ಟ್ರಂಪ್ ವಿರುದ್ಧ ಮಾಧ್ಯಮಗಳ ರಣಕಹಳೆ; ಭಾರತದಲ್ಲಿ ಇಂಥ ಪ್ರಯತ್ನ ಸಾಧ್ಯವೇ?

ಅಮೆರಿಕ ಅಧ್ಯಕ್ಷ ಟ್ರಂಪ್ ಮಾಧ್ಯಮ ಕುರಿತು ತಳೆದಿರುವ ತುಚ್ಛ ಧೋರಣೆ ಪ್ರತಿಭಟಿಸಿ 350ಕ್ಕೂ ಹೆಚ್ಚು ಸುದ್ದಿಮಾಧ್ಯಮಗಳು ಗುರುವಾರ ಸಂಪಾದಕೀಯ ಪ್ರಕಟಿಸಿವೆ. ಅಧಿಕಾರಸ್ಥರ ಒತ್ತಡದಿಂದಾಗಿ ಭಾರತದಲ್ಲಿ ಮಾಧ್ಯಮಗಳು ಬಹುಪಾಲು ಕರ್ತವ್ಯ ಮರೆತಿರುವ ಹೊತ್ತಿನಲ್ಲಿ ಇದು ಗಮನಾರ್ಹ ನಡೆ

ಮಾಧ್ಯಮಗಳ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಅವರು ತಳೆದಿರುವ ತುಚ್ಛ ಧೋರಣೆ ವಿರುದ್ಧ ಪ್ರತಿಭಟಿಸಿ ದೇಶಾದ್ಯಂತ ಪತ್ರಿಕೆಗಳೂ ಸೇರಿದಂತೆ 350ಕ್ಕೂ ಹೆಚ್ಚು ಸುದ್ದಿ ಮಾಧ್ಯಮಗಳು ಗುರುವಾರ ಸಂಪಾದಕೀಯ ಪ್ರಕಟಿಸಿವೆ. ‘ಬಾಸ್ಟನ್ ಗ್ಲೋಬ್’ ಪತ್ರಿಕೆಯ ಸಂಪಾದಕೀಯ ಮಂಡಳಿ ನೀಡಿದ್ದ ಕರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಟ್ರಂಪ್ ಅವರಿಗೆ ಎಚ್ಚರಿಕೆ ರವಾನೆಯಾಗಿದೆ. ಟ್ರಂಪ್ ಆರೋಪಿಸುವಂತೆ ಮಾಧ್ಯಮಗಳು ಜನರ ಶತ್ರುಗಳಲ್ಲ ಎಂದು ಸಂಪಾದಕೀಯದಲ್ಲಿ ಘೋಷಿಸಲಾಗಿದೆ.

ಟ್ರಂಪ್ ಅವರು ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ ಹೆಚ್ಚಾಗಿದೆ. ಟ್ರಂಪ್ ಅವರೇ ಸತತವಾಗಿ ಮುಖ್ಯ ಶ್ರೇಣಿ ಮಾಧ್ಯಮಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಮಾಧ್ಯಮಗಳಲ್ಲಿ ಪ್ರಕಟಿಸುತ್ತಿರುವುದೆಲ್ಲ ನಕಲಿ ಸುದ್ದಿ (ಫೇಕ್ ನ್ಯೂಸ್), ಪತ್ರಕರ್ತರು ಜನರ ಶತ್ರುಗಳು, ಅವರಿಂದೇನೂ ದೇಶಕ್ಕೆ ಒಳ್ಳೆಯದಾಗುವುದಿಲ್ಲ ಎಂದು ಟ್ರಂಪ್ ಸತತವಾಗಿ ಆರೋಪ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಈ ಬೆಳವಣಿಗೆಯಾಗಿದೆ.

‘ನ್ಯೂಯಾರ್ಕ್ ಟೈಮ್ಸ್’, ‘ಟ್ರಿಬ್ಯೂನ್’, ‘ಗಾರ್ಡಿಯನ್’, ‘ಶಿಕಾಗೊ ಸನ್ ಟೈಮ್ಸ್’, ‘ಮಿಯಾಮಿ ಹೆರಾಲ್ಡ್’ ಸೇರಿದಂತೆ ನೂರಾರು ಪತ್ರಿಕೆಗಳು, ಆನ್‍ಲೈನ್ ಸುದ್ದಿಮಾಧ್ಯಮಗಳು ಈ ಅಭಿಯಾನದಲ್ಲಿ ಭಾಗವಹಿಸಿದ್ದು, ದೇಶದ ಇತಿಹಾಸದಲ್ಲಿಯೇ ಇಂಥದೊಂದು ಬೆಳವಣಿಗೆ ಮೊದಲನೆಯದು. ಪತ್ರಿಕಾ ಮಾಧ್ಯಮ ಕುರಿತ ಟ್ರಂಪ್ ನಿಲುವಿಗೆ ವಿರೋಧವಿದ್ದರೂ ‘ವಾಷಿಂಗ್ಟನ್ ಪೋಸ್ಟ್’, ‘ಲಾಸ್ ಏಂಜಲಿಸ್ ಟೈಮ್ಸ್’ ಮುಂತಾದ ಪತ್ರಿಕೆಗಳು ಸಂಪಾದಕೀಯ ಬರೆದಿಲ್ಲ.

೩೫೦ಕ್ಕೂ ಹೆಚ್ಚು ಮಾಧ್ಯಮಗಳು ತಮ್ಮ ವಿರುದ್ಧ ಸಂಪಾದಕೀಯ ಬರೆದಿರುವುದರ ವಿರುದ್ದ ಉಗ್ರಗೊಂಡಿರುವ ಟ್ರಂಪ್, ಮತ್ತೆ ತಮ್ಮ ಆರೋಪ ಪುನರುಚ್ಛರಿಸಿದ್ದಾರೆ. “ಫೇಕ್ ನ್ಯೂಸ್, ಫೇಕ್ ಮಾಧ್ಯಮವೇ ವಿರೋಧ ಪಕ್ಷ. ಇದರಿಂದ ಘನವಂತ ದೇಶಕ್ಕೇನೂ ಒಳ್ಳೆಯದಾಗುವುದಿಲ್ಲ. ನಾವಂತೂ ಗೆಲ್ಲುತ್ತಿದ್ದೇವೆ,” ಎಂದು ಅವರು ಪ್ರತಿಕ್ರಿಯಿಸುತ್ತಿದ್ದಾರೆ. ನಿಜವಾದ ಪತ್ರಿಕಾ ಸ್ವತಂತ್ರ್ಯವನ್ನು ತಾವು ಸ್ವಾಗತಿಸುವುದಾಗಿ ಟ್ವೀಟ್ ಮಾಡಿರುವ ಟ್ರಂಪ್, “ಪತ್ರಕರ್ತರು ಏನು ಬೇಕಾದರೂ ಬರೆಯಲು ಸ್ವತಂತ್ರರು. ಆದರೆ ಈಗ ಬರೆಯುತ್ತಿರುವುದೆಲ್ಲ ಫೇಕ್ ನ್ಯೂಸ್, ಅವರಿಗೊಂದು ರಾಜಕೀಯ ಉದ್ದೇಶ ಇದೆ. ಹೀಗಾಗಿಯೇ, ಅವರು ಹಾಗೆ ಬರೆಯುತ್ತಿದ್ದಾರೆ. ಸಹಜವಾಗಿ ಅದು ಜನರಿಗೆ ನೋವುಂಟುಮಾಡುತ್ತಿದೆ,” ಎಂದಿದ್ದಾರೆ.

ಮಾಧ್ಯಮಗಳು ಸಂಘಟಿತವಾಗಿ ಸಂಪಾದಕೀಯ ಬರೆದ ಹಿನ್ನೆಲೆಯಲ್ಲಿ ಗುರುವಾರ ಅಮೆರಿಕದ ಸೆನೆಟ್, ಪತ್ರಿಕಾ ಸ್ವಾತಂತ್ರ್ಯವನ್ನು ಸಮರ್ಥಿಸಿ ಸರ್ವಾನುಮತದ ನಿರ್ಣಯವೊಂದನ್ನು ಅಂಗೀಕರಿಸಿದೆ. ಮಾಧ್ಯಮಗಳು ಅಮೆರಿಕದ ಶತ್ರುಗಳಲ್ಲ, ಮಾಧ್ಯಮಗಳ ಸ್ವಾತಂತ್ರದ ಮೇಲಿನ ಹಲ್ಲೆ ಖಂಡನೀಯ ಎಂದು ಸೆನೆಟ್‍ ನಿರ್ಣಯ ತಿಳಿಸಿದೆ.

ಜನರಿಗೆ ಸತ್ಯ ತಿಳಿಯುವ ಹಕ್ಕು ಇದೆ. ಅಂತೆಯೇ ಸತ್ಯ ಹೇಳುವ ಹಕ್ಕು ಮಾಧ್ಯಮಗಳಿಗೂ ಇದೆ. ಪ್ರಜಾತಂತ್ರದಲ್ಲಿ ಅಧಿಕಾರದಲ್ಲಿ ಇರುವವರು ಏನು ಮಾಡುತ್ತಿದ್ದಾರೆ ಎಂಬುದರ ಮೇಲೆ ಮಾಧ್ಯಮಗಳು ಗಮನ ಇಡಬೇಕಾಗುತ್ತದೆ. ಸಂದರ್ಭ ಬಂದಾಗ ಸಾಮಾನ್ಯ ಜನರ ಪರವಾಗಿ ನಿಲ್ಲಬೇಕಾಗುತ್ತದೆ ಎಂದು ಪತ್ರಿಕೆಗಳು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿವೆ. "ನಾವು ಬರೆಯುತ್ತಿರುವುದು ಸತ್ಯ," ಎಂಬುದನ್ನು ಟ್ರಂಪ್ ಮನವರಿಕೆ ಮಾಡಿಕೊಳ್ಳಬೇಕು ಎಂದೂ ಟ್ರಂಪ್‍ಗೆ ತಿಳಿಸಿವೆ.

ಅಧಿಕಾರಕ್ಕೆ ಬಂದಂದಿನಿಂದಲೂ ಟ್ರಂಪ್ ಅವರು ಮಾಧ್ಯಮಗಳ ವಿರುದ್ಧ ತಿರುಗಿಬಿದ್ದಿದ್ದಾರೆ. ಚುನಾವಣೆ ಪ್ರಚಾರಕಾಲದಲ್ಲಿ ಟ್ರಂಪ್ ರಷ್ಯಾದ ನೆರವು ಪಡೆದಿದ್ದರು ಎಂಬ ಬಗೆಗಿನ ತನಿಖಾ ವರದಿಗಳಿಂದ ಅವರು ವಿಚಲಿತರಾಗಿದ್ದಾರೆ. ವೈಯಕ್ತಿಕವಾಗಿ ಅವರು ಸ್ತ್ರೀಲೋಲ, ಲೈಂಗಿಕ ವೃತ್ತಿಯಲ್ಲಿರುವ ಅನೇಕ ಮಹಿಳೆಯರ ಜೊತೆ ಅವರಿಗೆ ಸಂಬಂಧವಿತ್ತು, ಈ ವಿಚಾರ ಬಹಿರಂಗವಾಗದಿರಲು ಹಲವು ಮಹಿಳೆಯರಿಗೆ ಅಪಾರ ಪ್ರಮಾಣದಲ್ಲಿ ಹಣ ನೀಡಿದ್ದರು ಎಂಬ ಬಗೆಗಿನ ಸುದ್ದಿಗಳು ಅವರನ್ನು ಸತತವಾಗಿ ಮುಜುಗರ ಉಂಟುಮಾಡಿವೆ. ಇಂಥ ಸುದ್ದಿಗಳನ್ನು ಪ್ರಕಟಿಸಿದ ಪತ್ರಿಕೆ, ಮಾಧ್ಯಮಗಳನ್ನು ಅವರು ಫೇಕ್ ನ್ಯೂಸ್ ಮುದ್ರಿಸುತ್ತಿರುವವರು ಎಂದು ಹೀಗಳೆಯುತ್ತ ಬಂದಿದ್ದಾರೆ. ಮುಸ್ಲಿಮರು, ಆಫ್ರಿಕಾ ಮೂಲದವರು ಮತ್ತು ವಲಸಿಗರ ವಿರುದ್ಧ ಅವರು ತಳೆದಿರುವ ನಿಲುವು ಮಾಧ್ಯಮಗಳಿಗೆ ಒಪ್ಪಿಗೆ ಆಗಿಲ್ಲ. ಈ ವಿಚಾರದಲ್ಲಿಯೂ ಮಾಧ್ಯಮಗಳು ಅವರನ್ನು ಕಟುವಾಗಿ ಟೀಕಿಸುತ್ತಿವೆ. ಹಿಂದಿನ ಅಂತಾರಾಷ್ಟ್ರೀಯ ಒಪ್ಪಂದಗಳಿಂದ ಹೊರಬಂದ ಅವರ ಕ್ರಮಗಳು ಕೂಡ ಮಾಧ್ಯಮಗಳಿಂದ ತೀವ್ರ ಟೀಕೆಗೆ ಒಳಗಾಗಿವೆ. ತಾವು ಏನು ಮಾಡಿದರೂ ಕೆಲವು ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಟೀಕೆ ಮಾಡುತ್ತಿವೆ ಎಂದು ಅವರು ಭಾವಿಸಿದ್ದಾರೆ. ಹೀಗಾಗಿ, ಅವರು ಮಾಧ್ಯಮಗಳ ವಿರುದ್ಧ ಸತತವಾಗಿ ದಾಳಿ ಮಾಡುತ್ತಿದ್ದಾರೆ.

ಆಡಳಿತದ ಕೇಂದ್ರವಾಗಿರುವ ಶ್ವೇತಭವನದಲ್ಲಿನ ಚಟುವಟಿಕೆಗಳನ್ನು ವರದಿ ಮಾಡುವವರೂ ಟ್ರಂಪ್ ಅವರ ಮಾಧ್ಯಮ ವಿರೋಧವನ್ನು ಬಲವಾಗಿ ಖಂಡಿಸಿದ್ದಾರೆ. ಶ್ವೇತಭವನದ ಪತ್ರಿಕಾಗೋಷ್ಠಿಗಳಿಂದ ಕೆಲವು ವರದಿಗಾರರರನ್ನು ಹೊರಹೋಗುವಂತೆ ಸೂಚಿಸಿದ, ಕೆಲವರನ್ನು ನಿಷೇಧಿಸಿದ ಅವರ ಕ್ರಮಗಳು ಶ್ವೇತಭವನ ವರದಿಗಾರರ ಕೋಪಕ್ಕೆ ಕಾರಣವಾಗಿವೆ. ಈಗಾಗಲೇ ಶ್ವೇತಭವನದ ವರದಿಗಾರರು ಟ್ರಂಪ್ ಅವರಿಗೆ ಕಟುವಾದ ಪತ್ರವೊಂದನ್ನು ಬರೆದಿದ್ದಾರೆ. “ಸತ್ಯ ಹೇಳುವ ವಿಚಾರದಲ್ಲಿ ನಾವು ಯಾರೂ ಎಂದೂ ರಾಜಿ ಮಾಡಿಕೊಳ್ಳುವುದಿಲ್ಲ. ಮಾಧ್ಯಮವು ಸತ್ಯಕ್ಕೆ ಮತ್ತು ಜನರಿಗೆ ಬದ್ಧವಾಗಿರುತ್ತದೆಯೇ ಹೊರತು ಅಧಿಕಾರಸ್ಥರಿಗೆ ಅಲ್ಲ ಎನ್ನವುದು ನಿಮಗೆ ತಿಳಿದಿರಲಿ,” ಎಂದು ಆ ಪತ್ರದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ಡೊನಾಲ್ಡ್ ಟ್ರಂಪ್‌ ‘ಫೇಕ್‌ ನ್ಯೂಸ್‌’ ಅವಾರ್ಡ್‌ ನೀಡಿದ್ದಾದರೂ ಏಕೆ ಗೊತ್ತೇ?

ಭಾರತದಲ್ಲಿ ಮಾಧ್ಯಮ ಇಂದು ತೀವ್ರ ಒತ್ತಡಕ್ಕೆ ಒಳಗಾಗಿದೆ. ಅಧಿಕಾರಸ್ಥರ ಒತ್ತಡದಿಂದಾಗಿ ಮಾಧ್ಯಮಗಳು ಬಹುಪಾಲು ತನ್ನ ಕರ್ತವ್ಯವನ್ನು ಮರೆತಿವೆ. ಅಧಿಕಾರಸ್ಥರ ಓಲೈಕೆಯ ಹಾದಿ ಹಿಡಿದಿವೆ. ಪ್ರಜಾತಂತ್ರ ಮೌಲ್ಯಗಳು ಕುಸಿಯುತ್ತಿವೆ, ಪತ್ರಿಕಾ ಸ್ವಾತಂತ್ರ್ಯದ ಹರಣವಾಗುತ್ತಿದೆ. ಅಮೆರಿಕದಲ್ಲಿ ನೇರವಾಗಿ ಮಾಧ್ಯಮಗಳ ವಿರುದ್ಧ ಟ್ರಂಪ್ ಸಂಘರ್ಷಕ್ಕಿಳಿದಿದ್ದರೆ ಭಾರತದಲ್ಲಿ ಅಧಿಕಾರಸ್ಥರು ಮಾಧ್ಯಮಗಳನ್ನು ತಮ್ಮ ಹಿಡಿತಕ್ಕೆ ತಂದುಕೊಳ್ಳಲು ಪರೋಕ್ಷ ಹಾದಿ ತುಳಿದಿದ್ದಾರೆ. ಭಾರತದಲ್ಲಿ ವಾಕ್ ಸ್ವಾತಂತ್ರ್ಯ, ಪತ್ರಿಕಾ ಸಾತಂತ್ರ್ಯ ಉಳಿಸಿಕೊಳ್ಳುವ ದಿಸೆಯಲ್ಲಿ ಪ್ರಯತ್ನಗಳು ಆರಂಭವಾಗಬೇಕಿದೆ. ಅಮೆರಿಕದಲ್ಲಿ ಈಗ ನಡೆದಿರುವಂತೆಯೇ ಭಾರತದಲ್ಲಿಯೂ ಮಾಧ್ಯಮಗಳು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಕ್ಕಾಗಿ ಸಂಘಟಿತವಾಗಿ ಹೋರಾಡಲು ಸಾಧ್ಯವಿಲ್ಲವೇ?

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More