ಅಧಿಕಾರವಿದ್ದಾಗ ಸುಮ್ಮನಿದ್ದ ನವಾಜ್ ಈಗ ಭಾರತವನ್ನು ಓಲೈಸುತ್ತಿರುವುದೇಕೆ?

ಮುಂಬೈ ದಾಳಿಯ ಹಿಂದಿನ ಸತ್ಯ ಒಪ್ಪಿಕೊಳ್ಳುವ ಮೂಲಕ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಸೇನೆಯ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಹಾಗೆ ನೋಡಿದರೆ ನವಾಜ್ ಷರೀಫ್ ಪ್ರಧಾನಿಯಾಗಿದ್ದಾಗಲೇ ಮುಂಬೈ ದಾಳಿ ನಡೆಯಿತು. ಪ್ರಕರಣದ ತನಿಖೆ ನಡೆಯದಂತೆ ಅವರೇ ನೋಡಿಕೊಂಡರು

ಮುಂಬೈ ಮೇಲೆ ದಾಳಿ ನಡೆಸಿದವರು ಪಾಕಿಸ್ತಾನದ ಉಗ್ರವಾದಿಗಳು ಎಂದು ಹೇಳುವ ಮೂಲಕ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ವಿವಾದ ಸೃಷ್ಟಿಗೆ ಕಾರಣರಾಗಿದ್ದಾರೆ. ಪಾಕಿಸ್ತಾನದ ‘ಡಾನ್’ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಅವರು ನೀಡಿರುವ ಹೇಳಿಕೆಗಳು ಸತ್ಯವನ್ನು ಬಿಚ್ಚಿಟ್ಟಿವೆ. ಪಾಕಿಸ್ತಾನದ ಕಪಟ ನಾಟಕವನ್ನು ಬಯಲು ಮಾಡಿವೆ.

ಉಗ್ರಗಾಮಿಗಳು ಗಡಿ ದಾಟಿ ಮುಂಬೈಯಲ್ಲಿ 160ಕ್ಕೂ ಹೆಚ್ಚು ಜನರನ್ನು ಕೊಂದಂತಹ ಘಟನೆಗಳಿಗೆ ಪಾಕಿಸ್ತಾನ ಅವಕಾಶ ನೀಡಬೇಕೆ? ಒಂಬತ್ತು ವರ್ಷಗಳ ನಂತರವೂ ಆ ದಾಳಿಯ ತನಿಖೆ ಮುಗಿಯದಿರುವುದಕ್ಕೆ ಯಾರು ಕಾರಣರು ಎಂದು ಪ್ರಶ್ನಿಸಿರುವ ಷರೀಫ್, ತನಿಖೆಯನ್ನು ಬೇಗ ಮುಗಿಸಬಾರದೇ ಎಂದು ತಮ್ಮ ದೇಶದ ತನಿಖಾ ಸಂಸ್ಥೆಗಳನ್ನು ಒತ್ತಾಯಿಸಿದ್ದಾರೆ. ಭಯೋತ್ಪಾದನೆ ವಿಚಾರದಲ್ಲಿ ಪಾಕಿಸ್ತಾನ ಅಂತಾರಾಷ್ಟ್ರೀಯ ಸಮುದಾಯದ ವಿಶ್ವಾಸ ಕಳೆದುಕೊಂಡಿದೆ. ಭಯೋತ್ಪಾದನೆಯನ್ನು ನಿಗ್ರಹ ಮಾಡುವಲ್ಲಿ ಪಾಕಿಸ್ತಾನ ಸಾಕಷ್ಟು ಬಲಿದಾನ ಮಾಡಿದೆ. ಆದರೂ ಪಾಕಿಸ್ತಾನವನ್ನು ಯಾರೂ ನಂಬುತ್ತಿಲ್ಲ. ಆಫ್ಘಾನಿಸ್ತಾನದ ಮಾತು ನಂಬಿಕೆಗೆ ಅರ್ಹವಾಗಿದೆ. ಈ ವಿಚಾರವನ್ನು ಪಾಕಿಸ್ತಾನದ ಆಡಳಿತಗಾರರು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ ಎಂದು ಷರೀಫ್ ಹೇಳಿ ಆಶ್ಚರ್ಯ ಹುಟ್ಟಿಸಿದ್ದಾರೆ.

ಹಾಗೆ ನೋಡಿದರೆ ನವಾಜ್ ಷರೀಪ್ ಅವರು ಪ್ರಧಾನಿಯಾಗಿದ್ದಾಗಲೇ ಮುಂಬೈ ದಾಳಿ ನಡೆಯಿತು. ಅವರ ಅಧಿಕಾರಾವಧಿಯಲ್ಲಿ ಆ ಪ್ರಕರಣದ ತನಿಖೆ ನಡೆಯದಂತೆ ಅವರೇ ನೋಡಿಕೊಂಡರು. ಈಗ ಅವರು ಅಧಿಕಾರ ಕಳೆದುಕೊಂಡಿದ್ದಾರೆ. ಹಟಾತ್ತನೆ ಅವರಿಗೆ ತಿಳುವಳಿಕೆ ಬಂದಿದೆ. ತಾವು ಮಾಡಬೇಕಿದ್ದನ್ನು ಇತರರು ಮಾಡಲಿಲ್ಲ ಎಂದು ಆರೋಪಿಸಿ ಆಶ್ಚರ್ಯ ಹುಟ್ಟಿಸಿದ್ದಾರೆ. ಭಯೋತ್ಪಾದನೆ ವಿಚಾರದಲ್ಲಿ ಪಾಕಿಸ್ತಾನದ ನಾಯಕರು ಇಂಥ ತದ್ವಿರುದ್ಧ ನಿಲುವು ಪ್ರಕಟಿಸಿರುವುದು ಇದು ಮೊದಲೇನಲ್ಲ. ಅಧಿಕಾರದಲ್ಲಿದ್ದವರೆಲ್ಲರೂ ಹೀಗೆಯೇ ಮಾಡುತ್ತ ಬಂದಿದ್ದಾರೆ. ಪಾಕಿಸ್ತಾನದಲ್ಲಿ ಮಿಲಿಟರಿಯದೇ ಮೇಲುಗೈ. ಸರ್ಕಾರದ ನೀತಿ ನಿಯಮಗಳನ್ನು ನಿಯಂತ್ರಿಸುವುದೂ ಅದೇ ಆಗಿದೆ. ಕಾಶ್ಮೀರ ಗಡಿಯಲ್ಲಿ ನಿತ್ಯ ನಡೆಯುತ್ತಿರುವ ಭಯೋತ್ಪಾದಕರ ದಾಳಿಹಿಂದೆ ಸೇನೆಯ ಕೈವಾಡ ಇರುವುದು ಈಗ ರಹಸ್ಯ ವಿಚಾರವೇನಲ್ಲ.

ಷರೀಫ್ ಅವರ ಹೇಳಿಕೆ ಪಾಕಿಸ್ತಾನದ ಸರ್ಕಾರ ಮತ್ತು ಸೇನೆಯಲ್ಲಿ ಕೋಲಾಹಲ ಎಬ್ಬಿಸಿದೆ. ಸರ್ಕಾರ, ಸೇನಾಧಿಕಾರಿಗಳು ಮತ್ತು ಆಡಳಿತಾಧಿಕಾರಿಗಳ ಸಭೆಯೊಂದನ್ನು ಕರೆದಿದೆ. ಸರ್ಕಾರಕ್ಕೆ ಮತ್ತು ಸೇನೆಗೆ ಮುಜಗರ ಉಂಟುಮಾಡಿರುವ ಷರೀಫ್ ಅವರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಬೇಕೆಂಬ ಬಗ್ಗೆ ಈ ಸಭೆ ನಿರ್ಧರಿಸಲಿದೆ.

ಇದನ್ನೂ ಓದಿ : ಕುಲಭೂಷಣ್ ಜಾದವ್ ಗಲ್ಲು ಪ್ರಕರಣ: ಮತ್ತೊಮ್ಮೆ ನಾಟಕ ಆಡಿದ ಪಾಕಿಸ್ತಾನ

ನವಾಜ್ ಷರೀಫ್ ಅವರು ಪನಾಮಾ ಪೇಪರ್ಸ್ ಬಯಲು ಮಾಡಿದ ಪ್ರಕರಣವೊಂದರಲ್ಲಿ ಸಿಕ್ಕಿಹಾಕಿಕೊಂಡು ಸುಪ್ರೀಂ ಕೋರ್ಟ್‍ನಿಂದ ಶಿಕ್ಷೆಗೆ ಗುರಿಯಾದವರು. ಅಷ್ಟೇ ಅಲ್ಲ ಅವರನ್ನು ಯಾವುದೇ ಅಧಿಕಾರಸ್ಥಾನ ವಹಿಸಿಕೊಳ್ಳುವುದನ್ನು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಲಾಗಿದೆ. ಇದೀಗ ಪಾಕಿಸ್ತಾನದ ಉತ್ತರದಾಯಿತ್ವ ಉನ್ನತ ತನಿಖಾ ಸಂಸ್ಥೆ ಷರೀಪ್ ಅವರ ಮೇಲೆ ಮತ್ತೊಂದು ಆರೋಪ ಹೊರಿಸಿದೆ. ಷರೀಫ್ ಅವರು ತಮ್ಮ ಮಕ್ಕಳ ಹೆಸರಿನಲ್ಲಿ ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್‍ನಲ್ಲಿ ಸ್ಥಾಪಿಸಿರುವ ಕಂಪನಿಗಳ ಸುಮಾರು ಐದು ಬಿಲಿಯನ್ ಡಾಲರ್ ಹಣವನ್ನು ಭಾರತದ ಮೂಲಕ ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂದು ಆರೋಪಿಸಲಾಗಿದೆ.

ಅಕ್ರಮ ಹಣ ವರ್ಗಾವಣೆ ಮಾಡಿ ಪಾಕಿಸ್ತಾನಕ್ಕೆ ನಷ್ಟ ಮಾಡಿದ್ದಾರೆ ಎಂದು ಆಪಾದಿಸಲಾಗಿದೆ. ನವಾಜ್ ಷರೀಫ್ ಅವರ ರಾಜಕೀಯ ಜೀವನ ಅಂತ್ಯವಾದಂತಾಗಿದೆ. ಇದೇ ವರ್ಷ ಪಾರ್ಲಿಮೆಂಟ್ ಚುನಾವಣೆಗಳು ನಡೆಯಲಿವೆ. ಆ ವೇಳೆಗೆ ಮತ್ತೆ ರಾಜಕೀಯವಾಗಿ ಮರುಜೀವ ಪಡೆಯಲು ಅವರು ನಾನಾ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಮಕ್ಕಳ ಹೆಸರಿನಲ್ಲಿರುವ ಹಣಕಾಸು ಸಂಸ್ಥೆಗಳನ್ನು ಉಳಿಸಿಕೊಳ್ಳಲು ಈಗ ಭಾರತವನ್ನು ಓಲೈಸುವ ಕೆಲಸ ಆರಂಭಿಸಿದಂತೆ ಕಾಣುತ್ತಿದೆ. ಆದರೆ ಸೇನೆ ಅವರ ವಿರುದ್ಧ ಇದೆ. ಜನಬೆಂಬಲ ಗಳಿಸಿಕೊಂಡು ಮತ್ತೆ ಅಧಿಕಾರ ಗಳಿಸಬಹುದು ಎಂದು ಅವರು ತಿಳಿದಂತಿದೆ.

ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
ನಿಕ್ಕಿ ಹ್ಯಾಲಿ ರಾಜೀನಾಮೆ ಹಿಂದೆ ಇರುವ ಕಾರಣವೇನಿರಬಹುದು?
ರಷ್ಯಾದಿಂದ ಎಸ್400 ಕ್ಷಿಪಣಿ ಖರೀದಿ ಒಪ್ಪಂದ; ಟ್ರಂಪ್ ಕೆಂಗಣ್ಣಿಗೆ ಗುರಿಯಾಗಲಿದೆ ಭಾರತ
Editor’s Pick More