ಹಿಂದೂ ಸಂಘಟನೆಗಳ ಒತ್ತಡಕ್ಕೆ ಮಣಿದು ಕಾನೂನು ಬದಲಿಸಿದ ಇಂಗ್ಲೆಂಡ್‌

ಜಾತಿ ತಾರತಮ್ಯ ಅಪರಾಧವೆಂಬ ಕಾನೂನು ಜಾರಿಗೆ ಬರದಂತೆ ಬಲಪಂಥೀಯ ಸಂಘಟನೆಗಳು ಇಂಗ್ಲೆಂಡಿನಲ್ಲಿ ಒತ್ತಡ ಹೇರಿದ್ದವು. ಹೀಗಾಗಿ ಜಾತಿ ತಾರತಮ್ಯ ವಿರೋಧಿ ಕಾನೂನಿನಿಂದ ಇಂಗ್ಲೆಂಡ್ ಹಿಂದೆ ಸರಿದಿದೆ. ಈ ಬಗ್ಗೆ ‘ದಿ ವೈರ್‌’ನಲ್ಲಿ ಪ್ರಕಟವಾದ ಕುನಾಲ್ ಪುರೋಹಿತ್ ಲೇಖನದ ಭಾವಾನುವಾದ ಇದು

ಜಾತಿಯಾಧಾರಿತ ತಾರತಮ್ಯವನ್ನು ಕಾನೂನುಬಾಹಿರ ಎಂದು ಘೋಷಿಸುವ ತನ್ನ ಆಶ್ವಾಸನೆಯಿಂದ ಹಿಂದೆ ಸರಿದಿರುವ ಇಂಗ್ಲೆಂಡ್‌ ಸರ್ಕಾರ, ಈಗ ಆ ಕುರಿತು ಯಾವುದೇ ಕಾನೂನು ರೂಪಿಸುವ ಯೋಚನೆ ಇಲ್ಲ ಎಂದು ಪ್ರಕಟಿಸಿದೆ. ಜಾತಿಯಾಧಾರಿತ ತಾರತಮ್ಯ ಪ್ರಕರಣಗಳು 'ತೀರಾ ವಿರಳ'ವಾಗಿರುವುದನ್ನು ಕಾರಣವಾಗಿ ನೀಡಿ, ಜಾತಿಯನ್ನು ನಿರ್ವಚಿಸುವುದು 'ತುಂಬಾ ಕಷ್ಟ' ಎಂದು ಅಭಿಪ್ರಾಯಪಟ್ಟು ಥೆರೆಸಾ ಮೇ ಸರ್ಕಾರವು ಈ ನಿರ್ಧಾರವನ್ನು ಪ್ರಕಟಿಸಿದೆ.

ಈ ತಾರತಮ್ಯವನ್ನು ನೇರವಾಗಿ ನಿಷೇಧಿಸದೆಯೇ ಪ್ರಕರಣ-ಕಾನೂನು ಪದ್ಧತಿಯನ್ನು ಅನುಸರಿಸುವುದಾಗಿ ಸರ್ಕಾರ ಘೋಷಿಸಿದೆ. ಅಂದರೆ, ತಾರತಮ್ಯಕ್ಕೆ ಸಂಬಂಧಿಸಿದಂತೆ ದೇಶದ ನ್ಯಾಯಾಲಯಗಳ ಮೆಟ್ಟಿಲೇರಿದ ಪ್ರಕರಣಗಳಲ್ಲಿ ಇದುವರೆಗೆ ನೀಡಲಾದ ತೀರ್ಪುಗಳನ್ನು ಅನುಸರಿಸಿ ಇಂತಹ ಪ್ರಕರಣಗಳಿಗೆ ಕಾನೂನಾತ್ಮಕ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆದರೆ, ಇದು ಅನಿಶ್ಚಿತವೂ ಹಾಗೂ ಸುಧೀರ್ಘವೂ ಆದ ಪ್ರಕ್ರಿಯೆಯಾಗಿದೆ ಎಂದು ಹಲವರು ಅಭಿಪ್ರಾಯಪಡುತ್ತಾರೆ. ಇಲ್ಲಿ ತಾರತಮ್ಯಕ್ಕೊಳಗಾದವರೇ ಕೋರ್ಟಿನ ಮೆಟ್ಟಿಲೇರಿದರೆ ಮಾತ್ರ ಪ್ರಕರಣದ ವಿಚಾರಣೆ ಶುರುವಾಗುತ್ತದೆ. ಆದರೆ, ಅದಕ್ಕೆ ಹೆಚ್ಚು ಸಮಯ ಬೇಕಾಗುವುದರಿಂದ ಹಾಗೂ ಅದು ದುಬಾರಿಯೂ ಆಗಿರುವುದರಿಂದ ಬಹಳಷ್ಟು ಜನ ನ್ಯಾಯಾಲಯಕ್ಕೆ ಹೋಗಲು ಇಷ್ಟಪಡುವುದಿಲ್ಲ ಎಂದು ಹಕ್ಕುಗಳ ಕಾರ್ಯಕರ್ತರು ಅಭಿಪ್ರಾಯಪಡುತ್ತಾರೆ.

“ಸರ್ಕಾರ ಈ ನಿರ್ಧಾರ ತೆಗೆದುಕೊಂಡ ದಿನವು ಸಮಾನತೆ ಬಯಸುವ ಜನರಿಗೆ ನಿಜಕ್ಕೂ ಕರಾಳ ದಿನವಾಗಿದೆ,” ಎಂದು ಕಾಸ್ಟ್‌ವಾಚ್ ಯುಕೆ ಸಂಸ್ಥೆಯ ಸತ್ಪಾಲ್ ಮುಮನ್ ಅಭಿಪ್ರಾಯಪಟ್ಟಿದ್ದಾರೆ. “ಈ ನಿರ್ಧಾರದ ಹಿಂದೆ ಹಿಂದೂ ಸಂಘಟನೆಗಳ ಒತ್ತಡವಿರುವುದು ಎದ್ದುಕಾಣುತ್ತದೆ,” ಎಂದು ಅವರು ಹೇಳಿದ್ದಾರೆ. "ಚುನಾವಣೆಯಲ್ಲಿ ಹಿಂದೂ ಮತ್ತು ಸಿಖ್ ಮತಗಳನ್ನು ಸೆಳೆಯುವ ಹಾಗೂ ವಿದೇಶದಲ್ಲಿ ವಾಣಿಜ್ಯಿಕ ಲಾಭಗಳನ್ನು ಪಡೆಯುವ ಉದ್ದೇಶದಿಂದ ಸರ್ಕಾರವು ಜಾತಿತಾರತಮ್ಯ ವಿರೋಧಿ ಕಾನೂನನ್ನು ವಿರೋಧಿಸುವ ಜನರಿಗೆ ತನ್ನನ್ನು ತಾನು ಮಾರಿಕೊಂಡಿದೆ," ಎಂದು ಅವರು ಟೀಕಿಸಿದ್ದಾರೆ.

ಸರ್ಕಾರದ ಈ ನಿರ್ಧಾರದಿಂದ ಕೆಲವು ಬಲಪಂಥೀಯ ಗುಂಪುಗಳನ್ನೂ ಒಳಗೊಂಡಂತೆ ಹಿಂದೂ ಸಂಘಟನೆಗಳಿಗೆ ಅಮೋಘ ಜಯ ಸಿಕ್ಕಂತಾಗಿದೆ. ಜಾತಿ ತಾರತಮ್ಯವನ್ನು ಅಪರಾಧ ಎಂದು ಪರಿಗಣಿಸುವ ಕಾನೂನು ಜಾರಿಗೆ ಬರದಂತೆ ಈ ಸಂಘಟನೆಗಳು ಭಾರಿ ಪ್ರಯತ್ನ ನಡೆಸಿದ್ದವು. ಇವುಗಳಲ್ಲಿ ಹಲವು ಸಂಘಟನೆಗಳು ಭಾರತದಲ್ಲಿ ಆಡಳಿತದಲ್ಲಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಜೊತೆ ಅನ್ಯೋನ್ಯ ಸಂಬಂಧ ಹೊಂದಿರುವುದರಿಂದ ಬ್ರಿಟನ್ ಸರ್ಕಾರದ ಈ ನಿರ್ಧಾರ ಹಲವರ ಹುಬ್ಬೇರಿಸಿದೆ.

ಈ ನಿರ್ಧಾರವು ಹಲವು ಜನರಿಗೆ ಆಶ್ಚರ್ಯ ಮೂಡಿಸಿರುವುದಕ್ಕೆ ಮೊದಲನೆಯ ಕಾರಣ ಏನೆಂದರೆ, ಸರ್ಕಾರ ತಾನೇ ನೀಡಿದ ಆಶ್ವಾಸನೆಯಿಂದ ಹಿಂದ್ಸರಿದಿದ್ದು. ಸಾರ್ವಜನಿಕ ಬದುಕಿನಲ್ಲಿ, ಅದರಲ್ಲೂ ವಿಶೇಷವಾಗಿ ಶಿಕ್ಷಣ ಮತ್ತು ಆರೋಗ್ಯದಂಥ ಸಾರ್ವಜನಿಕ ಸೇವೆಗಳಲ್ಲಿ ಜಾತಿಯಾಧಾರಿತ ತಾರತಮ್ಯ ನಡೆಯುತ್ತಿದೆ ಎಂಬುದನ್ನು ೨೦೧೦ರಲ್ಲಿ ಸರ್ಕಾರದ ಸಂಸ್ಥೆಯೇ ತನ್ನ ವರದಿಯಲ್ಲಿ ಸಾಕಷ್ಟು ಪುರಾವೆಗಳ ಸಮೇತ ಬಯಲಿಗೆಳೆದಿತ್ತು. ತಾರತಮ್ಯವನ್ನು ಕಾನೂನುಬಾಹಿರ ಎಂದು ಪರಿಗಣಿಸುವ ಕಾನೂನೊಂದನ್ನು ರೂಪಿಸುವುದೇ ಅದನ್ನು ನಿರ್ಮೂಲನೆ ಮಾಡುವುದಕ್ಕಿರುವ ಅತ್ಯಂತ ಪರಿಣಾಮಕಾರಿ ಕ್ರಮ ಎಂದೂ ಆ ವರದಿಯು ಹೇಳಿತ್ತು. ಇದರ ಬೆನ್ನ ಹಿಂದೆಯೇ ಇಂಗ್ಲೆಂಡ್‌ ಸರ್ಕಾರವು ಇದಕ್ಕೆ ಸಂಬಂಧಿಸಿದ ಕಾನೂನು ರೂಪಿಸುವುದಕ್ಕೆ ಮುಂದಾಗಿತ್ತು.

ಆದರೆ, ಮೊನ್ನೆ ಸೋಮವಾರ ಈ ಕಾನೂನು ರೂಪಿಸುವ ತನ್ನ ಯೋಜನೆಯಿಂದ ಹಿಂದೆ ಸರಿದಿರುವ ಥೆರೆಸಾ ಮೇ ಸರ್ಕಾರವು, ಇಂಗ್ಲೆಂಡ್‌ನ ಮಾನವ ಹಕ್ಕು ಸಂಘಟನೆಗಳು ಹಾಗೂ ಜಾತಿ ತಾರತಮ್ಯ ಹೋಗಲಾಡಿಸಿಸಲು ಹೋರಾಡುತ್ತಿರುವ ಕ್ರಿಯಾಶೀಲ ಗುಂಪುಗಳು ವ್ಯಕ್ತಪಡಿಸಿರುವ ಆತಂಕ, ಕಾಳಜಿಗಳನ್ನು ನಿರ್ಲಕ್ಷಿಸಿದೆ.

ಇದನ್ನೂ ಓದಿ : ಗಮನ ಸೆಳೆದ ನ್ಯೂ ವರ್ಷನ್‌ ಹನುಮಂತ ಮತ್ತು ಉಗ್ರ ಹಿಂದುತ್ವ ಪ್ರತಿಪಾದನೆ

ಅಸಮರ್ಪಕ ಆಧಾರ, ನಿರ್ವಚನೆಯ ಕಷ್ಟ

ಕಳೆದ ವರ್ಷ ಈ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸಿದ ಮೇಲೆ ಸರ್ಕಾರವು ಈ ನಿರ್ಧಾರಕ್ಕೆ ಬಂದಿದೆ. ಈ ವಿಷಯದಲ್ಲಿ ಒಟ್ಟು ೧೬,೦೦೦ ಅಭಿಪ್ರಾಯಗಳು ಬಂದಿದ್ದು, ಅವುಗಳಲ್ಲಿ ೮,೫೦೦ ಅಭಿಪ್ರಾಯಗಳು ಜಾತಿ ತಾರತಮ್ಯ ನಿಷೇಧವನ್ನು ವಿರೋಧಿಸಿದ್ದವು, ೨,೫೦೦ ಅಭಿಪ್ರಾಯಗಳು ನಿಷೇಧದ ಪರವಾಗಿದ್ದವು, ೩,೫೦೦ ಅಭಿಪ್ರಾಯಗಳು ಈ ಎರಡೂ ಆಯ್ಕೆಗಳನ್ನು ತಿರಸ್ಕರಿಸಿದ್ದವು ಹಾಗೂ ೧,೧೦೦ ಅಭಿಪ್ರಾಯಗಳು ಯಾವ ಆಯ್ಕೆ ಸರಿ ಎಂಬುದನ್ನು ನಿರ್ಧರಿಸಲಾಗದೆ ಗೊಂದಲದಲ್ಲಿದ್ದವು.

ಈ ಅಭಿಪ್ರಾಯಗಳಗಳ ಜೊತೆ ದೇಶದಲ್ಲಿ ಜಾತಿ ತಾರತಮ್ಯದ ಪ್ರಕರಣಗಳು ತುಂಬಾ ಕಡಿಮೆ ಇವೆ ಎಂಬ ಕಾರಣವನ್ನೂ ಸರ್ಕಾರ ಕೊಟ್ಟಿದೆ. ಅದರ ಪ್ರಕಾರ, ದೇಶದ ನ್ಯಾಯಾಲಯದಲ್ಲಿ ಇಲ್ಲಿಯ ತನಕ ಕೇವಲ ಮೂರು ಜಾತಿಯಾಧಾರಿತ ತಾರತಮ್ಯದ ಪ್ರಕರಣಗಳು ದಾಖಲಾಗಿವೆ. ಆದರೆ, ಜಾತಿಯಾಧಾರಿತ ತಾರತಮ್ಯದ ವಿರುದ್ಧ ಹೋರಾಡುತ್ತಿರುವ ಇಂಗ್ಲೆಂಡ್‌ ಮೂಲದ ಸಂಘಟನೆಗಳು ಸರ್ಕಾರದ ಈ ವಾದ ಸತ್ಯಕ್ಕೆ ದೂರವಾಗಿದೆ ಎಂದು ಅಭಿಪ್ರಾಯಪಡುತ್ತವೆ. ಉದ್ಯೋಗ, ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಮತ್ತು ವೃದ್ಧರ ಆರೈಕೆಯಂತಹ ಸಾರ್ವಜನಿಕ ಸೇವೆಗಳಲ್ಲಿ ಜಾತಿತಾರತಮ್ಯ ಇರುವುದಾಗಿ ಇಂಗ್ಲೆಂಡ್‌ ಸರ್ಕಾರವೇ ಸ್ಥಾಪಿಸಿದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಕನಾಮಿಕ್ ಅಂಡ್ ಸೋಶಿಯಲ್ ರಿಸರ್ಚ್ (ಎನ್ಐಇಎಸ್ಆರ್) ಸಂಸ್ಥೆಯು ತನ್ನ ೨೦೧೦ರ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ.

ಇದಲ್ಲದೆ, ಹಲವು ಸಾಮಾಜಿಕ ಸಂಘಟನೆಗಳೂ ಸ್ವತಂತ್ರ ಅಕಾಡೆಮಿಕ್ ಸಂಶೋಧನೆ ಮತ್ತು ಅಧ್ಯಯನಗಳ ನಡೆಸಿ ಜಾತಿತಾರತಮ್ಯ ಗಾಢವಾಗಿ ಇರುವುದನ್ನು ಪತ್ತೆ ಹಚ್ಚಿ ಈ ಬಗ್ಗೆ ಸರ್ಕಾರಕ್ಕೂ ವರದಿ ನೀಡಿವೆ. ಉದಾಹರಣೆಗೆ, ಬ್ರಿಟನ್ನಿನಲ್ಲಿ ಜಾತಿ ತಾರತಮ್ಯವನ್ನು ಹೋಗಲಾಡಿಸುವುದಕ್ಕೆ ಹೋರಾಡುತ್ತಿರುವ ಸಂಘಟನೆಗಳ ಒಕ್ಕೂಟವಾದ ಜಾತಿ ತಾರತಮ್ಯ ವಿರೋಧಿ ಮೈತ್ರಿಕೂಟವು (ಎಸಿಡಿಎ) ೨೦೦೯ರಲ್ಲಿ ನಡೆಸಿದ ಅಧ್ಯಯನದಲ್ಲಿ, ಜಾತಿಯಾಧಾರಿತ ತಾರತಮ್ಯವು ಇಂಗ್ಲೆಂಡ್‌ನ ವಿವಿಧ ಭಾಗಗಳಲ್ಲಿ ಗಾಢವಾಗಿರುವುದನ್ನು ಬಹಳ ನಿರ್ಣಾಯಕವಾಗಿ ಕಂಡುಕೊಂಡಿತ್ತು. ಈ ಸಂಶೋಧನೆಯಲ್ಲಿ ಪ್ರತಿಸ್ಪಂದಿಸಿದವರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಒಂದಲ್ಲ ಒಂದು ರೀತಿಯಲ್ಲಿ ಜಾತಿ ತಾರತಮ್ಯಕ್ಕೆ ಒಳಗಾಗಿದ್ದುದನ್ನು ಹೇಳಿಕೊಂಡಿದ್ದರು. ಆದರೆ, ಮೊನ್ನೆ ಸರ್ಕಾರ ಘೋಷಿಸಿದ ನಿರ್ಧಾರವು ಎಸಿಡಿಎ ಒಕ್ಕೂಟಕ್ಕೆ ದಿಗಿಲು ಹುಟ್ಟಿಸಿದೆ. ಕೂಡಲೇ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಒಕ್ಕೂಟವು, "ಜಾತಿ ತಾರತಮ್ಯದ ಬಲಿಪಶುಗಳಿಗೆ ಆಶಾಭಂಗ ಉಂಟುಮಾಡುವ ಹಾಗೂ ಅಂತಹ ತಾರತಮ್ಯವನ್ನು ಮಾಡುವವರನ್ನು ಪ್ರೋತ್ಸಾಹಿಸುವ ಈ ನಿರ್ಧಾರವು ತುಂಬಾ ಅನ್ಯಾಯಯುತವಾಗಿದೆ ಎಂದು ನಮಗನ್ನಿಸುತ್ತದೆ," ಎಂದು ತನ್ನ ನಿರಾಶೆಯನ್ನು ವ್ಯಕ್ತಪಡಿಸಿದೆ.

ಲೇಬರ್ ಪಕ್ಷದ ನಾಯಕ ಜೆರೆಮಿ ಕಾರ್ಬಿನ್ ಟ್ರಸ್ಟಿಯಾಗಿರುವ ಹಾಗೂ ಇಂಗ್ಲೆಂಡಿನಲ್ಲಿ ದಲಿತರ ಮೇಲಾಗುವ ತಾರತಮ್ಯ ಮತ್ತು ದಮನಗಳ ವಿರುದ್ಧ ಹೋರಾಡುತ್ತಿರುವ ದಲಿತ್ ಸಾಲಿಡಾರಿಟಿ ನೆಟ್ವರ್ಕ್ ಸಂಸ್ಥೆಯು ೨೦೦೬ರಲ್ಲಿ ಇಂತಹದ್ದೇ ಒಂದು ಅಧ್ಯಯನವನ್ನು ನಡೆಸಿತ್ತು. ಇದರಲ್ಲಿ ತಮ್ಮ ಅನಿಸಿಕೆಗಳನ್ನು ಹೇಳಿದವರಲ್ಲಿ ಶೇಕಡ ೮೫ರಷ್ಟು ಮಂದಿ, “ಭಾರತೀಯರು ಭಾರತದ ಜಾತಿಪದ್ಧತಿಯನ್ನು ಇಂಗ್ಲೆಂಡಿನಲ್ಲೂ ಯಥಾವತ್ತಾಗಿ ಅನುಸರಿಸುತ್ತಿದ್ದಾರೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಲ್ಲದೆ, ಅವರಲ್ಲಿ ಅರ್ಧದಷ್ಟು ಜನರು ತಮ್ಮ ಕುಟುಂಬ ಸದಸ್ಯರು ಒಂದಲ್ಲ ಒಂದು ರೀತಿಯಲ್ಲಿ ಜಾತಿ ತಾರತಮ್ಯದ ಕಿರುಕುಳವನ್ನು ಅನುಭವಿಸಿದ್ದಾಗಿಯೂ ಹೇಳಿದ್ದರು.

ಇಂಗ್ಲೆಂಡ್‌ನಲ್ಲಿ ಜಾತಿ ತಾರತಮ್ಯದ ವಿರುದ್ಧ ಹೋರಾಡುತ್ತಿರುವ ಕ್ಯಾಸ್ಟ್ವಾಚ್ ಯುಕೆ ಸಂಸ್ಥೆಯ ಮುಮನ್ ಕೂಡ ಇಂತಹದ್ದೇ ಪುರಾವೆಯನ್ನು ಒದಗಿಸುತ್ತಾರೆ. ಒಂದೂವರೆ ದಶಕಗಳಿಂದ ತನ್ನ ಗಮನಕ್ಕೆ ಬಂದ ಪ್ರತಿಯೊಂದು ಜಾತಿತಾರತಮ್ಯದ ಪ್ರಕರಣವನ್ನೂ ದಾಖಲಿಸುವುದಕ್ಕೆ ಒಂದು ನೋಂದಣಿ ಪುಸ್ತಕವನ್ನೇ ಅವರು ಇಟ್ಟುಕೊಂಡಿದ್ದಾರೆ. "ಗಮನಕ್ಕೆ ಬಂದ ಜಾತಿಯಾಧಾರಿತ ತಾರತಮ್ಯದ ಪ್ರಕರಣಗಳನ್ನು ನಾವು ನಿರಂತರವಾಗಿ ದಾಖಲಿಸುತ್ತಾ ಬಂದಿದ್ದೇವೆ," ಎನ್ನುವ ಮುಮನ್ ಅಂತಹ ಪ್ರಕರಣಗಳನ್ನು ದಾಖಲಿಸಿದ ಪುಸ್ತಕವನ್ನು ತೋರಿಸುತ್ತಾರೆ.

ಜಾತಿ ತಾರತಮ್ಯದ ವಿರುದ್ಧ ಕಾನೂನು ರೂಪಿಸುವ ತನ್ನ ಯೋಜನೆಯಿಂದ ಹಿಂದೆ ಸರಿಯುವುದಕ್ಕೆ ಇಂಗ್ಲೆಂಡ್‌ ಸರ್ಕಾರ ನೀಡಿರುವ ಇನ್ನೊಂದು ಕಾರಣ ಎಂದರೆ, ಜಾತಿ ಎಂದರೇನು ಎಂಬುದರ ಬಗ್ಗೆ ಸಾರ್ವತ್ರಿಕವಾಗಿ ಒಪ್ಪಿತವಾಗಿರುವ ವ್ಯಾಖ್ಯಾನವನ್ನು ಅದು ಕಂಡುಕೊಳ್ಳಲು ಸಾಧ್ಯವಾಗದಿದ್ದುದು.

ಜಾತಿ ಮತ್ತು ಬ್ರಿಟನ್ನಿನ ಹಿಂದೂ ಬಲಪಂಥ

ಜಾತಿಯಾಧಾರಿತ ತಾರತಮ್ಯ ಅಸ್ತಿತ್ವದಲ್ಲೇ ಇಲ್ಲ ಎಂದು ಬಲವಾಗಿ ವಾದಿಸುತ್ತ, ಹಿಂದೂಪರ ಗುಂಪುಗಳು ಅದನ್ನು ಕಾನೂನುಬಾಹಿರಗೊಳಿಸುವ ಸರ್ಕಾರದ ಯೋಜನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ದೊಡ್ಡ ಮಟ್ಟದ ಅಭಿಯಾನ ನಡೆಸಿದ ಬೆನ್ನಲ್ಲೇ ಸರ್ಕಾರ ಈ ನಿರ್ಧಾರವನ್ನು ಪ್ರಕಟಿಸಿದೆ ಎಂಬುದನ್ನು ಮರೆಯಬಾರದು. ಈ ಹಿಂದೂಪರ ಸಂಘಟನೆಗಳು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದು, ಅದನ್ನು ಬಹಿರಂಗವಾಗಿ ತೋರ್ಪಡಿಸಿಕೊಳ್ಳುವುದಕ್ಕೆ ಎಂದೂ ಹಿಂಜರಿದಿಲ್ಲ.

ನ್ಯಾಶನಲ್ ಕೌನ್ಸಿಲ್ ಫಾರ್ ಹಿಂದೂ ಟೆಂಪಲ್ಸ್ ಎಂಬ ಹೆಸರಿನ ಅಂತಹ ಒಂದು ಗುಂಪು ಜಾತಿ ತಾರತಮ್ಯದ ವಿರುದ್ಧ ಕಾನೂನು ರೂಪಿಸುವ ಬ್ರಿಟನ್ ಸರ್ಕಾರದ ಯೋಜನೆಯನ್ನು ಬಲವಾಗಿ ವಿರೋಧಿಸಿತಲ್ಲದೆ, ಭಾರತದ ಜಾತಿ ಪದ್ಧತಿಯನ್ನು 'ವಸಾಹತುಶಾಹಿ ಷಡ್ಯಂತ್ರ' ಮತ್ತು ಹಿಂದೂಗಳ ವಿರುದ್ಧದ ದ್ವೇಷಪೂರಿತ ಅಪರಾಧ ಎಂದು ಬಣ್ಣಿಸಿತು. ಈಗ ಸರ್ಕಾರದ ತೀರ್ಮಾನವನ್ನು ಸ್ವಾಗತಿಸಿರುವ ಈ ಸಂಘಟನೆ, “ಹಿಂದೂ ಸಮುದಾಯದ ವಿಷಯದಲ್ಲಿ ಜಾತಿ ಪದವನ್ನು ಬಳಸುವುದು ಆ ಸಮುದಾಯವನ್ನು ವಿಭಜಿಸಿ ಕಳಂಕ ತರುವುದಕ್ಕೆ ಕುಮ್ಮಕ್ಕು ನೀಡಿದಂತಾಗುತ್ತದೆ,” ಎಂದು ಅಭಿಪ್ರಾಯಪಟ್ಟಿದೆ!

‘ಹಿಂದೂ ಸಮ್ಹತಿ’ ಎಂಬ ಬಲಪಂಥೀಯ ಹಿಂದೂಪರ ಸಂಘಟನೆಯ ಸಂಸ್ಥಾಪಕ ತಪನ್ ಘೋಷ್ ಅವರನ್ನು ಬ್ರಿಟನ್ನಿನ ಹೌಸ್ ಆಫ್ ಕಾಮನ್ಸ್‌ನಲ್ಲಿ ಭಾಷಣ ಮಾಡುವುಕ್ಕೆ ಕಳೆದ ವರ್ಷ ಆಹ್ವಾನಿಸಿದಾಗಲೂ ಈ ಗುಂಪು ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು. 'ಅಸಹನೆಯ ಸಹನೆ' ಎಂಬ ಶೀರ್ಷಿಕೆಯ ತಮ್ಮ ಭಾಷಣದಲ್ಲಿ ತಪನ್ ಘೋಷ್, ಹಿಂದೂ ಬಲಪಂಥೀಯ ಪರಿಕಲ್ಪನೆಯಾದ ಲವ್ ಜಿಹಾದ್ (ಮುಸ್ಲಿಮರು ವ್ಯವಸ್ಥಿತವಾಗಿ ಹಿಂದೂ ಹುಡುಗಿಯರನ್ನು ಬುಟ್ಟಿಗೆ ಹಾಕಿಕೊಂಡು ಮದುವೆಯಾಗುತ್ತಿದ್ದಾರೆಂಬ ಆರೋಪ) ಬಗ್ಗೆ ಮಾತಾಡಿದ್ದರು. ಘೋಷ್ ಅವರು ದೀಪಾವಳಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ಬ್ರಿಟಿಷ್ ಗೃಹ ಕಾರ್ಯದರ್ಶಿ ಅಂಬರ್ ರುಡ್ ಅವರ ಜೊತೆ ವೇದಿಕೆ ಹಂಚಿಕೊಂಡಿದ್ದರೆಂದೂ ವರದಿಯಾಗಿತ್ತು.

“ತಮ್ಮ ದೂರಗಾಮಿ ರಾಜಕೀಯ ಧ್ಯೇಯಗಳಿಗೂ ಸರ್ಕಾರದ ಈ ತೀರ್ಮಾನಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಕೆಲವು ಹಿಂದೂಪರ ಸಂಘಟನೆಗಳು ಹೇಳಿಕೊಳ್ಳುತ್ತಿವೆ. ಬ್ರಿಟನ್ನಿನ ಹಿಂದೂ ಸಮುದಾಯದ ಅಭಿಪ್ರಾಯದ ಆಧಾರದಲ್ಲಿ ಮಾತ್ರವೇ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ,” ಎಂದು ಬ್ರಿಟನ್ನಿನ ಹಿಂದೂ ಫೋರಂ ಎಂಬ ಸಂಘಟನೆಯ ಅಧ್ಯಕ್ಷ ತೃಪ್ತಿ ಪಟೇಲ್ ಹೇಳುತ್ತಾರೆ.

ಸ್ವಲ್ಪ ಮೃದು ಧೋರಣೆಯೊಂದಿಗೆ ಜಾತಿ ತಾರತಮ್ಯ ವಿರೋಧಿ ಕಾನೂನು ರೂಪಿಸುವುದನ್ನು ವಿರೋಧಿಸಿದ ‘ದ ಹಿಂದೂ ಕೌನ್ಸಿಲ್ ಯುಕೆ' ಎಂಬ ಸಂಘಟನೆಯು, ಪ್ರಸ್ತಾಪಿತ ಕಾನೂನು ಸ್ವಭಾವದಲ್ಲಿ ಸಮಾಜವನ್ನು ಒಡೆಯುವಂತಹದ್ದಾಗಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. "ಪ್ರಸ್ತಾಪಿತ ಕಾನೂನನ್ನು ಜಾರಿಗೆ ತರುವುದರಿಂದ ಜಾತಿ ನಿರ್ಮೂಲನೆಯಾಗುವ ಬದಲಿಗೆ ಇನ್ನಷ್ಟು ಗಟ್ಟಿಯಾಗುವ ಸಾಧ್ಯತೆ ಇತ್ತು; ಅದು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತದೆ ಎಂದು ನಾವು ಮೊದಲಿನಿಂದಲೂ ಹೇಳುತ್ತ ಬಂದಿದ್ದೆವು," ಎಂದು ಈ ಸಂಘಟನೆಯ ಸಂಸ್ಥಾಪಕ ಸದಸ್ಯ ಅನಿಲ್ ಭಾನೊಟ್ ಹೇಳುತ್ತಾರೆ.

ಕೇವಲ ರಾಜಕೀಯ ಮಾತ್ರ ಅಲ್ಲ

ಇದು ಕೇವಲ ವಿಶ್ವ ರಾಜಕೀಯ ಮಾತ್ರವಾಗಿರದೆ ಇದರಲ್ಲಿ ಆರ್ಥಿಕ ವಿಷಯಗಳೂ ಸಾಕಷ್ಟಿವೆ. ಥೆರೆಸಾ ಮೇ ಸರ್ಕಾರದ ಈ ನಿರ್ಧಾರದ ಹಿಂದೆ ಇಂಗ್ಲೆಂಡ್‌ನಲ್ಲಿರುವ ಭಾರತೀಯ ಸಮುದಾಯದ ವಿರೋಧ ಕಟ್ಟಿಕೊಳ್ಳಬಾರದೆಂಬ ಆಲೋಚನೆಯೂ ಇದ್ದಂತಿದೆ.

ದೇಶದಲ್ಲಿ ಸುಮಾರು ೧,೦೪,೦೦೦ ಜನರಿಗೆ ಉದ್ಯೋಗ ನೀಡುವ ಹಾಗೂ ೩೬೦ ಮಿಲಿಯನ್ ಪೌಂಡ್ ಕಾರ್ಪೊರೆಟ್ ತೆರಿಗೆ ನೀಡುವ ಭಾರತೀಯ ಮೂಲದ ಕಂಪನಿಗಳೇ ಇಂಗ್ಲೆಂಡ್‌ಗೆ ಮುಖ್ಯವಾಗಿವೆ ಎಂದು ಗ್ರಾಂಟ್ ಥೋರ್ನ್ಟೋನ್ ಎಂಬ ಸಂಸ್ಥೆಯ ಕಳೆದ ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಿದ ತನ್ನ ವರದಿಯಲ್ಲಿ ಹೇಳಿದೆ. ದೇಶದಲ್ಲಿರುವ ಎಲ್ಲ ಐರೋಪ್ಯ ಒಕ್ಕೂಟದ ಕಂಪನಿಗಳನ್ನು ಸೇರಿಸಿದರೂ ಈ ಪ್ರಮಾಣದ ಉದ್ಯೋಗ ಮತ್ತು ತೆರಿಗೆಯನ್ನು ಸರಿಗಟ್ಟುವುದಕ್ಕೆ ಆಗುವುದಿಲ್ಲ.

ಬ್ರೆಕ್ಸಿಟ್ ತಂದೊಡ್ಡಬಹುದಾದ ನಷ್ಟವನ್ನು ತುಂಬಿಕೊಳ್ಳುವುದಕ್ಕಾಗಿ ಇಂಗ್ಲೆಂಡ್‌ ಹಲವು ದೇಶಗಳೊಂದಿಗೆ ವ್ಯಾಪಾರ-ವಾಣಿಜ್ಯಿಕ ಒಪ್ಪಂದಗಳನ್ನು ಕುದುರಿಸುತ್ತಿದ್ದು ಈ ಸಮಯದಲ್ಲಿ ಅದು ತನ್ನ ನಾಲ್ಕನೆಯ ಅತಿದೊಡ್ಡ ಬಂಡವಾಳ ಹೂಡಿಕೆದಾರನಾದ ಭಾರತಕ್ಕೆ ಅಸಮಧಾನ ಉಂಟುಮಾಡುವ ಕೆಲಸ ಮಾಡುವುದಕ್ಕೆ ಸುತಾರಾಂ ಸಿದ್ಧವಿಲ್ಲ.

ಇಂಗ್ಲೆಂಡ್‌ನಲ್ಲಿ ಒಟ್ಟು ಜನಸಂಖ್ಯೆಯಲ್ಲಿ ೨.೫ರಷ್ಟಿರುವ ಭಾರತೀಯ ಸಮುದಾಯವು ಅತಿ ಶ್ರೀಮಂತ ಆರ್ಥಿಕ ಅಲ್ಪಸಂಖ್ಯಾತ ಸಮುದಾಯವಾಗಿದೆ. ಸರ್ಕಾರದ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಪ್ರತಿ ವಾರ ತಲಾ ೧,೦೦೦ ಪೌಂಡ್‌ಗಿಂತ ಹೆಚ್ಚು ಆದಾಯ ಗಳಿಸುವ ಸ್ಥಳೀಯ ಬ್ರಿಟಿಷ್ ಸಮುದಾಯದ ಕುಟುಂಬಗಳ ಪ್ರಮಾಣ ಶೇ.೨೪ರಷ್ಟು ಇದ್ದರೆ ಅಷ್ಟು ಆದಾಯವನ್ನು ಗಳಿಸುವ ಭಾರತೀಯ ಸಮುದಾಯದ ಕುಟುಂಬಗಳ ಪ್ರಮಾಣ ಶೇಕಡ ೩೫ರಷ್ಟಿದೆ. ಈ ಶ್ರೀಮಂತ ಭಾರತೀಯರಲ್ಲಿ ಅನೇಕರು ಇಂಗ್ಲೆಂಡಿನ ರಾಜಕೀಯ ಪಕ್ಷಗಳಿಗೆ ಉದಾರ ದೇಣಿಗೆ ನೀಡುವವರೂ ಇದ್ದಾರೆ.

ಇಂಗ್ಲೆಂಡ್‌ನಲ್ಲಿ ಅನಧಿಕೃತವಾಗಿ ವಾಸವಾಗಿರುವ ಭಾರತೀಯರನ್ನು ವಾಪಸು ಕಳಿಸುವುದಕ್ಕಾಗಿ ಸಿದ್ಧಪಡಿಸಲಾದ ಒಡಂಬಡಿಕೆಗೆ ಭಾರತ ಸಹಿ ಹಾಕುವುದಕ್ಕೆ ನಿರಾಕರಿಸಿದ್ದರಿಂದ ಮೋದಿಯವರ ಇತ್ತೀಚಿನ ಇಂಗ್ಲೆಂಡ್ ಭೇಟಿ ಅಷ್ಟೊಂದು ಸುದ್ದಿ ಮಾಡಲಿಲ್ಲ. ಈ ಹಿನ್ನೆಲೆಯಲ್ಲಿಯೂ ಜಾತಿ ಆಧಾರಿತ ತಾರತಮ್ಯ ವಿರೋಧಿ ಕಾಯ್ದೆಯನ್ನು ಕೈಬಿಟ್ಟಿರುವ ಬ್ರಿಟನ್ ಸರ್ಕಾರದ ಕ್ರಮವನ್ನು ಪರಿಗಣಿಸಬೇಕು ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಗದ್ದಲದಲ್ಲಿ ಕಳೆದುಹೋಯಿತು

ಸರ್ಕಾರದ ತೀರ್ಮಾನದ ಸುತ್ತ ಎದ್ದಿರುವ ಗದ್ದಲದ ನಡುವೆ, ಜಾತಿಯಾಧಾರಿತ ತಾರತಮ್ಯ ಅನುಭವಿಸುವ ಬಲಿಪಶುಗಳು ನ್ಯಾಯಕ್ಕಾಗಿ ಸುದೀರ್ಘ ಹೋರಾಟ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಹಲವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಜಾತಿ ತಾರತಮ್ಯದ ವಿರುದ್ಧ ಕಾನೂನಾತ್ಮಕ ಪರಿಹಾರ ಕಂಡುಕೊಳ್ಳುವುದಕ್ಕೆ ಸೂಕ್ತ ವ್ಯವಸ್ಥೆಯೇ ಇಲ್ಲದಿದ್ದುದರಿಂದಾಗಿ ಜಾತಿ ತಾರತಮ್ಯದ ಬಲಿಪಶುಗಳು ಅದರ ವಿರುದ್ಧ ದೂರು ನಿಡುವುದಕ್ಕೂ ಮುಂದಾಗದಿರುವ ಸಾಧ್ಯತೆ ಇದೆ.

ಜಾತಿ ತಾರತಮ್ಯದ ವಿರುದ್ಧ ಹೋರಾಡುತ್ತಿರುವ ಹಲವು ಗುಂಪುಗಳ ಪ್ರಕಾರ, ಜಾತಿ ತಾರತಮ್ಯಕ್ಕೆ ಬಲಿಯಾದ ಬಹುತೇಕ ಜನರು ಅಧಿಕೃತವಾಗಿ ದೂರು ದಾಖಲಿಸುವುದಕ್ಕೆ ಮುಂದಾಗುವುದಿಲ್ಲ. ಇದಕ್ಕೆ ಪ್ರಧಾನ ಕಾರಣ ಎಂದರೆ, ಸರ್ಕಾರದ ಅಧಿಕಾರಿಗಳಿಗೆ ಜಾತಿಯ ಬಗ್ಗೆ ತಿಳಿವಳಿಕೆಯೇ ಇಲ್ಲದಿರುವುದು. ಜಾತಿ ತಾರತಮ್ಯದ ವಿರುದ್ಧ ದೂರು ದಾಖಲಿಸಲು ಹೋದಾಗ ಬ್ರಿಟನ್ ಪೊಲೀಸರಿಗೆ ಆ ಸಮಸ್ಯೆಯೇ ಆರ್ಥವಾಗುವುದಿಲ್ಲ ಎಂದು ೨೦೦೯ರಲ್ಲಿ ಎಸಿಡಿಎ ಸಂಸ್ಥೆ ಸಂದರ್ಶನ ನಡೆಸಿದವರ ಪೈಕಿ ಶೇ.೭೯ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ.

ಇಂತಹ ಸನ್ನಿವೇಶದಲ್ಲಿ ಇಂಗ್ಲೆಂಡ್‌ ಸರ್ಕಾರದ ಈ ತೀರ್ಮಾನವು ಅವರ ಹೋರಾಟವನ್ನು ಇನ್ನಷ್ಟು ಸುದೀರ್ಘಗೊಳಿಸಿದೆ. "ಜಾತಿ ತಾರತಮ್ಯದ ಬಲಿಪಶುಗಳಿಗೆ ಇನ್ನುಮುಂದೆ ಯಾವುದೇ ಕಾನೂನಿನ ರಕ್ಷಣೆ ಇಲ್ಲ ಹಾಗೂ ಅವರು ನ್ಯಾಯಕ್ಕಾಗಿ ಸುದೀರ್ಘವೂ, ದುಬಾರಿಯೂ ಆದ ಕಾನೂನಾತ್ಮಕ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದೇ ಅರ್ಥ. ಇದು ಬಲಿಪಶುಗಳಿಗೆ ಎದುರಾದ ಅತಿದೊಡ್ಡ ಅಡ್ಡಿ," ಎಂದು ಕಾಸ್ಟ್ವಾಚ್ ಯುಕೆ ಸಂಘಟನೆಯ ಮುಮನ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಕುನಾಲ್ ಪುರೋಹಿತ್ ಅವರು ಮುಂಬೈ ಮೂಲದ ಸ್ವತಂತ್ರ ಪತ್ರಕರ್ತ

ಪರ್ತಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
ನಿಕ್ಕಿ ಹ್ಯಾಲಿ ರಾಜೀನಾಮೆ ಹಿಂದೆ ಇರುವ ಕಾರಣವೇನಿರಬಹುದು?
Editor’s Pick More