ಮುಸ್ಲಿಂ ದೇಶಗಳ ಮೇಲೆ ನಿಷೇಧ , ಟ್ರಂಪ್ ಆದೇಶ ರದ್ದು ಮಾಡಲು ಸುಪ್ರೀಂಕೋರ್ಟ್ ನಕಾರ

ಕೆಲವು ದೇಶಗಳ ಮುಸ್ಲಿಮರು ತಮ್ಮ ದೇಶಕ್ಕೆ ಬರುವುದನ್ನು ನಿಷೇಧಿಸಿದ್ದ ಡೊನಾಲ್ಡ್ ಟ್ರಂಪ್ ಅವರ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಟ್ರಂಪ್ ಅಂಥ ಆದೇಶ ಹೊರಡಿಸುವ ಅಧಿಕಾರ ಹೊಂದಿದ್ದಾರೆ ಮತ್ತು ಅದು ಕಾನೂನು ಬದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಈಗ ವಿವಾದ ಎಬ್ಬಿಸಿದೆ

ಸಿರಿಯಾ, ಲಿಬಿಯಾ, ಇರಾನ್ , ಯೆಮೆನ್, ಸೊಮಾಲಿಯಾ, ವೆನಿಜುವೆಲಾ ಮತ್ತು ಉತ್ತರ ಕೊರಿಯಾದ ಜನರು ಅಮೆರಿಕ್ಕೆ ಬರುವುದನ್ನು ನಿಷೇಧಿಸಿದ್ದ (ಟ್ರಾವೆಲ್ ಬ್ಯಾನ್) ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶ ಕಾನೂನು ಬದ್ಧವಾಗಿದೆ ಮತ್ತು ಅಂಥ ಆದೇಶ ಹೊರಡಿಸುವ ಅಧಿಕಾರ ಅವರಿಗೆ ಇದೆ ಎಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಈಗ ಸಾಕಷ್ಟು ವಿವಾದ ಎಬ್ಬಿಸಿದೆ.

ಡೊನಾಲ್ಡ್ ಟ್ರಂಪ್ ಅವರು ಈ ಆದೇಶ ಹೊರಡಿಸಿದ ದಿನದಿಂದಲೂ ಈ ವಿಚಾರವಾಗಿ ದೊಡ್ಡ ವಿವಾದ ಉಂಟಾಗಿತ್ತು. ಆ ಆದೇಶದ ವಿರುದ್ಧ ಹಲವರು ಸ್ಥಳೀಯ ನ್ಯಾಯಾಲಯಗಳ ಮೊರೆ ಹೋಗಿದ್ದರು. ಅಂಥ ಎರಡು ಮನವಿಗಳಿಗೆ ಎರಡು ಕೋರ್ಟ್‍ಗಳು ಮಾನ್ಯತೆ ನೀಡಿ ಆದೇಶಕ್ಕೆ ತಡೆ ನೀಡಿದ್ದವು. ಕೋರ್ಟ್‍ಗಳು ತಡೆ ನೀಡಿದ ನಂತರ ಆ ಆದೇಶ ಮರು ಪರಿಶೀಲನೆಗೆ ಒಳಪಡಿಸಲಾಗಿತ್ತು. ಕೆಲವು ಬದಲಾವಣೆಗಳೂ ಆಗಿದ್ದವು. ಆ ಆದೇಶವನ್ನು ಪ್ರಶ್ನಿಸಿದ್ದ ಮೂರನೆಯ ಅರ್ಜಿ ಕುರಿತಂತೆ ಇದೀಗ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈ ತೀರ್ಪು ಸಹಜವಾಗಿಯೇ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ.

ವಿಶ್ವದ ಹಲವು ಭಾಗಗಳಳ್ಲಿ ನಡೆಯುತ್ತಿರುವ ಹಿಂಸಾಚಾರ ಅಥವಾ ಭಯೋತ್ಪಾದನೆಯ ಹಿಂದೆ ಇರುವವರು ಮುಸ್ಲಿಮ್ ಉಗ್ರವಾದಿಗಳು. ಅಸ್ಥಿರತೆ ಎದುರಿಸುತ್ತಿರುವ ದೇಶಗಳ ಮುಸ್ಲಿಮ್ ಉಗ್ರವಾದಿಗಳಿಂದ ಅಮೆರಿಕದ ಭದ್ರತೆಗೂ ಬೆದರಿಕೆ ಇದೆ. ಆದ್ದರಿಂದ ಅಸ್ಥಿರ ಪರಿಸ್ಥಿತಿ ಇರುವ ಆರು ದೇಶಗಳ ಜನರು ಅಮೆರಿಕಕ್ಕೆ ಬರುವುದರ ಮೇಲೆ ನಿಷೇಧ ಹೇರಿ ಟ್ರಂಪ್ ಆದೇಶ ಹೊರಡಿಸಿದ್ದರು. ಈ ಪೈಕಿ ನಾಲ್ಕು ದೇಶಗಳು ಮುಸ್ಲಿಮರ ಪ್ರಾಬಲ್ಯದ ದೇಶಗಳು. ಈ ಟ್ರಾವೆಲ್ ಬ್ಯಾನ್ ಆದೇಶದ ಪ್ಯಾಪ್ತಿಗೆ ಬಹುಪಾಲು ಮುಸ್ಲಿಮ್ ಪ್ರಾಬಲ್ಯದ ದೇಶಗಳೇ ಬರುವುದರಿಂದ ಮುಸ್ಲಿಮರ ಬಗ್ಗೆ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂಬ ಆರೋಪ ಬಂದಿತ್ತು. ಜೊತೆಗೆ ಎಲ್ಲ ಅಸ್ಥಿರ ದೇಶಗಳೂ ಈ ಪಟ್ಟಿಗೆ ಸೇರ್ಪಡೆಯಾಗಿರಲಿಲ್ಲ. ಹಾಗೆ ನೋಡಿದರೆ ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ದಾಳಿ ಮಾಡಿದ ಉಗ್ರವಾದಿಗಳೂ ಸೌದಿ ಅರೇಬಿಯಾದಲ್ಲಿ ತರಬೇತಿ ಪಡೆದಿದ್ದವರು. ಅದೇ ರೀತಿ ಈಜಿಪ್ಟ್, ಆಫ್ಘಾನಿಸ್ತಾನ ಮುಂತಾದ ದೇಶಗಳ ಉಗ್ರರು ಅಮೆರಿಕದಲ್ಲಿ ನಡೆದ ಹಲವು ಭಯೋತ್ಪಾದನಾ ದಾಳಿಗಳಲ್ಲಿ ಭಾಗವಹಿಸಿದ್ದರೆಂಬ ವರದಿಗಳಿವೆ. ಈ ದೇಶಗಳನ್ನು ಟ್ರಾವೆಲ್ ಬ್ಯಾನ್ ವ್ಯಾಪ್ತಿಗೆ ತರದಿರುವುದು ಅನುಮಾನಕ್ಕೆ ಆಸ್ಪದ ನೀಡುತ್ತದೆ. ಟ್ರಾವಲ್ ಬ್ಯಾನ್ ವ್ಯಾಪ್ತಿಗೆ ತಂದಿರುವ ದೇಶಗಳಿಗೆ ಸೇರಿದವರಾರೂ ಅಮೆರಿಕದಲ್ಲಿ ಭಯೋತ್ಪಾದನೆ ಕೃತ್ಯ ನಡೆಸಿದ ಉದಾಹರಣೆಗಳಿಲ್ಲ. ಈ ಕಾರಣದಿಂದ ಈಗ ಹೊರಡಿಸಿರುವ ಆದೇಶ ಪೂರ್ವಗ್ರಹ ಪೀಡಿತವಾದುದು ಮತ್ತು ಅಂಥ ಆದೇಶ ಹೊರಡಿಸುವ ಅಧಿಕಾರ ಟ್ರಂಪ್ ಅವರಿಗೆ ಇಲ್ಲ ಎಂದು ಈ ಆದೇಶದ ವಿರೋಧಿಗಳು ಕೋರ್ಟಿನಲ್ಲಿ ವಾದ ಮಂಡಿಸಿದ್ದರು.

ಈ ಆದೇಶದಲ್ಲಿ ಅಡಕವಾಗಿರುವ ಅಂಶವನ್ನು ಪರಿಶೀಲನೆಗೆ ಒಳಪಡಿಸದ ಸುಪ್ರೀಂ ಕೋರ್ಟ್ ಅಂಥ ಆದೇಶ ಹೊರಡಿಸುವ ಅಧಿಕಾರ ಟ್ರಂಪ್ ಅವರಿಗೆ ಇದೆಯೇ ಎಂಬ ಪ್ರಶ್ನೆಯನ್ನು ಮಾತ್ರ ವಿವರವಾಗಿ ಪರಿಶೀಲಿಸಿ ತೀರ್ಪು ನೀಡಿದೆ. ದೇಶದ ಭದ್ರತೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಅಧಿಕಾರ ಅಮೆರಿಕದ ಅಧ್ಯಕ್ಷರಿಗೆ ಇದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಒಂಬತ್ತು ಸದಸ್ಯರಿದ್ದ ನ್ಯಾಯಪೀಠದಲ್ಲಿ ಐವರು ಪರವಾಗಿ ಮತ್ತು ನಾಲ್ಕು ಮಂದಿ ನ್ಯಾಯಮೂರ್ತಿಗಳು ವಿರೋಧವಾಗಿ ಮತನೀಡಿದ್ದಾರೆ. ಸಂಪ್ರದಾಯವಾದಿ ಮೌಲ್ಯಗಳಲ್ಲಿ ನಂಬಿಕೆ ಇರುವ ನ್ಯಾಯಮೂರ್ತಿಗಳ ಪ್ರಾಬಲ್ಯದ ಕೋರ್ಟ್ ಇದಾಗಿತ್ತು. ಬಹುಮತ ತೀರ್ಪಿನ ವಿರುದ್ಧ ಮತನೀಡಿರುವ ನ್ಯಾಯಮೂರ್ತಿಗಳು ಟ್ರಂಪ್ ಅವರ ಆದೇಶ ಜನಾಂಗ ತಾರತಮ್ಯದಿಂದ ಕೂಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಟ್ರಂಪ್ ಸುಂಕಕ್ಕೆ ಭಾರತ ಎದಿರೇಟು; ಯುಎಸ್ ಸರಕುಗಳಿಗೆ ₹1640 ಕೋಟಿ ತೆರಿಗೆ

ಅಂಥ ಆದೇಶ ಹೊರಡಿಸುವ ಅಧಿಕಾರ ದೇಶದ ಅಧ್ಯಕ್ಷರಿಗೆ ಇದೆ ಎಂದಷ್ಟೇ ಕೋರ್ಟ್ ಹೇಳಿರುವುದರಿಂದ ಆದೇಶ ಸಮರ್ಥನೀಯವಾದುದೇ ಇಲ್ಲವೇ ಎಂಬುದನ್ನು ಪರಿಶೀಲಿಸಲು ಈಗ ಅವಕಾಶ ಉಳಿದಿದೆ. ಅಧಿಕಾರ ಇದೆ ಎಂದಾಗಿರುವುದರಿಂದ ಟ್ರಂಪ್ ಆ ಪಟ್ಟಿಗೆ ಮತ್ತಷ್ಟು ದೇಶಗಳನ್ನು ಸೇರಿಸಬಹುದಾದ ಸಾಧ್ಯತೆ ಇದೆ ಎಂಬ ಆತಂಕವನ್ನು ಕೆಲವು ಡೆಮಾಕ್ರಟಿಕ್ ಸದಸ್ಯರು ವ್ಯಕ್ತಮಾಡಿದ್ದಾರೆ. ಆದ್ದರಿಂದ ಈ ಆದೇಶವನ್ನು ಕಾಂಗ್ರೆಸ್ ಮುಂದೆ ತಂದು ಚರ್ಚೆಗೆ ಒಳಪಡಿಸಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ. ಕಾಂಗ್ರೆಸ್ ಮುಂದೆ ಆದೇಶವನ್ನು ಚರ್ಚೆಗೆ ತಂದು ಅಲ್ಲಿ ಅದನ್ನು ರದ್ದು ಮಾಡಬೇಕೆಂದು ಅವರು ಆಗ್ರಹಮಾಡಿದ್ದಾರೆ. ಕಾಂಗ್ರೆಸ್ ಮುಂದೆ ಈ ವಿಷಯ ಚರ್ಚೆಗೆ ಬರುವುದು ಖಚಿತ.

ಈ ಮಧ್ಯೆ ಟ್ರಾವೆಲ್ ಬ್ಯಾನ್‍ಗೆ ಒಳಪಟ್ಟ ದೇಶಗಳಿಂದ ಅಮೆರಿಕಕ್ಕೆ ಬರುವ ಜನರ ಸಂಖ್ಯೆ ಇಳಿದಿದೆ. ಈ ದೇಶಗಳಿಂದ ಬಂದವರನ್ನಲ್ಲಾ ವಾಪಸ್ ಕಳುಹಿಸುತ್ತಿಲ್ಲ. ಅವರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವ ಪ್ರಕ್ರಿಯೆ ನಡೆಯುತ್ತಿದ್ದು ಕೆಲವರಿಗೆ ಪ್ರವೇಶ ಕೊಟ್ಟಿರುವ ನಿದರ್ಶನಗಳೂ ಇವೆ ಎಂದು ಹೇಳಲಾಗಿದೆ.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More