ನಿಖರ ಕಾರ್ಯಕ್ರಮವಿಲ್ಲದ ಟ್ರಂಪ್-ಕಿಮ್ ಒಪ್ಪಂದ; ಶಾಂತಿಯುತವಾಗಿ ನಡೆದ ಶೃಂಗಸಭೆ

ಟ್ರಂಪ್ ಮತ್ತು ಕಿಮ್ ನಡುವೆ ಸಿಂಗಪುರದಲ್ಲಿ ಮಂಗಳವಾರ ನಡೆದ ಶೃಂಗಸಭೆ ಕೊರಿಯಾ ವಲಯದಲ್ಲಿ ಪರಮಾಣು ನಿಶ್ಯಸ್ತ್ರೀಕರಣಕ್ಕೆ ದಾರಿ ಮಾಡಿಕೊಟ್ಟಿದೆ. ಉಭಯ ನಾಯಕರು ಹಳೆಯದೆಲ್ಲ ಮರೆತು ಸೌಹಾರ್ದದಿಂದ ಮಾತುಕತೆ ನಡೆಸಿ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದು, ಮೆಚ್ಚುಗೆ ವ್ಯಕ್ತವಾಗಿದೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಡುವೆ ಸಿಂಗಪುರದಲ್ಲಿ ಮಂಗಳವಾರ ನಡೆದ ಐತಿಹಾಸಿಕ ಶೃಂಗಸಭೆ ಕೊರಿಯಾ ವಲಯದಲ್ಲಿ ಪರಮಾಣು ನಿಶ್ಯಸ್ರ್ತೀಕರಣದತ್ತ ಮೊದಲ ಹೆಜ್ಜೆ ಇಡುವಲ್ಲಿ ಯಶಸ್ವಿಯಾಗಿದೆ.

ಉಭಯ ನಾಯಕರು ಹಳೆಯದಲ್ಲವನ್ನೂ ಮರೆತು ಸೌಹಾರ್ದದಿಂದ ಮಾತುಕತೆ ನಡೆಸಿ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದಾರೆ. ಟ್ರಂಪ್ ಅವರ ಪ್ರಕಾರ ಮಾತುಕತೆ ಯಶಸ್ವಿಯಾಗಿದೆ. "ಅಮೆರಿಕದ ನಿರೀಕ್ಷೆಯಂತೆ ಪರಮಾಣು ಅಸ್ತ್ರಗಳನ್ನು ನಾಶ ಮಾಡಲು ಕಿಮ್ ಒಪ್ಪಿದ್ದಾರೆ. ಕಿಮ್ ಅವರ ಕೋರಿಕೆಯಂತೆ ಉತ್ತರ ಕೊರಿಯಾಕ್ಕೆ ಅಗತ್ಯ ಭದ್ರತೆ ಒದಗಿಸಲು ಅಮೆರಿಕ ಒಪ್ಪಿದೆ. ದ್ವೇಷವನ್ನು ಪ್ರಚೋದಿಸಬಹುದಾದಂಥ ಜಂಟಿ ಯುದ್ಧ ಕವಾಯತನ್ನು ದಕ್ಷಿಣ ಕೊರಿಯಾ ಮತ್ತು ಅಮೆರಿಕ ನಿಲ್ಲಿಸಲಿದೆ. ಪರಮಾಣು ನಿಶ್ಯಸ್ತ್ರೀಕರಣವನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಮಾಡಲಾಗುವುದು ಎಂದು ಕಿಮ್ ಭರವಸೆ ನೀಡಿದ್ದಾರೆ. ಆದರೆ ಅದು ಬೇಗ ಆಗುವಂಥದ್ದಲ್ಲ. ಅದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ನನ್ನ ದೃಷ್ಟಿಯಲ್ಲಿ ಅಮೆರಿಕ ಏನನ್ನೂ ಬಿಟ್ಟುಕೊಟ್ಟಿಲ್ಲ," ಎಂದು ಟ್ರಂಪ್ ಅವರು ಶೃಂಗಸಭೆಯ ನಂತರ ಪತ್ರಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಎರಡೂ ಕೊರಿಯಾಗಳ ಗಡಿಯಲ್ಲಿ ಲಕ್ಷಾಂತರ ಸೈನಿಕರು ಎರಡೂ ದೇಶಗಳ ಬದಿಯಲ್ಲಿ ನಿಂತಿದ್ದಾರೆ. ಅಮೆರಿಕದ ಸೈನಿಕರು ಸ್ವದೇಶಕ್ಕೆ ಹಿಂತಿರುಗುವಂತಾಗಬೇಕು. ಪರಮಾಣು ನಿಶ್ಯಸ್ತ್ರೀಕರಣ ಪರಿಣಾಮಕಾರಿಯಾಗಿ ಜಾರಿಗೆ ಬರುತ್ತಿದ್ದಂತೆಯೇ ಸೈನಿಕರು ಹಿಂತಿರುಗುತ್ತಾರೆ ಎಂದು ಟ್ರಂಪ್ ಹೇಳಿದ್ದಾರೆ. ಕಿಮ್ ಅವರನ್ನು ಪ್ರತಿಭಾನ್ವಿತರು ಎಂದು ವರ್ಣಿಸಿ ಮೆಚ್ಚುಗೆ ಸೂಚಿಸಿದ ಟ್ರಂಪ್, ಒಪ್ಪಂದದಂತೆ ಕಿಮ್ ನಡೆದುಕೊಳ್ಳುತ್ತಾರೆ ಎಂಬ ಭರವಸೆ ತಮಗಿದೆ ಎಂದು ಹೇಳಿದರು.

"ನಮ್ಮ ಇತಿಹಾಸ ಸದಾ ನಮ್ಮನ್ನು ಹಿಂದಕ್ಕೆ ಸರಿಯುವಂತೆ ಮಾಡುತ್ತಿತ್ತು. ಹಳೆಯ ಪದ್ಧತಿಗಳು ಮತ್ತು ಪೂರ್ವಗ್ರಹಗಳು ನಮ್ಮ ಕಣ್ಣು, ಕಿವಿಗಳನ್ನು ಮುಚ್ಚಿದ್ದವು. ಆದರೆ, ನಾವು ಅವುಗಳನ್ನೆಲ್ಲ ಮೀರಿ ಮುನ್ನುಗ್ಗಿ ಇಲ್ಲಿಗೆ ಬಂದಿದ್ದೇವೆ. ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ,” ಎಂದು ಕಿಮ್ ಪ್ರತಿಕ್ರಿಯಿಸಿದ್ದಾರೆ. ಮಾತುಕತೆ ಉತ್ತಮವಾಗಿತ್ತು ಮತ್ತು ಕಿಮ್ ಅವರ ಜೊತೆ ಉತ್ತಮ ಬಾಂಧವ್ಯ ಬೆಳೆಯಿತು ಎಂದು ಟ್ರಂಪ್ ಹೊಗಳಿದ್ದಾರೆ. ಪರಸ್ಪರ ನಾಯಕರು ತಮ್ಮ ದೇಶಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಆದರೆ ಅದು ಯಾವಾಗ ಸಾಧ್ಯವಾಗುತ್ತದೆ ಎನ್ನುವುದನ್ನು ಕಾದುನೋಡಬೇಕು.

ಇದನ್ನೂ ಓದಿ : ಅಂತೂ ಸಿಂಗಪುರ ಸೇರಿದ ಕಿಮ್-ಟ್ರಂಪ್; ಉಳಿದಿರುವುದು ಒಪ್ಪಂದದ ಕುತೂಹಲ

ಕಿಮ್ ಅತ್ಯಂತ ಕ್ರೂರ ಎಂದು ವರ್ಣಿಸಲಾಗಿರುವ ಸರ್ವಾಧಿಕಾರಿ. ತಮ್ಮ ಅಧಿಕಾರಕ್ಕೆ ಸವಾಲೊಡ್ಡಬಹುದಾದ ತಮ್ಮ ಸೋದರನನ್ನು ಕೊಲ್ಲಿಸಿದ ಮತ್ತು ತಮ್ಮ ವಿರೋಧಿಗಳನ್ನು ಮುಗಿಸಿದ ಆಪಾದನೆಗೆ ಒಳಗಾಗಿರುವ ಕಿಮ್, ಇಂದು ಜಗತ್ತಿನ ಅತ್ಯಂತ ಕುಖ್ಯಾತ ವ್ಯಕ್ತಿ. ಕೇವಲ ಆರು ತಿಂಗಳ ಹಿಂದೆಯಷ್ಟೇ ಅಮೆರಿಕಕ್ಕೆ ಸವಾಲೊಡ್ಡಿದವರು. ಅಮೆರಿಕ ಮೇಲೆ ಪರಮಾಣು ಬಾಂಬ್ ದಾಳಿ ನಡೆಸಬಹುದಾದ ಕ್ಷಿಪಣಿ ತಮ್ಮ ಬಳಿ ಇದೆ ಎಂದು ಕೊಚ್ಚಿಕೊಂಡವರು. ಇಂಥ ವ್ಯಕ್ತಿ ಎಲ್ಲ ಅಹಂ ಬಿಟ್ಟು ಅಮೆರಿಕದ ಜೊತೆ ಮಾತುಕತೆಗೆ ಬರುತ್ತಾರೆನ್ನುವುದು ಊಹೆಗೂ ನಿಲುಕದ ವಿಚಾರ. ಇದೇ ರೀತಿ ಟ್ರಂಪ್ ಕೂಡ ವಿಚಿತ್ರ ವ್ಯಕ್ತಿ. ಉಗ್ರ ರಾಷ್ಟ್ರೀಯವಾದಿ. ಹೀಗಾಗಿ, ಹಳೆಯ ಸ್ನೇಹಿತರ ಹಗೆ ಕಟ್ಟಿಕೊಳ್ಳಲೂ ಅಂಜದವರು. ಜಿ-7 ದೇಶಗಳ ಶೃಂಗಸಭೆಯನ್ನೇ ನೋಡಬಹುದು; ತಮ್ಮ ಹತ್ತಿರದ ಸ್ನೇಹಿತರೆನ್ನಲಾದ ಕೆನಡಾದ ಪ್ರಧಾನಿ ಟ್ರುಡೋ, ಫ್ರಾನ್ಸ್ ಪ್ರಧಾನಿ ಮೆಕ್ರಾನ್ ಅವರನ್ನೇ ಟ್ರಂಪ್ ಧಿಕ್ಕರಿಸಿ ಜಂಟಿ ಹೇಳಿಗೆ ಸಹಿ ಹಾಕಲು ನಿರಾಕರಿಸಿ ವಿವಾದವನ್ನೇ ಎಬ್ಬಿಸಿದ್ದಾರೆ. ಜಿ-7ನಂಥ ಹಳೆಯ ಶ್ರೀಮಂತ ದೇಶಗಳ ಕೂಟವನ್ನೇ ಒಡೆದಿದ್ದಾರೆ. ಇಂಥ ಒರಟು ಸ್ವಭಾವದ ಮತ್ತು ವ್ಯಾಪಾರಿ ಧೋರಣೆಯ ಟ್ರಂಪ್ ಅವರು ಕಿಮ್ ಜೊತೆಗೆ ವಿನಯದಿಂದ ವರ್ತಿಸಿದ್ದು ಯಾರಿಗಾದರೂ ಆಶ್ಚರ್ಯ ಹುಟ್ಟಿಸುವಂಥದ್ದು.

ಇದೇನೇ ಇದ್ದರೂ, ಉಭಯ ನಾಯಕರ ನಡುವೆ ಆಗಿರುವ ಒಪ್ಪಂದದಲ್ಲಿ ಸ್ಪಷ್ಟತೆ ಇಲ್ಲ. ಯಾವುದಕ್ಕೂ ಕಾಲ ನಿಗದಿಯಾಗಿಲ್ಲ. ಮುಂದಿನ ಕಾರ್ಯಕ್ರಮಗಳ ವಿವರಗಳಿಲ್ಲ. ಕನಿಷ್ಠ ಈ ಒಪ್ಪಂದ ಪರಿಣಾಮ ಆಗಲಿರುವ ಜಪಾನ್ ಮತ್ತು ದಕ್ಷಿಣ ಕೊರಿಯಾ ಜೊತೆ ಮಾತುಕತೆ ನಡೆಸುವ ಪ್ರಸ್ತಾಪವೂ ಇಲ್ಲ. ಉತ್ತರ ಕೊರಿಯಾದಲ್ಲಿರುವ ಪರಮಾಣು ಸ್ಥಾವರಗಳ ಸಮೀಕ್ಷೆ ಮತ್ತು ಪರಮಾಣು ನಿಶ್ಯಸ್ತ್ರೀಕರಣವನ್ನು ಯಾವುದಾದರೂ ಅಂತಾರಾಷ್ಟ್ರೀಯ ಸಂಸ್ಥೆಗೆ ಒಪ್ಪಿಸಬೇಕು. ಈ ಬಗ್ಗೆ ವಿವರಗಳಿಲ್ಲ. ಈ ಎಲ್ಲ ಕಾರ್ಯಗಳಿಗೆ ಸಾಕಷ್ಟು ಹಣ ವೆಚ್ಚವಾಗುತ್ತದೆ. ಅದನ್ನು ಯಾರು ಹೊರಬೇಕು ಎಂಬ ಬಗ್ಗೆ ಸೂಚನೆಗಳಿಲ್ಲ. ಕಿಮ್ ಜೊತೆಗೆ ಮಾತುಕತೆ ನಡೆಸಿದ್ದೇ ಸಾಧನೆ ಎನ್ನುವುದಾದರೆ ಅದೊಂದು ವ್ಯರ್ಥ ಕಸರತ್ತು ಮಾತ್ರ ಎನ್ನುವುದು ಬಹಳ ಮಂದಿ ಅಂತಾರಾಷ್ಟ್ರೀಯ ತಜ್ಞರ ಅಭಿಪ್ರಾಯ.

ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
ನಿಕ್ಕಿ ಹ್ಯಾಲಿ ರಾಜೀನಾಮೆ ಹಿಂದೆ ಇರುವ ಕಾರಣವೇನಿರಬಹುದು?
ರಷ್ಯಾದಿಂದ ಎಸ್400 ಕ್ಷಿಪಣಿ ಖರೀದಿ ಒಪ್ಪಂದ; ಟ್ರಂಪ್ ಕೆಂಗಣ್ಣಿಗೆ ಗುರಿಯಾಗಲಿದೆ ಭಾರತ
Editor’s Pick More