ವೆನೆಜುವೆಲಾದಲ್ಲಿ ಅನ್ನ, ಔಷಧಿಗಾಗಿ ಪರದಾಟ; ಮುಂದುವರಿದ ವಲಸೆ, ಸಾವು

ವಿಶ್ವದ ೨೦ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿದ್ದ ವೆನೆಜುವೆಲಾದಲ್ಲಿ ಆಹಾರದ ಅಭಾವ ಜನರನ್ನು ಕಂಗಾಲಾಗಿಸಿದೆ. ಜನರು ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಆದರೆ ಇದು ಅಮೆರಿಕ ಪ್ರಣೀತ ಪಾಶ್ಚಾತ್ಯ ದೇಶಗಳ ಅಪಪ್ರಚಾರ ಎಂದು ವೆನೆಜುವೆಲಾ ಅಧ್ಯಕ್ಷ ಮಾದುರೊ ಹೇಳುತ್ತಾರೆ

ಎರಡು ದಶಕದ ಹಿಂದೆ ಲ್ಯಾಟಿನ್ ಅಮೆರಿಕದ ಶ್ರೀಮಂತ ದೇಶವೆನಿಸಿದ್ದ ವೆನೆಜುವೆಲಾ ಇಂದು ಬಡದೇಶವಾಗಿದೆ. ಲ್ಯಾಟಿನ್ ಅಮೆರಿಕ ಪ್ರದೇಶದಲ್ಲಿಯಷ್ಟೇ ಅಲ್ಲ, ವಿಶ್ವದ ೨೦ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿದ್ದ ವೆನೆಜುವೆಲಾದಲ್ಲಿ ಉದ್ಭವವಾಗಿರುವ ಆರ್ಥಿಕ ಸಂಕಷ್ಟದಿಂದಾಗಿ ಜನರು ಬದಕಲು ಪರದಾಡುವಂತಾಗಿದೆ. ಆಹಾರದ ಅಭಾವ ಒಂದು ಕಡೆಯಾದರೆ ಮತ್ತೊಂದು ಕಡೆ ಔಷಧಿಗಳ ಅಭಾವ. ಜನರು ಒಪ್ಪೊತ್ತಿನ ಊಟಕ್ಕೂ ಕಷ್ಟಪಡುವಂತಾಗಿದೆ. ಇನ್ನು ಜೀವನವಶ್ಯಕ ಔಷಧಗಳ ಅಭಾವದಿಂದ ಮಕ್ಕಳು ಸಾಯುತ್ತಿದ್ದಾರೆ ಎಂದು ವರದಿಯಾಗಿದೆ. ಸಂಕಷ್ಟದಿಂದಾಗಿ ಲಕ್ಷಾಂತರ ಜನರು ನೆರೆಯ ಕೊಲಂಬಿಯಾ ಮತ್ತಿತರ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇದೆಲ್ಲ ಅಮೆರಿಕ ಪ್ರಣೀತ ಪಾಶ್ಚಾತ್ಯ ದೇಶಗಳ ಅಪಪ್ರಚಾರ ಎಂದು ವೆನೆಜುವೆಲಾ ಅಧ್ಯಕ್ಷ ನಿಕೊಲಸ್ ಮಾದುರೊ ಹೇಳುತ್ತಾರೆ. ಆರ್ಥಿಕ ಬಿಕ್ಕಟ್ಟು ಇದೆ ನಿಜ. ಆದರೆ ಜನರು ಹಸಿವೆಯಿಂದ ಸಾಯುತ್ತಿದ್ದಾರೆ ಎಂಬುದೆಲ್ಲಾ ಸುಳ್ಳು ಎಂದು ಅವರು ಹೇಳುತ್ತಾರೆ.

ಅಧ್ಯಕ್ಷ ಮಾದುರೊ ಹೇಳುವಂತೆಯೇ ದೇಶ ಆರ್ಥಿಕ ಸಂಕಷ್ಟಕ್ಕೆ ಸಿಕ್ಕಿದೆ. ಅದಕ್ಕೆ ಮುಖ್ಯ ಕಾರಣ ಪಾಶ್ಚಾತ್ಯ ದೇಶಗಳ ಹೇಳುವಂತೆ ದುರಾಡಳಿತ. ಇದು ಕಾರಣವೂ ಇರಬಹುದು. ಆದರೆ, ಗಮನಿಸಬೇಕಾದ ಕೆಲವು ಮುಖ್ಯ ವಿಷಯಗಳಿವೆ. ಅದು ತೈಲ ಬೆಲೆಗೆ ಸಂಬಂಧಿಸಿದ್ದು. ವಿಶ್ವದಲ್ಲಿಯೇ ಅತಿ ಹೆಚ್ಚು ತೈಲ ಸಂಪನ್ಮೂಲ ವೆನೆಜುವೆಲಾದಲ್ಲಿದೆ. ಈ ಹಿಂದೆ ಅಧಿಕಾರದಲ್ಲಿದ್ದ ಹ್ಯೂಗೋ ಶಾವೆಜ್ (೧೯೯೮-೨೦೧೩) ತೈಲ ಮಾರಾಟದಿಂದ ಬಂದ ಹಣವನ್ನು ಬಡವರ ಏಳಿಗೆಗೆ ಬಳಸಲಾರಂಭಿಸಿದರು. ಉಚಿತ ಮತ್ತು ಅಗ್ಗದ ದರದಲ್ಲಿ ಆಹಾರ ಪದಾರ್ಥ, ಕುಡಿವ ನೀರು, ತೈಲ, ಉಚಿತ ಆರೋಗ್ಯ ಸೇವೆ. ಶಿಕ್ಷಣ ಮುಂತಾದ ಜೀವನಾವಶ್ಯಕ ವಸ್ತುಗಳನ್ನು ಜನರಿಗೆ ಪೂರೈಸಲು ತೈಲದ ಹಣವನ್ನು ಬಳಸಿದರು. ಅವರ ಅಧಿಕಾರದ ಮೊದಲ ಅವಧಿಯಲ್ಲಿ ತೈಲ ಬೆಲೆ ಗಗನಕ್ಕೇರಿತ್ತು. ಒಂದು ಬ್ಯಾರೆಲ್ ಪೆಟ್ರೋಲ್ ಬೆಲೆ ೧೧೫ ಡಾಲರ್ಗೆ ಏರಿತ್ತು. ಹೀಗಾಗಿ ತೈಲ ಮಾರಾಟದಿಂದ ಅಪಾರ ಪ್ರಮಾಣದ ಹಣ ಗಳಿಸಿತ್ತು. ಚಾವೇಜ್ ಈ ಹಣ ಬಳಿಸಿಕೊಂಡು ದೇಶದಲ್ಲಿ ತಂದ ಸುಧಾರಣೆ ಬೊಲಿವೇರಿನ್ (ಬೊಲಿವಿಯಾ, ವೆನೆಜುವೆಲಾ ಮುಂತಾದ ದೇಶಗಳಿಗೆ ಸ್ವಾತಂತ್ರ್ಯ ತಂದುಕೊಟ್ಟ ಕ್ರಾಂತಿಕಾರಿ ಸೈಮನ್ ಬೊಲಿವರ್) ಕ್ರಾಂತಿ ಎಂದೇ ಕರೆಯಲಾಗುತ್ತಿತ್ತ್ತು. ಕ್ಯೂಬಾ, ಈಕ್ವೆಡಾರ್, ಹೊಂಡುರಾಸ್, ಬೊಲಿವಿಯಾ, ನಿಕರಗುವಾ ಮುಂತಾದ ಲ್ಯಾಟಿನ್ ಅಮೆರಿಕ ಮತ್ತು ಕರೆಬಿಯನ್ ದೇಶಗಳ ಒಕ್ಕೂಟ ರಚಿಸಿ ಕಡಿಮೆ ದರದಲ್ಲಿ ತೈಲ ಪೂರೈಸಲು ಶಾವೇಜ್ ಆರಂಭಿಸಿದರು. ಈ ಬೆಳವಣಿಗೆಯಿಂದಾಗಿ ಆ ದೇಶಗಳು ವೇಗವಾಗಿ ಅಭಿವೃದ್ಧಿಹೊಂದಲು ಕಾರಣವಾಯಿತು. ಎಡಪಂಥೀಯ ದೇಶಗಳ ಜೊತೆ ಮೈತ್ರಿ ಸಾಧಿಸಿ ಕೂಟ ಕಟ್ಟಿದ್ದು ಅಮೆರಿಕ ಮತ್ತು ಇತರ ಪಾಶ್ಚಾತ್ಯ ದೇಶಗಳ ನಾಯಕರ ಕಣ್ಣು ಕೆಂಪಗಾಗಲು ಕಾರಣವಾಯಿತು. ಶಾವೇಜ್ ಅವರ ಪ್ರಭಾವವನ್ನು ಅಳಿಸಲು ಅವರ ವಿರುದ್ಧ ಪಾಶ್ಚಾತ್ಯ ದೇಶಗಳು ದೊಡ್ಡ ಕಾರ್ಯತಂತ್ರವನ್ನೇ ರೂಪಿಸಿದವು. ಶಾವೇಜ್ ಕಾರ್ಯಕ್ರಮಗಳು ಫಲಕೊಡುವಷ್ಟರಲ್ಲಿ ತೈಲ ಬೆಲೆ ಕುಸಿದು ದೇಶ ಸಂಕಷ್ಟಕ್ಕೆ ಸಿಲುಕಿತು. ಜನಕಲ್ಯಾಣ ಕಾರ್ಯಕ್ರಮಗಳಿಗೆ ಹಣ ಇಲ್ಲದಾಯಿತು. ಕಾರ್ಯಕ್ರಮಗಳನ್ನು ನಿಲ್ಲಿಸಲಾಗದೆ ಸರ್ಕಾರ ಸಾಲ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಆ ವೇಳೆಗೆ ಕ್ಯಾನ್ಸರ್ನಿಂದ ಶಾವೇಜ್ ನಿಧನರಾದರು.

ಅವರ ಸ್ಥಾನಕ್ಕೆ ಬಂದ ನಿಕಲಸ್ ಮಾದುರೊ ಅವರು ಶಾವೆಜ್ ಬೆಂಬಲಿಗರಾಗಿದ್ದುದರಿಂದ ಕಾರ್ಯಕ್ರಮಗಳನ್ನು ಬದಲಾವಣೆ ಮಾಡದೆ ಮುಂದುವರಿಸಿದ ಪರಿಣಾಮ ಸಮಸ್ಯೆಗಳೂ ಮುಂದುವರಿದವು. ಹಣಕಾಸು ಮತ್ತು ಆಹಾರದ ಬಿಕ್ಕಟ್ಟನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಪ್ರತಿಭಟನೆ, ಚಳವಳಿ ನಡೆಸಲಾರಂಭಿಸಿದರು. ತೈಲಾಗಾರಗಳಲ್ಲಿ ಕಾರ್ಮಿಕರ ಮುಷ್ಕರ ಸಂಘಟಿಸಿದರು. ತೈಲ ಉತ್ಪಾದನೆಯೂ ಕಡಿಮೆಯಾಗತೊಡಗಿತು. ಬರುವ ಆದಾಯವೂ ತಗ್ಗಿತು. ಶ್ರೀಮಂತರು, ವ್ಯಾಪಾರಗಾರರು ಹಣ, ಆಹಾರ ಧಾನ್ಯವನ್ನು ಕಳ್ಳಸಂಗ್ರಹ ಮಾಡಿದರು. ಹೀಗಾಗಿ ಹಣದ ಚಲಾವಣೆಯೇ ಕಡಿಮೆಯಾಯಿತು. ಕಳೆದ ವರ್ಷ ಶೇ.೬೫೨ ಇದ್ದ ಹಣದುಬ್ಬರ ಈ ವರ್ಷ ಶೇ.೨೩೪೯ಕ್ಕೆ ಏರಿತು. ಜನರ ಬಳಿ ಹಣವೇ ಇಲ್ಲದಾಯಿತು. ಆಹಾರ ದಾನ್ಯದ ಅಭಾವ ತಲೆದೋರಿತು. ಹಣದ ಸಮಸ್ಯೆಯನ್ನು ನಿಬಾಯಿಸಲು ಮಾದುರೋ ಅವರು ಹೊಸ ಕರೆನ್ಸಿಯನ್ನೇ ಚಲಾವಣೆಗೆ ತಂದರು. ಆದರೂ ಪರಿಸ್ಥಿತಿ ಸುಧಾರಿಸಲಿಲ್ಲ. ಆಹಾರದ ಅಭಾವವನ್ನು ತಪ್ಪಿಸಲು ಸರ್ಕಾರವೇ ಪ್ರತಿ ಕುಟುಂಬಕ್ಕೆ ಇಂತಿಷ್ಟು ಆಹಾರ ಧಾನ್ಯ ಮತ್ತಿತರ ಅಗತ್ಯ ವಸ್ತುಗಳನ್ನು ಪೂರೈಸಲು ಕಾರ್ಯಕ್ರಮ ಜಾರಿಗೆ ತಂದರು. ಅದೂ ಸರಿಯಾಗಿ ನಿಭಾಯಿಸಲಾಗುತ್ತಿಲ್ಲ. ಆಹಾರಧಾನ್ಯಕ್ಕಾಗಿ ಹಿಂಸಾಚಾರದ ಘಟನೆಗಳೇ ನಡೆದಿವೆ. ಆಹಾರಧಾನ್ಯ ಸಂಗ್ರಹಾಗಾರಗಳನ್ನು ಜನರು ಲೂಟಿ ಮಾಡಿದ ಉದಾಹರಣೆಗಳಿವೆ.

ಈ ಮಧ್ಯೆ ಅವರು ಸಂವಿಧಾನಕ್ಕೆ ತಿದ್ದುಪಡಿ ತರುವ ಉದ್ದೇಶದಿಂದ ಹೊಸದಾಗಿ ಸಂವಿಧಾನ ಸಭೆಯನ್ನು ಪುನಾರಚಿಸಿದರು. ಅದರ ವಿರುದ್ಧ ವಿರೋಧ ಪಕ್ಷಗಳು ಚಳವಳಿ ಆರಂಭಿಸಿದವು. ಸಾವಿರಾರು ಜನರನ್ನು ಜೈಲಿಗೆ ಕಳುಹಿಸಲಾಯಿತು. ಕಳೆದ ಒಂದು ವರ್ಷದಲ್ಲಿ ವಿವಿಧ ಹಿಂಸಾಚಾರದ ಘಟನೆಗಳಲ್ಲಿ ಸತ್ತವರು ೨೭ ಸಾವಿರ ಮಂದಿ ಎಂಬ ಅಂಕಿ-ಅಂಶಗಳನ್ನು ನೋಡಿದರೆ ದೇಶ ಎತ್ತ ಹೊರಳಿದೆ ಎನ್ನುವುದನ್ನು ಯಾರು ಬೇಕಾದರೂ ಊಹಿಸಿಕೊಳ್ಳಬಹುದು.

ಇದನ್ನೂ ಓದಿ : ಕ್ಯೂಬಾಕ್ಕೆ ಹೊಸ ಅಧ್ಯಕ್ಷರು ನೇಮಕಗೊಂಡರೂ ಬದಲಾಗದ ಪರಿಸ್ಥಿತಿ

ದೇಶದ ಇಂದಿನ ಸಂಕಷ್ಟದ ಹಿಂದೆ ಜನಕಲ್ಯಾಣ ಕಾರ್ಯಕ್ರಮಗಳನ್ನು ವಿರೋಧಿಸುವ ಶ್ರೀಮಂತರು, ವ್ಯಾಪಾರಗಾರರು ಮತ್ತು ದೇಶದ ತೈಲ ಸಂಪನ್ಮೂಲದ ಮೇಲೆ ಕಣ್ಣಿಟ್ಟಿರುವ ಅಮೆರಿಕ ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳು ಇವೆ ಎನ್ನುವುದು ಮಾದುರೊ ಅವರ ಆರೋಪ.

ಇದೇ ೨೦ರಂದು ಅಧ್ಯಕ್ಷ ಚುನಾವಣೆ ನಡೆಯಲಿದೆ. ಸಾಮಾನ್ಯ ಜನರು ಅವರ ಪರವಾಗಿದ್ದಾರೆ ಎಂದು ಸಮೀಕ್ಷೆಗಳು ತಿಳಿಸಿವೆ. ವಿರೋಧ ಪಕ್ಷಗಳಲ್ಲಿ ಒಗ್ಗಟ್ಟಿಲ್ಲ. ಹೀಗಾಗಿ ಮಾದುರೋ ಸೋಲುವ ಸಾಧ್ಯತೆ ಇಲ್ಲ. ವಿರೋಧ ಪಕ್ಷಗಳು ತಮ್ಮ ಚಳವಳಿಯನ್ನು ಮುಂದುವರಿಸುವುದು ಖಚಿತ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೆನೆಜುವೆಲಾ ಮೇಲಿನ ಆರ್ಥಿಕ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸುವ ಸಾಧ್ಯತೆ ಇದೆ. ಯೂರೋಪ್ ಒಕ್ಕೂಟವೂ ಅದೇ ದಾರಿ ಅನುಸರಿಸಿದರೆ ವೆನೆಜುವೆಲಾಗೆ ಸಂಕಷ್ಟ ತಪ್ಪಿದ್ದಲ್ಲ. ಇದೇನೇ ಇದ್ದರೂ, ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ವಿಶ್ವಸಂಸ್ಥೆ ಮುಂದೆಬರಬೇಕು. ತೈಲ ಸಂಪನ್ಮೂಲ ದೇಶವೊಂದು ಅರಾಜಕತೆಯತ್ತ ಹೊರಳುವುದು ಜಾಗತಿಕವಾಗಿ ಪ್ರತಿಕೂಲ ಪರಿಣಾಮ ಉಂಟುಮಾಡುವಂಥ ಬೆಳವಣಿಗೆ ಎನ್ನುವುದನ್ನು ಮರೆಯಬಾರದು.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More