ಮತ್ತೊಂದು ಶಾಕ್ ಕೊಟ್ಟ ಟ್ರಂಪ್; ಅಮೆರಿಕ ರಾಯಭಾರ ಕಚೇರಿ ಜರೂಸಲೆಂಗೆ!

ಇಸ್ರೇಲ್‌ನ ಟೆಲ್ ಅವೀವ್ ನಗರದಲ್ಲಿದ್ದ ಅಮೆರಿಕದ ರಾಯಭಾರ ಕಚೇರಿಯನ್ನು ವಿವಾದಾತ್ಮಕ ಜರೂಸಲೆಂ ನಗರಕ್ಕೆ ಸೋಮವಾರ ಸ್ಥಳಾಂತರಿಸಲಾಗುವುದು. ಈ ಬೆಳವಣಿಗೆ ಸಹಜವಾಗಿಯೇ ಪ್ಯಾಲೆಸ್ಟೇನ್ ಮತ್ತು ಅರಬ್ ದೇಶಗಳನ್ನು ಕೆರಳಿಸಿದೆ. ಹಾಗಾಗಿ ಮತ್ತೆ ಹಿಂಸೆ ತಲೆದೋರುವ ಸಾಧ್ಯತೆ ಸೃಷ್ಟಿಯಾಗಿದೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರತಿ ನಿರ್ಧಾರವೂ ಕೋಲಾಹಲಕ್ಕೆ ಕಾರಣವಾಗುತ್ತಿದೆ. ಇರಾನ್ ಜೊತೆಗಿನ ಪರಮಾಣು ಒಪ್ಪಂದದಿಂದ ಹೊರಬರುವುದರಿಂದ ಹಿಡಿದು, ಟೆಲ್ ಅವೀವ್‌ನಲ್ಲಿದ್ದ ಅಮೆರಿಕದ ರಾಯಭಾರ ಕಚೇರಿಯನ್ನು ವಿವಾದಾತ್ಮಕ ಜರೂಸಲೆಂ ನಗರಕ್ಕೆ ಸ್ಥಳಾಂತರಿಸುವ ನಿರ್ಧಾರದವರೆಗೆ ಎಲ್ಲವೂ ವಿವಾದ ಎಬ್ಬಿಸಿವೆ. ಅವರ ನಿರ್ಧಾರಗಳಿಂದಾಗಿ ಅಂತಾರಾಷ್ಟ್ರೀಯ ಒಪ್ಪಂದಗಳು ಮುರಿದುಬೀಳುತ್ತಿವೆ, ಪರಸ್ಪರ ವಿಶ್ವಾಸದ ಅಂತಾರಾಷ್ಟ್ರೀಯ ವಾತಾವರಣವೇ ಹಾಳಾಗುತ್ತಿದೆ. ತಮ್ಮ ನಿರ್ಧಾರವೇ ಸರಿ ಎನ್ನುವ ಧೋರಣೆಯಿಂದ ಅವರು ಮುನ್ನುಗ್ಗುತ್ತಿದ್ದು, ಜರೂಸಲೆಂ ಕುರಿತ ಅವರ ನಿರ್ಧಾರ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕಾಣಿಸಿಕೊಳ್ಳಲು ಕಾರಣವಾಗಿದೆ.

ಜರೂಸಲೆಂ ನಗರವನ್ನು ಇಸ್ರೇಲ್ ಆಕ್ರಮಿಸಿಕೊಂಡಿದೆ ಎನ್ನುವ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ಜರೂಸಲೆಂ ನಗರ ತಮ್ಮದು ಎಂದು ವಾದಿಸುತ್ತ ಅದನ್ನು ರಾಜಧಾನಿಯನ್ನಾಗಿ ಮಾಡಿಕೊಳ್ಳುವುದಾಗಿ ಇಸ್ರೇಲ್ ಹೇಳುತ್ತ ಬಂದಿದೆ. ಆದರೆ, ಪ್ಯಾಲೆಸ್ಟೇನಿಯನ್ನರೂ ಜೆರೂಸಲೆಂ ನಗರ ತಮ್ಮದೆಂದು, ತಮ್ಮ ಉದ್ದೇಶಿತ ಪ್ರತ್ಯೇಕ ದೇಶದ ರಾಜಧಾನಿ ಅದೇ ಎಂದು ಘೋಷಿಸಿದ್ದಾರೆ. ಈ ಪ್ರಶ್ನೆ ಹಲವು ಬಾರಿ ವಿಶ್ವಸಂಸ್ಥೆಯ ಮುಂದೆ ಬಂದಿದೆ. ಅದೊಂದು ವಿವಾದಿತ ನಗರವೆಂದು ಪರಿಗಣಿಸಲಾಗಿದೆ. ವಿಶ್ವದ ಯಾವ ಪ್ರಮುಖ ದೇಶವೂ ಜರೂಸಲೆಂ ನಗರ ಇಸ್ರೇಲ್‌ನ ನಗರ ಎಂದು ಘೋಷಿಸಿಲ್ಲ. ಅಷ್ಟೇ ಏಕೆ, ಇಸ್ರೇಲ್ ಅದು ತಮ್ಮ ರಾಜಧಾನಿ ಎಂದು ಹೇಳುತ್ತಿದೆಯಾದರೂ ಅಧಿಕೃತವಾಗಿ ರಾಜಧಾನಿ ಎಂದು ಘೋಷಿಸಿಲ್ಲ. ಇಂಥ ಹಿನ್ನೆಲೆ ಇದ್ದರೂ ಡೊನಾಲ್ಡ್ ಟ್ರಂಪ್ ಏಕಾಏಕಿ ಜರೂಸಲೆಂ ನಗರಕ್ಕೆ ಇಸ್ರೇಲ್‌ನ ರಾಜಧಾನಿ ಎಂಬ ಮಾನ್ಯತೆ ನೀಡಿ ರಾಯಭಾರ ಕಚೇರಿಯನ್ನು ಅಲ್ಲಿಗೆ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ. ಇಂಥ ನಿರ್ಧಾರ ತೆಗೆದುಕೊಳ್ಳಲು ಟ್ರಂಪ್ ಮತ್ತು ಇಸ್ರೇಲ್‌ನ ಪ್ರಧಾನಿ ನೇತಾನ್ಯಹು ಮಧ್ಯೆ ಇರುವ ಸ್ನೇಹವೇ ಕಾರಣ. ಚುನಾವಣಾ ಪ್ರಚಾರ ಕಾಲದಲ್ಲಿಯೇ ಟ್ರಂಪ್ ಅವರು ಈ ಸಂಬಂಧವಾದ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದರು. ಚುನಾವಣೆ ಕಾಲದಲ್ಲಿ ನೀಡಿದ್ದ ಆಶ್ವಾಶನೆಯನ್ನು ಈಡೇರಿಸುತ್ತಿರುವುದಾಗಿ ಟ್ರಂಪ್ ಈಗ ಘೋಷಿಸಿಕೊಂಡಿದ್ದಾರೆ. ಅಮೆರಿಕದ ರಾಯಬಾರ ಕಚೇರಿ ಈ ಮೊದಲು ಟೆಲ್ ಅವೀವ್ ನಗರದಲ್ಲಿತ್ತು. ಈಗ ಸ್ಥಳಾಂತರ ಆಗಲಿರುವ ಜಾಗದಲ್ಲಿ ವೀಸಾ ವಿತರಣೆ ಸೇರಿದಂತೆ ಇತರ ಕೆಲವು ರಾಜತಾಂತ್ರಿಕ ಕೆಲಸಗಳು ಮಾತ್ರ ನಡೆಯುತ್ತಿದ್ದವು. ಸೋಮವಾರದಿಂದ ಪೂರ್ಣವಾಗಿ ರಾಯಭಾರ ಕಚೇರಿ ಅಲ್ಲಿಗೆ ಸ್ಥಳಾಂತರಗೊಳ್ಳಲಿವೆ. ವಿಶ್ವದ ಎಲ್ಲ ಮುಖ್ಯ ದೇಶಗಳ ರಾಯಭಾರ ಕಚೇರಿಗಳು ಟೆಲ್ ಅವೀವ್‌ನಲ್ಲಿಯೇ ಇವೆ.

ಟ್ರಂಪ್ ಅವರ ಈ ನಡೆಯನ್ನು ಪ್ರಚೋದನಕಾರಿ ಎಂದು ಮಧ್ಯಪ್ರಾಚ್ಯದ ಅರಬ್ ದೇಶಗಳು ಪ್ರತಿಕ್ರಿಯೆ ನೀಡಿವೆ. ಪ್ಯಾಲೆಸ್ಟೇನ್ ಜನರಂತೂ ಕುಪಿತರಾಗಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಟ್ರಂಪ್ ಅವರು ತಮ್ಮ ಈ ನಿರ್ಧಾರ ಪ್ರಕಟಿಸಿದ ದಿನದಿಂದಲೇ ಪ್ಯಾಲೆಸ್ಟೇನ್ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಸ್ರೇಲ್ ಜನರ ವಿರುದ್ಧ ಆತ್ಮಹತ್ಯಾ ದಾಳಿಗಳು ನಡೆಯುತ್ತಿವೆ, ಹತ್ತಾರು ಜನರು ಸತ್ತಿದ್ದಾರೆ. ೧೯೪೮ರಲ್ಲಿ ಇಸ್ರೇಲ್ ದೇಶ ರಚನೆಗೆ ವಿಶ್ವಸಂಸ್ಥೆ ಒಪ್ಪಿಗೆ ನೀಡಿತು. ಇಸ್ರೇಲ್ ದೇಶದ ಪ್ರತ್ಯೇಕ ಅಸ್ತಿತ್ವವನ್ನೇ ಪ್ಯಾಲೆಸ್ಟೇನ್ ಜನರು ಒಪ್ಪಲಿಲ್ಲ. ಹೀಗಾಗಿ, ಪ್ರತ್ಯೇಕ ಪ್ಯಾಲೆಸ್ಟೇನ್ ದೇಶ ರಚನೆ ಮಾತ್ರ ಕನಸಾಗಿಯೇ ಉಳಿಯಿತು. ಪ್ಯಾಲೆಸ್ಟೇನ್ ಜನರ ಹಲವು ದಶಕಗಳ ಹೋರಾಟದ ನಂತರ ಪ್ರತ್ಯೇಕ ದೇಶ ರಚನೆಯೊಂದರಿಂದ ಮಾತ್ರ ಈ ವಿವಾದ ಬಗೆಹರಿಸಲು ಸಾಧ್ಯ ಎನ್ನುವುದನ್ನು ವಿಶ್ವಸಂಸ್ಥೆ ಒಪ್ಪಿದೆ. ಪ್ಯಾಲೆಸ್ಟೇನ್ ಜನರ ನಾಯಕತ್ವವೂ ಇದನ್ನು ಈಗ ಒಪ್ಪಿದೆ. ಆದರೆ, ಅದು ಸಾಧ್ಯವಾಗುವಂಥ ವಾತಾವರಣವೇ ನಿರ್ಮಾಣವಾಗುತ್ತಿಲ್ಲ. ಟ್ರಂಪ್ ಅವರ ನಿರ್ಧಾರದ ಘೋರ ಪರಿಣಾಮಗಳನ್ನು ಈಗಲೇ ಊಹಿಸುವುದು ಕಷ್ಟ. ಆದರೆ, ಯುದ್ಧದ ಕಾರ್ಮೋಡಗಳು ಈಗಾಗಲೇ ಕಾಣಿಸಿಕೊಳ್ಳುತ್ತಿರುವುದು ಆಘಾತಕಾರಿ.

ಪರಮಾಣು ತಂತ್ರಜ್ಞಾನ ಕುರಿತಂತೆ ಇರಾನ್ ಜೊತೆ ವಿಶ್ವದ ಪ್ರಮುಖ ದೇಶಗಳು ಒಪ್ಪಂದ ಮಾಡಿಕೊಂಡಿದ್ದವು. ಅಮೆರಿಕವೂ ಆ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದರೆ, ಈ ಒಪ್ಪಂದ ಸರಿಯಿಲ್ಲ ಎಂದು ಟ್ರಂಪ್ ತಕರಾರು ಎತ್ತಿ, ಕೊನೆಗೆ ಆ ಒಪ್ಪಂದದಿಂದ ಹೊರಬರುವ ನಿರ್ಧಾರ ಪ್ರಕಟಿಸಿದ್ದಾರೆ. ಇದರಿಂದ ಇರಾನ್ ಕುಪಿತಗೊಂಡಿದ್ದು, ಪರಮಾಣು ಕಾರ್ಯಕ್ರಮವನ್ನು ಮುಂದುವರಿಸುವುದಾಗಿ ಘೋಷಿಸಿದೆ. ಇರಾನ್ ಮತ್ತು ಇಸ್ರೇಲ್ ನಡುವೆ ಬಧ್ಧ ದ್ವೇಷ ಇದೆ. ಅಮೆರಿಕವು ಇರಾನ್ ಪರಮಾಣು ಒಪ್ಪಂದದಿಂದ ಹೊರಬರುವ ಮೊದಲೇ ಇಸ್ರೇಲ್ ಪ್ರಧಾನಿ ನೇತಾನ್ಯಹು ಅವರು ಟ್ರಂಪ್ ಅವರನ್ನು ಹಲವು ಬಾರಿ ಭೇಟಿ ಮಾಡಿ, ಇರಾನ್ ದೇಶ ಒಪ್ಪಂದದ ನಂತರವೂ ಪರಮಾಣು ಬಾಂಬ್ ನಿರ್ಮಾಣ ಕಾರ್ಯಕ್ರಮ ರಹಸ್ಯವಾಗಿ ಮುಂದುವರಿಸುತ್ತಿದೆ ಎಂದು ಕಿವಿ ಊದಿದ್ದರು. ಇದಕ್ಕೆ ಟ್ರಂಪ್ ಬೆಲೆ ಕೊಟ್ಟಂತೆ ಕಾಣುತ್ತದೆ.

ಇದನ್ನೂ ಓದಿ : ಇಸ್ರೇಲ್ ಜೊತೆಗಿನ ವಿಶೇಷ ಮೈತ್ರಿ ಭಾರತಕ್ಕೆ ಲಾಭವೋ, ನಷ್ಟವೋ?

ಇದರಿಂದ ನೇತಾನ್ಯಹು ರೋಮಾಂಚನಗೊಂಡು ಇರಾನ್ ವಿರುದ್ಧ ಕಾಲು ಕೆರೆದು ಮಿಲಿಟರಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಸಿರಿಯಾದ ಅಧ್ಯಕ್ಷ ಅಸ್ಸಾದ್‌ಗೆ ಇರಾನ್ ಬೆಂಬಲಿಸುತ್ತಿದೆ. ಸಿರಿಯಾದಲ್ಲಿನ ಐಎಸ್ ವಿರುದ್ಧದ ಯುದ್ಧದಲ್ಲಿ ಇರಾನ್ ಭಾಗವಹಿಸುತ್ತಿದೆ. ಸಿರಿಯಾದಲ್ಲಿ ಇರಾನ್ ಮಿಲಿಟರಿ ನೆಲೆಗಳಿವೆ. ಕೆಲವು ದಿನಗಳ ಹಿಂದೆಯಷ್ಟೇ ಅವುಗಳ ಮೇಲೆ ಇಸ್ರೇಲ್ ಮಿಲಿಟರಿ ವಿಮಾನಗಳು ಬಾಂಬ್ ದಾಳಿ ಮಾಡಿವೆ. ಸಹಜವಾಗಿಯೇ ಇರಾನ್ ಕೂಡ ಸಂಘರ್ಷಕ್ಕೆ ಇಳಿದಿದೆ. ಜೋರ್ಡಾನ್‌ನ ಗೋಲನ್ ದಿಬ್ಬ ಪ್ರದೇಶವನ್ನು ಇಸ್ರೇಲ್ ೧೯೬೭ರ ಅರಬ್ ಯುದ್ಧದಲ್ಲಿ ವಶಮಾಡಿಕೊಂಡು ಮಿಲಿಟರಿ ನೆಲೆಗಳನ್ನು ಸ್ಥಾಪಿಸಿದೆ. ಈ ಪ್ರದೇಶ ಸಿರಿಯಾದ ನೆರೆಯಲ್ಲಿಯೇ ಇದ್ದು, ಆ ನೆಲೆಗಳ ಮೇಲೆ ಇರಾನ್ ವಾಯುಪಡೆಗಳು ಕ್ಷಿಪಣಿ ದಾಳಿ ನಡೆಸಿವೆ. ಈ ಸಂಘರ್ಷವನ್ನು ಯಾವ ದೇಶ ಮೊದಲು ಆರಂಭಿಸಿತು ಎನ್ನುವ ಬಗ್ಗೆ ಭಿನ್ನ ಅಭಿಪ್ರಾಯಗಳಿವೆ. ಇದೇನೇ ಇದ್ದರೂ, ಇಸ್ರೇಲ್ ಕುರಿತ ಟ್ರಂಪ್ ಅವರ ನಡೆ ಇರಾನ್ ಮತ್ತು ಇಸ್ರೇಲ್ ನಡುವೆ ಸಂಘರ್ಷ ಸಿಡಿಯಲು ಕಾರಣವಾಗಿರುವುದಂತೂ ನಿಜ.

ಈ ಬೆಳವಣಿಗೆಯ ಬಗ್ಗೆ ವಿಶ್ವದ ಪ್ರಬಲ ದೇಶಗಳು ಆತಂಕ ವ್ಯಕ್ತ ಮಾಡಿವೆ. ಯುದ್ಧ ದೊಡ್ಡದಾಗದಂತೆ ತಡೆಯಲು ರಷ್ಯಾ ಮುಂದಾಗಿದೆ. ವಿಶ್ವಸಂಸ್ಥೆ ಕೂಡ ಮಧ್ಯಸ್ಥಿಕೆ ವಹಿಸುವ ಸಾಧ್ಯತೆ ಇದೆ. ಈ ಮಧ್ಯೆ, ಅಮೆರಿಕವನ್ನು ಹೊರಗಿಟ್ಟು ಇರಾನ್ ಜೊತೆಗಿನ ಪರಮಾಣು ಒಪ್ಪಂದವನ್ನು ಮುಂದುವರಿಸಲು ಫ್ರಾನ್ಸ್, ಜರ್ಮನಿ, ರಷ್ಯಾ, ಚೀನಾ, ಬ್ರಿಟನ್ ಯೋಚಿಸುತ್ತಿವೆ. ಆದರೆ, ಅಮೆರಿಕವು ಇರಾನ್ ವಿರುದ್ಧ ವಿಧಿಸಲಿರುವ ನಿರ್ಬಂಧಗಳನ್ನು ನಿಭಾಯಿಸಿ ಒಪ್ಪಂದವನ್ನು ಮುಂದುವರಿಸುವ ಬಗೆ ಹೇಗೆ ಎಂಬ ವಿಚಾರದಲ್ಲಿ ಅಂತಿಮ ನಿರ್ಧಾರ ಆಗಿಲ್ಲ. ಟ್ರಂಪ್ ಅಧಿಕಾರಕ್ಕೆ ಬಂದ ಮೇಲೆ ಅವರು ತೆಗೆದುಕೊಂಡ ನಿರ್ಧಾರಗಳಿಂದಾಗಿ ವಿಶ್ವ ಅನುಸರಿಸಿಕೊಂಡು ಬರುತ್ತಿದ್ದ ವ್ಯವಸ್ಥೆಯೇ ಕುಸಿದುಬೀಳುವಂತಾಗಿದೆ. ಇದನ್ನು ನಿಭಾಯಿಸುವುದೇ ಈಗ ಸಮಸ್ಯೆ.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More