ಅಸಹಿಷ್ಣು ಅಮೆರಿಕದಲ್ಲಿ ಸವರ್ಣೀಯನ ಗುಂಡಿಗೆ ಬಲಿಯಾದರು ಐವರು ಪತ್ರಕರ್ತರು

ಅಮೆರಿಕದ ಬಂದೂಕುಗಳು ಜೀವಗಳನ್ನು ಬಲಿ ಪಡೆಯುತ್ತಲೇ ಇವೆ. ದ್ವೇಷ ಶೂಟೌಟ್‌ಗಳಲ್ಲಿ ಕೊನೆಯಾಗುತ್ತಿರುವುದು ದುರಂತ. ಸಹಿಷ್ಣುತೆ ಮಾಯವಾಗುತ್ತಿರುವ ಅಮೆರಿಕದಲ್ಲಿ ಮಾಧ್ಯಮದ ಮೇಲೆ ವಿವಿಧ ರೀತಿಯ ಒತ್ತಡ ಇರುವಾಗ, ಐವರು ಪತ್ರಕರ್ತರು ಶೂಟೌಟ್‌ನಲ್ಲಿ ಹತರಾಗಿದ್ದಾರೆ

"ಅಧ್ಯಕ್ಷ ಟ್ರಂಪ್‌ ನಮ್ಮ ಪರವಾಗಿ ಪ್ರಾರ್ಥನೆ ಸಲ್ಲಿಸಿರುವುದಾಗಿ ಕೇಳಿದೆ. ನಾವು ಈ ಸಂದರ್ಭವನ್ನು ರಾಜಕೀಯ ಗೊಳಿಸುತ್ತಿಲ್ಲ, ಅಲ್ಲವೆ? ಹಾಗಾಗಿ ನಾನು ಸ್ಪಷ್ಟವಾಗಿ ಹೇಳಬಯಸುವುದೇನೆಂದರೆ, ನಮಗೆ ಈ ಹೊತ್ತಿನಲ್ಲಿ ಬೇಕಿರುವುದು ಪ್ರಾರ್ಥನೆಯಷ್ಟೇ ಅಲ್ಲ. ಪ್ರಾರ್ಥನೆ ಬೇಕು ನಿಜ. ನಾನೂ ಮೇಜಿನ ಕೆಳಗೆ ಜೀವ ರಕ್ಷಿಸಲು ಕೂತಾಗ ಪ್ರಾರ್ಥನೆಯನ್ನೇ ಮಾಡುತ್ತಿದೆ. ನನಗೆ ನಿಮ್ಮ ಪ್ರಾರ್ಥನೆ ಬೇಕು. ಆದರೆ, ಅದಕ್ಕಿಂತ ಹೆಚ್ಚಿನದೇನೋ ಬೇಕು...''

ಅಮೆರಿಕದ ಮೇರಿಲ್ಯಾಂಡ್‌ನಲ್ಲಿರುವ 'ದಿ ಕ್ಯಾಪಿಟಲ್‌ ಗೆಜೆಟ್‌’ ಪತ್ರಿಕೆಯ ಸಿಬ್ಬಂದಿ ಸೆಲೆನ್‌ ಸ್ಯಾನ್‌ ಫೆಲಿಸ್‌, ತಮ್ಮ ಕಚೇರಿಯ ಮೇಲೆ ವ್ಯಕ್ತಿಯೊಬ್ಬನಿಂದ ನಡೆದ ಗನ್‌ ದಾಳಿಗೆ ಪ್ರತಿಕ್ರಿಯಿಸಿದ್ದು ಹೀಗೆ.

ಜಾರ್ಡ್‌ ವಾರೆನ್‌ ರಮೋಸ್‌ ಎಂಬಾತ ಪತ್ರಿಕಾ ಕಚೇರಿಗೆ ನುಗ್ಗಿದವನೇ ಏಕಾಏಕಿ ಗುಂಡಿನ ದಾಳಿ ನಡೆಸಿದ. ಈ ಘಟನೆಯಲ್ಲಿ ಐದು ಮಂದಿ ಜೀವ ಕಳೆದುಕೊಂಡರು. ಕೆಲವರು ತೀವ್ರವಾಗಿ ಗಾಯಗೊಂಡರು. ತೀವ್ರ ಆಘಾತವನ್ನುಂಟು ಮಾಡಿದ ಈ ಘಟನೆಯಿಂದ ಅಮೆರಿಕವೇ ದಿಗ್ಭ್ರಾಂತವಾಗಿದೆ.

ಟ್ರಂಪ್‌ ಆಡಳಿತದಲ್ಲಿ ಅಮೆರಿಕದಲ್ಲಿ ಜನಾಂಗೀಯ ದ್ವೇಷ, ಅಸಹಿಷ್ಣುತೆ ತೀವ್ರವಾಗಿದ್ದು, ಶಾಲೆಗಳಲ್ಲಿ ಶೂಟೌಟ್‌ ಪ್ರಕರಣಗಳು ಹೆಚ್ಚಿದ್ದು ಸುದ್ದಿಯಾಗುತ್ತಲೇ ಈಗ. ಪತ್ರಕರ್ತರು ಅಂಥ ಅಸಹಿಷ್ಣುತೆಗೆ ಗುರಿಯಾಗುತ್ತಿದ್ದಾರೆ. ಇದಕ್ಕೆ ‘ಕ್ಯಾಪಿಟಲ್‌ ಗೆಝೆಟ್‌’ ಪತ್ರಿಕೆ ಮೇಲೆ ನಡೆದ ದಾಳಿಯ ಉದಾಹರಣೆ.

ಕಚೇರಿಯಲ್ಲೇ ಇದ್ದ ಕ್ರೈಮ್‌ ವರದಿಗಾರ ಫಿಲಿಪ್ಸ್‌ ಡೇವಿಸ್‌, "ಟೇಬಲಿನಡಿ ಕುಳಿತಾಗ ಒಮ್ಮೆಗೆ ಹಲವು ವ್ಯಕ್ತಿಗಳು ಗುಂಡೇಟಿಗೆ ಗುರಿಯಾಗುವುದು, ಬಂದೂಕು ಹಿಡಿದ ವ್ಯಕ್ತಿ ಗುಂಡುಗಳನ್ನು ರೀಲೋಡ್ ಮಾಡಿಕೊಳ್ಳುವ ಸದ್ದು ಕೇಳಿಸಿಕೊಳ್ಳುವುದಕ್ಕಿಂತ ಭಯಾನಕವಾದ್ದು ಮತ್ತೊಂದಿರಲಿಕ್ಕಿಲ್ಲ,'' ಎಂದು ಟ್ವೀಟ್‌ ಮಾಡಿದ್ದರು.

ಇನ್ನೊಂದು ಟ್ವೀಟ್‌ನಲ್ಲಿ, "ಬಂದೂಕುಧಾರಿ ಕಚೇರಿಯ ಗ್ಲಾಸ್‌ ಮೂಲಕ ಶೂಟ್‌ ಮಾಡಿದ, ನಂತರ ಕಚೇರಿಯ ಹಲವು ಉದ್ಯೋಗಿಗಳ ಮೇಲೆ ಗುಂಡಿನ ಮಳೆ ಸುರಿಸಿದ. ಹೆಚ್ಚು ಹೇಳಲು ಸಾಧ್ಯವಾಗುತ್ತಿಲ್ಲ ಮತ್ತು ಯಾರದೇ ಸಾವನ್ನು ಘೋಷಿಸುವುದಿಲ್ಲ. ಆದರೆ ಪರಿಸ್ಥಿತಿ ಕೆಟ್ಟದಾಗಿದೆ,'' ಎಂದು ತಮ್ಮ ಸಂಕಟದ ಕ್ಷಣವನ್ನು ಹಂಚಿಕೊಂಡಿದ್ದರು.

ಮೃತ ಸಿಬ್ಬಂದಿ

ವೆಂಡಿ ವಿಂಟರ್ಸ್, ವರದಿಗಾರ
ರೆಬೆಕ್ಕಾ ಸ್ಮಿತ್‌, ಮಾರುಕಟ್ಟೆ ಸಹಾಯಕ
ರಾಬರ್ಟ್‌ ಹೈಸೆನ್‌, ಸಂಪಾದಕ
ಗೆರಾಲ್ಡ್‌ ಫಿಶ್‌ಮನ್‌, ಸಂಪಾದಕೀಯ ಬರಹಗಾರ
ಜಾನ್‌ ಮ್ಯಾಕ್‌ನೆಮಾರ, ವರದಿಗಾರ

ಗುಂಡಿನ ದಾಳಿ ನಡೆಸಿರುವ ಜಾರ್ಡ್‌ ವಾರೆನ್‌ ರಮೋಸ್‌ ೨೦೧೨ರಲ್ಲಿ ಇದೇ ಪತ್ರಿಕೆಯ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದ. ಈತನ ವಿರುದ್ಧ ವಿವಿಧ ರೀತಿಯ ದೂರುಗಳಿದ್ದವು ಎಂದು ಸ್ಥಳೀಯ ಪೊಲೀಸರು ಖಚಿತಪಡಿಸಿದ್ದು, ಗುಂಡಿನ ದಾಳಿ ನಿರ್ದಿಷ್ಟ ಉದ್ದೇಶದಿಂದಲೇ ನಡೆಸಿರುವಂಥದ್ದು ಎಂದು ಹೇಳಿದ್ದಾರೆ.

ಈ ಬೆಳವಣಿಗೆ ಪತ್ರಕರ್ತರಲ್ಲಿ ಜೀವಭಯ, ಆತಂಕಗಳನ್ನು ಹುಟ್ಟಿಸಿದ್ದು, ಕ್ಯಾಪಿಟೆಲ್‌ ಗೆಝೆಟ್‌ನ ಸಿಬ್ಬಂದಿಯೇ ರಾಜಿನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ. ಇನ್ನೊಂದೆಡೆ ಪತ್ರಕರ್ತರ ಹಿತ ಕಾಯುವ ಸಮಿತಿ ಈ ಘಟನೆಯನ್ನು ಖಂಡಿಸಿ, ಸಮಗ್ರ ತನಿಖೆಗೆ ಆಗ್ರಹಿಸಿದೆ.

ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಈ ಘಟನೆಗೆ ಪ್ರತಿಕ್ರಿಯಿಸಿರುವ ರೀತಿ ಆತಂಕದ್ದು: "ಅನ್ನಾಪೊಲೀಸ್‌ನಲ್ಲಿ ನಡೆದಿರುವ ಘಟನೆ ವಾರ, ತಿಂಗಳಿಗೊಮ್ಮೆ ನಡೆಯುತ್ತಲೇ ಇರುತ್ತವೆ ಅನ್ನಿಸುತ್ತಿದೆ. ಘಟನೆಯಲ್ಲಿ ನೊಂದ ಕುಟುಂಬ ಮತ್ತು ಸಂಸ್ಥೆಗೆ ನನ್ನ ಮನ ಮಿಡಿದಿದೆ,'' ಎಂದು ಹೇಳಿದ್ದಾರೆ.

ಘಟನೆಗೆ ಆಘಾತ ವ್ಯಕ್ತಪಡಿಸಿದ ಕೆಲವು ಟ್ವೀಟ್‌ಗಳು

ಮೇರಿಲ್ಯಾಂಡ್‌ ಗವರ್ನರ್‌ ಲ್ಯಾರಿ ಹೊಗಾನ್‌ ಘಟನೆಯನ್ನು ಖಂಡಿಸಿದ್ದಾರೆ. ಡೆಮೊಕ್ರಟಿಕ್‌ ಪಕ್ಷದ ನಾಯಕರು ಟ್ರಂಪ್‌ ಆಡಳಿತ ಕಾರಣವೆಂದು ಆರೋಪಿಸಿದ್ದಾರೆ. ಎಫ್‌ಬಿಐ ಹಾಗೂ ಸ್ಥಳೀಯ ಪೊಲೀಸ್‌ ಸಿಬ್ಬಂದಿ ಘಟನೆಯ ತನಿಖೆ ನಡೆಸುತ್ತಿದೆ.

ಈ ಮಧ್ಯೆ, ಎಂದಿನಂತೆ ಸಂಚಿಕೆಯನ್ನು ಹೊರತಂದಿರುವ 'ದಿ ಕ್ಯಾಪಿಟಲ್‌ ಗೆಝೆಟ್‌' ಸಿಬ್ಬಂದಿ, ಕಳೆದುಕೊಂಡ ತಮ್ಮ ಸಿಬ್ಬಂದಿಗೆ ಗೌರವ ಸೂಚಿಸುವ ಕಾರಣವಾಗಿ ಪುಟ್ಟ ಟಿಪ್ಪಣಿಯೊಂದಿಗೆ ಮುಖಪುಟವನ್ನು ಖಾಲಿ ಬಿಟ್ಟಿದೆ. ಅಮೆರಿಕದಲ್ಲಿ ತೀವ್ರವಾಗುತ್ತಿರುವ ಅಸಹಿಷ್ಣುತೆ ಮತ್ತು ಅದು ಪಡೆದುಕೊಳ್ಳುತ್ತಿರುವ ಹಿಂಸಾತ್ಮಕ ರೂಪದ ಬಗ್ಗೆ ಇರುವ ಆತಂಕವನ್ನು ಈ ಘಟನೆ ಮತ್ತಷ್ಟು ಹೆಚ್ಚಿಸಿದೆ.

‘ದಿ ಕ್ಯಾಪಿಟಲ್‌ ಗೆಝೆಟ್‌’ ಮುಖಪುಟ
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More