ತಾರಕಕ್ಕೇರಿದ ಅಮೆರಿಕ-ಚೀನಾ ಶೀತಲ ಸಮರ; ಪರಸ್ಪರ ಎಚ್ಚರಿಕೆ ರವಾನೆ

ಅಮೆರಿಕ-ಚೀನಾ ನಡುವೆ ಕೆಲವು ತಿಂಗಳಿಂದ ನಡೆಯುತ್ತಿದ್ದ ಶೀತಲ ವಾಣಿಜ್ಯ ಸಮರ ಸ್ಫೋಟಗೊಳ್ಳುವ ಹಂತಕ್ಕೆ ತಲುಪಿದೆ. ರಷ್ಯಾದಿಂದ ಚೀನಾ ಸುಖೋಯ್ 35 ಯುದ್ಧ ವಿಮಾನ ಕೊಳ್ಳುತ್ತಿರುವ ಬಗ್ಗೆ ಕುಪಿತವಾಗಿರುವ ಅಮೆರಿಕದ ಟ್ರಂಪ್ ಆಡಳಿತ ಅದರ ವಿರುದ್ಧ ನಿರ್ಬಂಧಗಳನ್ನು ಘೋಷಿಸಿದೆ

ಹಠಾತ್ ಬೆಳವಣಿಗೆಯಲ್ಲಿ ಅಮೆರಿಕವು ಗುರುವಾರ ಚೀನಾದ ಮಿಲಿಟರಿ ಶಸ್ತ್ರಾಸ್ತ್ರ ಖರೀದಿ ಮೇಲೆ ವಿಧಿಸಿದ ಅತ್ಯಂತ ಕಠಿಣ ನಿರ್ಬಂಧಗಳು ಕೋಲಾಹಲಕ್ಕೆ ಕಾರಣವಾಗಿವೆ. ರಷ್ಯಾದಿಂದ ಚೀನಾ ಸುಖೋಯ್ 35 ಯುದ್ಧ ವಿಮಾನಗಳನ್ನು ಕೊಳ್ಳುತ್ತಿರುವ ಬಗ್ಗೆ ಕುಪಿತವಾಗಿರುವ ಅಮೆರಿಕದ ಟ್ರಂಪ್ ಆಡಳಿತ, ಅದರ ವಿರುದ್ಧ ನಿರ್ಬಂಧಗಳನ್ನು ಘೋಷಿಸಿದೆ.

ಚೀನಾ ಮತ್ತು ರಷ್ಯಾ ನಡುವೆ ಹತ್ತು ಸುಖೋಯ್ ಯುದ್ಧ ವಿಮಾನಗಳ ಮಾರಾಟದ ಒಪ್ಪಂದ ಆಗಿ ಹಲವು ವರ್ಷಗಳೇ ಕಳೆದಿವೆ. 2016ರಲ್ಲಿ ಮೊದಲ ಕಂತಾಗಿ ನಾಲ್ಕು ಯುದ್ಧ ವಿಮಾನಗಳನ್ನು ರಷ್ಯಾ ಪೂರೈಸಿದೆ. ಆ ನಂತರ ಎರಡು ಯುದ್ಧ ವಿಮಾನಗಳು ಪೂರೈಕೆಯಾಗಿವೆ. ಡಿಸೆಂಬರ್ ವೇಳೆಗೆ ಉಳಿದ ನಾಲ್ಕು ಯುದ್ಧ ವಿಮಾನಗಳು ಪೂರೈಕೆಯಾಗಬೇಕಿದೆ. ಅಮೆರಿಕ ಮತ್ತು ಚೀನಾ ನಡುವೆ ಬಾಂಧವ್ಯ ಕೆಟ್ಟಿರುವ ಹಿನ್ನೆಲೆಯಲ್ಲಿ ಎರಡೂ ದೇಶಗಳು ಕಠಿಣ ಕ್ರಮಕ್ಕೆ ಕಾರಣಗಳನ್ನು ಹುಡುಕುತ್ತಿವೆ. ಈ ದಿಸೆಯಲ್ಲಿ ಅಮೆರಿಕ ಈಗ ಚೀನಾಕ್ಕೆ ಎಚ್ಚರಿಕೆ ನೀಡಿದೆ.

ಆ ಯುದ್ಧ ವಿಮಾನಗಳನ್ನು ಕೊಳ್ಳುವ ವಹಿವಾಟು ಮುಂದುವರಿಸಿದರೆ ಸಾಕಷ್ಟು ದಂಡ ಹಾಗೂ ಆರ್ಥಿಕ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕವು ಚೀನಾಕ್ಕೆ ಎಚ್ಚರಿಕೆ ನೀಡಿದೆ. ಅಮೆರಿಕದ ಈ ಎಚ್ಚರಿಕೆಗೆ ಬಗ್ಗದ ಚೀನಾ ಪ್ರತಿ ಎಚ್ಚರಿಕೆ ನೀಡಿದೆ. “ಮಿಲಿಟರಿ ಶಸ್ತ್ರಾಸ್ತ್ರ ಕೊಳ್ಳುವ ವಿಚಾರದಲ್ಲಿ ನೀವು ತಪ್ಪು ನಿರ್ಧಾರ ತೆಗೆಕೊಂಡಿದ್ದೀರಿ. ತಪ್ಪನ್ನು ಬೇಗ ತಿದ್ದಿಕೊಳ್ಳದೆ ಹೋದರೆ ಪರಿಣಾಮ ನೆಟ್ಟಗಿರದು ಮತ್ತು ಅದನ್ನು ಎದುರಿಸಬೇಕಾಗುತ್ತದೆ,” ಎಂದು ಅಮೆರಿಕದ ಆಡಳಿತಗಾರರಿಗೆ ಚೀನಾ ಎಚ್ಚರಿಕೆ ನೀಡಿದೆ.

ಕ್ರೈಮಿಯಾ ಪ್ರಾಂತ್ಯವನ್ನು ರಷ್ಯಾ ಆಕ್ರಮಿಸಿಕೊಂಡಂದಿನಿಂದ ಅದರ ಮೇಲೆ ಅಮೆರಿಕ ಸೇರಿದಂತೆ ಹಲವು ದೇಶಗಳು ಆರ್ಥಿಕ ನಿರ್ಬಂಧಗಳನ್ನು ಹೇರಿವೆ. ಹಿಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿದ ಆರೋಪದ ಮೇಲೆ ಇತ್ತೀಚೆಗೆ ರಷ್ಯಾ ವಿರುದ್ಧ ಅಮೆರಿಕ ಹಲವು ರೀತಿಯ ಕಠಿಣ ನಿರ್ಬಂಧಗಳನ್ನು ಹೇರಿದೆ. ಈ ನಿರ್ಬಂಧಗಳು ವಾಣಿಜ್ಯ, ಆರ್ಥಿಕ ಮತ್ತು ಮಿಲಿಟರಿ ಸಂಬಂಧಗಳನ್ನೂ ನಿರ್ಬಂಧಕ್ಕೆ ಒಳಪಡಿಸಿವೆ. ಸಾಮಾನ್ಯವಾಗಿ ಈ ನಿರ್ಬಂಧಗಳು ಸಂಬಂಧಿಸಿದ ಎರಡೂ ದೇಶಗಳಿಗೆ ಅನ್ವಯವಾಗುತ್ತವೆ. ಆದರೆ ಈಗ ಅಮೆರಿಕ, ಅದೇ ನಿರ್ಬಂಧವನ್ನು ಮೂರನೆಯ ದೇಶಕ್ಕೂ ಅನ್ವಯಿಸಲು ಹೊರಟಿದೆ.

ಈ ನಿರ್ಬಂಧದ ಪ್ರಕಾರ, ಚೀನಾ ದೇಶ ರಷ್ಯಾದಿಂದ ಯಾವುದೇ ಮಿಲಿಟರಿ ಶಸ್ತ್ರಾಸ್ತ್ರ ಕೊಳ್ಳುವಂತಿಲ್ಲ ಎನ್ನುವುದು ಅಮೆರಿಕದ ವಾದ. ಇದನ್ನು ಚೀನಾ ವಿರೋಧಿಸಿದೆ. ನಿರ್ಬಂಧಗಳನ್ನು ಇತರ ದೇಶಗಳೂ ಪಾಲಿಸಬೇಕೆನ್ನುವ ನೀತಿ ಅಂತಾರಾಷ್ಟ್ರೀಯ ಸಂಬಂಧಗಳನ್ನೇ ಹಾಳುಗೆಡವುತ್ತದೆ ಎಂದು ಚೀನಾ ಹೇಳಿದೆ. ಅಮೆರಿಕ ತನ್ನ ನಿಲುವಿಗೆ ಅಂಟಿಕೊಂಡರೆ ನಿಜವಾದ ಸಮಸ್ಯೆ ಆರಂಭವಾಗಲಿದೆ. ರಷ್ಯಾ ಜೊತೆ ನೈಜೀರಿಯಾ, ಈಜಿಪ್ಟ್, ಯುಎಇ, ಟರ್ಕಿ ಸೇರಿದಂತೆ ಹಲವು ದೇಶಗಳ ಮಿಲಿಟರಿ ಬಾಂಧವ್ಯ ಹೊಂದಿವೆ. ನೀವು ರಷ್ಯಾದಿಂದ ಯಾವುದೇ ಮಿಲಿಟರಿ ಯುದ್ಧಾಸ್ತ್ರ ಪಡೆಯುವಂತಿಲ್ಲ ಎಂದು ಅಮೆರಿಕ ಈ ದೇಶಗಳಿಗೆ ಹೇಳಿದರೆ ಅದರ ಪರಿಣಾಮ ಊಹಿಸಲು ಅಸಾಧ್ಯವಾದುದು.

ಭಾರತವೂ ಮೊದಲು ಮಿಲಿಟರಿ ಅಸ್ತ್ರಗಳಿಗಾಗಿ, ವಾಯುಪಡೆಗಾಗಿ ರಷ್ಯಾವನ್ನೇ ಅವಲಂಬಿಸಿತ್ತು. ಇತ್ತೀಚಿನ ವರ್ಷಗಳಲ್ಲಿ ಅವಲಂಬನೆ ಕಡಿಮೆಯಾದರೂ ಸಾಕಷ್ಟು ಮಿಲಿಟರಿ ಅಸ್ತ್ರಗಳನ್ನು ರಷ್ಯಾದಿಂದಲೇ ಭಾರತ ಕೊಳ್ಳುತ್ತಿದೆ. ಅಮೆರಿಕದ ನಿರ್ಬಂಧಗಳು ಭಾರತಕ್ಕೂ ಅನ್ವಯಿಸಿದರೆ ನಿಜವಾದ ಸಮಸ್ಯೆ ಆರಂಭವಾಗಲಿದೆ. ಇರಾನ್‍ನಿಂದ ಪೂರೈಕೆಯಾಗುತ್ತಿದ್ದ ತೈಲದ ವಿಚಾರದಲ್ಲಿ ಈಗಾಗಲೇ ಅಮೆರಿಕವು ಭಾರತದ ಮೇಲೆ ಒತ್ತಡ ಹೇರುತ್ತಿದೆ. ಭಾರತವೂ ಈ ಒತ್ತಡಕ್ಕೆ ಮಣಿದಂತೆ ಕಾಣುತ್ತಿದೆ. ಆದರೆ, ಅಸಮಾಧಾನ ಇದ್ದೇ ಇದೆ. ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಅಮೆರಿಕದ ಜೊತೆಗಿನ ಇತರ ಸಂಬಂಧಗಳೆಲ್ಲ ತಲೆಕೆಳಗಾಗುತ್ತಿವೆ. ತೈಲದ ನಂತರ ಇದೀಗ ಮಿಲಿಟರಿ ಶಸ್ತ್ರಾಸ್ತ್ರ ಸಮಸ್ಯೆ ತಲೆದೋರಿದೆ.

ಇದನ್ನೂ ಓದಿ : ಅಮೆರಿಕ-ಚೀನಾ ವ್ಯಾಪಾರ ಸಮರದಿಂದ ಭಾರತದ ಮೇಲಾಗುವ ಪರಿಣಾಮವೇನು?

ಅಮೆರಿಕ ಮತ್ತು ಹಿಂದಿನ ಸೋವಿಯತ್ ಒಕ್ಕೂಟದ ನಡುವೆ ನಡೆಯುತ್ತಿದ್ದ ಶೀತಲ ಸಮರ ಕಮ್ಯುನಿಸಂ ಪತನದೊಂದಿಗೆ ಅಂತ್ಯವಾಯಿತು. ಪರಿಣಾಮವಾಗಿ, ಅಮೆರಿಕವೊಂದೇ ಬಲಿಷ್ಠ ದೇಶವಾಗಿ ಉಳಿಯಿತು. ಆದರೆ, ಕ್ರಮೇಣ ಜರ್ಮನಿ, ಫ್ರಾನ್ಸ್ ಬಲಿಷ್ಠ ದೇಶಗಳಾದವು. ಈಗ ಚೀನಾ ಜಗತ್ತಿನ ಅತ್ಯಂತ ಬಲಿಷ್ಠ ದೇಶವಾಗಿ ರೂಪುಗೊಳ್ಳುತ್ತಿದ್ದು, ಮತ್ತೊಂದು ಬಲಿಷ್ಠ ದೇಶ ಅಮೆರಿಕ ಜೊತೆ ಪೈಪೋಟಿಗೆ ಇಳಿದಿದೆ. ಹೀಗಾಗಿ, ಹೊಸ ಶೀತಲ ಸಮರ ಮುಖ್ಯವಾಗಿ ವಾಣಿಜ್ಯ ಮತ್ತು ಆರ್ಥಿಕ ಸಮರ ಆರಂಭದ ಸೂಚನೆಗಳು ಕಾಣುತ್ತಿವೆ.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More