ಕಾಶ್ಮೀರ ವಿವಾದ ಕೆಣಕಿದ ಪಾಕ್; ಗಿಲ್ಗಿಟ್, ಬಾಲ್ಟಿಸ್ತಾನ್ ತಮ್ಮದೆಂದು ನಿರ್ಣಯ

ಕಾಶ್ಮೀರ ವಿವಾದದ ಭಾಗವಾಗಿರುವ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ಪ್ರದೇಶವನ್ನು ಹೊಸ ಪ್ರಾಂತ್ಯವನ್ನಾಗಿ ಘೋಷಿಸುವ ಮೂಲಕ ಪಾಕ್ ಆಡಳಿತಗಾರರು ಭಾರತದ ಟೀಕೆಗೆ ಗುರಿಯಾಗಿದ್ದಾರೆ. ಈ ಪ್ರದೇಶವನ್ನು ತನ್ನ 5ನೇ ಪ್ರಾಂತ್ಯ ಎಂದು ಘೋಷಿಸಿ ಪಾಕ್ ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ

ಉತ್ತರದ ಪ್ರದೇಶ ಎಂದು ಇದುವರೆಗೆ ಕರೆಯಲಾಗುತ್ತಿದ್ದ ಮತ್ತು ಕಾಶ್ಮೀರ ವಿವಾದದ ಭಾಗವಾಗಿರುವ ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರದೇಶದ ನಿರ್ವಹಣೆಯ ವ್ಯವಸ್ಥೆಯನ್ನು ಪಾಕಿಸ್ತಾನ ಬದಲಿಸಿದೆ. ಈ ಪ್ರದೇಶವನ್ನು ತನ್ನ ಐದನೆಯ ಪ್ರಾಂತ್ಯ ಎಂದು ಘೋಷಿಸಿದೆ. ಈ ಸಂಬಂಧವಾಗಿ ಪಾಕಿಸ್ತಾನದ ಸಚಿವ ಸಂಪುಟ ನಿರ್ಣಯ ತೆಗೆದುಕೊಂಡಿದೆ.

ಸಹಜವಾಗಿಯೇ ಭಾರತ ಸರ್ಕಾರವನ್ನು ಕೆರಳಿಸಿದೆ. ಭಾರತದ ವಿದೇಶಾಂಗ ಖಾತೆ ಅಧಿಕಾರಿಗಳು ಪಾಕ್ ವಿದೇಶಾಂಗ ಇಲಾಖೆ ಅಧಿಕಾರಿಯನ್ನು ಕರೆದು ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತ ಮಾಡಿದ್ದಾರೆ. ಪಾಕಿಸ್ತಾನವೂ ಅದಕ್ಕೆ ಉತ್ತರ ನೀಡಿ ತಾನು ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ತಿಳಿಸಿದೆ.

ವಿಶ್ವಸಂಸ್ಥೆಯಲ್ಲಿ 1947ರಲ್ಲಿ ಆದ ನಿರ್ಣಯದ ಪ್ರಕಾರ ಜಮ್ಮು ಕಾಶ್ಮೀರ, ಅಜಾದ್ ಕಾಶ್ಮೀರ, ಅಕ್ಸಾಯಿಚಿನ್, ಶಕ್ಸಗಾಮ್‍ಕಣಿವೆ, ಲಡಾಕ್, ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ ವಿವಾದದ ಪ್ರದೇಶಗಳು. 1947ರಲ್ಲಿ ದೇಶವಿಭಜನೆಯಾದಾಗ ಜಮ್ಮು-ಕಾಶ್ಮೀರದ ದೊರೆ ರಾಜಾ ಹರಿಸಿಂಗ್ ಭಾರತದ ಜೊತೆ ಸೇರಬಯಸುತ್ತಾರೆ. ಅದರಂತೆ ಜಮ್ಮು ಕಾಶ್ಮೀರ ಭಾರತದ ಭಾಗವಾಗುತ್ತದೆ. ಆಗ ಬಾಲ್ಟಿಸ್ತಾನ್ ಮತ್ತು ಗಿಲ್ಗಿಟ್ ಪ್ರದೇಶಗಳು ಜಮ್ಮು ಕಾಶ್ಮೀರಕ್ಕೆ ಸೇರಿದ್ದವು. ಸಹಜವಾಗಿಯೇ ಅವು ಕೂಡಾ ಭಾರತಕ್ಕೆ ಸೇರಿದ ಜಮ್ಮು ಕಾಶ್ಮೀರದ ಭಾಗವಾಗಬೇಕಿತ್ತು. ಆದರೆ ಪಾಕಿಸ್ತಾನ ಜಮ್ಮು ಕಾಶ್ಮೀರದ ದೊರೆ ಹರಿಸಿಂಗ್ ಅವರ ನಿರ್ಧಾರವನ್ನೇ ಪ್ರಶ್ನಿಸುತ್ತದೆ. ಹೀಗಾಗಿ ಆ ವಿಚಾರ ವಿವಾದಕ್ಕೆ ಗುರಿಯಾಗುತ್ತದೆ.

ಹಾಗೆ ನೋಡಿದರೆ 1947ರರಲ್ಲಿ ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ಪಾಕಿಸ್ತಾನಕ್ಕೆ ಸೇರಲು ಬಯಸಿದ್ದವು. ಆದರೆ ಪಾಕಿಸ್ತಾನವೇ ಹಿಂದೇಟು ಹಾಕಿತ್ತು. ಈ ಪ್ರದೇಶದ ದೋಗ್ರಾ ಯೋಧರು ಪಾಕಿಸ್ತಾನದ ನೆರವಿನಿಂದ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಮುನ್ನುಗ್ಗಿದ್ದರು. ವಿಶ್ವಸಂಸ್ಥೆಯಲ್ಲಿ ಈ ಅತಿಕ್ರಮಣವನ್ನು ಭಾರತ ಪ್ರಶ್ನಿಸಿತ್ತು. ಹೀಗಾಗಿ ಪಾಕಿಸ್ತಾನ ಈ ಎರಡೂ ಪ್ರದೇಶಗಳನ್ನು ವಿಶೇಷ ಆಡಳಿತದ ಪ್ರದೇಶವೆಂದು ಪರಿಗಣಿಸಿತ್ತು. ಆದರೆ ಇಂದಿನ ಪರಿಸ್ಥಿತಿ ಭಿನ್ನವಾಗಿದೆ. ಪ್ರಾಂತ್ಯವೆಂದು ಪರಿಗಣಿಸುವುದರಿಂದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಆ ಪ್ರದೇಶದ ಪ್ರತಿನಿಧಿಗಳು ಇರುವಂತಾಗುತ್ತದೆ. ಜೊತೆಗೆ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದು ಪಾಕಿಸ್ತಾನ ಸಮರ್ಥನೆ ನೀಡಿದೆ. ಆದರೆ ವಾಸ್ತವವಾಗಿ ಕಾರಣವೇ ಬೇರೆ ಇದ್ದಂತಿದೆ.

ಇದನ್ನೂ ಓದಿ : ಚೀನಾ-ಪಾಕಿಸ್ತಾನ ಭಾಯಿ ಭಾಯಿ ಲೆಕ್ಕಾಚಾರದ ಮೈತ್ರಿ ಎಷ್ಟು ಕಾಲ?

ಈ ಪ್ರದೇಶದಲ್ಲಿ ಪಾಕಿಸ್ತಾನ ಮತ್ತು ಚೀನಾ ವಿಶೇಷ ಆರ್ಥಿಕ ವಲಯ ನಿರ್ಮಾಣವಾಗುತ್ತಿದೆ. ವಿವಾದ ಇದ್ದರೆ ಮುಂದೊಂದು ದಿನ ಸಮಸ್ಯೆ ಒದಗಬಹುದೆಂದು ಚೀನಾವು ಪಾಕಿಸ್ತಾನದ ಮೇಲೆ ಒತ್ತಡ ಹೇರುತ್ತಿದೆ. ವಿವಾದ ಬಗೆಹರಿಯುವ ಸಾಧ್ಯತೆ ಸದ್ಯಕ್ಕಂತೂ ಇಲ್ಲ. ಆದ್ದರಿಂದ ಪಾಕಿಸ್ತಾನ ಆ ಪ್ರದೇಶದ ಆಡಳಿತ ವ್ಯವಸ್ಥೆಯನ್ನು ಬದಲಾಯಿಸುವ ಮೂಲಕ ಅದು ತಮ್ಮ ದೇಶದ ಭಾಗವೆಂದು ಹೇಳಲು ಪಾಕಿಸ್ತಾನ ಬಯಸಿದೆ. ಈ ಬದಲಾವಣೆ ಚೀನಾಕ್ಕೆ ಸಮಾದಾನ ತರುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಪಾಕಿಸ್ತಾನವಂತೂ ವಿಶೇಷ ಆರ್ಥಿಕ ವಲಯ ಉಳಿಸಿಕೊಳ್ಳಲು ಈ ದಾರಿ ತುಳಿದಿದೆ.

ಈ ಬೆಳವಣಿಗೆಯ ಬಗ್ಗೆ ಭಾರತ ಆಕ್ಷೇಪ ಎತ್ತಿದೆಯಾದರೂ ಅದನ್ನು ವಿಶ್ವಸಂಸ್ಥೆಗೆ ಕೊಂಡೊಯ್ಯುವ ಸಾಧ್ಯತೆ ಕಡಿಮೆ. ಅಷ್ಟೇ ಅಲ್ಲ ಈ ವಿವಾದವನ್ನು ದೊಡ್ಡದು ಮಾಡುವ ಸಾಧ್ಯತೆಯೂ ಇಲ್ಲ.

ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
ನಿಕ್ಕಿ ಹ್ಯಾಲಿ ರಾಜೀನಾಮೆ ಹಿಂದೆ ಇರುವ ಕಾರಣವೇನಿರಬಹುದು?
ರಷ್ಯಾದಿಂದ ಎಸ್400 ಕ್ಷಿಪಣಿ ಖರೀದಿ ಒಪ್ಪಂದ; ಟ್ರಂಪ್ ಕೆಂಗಣ್ಣಿಗೆ ಗುರಿಯಾಗಲಿದೆ ಭಾರತ
Editor’s Pick More