ಹತಾಶ ಟ್ರಂಪ್, ಸರ್ಕಾರಿ ರಹಸ್ಯ ದಾಖಲೆಗಳ ಬಹಿರಂಗಕ್ಕೆ ಸೂಚನೆ

2016ರ ಅಧ್ಯಕ್ಷ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಕುರಿತ ತನಿಖೆಯ ವಿಶ್ವಾಸಾರ್ಹತೆ ಹಾಳುಮಾಡಲು ಹೊರಟಿದ್ದಾರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಆದರೆ ಮಾಜಿ ಎಫ್‍ಬಿಐ ಅಧ್ಯಕ್ಷ ರಾಬರ್ಟ್ ಮುಲ್ಲರ್ ಅವರು ನಡೆಸುತ್ತಿರುವ ತನಿಖೆ ದಿನೆ ದಿನೆ ಟ್ರಂಪ್ ಅವರಿಗೆ ಮುಜುಗರ ಉಂಟುಮಾಡುತ್ತಲೇ ಇದೆ

ಅಧ್ಯಕ್ಷ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಕುರಿತ ತನಿಖೆ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ಗೆ ಸ್ವಲ್ಪವೂ ಸಮಾಧಾನ ಇಲ್ಲ. ಮಾಜಿ ಎಫ್‍ಬಿಐ ಅಧ್ಯಕ್ಷ ರಾಬರ್ಟ್ ಮುಲ್ಲರ್ ಅವರು ನಡೆಸುತ್ತಿರುವ ತನಿಖೆ ದಿನೆ ದಿನೆ ಟ್ರಂಪ್ ಅವರಿಗೆ ಮುಜುಗರ ಉಂಟುಮಾಡುತ್ತಲೇ ಇದೆ. ಈಗಾಗಲೇ ಟ್ರಂಪ್ ಪ್ರಚಾರದ ಹೊಣೆ ಹೊತ್ತಿದ್ದ ಮತ್ತು ಆ ಸಮಯದಲ್ಲಿ ಅವರ ಹತ್ತಿರದ ಸಲಹೆಗಾರರಾಗಿದ್ದ ನಾಲ್ವರು ತಪ್ಪೊಪ್ಪಿಕೊಂಡಿದ್ದಾರೆ. ತನಿಖೆ ಅಂತಿಮವಾಗಿ ಟ್ರಂಪ್ ಅವರ ಕುತ್ತಿಗೆಗೇ ಸುತ್ತಿಕೊಳ್ಳಬಹುದು! ಯಾರಿಗೆ ಗೊತ್ತು?

ಇದನ್ನೂ ಓದಿ : ಟ್ರಂಪ್ ಅಧಿಕಾರಕ್ಕೇ ಕುತ್ತು ತಂದಿದೆ ‘ನ್ಯೂಯಾರ್ಕ್ ಟೈಮ್ಸ್‌’ನ ಅನಾಮಿಕ ಲೇಖನ!

ಇದಕ್ಕೆ ಹೆದರಿಯೋ ಏನೋ ಟ್ರಂಪ್ ಈ ತನಿಖೆಯನ್ನು ಪೂರ್ವಗ್ರಹಪೀಡಿತ ಮತ್ತು ದುರುದ್ದೇಶದಿಂದ ಕೂಡಿದೆ ಎಂದು ಟ್ರಂಪ್ ಬಹಿರಂಗವಾಗಿಯೇ ಹೇಳುತ್ತ ಅದರ ಮಹತ್ವವನ್ನು ಕಡಿಮೆ ಮಾಡಲು ಯತ್ನಿಸುತ್ತಿದ್ದಾರೆ. ಆದರೆ ತಪ್ಪೊಪ್ಪಿಗೆ ಪ್ರಕರಣಗಳು ಹೆಚ್ಚುತ್ತಿರುವುದರಿಂದ ತನಿಖೆಯ ವಿಶ್ವಾಸಾರ್ಹತೆ ಹೆಚ್ಚುತ್ತಿದೆಯೇ ಹೊರತು ಟ್ರಂಪ್ ಬಯಸಿದಂತೆ ಕಡಿಮೆಯಾಗುತ್ತಿಲ್ಲ. 2016ರ ಅಧ್ಯಕ್ಷ ಚುನಾವಣೆಯಲ್ಲಿ ರಷ್ಯ ಹಸ್ತಕ್ಷೇಪ ಮಾಡಿದ ಬಗ್ಗೆ ತಮಗೇನೂ ತಿಳಿದಿಲ್ಲ ಎಂದು ಟ್ರಂಪ್ ಹೇಳುತ್ತಿದ್ದಾರೆ.

ಆದರೆ ಟ್ರಂಪ್ ಅವರು ಚುನಾವಣೆ ಪ್ರಚಾರದ ಭಾಗವಾಗಿದ್ದವರು ರಷ್ಯಾದ ಗೂಢಚಾರರು, ಏಜೆಂಟರ ಜೊತೆ ಸಂಪರ್ಕ ಪಡೆದಿದ್ದುದು ಪತ್ತೆಯಾಗುತ್ತಿದೆ. ಟ್ರಂಪ್ ವಿರೋಧಿ ಅಭ್ಯರ್ಥಿಯಾಗಿದ್ದ ಹಿಲರಿ ಕ್ಲಿಂಟನ್ ಅವರ ಸಹಸ್ರಾರು ಇಮೇಲ್ ಗಳನ್ನು ಬಹಿರಂಗಗೊಳಿಸಿದ್ದರ ಹಿಂದೆ ರಷ್ಯಾದ ಗೂಢಚರ್ಯೆ ಸಂಸ್ಥೆಗಳು ಇದ್ದುದು ಈಗ ರಹಸ್ಯವಾಗಿ ಉಳಿದಿಲ್ಲ. ತನಿಖೆ ಮುಂದುವರಿದರೆ ರಷ್ಯ ಗೂಢಚರ್ಯೆ ಸಂಸ್ಥೆಗಳ ಸಂಪರ್ಕ ಟ್ರಂಪ್‍ವರೆಗೆ ಬೆಳೆದಿರಬಹುದಾದ ಸಾಧ್ಯತೆ ಇರಬಹುದು ಎಂಬುದು ಸದ್ಯಕ್ಕೆ ಊಹೆ.

ಸತ್ಯ ಇನ್ನೂ ಬಹಿರಂಗವಾಗಬೇಕಿದೆ. ಆದರೆ ಟ್ರಂಪ್ ಅವರು ಅಲ್ಲಿಯವರೆಗೆ ಸುಮ್ಮನಿರಲು ಸಿದ್ಧವಿಲ್ಲ. ಒಮ್ಮೆ ಮುಲ್ಲರ್ ತನಿಖೆಯನ್ನೇ ರದ್ದು ಮಾಡಲು ಅವರು ಯೋಚಿಸಿದ್ದುಂಟು. ಹಾಗೆ ಮಾಡುವುದರಿಂದ ಜನಾಭಿಪ್ರಾಯ ತಮ್ಮ ವಿರುದ್ಧ ಹೋಗಬಹುದೆಂಬ, ಸಂಶಯ ಖಚಿತವಾಗಬಹುದೆಂಬ ಲೆಕ್ಕಾಚಾರದಿಂದ ಹಾಗೆ ಮಾಡಲಿಲ್ಲ. ಆದರೆ ಹೇಗಾದರೂ ಮಾಡಿ ಮುಲ್ಲರ್ ತನಿಖೆ ವಿಶ್ವಾಸಾರ್ಹತೆ ಹಾಳುಗೆಡವುವ ಅವರ ಪ್ರಯತ್ನ ಮಾತ್ರ ನಿಲ್ಲಿಸಿಲ್ಲ. ಇದೀಗ ಹಟಾತ್ತನೆ ರಷ್ಯ ಹಸ್ತಕ್ಷೇಪ ಕುರಿತ ಮುಲ್ಲರ್ ತನಿಖೆಯ ರಹಸ್ಯದ ಭಾಗವಾಗಿರುವ ಗೂಡಚರ್ಯೆ ವಿಭಾಗ ನಡೆಸಿದ ಸಂದರ್ಶನಗಳು ಮತ್ತು ಸಂಗ್ರಹಿಸಿದ ದಾಖಲೆಗಳನ್ನು ಬಹಿರಂಗಗೊಳಿಸಲು ಟ್ರಂಪ್ ಸೋಮವಾರ ಆದೇಶನೀಡಿ ಆಶ್ಚರ್ಯ ಹುಟ್ಟಿಸಿದ್ದಾರೆ.

ಸಾಮಾನ್ಯವಾಗಿ ಸರ್ಕಾರದ ರಹಸ್ಯ ದಾಖಲೆಗಳನ್ನು ಬಹಿರಂಗ ಮಾಡುವಂತಿಲ್ಲ. ವಿಶೇಷ ಕಾರಣ ಮತ್ತು ಸಂದರ್ಭಗಳಲ್ಲಿ ಹಾಗೆ ಮಾಡಬಹುದು. ದೇಶದ ಅಧ್ಯಕ್ಷರಿಗೆ ಆ ಅಧಿಕಾರ ಇದೆ. ಅಂದಮಾತ್ರಕ್ಕೆ ತನಿಖೆಯ ಇನ್ನೂ ಮುಗಿಯದೆ ಇರುವಾಗ ರಹಸ್ಯ ದಾಖಲೆಗಳನ್ನು ಬಿಡುಗಡೆ ಮಾಡುವುದು ಎಷ್ಟು ಸಮಂಜಸ ಎನ್ನುವ ಪ್ರಶ್ನೆಯನ್ನು ಜನಪ್ರತಿನಿಧಿಗಳು ಈಗ ಕೇಳುತ್ತಿದ್ದಾರೆ. ತನಿಖೆ ಪಾರದರ್ಶಕವಾಗಿರಬೇಕೆಂಬ ಉದ್ದೇಶದಿಂದ ರಹಸ್ಯ ದಾಖಲೆಗಳನ್ನು ಬಹಿರಂಗ ಮಾಡಲು ಆದೇಶಿಸಲಾಗಿದೆ ಎಂದು ಟ್ರಂಪ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ರಹಸ್ಯ ದಾಖಲೆಗಳು ಬಹಿರಂಗವಾದರೆ ಜನರೇ ಸತ್ಯವನ್ನು ತಿಳಿಯಲು ಅನುಕೂಲವಾಗುತ್ತದೆ ಎಂದು ಟ್ರಂಪ್ ಬೆಂಬಲದ ರಿಪಬ್ಲಿಕನ್ ಸದಸ್ಯರು ಹೇಳುತ್ತಿದ್ದಾರೆ. ಆದರೆ ವಿರೋಧಿ ಡೆಮಾಕ್ರಟಿಕ್ ಪಕ್ಷದ ಸದಸ್ಯರು ಹೇಳುವುದೇ ಬೇರೆ. ಮುಲ್ಲರ್ ತನಿಖೆಯನ್ನು ನಿಷ್ಕ್ರಿಯಗೊಳಿಸುವ ದುರುದ್ದೇಶದಿಂದಲೇ ರಹಸ್ಯ ದಾಖಲೆಗಳನ್ನು ಬಹಿರಂಗ ಮಾಡಲು ಟ್ರಂಪ್ ಆದೇಶಿಸಿದ್ದಾರೆ ಎಂದು ಡೆಮಾಕ್ರಟಿಕ್ ಸದಸ್ಯರು ಹೇಳುತ್ತಾರೆ. ಟ್ರಂಪ್ ಅವರ ಈ ಪ್ರಯತ್ನ ಅವರ ಹತಾಶೆನ್ನು ಬಯಲು ಮಾಡಿದೆ ಎಂದೂ ಅವರು ಅಭಿಪ್ರಾಯಪಡುತ್ತಾರೆ.

ಟ್ರಂಪ್ ಅವರೇನೋ ಜಸ್ಟಿಸ್ ವಿಭಾಗಕ್ಕೆ ಆದೇಶ ನೀಡಿದ್ದಾರೆ. ಆದರೆ ಸರ್ಕಾರಿ ರಹಸ್ಯ ದಾಖಲೆಗಳನ್ನು ಬಹಿರಂಗಮಾಡಲು ಸಮಸ್ಯೆಗಳೂ ಸಾಕಷ್ಟಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ರಹಸ್ಯ ದಾಖಲೆಗಳಲ್ಲಿ ಅಮೆರಿಕದ ಹಿತಾಸಕ್ತಿಗೆ ಧಕ್ಕೆ ಬರಬಹುದಾದಂಥ ಅಂಶಗಳಿವೆಯೇ ಇಲ್ಲವೇ ಎಂಬುದನ್ನು ಮೊದಲು ಗುರುತಿಸಬೇಕಾಗುತ್ತದೆ. ಅಪಾಯದ ಮಾಹಿತಿ ಇಲ್ಲದ ಪಕ್ಷದಲ್ಲಿ ಮಾತ್ರ ದಾಖಲೆಗಳನ್ನು ಬಿಡುಗಡೆ ಮಾಡಬಹುದಾಗಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತ ಮಾಡಿದ್ದಾರೆ. ಇದೊಂದು ದೊಡ್ಡ ಕಸರತ್ತು. ಆದರೂ ರಹಸ್ಯ ದಾಖಲೆಗಳ ಬಗ್ಗೆ ಜನರಲ್ಲಿ ಕುತೂಹಲ ಸಾಕಷ್ಟಿದೆ. ನೆಮ್ಮದಿ ಅರಸಿ ತೆಗೆದುಕೊಂಡಿರುವ ಈ ನಿರ್ಧಾರದಿಂದ ಟ್ರಂಪ್ ಅವರಿಗೆ ನೆಮ್ಮದಿ ಸಿಗತ್ತದೆಯೋ ಅಥವಾ ನೆಮ್ಮದಿ ಕೆಡುತ್ತದೆಯೋ ಕಾದು ನೋಡಬೇಕು.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More