ಅಂತೂ ಸಿಂಗಪುರ ಸೇರಿದ ಕಿಮ್-ಟ್ರಂಪ್; ಉಳಿದಿರುವುದು ಒಪ್ಪಂದದ ಕುತೂಹಲ

ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್ ನಡುವೆ ಸಿಂಗಪುರದಲ್ಲಿ ನಡೆಯಲಿರುವ ಶೃಂಗಸಭೆ ಯಶಸ್ವಿಯಾಗುತ್ತದೋ ವಿಫಲವಾಗುತ್ತದೋ ಎಂಬ ಕುತೂಹಲ ಸೃಷ್ಟಿಯಾಗಿದೆ. ಹಲವು ನಾಟಕೀಯ ಬೆಳವಣಿಗೆ ನಂತರ ಈ ಭೇಟಿ ಆಗಿರುವುದು ಇದಕ್ಕೆ ಕಾರಣ

ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡುವಣ ಐತಿಹಾಸಿಕ ಮಾತುಕತೆ ಮಂಗಳವಾರ (ಜೂ.12) ಬೆಳಗ್ಗೆ ಭಾರತೀಯ ಕಾಲಮಾನ 6.30ಕ್ಕೆ ಸಿಂಗಪುರದ ರೆಸಾರ್ಟ್‍ಗಳ ದ್ವೀಪ ಸೆಂತೋಸಾದ ಕ್ಯಾಪಿಲಾ ಹೋಟೆಲ್‍ನಲ್ಲಿ ಆರಂಭವಾಗಲಿದೆ. ಇಬ್ಬರೂ ನಾಯಕರು ಈಗ ಸಿಂಗಪುರದಲ್ಲಿ ಬೀಡು ಬಿಟ್ಟಿದ್ದು, ಉದ್ದೇಶಿತ ಮಾತುಕತೆಗೆ ಸಿದ್ಧತೆ ನಡೆಸುತ್ತಿದ್ದಾರೆ.

"ನಾನೇನೂ ಸಿದ್ಧತೆ ನಡೆಸಿಲ್ಲ. ಮಾತುಕತೆಯ ಮೊದಲ ಸೆಕೆಂಡಿನಲ್ಲೇ ಎಲ್ಲವೂ ಗೊತ್ತಾಗುತ್ತದೆ. ಉತ್ತಮ ಸನ್ನಿವೇಶವೇನೋ ಸೃಷ್ಟಿಯಾಗಿದೆ. ಉತ್ತಮ ಫಲಿತಾಂಶ ಬರುವುದೆಂದೂ ಆಶಿಸಿದ್ದೇನೆ. ನನ್ನದು ಶಾಂತಿ ಅಭಿಯಾನ," ಎಂದು ಸಿಂಗಪುರಕ್ಕೆ ಬರುತ್ತಿದ್ದಂತೆಯೇ ಟ್ರಂಪ್ ಹೇಳಿದ್ದಾರೆ. ಉತ್ತರ ಕೊರಿಯಾ ಅಧ್ಯಕ್ಷರಿಂದ ಯಾವುದೇ ನಿರೀಕ್ಷೆ ಪ್ರಕಟವಾಗಿಲ್ಲ. ಆದರೆ, ಉತ್ತರ ಕೊರಿಯಾದ ಪತ್ರಿಕೆಗಳು, "ಈ ಶೃಂಗಸಭೆ ಬಗ್ಗೆ ಉತ್ಪ್ರೇಕ್ಷೆ ಬೇಡ. ಪರಮಾಣು ನಿಶ್ಯಸ್ತ್ರೀಕರಣ ಉತ್ತರ ಕೊರಿಯಾದ ಗುರಿ," ಎಂದು ಹೇಳಿವೆ. ಉತ್ತರ ಕೊರಿಯಾದಲ್ಲಿ ಕಿಮ್ ಹೇಳಿದ್ದೂ ಇದೇ.

ಟ್ರಂಪ್ ಭಾವಿಸಿರುವಂತೆ ಇದು ಸರಳ ಸಮಸ್ಯೆಯಲ್ಲ. ಪರಮಾಣು ತಂತ್ರಜ್ಞಾನ ಮತ್ತು ಪರಮಾಣು ಅಸ್ತ್ರಗಳ ನಿರ್ಮಾಣ ನಿಷೇಧ ಕುರಿತಂತೆ ಇರಾನ್ ಜೊತೆ ಅಂತಾರಾಷ್ಟ್ರೀಯ ಸಮುದಾಯ ನಡೆಸಿದ ಮಾತುಕತೆಗಳು ಒಪ್ಪಂದದ ಹಂತಕ್ಕೆ ಬರಲು ಏಳೆಂಟು ವರ್ಷಗಳೇ ಹಿಡಿದಿದ್ದವು. ಅದೂ ಅಂತಾರಾಷ್ಟ್ರೀಯ ರಾಜತಾಂತ್ರಿಕರು, ವಿಶ್ವದ ಮುಖ್ಯ ಶಕ್ತಿ ದೇಶಗಳ ನಾಯಕರು ಮಾತುಕತೆಯಲ್ಲಿ ಭಾಗವಹಿಸಿದ್ದರೂ ಇಷ್ಟು ಕಾಲ ಹಿಡಿದಿತ್ತು. ಪರಮಾಣು ತಂತ್ರಜ್ಞಾನ ನಿಷೇಧ ಕುರಿತಂತೆ ಲಿಬಿಯಾ ಜೊತೆ ನಡೆಸಿದ ಮಾತುಕತೆಗಳೂ ವರ್ಷಗಟ್ಟಲೆ ಹಿಡಿದಿದ್ದವು. ಅಷ್ಟೇ ಏಕೆ, ಪರಮಾಣು ಅಸ್ತ್ರಗಳನ್ನು ಕ್ರಮೇಣ ನಾಶ ಮಾಡುವ ಸಂಬಂಧವಾಗಿ ಅಮೆರಿಕ ಮತ್ತು ರಷ್ಯಾ ನಡುವೆ ಮಾತುಗಳು ಒಪ್ಪಂದದ ಹಂತಕ್ಕೆ ಬರಲು ಹಲವು ವರ್ಷಗಳೇ ಹಿಡಿದಿದ್ದವು. ಹಲವಾರು ವರ್ಷಗಳು ಚರ್ಚಿಸಿದರೂ, ಅಂತಾರಾಷ್ಟ್ರೀಯ ತಜ್ಞರು ಖುದ್ದು ಪರಮಾಣು ಸ್ಥಾವರಗಳನ್ನು ತಪಾಸಣೆ ನಡೆಸಿದರೂ, ಕೆಲವು ರಹಸ್ಯ ಪರಮಾಣು ಅಸ್ತ್ರ ನಿರ್ಮಾಣ ಸ್ಥಾವರಗಳಿರುವುದು ನಂತರ ಬೆಳಕಿಗೆ ಬಂದಿತ್ತು. ಇನ್ನು, ಪರಮಾಣು ಅಸ್ತ್ರ ಸ್ಥಾವರಗಳನ್ನು, ತಂತ್ರಜ್ಞಾನವನ್ನು ನಾಶ ಮಾಡಲು ಹಲವಾರು ವರ್ಷಗಳೇ ಬೇಕಾಗುತ್ತದೆ. ಅಷ್ಟಕ್ಕೂ ತನ್ನ ಭದ್ರತೆಗೆ ಬೇಕಾದ ಶಸ್ತ್ರಾಸ್ತ್ರಗಳನ್ನು ನಾಶ ಮಾಡಲು ಉತ್ತರ ಕೊರಿಯಾ ಒಪ್ಪುವ ಸಾಧ್ಯತೆ ಇರಲಾರದು. ಇದೇನೇ ಇರಲಿ, ಪರಮಾಣು ಅಸ್ತ್ರ ನಿಷೇಧ ಮಾತುಕತೆಗಳ ಇತಿಹಾಸ ಹೀಗಿರುವಾಗ ತಾವು ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ ಎಂಬ ಟ್ರಂಪ್ ಅವರ ಮಾತನ್ನು ನಂಬುವುದು ಕಷ್ಟ. ಮೂಲಭೂತವಾಗಿ ಅವರು ವ್ಯಾಪಾರಸ್ಥರು. ಅವರು ಇದುವರೆಗೆ ನಡೆಸಿರುವ ವಾಣಿಜ್ಯ ವಹಿವಾಟುಗಳು ಎಲ್ಲ ಸಾಧಕ-ಬಾಧಕಗಳನ್ನು ಅರಿತೇ ನಡೆದಿವೆ. ಅವರ ವಾಣಿಜ್ಯ ವಹಿವಾಟಿನ ಜ್ಞಾನ ಸ್ವಲ್ಪ ಮಟ್ಟಿಗೆ ಈ ಮಾತುಕತೆಯಲ್ಲಿ ಉಪಯೋಗಕ್ಕೆ ಬರಬಹುದಾದರೂ ವಿಷಯದ ಆಳವಾದ ತಿಳಿವಳಿಕೆ ಇಲ್ಲದೆ ಮಾತುಕತೆ ನಡೆಸುವುದು ಕಷ್ಟ ಎಂದು ರಾಜತಾಂತ್ರಿಕರು ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕಿಂತ ಮುಖ್ಯವಾಗಿ, ಉತ್ತರ ಕೊರಿಯಾದ ಪರಮಾಣು ಅಸ್ತ್ರಗಳ ವಿಷಯ ಕೇವಲ ಅಮೆರಿಕಕ್ಕೆ ಸಂಬಂಧಿಸಿದ್ದಲ್ಲ. ದಕ್ಷಿಣ ಕೊರಿಯಾ, ಜಪಾನ್ ದೇಶಗಳ ಮೇಲೆ ಪರಿಣಾಮ ಬೀರುವಂಥದ್ದು. ಉತ್ತರ ಕೊರಿಯಾ ದೇಶ ಅಮೆರಿಕದ ಮೇಲಷ್ಟೇ ಪರಮಾಣು ಬಾಂಬ್ ಹಾಕುವಂಥ ಕ್ಷಿಪಣಿ ನಿರ್ಮಿಸಿಲ್ಲ, ದಕ್ಷಿಣ ಕೊರಿಯಾ ಮತ್ತು ಜಪಾನ್ ಮೇಲೆ ಪರಮಾಣು ಬಾಂಬ್ ಹಾಕುವಂಥ ಕ್ಷಿಪಣಿಗಳನ್ನು ನಿರ್ಮಿಸಿದೆ. ಆದ್ದರಿಂದ ಈ ದೇಶಗಳನ್ನು ಒಳಗೊಳ್ಳದ ಮಾತುಕತೆ ಅಪೂರ್ಣವೆಂದೇ ಹೇಳಬೇಕಾಗುತ್ತದೆ. ಉಭಯ ಕೊರಿಯಾಗಳ ನಡುವೆ ಯುದ್ಧ ನಿಲುಗಡೆಯ ನಂತರ ದಕ್ಷಿಣ ಕೊರಿಯಾಕ್ಕೆ ಭದ್ರತೆ ಕೊಟ್ಟಿರುವುದು ಅಮೆರಿಕ ಎನ್ನುವುದು ನಿಜ. ಅಮೆರಿಕದ ಸಹಸ್ರಾರು ಸೈನಿಕರು ದಕ್ಷಿಣ ಕೊರಿಯಾದ ಗಡಿಯಲ್ಲಿ ನಿಂತಿದ್ದಾರೆ. ಅನೇಕ ವಿನಾಶಕ ಅಸ್ತ್ರಗಳನ್ನು ಅಮೆರಿಕವು ಗಡಿಯಲ್ಲಿ ನೆಲೆಯೂರಿಸಿದೆ. ಈ ಕಾರಣದಿಂದಲೇ ಉತ್ತರ ಕೊರಿಯಾ ನೇರವಾಗಿ ಅಮೆರಿಕವನ್ನು ಗುರಿಯಾಗಿಸಿಕೊಂಡಿದೆ. ಹೀಗಾಗಿ, ಕಿಮ್ ಅವರು ಟ್ರಂಪ್ ಜೊತೆ ಮೊದಲ ಮಾತುಕತೆಗೆ ಮುಂದಾಗಿರುವುದು ಅವರಿಗೆ ಸರಿ ಎಂದು ಕಾಣಬಹುದು. ಆದರೆ, ಈ ಪ್ರಶ್ನೆ ಹಲವು ದೇಶಗಳಿಗೆ ಸಂಬಂಧಿಸಿದ್ದಾದ್ದರಿಂದ ಈ ದೇಶಗಳ ಪ್ರತಿನಿಧಿಗಳೂ ಮಾತುಕತೆಯಲ್ಲಿ ಭಾಗವಹಿಸಿದ್ದರೆ ಒಳ್ಳೆಯದಿತ್ತೇನೋ ಎನ್ನುವ ವಾದ ಕೇಳಿಬರುತ್ತಿದೆ. ಉತ್ತರ ಕೊರಿಯಾಕ್ಕೆ ರಷ್ಯಾ ಮತ್ತು ಚೀನಾ ಮೊದಲಿನಿಂದಲೂ ಬೆಂಬಲವಾಗಿ ನಿಂತಿವೆ. ಉತ್ತರ ಕೊರಿಯಾದ ಮೇಲೆ ಅಂತಾರಾಷ್ಟ್ರೀಯ ನಿರ್ಬಂಧಗಳು ಜಾರಿಗೆ ಬಂದ ನಂತರ ರಷ್ಯಾ ವಾಣಿಜ್ಯ ವಹಿವಾಟಿನಲ್ಲಿ ಕಡಿತ ಮಾಡಿತ್ತು. ಆದರೆ, ಚೀನಾ ಎಂದಿನಂತೆ ಬಾಂಧವ್ಯ ಮುಂದುವರಿಸಿತ್ತು. ಉತ್ತರ ಕೊರಿಯಾದ ಶೇ.80ರಷ್ಟು ಗ್ರಾಹಕರ ಬೇಡಿಕೆಯ ವಸ್ತುಗಳನ್ನು ಚೀನಾವೇ ಪೂರೈಸುತ್ತಿತ್ತು. ಕಷ್ಟಕಾಲದಲ್ಲಿ ನೆರವಾದ ಈ ಎರಡೂ ದೇಶಗಳನ್ನು ಬಿಟ್ಟು ಉತ್ತರ ಕೊರಿಯಾ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇಲ್ಲ.

ಇದೇನೇ ವಾದ ಇದ್ದರೂ, ಮಂಗಳವಾರ (ಜೂ.12) ಮಾತುಕತೆ ನಡೆಯಲಿದೆ. ಈಗ ಬಹಿರಂಗವಾಗಿರುವಂತೆ ಪರಮಾಣು ನಿಶ್ಯಸ್ತ್ರೀಕರಣಕ್ಕೆ ಕಿಮ್ ಸಿದ್ಧವಿದ್ದಾರೆ. ಆದರೆ, ಇದಕ್ಕೆ ಪ್ರತಿಯಾಗಿ ಅವರು ಏನು ಬಯಸುತ್ತಾರೆ ಎನ್ನುವುದು ಬಹಿರಂಗವಾಗಿಲ್ಲ. ಪರಮಾಣು ತಂತ್ರಜ್ಞಾನ ಮತ್ತು ಅಸ್ತ್ರಗಳನ್ನು ನಾಶ ಮಾಡಬೇಕಾದರೆ ತಮ್ಮ ದೇಶಕ್ಕೆ ಭದ್ರತೆ ಕೊಡಬೇಕು ಎಂಬ ಮಾತನ್ನೂ ಅವರು ಈ ಹಿಂದೆ ಆಡಿದ್ದಾರೆ. ಅವರ ಮಾತನ್ನು ಎರಡು ರೀತಿಯಲ್ಲಿ ಅರ್ಥ ಮಾಡಿಕೊಳ್ಳಲು ಸಾಧ್ಯ. ಉತ್ತರ ಕೊರಿಯಾಕ್ಕೆ ಭದ್ರತಾ ಬೆದರಿಕೆ ಇರುವುದು ಅಮೆರಿಕದಿಂದ. ಅದೂ ದಕ್ಷಿಣ ಕೊರಿಯಾ ಗಡಿಯಲ್ಲಿ. ಉತ್ತರ ಕೊರಿಯಾ ಭದ್ರತೆ ನೀಡುವುದೆಂದರೆ, ಅಮೆರಿಕ ತನ್ನ ಎಲ್ಲ ಮಿಲಿಟರಿ ಮತ್ತು ಶಸ್ತ್ರಾಸ್ತ್ರಗಳನ್ನು ಅಲ್ಲಿಂದ ವಾಪಸ್ ಪಡೆಯಬೇಕು ಎಂಬ ಅರ್ಥ ಕಿಮ್ ಅವರ ಮಾತಿನ ಹಿಂದೆ ಇರುವಂತಿದೆ. ಒಪ್ಪಂದವಾದರೆ ದಕ್ಷಿಣ ಕೊರಿಯಾ ಗಡಿಯಿಂದ ಅಮೆರಿಕ ಮತ್ತು ದಕ್ಷಣ ಕೊರಿಯಾ ಮಿಲಿಟರಿಯನ್ನು ಹಿಂದಕ್ಕೆ ಪಡೆಯಬೇಕು. ಅಂತೆಯೇ ಉತ್ತರ ಕೊರಿಯಾ ತನ್ನ ಮಿಲಿಟರಿಯನ್ನು ಹಿಂದಕ್ಕೆ ಪಡೆಯಬೇಕು. ಎರಡೂ ದೇಶಗಳು ಮಿಲಿಟರಿಯನ್ನು ಹಿಂದಕ್ಕೆ ಪಡೆಯುವುದೆಂದರೆ, ಉತ್ತರ ಮತ್ತು ದಕ್ಷಿಣ ಕೊರಿಯಾ ನಡುವೆ ವಿವಾದವೇ ಇಲ್ಲದಂತಾಗುತ್ತದೆ. ಎರಡೂ ದೇಶಗಳು ಒಂದು ಎಂದು ಮೊದಲಿಂದಲೂ ಕಿಮ್ ಹೇಳುತ್ತ ಬಂದಿದ್ದಾರೆ.

ಇದನ್ನೂ ಓದಿ : ಮತ್ತೆ ಮನಸ್ಸು ಬದಲಿಸಿದ ಟ್ರಂಪ್; ಕಿಮ್ ಜೊತೆ ಶೃಂಗಸಭೆಗೆ ಒಪ್ಪಿಗೆ!

ಹಾಗೆ ನೋಡಿದರೆ, ಉತ್ತರ ಕೊರಿಯಾ ಸರ್ವಾಧಿಕಾರಿಗಳು ದಕ್ಷಿಣ ಕೊರಿಯಾ ತನಗೆ ಸೇರಿದ್ದೆಂದು ಹೇಳುತ್ತ ಬಂದಿದ್ದಾರೆ. 1950ರಲ್ಲಿ ಎರಡೂ ಕೊರಿಯಾಗಳ ಮಧ್ಯೆ ಯುದ್ಧ ನಡೆದದ್ದಕ್ಕೆ ಇದೂ ಒಂದು ಕಾರಣವಾಗಿತ್ತು ಎನ್ನುವುದನ್ನು ಮರೆಯುವಂತಿಲ್ಲ. ಹೀಗಾಗಿ, ಸಿಂಗಪುರದಲ್ಲಿ ಅಕಸ್ಮಾತ್ ಒಪ್ಪಂದವಾದರೆ ಎರಡೂ ಕೊರಿಯಾಗಳು ಪ್ರತ್ಯೇಕ ಅಸ್ತಿತ್ವ ಉಳಿಸಿಕೊಳ್ಳುವಂತೆ ನೋಡಿಕೊಳ್ಳಬೇಕಾದುದು ಮುಖ್ಯ. ಒಂದು ಸಮಸ್ಯೆ ನಿವಾರಿಸಲು ಹೋಗಿ ಹಳೆಯ ಸಮಸ್ಯೆಗೆ ಮರುಜೀವ ಕೊಡುವಂತಾಗಬಾರದು. ಕೊರಿಯಾ ಸಮಸ್ಯೆ ಜಟಿಲವಾದುದು. ಅದನ್ನು ಟ್ರಂಪ್ ಅವರು ಭಾವಿಸಿರುವಂತೆ ಸರಳವಾಗಿ ಬಗೆಹರಿಸುವುದು ಕಷ್ಟ.

ಟ್ರಂಪ್ ಅವರು ಭಿನ್ನ ರೀತಿಯ ರಾಜಕಾರಣಿ. ತಮಗೆ ಅನ್ನಿಸಿದ್ದನ್ನು ಹೇಳುವವರು ಮತ್ತು ಅಂತೆಯೇ ನಡೆದುಕೊಳ್ಳುವವರು. ಕೆನಡಾದಲ್ಲಿ ಕಳೆದ ವಾರ ನಡೆದ ಅಭಿವೃದ್ಧಿ ದೇಶಗಳ ಸಭೆಯಲ್ಲಿ ಅವರು ನಡೆದುಕೊಂಡ ರೀತಿ ಇತ್ತೀಚಿನ ಉತ್ತಮ ನಿದರ್ಶನ. ಸಿಂಗಪುರ ಮಾತುಕತೆಯಲ್ಲಿಯೂ ಇದೇ ರೀತಿ ನಡೆದುಕೊಂಡರೆ ಸಮಸ್ಯೆ ಮತ್ತಷ್ಟು ಜಟಿಲವಾಗುವುದು ಖಚಿತ. ಹೊಂದಾಣಿಕೆ ಮನೋಭಾವದಿಂದ ಮಾತುಕತೆ ನಡೆಸಿದರೆ ಮಾತ್ರ ಸಮಸ್ಯೆ ಬಗೆಹರಿಸುವ ದಿಕ್ಕಿನಲ್ಲಿ ನಡೆಯಬಹುದು.

ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
ನಿಕ್ಕಿ ಹ್ಯಾಲಿ ರಾಜೀನಾಮೆ ಹಿಂದೆ ಇರುವ ಕಾರಣವೇನಿರಬಹುದು?
ರಷ್ಯಾದಿಂದ ಎಸ್400 ಕ್ಷಿಪಣಿ ಖರೀದಿ ಒಪ್ಪಂದ; ಟ್ರಂಪ್ ಕೆಂಗಣ್ಣಿಗೆ ಗುರಿಯಾಗಲಿದೆ ಭಾರತ
Editor’s Pick More