ಇರಾನ್ ಪರಮಾಣು ಒಪ್ಪಂದ ರದ್ದು ಮಾಡಿ ಜಗತ್ತನ್ನು ತಲ್ಲಣಗೊಳಿಸಿದ ಟ್ರಂಪ್

ಇರಾನ್ ಮತ್ತು ಪ್ರಮುಖ ಆರು ದೇಶಗಳ ನಡುವೆ 2015ರಲ್ಲಿ ಆಗಿದ್ದ ಪರಮಾಣು ಒಪ್ಪಂದವನ್ನು ರದ್ದು ಮಾಡುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾಗತಿಕವಾಗಿ ಅಲ್ಲೋಲಕಲ್ಲೋಲ ಉಂಟುಮಾಡಿದ್ದಾರೆ. ಈ ಆಘಾತಕಾರಿ ನಿರ್ಧಾರ ಮಂಗಳವಾರ (ಮೇ 8) ಹೊರಬಿದ್ದಿದೆ

ಇರಾನ್ ಮತ್ತು ಪ್ರಮುಖ ಆರು ದೇಶಗಳ ನಡುವೆ 2015ರಲ್ಲಿ ಆಗಿದ್ದ ಪರಮಾಣು ಒಪ್ಪಂದವನ್ನು ನಿರೀಕ್ಷೆಯಂತೆಯೇ ರದ್ದು ಮಾಡುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾಗತಿಕವಾಗಿ ಅಲ್ಲೋಲಕಲ್ಲೋಲ ಉಂಟುಮಾಡಿದ್ದಾರೆ. ಪರಮಾಣು ಒಪ್ಪಂದ ರದ್ದು ನಿರ್ಧಾರವನ್ನು ಮಂಗಳವಾರ ಪ್ರಕಟಿಸಿದ ಟ್ರಂಪ್, ಇರಾನ್ ವಿರುದ್ಧ ಕಠಿಣವಾದ ಆರ್ಥಿಕ ನಿರ್ಬಂಧಗಳನ್ನು ಜಾರಿಗೆ ತರುವುದಾಗಿ ಘೋಷಿಸಿದ್ದಾರೆ.

ಮತದಾರರಿಗೆ ಚುನಾವಣೆ ಕಾಲದಲ್ಲಿ ತಾವು ಕೊಟ್ಟ ಭರವಸೆಯಿಂದ ದೂರ ಸರಿಯುವ ಮಾತೇ ಇಲ್ಲ ಎಂದಿರುವ ಅವರು ಪರಮಾಣು ಒಪ್ಪಂದವನ್ನು ಇರಾನ್ ಪಾಲಿಸುತ್ತಿಲ್ಲ, ಅಷ್ಟೇ ಅಲ್ಲ, ಪರಮಾಣು ಬಾಂಬ್ ನಿರ್ಮಾಣಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ನಡೆಸುತ್ತಿದೆ ಎಂಬ ಬಗ್ಗೆ ಖಚಿತ ಮಾಹಿತಿ ತಮ್ಮ ಬಳಿ ಇದೆ ಎಂದು ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಇರಾನ್ ಬಹಳ ವರ್ಷಗಳಿಂದ ಪರಮಾಣು ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತ ಬಂದಿದೆ. ಪರಮಾಣು ತಂತ್ರಜ್ಞಾನ ಅಭಿವೃದ್ಧಿಯನ್ನು ತಡೆಯುವ ಉದ್ದೇಶದಿಂದ ವಿವಿಧ ದೇಶಗಳು ಇರಾನ್ ಜೊತೆ ಮಾತುಕತೆ ನಡೆಸುತ್ತ ಬಂದವು. ಇದರ ಪರಿಣಾಮವಾಗಿ 2016ರಲ್ಲಿ ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ, ರಷ್ಯಾ ಮತ್ತು ಇರಾನ್ ನಡುವೆ ಒಂದು ಒಪ್ಪಂದ ಆಯಿತು. ಆಗ ಅಮೆರಿಕದ ಅಧ್ಯಕ್ಷರಾಗಿದ್ದವರು ಬರಾಕ್ ಒಬಾಮಾ. ಈ ಒಪ್ಪಂದದ ಪ್ರಕಾರ, ಇರಾನ್ ತನ್ನ ಪರಮಾಣು ತಂತ್ರಜ್ಞಾನ ಕಾರ್ಯಕ್ರಮವನ್ನು ಕೆಲವು ನಿರ್ಬಂಧಗಳಿಗೆ ಒಳಪಡಿಸಬೇಕಿತ್ತು. ಪರಮಾಣು ತಂತ್ರಜ್ಞಾನ ಅಭಿವೃದ್ಧಿಯನ್ನು ಕ್ರಮೇಣ ಸೀಮಿತಗೊಳಿಸಿ ಅದನ್ನು ಜನೋಪಯೋಗಿ ಉದ್ದೇಶಕ್ಕೆ ಮಾತ್ರ ಬಳಸುವಂತಾಗಬೇಕಿತ್ತು. ಮುಖ್ಯವಾಗಿ ಯುರೇನಿಯಂ ಸಂಸ್ಕರಣೆಯನ್ನು ಪರಮಾಣು ಬಾಂಬ್‍ಗೆ ಬಳಸುವ ಹೀಂದಿನ ಹಂತಕ್ಕೇ ನಿಲ್ಲಿಸಬೇಕಾಗಿತ್ತು. ಈಗಾಗಲೇ ಅಸ್ತಿತ್ವದಲ್ಲಿದ್ದ ಪರಮಾಣು ಸ್ಥಾವರಗಳನ್ನು ಕ್ರಮೇಣ ಇಂಧನ ಉದ್ದೇಶಕ್ಕೆ ಪರಿವರ್ತಿಸಬೇಕಿತ್ತು. ಎಲ್ಲ ಸ್ಥಾವರಗಳನ್ನು ಅಂತಾರಾಷ್ಟ್ರೀಯ ಪರಮಾಣು ತಜ್ಞರ ತಪಾಸಣೆಗೆ ಮುಕ್ತಗೊಳಿಸುವುದು ಕಡ್ಡಾಯವಾಗಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕ ಸೇರಿದಂತೆ ಪ್ರಬಲ ದೇಶಗಳು ಮತ್ತು ಭದ್ರತಾ ಮಂಡಳಿ ಇರಾನ್ ಮೇಲೆ ಹೇರಿದ್ದ ಆರ್ಥಿಕ ಮತ್ತಿತರ ನಿರ್ಬಂಧಗಳು ರದ್ದಾಗಬೇಕಿತ್ತು. ಇದರಿಂದಾಗಿ ಆರ್ಥಿಕ ಸಂಕಷ್ಟದಿಂದ ಹೊರಬರಲು ಇರಾನ್‍ಗೆ ಅನುಕೂಲವಾಗುತ್ತಿತ್ತು.

ಟ್ರಂಪ್ ಅವರು ಒಪ್ಪಂದದಿಂದ ಹಿಂದೆ ಸರಿಯುವ ನಿರ್ಧಾರ ತೆಗೆದುಕೊಳ್ಳಬಹುದಾದ ಸಾಧ್ಯತೆಯನ್ನು ಮೊದಲೇ ಊಹಿಸಿದ್ದ ಹಲವು ದೇಶಗಳ ನಾಯಕರು, ಹಾಗೆ ಮಾಡಬಾರದೆಂದು ಅವರ ಮೇಲೆ ಒತ್ತಾಯ ಹೇರಿದ್ದರು. ಮುಖ್ಯವಾಗಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುಯಲ್ ಮೆಕ್ರಾನ್ ತಮ್ಮ ಅಮೆರಿಕ ಭೇಟಿ ಸಂದರ್ಭದಲ್ಲಿ ಇರಾನ್ ಜೊತೆಗಿನ ಒಪ್ಪಂದವನ್ನು ರದ್ದು ಮಾಡಬಾರದೆಂದು ಟ್ರಂಪ್ ಅವರಿಗೆ ಖುದ್ದು ಮನವಿ ಮಾಡಿಕೊಂಡಿದ್ದರು. ಜರ್ಮನಿಯ ಛಾನ್ಸಲರ್ ಏಂಜೆಲಾ ಮೆರ್ಕೆಲ್, ಬ್ರಿಟನ್ ಪ್ರಧಾನಿ ಥೆರೇಸಾ ಮೇ ಕೂಡ ಅಂಥದ್ದೇ ಮನವಿಯನ್ನು ಮಾಡಿದ್ದರು. ಆದರೆ, ಯಾರ ಮಾತಿಗೂ ಬೆಲೆ ಕೊಡದೆ ಟ್ರಂಪ್ ಅವರು ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಟ್ರಂಪ್ ಅವರ ನಿರ್ಧಾರವನ್ನು ಸ್ವಾಗತಿಸಿರುವವರು ಇಸ್ರೇಲ್ ಮತ್ತು ಸೌದಿ ಅರೇಬಿಯಾದ ನಾಯಕರು ಮಾತ್ರ.

ಟ್ರಂಪ್ ನಿರ್ಧಾರಕ್ಕೆ ಸಹಜವಾಗಿಯೇ ಇರಾನ್ ಪ್ರತಿಭಟನೆ ಸೂಚಿಸಿದೆ. ತನ್ನ ಈ ನಿರ್ಧಾರಕ್ಕಾಗಿ ಅಮೆರಿಕ ಮುಂದೊಂದು ದಿನ ವಿಷಾದ ವ್ಯಕ್ತಪಡಿಸಬೇಕಾಗುತ್ತದೆ. ಇದೊಂದು ಐತಿಹಾಸಿಕ ತಪ್ಪು ಎಂದೂ ಇರಾನ್ ಹೇಳಿದೆ. ಪರಮಾಣು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು ಪೂರ್ಣ ಪ್ರಮಾಣದಲ್ಲಿ ಇರಾನ್ ಅಧ್ಯಕ್ಷ ಹಸನ್ ರುಹಾನಿ ಮಂಗಳವಾರ ಆದೇಶ ನೀಡಿದ್ದಾರೆ ಎಂದು ವರದಿಯಾಗಿದೆ. ಮತ್ತೊಂದು ವರದಿಯ ಪ್ರಕಾರ ಅಮೆರಿಕವನ್ನು ಹೊರತುಪಡಿಸಿ ಉಳಿದ ದೇಶಗಳ ಜೊತೆಗೆ ಒಪ್ಪಂದ ಜಾರಿ ಕುರಿತ ಕ್ರಮಗಳು ಮುಂದುವರಿಸಲಾಗುವುದು ಎಂದು ರುಹಾನಿ ಹೇಳಿದ್ದಾರೆ. ಟ್ರಂಪ್ ಅವರ ನಿರ್ಧಾರಕ್ಕೆ ವಿಷಾದ ವ್ಯಕ್ತಮಾಡಿರುವ ಫ್ರಾನ್ಸ್, ಜರ್ಮನಿ ದೇಶಗಳು ಒಪ್ಪಂದವನ್ನು ಉಳಿಸಿಕೊಳ್ಳಲು ನಿರ್ಧರಿಸಿವೆ. ಅಮೆರಿಕ ದೂರ ಹೋದರೇನಂತೆ ಇತರ ದೇಶಗಳು ಆ ಒಪ್ಪಂದವನ್ನು ಮುಂದುವರಿಸುತ್ತವೆ ಎಂದು ಒಪ್ಪಂದದ ಭಾಗವಾಗಿರುವ ಇತರ ದೇಶಗಳ ನಾಯಕರು ಹೇಳಿರುವುದು ಆಸಕ್ತಿಯುತವಾಗಿದೆ. ಅಮೆರಿಕವನ್ನು ಹೊರಗಿಟ್ಟು ಫ್ರಾನ್ಸ್, ಜರ್ಮನಿ, ಬ್ರಿಟನ್, ರಷ್ಯಾ, ಚೀನಾ ಮತ್ತಿತರ ದೇಶಗಳು ಇರಾನ್ ಜೊತೆಗೆ ಬಾಂಧವ್ಯ ಬೆಳೆಸುವುದಾದರೆ ಅದೊಂದು ಉತ್ತಮ ಬೆಳವಣಿಗೆಯಾಗುತ್ತದೆ. ಅಮೆರಿಕವನ್ನು ದೂರವಿಟ್ಟ ಕೂಟವಾಗಿ ಅದು ರೂಪಿತವಾದರೆ ಆಸಕ್ತಿದಾಯಕ.

ಇದನ್ನೂ ಓದಿ : ಕಚ್ಚಾ ತೈಲ ಏರಿಕೆ, ಪೆಟ್ರೊಲಿಯಂ ಕಂಪನಿಗಳ ಷೇರು ಕುಸಿತ, ನಿಫ್ಟಿ ಮೆಟಲ್ ಜಿಗಿತ

ಇರಾನ್ ಜೊತೆಗಿನ ಒಪ್ಪಂದ ಅಂತಾರಾಷ್ಟ್ರೀಯವಾದುದು. ಒಮ್ಮೆ ಸಹಿ ಹಾಕಿದ ನಂತರ ಒಪ್ಪಂದಗಳಿಗೆ ಬದ್ಧವಾಗಿರಬೇಕು. ಇಲ್ಲದೆ ಹೋದರೆ ಅಂತಾರಾಷ್ಟ್ರೀಯ ಒಪ್ಪಂದಗಳಿಗೆ ಬೆಲೆ ಇಲ್ಲದಂತಾಗುತ್ತದೆ. ಆದರೆ ಟ್ರಂಪ್ ಯಾವುದೇ ಅಂತಾರಾಷ್ಟ್ರೀಯ ಒಪ್ಪಂದಗಳಿಗೆ ಬೆಲೆ ಕೊಡದೆ ತಮ್ಮ ಇಷ್ಟಾನಿಷ್ಟಗಳಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಈಗಾಗಲೇ ಹವಾಮಾನ ವೈಪರೀತ್ಯ ಕುರಿತ ಪ್ಯಾರಿಸ್ ಒಪ್ಪಂದದಿಂದ ಹೊರಹೋಗುವುದಾಗಿ ಪ್ರಕಟಿಸಿದ್ದಾರೆ. ಟ್ರಾನ್ಸ್‌ಫೆಸಿಪಿಕ್ ಪಾರ್ಟನರ್‍ಷಿಪ್ ಒಪ್ಪಂದದಿಂದಲೂ ಹೊರಬಂದಿದ್ದಾರೆ. ಅಂತಾರಾಷ್ಟ್ರೀಯ ಒಪ್ಪಂದಗಳಷ್ಟೇ ಅಲ್ಲ ಕ್ಯೂಬಾ ಜೊತೆಗಿನ ಒಪ್ಪಂದ ರದ್ದು ಮಾಡಿದ್ದಾರೆ. ಒಬಾಮಾ ಕೇರ್ ಆರೋಗ್ಯ ಸೇವಾ ಕಾರ್ಯಕ್ರಮವನ್ನೂ ರದ್ದು ಮಾಡಿದ್ದಾರೆ. ಹಿಂದಿನ ಬರಾಕ್ ಒಬಾಮಾ ಸರ್ಕಾರ ಜಾರಿಗೆ ತಂದಿರುವ ಕಾರ್ಯಕ್ರಮಗಳನ್ನು ಒಂದೊಂದಾಗಿ ರದ್ದು ಮಾಡುತ್ತಿದ್ದಾರೆ. ವೈಯ್ಯಕ್ತಿಕ ಒಲವು ನಿಲುವು ಆಧರಿಸಿ ಅವರು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಆಡಳಿತ ರಿಪಬ್ಲಿಕನ್ ಪಕ್ಷದಲ್ಲಿಯೇ ಸಮಾದಾನಕ್ಕೆ ಕಾರಣವಾಗಿದೆ. ಆದರೆ ಅವರು ಅದಾವುದಕ್ಕೂ ಗಮನಕೊಡದೆ ತಮಗೆ ಇಷ್ಟಬಂದ ಹಾಗೆ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ.

ಟ್ರಂಪ್ ಅವರ ನಿರ್ಧಾರದ ಕೆಟ್ಟ ಪರಿಣಾಮಗಳು ಊಹೆಗೂ ಮೀರಿದ್ದು. ಅಮೆರಿಕ ಹೇರುವ ನಿರ್ಬಂಧಗಳು ಎಲ್ಲ ರೀತಿಯಲ್ಲಿ ಇತರ ದೇಶಗಳ ಮೇಲೆ ಪರಿಣಾಮ ಬೀರುತ್ತವೆ. ತನ್ನ ಜೊತೆ ಮೈತ್ರಿ ಮತ್ತು ವಾಣಿಜ್ಯ ಬಾಂಧವ್ಯ ಇಟ್ಟುಕೊಂಡಿರುವ ದೇಶಗಳು ಇರಾನ್ ಜೊತೆಗೆ ಬಾಂಧವ್ಯ ಬೆಳೆಸುವಂತಿಲ್ಲ ಎಂಬ ನಿರ್ಬಂಧವನ್ನು ಅಮೆರಿಕ ವಿಧಿಸಲಿದೆ. ಅಕಸ್ಮಾತ್ ಬಾಂಧವ್ಯ ಬೆಳೆಸಿದರೆ ಅಮೆರಿಕದ ಮೈತ್ರಿ ಕಳೆದುಕೊಳ್ಳಬೇಕಾಗುತ್ತದೆ ಅಥವಾ ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ. ಅಮೆರಿಕ ಇಂಥ ನಿರ್ಬಂಧ ವಿಧಿಸುವುದರಿಂದ ಜಾಗತಿಕವಾಗಿ ದೊಡ್ಡ ಸಮಸ್ಯೆಯೇ ಎದುರಾಗುತ್ತದೆ. ಫ್ರಾನ್ಸ್, ಜರ್ಮನಿ ಮುಂತಾದ ದೇಶಗಳು ಒಪ್ಪಂದವನ್ನು ರದ್ದು ಮಾಡದಿದ್ದರೂ ಇಂಥ ನಿರ್ಬಂಧಗಳ ಪರಿಣಾಮಗಳು ಅವುಗಳ ಮೇಲೆ ಆಗುತ್ತದೆ.

ಇರಾನ್ ತೈಲ ಮತ್ತು ಅನಿಲ ಸಂಪನ್ಮೂಲ ದೇಶ. ತೈಲ ಮಾರುಕಟ್ಟೆಗೆ ಅಪಾರ ಪ್ರಮಾಣದಲ್ಲಿ ಇರಾನ್ ತೈಲ ಪೂರೈಸುತ್ತದೆ. ನಿರ್ಬಂಧಗಳು ಜಾರಿಗೆ ಬಂದರೆ ತೈಲ ಪೂರೈಕೆ ತಗುತ್ತದೆ. ಸಹಜವಾಗಿ ಜಾಗತಿಕವಾಗಿ ತೈಲಕೊರತೆ ತಲೆದೋರಬಹುದು. ಇದರಿಂದಾಗಿ ತೈಲದ ಬೆಲೆ ಏರಬಹುದು. ಭಾರತದ ಉದಾಹರಣೆಯನ್ನೇ ನೋಡಬಹುದು. ಭಾರತ ಅಪಾರ ಪ್ರಮಾಣದಲ್ಲಿ ಇರಾನ್‍ನಿಂದ ತೈಲ ಪಡೆಯುತ್ತದೆ. ನಿರ್ಬಂಧಗಳು ಜಾರಿಗೆ ಬಂದರೆ ಭಾರತಕ್ಕೆ ಪೂರೈಕೆಯಾಗುವ ತೈಲದಲ್ಲಿ ಕೊರತೆ ಬೀಳಬಹುದು. ಮೊದಲೇ ತೈಲಬೆಲೆ ಏರಿಕೆ. ಜೊತೆಗೆ ಕೊರತೆ ಬೇರೆ. ಭಾರತ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಬಹುದು. ಇರಾನ್ ವಿಚಾರದಲ್ಲಿ ಈಮೊದಲು ಜಾರಿಯಲ್ಲಿದ್ದ ನಿರ್ಬಂಧಗಳನ್ನು ನಿವಾರಿಸುಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿತ್ತು. ಅದೇ ದಾರಿ ಮುಂದುವರಿಸುವ ಅವಕಾಶ ಮತ್ತೆ ದೊರೆತರೆ ಮಾತ್ರ ಭಾರತ ಸಂಕಷ್ಟಕ್ಕೆ ಒಳಗಾಗದಿರಬಹುದು. ಅಮೆರಿಕದ ಜೊತೆಗಿನ ಬಾಂಧವ್ಯವನ್ನು ಈ ಬೆಳವಣಿಗೆ ಅವಲಂಬಿಸಿದೆ. ಇದೇನೇ ಇದ್ದರೂ ಅಮೆರಿಕದ ನಿರ್ಧಾರ ಜಾಗತಿಕವಾಗಿ ದೊಡ್ಡ ಬಿಕ್ಕಟ್ಟನ್ನು ಸೃಷ್ಟಿಸುವುದಂತೂ ಖಚಿತ.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More