ಡೊನಾಲ್ಡ್‌ ಟ್ರಂಪ್ ನಿಕಟ ಸಲಹೆಗಾರರಲ್ಲಿ ಶಿಕ್ಷೆಗೊಳಗಾದವರು ಯಾರ್ಯಾರು?

ಡೊನಾಲ್ಡ್‌ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಅವರ ಐವರು ಸಲಹೆಗಾರರು ಅಪರಾಧ ಎಸಗಿದ್ದಾಗಿ ಒಪ್ಪಿಕೊಂಡಿದ್ದಾರೆ ಅಥವಾ ಶಿಕ್ಷೆಗೊಳಗಾಗಿದ್ದಾರೆ ಎನ್ನುವ ವಿಷಯದ ಬಗ್ಗೆ ಮತ್ತಾ ಬಸ್ಬಿ ಅವರು ‘ಗಾರ್ಡಿಯನ್‌’ಗೆ ಬರೆದ ಲೇಖನದ ಭಾವಾನುವಾದ ಇಲ್ಲಿದೆ

ಮಂಗಳವಾರ (ಆ.21), ಡೊನಾಲ್ಡ್ ಟ್ರಂಪ್ ಅವರ ವಕೀಲರು ಅಪರಾಧ ಮಾಡಿದ್ದಾಗಿ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿರುವುದು ಹಾಗೂ ಟ್ರಂಪ್ ಅವರ ಚುನಾವಣಾ ಪ್ರಚಾರ ವಿಭಾಗದ ಅಧ್ಯಕ್ಷರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿರುವುದು ಪ್ರಸ್ತುತವಾಗಿ ಮುಂದೆ ಸಾಗುತ್ತಿರುವ ಮುಲ್ಲರ್‌ ತನಿಖೆಯಲ್ಲಿ ಎಷ್ಟು ಜನ ಟ್ರಂಪ್ ಸಹಾಯಕರು ಶಿಕ್ಷೆಗೊಳಗಾಗಿದ್ದಾರೆ ಎಂಬ ವಿಷಯದ ಮೇಲೆ ಬೆಳಕು ಚೆಲ್ಲುತ್ತದೆ.

೨೦೧೬ರ ನವೆಂಬರ್‌ನಲ್ಲಿ ಡೊನಾಲ್ಡ್ ಟ್ರಂಪ್ ಅವರ ಚುನಾವಣೆ ನಂತರ ಅವರ ಪ್ರಚಾರಾಂದೋಲನದ ಅಧ್ಯಕ್ಷ, ಉಪನಿರ್ವಾಹಕ, ರಾಷ್ಟ್ರೀಯ ಭದ್ರತಾ ಸಲಹೆಗಾರ, ವೈಯಕ್ತಿಕ ವಕೀಲ ಮತ್ತು ವಿದೇಶಾಂಗ ನೀತಿಯ ಸಹಾಯಕ- ಎಲ್ಲರೂ ಒಂದೋ ತಾವು ಅಪರಾಧ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಇಲ್ಲವೇ ಶಿಕ್ಷೆಗೊಳಗಾಗಿದ್ದಾರೆ.

ಮೈಖೆಲ್ ಕೋಹೆನ್

೨೦೦೬ರಲ್ಲಿ ಟ್ರಂಪ್ ಅವರ ವಕೀಲರಾಗಿ ಹಾಗೂ ‘ಫಿಕ್ಸರ್’ ಆಗಿ ಕೆಲಸ ಪ್ರಾರಂಭಿಸಿದ ೫೧ ವರ್ಷದ ಕೋಹೆನ್, ನಂತರದಲ್ಲಿ ಟ್ರಂಪ್ ಸಂಘಟನೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಮೇಲೇರಿದರು. ತಮ್ಮ ಬಾಸ್‌ನ ಕಟ್ಟಾ ಸಮರ್ಥಕರಾಗಿದ್ದ ಅವರು ಒಮ್ಮೆ, "ಅಧ್ಯಕ್ಷರಿಗಾಗಿ ಗುಂಡಿಗೆ ಎದೆಯೊಡ್ಡಲೂ ಸಿದ್ಧ," ಎಂದು ಘೋಷಿಸಿದ್ದರು. ಆದರೆ, ಟ್ರಂಪ್ ಕಡೆಗಿನ ಅವರ ನಿಷ್ಠೆ ನಿಧಾನವಾಗಿ ಕಡಿಮೆಯಾದಂತೆ ಕಾಣುತ್ತದೆ.

ಮಂಗಳವಾರ ಅವರು ತಮ್ಮ ಮೇಲಿದ್ದ ಅನೇಕ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ. “ಚುನಾವಣಾ ಅಭ್ಯರ್ಥಿ ಚುನಾವಣಾ ಸಂಹಿತೆ ಉಲ್ಲಂಘಿಸಿ ಹೆಚ್ಚು ಹಣ ಕೋರಿಕೆಯ ಮೇರೆಗೆ (ಅಂದರೆ, ಟ್ರಂಪ್ ಅವರ ಕೋರಿಕೆಯ ಮೇರೆಗೆ) ತಾವು ಚುನಾವಣಾ ಪ್ರಚಾರಕ್ಕಾಗಿ ನೀಡಿದ್ದೆ,” ಎಂದು ಒಪ್ಪಿಕೊಂಡಿದ್ದಾರೆ. ಇದು ಪ್ಲೇಬಾಯ್ ಮಾಡೆಲ್ ಕರೇನ್ ಮ್ಯಾಕ್ಡೌಗಲ್ ಮತ್ತು ನೀಲಿಚಿತ್ರ ನಟಿ ಸ್ಟಾರ್ಮಿ ಡೇನಿಯಲ್ಸ್ ಅವರಿಗೆ ಪಾವತಿಸಲಾದ ಹಣಕ್ಕೆ ಸಂಬಂಧಿಸಿದ ಆರೋಪ. ತಮ್ಮ ತಪ್ಪೊಪ್ಪಿಗೆಯ ನಂತರ ಕೊಹೆನ್ ಅವರ ವಕೀಲ ಈ ರೀತಿ ಟ್ವೀಟ್ ಮಾಡಿದ್ದಾರೆ: "ಈ ಹಣ ನೀಡಿದ್ದು ಮೈಖೆಲ್ ಕೋಹೆನ್ ಪಾಲಿಗೆ ಅಪರಾಧವಾಗುವುದಾದರೆ ಅವು ಡೊನಾಲ್ಡ್ ಟ್ರಂಪ್ ಪಾಲಿಗೂ ಏಕೆ ಅಪರಾಧಗಳಾಗುವುದಿಲ್ಲ?"

ಕೋಹೆನ್ ಅವರಿಗೆ ಡಿಸೆಂಬರ್ ೧೨ರಂದು ಶಿಕ್ಷೆ ಪ್ರಕಟಿಸುವ ಸಾಧ್ಯತೆ ಇದೆ.

ಪಾಲ್ ಮನಫೋರ್ಟ್

೨೦೧೬ರಲ್ಲಿ ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅತ್ಯಂತ ಮಹತ್ವಪೂರ್ಣ ಘಟ್ಟದಲ್ಲಿ ೬೯ ವರ್ಷದ ಮನಫೋರ್ಟ್ ಅವರು ಐದು ತಿಂಗಳ ಕಾಲ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಪ್ರಚಾರ ವಿಭಾಗದ ಅಧ್ಯಕ್ಷರಾಗಿದ್ದರು. ತೆರಿಗೆ ವಂಚನೆಯ ಐದು ಅಂಶಗಳಲ್ಲಿ, ಬ್ಯಾಂಕ್ ವಂಚನೆಯ ಎರಡು ಅಂಶಗಳಲ್ಲಿ ಮತ್ತು ವಿದೇಶಿ ಬ್ಯಾಂಕ್ ಖಾತೆಯ ವಿವರ ನೀಡುವುದಕ್ಕೆ ವಿಫಲವಾದ ಒಂದು ಅಂಶದಲ್ಲಿ ಅವರು ಅಪರಾಧ ಎಸಗಿದ್ದಾರೆಂದು ನ್ಯಾಯಾಲಯ ಕಂಡುಕೊಂಡಿದೆ. ಅವರಿಗೆ ದಶಕಗಳ ಕಾಲ ಜೈಲುಶಿಕ್ಷೆ ವಿಧಿಸುವ ಸಾಧ್ಯತೆ ಇದೆ.

ಪ್ರಚಾರ ವಿಭಾಗದಲ್ಲಿ ಭಾಗಿಯಾಗುವ ಮುನ್ನವೇ ಈ ಅಪರಾಧಗಳು ನಡೆದಿರುವುದರಿಂದ ಅವುಗಳಲ್ಲಿ ತಮ್ಮ ಪಾತ್ರವೇನೂ ಇಲ್ಲ ಎಂದು ಅಧ್ಯಕ್ಷ ಟ್ರಂಪ್ ಸಮರ್ಥಿಸಿಕೊಂಡು, ಮನಫೋರ್ಟ್ ಅವರಿಂದ ಅಂತರ ಕಾಪಾಡಿಕೊಂಡಿದ್ದಾರೆ. ಮನಫೋರ್ಟ್ ಅವರು ಉಕ್ರೇನಿನಲ್ಲಿ ಭಾರಿ ಲಾಭದಾಯಕ ರಾಜಕೀಯ ಸಲಹಾ ಸಂಸ್ಥೆಯನ್ನು ಪ್ರಾರಂಭಿಸುವ ಮುನ್ನ ರೊನಾಲ್ಡ್ ರೀಗನ್ ಮತ್ತು ಇತರ ಉನ್ನತ ರಿಪಬ್ಲಿಕನ್ ನಾಯಕರಿಗೆ ಸಲಹೆಗಾರರಾಗಿಯೂ ಕೆಲಸ ಮಾಡಿದ್ದಾರೆ.

೨೦೧೦-೨೦೧೪ರ ಅವಧಿಯಲ್ಲಿ ಮನಫೋರ್ಟ್ ಅವರು ೬೫ ಮಿಲಿಯನ್ ಡಾಲರ್ (೫೦ ಮಿಲಿಯನ್ ಪೌಂಡ್) ಹಣವನ್ನು ವಿದೇಶಿ ಬ್ಯಾಂಕುಗಳಲ್ಲಿ ಸಂಗ್ರಹಿಸಿಟ್ಟಿದ್ದು, ಅದೇ ಅವಧಿಯಲ್ಲಿ ಐಷಾರಾಮಿ ವಸ್ತುಗಳನ್ನು ಖರೀದಿಸುವುದಕ್ಕಾಗಿ ಹಾಗೂ ಉಷ್ಟ್ರಪಕ್ಷಿಯ ಚರ್ಮದ ಜಾಕೆಟ್‌ಳೆಡೆಗೆ ಒಲವು ಬೆಳೆಸಿಕೊಳ್ಳುವುದಕ್ಕಾಗಿ ೧೫ ಮಿಲಿಯನ್ ಡಾಲರ್‌ ಖರ್ಚು ಮಾಡಿದ್ದಾರೆಂದು ಆರೋಪಿಸಲಾಗಿತ್ತು. ಪ್ರತ್ಯೇಕ ಪ್ರಕರಣದಲ್ಲಿ ಬೇರೆ-ಬೇರೆ ಆರೋಪಗಳನ್ನೂ ಅವರು ಎದುರಿಸುತ್ತಿದ್ದು, ಅದು ವಾಷಿಂಗ್ಟನ್ ಡಿಸಿಯಲ್ಲಿ ಮುಂದಿನ ತಿಂಗಳು ವಿಚಾರಣೆಗೆ ಬರಲಿದೆ.

ಇದನ್ನೂ ಓದಿ : ಪೋರ್ನ್ ತಾರೆಯರ ಬಾಯಿಮುಚ್ಚಿಸಲು ಹಣ ನೀಡಿದ ಪ್ರಕರಣದಲ್ಲಿ ಟ್ರಂಪ್‌ಗೆ ಆಘಾತ

ಮೈಖೆಲ್ ಫ್ಲಿನ್

೫೯ ವರ್ಷದ ಫ್ಲಿನ್, ಕೇವಲ ೨೩ ದಿನಗಳ ಕಾಲ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಧಿಕಾರ ಅನುಭವಿಸಿದರು. ಟ್ರಂಪ್ ಅವರು ಅಧಿಕಾರಕ್ಕೇರುವ ಮುಂಚೆ ರಷ್ಯಾದ ರಾಯಭಾರಿಯೊಂದಿಗೆ ಅವರು ನಡೆಸಿದ ಮಾತುಕತೆ ವಿಚಾರಗಳನ್ನು ಉಪಾಧ್ಯಕ್ಷ ಮೈಕ್ ಪೆನ್ಸ್ ಅವರಿಂದ ಮುಚ್ಚಿಟ್ಟಿದ್ದರು. ಈ ವಿಷಯ ಗೊತ್ತಾಗುತ್ತಿದ್ದಂತೆಯೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಯಿತು.

ವಿಶೇಷ ವಿಚಾರಣಾ ಮೇಲುಸ್ತುವಾರಿ ನಡೆಸುತ್ತಿದ್ದ ರಾಬರ್ಟ್ ಮುಲ್ಲರ್‌ ಅವರ ಎದುರು ೨೦೧೬ರ ಡಿಸೆಂಬರ್‌ನಲ್ಲಿ ತಪ್ಪೊಪ್ಪಿಕೊಂಡ ಫ್ಲಿನ್, ತಾವು ಎಫ್ಬಿಐಗೆ (ಫೆಡರಲ್ ಬ್ಯೂರ್ ಆಫ್ ಇನ್ವೆಸ್ಟಿಗೇಶನ್) ಸುಳ್ಳು ಹೇಳಿದ್ದಾಗಿ ಹಾಗೂ ರಷ್ಯಾ ಹಸ್ತಕ್ಷೇಪ ಕುರಿತ ತನಿಖೆಯಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದರು. ಮಾಜಿ ಸೇನಾಧಿಕಾರಿಯೂ ಆಗಿರುವ ಫ್ಲಿನ್, ೨೦೧೬ರ ಅಧ್ಯಕ್ಷೀಯ ಚುನಾವಣೆಗಳಲ್ಲಿ ರಷ್ಯಾ ಹಸ್ತಕ್ಷೇಪ ತನಿಖೆಯಲ್ಲಿ ಬಹಳ ಉಪಯುಕ್ತರಾಗಿದ್ದಾರೆ ಎಂಬ ಸಲಹೆಗಳ ಹಿನ್ನೆಲೆಯಲ್ಲಿ ಅವರಿಗೆ ಶಿಕ್ಷೆ ವಿಧಿಸುವುದು ನಾಲ್ಕು ಬಾರಿ ಮುಂದೂಡಲ್ಪಟ್ಟಿದೆ.

ಪದೇಪದೇ ಶಿಕ್ಷೆ ಪ್ರಕಟಣೆಯ ವಿಳಂಬದಿಂದ ಬಚಾವಾಗಿರುವ ಫ್ಲಿನ್ ಅವರ ಮುಂದಿನ ವಿಚಾರಣೆ ಸೆಪ್ಟೆಂಬರ್ ೧೭ರಂದು ನಡೆಯಲಿದೆ.

ರಿಕ್ ಗೇಟ್ಸ್

"ಮನಫೋರ್ಟ್ ಜೊತೆಗೆ ನೀವೂ ಅಪರಾಧ ಮಾಡಿದಿರಾ?” ಎಂದು ಈ ತಿಂಗಳ ಮೊದಲ ಭಾಗದಲ್ಲಿ ವಿಚಾರಣಾಧಿಕಾರಿಗಳು ರಿಕ್ ಗೇಟ್ಸ್ ಅವರನ್ನು ಕೇಳಿದಾಗ, "ಹೌದು" ಎಂದು ಅವರು ಉತ್ತರಿಸಿದ್ದರು.

ಮಾತ್ರವಲ್ಲದೆ, ಸುಳ್ಳು ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ್ದರಿಂದ ಮೊದಲುಗೊಂಡು ವಿದೇಶಿ ಆದಾಯ ಮೂಲಗಳನ್ನು ಬಚ್ಚಿಡುವುದಕ್ಕಾಗಿ ಪೊಳ್ಳು ಶೆಲ್ ಕಂಪನಿಗಳನ್ನು ಸ್ಥಾಪಿಸಿದ್ದೂ ಒಳಗೊಂಡಂತೆ ಸಾಲ ಪಡೆಯುವುದಕ್ಕಾಗಿ ಬ್ಯಾಂಕುಗಳನ್ನು ಹಾದಿ ತಪ್ಪಿಸಿದವರೆಗೆ ತಾವು ಮಾಡಿದ ಎಲ್ಲ ಅಪರಾಧಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟು, ಅದನ್ನೆಲ್ಲಾ ತಾವು ಮನಫೋರ್ಟ್ ನಿರ್ದೇಶನದಂತೆ ಮಾಡಿರುವುದಾಗಿ ಅವರು ಹೇಳಿದ್ದಾರೆ.

ಗೇಟ್ಸ್ ಅವರಿಗೆ ಶಿಕ್ಷೆ ಪ್ರಕಟಿಸುವುದಕ್ಕೆ ಯಾವುದೇ ದಿನಾಂಕ ಇನ್ನೂ ನಿಗದಿಯಾಗಿಲ್ಲ. ತನಿಖೆಗೆ ಸಹಕಾರ ಕೊಡುತ್ತಿರುವುದರಿಂದ ಅವರಿಗೆ ನೀಡಲಾಗುವ ಜೈಲುಶಿಕ್ಷೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ.

ಜಾರ್ಜ್ ಪಾಪಡೋಪೌಲೋಸ್

ಚುನಾವಣಾ ಪ್ರಚಾರಾಂದೋಲನದ ಸಮಯದಲ್ಲಿ ಡೋನಾಲ್ಡ್ ಟ್ರಂಪ್ ಅವರಿಗೆ ವಿದೇಶಾಂಗ ನೀತಿಯ ಸಲಹೆಗಾರರಾಗಿದ್ದ ೩೧ ವರ್ಷದ ಪಾಪಡೋಪೌಲಸ್ ಅವರು, ಮುಲ್ಲರ್‌ ತನಿಖೆಯಲ್ಲಿ ಮೊಟ್ಟಮೊದಲು ತಪ್ಪೊಪ್ಪಿಕೊಂಡವರಾಗಿದ್ದಾರೆ. ಆ ಸಮಯದಲ್ಲಿ ರಷ್ಯನ್ನರ ಜೊತೆಗಿನ ತಮ್ಮ ಸಂಪರ್ಕದ ಬಗ್ಗೆ ಎಫ್‌ಬಿಐಗೆ ಸುಳ್ಳು ಮಾಹಿತಿ ನೀಡಿದ್ದನ್ನು ಒಪ್ಪಿಕೊಂಡಿದ್ದೇ ಅವರು ಮಾಡಿದ ಮೊದಲ ತಪ್ಪೊಪ್ಪಿಗೆ. ೨೦೧೭ರ ಜನವರಿಯಲ್ಲಿನ ಒಂದು ಸಂದರ್ಶನದಲ್ಲಿ ಅವರು ಪದೇಪದೇ ಸುಳ್ಳು ಹೇಳುವ ಮೂಲಕ ತನಿಖೆಗೆ ಸರಿಪಡಿಸಲಾಗದ ಹಾನಿ ಮಾಡಿದರು ಹಾಗೂ ಅವರ ಸುಳ್ಳು ಹೇಳಿಕೆಯಿಂದ ಎಫ್‌ಬಿಐ ಸಂಭವನೀಯ ಮುಖ್ಯ ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸುವ ಅವಕಾಶವನ್ನು ಕಳೆದುಕೊಂಡಿತು ಎಂದು ವಿಚಾರಣಾಧಿಕಾರಿಗಳು ಹೇಳಿದ್ದಾರೆ. ಪಾಪಡೋಪೌಲೋಸ್ ಅವರಿಗೆ ಶಿಕ್ಷೆ ವಿಧಿಸುವ ದಿನ ಸೆಪ್ಟೆಂಬರ್ ೭ಕ್ಕೆ ನಿಗದಿಯಾಗಿದ್ದು, ಅವರನ್ನು ಆರು ತಿಂಗಳ ಕಸ್ಟೋಡಿಯಲ್ ಅವಧಿ ನೀಡಬೇಕೆಂದು ಮುಲ್ಲರ್‌ ಶಿಫಾರಸು ಮಾಡಿದ್ದಾರೆ.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More