ಭಾರತದ ವೀಸಾಗಾಗಿ ಫೇಸ್‌ಬುಕ್ ಮೊರೆಹೋದ ಪಾಕ್ ದಂಪತಿ

ವೈದ್ಯಕೀಯ ವೀಸಾಗೆ ಅರ್ಜಿ ಸಲ್ಲಿಸಿ ಎರಡು ತಿಂಗಳಾದರೂ ಭಾರತದಿಂದ ನೆರವು ಸಿಗುತ್ತಿಲ್ಲ ಎಂದು ದೂರಿ ಪಾಕಿಸ್ತಾನಿ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ. ‘ಪತಿಗೆ ಶ್ವಾಸಕೋಶ ಕಸಿ ಮಾಡಿಸಲು ಚೆನ್ನೈ ಆಸ್ಪತ್ರೆಗೆ ಹೋಗಲಾಗುತ್ತಿಲ್ಲ’ ಎಂದು ಮಹಿಳೆ ದೂರಿದ್ದಾರೆ

ವೈದ್ಯಕೀಯ ವೀಸಾಗೆ ಅರ್ಜಿ ಸಲ್ಲಿಸಿ ಎರಡು ತಿಂಗಳಾದರೂ ಭಾರತದಿಂದ ನೆರವು ಸಿಗುತ್ತಿಲ್ಲ ಎಂದು ದೂರಿ ಪಾಕಿಸ್ತಾನಿ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ. “ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವ ಪತಿಗೆ ಶ್ವಾಸಕೋಶದ ಕಸಿ ಮಾಡಿಸಲು ಚೆನ್ನೈ ಆಸ್ಪತ್ರೆಯಲ್ಲಿ ತಯಾರಿ ನಡೆಸಲಾಗಿದೆ. ಆದರೆ, ಭಾರತಕ್ಕೆ ಆಗಮಿಸಲು, ರಾಯಭಾರಿ ಕಚೇರಿ ನಮಗೆ ವೀಸಾ ನಿರಾಕರಣೆ ಮಾಡಲಾಗುತ್ತಿದೆ,” ಎಂದು ಮಹಿಳೆಯೊಬ್ಬರು ಕೋರಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಆಕೆ ಬರೆದುಕೊಂಡಿರುವ ಪತ್ರ ಇದೀಗ ವೈರಲ್ ಆಗಿದೆ. ಆ ಪತ್ರ ಈ ರೀತಿ ಇದೆ:

"ಸರಿಯಾಗಿ ಇಂದಿಗೆ ನಾಲ್ಕು ತಿಂಗಳ ಹಿಂದೆ ಎಲ್ಲವೂ ಸರಿಯಾಗಿಯೇ ಇತ್ತು. ನಮ್ಮದು ಸುಂದರ ದಾಂಪತ್ಯ. ನನ್ನ ಪತಿ ಅಲೀಮ್ ಹೈದರ್ ಜೊನೆಜೋ ಮತ್ತು ಮರಿಯಾ ಅಬ್ದುಲ್ಲಾ ಎಂಬ ಹೆಸರಿನ ನಾನು ಪಾಕಿಸ್ತಾನದ ನಿವಾಸಿಗಳು. ನನ್ನ ಪತಿ ಅಲೀಮ್, ಅಲೈಡ್ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದರೆ, ನಾನು ಶಾಲೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ನಾಲ್ಕು ತಿಂಗಳ ಹಿಂದೆ ಇದ್ದಕ್ಕಿದ್ದಂತೆ ನನ್ನ ಪತಿ ಅಲೀಮ್ ಹೈದರ್ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದರು. ವಿವಿಧ ರೀತಿಯ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ, ಅಲೀಮ್ ಹೈದರ್ ಶ್ವಾಸಕೋಶದ ಬಹುತೇಕ ಭಾಗ ಹಾನಿಗೊಳಗಾಗಿರುವುದು ದೃಢಪಟ್ಟಿತು. ಕೂಡಲೇ ಆತನಿಗೆ ಶ್ವಾಸಕೋಶದ ಕಸಿ ಮಾಡದೆ ಇದ್ದಲ್ಲಿ ಹೃದಯಾಘಾತವಾಗುವ ಎಚ್ಚರಿಕೆಯನ್ನೂ ವೈದ್ಯರು ನೀಡಿದ್ದಾರೆ. ಅಲೀಮ್‌ಗೆ ಉಸಿರಾಡಲು ಕಷ್ಟವಾಗುತ್ತಿದ್ದು, ಕೃತಕ ಉಸಿರಾಟದ ವ್ಯವಸ್ಥೆ ಅಳವಡಿಸಲಾಗಿದೆ. ಹಾಸಿಗೆ ಹಿಡಿದಿರುವ ನನ್ನ ಪತಿಯನ್ನು ಉಳಿಸಿಕೊಳ್ಳುವ ಸಲುವಾಗಿ ನಾನು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಯ ಮಾಹಿತಿಯನ್ನು ಸಂಗ್ರಹಿಸಲಾರಂಭಿಸಿದೆ. ದುರಂತವೆಂದರೆ, ಶ್ವಾಸಕೋಶದ ಕಸಿ ಮಾಡುವ ಸೌಲಭ್ಯವಿರುವ ಆಸ್ಪತ್ರೆ ಪಾಕಿಸ್ತಾನದಲ್ಲಿ ಇಲ್ಲ. ಗೂಗಲ್ ಸಹಾಯದಿಂದ, ಚೆನ್ನೈನ ಆಸ್ಪತ್ರೆಯೊಂದರಲ್ಲಿ ಶ್ವಾಸಕೋಶದ ಚಿಕಿತ್ಸೆ ಬಗ್ಗೆ ಮಾಹಿತಿ ಸಿಕ್ಕಿತು. ಹೀಗಾಗಿ, ನಾವು ಭಾರತಕ್ಕೆ ಹೋಗಲು ನಿರ್ಧರಿಸಿದೆವು. ಭಾರತವನ್ನೇ ನಾವು ಆಯ್ಕೆ ಮಾಡಿಕೊಳ್ಳಲು ಇತರ ಕಾರಣಗಳೂ ಇದ್ದವು; ಬೇರೆ ದೇಶಕ್ಕೆ ಹೋಲಿಸಿದರೆ ಇಲ್ಲಿ ಚಿಕಿತ್ಸಾ ವೆಚ್ಚ ಕಡಿಮೆ, ಭಾಷೆಯ ಸಮಸ್ಯೆ ಇಲ್ಲ, ಉತ್ತಮ ಚಿಕಿತ್ಸೆ ಹಾಗೂ ಪಯಣದ ಖರ್ಚು ಹೆಚ್ಚಾಗುವುದಿಲ್ಲ. ಹೀಗಾಗಿ, ನಾವು ಚೆನ್ನೈನಲ್ಲಿ ಚಿಕಿತ್ಸೆ ಪಡೆಯಲು ನಿರ್ಧರಿಸಿವು.”

“ಪಾಕಿಸ್ತಾನದಲ್ಲಿ ಇದ್ದುಕೊಂಡೇ, ಚೆನ್ನೈನ ಗ್ಲೋಬಲ್ ಆಸ್ಪತ್ರೆಯ ಸಿಬ್ಬಂದಿಯನ್ನು ಸಂಪರ್ಕಿಸಿ ವಿಚಾರಿಸಿದೆ. ಕೆಲ ದಿನಗಳ ಬಳಿಕ ಆಸ್ಪತ್ರೆಯಿಂದ ನನಗೆ ದೂರವಾಣಿ ಕರೆ ಬಂತು. ಹೀಗಾಗಿ, ನನ್ನ ಪತಿಗೆ ಸಂಬಂಧಿಸಿದ ವೈದ್ಯಕೀಯ ವರದಿಯನ್ನು ರವಾನಿಸಿದೆ. ಪತಿಗೆ ಶ್ವಾಸಕೋಶದ ಕಸಿಯ ಅಗತ್ಯವಿದೆ ಎಂಬುದನ್ನು ವೈದ್ಯರು ಕೂಡ ದೃಢಪಡಿಸಿದರು. ಚಿಕಿತ್ಸೆಗೆ ತಗಲುವ ಅಂದಾಜು ವೆಚ್ಚದ ವಿವರವನ್ನು ಕೂಡ ಆಸ್ಪತ್ರೆಯಿಂದ ನನಗೆ ರವಾನಿಸಿದ ನಂತರ ಹಣ ಹೊಂದಿಸುವ ಕಾರ್ಯ ನಡೆಸಿದೆ. ದಾನಿಗಳಿಂದ ನೆರವು ಯಾಚಿಸಿ, ಚಿಕಿತ್ಸೆಗಾಗಿ ಹಣ ಹೊಂದಿಸಿದೆ. ಬಳಿಕ, ಭಾರತಕ್ಕೆ ತೆರಳುವ ಸಲುವಾಗಿ ವೀಸಾಗೆ ಅರ್ಜಿ ಸಲ್ಲಿಸಿದೆ. ಮನಸ್ಸು ಗಟ್ಟಿ ಮಾಡಿಕೊಂಡು, ಎಲ್ಲವೂ ಒಳ್ಳೆಯದೇ ಆಗುತ್ತದೆ ಎಂಬ ನಂಬಿಕೆಯಲ್ಲಿ ವೀಸಾಗೆ ಅರ್ಜಿ ಸಲ್ಲಿಸಿ ಕೊಂಚ ನೆಮ್ಮದಿಯಿಂದ ಉಸಿರಾಡುತ್ತಿದ್ದ ನಮಗೆ, ಭಾರತೀಯ ಹೈಕಮಿಷನರ್ ಕಚೇರಿಯಲ್ಲಿ ನಮ್ಮ ವೀಸಾ ಅರ್ಜಿ ತಿರಸ್ಕ್ರೃತವಾಗಿದೆ ಎಂಬ ಸುದ್ದಿ ಅಘಾತ ಉಂಟುಮಾಡಿತು. ‘ಸದ್ಯಕ್ಕೆ ನಿಮಗೆ ವೀಸಾ ನೀಡಲು ಸಾಧ್ಯವಿಲ್ಲ. ನೀವು ಮತ್ತೊಮ್ಮೆ ಅರ್ಜಿ ಸಲ್ಲಿಸಿ ಪ್ರಯತ್ನಿಸಬಹುದು’ ಎಂದು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನರ್ ಕಚೇರಿ ನಮಗೆ ಪತ್ರದ ಮೂಲಕ ವಿವರಿಸಿತ್ತು.”

“ಮರುದಿನವೇ ನಾನು ಮತ್ತೊಮ್ಮೆ ವೀಸಾಗೆ ಅರ್ಜಿ ಸಲ್ಲಿಸಿದೆ. ಟ್ವಿಟರ್ ಮೂಲಕ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಸಂಪರ್ಕಿಸುವ ಯತ್ನವನ್ನು ಕೂಡ ಮಾಡಿದೆ. ಸಂಬಂಧಪಟ್ಟವರ ಗಮನ ಸೆಳೆಯುವ ಸಲುವಾಗಿ ನಾನು ಮಾಧ್ಯಮಗಳನ್ನು ಸಂಪರ್ಕಿಸಿದೆ. ವಿಪರ್ಯಾಸವೆಂದರೆ, ಚುನಾವಣೆಯ ಬಗ್ಗೆ ಹೆಚ್ಚು ಗಮನ ಹರಿಸಿದ್ದ ಮಾಧ್ಯಮಗಳಿಗೆ, ನಮ್ಮ ಸಂಕಷ್ಟ ಕಾಣಿಸಲೇ ಇಲ್ಲ. ಭಾರತದ ವೀಸಾ ಪಡೆಯಲು ನಾನು ಸಾಕಷ್ಟು ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಎರಡನೇ ಬಾರಿಗೆ ವೀಸಾಗೆ ಅರ್ಜಿ ಸಲ್ಲಿಸಿದ ಎರಡು ವಾರದ ಬಳಿಕ ನನ್ನ ಪತಿಗೆ ಕರೆಯೊಂದು ಬಂತು. ನಿಮಗೆ ವೈದ್ಯಕೀಯ ವೀಸಾ ನೀಡಲು ಅಸಾಧ್ಯ ಎಂದು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿನ ಅಧಿಕಾರಿಯೊಬ್ಬರು, ನಮ್ಮ ಅರ್ಜಿಯನ್ನು ಸಾರಸಗಾಟಾಗಿ ತಿರಸ್ಕ್ರರಿಸಿದರು.”

“ಪತಿಯ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಈ ಆತಂಕದಲ್ಲೇ ವೀಸಾಗಾಗಿ ಎರಡು ತಿಂಗಳಿನಿಂದ ಕಾಯುತ್ತಿದ್ದ ನಮಗೆ, ರಾಯಭಾರ ಕಚೇರಿಯಿಂದ ಬಂದ ಉತ್ತರದಿಂದ ಹೃದಯವೇ ಒಡೆದುಹೋದಂತಾಯಿತು. ಅಂದು ನನ್ನ ಪತಿ ಅಲೀಮ್ ನಿಜಕ್ಕೂ ಕುಸಿದುಹೋದರು. ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಸಂಪರ್ಕಿಸಲು, ಅವರ ಮನವೊಲಿಸಲು, ನಮ್ಮ ಸಂಕಷ್ಟಗಳ ಕುರಿತಂತೆ ಮನವರಿಕೆ ಮಾಡಿಕೊಡಲು ನಾನು ಅಂದಿನಿಂದ ನಿರಂತರ ಪ್ರಯತ್ನದಲ್ಲಿದ್ದೇನೆ. ಇಷ್ಟಾದರೂ ಅವರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ದೊರೆತಿಲ್ಲ. ಹೀಗಾಗಿ @Maria35752813 ಟ್ವಿಟರ್ ಹ್ಯಾಂಡಲ್‌ನಲ್ಲಿ ನಾನು ಅಭಿಯಾನವನ್ನೇ ಆರಂಭಿಸಿದ್ದು, ನನ್ನ ಜೀವನ ಸಂಗಾತಿಯನ್ನು ಉಳಿಸಲು ನೆರವಾಗುವಂತೆ ಅಂಗಲಾಚುತ್ತಿದ್ದೇನೆ. ಭಾರತಕ್ಕೆ ಹೋಗಲು ನನಗೆ ವೀಸಾ ಸಿಕ್ಕಿಲ್ಲದಿದ್ದರೆ ನಾವು ಬೇರೆ ದೇಶಕ್ಕೆ ಹೋಗಬೇಕಾಗುತ್ತದೆ. ಆದರೆ ಅಲ್ಲಿನ ಖರ್ಚು ಭರಿಸುವಷ್ಟು ನಾವು ಶಕ್ತರಾಗಿಲ್ಲ.”

ಧನ್ಯವಾದಗಳು

ಮಾರಿಯಾ ಅಬ್ದುಲ್ಲಾ

ಇದನ್ನೂ ಓದಿ : ಟ್ರೋಲಿಂಗ್‌ ವಿರುದ್ಧದ ಸುಷ್ಮಾ ಸಮರವು ಭವಿಷ್ಯದ ಕೋಲಾಹಲದ ಮುನ್ಸೂಚನೆ

-ಇದಿಷ್ಟು ಮಾರಿಯಾ ಅವರ ಪತ್ರದ ಸಾರ. ಆದರೆ, ಫೇಸ್‌ಬುಕ್‌ನಲ್ಲಿ ಈ ಪತ್ರ ಪೋಸ್ಟ್ ಮಾಡಿರುವ ಮಾರಿಯಾ ನಡೆ ಹಲವು ಅನುಮಾನಗಳನ್ನೂ ಹುಟ್ಟುಹಾಕಿದೆ. ಅವರ ಫೇಸ್‌ಬುಕ್‌ ಪೇಜಿನಲ್ಲಿ ಅವರ ಪತಿಯ ಒಂದೇ ಒಂದು ಫೋಟೋ ಮಾತ್ರ ಇದೆ. ಫೇಸ್‌ಬುಕ್ ಖಾತೆ ಕೂಡ ಅನುಮಾನ ಬರುವಂತಿದೆ. ಇನ್ನಿ, ರಾಯಭಾರ ಕಚೇರಿಗೆ ವೀಸಾ ಅರ್ಜಿ ಸಲ್ಲಿಸುವಾಗ ನೀಡಿರುವ ಕಾರಣ ಪ್ರಮಾಣಿಕವಾಗಿಲ್ಲದಿದ್ದರೆ, ಕೊಟ್ಟಿರುವ ದಾಖಲಾತಿಗಳು ಸರಿಯಾಗಿಲ್ಲದೆ ಇದ್ದಲ್ಲಿ ಅಥವಾ ಅಪರಾಧ ಹಿನ್ನೆಲೆಯುಳ್ಳವರಿಗೆ ವೀಸಾ ನೀಡಲು ರಾಯಭಾರಿ ಕಚೇರಿಗಳು ಮುಂದಾಗುವುದಿಲ್ಲ ಎಂಬುದು ಕೂಡ ಗಮನಾರ್ಹ. ಆದರೆ, ಈ ಬಗ್ಗೆ ಸುಷ್ಮಾ ಸ್ವರಾಜ್ ಆಗಲಿ, ಭಾರತೀಯ ರಾಯಭಾರ ಕಚೇರಿಯಾಗಲೀ ಇದುವರೆಗೂ ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡಿಲ್ಲ.

ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
ನಿಕ್ಕಿ ಹ್ಯಾಲಿ ರಾಜೀನಾಮೆ ಹಿಂದೆ ಇರುವ ಕಾರಣವೇನಿರಬಹುದು?
ರಷ್ಯಾದಿಂದ ಎಸ್400 ಕ್ಷಿಪಣಿ ಖರೀದಿ ಒಪ್ಪಂದ; ಟ್ರಂಪ್ ಕೆಂಗಣ್ಣಿಗೆ ಗುರಿಯಾಗಲಿದೆ ಭಾರತ
Editor’s Pick More