ಇಮ್ರಾನ್ ಖಾನ್ ಜೊತೆಗಿನ ಮೋದಿ ಮಾತುಕತೆ ಅಭಿನಂದನೆಗಷ್ಟೇ ಸೀಮಿತ ಆಗಿರಲಿಲ್ಲ

ಮೋದಿ ಜೊತೆಗಿನ ಮಾತುಕತೆ ವೇಳೆ ಪಾಕ್ ನಿಯೋಜಿತ ಪ್ರಧಾನಿ ಇಮ್ರಾನ್ ಖಾನ್, ‘ವಿವಾದಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು’ ಎಂದಿದ್ದಾರೆ. ಆದರೆ, ಪಿಟಿಐ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಕಾಶ್ಮೀರದ ಪ್ರಸ್ತಾಪವಿಲ್ಲ. ಈ ಕುರಿತ ‘ದಿ ವೈರ್’ ವರದಿಯ ಭಾವಾನುವಾದ ಇಲ್ಲಿದೆ

ಪಾಕಿಸ್ತಾನದ ನಿಯೋಜಿತ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಕರೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಚುನಾವಣೆಯಲ್ಲಿ ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ (ಪಿಟಿಐ) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದಕ್ಕೆ ಅಭಿನಂದಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ವಿದೇಶಾಂಗ ಸಚಿವಾಲಯ, “ದಕ್ಷಿಣ ಏಷ್ಯಾದಲ್ಲಿ ಶಾಂತಿಸ್ಥಾಪನೆ ಮತ್ತು ಅಭಿವೃದ್ಧಿಗಾಗಿ ಮೋದಿ ತಮ್ಮ ನಿಲುವುಗಳನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು,” ಎಂದು ಹೇಳಿದೆ. ಇದೇ ವೇಳೆ ಪಿಟಿಐ, ಭಾರತದ ಪ್ರಧಾನಿ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಜಂಟಿ ಕಾರ್ಯಸೂಚಿ ರೂಪಿಸುವುದು ಅಗತ್ಯ ಎಂದು ಹೇಳಿರುವುದಾಗಿ ಹೇಳಿಕೆ ಬಿಡುಗಡೆ ಮಾಡಿದೆ.

ಖುದ್ದಾಗಿ ಅಭಿನಂದನೆ ಸಲ್ಲಿಸಲು ಮೋದಿ ಅವರು ಸೋಮವಾರ ಸಂಜೆ ಇಮ್ರಾನ್ ಖಾನ್ ಅವರಿಗೆ ಕರೆ ಮಾಡಿದ್ದರು ಎಂದು ಅಂದು ರಾತ್ರಿ ಬಿಡುಗಡೆಯಾಗಿರುವ ಸಚಿವಾಲಯದ ಪತ್ರದಲ್ಲಿ ಉಲ್ಲೇಖವಿದೆ. “ಇತ್ತೀಚೆಗೆ ಚುನಾವಣೆಯಲ್ಲಿ ಭಾರಿ ಸ್ಥಾನಗಳನ್ನು ಗಳಿಸಿದ ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಅವರೊಂದಿಗೆ ಪ್ರಧಾನಿ ಮಾತನಾಡಿದರು. ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವದ ಬೇರುಗಳು ಇನ್ನಷ್ಟು ಆಳಕ್ಕಿಳಿಯಲಿವೆ ಎಂಬ ಆಶಾವಾದವನ್ನೂ ಅವರು ವ್ಯಕ್ತಪಡಿಸಿದರು,” ಎಂದು ಅಂದು ರಾತ್ರಿ ಬಿಡುಗಡೆಯಾದ ಹೇಳಿಕೆ ತಿಳಿಸಿದೆ.

ಪಿಟಿಐ 116 ಸ್ಥಾನಗಳನ್ನು ಪಡೆದಿದ್ದರೆ, ಪಾಕಿಸ್ತಾನ್ ಮುಸ್ಲಿಂ ಲೀಗ್ (ನವಾಜ್ ಷರೀಫ್ ಬಣ) 64 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಇತರ ಪಕ್ಷಗಳೊಂದಿಗೆ ಸೇರಿ ಸರ್ಕಾರ ರಚಿಸುವ ಕಸರತ್ತಿನಲ್ಲಿ ಪಿಟಿಐ ತೊಡಗಿದೆ.

ಇಸ್ಲಾಮಾಬಾದ್ ನಲ್ಲಿ ಪಿಟಿಐ ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ಮೋದಿ ಅವರು ‘ಹೊಸ ಯುಗ’ ಮತ್ತು ‘ಜಂಟಿ ಕಾರ್ಯಸೂಚಿ’ ಬಗ್ಗೆ ಪ್ರಸ್ತಾಪಿಸಿದರು. “ಪಾಕಿಸ್ತಾನದೊಂದಿಗೆ ಬಾಂಧವ್ಯ ವೃದ್ಧಿಯ ಹೊಸಯುಗವನ್ನು ರೂಪಿಸಲು ನಾವು ತಯಾರಿದ್ದೇವೆ,” ಎಂದಿರುವ ಅವರು, “ದ್ವಿಪಕ್ಷೀಯ ಸಂಬಂಧ ವೃದ್ಧಿಗಾಗಿ ಎರಡೂ ದೇಶಗಳು ಜಂಟಿ ಕಾರ್ಯಸೂಚಿ ರೂಪಿಸಿಕೊಳ್ಳುವ ಅಗತ್ಯವಿದೆ,” ಎಂದು ಹೇಳಿದ್ದಾರೆ.

ಮಾತುಕತೆ ವೇಳೆ ಇಮ್ರಾನ್ ಖಾನ್, “ವಿವಾದಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು,” ಎಂದು ಕಿವಿಮಾತು ಹೇಳಿದ್ದಾಗಿ ಪಿಟಿಐ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿದೆ. ಕಾಶ್ಮೀರ ಕುರಿತು ಯಾವುದೇ ನೇರ ಪ್ರಸ್ತಾಪವನ್ನು ಮಾಡಲಾಗಿಲ್ಲ ಎಂದು ‘ದಿ ವೈರ್’ ವರದಿ ಮಾಡಿದೆ.

“ಬಡತನ ನಿರ್ಮೂಲನೆಗಾಗಿ ಎರಡೂ ದೇಶಗಳು ಜಂಟಿ ಕಾರ್ಯತಂತ್ರವೊಂದನ್ನು ರೂಪಿಸಬೇಕು. ಸವಾಲುಗಳಿಗೆ ಉತ್ತರಿಸುವ ಬದಲು ಯುದ್ಧ ಮತ್ತು ರಕ್ತಪಾತಕ್ಕೆ ಅವಕಾಶ ಮಾಡಿಕೊಟ್ಟರೆ ದುರಂತಕ್ಕೆ ನಾಂದಿಯಾಗುತ್ತದೆ,” ಎಂದು ಆಶಯಗಳು ಮಾತುಕತೆ ವೇಳೆಯಲ್ಲಿ ಮೂಡಿದೆ.

ಇದನ್ನೂ ಓದಿ : ಕಾಶ್ಮೀರ ವಿವಾದ; ಭಾರತದ ಜೊತೆ ಬಾಂಧವ್ಯ ಸುಧಾರಿಸುವ ಇಮ್ರಾನ್ ನಾಟಕ

ಆದರೆ, ಮೋದಿಯವರು ಪ್ರಸ್ತಾಪಿಸಿರುವ ‘ಜಂಟಿ ಕಾರ್ಯಸೂಚಿ’ ಬಗ್ಗೆ ಪಿಟಿಐ ಹೇಳಿಕೆಯಲ್ಲಿ ನೇರ ಉಲ್ಲೇಖಗಳಿಲ್ಲ. ಅಲ್ಲದೆ, ಈ ಹಿಂದೆ ತಮ್ಮ ಚುನಾವಣಾ ಗೆಲುವಿನ ಕುರಿತು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಖಾನ್ ಹೇಳಿದ್ದ, “ಭಾರತದೊಂದಿಗೆ ಮಾತುಕತೆ ನಡೆಸಲಾಗುವುದು,” ಹಾಗೂ “ಕಾಶ್ಮೀರ ವಿಚಾರದಲ್ಲಿ ಪರಸ್ಪರ ಕೆಸರೆರಚಾಟ ನಿಲ್ಲಿಸಬೇಕು,” ಎಂಬ ಮಾತುಗಳ ಬಗ್ಗೆಯೂ ಯಾವುದೇ ಪ್ರಸ್ತಾಪ ಮಾಡಿಲ್ಲ.

ಜುಲೈ 25ರಂದು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಖಾನ್, “ಭಾರತ ಮತ್ತು ಪಾಕಿಸ್ತಾನದ ನಾಯಕರು ಒಟ್ಟಿಗೆ ಕುಳಿತು ಮಾತನಾಡಬೇಕಿದೆ. ಪರಸ್ಪರ ಕೆಸರೆರಚಾಟಕ್ಕೆ ಇತಿಶ್ರೀ ಹಾಡಬೇಕಿದೆ,” ಎಂದು ಹೇಳಿದ್ದರು. ಅಷ್ಟೇ ಅಲ್ಲ, “ನಾವು ಈ ವಿಚಾರದಲ್ಲಿ ಸಂದಿಗ್ಧ ಸ್ಥಿತಿ ಎದುರಿಸುತ್ತಿದ್ದೇವೆ,” ಎಂದು ಅಭಿಪ್ರಾಯಪಟ್ಟಿದ್ದರು.

2015ರ ಡಿಸೆಂಬರ್‌ನಲ್ಲಿ ಮುಖಾಮುಖಿಯಾಗಿದ್ದ ಇಬ್ಬರೂ ನಾಯಕರು, ಸುಮಾರು ಎರಡೂವರೆ ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಹಿಂದೆ ಇಬ್ಬರೂ ನಾಯಕರು, 'ಎರಡೂ ದೇಶಗಳ ಪರಸ್ಪರ ಸಹಕಾರ' ವಿಚಾರ ಕುರಿತು ಚರ್ಚಿಸಿದ್ದರು.

ಶನಿವಾರ ಹೇಳಿಕೆ ನೀಡಿದ್ದ ಭಾರತ, “ಪಾಕಿಸ್ತಾನದ ಜನರು ಪ್ರಜಾಪ್ರಭುತ್ವ ಸ್ಥಾಪನೆಗೆ ಒಲವು ತೋರಿದ್ದಾರೆ,” ಎಂದು ಶ್ಲಾಘಿಸಿತ್ತು. “ಭಾರತ ಶಾಂತಿಯೊಂದಿಗೆ ಸಮೃದ್ಧಿ ಮತ್ತು ಅಭಿವೃದ್ಧಿ ಹೊಂದಿದ ಪಾಕಿಸ್ತಾನವನ್ನು ಬಯಸುತ್ತದೆ. ಭಯೋತ್ಪಾದನೆ ಮತ್ತು ಹಿಂಸಾಚಾರದಿಂದ ಹೊರತಾದ ಸುರಕ್ಷಿತ, ಸುಸ್ಥಿರ ಏಷ್ಯಾವನ್ನು ನಿರ್ಮಿಸಲು ಪಾಕಿಸ್ತಾನದ ನೂತನ ಸರ್ಕಾರ ಶ್ರಮಿಸುತ್ತದೆ ಎಂದು ಆಶಿಸುತ್ತೇವೆ,” ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿಕೆ ಬಿಡುಗಡೆ ಮಾಡಿದ್ದರು.

2013ರಲ್ಲಿ ನವಾಜ್ ಷರೀಫ್ ಅವರು ಗೆಲುವು ಸಾಧಿಸಿದಾಗ ಮನಮೋಹನ್ ಸಿಂಗ್ ಮಾಡಿದ್ದ ಕರೆಗೆ ವ್ಯತಿರಿಕ್ತವಾಗಿ, ಪ್ರಧಾನಿ ಅವರ ಕರೆ ಖಾನ್ ಜಯಗಳಿಸಿ ಅಧಿಕೃತವಾಗಿ ಘೋಷಣೆಯಾದ ಎರಡು ದಿನಗಳ ನಂತರ ಮಾಡಲಾಗಿತ್ತು.

ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
ನಿಕ್ಕಿ ಹ್ಯಾಲಿ ರಾಜೀನಾಮೆ ಹಿಂದೆ ಇರುವ ಕಾರಣವೇನಿರಬಹುದು?
ರಷ್ಯಾದಿಂದ ಎಸ್400 ಕ್ಷಿಪಣಿ ಖರೀದಿ ಒಪ್ಪಂದ; ಟ್ರಂಪ್ ಕೆಂಗಣ್ಣಿಗೆ ಗುರಿಯಾಗಲಿದೆ ಭಾರತ
Editor’s Pick More