ಶ್ರೀಲಂಕಾದಲ್ಲಿ ರಾಜಕೀಯ ಅಸ್ಥಿರತೆ, ಗರಿಗೆದರಿದ ರಾಷ್ಟ್ರೀಯತೆ

ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ರಾಜಕೀಯ ಬಿಕ್ಕಟ್ಟಿನಿಂದ ಹೊರಬರಲು ಸಂಸತ್ತನ್ನು ಮೇ ೫ರವರೆಗೆ ರದ್ದು ಮಾಡಿದ್ದಾರೆ. ಸರ್ಕಾರ ವಿಶ್ವಾಸ ಕಳೆದುಕೊಂಡಿದ್ದು ಚುನಾವಣೆ ಘೋಷಿಸಬೇಕೆಂದು ಹಿಂದಿನ ಅಧ್ಯಕ್ಷ ಮಹೀಂದಾ ರಾಜಪಕ್ಷೆ ಕರೆ ನೀಡಿರುವುದರಿಂದ ಬಿಕ್ಕಟ್ಟು ತಲೆದೋರಿದೆ

ಶ್ರೀಲಂಕಾ ದೇಶದಾದ್ಯಂತ ಇತ್ತೀಚೆಗೆ ನಡೆದ ಸ್ಥಳೀಯ ಚುನಾವಣೆಗಳಲ್ಲಿ ಹಿಂದಿನ ಅಧ್ಯಕ್ಷ ಮಹೀಂದಾ ರಾಜಪಕ್ಷೆ ನೇತೃತ್ವದ ವಿರೋಧಿ ಶ್ರೀಲಂಕಾ ಪೀಪಲ್ಸ್ ಫ್ರಂಟ್ (ಎಸ್‌ಎಲ್‌ಪಿಪಿ) ಬಹುಮತ ಗಳಿಸಿದ್ದರ ಪರಿಣಾಮವಾಗಿ ಈಗ ರಾಜಕೀಯ ಬಿಕ್ಕಟ್ಟು ತಲೆದೋರಿದೆ.

ಆಡಳಿತ ಮೈತ್ರಿ ಕೂಟದ ಮುಖ್ಯಸ್ಥರೂ ಆದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ನೇತೃತ್ವದ ಎಸ್‌ಎಲ್‌ಎಫ್‌ಪಿ ಮತ್ತು ಪ್ರಧಾನಿ ವಿಕ್ರಮ ರಣಸಿಂಘೆ ನೇತೃತ್ವದ ಯುಎನ್‌ಪಿ ಹೀನಾಯ ಸೋಲನ್ನು ಅನುಭವಿಸಿದವು. ೩೪೦ ಸ್ಥಾನಗಳಲ್ಲಿ ರಾಜಪಕ್ಷೆ ಅವರ ಪಕ್ಷ ೨೨೩ ಸ್ಥಾನಗಳಿಸಿತು. ಫಲಿತಾಂಶ ಪ್ರಕಟವಾಗುತ್ತದ್ದಂತೆಯೇ ರಾಜಪಕ್ಷೆ ಅವರು ಸಿರಿಸೇನಾ ನೇತೃತ್ವದ ಮೈತ್ರಿ ಸರ್ಕಾರ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದರು, ಅವರ ಬೆಂಬಲಿಗರು ಪ್ರದರ್ಶನ ನಡೆಸಿದರು. ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿರುವುದನ್ನು ಚುನಾವಣೆ ಫಲಿತಾಂಶಗಳು ಬಹಿರಂಗಮಾಡಿವೆ. ಆದ್ದರಿಂದ ಸರ್ಕಾರ ರಾಜೀನಾಮೆ ನೀಡಿ ಹೊಸದಾಗಿ ಸಂಸತ್ ಚುನಾವಣೆ ನಡೆಸಬೇಕೆಂಬುದು ರಾಜಪಕ್ಷೆ ಅವರ ಒತ್ತಾಯವಾಗಿತ್ತು.

ಚುನಾವಣೆ ಫಲಿತಾಂಶಗಳು ಹೊರಬರುತ್ತಿದ್ದಂತೆಯೇ ಆರು ಮಂದಿ ಸಚಿವರೂ ಸೇರಿದಂತೆ ೧೬ ಮಂದಿ ಸಂಸತ್ ಸದಸ್ಯರು ಮೈತ್ರಿ ಕೂಟದಿಂದ ಹೊರನಡೆದರು. ಇದರಿಂದಾಗಿ ಸರ್ಕಾರದಲ್ಲಿ ಬಿಕ್ಕಟ್ಟು ತಲೆದೋರಿತು. ಸರ್ಕಾರ ಕುಸಿಯುವ ಸೂಚನೆ ಬರುತ್ತಿರುವಂತೆ ಸಿರಿಸೇನಾ ಅವರು ಮೈತ್ರ್ರಿ ಕೂಟದ ಇತರರನ್ನು ಮಂತ್ರಿ ಸ್ಥಾನಕ್ಕೆ ನೇಮಕ ಮಾಡಿದರು. ಮೈತ್ರಿ ಕೂಟದ ಭಾಗವಾಗಿರುವ ಪ್ರಧಾನಿ ವಿಕ್ರಮ ರಣಸಿಂಘೆ ಅವರೂ ಕೈಕೊಡುವ ಸೂಚನೆಗಳು ಸಿಕ್ಕಂತೆಯೇ ಮೈತ್ರಿಪಾಲ ಅವರು ಇಡೀ ಸಂಸತ್ತನ್ನು ಮೇ ೫ರವರೆಗೆ ರದ್ದು ಮಾಡಿದರು. ಯಾವುದೇ ಕಾರಣಕ್ಕೆ ಸಂಸತ್ ಕಾರ್ಯಕಲಾಪ ನಡೆಯದಂತೆ ಮಾಡುವುದೇ ಅವರ ಉದ್ದೇಶವಾಗಿತ್ತು. ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ರಣಸಿಂಘೆ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ. ಆದರೆ ಅವರು ಒತ್ತಡಕ್ಕೆ ಮಣಿಯುವಂತೆ ಕಾಣುತ್ತಿಲ್ಲ.

ಇದನ್ನೂ ಓದಿ : ಶ್ರೀಲಂಕಾದಲ್ಲಿ ತುರ್ತುಪರಿಸ್ಥಿತಿ ಹೇರುವಷ್ಟು ಘರ್ಷಣೆ ಭುಗಿಲೆದ್ದಿದ್ದು ಏಕೆ?

ರಾಜಪಕ್ಷೆ ಅವರಿಗೆ ಸ್ಥಳೀಯ ಚುನಾವಣೆಗಳು ರಾಜಕೀಯ ಪುನರ್‌ಜನ್ಮ ನೀಡಿದಂತೆ ಕಾಣುತ್ತಿವೆ. ಹಾಗೆ ನೋಡಿದರೆ ೨೦೧೫ರಲ್ಲಿ ನಡೆದ ಚುನಾವಣೆಗಳಲ್ಲಿ ಸೋಲು ಕಂಡ ನಂತರ ರಾಜಕೀಯವಾಗಿ ಅವರು ಸಕ್ರಿಯವಾಗಿರಲಿಲ್ಲ. ೨೦೧೫ರ ಚುನಾವಣೆಗಳ ನಂತರ ಅವರ ಸಂಪುಟದಲ್ಲಿಯೇ ಆರೋಗ್ಯ ಸಚಿವರಾಗಿದ್ದ ಸಿರಿಸೇನಾ ಅವರು ಕೆಲವು ವಿರೋಧ ಪಕ್ಷಗಳ ಜೊತೆ ಹೊಂದಾಣಿಕೆ ಸಾಧಿಸಿ ಅಧಿಕಾರ ಹಿಡಿದಿದ್ದರು. ಆದರೆ ಕಳೆದ ಫೆಬ್ರುವರಿಯಲ್ಲಿ ನಡೆದ ಸ್ಥಳೀಯ ಚುನಾವಣೆಗಳ ಸಮಯಕ್ಕೆ ಹೊಸ ಪಕ್ಷ ಸ್ಥಾಪಿಸಿದರು. ಸಿಂಹಳೀಯರಿಗೆ ಸಿರಿಸೇನಾ ಸರ್ಕಾರದಿಂದ ಅನ್ಯಾಯವಾಗುತ್ತಿದೆ ಎಂಬ ಕೂಗನ್ನು ಎಬ್ಬಿಸಿದರು. ಮತ್ತೆ ತಮಿಳು ಜನರು ಪ್ರಾಬಲ್ಯ ಸಾಧಿಸುತ್ತಿದ್ದಾರೆ ಎಂಬ ಆರೋಪ ಸಿಂಹಳೀಯರಿಗೆ ಮುಟ್ಟುವಂತೆ ಮಾಡಿದರು. ಇದರಿಂದಾಗಿ ಸಿಂಹಳ ರಾಷ್ಟ್ರೀಯತೆ ಮತ್ತೆ ದೇಶದಲ್ಲಿ ಚಲಾವಣೆಗೆ ಬಂದಿತು.

ಇದರ ಪರಿಣಾಮವಾಗಿ ರಾಜಪಕ್ಷೆ ಅವರ ಪಕ್ಷ ಅತ್ಯಧಿಕ ಬಹುಮತದಿಂದ ಆರಿಸಿಬಂದಿದೆ. ತಮಿಳರ ಬಂಡಾಯ ಸಂಘಟನೆ ಎಲ್‌ಟಿಟಿಇಯನ್ನು ಯುದ್ಧದಲ್ಲಿ ಮುಗಿಸಿದವರು ರಾಜಪಕ್ಷೆ. ಆ ಕಾಲದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ, ಯುದ್ಧಾಪರಾಧಗಳಾಗಿವೆ ಎಂಬ ಆರೋಪಗಳು ರಾಜಪಕ್ಷೆ ಅವರ ಸರ್ಕಾರದ ಮೇಲೆ ಬಂದಿದ್ದವು. ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಯ ವಿಚಾರಣೆಗೆ ಗುರಿಯಾಗಿತ್ತು. ಆದರೆ ಎಲ್‌ಟಿಟಿ ವಿರುದ್ಧ ನಡೆಸಿದ ಯುದ್ಧ ಮತ್ತು ತಮಿಳರ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದರು. ಆದರೆ ಜನರು ಮೂರು ವರ್ಷಗಳ ಹಿಂದೆ ನಡೆದ ಚುನಾವಣೆಗಳಲ್ಲಿ ಅವರನ್ನು ಸೋಲಿಸಿದ್ದರು. ಆದರೆ ಈ ಮೂರು ವರ್ಷಗಳಲ್ಲಿ ಜನರ ಅಭಿಪ್ರಾಯ ಬದಲಾಗಿದ್ದು, ಅವರನ್ನೇ ಜನರು ಸ್ಥಳೀಯ ಚುನಾವಣೆಗಳಲ್ಲಿ ಬೆಂಬಲಿಸಿದ್ದಾರೆ. ಸಿರಿಸೇನಾ ಅವರು ಈ ಬೆಳವಣಿಗೆಯನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

ರಾಜಪಕ್ಷೆ ಅವರು ಅಧ್ಯಕ್ಷರಾಗಿದ್ದಾಗ ಭಾರತದ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರಲಿಲ್ಲ. ಚೀನಾ ಮತ್ತು ಪಾಕಿಸ್ತಾನದ ಜೊತೆ ಹೆಚ್ಚು ಸ್ನೇಹ ಬೆಳೆಸಿದ್ದರು. ಹೀಗಾಗಿ ಚೀನಾ ಅಪಾರ ಪ್ರಮಾಣದಲ್ಲಿ ಲಂಕಾದಲ್ಲಿ ಬಂಡವಾಳ ಹೂಡಿತ್ತು. ಸಿರಿಸೇನಾ ಅವರು ಅಧ್ಯಕ್ಷರಾದ ನಂತರ ಪರಿಸ್ಥಿತಿ ಬದಲಾಗಿತ್ತು. ಸಿರಿಸೇನಾ ಭಾರತದ ಜೊತೆ ಹೆಚ್ಚು ಸ್ನೇಹ ಬೆಳೆಸಿದರು. ಚೀನಾ ಜೊತೆ ಮಾಡಿಕೊಂಡಿದ್ದ ಒಪ್ಪಂದಗಳನ್ನು ಪುನರ್‌ಪರಿಶೀಲಿಸುವ ಪ್ರಯತ್ನ ನಡೆಸಿದರು. ಮತ್ತೆ ರಾಜಪಕ್ಷೆ ಅವರ ಮೇಲುಗೈ ಭಾರತದ ದೃಷ್ಟಿಯಲ್ಲಿ ಒಳ್ಳೆಯ ಬೆಳವಣಿಗೆಯಲ್ಲ.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More