ಮಗ್ಗುಲ ಸವಾಲಾದ ನೇಪಾಳದ ಜೊತೆ ಬಾಂಧವ್ಯ ಸುಧಾರಿಸಲು ಮೋದಿ ಯತ್ನ

ನೇಪಾಳದೊಂದಿಗೆ ಬಾಂಧವ್ಯ ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯ ಕಸರತ್ತು ಮಾಡಲು ಪ್ರಧಾನಿ ಮೋದಿ ಮುಂದಾಗಿದ್ದಾರೆ. ಈ ಭೇಟಿಯಿಂದ ಉಭಯ ದೇಶಗಳ ನಡುವಣ ಭಿನ್ನಾಭಿಪ್ರಾಯಗಳೆಲ್ಲ ಬಗೆಹರಿದವು ಎಂದು ಹೇಳುವುದು ಕಷ್ಟವಾದರೂ ಆರೋಗ್ಯಕರ ಹೆಜ್ಜೆಯಂತೂ ಹೌದು

ಭಾರತದ ದೊಡ್ಡಣ್ಣನ ಧೋರಣೆಯನ್ನು ಮೊದಲಿನಿಂದ ವಿರೋಧಿಸಿಕೊಂಡು ಬಂದಿದ್ದ ಕಮ್ಯುನಿಸ್ಟರೇ ಈಗ ನೇಪಾಳದ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಮೊದಲೇ ನೇಪಾಳ ಕಮ್ಯುನಿಸ್ಟರು ಚೀನಾದ ಜೊತೆ ಉತ್ತಮ ಮೈತ್ರಿ ಹೊಂದಿದ್ದಾರೆ. ಬಾಂಧವ್ಯ ಸುಧಾರಿಸಿಕೊಳ್ಳುವ ಉದ್ದೇಶದಿಂದ ಭಾರತವು ಚೀನಾ ಜೊತೆ ಹಲವು ಬಾರಿ ಮಾತುಕತೆ ನಡೆಸಿದೆ. ಆದರೂ ಚೀನಾದ ಜೊತೆಗಿನ ಭಾರತದ ಬಾಂಧವ್ಯ ಸದಾ ಸಂಶಯಾಸ್ಪದವಾಗಿಯೇ ಇದೆ. ಇಂಥ ಪರಿಸ್ಥಿತಿಯಲ್ಲಿ ನೆರೆಯ ನೇಪಾಳದಲ್ಲಿ ಕಮ್ಯುನಿಸ್ಟರು ಅಧಿಕಾರಕ್ಕೆ ಬಂದಿರುವುದು ಭಾರತಕ್ಕೆ ನುಂಗಲಾರದ ತುತ್ತಾಗಿದೆ. ಅದರಲ್ಲಿಯೂ ಈ ಬೆಳವಣಿಗೆ ಕೇಂದ್ರದಲ್ಲಿನ ಬಿಜೆಪಿ ಸರ್ಕಾರಕ್ಕೆ ತೀವ್ರ ಮುಜುಗರದ ವಿಚಾರ. ನೇಪಾಳವನ್ನು ಏಕೈಕ ಹಿಂದೂ ರಾಷ್ಟ್ರವೆಂದು ಬಿಜೆಪಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿತ್ತು; ಇಂಥ ಕಡೆ ಕಮ್ಯುನಿಸ್ಟರು ಅಧಿಕಾರದ ಗದ್ದುಗೆ ಹಿಡಿದಿರುವುದು ಭಾರತದ ನರೇಂದ್ರ ಮೋದಿ ಸರ್ಕಾರಕ್ಕೆ ಒಂದು ದೊಡ್ಡ ಸವಾಲೇ ಸರಿ. ಅಲ್ಲಿನ ಭಾರತದ ಪರವಾದಿಗಳ ಜೊತೆ ಕೈಜೋಡಿಸಿದ ಭಾರತ ಸರ್ಕಾರ, ಹೊಸ ಸಂವಿಧಾನ ಜಾರಿಯನ್ನು ತಡೆಯುವ ಪ್ರಯತ್ನವನ್ನೂ ಹಿಂದೆ ನಡೆಸಿತ್ತು, ಅದರಲ್ಲಿ ಭಾಗಶಃ ಯಶಸ್ವಿಯೂ ಆಗಿತ್ತು. ಇದೀಗ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ನೇಪಾಳಕ್ಕೆ ಭೇಟಿ ನೀಡಿ, ಕಮ್ಯುನಿಸ್ಟ್ ಪ್ರಧಾನಿ ಕೆ ಪಿ ಶರ್ಮ ಓಲಿ ಮತ್ತಿತರ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ಬಾಂಧವ್ಯ ವೃದ್ಧಿಗೆ ಯತ್ನಿಸಿದ್ದಾರೆ.

ನೇಪಾಳ ಭೇಟಿಯ ಸಂದರ್ಭದಲ್ಲಿ ಅಲ್ಲಿನ ಭಾರತೀಯ ಬೆಂಬಲಿಗರನ್ನು ಓಲೈಸುವ ಯತ್ನವಾಗಿ ಪಶುಪತಿನಾಥ ಮತ್ತು ಮುಕ್ತಿನಾಥ ದೇವಾಲಯಗಳಿಗೆ ಹೋಗಿ ಪೂಜೆ ಸಲ್ಲಿಸಿದ್ದಾರೆ. ಜನಕಪುರದಿಂದ (ಸೀತೆ ಹುಟ್ಟಿದಳು ಎನ್ನಲಾದ ನಗರ) ಶ್ರೀರಾಮನ ಜನ್ಮಸ್ಥಾನವೆನ್ನಲಾದ ಭಾರತದ ಅಯೋಧ್ಯೆ ನಡುವೆ ನೇರ ಬಸ್‍ ಸಂಪರ್ಕ ಕಲ್ಪಿಸುವ ಯೋಜನೆ ಪ್ರಕಟಿಸಿದ್ದಾರೆ. ಇದು ರಾಮಾಯಣ ಯಾತ್ರೆಯೆಂಬ ಉಭಯ ದೇಶಗಳ ನಡುವಣ ಪ್ರವಾಸ ಕಾರ್ಯಕ್ರಮದ ಅಂಗವಾಗಿ ರೂಪಿಸಲಾಗಿದೆ. ಈ ಯಾತ್ರೆ ಅಯೋಧ್ಯೆ, ಸೀತಾಮರಾಹಿ, ಚಿತ್ರಕೂಟ, ಮಹೇಂದ್ರ ಗಿರಿ, ನಾಸಿಕ್, ಭದ್ರಾಚಲಂ, ಹಂಪಿ ಮತ್ತು ರಾಮೇಶ್ವರದ ನಡುವೆ ಬಸ್‍ ಸಂಚಾರ ವ್ಯವಸ್ಥೆ ಕಲ್ಪಿಸಲಿದೆ.

ಧಾರ್ಮಿಕವಾದ ಈ ಕಾರ್ಯಕ್ರಮಗಳ ಜೊತೆಗೆ ಉಭಯ ದೇಶಗಳ ಜಂಟಿ ಸಹಯೋಗದಲ್ಲಿ ನಿರ್ಮಿಸಲಾದ 900 ಮೆಗಾವ್ಯಾಟ್ ಸಾಮರ್ಥ್ಯದ ಅರುಣ್ ಜಲವಿದ್ಯುತ್ ಯೋಜನೆಯನ್ನು ಓಲಿ ಮತ್ತು ಮೋದಿ ಉದ್ಘಾಟಿಸಿದ್ಧಾರೆ. 4600 ಮೆಗಾವ್ಯಾಟ್ ಸಾಮರ್ಥ್ಯದ ಪಂಚೇಶ್ವರ್ ವಿದ್ಯುತ್‍ಯೋಜನೆ ಜಾರಿ ಕುರಿತ ಮಾತುಕತೆ ಮುಂದುವರಿಸಲಾಗಿದೆ. ವಿದ್ಯುತ್ ಸಂಪರ್ಕವಷ್ಟೇ ಅಲ್ಲ ನೆಲ, ಜಲ, ತೈಲಮಾರ್ಗಗಳನ್ನೂ ನಿರ್ಮಿಸಲು ಉಭಯ ದೇಶಗಳು ಯೋಚಿಸಿವೆ.

ಇದನ್ನೂ ಓದಿ : ಕಮ್ಯುನಿಸ್ಟರ ತೆಕ್ಕೆಗೆ ಹೋದ ನೇಪಾಳ ಈಗ ಭಾರತಕ್ಕೆ ದೊಡ್ಡ ಸವಾಲಾಗಿದೆ

ಭಾರತ ಮತ್ತು ನೇಪಾಳ ಗಡಿ ನಿರ್ಬಂಧಗಳಿಲ್ಲದ ಮುಕ್ತ ಪ್ರದೇಶ. ಯಾವುದೇ ವೀಸಾ ಇಲ್ಲದೆ ಎರಡೂ ದೇಶಗಳ ಜನರು ಎರಡೂ ದೇಶಗಳಿಗೆ ಭೇಟಿ ನೀಡಬಹುದಾಗಿದೆ. ಆದರೆ ಇತ್ತಿಛಿನ ವರ್ಷಗಳಲ್ಲಿ ದುಷ್ಕರ್ಮಿಗಳು ಈ ಮುಕ್ತ ಪ್ರದೇಶವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲು ಉಭಯ ನಾಯಕರು ನಿರ್ಧರಿಸಿದ್ದಾರೆ. ಭಾರತದ ವಿರುದ್ಧದ ಚಟುವಟಕೆಗೆ ತನ್ನ ನೆಲ ದುರುಪಯೋಗಮಾಡಿಕೊಳ್ಳಲು ಯಾವುದೇ ಅನ್ಯ ಶಕ್ತಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ನೇಪಾಳ ಭರವಸೆ ನೀಡಿರುವುದು ಪ್ರಮುಖವಾದ ಬೆಳವಣಿಗೆ. ಉಭಯ ದೇಶಗಳ ನಡುವೆ ಇರುವ ಎಲ್ಲ ಭಿನ್ನಾಭಿಉಪ್ರಾಯಗಳನ್ನು ಬರುವ ಸೆಪ್ಟೆಂಬರ್ ವೇಳೆಗೆ ಬಗೆಹರಿಸಿಕೊಳ್ಳುವ ನಿರ್ಧಾರವನ್ನು ಉಭಯ ನಾಯಕರು ತೆಗೆದುಕೊಂಡಿದ್ದಾರೆ.

ಪ್ರಾದೇಶಿಕ ಅಭಿವೃದ್ಧಿಗಾಗಿ ದಕ್ಷಿಣ ಏಷ್ಯಾ ದೇಶಗಳ ಒಕ್ಕೂಟದ (ಸಾರ್ಕ್) ಅಧ್ಯಕ್ಷತೆ ಈಗ ನೇಪಾಳದ ಕೈಯ್ಯಲ್ಲಿದೆ. ಸಾರ್ಕ್‍ನ 19 ನೇ ಶೃಂಗ ಸಭೆ 2016ರಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್‍ನಲ್ಲಿ ನಡೆಯಿತು. ಈ ಶೃಂಗ ಸಭೆಗೆ ಮೊದಲು ಪಾಕಿಸ್ತಾನ ಪ್ರಚೋದಿತ ಉಗ್ರವಾದಿಗಳು ಜಮ್ಮು ಕಾಶ್ಮೀರದ ಉರಿಯಲ್ಲಿರುವ ಸೇನಾ ಕ್ಯಾಂಪ್‍ಮೇಲೆ ಮಾರಕ ದಾಳಿ ನಡೆಸಿದರು. ಇದನ್ನು ಖಂಡಿಸಿ ಭಾರತ ಸಾರ್ಕ್ ಸಭೆಯಲ್ಲಿ ಭಾಗವಹಿಸಲಿಲ್ಲ. ಆ ನಂತರ ಸಾರ್ಕ್ ದೇಶಗಳ ಜೊತೆ ಚರ್ಚೆ ನಡೆದಿಲ್ಲ. ಏಕೆಂದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಉತ್ತಮ ಸಂಬಂಧವಿಲ್ಲ. ಈ ವಿಚಾರ ಉಭಯ ದೇಶಗಳ ನಾಯಕರ ಮಾತುಕತೆಯಲ್ಲಿ ಚರ್ಚೆಗೆ ಬರುವುದೆಂದು ನಿರೀಕ್ಷಿಸಲಾಗಿತ್ತು. ಆದರೆ ಈ ವಿಚಾರ ಚರ್ಚೆಗೆ ಬರಲಿಲ್ಲ ಎಂದು ಹೇಳಲಾಗಿದೆ. ಮೋದಿ ಅವರ ಈ ಭೇಟಿಯ ಸಂದರ್ಭದಲ್ಲಿ ಉಭಯ ದೇಶಗಳ ನಡುವಣ ಭಿನ್ನಾಭಿಪ್ರಾಯಗಳೆಲ್ಲಾ ಬಗೆಹರಿದವು ಎಂದು ಹೇಳುವುದು ಕಷ್ಟವಾದರೂ ಕನಿಷ್ಠ ಈ ಭೇಟಿಯಿಂದ ಉಭಯ ನಾಯಕರ ನಡುವೆ ಉತ್ತಮ ಸ್ನೇಹ ಮತ್ತು ವಿಶ್ವಾಸ ಬೆಳೆಯಲು ಕಾರಣವಾಗಿದೆ ಎಂದು ಹೇಳಬಹುದು. ಎರಡೂ ದೇಶಗಳು ಉತ್ತಮ ಮೈತ್ರಿ ಸಾಧಿಸುವಲ್ಲಿ ಇನ್ನೂ ದೂರ ಸಾಗಬೇಕಿದೆ.

ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
ನಿಕ್ಕಿ ಹ್ಯಾಲಿ ರಾಜೀನಾಮೆ ಹಿಂದೆ ಇರುವ ಕಾರಣವೇನಿರಬಹುದು?
ರಷ್ಯಾದಿಂದ ಎಸ್400 ಕ್ಷಿಪಣಿ ಖರೀದಿ ಒಪ್ಪಂದ; ಟ್ರಂಪ್ ಕೆಂಗಣ್ಣಿಗೆ ಗುರಿಯಾಗಲಿದೆ ಭಾರತ
Editor’s Pick More