ಭಾಗ ೩| ಅವಸಾನಕ್ಕೆ ಕಾರಣವಾದ ರಾಷ್ಟ್ರೀಯವಾದವನ್ನು ಮತ್ತೆ ಅಪ್ಪಿದ ಬ್ರಿಟನ್

ಮುಸ್ಲಿಂ ನಿರಾಶ್ರಿತರು ವಲಸೆ ಬಂದದ್ದು ಮತ್ತು ಐಎಸ್‌ಎಸ್ ಭಯೋತ್ಪಾದಕರು ನಡೆಸುತ್ತ ಬಂದ ಹಿಂಸಾಚಾರ ಯೋರೋಪಿನಲ್ಲಿ ರಾಷ್ಟ್ರೀಯ ಭಾವನೆ ಚಿಗುರೊಡೆಯಲು ಕಾರಣವಾಯಿತು. ಈ ರಾಷ್ಟ್ರೀಯವಾದದ ಅಲೆಯ ಭಾಗವಾಗಿಯೇ ಬ್ರಿಟನ್‌ನಲ್ಲಿ ಬದಲಾವಣೆಗಳಾದವು, ಇಂದಿಗೂ ಬದಲಾವಣೆ ನಡೆದೇ ಇದೆ

ಜಗತ್ತಿನ ಅತ್ಯಂತ ಬಲಿಷ್ಠ ಸಾಮ್ರಾಜ್ಯ ಎನಿಸಿಕೊಂಡಿದ್ದ ಬ್ರಿಟನ್ ತನ್ನ ಇತಿಹಾಸದುದ್ದಕ್ಕೂ ಸತತವಾಗಿ ತನ್ನ ಶಕ್ತಿ, ಸಾಮರ್ಥ್ಯವನ್ನು ಕಳೆದುಕೊಳ್ಳುತ್ತ ಬಂದಿದೆ. ಸ್ವಾತಂತ್ರ್ಯಕ್ಕಾಗಿ ನಡೆದ ರಾಷ್ಟ್ರೀಯ ಚಳವಳಿಗಳೂ ಸೇರಿದಂತೆ ವಿವಿಧ ಕಾರಣಗಳಿಗಾಗಿ ತನ್ನ ಅಧೀನದಲ್ಲಿದ್ದ ದೇಶಗಳು ಒಂದೊಂದಾಗಿ ಹೊರಹೋಗಿವೆ. ನಿಭಾಯಿಸಲಾಗದೆ ತನ್ನ ಕೆಲವು ವಸಾಹತು ದೇಶಗಳನ್ನು ಬ್ರಿಟನ್ ಬಿಟ್ಟುಕೊಟ್ಟಿದೆ. ಬ್ರಿಟನ್ ಸಾಮ್ರಾಜ್ಯದಲ್ಲಿ ಸೂರ್ಯ ಎಂದೂ ಮುಳುಗುವುದಿಲ್ಲ ಎಂಬ ಮಾತು ಎಂದೋ ಸುಳ್ಳಾಗಿದೆ.

ಈಜಿಪ್ತ್‌ನ ಸೂಯಜ್ ಕಡಲ್ಗಾಲುವೆ ಬಿಕ್ಕಟ್ಟಿನಿಂದ ಆರಂಭವಾದ ಬ್ರಿಟನ್ ಸಾಮ್ರಾಜ್ಯದ ಪತನ ಭಾರತ ಸ್ವಾತಂತ್ರ್ಯ ಗಳಿಸುವವರೆಗೆ ಭೂಕುಸಿತದಂತೆ ನಡೆದಿದೆ. ವಿಚಿತ್ರ ಎಂದರೆ ಯಾವ ರಾಷ್ಟ್ರೀಯವಾದ ಬ್ರಿಟನ್ ಸಾಮ್ರಾಜ್ಯದ ಪತನಕ್ಕೆ ಕಾರಣವಾಯಿತೋ ಅದೇ ರಾಷ್ಟ್ರೀಯವಾದ ಬ್ರಿಟನ್‌ನಲ್ಲಿ ಕಳೆದ ದಶಕದಿಂದೀಚೆಗೆ ಅಲ್ಲೋಲ ಕಲ್ಲೋಲ ಉಂಟುಮಾಡಿದೆ. ಹಿಂದಿನ ರಾಷ್ಟ್ರೀಯವಾದ ಬ್ರಿಟನ್‌ ಸಾಮ್ರಾಜ್ಯದಿಂದ ಹೊರಹೋಗುವ ಸ್ವಾತಂತ್ರ್ಯದ ಆಶಯದಿಂದ ಕೂಡಿದ್ದು. ಈಗಿನ ರಾಷ್ಟ್ರೀಯವಾದ ಅಸ್ಮಿತೆ ಆಧಾರದ್ದು. ಯೂರೋಪ್ ಒಕ್ಕೂಟದಿಂದ ಹೊರಬರುವ ಉದ್ದೇಶದ್ದು. ಇಡೀ ಯೋರೋಪಿನಲ್ಲಿ ರಾಷ್ಟ್ರೀಯವಾದ ಅಲೆಯಾಗಿ ಬೀಸುತ್ತಿದೆ. ಆ ಅಲೆಯಲ್ಲಿ ಬ್ರಿಟನ್ ಕೂಡ ಕೊಚ್ಚಿಹೋಗುತ್ತಿದೆ.

ರಾಷ್ಟ್ರೀಯವಾದ ದೊಡ್ಡ ಅಲೆಯಂತೆ ರೂಪುಗೊಳ್ಳಲು ಹಲವು ಕಾರಣಗಳು ಇವೆ. ಮೊದಲ ಕಾರಣ ಜಾಗತೀಕರಣ ಜನರ ಜೀವನ ಮಟ್ಟವನ್ನು ಸುಧಾರಿಸುವಲ್ಲಿ ವಿಫಲವಾಗಿರುವುದು. ಅಮೆರಿಕ ಪ್ರಣೀತ ಮುಕ್ತಮಾರುಕಟ್ಟೆ ಆರ್ಥಿಕ ವ್ಯವಸ್ಥೆ ದೇಶಗಳ ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆ ತರದಿರುವುದು. ವಿಶ್ವದ ವಿವಿಧ ಭಾಗಗಳಲ್ಲಿ ನಡೆಯುತ್ತಿದ್ದ ಜನಾಂಗ ಯುದ್ಧಗಳು, ಅಧಿಕಾರಕ್ಕಾಗಿ ನಡೆಯುತ್ತಿದ್ದ ಸಂಘರ್ಷಗಳು ಅಂತ್ಯವಾಗುವುದಿರಲಿ ಕಡಿಮೆಯಾಗಲೂ ಇಲ್ಲ. ಜಗತ್ತಿನಲ್ಲಿ ಶಾಂತಿ ಮತ್ತು ಸಮಾನತೆ ಸ್ಥಾಪನೆ ಉದ್ದೇಶದಿಂದ ಸ್ಥಾಪಿತವಾದ ಅಂತಾರಾಷ್ಟ್ರೀಯ ವೇದಿಕೆಗಳಾದ ವಿಶ್ವಸಂಸ್ಥೆ, ಭದ್ರತಾ ಮಂಡಳಿಗಳು ಗುರಿ ಸಾಧಿಸುವಲ್ಲಿ ವಿಫಲವಾದವು. ಇಂಥ ಸ್ಥಿತಿಯಲ್ಲಿ ಸಂಭವಿಸಿದ ಆಫ್ಘಾನಿಸ್ತಾನ, ಮತ್ತಿತರ ಕಡೆಗಳಲ್ಲಿ ನಡೆದ ಇರಾಕ್, ಲಿಬಿಯಾ, ಸಿರಿಯಾ ಯುದ್ಧಗಳು, ಆಫ್ರಿಕಾದ ಹಲವು ಕಡೆ ನಡೆಯುತ್ತಿದ್ದ ಜನಾಂಗ ಕಲಹಗಳು ಜನರ ವಲಸೆಗೆ ಕಾರಣವಾದವು. ಆಫ್ರಿಕಾ ಮತ್ತು ಇಸ್ಲಾಮಿಕ್ ದೇಶಗಳ ಜನರು ಲಕ್ಷ ಲಕ್ಷ ಸಂರ್ಕಯೆಯಲ್ಲಿ ಲಗ್ಗೆ ಇಟ್ಟಿದ್ದು ಯೂರೋಪಿನ ದೇಶಗಳಿಗೆ. ಆಗ್ಗಾಗಲೇ ಸಂಕಷ್ಟದಲ್ಲಿದ್ದ ಈ ದೇಶಗಳು ವಲಸೆಯಿಂದಾಗಿ ತಲ್ಲಣಿಸಿದವು. ವಲಸಿಗರ ಒತ್ತಡ ಮತ್ತು ಆರ್ಥಿಕ ದುಸ್ಥಿತಿಯಿಂದಾಗಿ ಜನ ಕಂಗೆಟ್ಟರು. ಮುಖ್ಯವಾಗಿ ಅಧಿಕ ಸಂಖ್ಯೆಯಲ್ಲಿ ಮುಸ್ಲಿಮ್ ನಿರಾಶ್ರಿತರು ವಲಸೆ ಬಂದದ್ದು ಮತ್ತು ಐಎಸ್‌ಎಸ್ ಭಯೋತ್ಪಾದಕರು ನಡೆಸುತ್ತ ಬಂದ ಹಿಂಸಾಚಾರ ಇಡೀ ಯೋರೋಪಿನಲ್ಲಿ ಈ ದೇಶೀಯ ಭಾವನೆ ಚಿಗುರೊಡೆಯಲು ಕಾರಣವಾಯಿತು. ‘ನಮ್ಮ ದೇಶ ನಮಗೆ ಮಾತ್ರ’ ಎಂಬ ಘೋಷಣೆಗಳು ತಲೆಎತ್ತಿದವು. ಈ ರಾಷ್ಟ್ರ್ರೀಯವಾದ ಬಹುಪಾಲು ದೇಶಗಳ ರಾಜಕೀಯ ವ್ಯವಸ್ಥೆಯನ್ನೇ ಬುಡಮೇಲು ಮಾಡಿವೆ. ಈ ಅಲೆಯ ಭಾಗವಾಗಿಯೇ ಬ್ರಟಿನ್‌ನಲ್ಲಿ ಬದಲಾವಣೆಗಳಾಗುತ್ತಿವೆ.

ಯೂರೋಪ್ ಒಕ್ಕೂಟದಿಂದ ಹೊರಬರಲು ಬ್ರಿಟನ್ ಇದೀಗ ಅಂತಿಮ ಹೆಜ್ಜೆ ಇಟ್ಟಾಗಿದೆ. ಬ್ರಿಟನ್ ಭಾಗವಾಗಿರುವ ಉತ್ತರ ಐರ್ಲೆಂಯಡ್ ಮತ್ತು ಸ್ಕಾಟ್‌ಲ್ಯಾಂಡ್ ಯೂರೋಪ್ ಒಕ್ಕೂಟದ ಭಾಗವಾಗಿಯೇ ಉಳಿಯಲು ನಿರ್ಧರಿಸಿವೆ. ಒಂದೇ ದೇಶದ ಬೇರೆ ಪ್ರದೇಶಗಳು ಭಿನ್ನವಾದ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳುವುದೆಂದರೆ ಅದೊಂದು ವಿಪರ್ಯಾಸವೇ ಸರಿ. ಬ್ರಿಟನ್ ಮತ್ತೊಮ್ಮೆ ಛಿದ್ರವಾಗುವ ಸೂಚನೆ ಇದಾಗಿದೆ ಎಂದು ಈ ಬೆಳವಣಿಗೆಯನ್ನು ವಿಶ್ಲೇಷಿಸಲಾಗುತ್ತಿದೆ.

ಬ್ರಿಟನ್ ಸಾಮ್ರಾಜ್ಯ ಮುಳುಗಿ ಹಲವು ದಶಕಗಳೇ ಕಳೆದಿದ್ದರೂ ಜನರು ಅಸ್ಮಿತೆಯಿಂದ ಹೊರಬಂದಿಲ್ಲ. ಶ್ರೇಷ್ಠತೆಯ ವ್ಯಸನ ದೇಶವನ್ನು ಕಾಡುತ್ತಿದೆ. ಯೂರೋಪ್ ಒಕ್ಕೂಟದ ಭಾಗವಾದ ನಂತರ ಈ ವ್ಯಸನ ಹೆಚ್ಚು ಹೆಚ್ಚು ಕಾಣತೊಡಗಿದೆ. ಯೂರೋಪ್ ಒಕ್ಕೂಟದ ಭಾಗವಾಗುವುದರಿಂದ ಕಳೆದು ಹೋದ ವರ್ಚಸ್ಸನ್ನು ಗಳಿಸಿಬಹುದೆಂದು ಬ್ರಿಟನ್ ಜನರು ತಿಳಿದಿದ್ದರು. ಆದರೆ ಆದದ್ದೇ ಬೇರೆ. ಯೂರೋಪ್ ಒಕ್ಕೂಟದಲ್ಲಿ ಬಲಿಷ್ಠವಾಗಿದ್ದ ಜರ್ಮನಿ ಮತ್ತು ಫ್ರಾನ್ಸ್ ಮತ್ತಷ್ಟು ಬಲಿಷ್ಠವಾದವು. ಬ್ರಿಟನ್‌ನಲ್ಲಿ ನಿರುದ್ಯೋಗದ ಪ್ರಮಾಣ ತಗ್ಗಲಿಲ್ಲ, ಆರ್ಥಿಕವಾಗಿ ಬ್ರಿಟನ್‌ಗೆ ಅಷ್ಟು ಅನುಕೂಲವಾಗಲಿಲ್ಲ. ವಲಸೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತು. ಅದಕ್ಕೆ ಕಾರಣಗಳಿರಬಹುದಾದರೂ ತಮಗೆ ಅನೂಕೂಲವಾಗದಿದ್ದ ಮೇಲೆ ಒಕ್ಕೂಟದಲ್ಲಿದ್ದೇನು ಪ್ರಯೋಜನ ಎನ್ನುವ ಭಾವನೆಯನ್ನು ರಾಜಕಾರಣಿಗಳು ಪ್ರಚಾರಕ್ಕೆ ತಂದರು. ಹತ್ತು ವರ್ಷಗಳಲ್ಲಿ ಅದೊಂದು ಸಮಸ್ಯೆಯೇ ಆಯಿತು. ಜನರು ಕೂಡಾ ಬೆಂಬಲ ನೀಡತೊಡಗಿದರು. ಅದೊಂದು ರೀತಿಯಲ್ಲಿ ರಾಷ್ಟ್ರೀಯತೆಯ ಭಾವೋದ್ರೇಕವನ್ನು ಕೆರಳಿಸಿತು. ಜನಾಭಿಪ್ರಾಯ ಸಂಗ್ರಹ ನಡೆಸಿದಾಗ ಜನರು ಯೂರೋಪ್ ಒಕ್ಕೂಟದಿಂದ ಹೊರಬರುವ (ಬ್ರೆಕ್ಸಿಟ್) ಪ್ರಸ್ತಾವಕ್ಕೆ ಹೆಚ್ಚು ಮತನೀಡಿದರು. ಇದರ ಪರಿಣಾಮವಾಗಿ ಒಕ್ಕೂಟ ತ್ಯಜಿಸಲು ಬ್ರಿಟನ್‌ನಲ್ಲಿ ರಂಗ ಸಜ್ಜಾಗಿದೆ.

ತಾತ್ಕಾಲಿಕವಾಗಿಯಾದರೂ ಯೂರೋಪ್ ಒಕ್ಕೂಟದ ಮುಕ್ತ ಮಾರುಕಟ್ಟೆ ಅಥವಾ ಕಸ್ಟಮ್ಸ್ ಯೂನಿಯನ್ನ ಭಾಗವಾಗಿ ಉಳಿದುಕೊಳ್ಳಲು ಬ್ರಟಿನ್ ಆಡಳಿತಗಾರರು ಒತ್ತಾಯಿಸುತ್ತಿದ್ದಾರೆ. ಆದರೆ ವಿರೋಧಿಗಳು ಈ ಪ್ರಸ್ತಾವನೆಗೆ ಸುತ್ರಾಮ್ ಒಪ್ಪುತ್ತಿಲ್ಲ. ಪ್ರಧಾನಿ ಥೆರೇಸಾ ಮೇ ಅವರು ಈಗ ಆ ಒತ್ತಾಯಕ್ಕೆ ಮಣಿದಿದ್ದಾರೆ. ಯೂರೋಪ್ ಒಕ್ಕೂಟದಿಂದ ಹೊರಹೋಗುವುದರಿಂದ ಆಗಬಹುದಾದ ನಷ್ಟ, ಮತ್ತು ಉಂಟಾಗಬಹುದಾದ ಅವ್ಯವಸ್ಥೆ ಬಗ್ಗೆ ವಾಣಿಜ್ಯ ವಹಿವಾಟುದಾರರು ಎಚ್ಚರಿಕೆ ನೀಡಿದ್ದಾರೆ. ಆದರೆ ಇದಾವುದನ್ನೂ ಕೇಳುವ ಸ್ಥಿತಿಯಲ್ಲಿ ಬ್ರೆಕ್ಸಿಟ್ ಪರವಾದಿಗಳು ಇಲ್ಲ. ಹೀಗಾಗಿ ದೇಶದಲ್ಲಿ ಬಿಕ್ಕಟ್ಟು ತಲೆದೋರಿದೆ. ಒಕ್ಕೂಟದಿಂದ ಹೊರಬಂದು ವಿವಿಧ ದೇಶಗಳ ಜೊತೆ ಪ್ರತ್ಯೇಕ ಒಪ್ಪಂದ ಮಾಡಿಕೊಳ್ಳುವುದರಿಂದ ಹೆಚ್ಚು ಅನುಕೂಲವಾಗಲಿದೆ ಎನ್ನುವುದು ಬ್ರೆಕ್ಸಿಟ್ ಪರವಾದಿಗಳ ವಾದ. ಆದರೆ ಅದು ಅಷ್ಟು ಸುಲಭವಲ್ಲ. ಅದಕ್ಕೆ ಹೊಸದಾಗಿ ಬೇರೆ ವ್ಯವಸ್ಥೆಯನ್ನೂ ರೂಪಿಸಬೇಕಾಗುತ್ತದೆ. ನಾರ್ವೆ ದೇಶ ಅನುಸರಿಸಿದ ಮಾದರಿಯನ್ನು ಅವರು ಹೇಳುತ್ತಾರೆ. ಮುಕ್ತ ವಾಣಿಜ್ಯ ವಲಯದಲ್ಲಿ ನಾರ್ವೆ ಮುಂದುವರಿದಿದೆಯಾದರೂ ಒಕ್ಕೂಟದ ಭಾಗವಾಗಿಲ್ಲ. ಸ್ವತಂತ್ರವಾಗಿಯೇ ಬೇರೆ ದೇಶಗಳ ಜೊತೆ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಂಡಿದೆ. ನಾರ್ವೆ ಪುಟ್ಟ ದೇಶ. ಅಲ್ಲದೆ ಶ್ರೀಮಂತ ದೇಶ. ಆದರೆ ಬ್ರಿಟನ್ ಹಾಗಲ್ಲ. ಬ್ರಿಟನ್ ಆರ್ಥಿಕವಾಗಿ ಬಲಿಷ್ಠವಾಗಿಲ್ಲ. ಹೀಗಾಗಿ ನಾರ್ವೆ ಮಾದರಿ ಬ್ರಿಟನ್‌ನಲ್ಲಿ ಯಶಸ್ವಿಯಾಗುವಂತೆ ಕಾಣುವುದಿಲ್ಲ.

ನಿರೀಕ್ಷಿಸಿದಂತೆಯೇ ಬ್ರೆಕ್ಸಿಟ್‌ನಿಂದ ದೇಶದ ಆರ್ಥಿಕತೆಯ ಮೇಲೆ ಕೆಟ್ಟಪರಿಣಾಮ ಈಗಾಗಲೇ ಕಾಣಿಸತೊಡಗಿದೆ. ದೇಶದ ಆರ್ಥಿಕ ಸ್ಥಿತಿ ಕುಸಿಯುತ್ತ ಬರುತ್ತಿದೆ. ನಿರುದ್ಯೋಗ ಪ್ರಮಾಣ ಜಾಸ್ತಿಯಾಗುತ್ತಲೇ ಇದೆ. ಬ್ರಿಟನ್‌ನಿಂದ ಬಂಡವಾಳ ಬೇರೆ ದೇಶಗಳಿಗೆ ಹರಿದುಹೋಗುತ್ತಿದೆ. ದೇಶದಲ್ಲಿ ಬಂಡವಾಳ ಹೂಡಿಕೆ ಕಡಿಮೆಯಾಗುತ್ತಿದೆ. ಒಕ್ಕೂಟದಿಂದ ಹೊರಬರುವ ಮೊದಲೇ ಆತಂಕಸೃಷ್ಟಿಯಾಗಿದೆ.

ಇದನ್ನೂ ಓದಿ : ಸರ್ವಾಧಿಕಾರ ಮಿಶ್ರಿತ ಪ್ರಜಾಪ್ರಭುತ್ವದ ಕಡೆಗೆ ಹೊರಳಿದ ಜಗತ್ತು

ಮಿಲಿಟರಿ ಬಲದಲ್ಲಿ ಬ್ರಿಟನ್ ಐದನೆಯ ಸ್ಥಾನದಲ್ಲಿದೆ. ಮಿಲಿಟರಿಗೆ ಅತಿ ಹೆಚ್ಚು ವೆಚ್ಚಮಾಡುತ್ತಿರುವ ದೇಶಗಳಲ್ಲಿ ಬ್ರಿಟನ್ ಕೂಡಾ ಒಂದು. ಭದ್ರತಾ ಮಂಡಳಿಯ ಸದಸ್ವತ್ವ ಪಡೆದಿದೆ. ಎರಡನೆಯ ಮಹಾಯುದ್ಧ ಬ್ರಿಟನ್ ಆರ್ಥಿಕ ವ್ಯವಸ್ಥೆಯನ್ನು ನಿರ್ನಾಮ ಮಾಡಿತು. ಒಂದು ಕಾಲದಲ್ಲಿ ಬ್ರಿಟನ್ ಸೂಪರ್ ಪವರ್ ಆಗಿತ್ತು ನಿಜ. ಆದರೆ ಈಗ ಅಲ್ಲ. ಮತ್ತೆಂದೂ ಅದು ಸೂಪರ್ ಪವರ್ ಆಗಲು ಸಾಧ್ಯವಿಲ್ಲ. ಕೈಗಾರಿಕಾ ಕ್ರಾಂತಿ ಜನರ ಮನಸ್ಸಿನಿಂದ ಮರೆಯಾದಂತಾಗಿದೆ. ಉತ್ಪಾದನಾ ವಲಯ ಕ್ರಮೇಣ ಆದ್ಯತೆ ಕಳೆದುಕೊಂಡು ಸೇವಾ ವಲಯ ಮುಂಚೂಣಿಗೆ ಬಂದಿದೆ. ಆರ್ಥಿಕ ಸೇವೆಗೆ ಸಂಬಂಧಿಸಿದಂತೆ ಈಗಲೂ ಯೂರೋಪಿನಲ್ಲಿ ಬ್ರಿಟನ್ ಅಗ್ರ ಸ್ಥಾನದಲ್ಲಿದೆ. ಜಾಗತಿಕ ಕಂಪನಿಗಳು ಬ್ರಿಟನ್‌ನಲ್ಲಿ ಕಚೇರಿ ತೆರೆದು ವ್ಯವಹಾರ ಮಾಡುತ್ತ ಬಂದಿದ್ದವು. ಬ್ರೆಕ್ಸಿಟ್‌ನಿಂದಾಗಿ ಆ ಕಂಪನಿಗಳು ತಮ್ಮ ಕಚೇರಿಗಳನ್ನು ಬೇರೆ ದೇಶಗಳಿಗೆ ಸ್ಥಳಾಂತರಿಸಲು ಯೋಚಿಸುತ್ತಿವೆ. ಈ ಬೆಳವಣಿಗೆಯಾದರೆ ಬ್ರಿಟನ್ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ.

ಎರಡನೆಯ ಮಹಾಯುದ್ಧದ ನಂತರ ಜರ್ಮನಿ, ಫ್ರಾನ್ಸ್ ಬಲಿಷ್ಠ ದೇಶಗಳಾಗಿ ಮೂಡಿದವು. ಬ್ರಿಟನ್ ಸೂಪರ್ ಪವರ್ ಸ್ಥಾನ ಕಳೆದುಕೊಂಡಿದೆ. ಆದರೂ ಅಮೆರಿಕದ ಜೊತೆಗೂಡಿ ತಾನು ಬಲಿಷ್ಠ ದೇಶ ಎನ್ನುವುದನ್ನು ತೋರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇರಾಕ್ ಮೇಲೆ ನಡೆದ ಮಿಲಿಟರಿ ದಾಳಿಯಲ್ಲಿ ಅಮೆರಿಕದ ಜೊತೆಗೆ ಬ್ರಿಟನ್ ಮಿಲಿಟರಿ ಭಾಗವಹಿಸಿತ್ತು. ಇತ್ತೀಚೆಗೆ ರಾಸಾಯನಿಕ ಅಸ್ತ್ರಗಳ ಬಳಕೆ ಆರೋಪ ಹೊತ್ತಿರುವ ಸಿರಿಯಾದ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಬ್ರಿಟನ್ ಕೂಡಾ ಭಾಗವಹಿಸಿದೆ. ಇದೊಂದು ರೀತಿಯಲ್ಲಿ ತೋರಿಕೆಯ ಆಟ.

ಹಾಗೆ ನೋಡಿದರೆ, ಬ್ರಿಟನ್‌ನಲ್ಲಿ ರಾಜಕೀಯ ಸ್ಥಿರತೆ ಇದ್ದಂತೆ ಕಾಣ್ಣುತ್ತಿಲ್ಲ. ಜನಮತ ಬ್ರೆಕ್ಸಿಟ್ ಪರವಾಗಿ ಬಂದಾಗ ಪ್ರಧಾನಿಯಾಗಿದ್ದ ಕನ್ಸರವೇಟಿವ್ ಪಕ್ಷದ ಕ್ಯಾಮರೂನ್ ರಾಜೀನಾಮೆ ಕೊಟ್ಟರು. ಅವರ ಸ್ಥಾನಕ್ಕೆ ಅದೇ ಪಕ್ಷದ ಥೆರೀಸಾ ಮೇ ಅಧಿಕಾರಕ್ಕೆ ಬಂದರು. ಥೆರೀಸಾ ಮೆ ವಾಸ್ತವವಾಗಿ ಬ್ರಿಕ್ಸಿಟ್ ವಿರೋಧಿಗಳು. ಪ್ರಧಾನಿ ಆದ ತತ್‌ಕ್ಷಣ ನಿಲುವು ಬದಲಾಯಿಸಿ ಏನೇ ಆಗಲಿ ಬ್ರೆಕ್ಸಿಟ್ ಜಾರಿಗೆ ತಾವು ಬದ್ಧ ಎಂದು ಪ್ರಕಟಿಸಿದರು. ಅವಧಿಗೆ ಮುನ್ನವೇ ಚುನಾವಣೆ ಘೋಷಿಸಿದರು. ಚುನಾವಣೆಗಳಲ್ಲಿ ಜನರು ಹೆಚ್ಚು ಬೆಂಬಲ ವ್ಯಕ್ತಮಾಡುತ್ತಾರೆ ಎಂದು ತಿಳಿದಿದ್ದರು. ಆದರೆ ಹಾಗೆ ಆಗಲಿಲ್ಲ. ಆದರೂ ಅಲ್ಪ ಬಹುಮತದ ಸರ್ಕಾರ ರಚಿಸಿ ಬ್ರೆಕ್ಸಿಟ್ ಜಾರಿಗೊಳಿಸಲು ಪಣ ತೊಟ್ಟಿದ್ದಾರೆ. ಬ್ರಿಟನ್‌ನಲ್ಲಿ ಕನ್ಸರ್‌ವೇಟಿವ್ ಪಕ್ಷ ಬಿಟ್ಟರೆ ಲೇಬರ್ ಪಕ್ಷವೇ ಅತ್ಯಂತ ಪ್ರಬಲವಾದುದು. ಸದ್ಯ ಜೆರೆಮಿ ಕಾರ್ಬೈನ್ ನಾಯಕ. ಜನಮತಕ್ಕೆ ವಿರೋಧವಾಗಿ ಹೋಗುವ ಮನಸ್ಸು ಅವರಿಗೂ ಇಲ್ಲ. ಆದರೆ ಅವರು ಬ್ರೆಕ್ಸಿಟ್ ಪರವಾಗಿ ಇಲ್ಲ. ಒಂದು ರೀತಿಯಲ್ಲಿ ಬ್ರೆಕ್ಸಿಟ್ ರಾಷ್ಟ್ರೀಯ ವಾದದ ಭಾಗವಾಗಿ ಮೂಡಿದೆ.

ರಾಷ್ಟ್ರೀಯವಾದ ಮತ್ತು ಬಲಪಂಥೀಯ ಪಕ್ಷಗಳು ಈಗಾಗಲೇ ಯೋರೋಪಿನಲ್ಲಿ ಅಷ್ಟೇ ಏಕೆ ಪಾಶ್ಚಾತ್ಯ ದೇಶಗಳ ರಾಜಕೀಯ ಮುಖ್ಯವಾಹಿನಿಯಲ್ಲಿವೆ. ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಆಯ್ಕೆ ಎದ್ದುಕಾಣುವಂಥ ನಿದರ್ಶನ. ಫ್ರಾನ್ಸ್, ಪೋಲೆಂಡ್, ಸ್ಲಾವೇನಿಯಾ, ಫಿನ್‌ಲ್ಯಾಂಡ್, ಹಂಗೇರಿ ಮತ್ತಿತರ ಕಡೆ ಬಲಪಂಥೀಯರು ಮತ್ತು ರಾಷ್ಟ್ರೀಯವಾದಿಗಳು ಉದಾರವಾದಿಗಳಿಗೆ ದೊಡ್ಡ ಬೆದರಿಕೆಯನ್ನೇ ಒಡ್ಡಿದ್ದಾರೆ. ವಿಶ್ವದಲ್ಲಿ ಎಲ್ಲ ಕಡೆ ರಾಷ್ಟ್ರೀಯವಾದ, ಸರ್ವಾಧಿಕಾರ, ಬಲಪಂಥ ತಲೆಎತ್ತುತ್ತಿರುವುದು ಗಂಭೀರವಾಗಿ ಯೋಚಿಸಬೇಕಾದ ಬೆಳವಣಿಗೆ.

ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
ನಿಕ್ಕಿ ಹ್ಯಾಲಿ ರಾಜೀನಾಮೆ ಹಿಂದೆ ಇರುವ ಕಾರಣವೇನಿರಬಹುದು?
ರಷ್ಯಾದಿಂದ ಎಸ್400 ಕ್ಷಿಪಣಿ ಖರೀದಿ ಒಪ್ಪಂದ; ಟ್ರಂಪ್ ಕೆಂಗಣ್ಣಿಗೆ ಗುರಿಯಾಗಲಿದೆ ಭಾರತ
Editor’s Pick More