ಮತ್ತೆ ಮನಸ್ಸು ಬದಲಿಸಿದ ಟ್ರಂಪ್; ಕಿಮ್ ಜೊತೆ ಶೃಂಗಸಭೆಗೆ ಒಪ್ಪಿಗೆ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಮನ ಬದಲಿಸಿದ್ದಾರೆ. ಉ.ಕೊರಿಯಾ ಅಧ್ಯಕ್ಷ ಕಿಮ್ ಜಂಗ್ ಉನ್ ಜೊತೆ ಜೂ.12ರಂದು ಸಿಂಗಪುರದಲ್ಲಿ ಟ್ರಂಪ್ ಮಾತುಕತೆ ನಡೆಸಲಿದ್ದಾರೆ. ಶೃಂಗಸಭೆಗೆ ಇನ್ನೂ 10 ದಿನ ಬಾಕಿ ಇದೆ. ಮತ್ತೆ ಟ್ರಂಪ್ ಈ ಶೃಂಗಸಭೆಗೆ ಬರುವುದಿಲ್ಲ ಎಂದು ಹೇಳುವ ಸಾಧ್ಯತೆಯೂ ಇದೆ!

ಮಾತುಕತೆಗೆ ಮೊದಲು ಒಪ್ಪಿ ನಂತರ ಇಲ್ಲ ಎಂದಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಮತ್ತೆ ಮನಸ್ಸು ಬದಲಿಸಿದ್ದಾರೆ. ಜೂನ್ 12 ರಂದು ಸಿಂಗಪುರದಲ್ಲಿ ನಡೆಸಲು ಉದ್ದೇಶಿಸಿರುವ ಶೃಂಗಸಭೆಗೆ ಟ್ರಂಪ್ ಹಾಜರಾಗಿ ಕಿಮ್ ಜೊತೆ ಮಾತುಕತೆ ನಡೆಸಲಿದ್ದಾರೆ. ಮೊದಲು ಒಪ್ಪಿದ್ದು ಏಕೆ ಆಮೇಲೆ ಇಲ್ಲ ಎಂದಿದ್ದೇಕೆ ಮತ್ತೆ ಮಾತುಕತೆಗೆ ಒಪಿದ್ದೇಕೆ, ಯಾವುದಕ್ಕೂ ನಿಖರ ಕಾರಣಗಳಿಲ್ಲ. ಟ್ರಂಪ್ ಅವರ ಸ್ವಭಾವವೇ ಅಂಥದ್ದು. ಎಲ್ಲವೂ ವೈಯುಕ್ತಿಕ ನಿರ್ಧಾರಗಳು. ಶೃಂಗ ಸಭೆಗೆ ಇನ್ನೂ ಹತ್ತು ದಿನ ಬಾಕಿ ಇದೆ. ಮತ್ತೆ ಟ್ರಂಪ್ ಈ ಶೃಂಗಸಭೆಗೆ ಬರುವುದಿಲ್ಲ ಎಂದು ಹೇಳಬಹುದು!

ಹಲವಾರು ವರ್ಷಗಳ ಹಲವು ಸುತ್ತಿನ ಮಾತುಕತೆಗಳ ನಂತರ ಆದ ಇರಾನ್, ಕ್ಯೂಬಾ, ಪ್ಯಾರಿಸ್ ಮುಂತಾದ ಒಪ್ಪಂದಗಳಿಗೇ ಇತಿಶ್ರೀ ಹಾಡಿದ ಟ್ರಂಪ್ ಉತ್ತರ ಕೊರಿಯಾ ವಿಚಾರದಲ್ಲಿ ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಮತ್ತು ವಿಶ್ವದ ಇತರ ಬಲಿಷ್ಠ ದೇಶಗಳ ಸಹಕಾರವಿಲ್ಲದೆ ಏನೇನು ಅವಾಂತರ ಸೃಷ್ಟಿಸುತ್ತಾರೋ ಎಂಬ ಆತಂಕ ಎಲ್ಲ ಕಡೆ ಮನೆಮಾಡಿದೆ. ಇತರರು ತಲೆಕೆಡಿಸಿಕೊಳ್ಳುವಷ್ಟು ಟ್ರಂಪ್ ಈ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುವುದಿಲ್ಲ. ಆದರೆ ಆಯಿತು, ಹೋದರೆ ಹೋಯಿತು ಎನ್ನುವ ಧೋರಣೆ ತಳೆದಂತೆ ಕಾಣುತ್ತಿದೆ. ಉತ್ತರ ಕೊರಿಯಾ ತನ್ನಲ್ಲಿರುವ ಪರಮಾಣು ಅಸ್ತ್ರ ಮತ್ತು ತಂತ್ರಜ್ಞಾನವನ್ನು ನಾಶಮಾಡಿದರೆ ಅದಕ್ಕಿಂಥ ದೊಡ್ಡ ಸಂತಸದ ಸುದ್ದಿ ಮತ್ತೊಂದಿಲ್ಲ. ಹಾಗೆಯೇ ಉತ್ತರ ಕೊರಿಯಾ ಪರಮಾಣು ಅಸ್ತ್ರಗಳನ್ನು ನಾಶ ಮಾಡಿ ಜಗತ್ತಿಗೆ ದೇಶವನ್ನು ಮುಕ್ತ ಮಾಡಿದರೆ ಹತ್ತಾರು ವರ್ಷಗಳ ಕಾಲ ದಮನಕ್ಕೊಳಗಾದ ಜನರನ್ನೂ ಬಿಡುಗಡೆ ಮಾಡಿದಂತಾಗುತ್ತದೆ ಎನ್ನುವುದು ಟ್ರಂಪ್ ಅವರ ಅಭಿಪ್ರಾಯ. ಈ ಅಭಿಪ್ರಾಯ ಸರಿಯಾಗಿಯೇ ಇದೆ. ಆದರೆ ಒಪ್ಪಂದ ಆಗಬೇಕಲ್ಲ, ಅದೇ ಸಮಸ್ಯೆ.

ಕಿಮ್ ಜೊತೆ ಮಾತುಕತೆಗೆ ಟ್ರಂಪ್ ಒಪ್ಪಿದ ನಂತರ ಕೆಲವು ಮುಖ್ಯ ಬೆಳವಣಿಗೆಗಳಾಗಿವೆ. ಅಮೆರಿಕ ಮತ್ತು ದಕ್ಷಿಣ ಕೊರಿಯಾ ಜಂಟಿಯಾಗಿ ಸಮರಾಭ್ಯಾಸ ಕವಾಯಿತು ನಡೆಸುವುದನ್ನು ಉತ್ತರ ಕೊರಿಯಾ ವಿರೋಧಿಸಿತ್ತು. ವಿರೋಧ ಲೆಕ್ಕಿಸದೆ ಸಮರಾಭ್ಯಾಸ ಮಾಡಿದ್ದರಿಂದ ಕುಪಿತಗೊಂಡ ಉತ್ತರ ಕೊರಿಯಾದ ನಾಯಕರು ದಕ್ಷಿಣ ಕೊರಿಯಾ ಜೊತೆ ಸಂಬಂಧ ಕಡಿದು ಕೊಂಡರು. ಆದರೆ ಅದರಬೆನ್ನಲ್ಲೇ ಟ್ರಂಪ್ ಉತ್ತರ ಕೊರಿಯಾ ಜೊತೆ ಮಾತುಕತೆ ಇಲ್ಲ ಎಂದು ಘೋಷಿಸಿದರು. ಇದರ ಪರಿಣಾಮವಾಗಿ ಉತ್ತರ ಕೊರಿಯಾ ನಾಯಕರು ಮತ್ತೆ ದಕ್ಷಿಣ ಕೊರಿಯಾ ನಾಯಕರ ಜೊತೆ ಮಾತುಕತೆ ನಡೆಸಿದರು. ಪರಿಣಾಮವಾಗಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಮತ್ತೆ ದಕ್ಷಿಣ ಕೊರಿಯಾಕ್ಕೆ ಬಂದು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೊತೆ ಮಾತುಕತೆ ನಡೆಸಿ ಆಶ್ಚರ್ಯ ಹುಟ್ಟಿಸಿದರು. ಕಿಮ್ ಅವರನ್ನು ನಂಬಬಹುದೆಂದು ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಅವರು ಟ್ರಂಪ್ ಅವರಿಗೆ ಮನವರಿಕೆ ಮಾಡಿಕೊಟ್ಟರು. ಆ ನಂತರ ಅಮೆರಿಕದ ಹಿರಿಯ ಅಧಿಕಾರಿಗಳು, ರಾಜತಾಂತ್ರಿಕರು ಖುದ್ದು ಉತ್ತರಕೊರಿಯಾಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿ ಬಂದರು. ಮುಂದುವರಿದ ಭಾಗವಾಗಿ ಉತ್ತರಕೊರಿಯಾದ ಗುಪ್ತಚರ ಇಲಾಖೆ ಮುಖ್ಯಸ್ಥ ಮತ್ತು ಕಿಮ್ ಅವರ ಆಪ್ತ ಅಧಿಕಾರಿ ಕಿಮ್ ಯಾಂಗ್ ಚೋಲ್ ಅವರು ಇದೇ ಗುರುವಾರ ಶ್ವೇತಭವನದಲ್ಲಿ ಟ್ರಂಪ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಮಾತುಕತೆ ಬಗ್ಗೆ ಕಿಮ್ ಅವರಿಗಿರುವ ಬದ್ಧತೆ ಬಗ್ಗೆ ವಿವರಿಸಿದರು. ಕಿಮ್ ಅವರ ಪತ್ರವನ್ನು ಟ್ರಂಪ್ ಅವರಿಗೆ ಸಲ್ಲಿಸಿದರು. ಆ ನಂತರ ಟ್ರಂಪ್ ಸಿಂಗಪುರ ಮಾತುಕತೆಯಲ್ಲಿ ಭಾಗವಹಿಸುವುದಾಗಿ ಘೋಷಿಸಿದ್ದಾರೆ.

ಇದನ್ನೂ ಓದಿ : ಇಸ್ರೇಲ್ ರಾಜಧಾನಿಯಾಗಿ ಜರೂಸಲೆಂಗೆ ಮಾನ್ಯತೆ, ಟ್ರಂಪ್ ನಿರ್ಧಾರದಿಂದ ಭೀತಿ

ಮಾತುಕತೆಯ ಉದ್ದೇಶವೇನೋ ಉತ್ತಮವಾಗಿದೆ. ಆದರೆ ಅದು ಸಾಧಿತವಾಗುವುದು ಹೇಗೆ? ಉತ್ತರ ಕೊರಿಯಾ ಸಮಸ್ಯೆಯಲ್ಲಿ ಮುಖ್ಯರಾದವರು ದಕ್ಷಿಣ ಕೊರಿಯಾ ಮತ್ತು ಅಮೆರಿಕದ ನಾಯಕರು. ಹಾಗೆಂದು ಜಪಾನ್, ಚೀನಾ. ರಷ್ಯಾ ದೇಶಗಳನ್ನು ನಿರ್ಲಕ್ಷ್ಯಿಸುವಂತಿಲ್ಲ. ಈ ದೇಶಗಳನ್ನು ಒಳಗೊಳ್ಳದ ಮಾತುಕತೆ ಸಫಲವಾಗಲು ಸಾಧ್ಯವಿಲ್ಲ. ಶೀತಲ ಸಮರಕಾಲದಲ್ಲಿ ಉತ್ತರ ಕೊರಿಯಾವನ್ನು ಸಂಪೂರ್ಣವಾಗಿ ನೋಡಿಕೊಂಡದ್ದು ಆಗಿನ ಸೋವಿಯತ್ ಒಕ್ಕೂಟ. ಹಾಗೆಯೇ ಅಮೆರಿಕ ಸೇರಿದಂತೆ ವಿಶ್ವದ ಪ್ರಮುಖ ದೇಶಗಳು ಆರ್ಥಿಕ ದಿಗ್ಬಂದನ ಹೇರಿದ ನಂತರ ಉತ್ತರಕೊರಿಯಾ ಬಯಸಿದ ಎಲ್ಲವನ್ನೂ ಕೊಟ್ಟದ್ದು ಚೀನಾ. ಉತ್ತರ ಕೊರಿಯಾದ ಶೇ 90ರಷ್ಟು ಅಗತ್ಯಗಳನ್ನು ಪೂರೈಸುತ್ತಿರುವುದು ಚೀನಾ. ಈ ಕಾರಣದಿಂದ ಈ ದೇಶಗಳನ್ನು ಮಾತುಕತೆಯಿಂದ ದೂರವಿರಿಸುವುದು ಸರಿಯಲ್ಲ. ಸಮಸ್ಯೆಗೆ ಇನ್ನೂ ಒಂದು ಮುಖವಿದೆ. ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಪರಮಾಣು ತಂತ್ರಜ್ಞಾನ ಮತ್ತು ಅಸ್ತ್ರಗಳನ್ನು ನಾಶಮಾಡುವುದಾಗಿ ಹೇಳುತ್ತಿದ್ದಾರೆ. ಪರಮಾಣು ತಂತ್ರಜ್ಞಾನ ವಿಚಾರವನ್ನು ಕೇವಲ ಅಮೆರಿಕ ಮತ್ತು ದಕ್ಷಿಣ ಕೊರಿಯಾಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಉತ್ತರ ಕೊರಿಯಾದಲ್ಲಿರುವ ತಂತ್ರಜ್ಞಾನ ಎಂಥದ್ದು, ಪರಮಾಣು ಅಸ್ತ್ರಗಳು ಎಷ್ಟಿವೆ, ಪರಮಾಣು ಅಸ್ತ್ರ್ರಗಳಲ್ಲದೆ ಜೈವಿಕ ಮತ್ತು ರಾಸಾಯನಿಕ ಅಶ್ತ್ರಗಳನ್ನು ನಿರ್ಮಿಸಲಾಗಿದೆಯೇ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಮೊದಲು ಲಭ್ಯವಾಗಬೇಕು. ಈ ವಿಚಾರದಲ್ಲಿ ಉತ್ತರ ಕೊರಿಯಾ ಸತ್ಯ ಹೇಳುತ್ತಿದೆಯೇ ಎಂಬ ಬಗ್ಗೆ ವಿವರವಾದ ಶೋಧನೆ ನಡೆಯಬೇಕು. ಇವಲ್ಲವನ್ನೂ ನಾಶ ಮಾಡಿ ಉತ್ತರ ಕೊರಿಯಾ ಬಯಸುತ್ತಿರುವುದೇನು ಎನ್ನುವುದೂ ಗೊತ್ತಾಗಬೇಕು. ಈ ವಿವರಗಳು ಇಲ್ಲದೆ ಯಾವುದೇ ಒಪ್ಪಂದ ಆಗಲು ಸಾಧ್ಯವಿಲ್ಲ. ಅದಕ್ಕಾಗಿ ಸಾಕಷ್ಟು ಸಮಯ ಬೇಕಾಗುತ್ತದೆ. ಪರಮಾಣು ಮತ್ತಿತರ ಅಸ್ತ್ರಗಳ ವಿವರ ಗೊತ್ತಾದ ನಂತರ ಅದನ್ನು ನಾಶ ಮಾಡುವುದು ಹೇಗೆ ಎನ್ನುವುದೂ ನಿರ್ಧಾರವಾಗಬೇಕು. ಇಷ್ಟು ವ್ಯಾಪಕ ಪರಿಣಾಮಗಳಿರುವ ಈ ಸಮಸ್ಯೆಯನ್ನು ಎರಡು ದೇಶಗಳು ನಿರ್ಧರಿಸುವುದು ಸಾಧ್ಯವಾಗದು. ಈ ಪ್ರಕ್ರಿಯೆಯಲ್ಲಿ ಅಂತಾರಾಷ್ಟ್ರೀಯ ಸಮುದಾಯ ಭಾಗವಹಿಸುವುದು ಮುಖ್ಯ. ಸದ್ಯಕ್ಕೆ ಇಂಥ ವಿವರವಾದ ಸಿದ್ಧತೆ ನಡೆಯದೆ ಇರುವುದರಿಂದ ಜೂನ್ 12ರ ಶೃಂಗಸಭೆ (ನಡೆದರೆ) ಯಶಸ್ವಿಯಾಗುತ್ತದೆ ಎಂದು ನಿರೀಕ್ಷಿಸುವುದು ಸರಿಯಾಗದು. ಕೊರಿಯಾ ಸಮಸ್ಯೆ ಪರಿಹರಿಸುವಲ್ಲಿ ಸಿಂಗಪುರ್ ಸಭೆ ಒಂದು ಮುಖ್ಯ ಹೆಜ್ಜೆಯಾಗಬಹುದಷ್ಟೆ.

ಪರ್ತಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
ನಿಕ್ಕಿ ಹ್ಯಾಲಿ ರಾಜೀನಾಮೆ ಹಿಂದೆ ಇರುವ ಕಾರಣವೇನಿರಬಹುದು?
Editor’s Pick More