ್ ಮೆಕ್ರಾನ್ ಬೆಂಬಲ ಸೂಚಿಸಿದ ಪರಿಣಾಮವಾಗಿ ಜಂಟಿ ದಾಳಿ ನಡೆದಿದೆ.

ಮೂರು ದೇಶಗಳಿಂದ ಒಟ್ಟು ೧೧೩ ಬಾರಿ ಕ್ಷಪಣಿ ಬಾಂಬ್ ದಾಳಿ ನಡೆದಿದೆ. ಕ್ಷಿಪಣಿ ದಾಳಿಗೆ ಪ್ರತಿದಾಳಿ ನಡೆಸಿ, ಆ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸುವ ತಂತ್ರಜ್ಞಾನ ತಮ್ಮಲ್ಲಿದ್ದು ಬಹುಪಾಲು ದಾಳಿಗಳನ್ನು ಮಾರ್ಗಮಧ್ಯದಲ್ಲಿಯೇ ನಾಶ ಮಾಡಲಾಗಿದೆ ಎಂದು ಸಿರಿಯಾ ಮಿಲಿಟರಿ ಹೇಳಿಕೊಂಡಿದೆ. ಅತ್ಯಾಧುನಿಕ ಕ್ಷಿಪಣಿಗಳನ್ನು ಪ್ರಯೋಗಿಸಲಾಗುವುದು ಎಂದು ಟ್ರಂಪ್ ಒಂದೆರೆಡು ದಿನಗಳ ಮುಂಚೆಯೇ ಪ್ರಕಟಿಸಿದ್ದರು. ಹೀಗಾಗಿ ಸಿರಿಯಾ ಸಿದ್ಧತೆ ಮಾಡಿಕೊಂಡಿರಲೂಬಹುದು. ಇದೇನೇ ಇದ್ದರೂ, ಕೆಲವಾದರೂ ಕ್ಷಿಪಣಿಗಳು ಗುರಿ ತಲುಪಿ ನಾಶ ಮಾಡಿರುವುದರಲ್ಲಿ ಅನುಮಾನವಿಲ್ಲ. ನಾಶದ ಪ್ರಮಾಣ ತಿಳಿಯಲು ಸ್ವಲ್ಪ ಸಮಯ ಬೇಕಾಗಬಹುದು. ಯಾರೇ ಪ್ರತಿರೋಧ ಒಡ್ಡಿದರೂ ಉಗ್ರಗಾಮಿಗಳನ್ನು ಮತ್ತು ಭಿನ್ನಮತೀಯರನ್ನು ಬಗ್ಗುಬಡಿಯುವ ಕೆಲಸ ನಿಲ್ಲದು ಎಂದು ಸಿರಿಯಾದ ಅಧ್ಯಕ್ಷ ಬಸ್ಸಾರ್ ಅಲ್ ಅಸ್ಸಾದ್ ಘೋಷಿಸಿರುವುದು ಅಪಾಯದ ಮುನ್ಸೂಚನೆ. “ನೀವು ಎಂಥವರು ಎನ್ನುವುದನ್ನು ನೀವು ಎಂಥವರನ್ನು ಸ್ನೇಹಿತರನ್ನಾಗಿ ಮಾಡಿಕೊಂಡಿದ್ದೀರಿ ಎನ್ನುವುದರಿಂದ ನಿರ್ಧರಿಸಬಹುದು. ಸಿರಿಯಾ ಮತ್ತು ಇರಾನ್ ನಿಮಗೆ ಒಳ್ಳೆಯ ಸ್ನೇಹಿತರಲ್ಲ. ಅವರಿಂದ ದೂರವಿರಿ,” ಎಂದು ಟ್ರಂಪ್ ಅವರು ಪುಟಿನ್‌ಗೆ ಸಲಹೆ ಮಾಡಿದ್ದಾರೆ. ಆದರೆ, ಟ್ರಂಪ್ ಸಲಹೆಯನ್ನು ಒಪ್ಪುಕೊಳ್ಳುವ ಸ್ಥಿತಿಯಲ್ಲಿ ಪುಟಿನ್ ಇಲ್ಲ.

ಸಿರಿಯಾ ಬಿಕ್ಕಟ್ಟು ವಿಚಿತ್ರ ತಿರುವುಗಳನ್ನು ಪಡೆಯುತ್ತಿದೆ. ಮೂಲಭೂತವಾಗಿ ಈ ಬಿಕ್ಕಟ್ಟು ಮುಸ್ಲಿಂ ಜನಾಂಗದಲ್ಲಿರುವ ಶಿಯಾ-ಸುನ್ನಿಗಳ ನಡುವಣ ವೈಮನಸ್ಯದ ಒಂದು ಭಾಗವಾಗಿದೆ. ಸಿರಿಯಾದಲ್ಲಿ ಸುನ್ನಿಗಳ ಪ್ರಾಬಲ್ಯ ಇದೆ. ಆದರೆ ಬಷರ್ ಅಲ್ ಅಸ್ಸಾದ್ ಶಿಯಾ ಪಂಗಡದ ಭಾಗವಾದ ಅಲಾವಿ ಪಂಗಡಕ್ಕೆ ಸೇರಿದವರು. ಅಲಾವಿಗಳು ಸಿರಿಯಾದಲ್ಲಿ ಅಲ್ಪಸಂಖ್ಯಾತರು. ಅವರಿಗೆ ಶಿಯಾ ದೇಶವಾದ ಇರಾನ್ ಬೆಂಬಲ ಸೂಚಿಸುತ್ತದೆ. ಇರಾನ್ ಬಲಿಷ್ಠ ದೇಶವಾಗುವುದು ಸುನ್ನಿ ದೇಶಗಳಾದ ಸೌದಿ ಅರೇಬಿಯಾ ಸೇರಿದಂತೆ ಹಲವು ದೇಶಗಳಿಗೆ ಹಿಡಿಸದು. ಹೀಗಾಗಿ ಸಿರಿಯಾದಲ್ಲಿರುವ ಸುನ್ನಿಗಳನ್ನು ಎತ್ತಿಕಟ್ಟಿ ಅಸ್ಸಾದ್ ವಿರುದ್ಧ ಹೋರಾಟ ನಡೆಸಲಾಗುತ್ತಿದೆ. ಸಿರಿಯಾದಲ್ಲಿ ಬಂಡಾಯಗಾರರೆಂದರೆ ಸುನ್ನಿ ಜನರು. ಇದೀಗ ಡ್ಯೂಮಾ ನಗರದಲ್ಲಿ ರಾಸಾಯನಿಕ ದಾಳಿ ನಡೆದಿರುವುದೂ ಸುನ್ನಿ ಜನಾಂಗದ ಬಂಡಾಯಗಾರರ ಮೇಲೆಯೇ. ಸಿರಿಯಾದಲ್ಲಿ ಸುನ್ನಿಗಳು ಬಹುಸಂಖ್ಯಾತರಾಗಿರುವುದರಿಂದ ಅವರನ್ನು ಹತ್ತಿಕ್ಕುವುದು ಅಸ್ಸಾದ್‌ಗೆ ಸುಲಭವಲ್ಲ.

ಇದನ್ನೂ ಓದಿ : ಸಂಕ | ಗೊಂದಲಮಾರಿ ಹಡೆದ ಯುದ್ಧ ಎಂಬ ಚಿಳ್ಳೆದೆವ್ವ ಮತ್ತು ಸಿರಿಯಾ ಸಂಘರ್ಷ

ಮಿಲಿಟರಿ ಬಲದಿಂದ ಬಹುಸಂಖ್ಯಾತರನ್ನು ಬಹಳ ಕಾಲ ಹಿಡಿತದಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಇರಾಕ್‌ನಲ್ಲಿ ಆದದ್ದೂ ಇದೇ. ಅಲ್ಲಿ ಶಿಯಾಗಳು ಬಹುಸಂಖ್ಯಾತರು. ಅಧಿಕಾರ ಇದ್ದದ್ದು ಸುನ್ನಿ ಅಲ್ಪಸಂಖ್ಯಾತ ಸದ್ದಾಂ ಹುಸೇನ್ ಕೈಯಲ್ಲಿ. ಎರಡೂ ಜನಾಂಗಗಳ ನಡುವಣ ಕದನದಲ್ಲಿ ಸದ್ದಾಂ ಹತರಾಗಬೇಕಾಯಿತು. ಈಗ ಅಲ್ಲಿರುವುದು ಬಹುಸಂಖ್ಯಾತ ಶಿಯಾ ಸರ್ಕಾರ. ಸುನ್ನಿಗಳ ಬಂಡಾಯ ನಿಭಾಯಿಸಿಕೊಂಡೇ ಆಡಳಿತ ನಡೆಸಬೇಕಾಗಿದೆ.

ಸರ್ವಾಧಿಕಾರಗಳ ಅರಬ್ ವಲಯದಲ್ಲಿ ಪ್ರಜಾಪ್ರಭುತ್ವ ನೆಲೆಯೂರದಿದ್ದರೆ ಸಂಘರ್ಷ ನಿಲ್ಲುವುದು ಕಷ್ಟ. ಎಲ್ಲ ಜನಾಂಗಗಳ ಪ್ರತಿನಿಧಿಗಳುಳ್ಳ ಸರ್ಕಾರ ರಚನೆ ಆಗುವಂಥ ಸನ್ನಿವೇಶ ನಿರ್ಮಾಣವಾದರೆ ಮಾತ್ರ ಅರಬ್ ವಲಯದಲ್ಲಿ ಶಾಂತಿ ನೆಲಸಬಹುದಾದ ಸಾಧ್ಯತೆ ಇದೆ.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More